ಅಂಕಣ: ಟೆಕ್ ಪೋಸ್ಟ್ ಲೇಖಕರು: ಮಧು ವೈ. ಎನ್.
ಎಐ ವಿಷಯದಲ್ಲಿ ನಾವೀಗ ಮುಂದಿನ ಹಂತದಲ್ಲಿದ್ದೇವೆ. ಎಐ ಬರಲಿದೆ ಅಂದೆವು, ಎಐ ಬಂತು ಅಂದೆವು, ಎಐ ಹೀಗೆ ಬಳಸಿ ಎಂದೂ ಚರ್ಚಿಸಿದೆವು. ಈಗ ಯಾವುದಕ್ಕೆ ಯಾವ ಎಐ ಉಪಕರಣ ಬಳಸಬೇಕು ಎಂಬ ಹಂತದಲ್ಲಿದ್ದೇವೆ. ನಮ್ಮಲ್ಲಿ ಅನೇಕರಿಗೆ ಪರಿಚಯವಿರುವುದು ಚಾಟ್‌ಜಿಪಿಟಿ ಮಾತ್ರ. ಸರಳವಾಗಿ- ಚಾಟ್‌ಜಿಪಿಟಿ ಜನರಲ್ ಫಿಜಿಷಿಯನ್ ಇದ್ದಹಾಗೆ. ಸಣ್ಣ ಪುಟ್ಟ ಮತ್ತು ಸಾಮಾನ್ಯ ಅಗತ್ಯಗಳಿಗೆ ಅದು ಹೇಳಿ ಮಾಡಿಸಿದಂತಿದೆ. ಆದರೆ, ಇದು ಯಾವುದೂ ವಿಷಯದಲ್ಲಿಯೂ ‘ಸ್ಪೆಷಲಿಸ್ಟ್’ ಅಲ್ಲ. ಹಲ್ಲಿನ ಸಮಸ್ಯೆಗೆ ದಂತವೈದ್ಯರ ಬಳಿ ಹೋಗಬೇಕು. ಚರ್ಮದ ಸಮಸ್ಯೆಗೆ ಚರ್ಮರೋಗ ತಜ್ಞರ ಬಳಿ ಹೋಗಬೇಕು. ಹಾಗೆ ಅತ್ಯುತ್ತಮ ಸೇವೆಗಾಗಿ ನಿರ್ದಿಷ್ಟ ಅಗತ್ಯಗಳಿಗೆ ನಿರ್ದಿಷ್ಟ ಎಐ ಉಪಕರಣ ಬಳಸಬೇಕು.
1. ಬರವಣಿಗೆ
ನಿಮಗೆ ಯಾವುದೇ ಲೇಖನ, ಕಥೆ, ಇಮೇಲ್ ಅಥವಾ ಕೋಡ್ ಬರೆಯಬೇಕಿದ್ದಲ್ಲಿ ಅಥವಾ ಇದಾಕ್ಕೆ ಇದೇನು ಎಂಬ ಸರಳ ಪ್ರಶ್ನೆಗಳಿದ್ದಲ್ಲಿ ಚಾಟ್ ಜಿಪಿಟಿ, ಜೆಮಿನಿ, ಕ್ಲಾಡ್ (Claude) ಮುಂತಾದವು ಸಾಕು. ಇವುಗಳಲ್ಲಿಯೂ ಸೃಜನಶೀಲ ಬರಹಗಳಿಗೆ ಚಾಟ್‌ಜಿಪಿಟಿ ಉತ್ತಮ. ಅನುವಾದಗಳಿಗೆ ಜೆಮಿನಿ ಉತ್ತಮ. ‘ಡೀಪ್ ಸೀಕ್’ ಜೆಮಿನಿಗಿಂತ ಉತ್ತಮವಾಗಿ ಇಂಗ್ಲಿಷ್ ಅನ್ನು ಕನ್ನಡಕ್ಕೆ ಅನುವಾದಿಸಬಲ್ಲದು. ಗಮನಿಸಿ ಎಐ ಉಪಕರಣಗಳಿಗೆ ಕನ್ನಡ ಪಠ್ಯವನ್ನು ಇಂಗ್ಲಿಷ್‌ಗೆ ಅನುವಾದಿಸುವುದು ಸುಲಭ. ಯಾಕೆಂದರೆ ಅವುಗಳಿಗೆ ಇಂಗ್ಲಿಷ್ ಚೆನ್ನಾಗಿ ಗೊತ್ತು. ಒಂದು ಅಂದಾಜಿನ ಮೇರೆಗೆ ಕನ್ನಡ ಅರ್ಥ ಮಾಡಿಕೊಂಡು 99% ನಿಖರವಾಗಿ ಅನುವಾದ ಮಾಡಬಲ್ಲವು. ಇಂಗ್ಲಿಷ್‌ನಿಂದ ಕನ್ನಡದ ಅನುವಾದದ ವಿಷಯದಲ್ಲಿ ಮಾತ್ರ ಇವು ಹಿಂದೆ ಬೀಳುತ್ತವೆ.
ಕ್ವಿಲ್‌ಬಾಟ್ (QuillBot): ಇದು ಯಾವುದೇ ಬರಹವನ್ನು ಇನ್ನೊಂದು ಶೈಲಿಗೆ ಮಾರ್ಪಡಿಸುವ, ಸರಳವಾಗಿಸುವ, ಚೊಕ್ಕವಾಗಿಸುವ ಕಲೆ ಹೊಂದಿದೆ. ಇದು ಈ ವಿಷಯದಲ್ಲಿ ಸ್ಪೆಷಲಿಸ್ಟ್. ಚಾಟ್‌ಜಿಪಿಟಿಗಿಂತ ಚೆನ್ನಾಗಿ ಕೆಲಸ ಮಾಡಬಲ್ಲದು.
ನೋಷನ್ ಎಐ (Notion AI): ಇದು ಚಾಟ್ ಜಿಪಿಟಿಯಂಥದ್ದೇ ಉಪಕರಣ. ಆದರೆ, ಬಸ್ಸಿನೂ ಸ್ವಂತ ಕಾರಿಗೂ ಇರುವ ವ್ಯತ್ಯಾಸ. ಅರ್ಥಾತ್ ಇದು ನಿಮ್ಮ ಗೂಗಲ್, ಸ್ಲಾಕ್ ಮತ್ತಿತರ ಅಕೌಂಟ್‌ಗಳೊಂದಿಗೆ ಕನೆಕ್ಟ್ ಆಗಿ ನಿಮ್ಮ ಸಮಗ್ರ ಮಾಹಿತಿಯೊಂದಿಗೆ ಒಡನಾಡುತ್ತದೆ. ಸುರಕ್ಷೆಯ ಭಯವಲ್ಲವೇ? ಹೇಗೆ ನಿಮ್ಮ ಕಾರು ನಿಮಗೊಂದೇ ಸೀಮಿತವಾಗಿರುತ್ತದೋ ಹಾಗೆ ಇಂಥ ಉಪಕರಣಗಳು ನಿಮಗೊಂದೇ ಸುಭದ್ರವಾದ ಅಕೌಂಟ್ ಮತ್ತು ಜಗ (workspace) ಸೃಷ್ಟಿಸುತ್ತವೆ. ನಿಮ್ಮ ಮಾಹಿತಿಯನ್ನು ಎಐ ಮಾಡೆಲ್‌ಗಳ ತರಬೇತಿಗೆ ಬಳಸಿಕೊಳ್ಳುವುದಿಲ್ಲ.
