ಕ್ಷಣಕ್ಷಣದ ಮಾಹಿತಿಯ ