ಏಜೆಂಟಿಕ್ ಎಐ: ರಾಜ, ಮಂತ್ರಿ, ಸೇವಕ

6e6158a9 bb90 4174 a7dd 3f356036724b (1)

ಕಳೆದ ಸಂಚಿಕೆಯಲ್ಲಿ ಜೆನರೇಟಿವ್‌ ಎಐ ಹೇಗೆ ಮೂಲತಃ ʼಘಜನಿʼ(ಹಿಂದಿನ ಮುಂದಿನ ನೆನಪೇ ಇರದ) ಇದ್ದಹಾಗೆ ಎಂಬುದನ್ನು ನೋಡಿದ್ದೆವು. ಇತ್ತೀಚೆಗೆ, ವಿಶೇಷವಾಗಿ ಆಂತ್ರೋಪಿಕ್‌ನ ಪ್ಲಗಿನ್‌ಗಳ ಸಲುವಾಗಿ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾದ್ದರಿಂದ ʼಏಜೆಂಟಿಕ್‌ ಎಐʼ ಎಂಬ ಪದ ನಿಮ್ಮ ಕಿವಿಗೆ ಬಿದ್ದಿರಬಹುದು. ಏನಿದು ಏಜೆಂಟಿಕ್‌ ಎಐ? ಕಳೆದ ಎರಡು ವರುಷಗಳಲ್ಲಿ ಹೊಸ ಅವಿಷ್ಕಾರ ಏನಾದರೂ ಆಗಿದೆಯಾ? ಇಲ್ಲ. ಇದು ಜೆನರೇಟಿವ್‌ ಎಐ ಅನ್ನೇ ತುಸು ಚಮತ್ಕಾರಿಕವಾಗಿ ಬಳಸುವ ರೀತಿಯಷ್ಟೇ. ಜೆನರೇಟಿವ್‌ ಎಐಗೆ ಮನುಷ್ಯನ ಯೋಚನಾ ಶಕ್ತಿ ದೊರಕಿತ್ತು, ಅದಕ್ಕೆ ಸಾಂದರ್ಭಿಕ ನೆನಪಿನ ಶಕ್ತಿ ತುಂಬಿ ಒಬ್ಬ ಆಳಿನಂತೆ ದುಡಿಸಿಕೊಳ್ಳುವುದನ್ನೇ ʼಏಜೆಂಟಿಕ್‌ ಎಐʼ ಎಂದು ಕರೆಯುತ್ತಾರೆ.
ಉದಾಹರಣೆಗೆ, ಈ ಜನಪದ ಕಥೆ ಕೇಳಿರುತ್ತೀರಿ. ಒಬ್ಬ ರಾಜನಿಗೆ ಒಬ್ಬ ಮಂತ್ರಿ ಮತ್ತು ಒಬ್ಬ ಸೇವಕ ಇರುತ್ತಾರೆ. ಒಂದು ದಿನ ಸೇವಕ ರಾಜನಲ್ಲಿ ಕೇಳುತ್ತಾನೆ: ʼಪ್ರಭೂ, ನಾನೂ ಮಂತ್ರಿಗಳೂ ಅಷ್ಟೇ ಶ್ರಮ ಹಾಕಿ ಕೆಲಸ ಮಾಡ್ತೇವೆ. ಆದರೆ ಅವರಿಗೆ ಹೆಚ್ಚು ಸಂಬಳ, ನನಗೆ ಕಡಿಮೆ. ಯಾಕೆ?ʼ ಎಂದು. ರಾಜ ನಗುತ್ತ ʼಸರಿ, ನಿನಗೂ ಕೊಡೋಣಂತೆ ಬಿಡುʼ ಅನ್ನುತ್ತಾನೆ. ಅದೇ ಹೊತ್ತಿಗೆ ದೂರದಲ್ಲಿ ಒಂದು ಎತ್ತಿನಗಾಡಿಗಳ ಸಾಲು ಕಾಣಿಸುತ್ತದೆ. ರಾಜ ಮೊದಲು ಸೇವಕನಿಗೆ ಹೇಳುತ್ತಾನೆ: ʼಹೋಗಿ ಅದೇನೆಂದು ನೋಡಿಕೊಂಡು ಬಾ.ʼ ಸೇವಕ ಓಡಿ ಹೋಗಿ ನೋಡಿಕೊಂಡು ಬಂದು: ʼಪ್ರಭೂ, ಎತ್ತಿನಗಾಡಿಗಳುʼ ಅನ್ನುತ್ತಾನೆ. ರಾಜ: ʼಎಷ್ಟು ಗಾಡಿಗಳು?ʼ ಎಂದು ಕೇಳಿದ್ದಕ್ಕೆ ಸೇವಕ ಪುನಃ ಓಡಿ ಹೋಗಿ ಬಂದು ʼಹತ್ತು ಗಾಡಿಗಳು, ಪ್ರಭೂʼ ಅನ್ನುತ್ತಾನೆ. ಹೀಗೆ ಪ್ರತಿಯೊಂದಕ್ಕೂ ಸೇವಕ ಹೋಗಿ-ಬಂದು-ಹೋಗಿ-ಬಂದು ಮಾಡುತ್ತಲೇ ಇರುತ್ತಾನೆ. ನಂತರ ರಾಜ ಅದೇ ಕೆಲಸವನ್ನು ಮಂತ್ರಿಗೆ ವಹಿಸುತ್ತಾನೆ, ʼಹೋಗಿ ನೋಡಿಕೊಂಡು ಬನ್ನಿʼ ಎಂದು. ಮಂತ್ರಿ ಒಂದೇ ಸಲಕ್ಕೆ ವಾಪಸ್‌ ಬಂದು ಪೂರ್ತಿ ವರದಿ ಒಪ್ಪಿಸುತ್ತಾನೆ: ʼಪ್ರಭೂ, ಮೈಸೂರಿನಿಂದ ಹತ್ತು ಎತ್ತಿನಗಾಡಿಗಳು ಧಾನ್ಯ ತುಂಬಿಕೊಂಡು ಬರ್ತಿವೆ. ವ್ಯಾಪಾರಿಯ ಹೆಸರು ಇಂತಿದೆ, ಒಂದು ಮಣಕ್ಕೆ ಇಷ್ಟು ವರಹ ಬೆಲೆ ಕೇಳ್ತಿದ್ದಾರೆ. ಆದರೆ ಅವರ ಮೂಲ ಉದ್ದೇಶ ಗೂಡಾಚಾರಿಕೆ ಇದ್ದಂತಿದೆ. ಸೈನಿಕರಿಗೆ ಹೇಳಿ ಜೈಲಿನಲ್ಲಿ ಕೂರಿಸಿ ವಿಚಾರಣೆ ಮಾಡಿಸ್ತಿದ್ದೇನೆ.ʼ ರಾಜ ಸೇವಕನ ಕಡೆ ತಿರುಗಿ ʼಈಗ ಅರ್ಥ ಆಯ್ತಾ?ʼ ಎನ್ನುತ್ತಾನೆ.
ಎಐ ವಿಷಯದಲ್ಲಿ ನೀವು ರಾಜ ಅಂದುಕೊಂಡರೆ, ಚಾಟ್‌ಜಿಪಿಟಿ ಸೇವಕನಂತೆಯೂ, ಎಐ ಏಜೆಂಟ್‌ಗಳು ಮಂತ್ರಿಯಂತೆಯೂ ಕಾರ್ಯನಿರ್ವಹಿಸುತ್ತವೆ. ಸೇವಕನದ್ದು ಒಂದು ಪ್ರಶ್ನೆಗೆ ಒಂದು ಉತ್ತರ ಮಾತ್ರ. ಅವನಿಗೆ ನಿಜವಾಗಿಯೂ ನಿಮ್ಮ ಸಂದರ್ಭ(context) ಯೋಜನೆ(plan), ಗುರಿ(goal) ಯಾವುದೂ ಗೊತ್ತಿರುವುದಿಲ್ಲ. ಆದರೆ ಮಂತ್ರಿಗೆ ಈ ಮೂರೂ ಗೊತ್ತಿರುತ್ತದೆ. ಅದೇನು ರಾಕೆಟ್‌ ಸೈನ್ಸ್‌ ಅಲ್ಲ. ಮೂಲದಲ್ಲಿ ಆತನದ್ದೂ ಸೇವಕನ ಮೆದುಳೇ. ಆದರೆ ಅವನು ಪ್ರತಿ ಸಲ ರಾಜನ ಬಳಿ ಮರಳುವ ಬದಲು ಮಾರ್ಗ ಮಧ್ಯದಲ್ಲಿಯೇ ಕೂತು ಯೋಜನೆಯನ್ನು ವಿಂಗಡಿಸಿಕೊಳ್ಳುತ್ತಾನೆ. ಗುರಿಯನ್ನು ಸ್ಪಷ್ಟಪಡಿಸಿಕೊಳ್ಳುತ್ತಾನೆ. ಸಂದರ್ಭವನ್ನು ಪುನರ್‌ಪರಿಶೀಲಿಸಿಕೊಳ್ಳುತ್ತಾನೆ, ಅಷ್ಟೇ!
ಉದಾಹರಣೆಗೆ ನೀವೊಂದು ಅಪಾರ್ಟ್‌ಮೆಂಟ್‌ ಖರೀದಿಸಬೇಕಿದ್ದಲ್ಲಿ ಒಪ್ಪಂದ ಪತ್ರವನ್ನು ಚಾಟ್‌ಜಿಪಿಟಿಗೆ ಕೊಟ್ಟರೆ ಅದು ಪತ್ರವನ್ನು ಓದಿ ಅದರ ಸಾಧಕಬಾಧಕಗಳನ್ನು ಗುರುತಿಸಿ ವರದಿ ಕೊಡುತ್ತದೆ. ಅದನ್ನೇ ಒಂದು ಏಜೆಂಟಿಕ್‌ ಎಐಗೆ ಕೊಟ್ಟರೆ ಅದು ಅದರಲ್ಲಿನ ಪಠ್ಯ ಓದಿ, ಬಿಲ್ಡರಿನ ಹೆಸರು ತಿಳಿದುಕೊಂಡು ಆತ/ಆಕೆಯ ಇತಿಹಾಸ ಜಾಲಾಡಿ ವಿಶ್ವಾಸಾರ್ಹತೆ ಮಾಹಿತಿ ಕಲೆಹಾಕಿ, ಅವರ ಮೇಲಿರಬಹುದಾದ ಕೋರ್ಟಿನಲ್ಲಿನ ಕೇಸುಗಳನ್ನೂ ಕೆದಕಿ, ರಿಸ್ಕನ್ನು ಪರಿಶೀಲಿಸಿ, ತದನಂತರ ಆ ಏರಿಯಾದಲ್ಲಿನ ಭೂಮಿ ಬೆಲೆ, ಇತರೆ ಅಪಾರ್ಟ್‌ಮೆಂಟುಗಳ ಬೆಲೆಗಳನ್ನು ಹುಡುಕಿ ನಿಮಗೆ ಅವರು ಹೇಳಿರುಬಹುದಾದ ಬೆಲೆಯನ್ನು ಹೋಲಿಸಿ, ನಿಮ್ಮ ಅನುಮತಿ ಇದ್ದಲ್ಲಿ ನಿಮ್ಮ ಸಂಬಳ ಮತ್ತು ಇತರ ಇಎಂಐಗಳನ್ನು ಪರಿಶೀಲಿಸಿ, ಇನ್ನೂ ಅನುಮತಿ ಕೊಟ್ಟರೆ ನಿಮ್ಮ ಆರೋಗ್ಯ ವರದಿ ಗಮನಿಸಿ ಮುಂಬರಬಹುದಾದ ಖಾಯಿಲೆಗಳನ್ನು ಊಹಿಸಿ, ಮಕ್ಕಳಿದ್ದಲ್ಲಿ ಅವರ ವಯಸು, ವಿಧ್ಯಾಭ್ಯಾಸದ ಖರ್ಚುವೆಚ್ಚಗಳನ್ನು ತಾಳೆಹಾಕಿ ಈ ಹೊತ್ತಲ್ಲಿ ಈ ಖರೀದಿ ಸಾಧ್ಯವೇ, ಒಳಿತೇ, ರಿಸ್ಕಿಯೇ? ರಿಸ್ಕ್‌ ಆಗಿದ್ದಲ್ಲಿ ಅದು ಬಿಲ್ಡರ್‌ ದೃಷ್ಟಿಯಿಂದಲೋ, ನಿಮ್ಮದೇ ಆರ್ಥಿಕ ದೃಷ್ಟಿಯಿಂದಲೋ, ಆರೋಗ್ಯ ದೃಷ್ಟಿಯಿಂದಲೋ? ಎಂದು ಒಟ್ಟಾರೆ ರಿಪೋರ್ಟ್‌ ತಯಾರಿಸಬಲ್ಲದು.