2. ಚಿತ್ರಗಳು ಮತ್ತು ವಿನ್ಯಾಸಗಳು (ಡಿಸೈನ್)
ಚಾಟ್‌ಜಿಪಿಟಿ, ಜೆಮಿನಿ ಇವೆರಡೂ ನಿಮಗೆ ಚಿತ್ರ ಬಿಡಿಸುವ, ಪುಟ್ಟ ವಿಡಿಯೋ ತಯಾರಿಸುವ ಅವಕಾಶ ಒದಗಿಸುತ್ತವೆ. ಆದರೆ, ಸ್ಪೆಷಲಿಸ್ಟ್‌ಗಳಿಗೆ ಹೋಲಿಸಿದರೆ ಇವು ಅಷ್ಟು ಕಡಿಮೆ ಗುಣಮಟ್ಟದವು ಎಂದು ತಿಳಿಯಲು ನೀವು ‘ಮಿಡ್‌ಜರ್ನಿ’ ಜಾಲತಾಣ ಬಳಸಬೇಕು. ಪೋಸ್ಟರ್‌ಗಳನ್ನು ಲೋಗೋಗಳನ್ನು ತಯಾರಿಸಲು ಕ್ಯಾನ್ವಾ ಬಳಸಬೇಕು. ಅಡೋಬ್ ಫೈರ್‌ಫೈ ಇದೆ, ಲಿಯೋನಾರ್ಡೋ ಎಐ ಇದೆ. ಇವು ಹೊಸ ಚಿತ್ರಗಳನ್ನು ಬಿಡಿಸಬಲ್ಲವು. ಇರುವ ಚಿತ್ರಗಳನ್ನು ನಿಖರವಾಗಿ ಎಡಿಟ್ ಮಾಡಬಲ್ಲವು. ಚಿತ್ರದಲ್ಲಿನ ನಿರ್ದಿಷ್ಟ ಭಾಗಗಳನ್ನು ಬದಲಾಯಿಸಬಲ್ಲವು. ಒಂದು ಚಿತ್ರದ ಹೊರಗಿನ ಭಾಗವನ್ನು ಕಲ್ಪಿಸಿಕೊಳ್ಳಬಲ್ಲವು. ಚಾಟ್‌ಜಿಪಿಟಿ ಸೃಷ್ಟಿಸುವ ಚಿತ್ರಗಳೊಳಗೆ ನಿಮಗೆ ಬೇಕಾದ ಅಕ್ಷರಗಳು ಸರಿಯಾಗಿ ಬರಲ್ಲ. ಈ ವಿಷಯದಲ್ಲಿ ‘ಇಡಿಯೋಗ್ರಾಮ್’ ಎತ್ತಿದ ಕೈ. ವಿಡಿಯೋ ವಿಷಯದಲ್ಲಿ ಸೋರಾ (ಚಾಟ್‌ಜಿಪಿಟಿಯದ್ದೇ), ರನ್ ವೇ ಎಮ್ ಎಲ್ (RunwayML) ಮುಂತಾದವು ಇರುವುವು. ರನ್‌ವೇ ಎಮ್ ಎಲ್‌ನ ಇತ್ತೀಚಿನ ಆವೃತ್ತಿಯ ಔಟ್‌ಪುಟ್ ನೀವು ನೋಡಬೇಕು, ಸಿನಿಮಾ ಮಂದಿಯನ್ನು ಇದು ಮೀರಿಸುತ್ತದೆ.
ನೀವು ಕಂಟೆಂಟ್ ಕ್ರಿಯೇಟರ್ ಆಗಿದ್ದಲ್ಲಿ ಅಥವಾ ಆಗುವ ಯೋಜನೆ ಇದ್ದು ತುಂಬಾ ಸಂಕೋಚದವರಾಗಿದ್ದಲ್ಲಿ ನಿಮಗೆ ಎಐ ಹೇಳಿ ಮಾಡಿಸಿದ ಹಾಗಿದೆ. ನಿಮಗೇ ನಿಮ್ಮದೇ ಬರಹವನ್ನು (script) ಒಬ್ಬ ಎಐ ಏಜೆಂಟ್ ಮೂಲಕ ಓದಿಸಬಹುದಾಗಿದೆ. ನಿಮ್ಮ ಮುಖವನ್ನು ನೀವೇ ಹೇಳುವಂತೆ ನಿಮ್ಮ ಅವತಾರ ಸೃಷ್ಟಿಸಬಹುದಾಗಿದೆ. ಇಲೆವನ್ ಲೈಬ್ಸ್ (ElevenLabs) ಕನ್ನಡವನ್ನು ಎಷ್ಟು ಚೆನ್ನಾಗಿ ಉಚ್ಛಾರ ಮಾಡುತ್ತೆ ಅಂದರೆ ಮುಂಬರುವ ದಿನಗಳಲ್ಲಿ ಕನ್ನಡ ಆಡಿಯೋ ಬುಕ್‌ಗಳನ್ನು ಅದರ ನೆರವಿನಿಂದಲೇ ಓದಿಸಬಹುದು. ಸಿಂಥೆಸಿಯಾ (Synthesia) ಹೇಜೆನ್ (HeyGen) ಮೂಲಕ ನಿಮ್ಮ ಅವತಾರ ಸೃಷ್ಟಿಸಬಹುದು. ಇಲೆವನ್‌ಲ್ಯಾಬ್ಸ್‌ನಿಂದ ಸೃಷ್ಟಿಸಿದ ಧ್ವನಿಯನ್ನು ಈ ಅವತಾರಗಳಿಗೆ ಸಿಂಕ್ ಮಾಡಬಹುದು.