ತಾಂತ್ರಿಕವಾಗಿ ಇದು ʼಗುರಿ->ಯೋಜನೆ->ಕ್ರಿಯೆ->ಪರಿಶೀಲನೆ->ಮತ್ತೊಮ್ಮೆ ಕ್ರಿಯೆ->ʼ ಎಂಬ ಚಕ್ರದಲ್ಲಿ ಕೆಲಸ ಮಾಡುತ್ತದೆ. ಈ ಚಕ್ರದ ನಡುವಲ್ಲಿ(ಕ್ರಿಯೆ ಎಂಬ ಕಡೆ) ನಿಜವಾದ ಎಐ(ಎಲ್‌ಎಲ್‌ಎಂ ಮಾಡೆಲ್‌) ಒಬ್ಬ ಗುಮಾಸ್ತನಂತೆ ಬಳಕೆಯಾಗುತ್ತದೆ. ಮಿಕ್ಕಿದ್ದೆಲ್ಲ ಎಐ-ಅಲ್ಲದ ಸಾದಾ ಸಾಫ್ಟ್‌ವೇರ್‌. ನೀವು ʼಗುರಿʼ ಕೊಟ್ಟರೆ ಸಾಕು. ಅದು ತಾನೇ ʼಯೋಜನೆʼ ರೂಪಿಸಿಕೊಳ್ಳುತ್ತದೆ. ತಾನೇ ʼಕ್ರಿಯೆʼ ನಡೆಸುತ್ತದೆ. ಫಲಿತಾಂಶ ʼಗಮನಿಸಿʼ ಮುಂದಿನ ಹೆಜ್ಜೆ ಇಡುತ್ತದೆ. ಇಲ್ಲಿ ಎಐ ʼತಾರ್ಕಿಕ ಮೆದುಳಾಗಿʼ ಪಾತ್ರವಹಿಸುತ್ತದೆ.
ಈ ಸರಳ ಸೂತ್ರ ಕಂಪ್ಯೂಟರ್‌ ಬಳಸುವ ಎಲ್ಲಾ ಕ್ಷೇತ್ರದ ಉದ್ಯೋಗಗಳಿಗೂ ಅನ್ವಯಿಸುತ್ತದೆ. ಅದನ್ನೇ ನಾವು ʼಇಲ್ಲೆಲ್ಲಾ ಎಐ ಬರಲಿದೆʼ ಎನ್ನುತ್ತಿರುವುದು. ಇದರ ಪರಿಣಾಮ ಎಷ್ಟು ತೀವ್ರ ಎಂಬುದಕ್ಕೆ ಒಂದು ಉದಾಹರಣೆ: ಫೆಬ್ರವರಿಯಲ್ಲಿ ಆಂತ್ರೋಪಿಕ್‌ ತನ್ನ ೧೧ ಪ್ಲಗಿನ್‌ಗಳನ್ನು ಬಿಡುಗಡೆ ಮಾಡಿದಾಗ ಜಾಗತಿಕ ಮಟ್ಟದಲ್ಲಿ ೨೮೫ ಬಿಲಿಯನ್‌ ಡಾಲರ್‌ ಮಾರುಕಟ್ಟೆ ಮೌಲ್ಯ ಕರಗಿತು. ಭಾರತದ ಐಟಿ ಕಂಪೆನಿಗಳು ಒಂದೇ ದಿನ ಸುಮಾರು ₹೨ ಲಕ್ಷ ಕೋಟಿ ಕಳೆದುಕೊಂಡವು.