ಇನ್ನು ಜ್ಞಾನದ ಹುಡುಕಾಟಕ್ಕೆ ಬರೋಣ. ಚಾಟ್‌ಜಿಪಿಟಿ ನಿಮಗೆ ಆಶ್ಚರ್ಯವಾಗುವಷ್ಟು ಮರಳು ಮಾಡಬಲ್ಲದು; ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳುತ್ತದೆ. ಅರ್ಥಾತ್ ಗೊತ್ತಿಲ್ಲದ್ದನ್ನು ಗೊತ್ತಿಲ್ಲ ಅನ್ನದೇ ಕಟ್ಟುಕಥೆ ತುಂಬಿಸಿ ಹೇಳುತ್ತದೆ. ಸತ್ಯದ ನಡುವೆ ಕಟ್ಟುಕಥೆ ಅಡಕವಾದಾಗ ಕಂಡುಹಿಡಿಯುವುದು ಬಹಳ ಕಷ್ಟ. ಗೂಗಲ್ ಸರ್ಚ್ ಎಂಜಿನ್ ಮುದುಕ ಆಯ್ತು. ಅದರ ಜಾಗವನ್ನು ಪರ್ಪ್ಲೆಕ್ಸಿಟಿ (Perplexity) ತುಂಬುತ್ತಿದೆ. ಇದು ಗೂಗಲ್ ಸರ್ಚ್ ಎಂಜಿನ್‌ಗೆ ಮನುಷ್ಯನ ಮಿದುಳು ಸೇರಿದ ಹಾಗೆ. ನೀವು ನಿಮ್ಮ ಭಾಷೆಯಲ್ಲಿ ಕೇಳುವ ಪ್ರಶ್ನೆಗಳನ್ನು ಅದು ಸರಿಯಾಗಿ ಅರ್ಥಮಾಡಿಕೊಂಡು ನಿಖರವಾದ ಉತ್ತರ ಕೊಡುತ್ತದೆ. ಅಷ್ಟೇ ಅಲ್ಲದೆ, ಉತ್ತರಗಳನ್ನು ಎಲ್ಲಿಂದ ಹೇಳಿದೆ ಎಂಬ ವಿಷಯದ ಮೂಲ ಲಿಂಕ್‌ಗಳನ್ನೂ ಕೊಡುತ್ತದೆ. ಅಂದರೆ, ಗೂಗಲ್‌ನಲ್ಲಿ ನೀವು ಒಂದೊಂದೇ ಲಿಂಕ್ ಓಪನ್ ಮಾಡಿ ಉತ್ತರ ಹುಡುಕಬೇಕಿತ್ತು. ಪರ್ಪ್ಲೆಕ್ಸಿಟಿ ಆ ಹೊರೆಯನ್ನು ಇಳಿಸಿದೆ.