ಹಾಗಾದರೆ ಎಐ ನಮ್ಮ ಬೀಡಾ ಅಂಗಡಿ, ಕಬ್ಬಿಣದ ಅಂಗಡಿಗಳಲ್ಲಿ ಬಂದು ಕೂರುತ್ತದಾ ಅಂದರೆ ಬಹುಶಃ ಇಲ್ಲ. ಶಾಪವೇ ವರವಾಗಿ ಪರಿಣಮಿಸಿದಂತೆ ಭಾರತದ ಬಹುಭಾಗ ಸಮಾಜ ಕಂಪ್ಯೂಟರ್‌ನಿಂದ ಅಸ್ಪೃಷ್ಯವಾಗಿದೆ. ಅಲ್ಲಿ ಎಐ ಸದ್ಯಕ್ಕೆ ನೇರವಾಗಿ ಕಾಲು ಇಡುವುದಿಲ್ಲ. ಆದರೆ ಪರೋಕ್ಷವಾಗಿ ನಿಮ್ಮ ದುಡಿಮೆ, ಉಳಿತಾಯ, ಮಕ್ಕಳ ಶಿಕ್ಷಣ, ಆರೋಗ್ಯ ಇತ್ಯಾದಿಯಾಗಿ ಖಂಡಿತ ಪರಿಣಾಮ ಬೀರುತ್ತದೆ. ಇದನ್ನು ನಾವು ೨೦೦೮ರ ಜಾಗತಿಕ ಆರ್ಥಿಕ ಕುಸಿತದ ಸಮಯದಲ್ಲಿಯೂ ಎದುರಿಸಿದ್ದೆವು. ಅದೂ ಸಹ ಇದೇ ಕಾರಣಕ್ಕೆ ಕಟ್ಟೆಕಡೆಯ ಮನುಷ್ಯನನ್ನು ಅಷ್ಟಾಗಿ ತಟ್ಟಿರಲಿಲ್ಲ.
ಹೇಳುವುದು ಮರೆತೆ. ಈ ಮಂತ್ರಿ ಅಂದೆನಲ್ಲಾ, ಇದು ತಂತ್ರಜ್ಞಾನದ ಸಾಮರ್ಥ್ಯವನ್ನು ಉದ್ದೇಶಿಸಿ ಹೇಳಿದೆನಷ್ಟೇ. ನಿಜವಾದ ʼಮಂತ್ರಿʼಗಳನ್ನು ಅಂದರೆ ಪ್ಲಗಿನ್‌ಗಳನ್ನು ಅಥವಾ ಅಪ್ಲಿಕೇಶನ್‌ಗಳನ್ನು ಆಯಾ ದೇಶಗಳ ಡೆವಲಪರ್‌ಗಳು ಆಯಾ ಸಂದರ್ಭ ಮತ್ತು ಅಗತ್ಯಕ್ಕೆ ಅನುಗುಣವಾಗಿ ತಯಾರಿಸಬೇಕಾಗಿದೆ. ಸಧ್ಯಕ್ಕೆ ಇವು ನೂರಕ್ಕೆ ನೂರರಷ್ಟು ಕ್ಷಮತೆಯಿಂದ ಕಾರ್ಯನಿರ್ವಹಿಸುತ್ತವೆ ಎನ್ನಲೂ ಆಗದು. ಆದರೆ ಪ್ರತಿ ಮೂರು ತಿಂಗಳಿಗೊಮ್ಮೆ ಮಾಡೆಲ್‌ಗಳು ಅಪ್‌ಡೇಟ್‌ ಆಗುತ್ತಿವೆ. ಊರಿಗೆ ಬಂದವಳು ನೀರಿಗೆ ಬರದೇ ಇರುತ್ತಾಳಾ ಎಂದು ನಾವೆಲ್ಲ ಯೋಚಿಸಬೇಕಾಗಿದೆ.

Leave a Comment

Your email address will not be published. Required fields are marked *