ಪವರ್‌ಪಾಯಿಂಟ್ ಪ್ರೆಸೆಂಟೇಶನ್‌ಗಂದು (ppt) ಮೈಕ್ರೋಸಾಫ್ಟ್‌ನ ಕೊಪೈಲಟ್, ಗಾಮಾ (Gamma), ಟೋಮ್ (Tome) ಮುಂತಾದವು ಇರುವುವು. ಎಕ್ಸೆಲ್ ಶೀಟ್‌ನೊಂದಿಗೆ ಕೆಲಸ ಮಾಡಲು ಕೊಪೈಲಟ್ ಅತ್ಯುತ್ತಮವಾಗಿದೆ. ನೀವು ವಿದ್ಯಾರ್ಥಿಗಳಾಗಿದ್ದಲ್ಲಿ, ಸಂಶೋಧಕರಾಗಿದ್ದಲ್ಲಿ ಎಲಿಸಿಟ್ (Elicit) ಸಂಶೋಧನಾ ವರದಿಗಳನ್ನು ಹುಡುಕುವಲ್ಲಿ ಮತ್ತು ಬರೆಯುವಲ್ಲಿ ಸಹಾಯ ಮಾಡುತ್ತದೆ. Consensus ಪ್ರಕಟಿತ ಸಂಶೋಧನೆಗಳನ್ನು ಆಧರಿಸಿ ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೊಡುತ್ತದೆ.
ಸುಮ್ಮನೆ ಎಐನಿಂದ ಏನೆಲ್ಲಾ ತಮಾಷೆ ಸೃಷ್ಟಿಸಬಹುದು ಎಂದು ಪರೀಕ್ಷಿಸಲು Replika AI, FacePlay, Kaiber ಮುಂತಾದವನ್ನು ಪರೀಕ್ಷಿಸಬಹುದು. ಫೋನಿಗೊಂದು ಲಕ್ಷಾಂತರ ಆಪ್‌ಗಳು ಇದ್ದಂತೆ ಈಗ ಪ್ರತಿಯೊಂದಕ್ಕೂ ನೂರಾರು ಎಐ ಉಪಕರಣಗಳು ಲಭ್ಯ ಇವೆ. ಮೇಲೆ ಪಟ್ಟಿ ಮಾಡಿರುವುದು ಕೇವಲ ಸಾಂಕೇತಿಕವಾಗಿ. ನೀವು ಹುಡುಕಿದಷ್ಟೂ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಸಿಗುತ್ತವೆ.
ಮುಖ್ಯ ಪ್ರಶ್ನೆ- ಇದೆಲ್ಲ ಉಚಿತವಾ? ದುಡ್ಡು ಕೊಡಬೇಕಾ? ಬಹುತೇಕ ಆಪ್‌ಗಳು ಪೂರ್ತಿಯಾಗಿ ಉಚಿತವಲ್ಲದೇ ಹೋದರೂ ಸ್ವಲ್ಪ ಕಾಲ ಉಚಿತವಾಗಿ ಬಳಸಲು ಬಿಡುತ್ತವೆ. ಒಂದು ಅಕೌಂಟ್‌ಗೆ ಇಷ್ಟು ಉಚಿತ ಫೋಟೋ, ವಿಡಿಯೋ, ಪ್ರಶ್ನೆಗಳು ಎಂದು ನಿಗದಿ ಮಾಡಲಾಗಿರುತ್ತದೆ. ಅದರಾಚೆ ನಾವು ಕರೆನ್ಸಿ ಹಾಕಿಸಿಕೊಂಡು ಕಾಲ್ ಮಾಡ್ತೀವಲ್ಲ ಹಾಗೆ ರಿಚಾರ್ಜ್ ಮಾಡಿಸಬೇಕು. ಇದು ನ್ಯಾಯಯುತವಾಗಿದೆ ಸಹ. ಸದ್ಯಕ್ಕೆ ಈ ಕೆಲಸಗಳಿಗೆ ಅತ್ಯಗತ್ಯವಾದ ಕಂಪ್ಯೂಟರಿನ ಅನೇಕ ಬಗೆಯ ಸಂಪನ್ಮೂಲಗಳು ದುಬಾರಿಯಾಗಿವೆ. ಹೋಗ್ತಾ ಹೋಗ್ತಾ ಈ ಮೊತ್ತ ಕಡಿಮೆಯಾಗಬಹುದು ಎಂದು ಆಶಿಸೋಣ.
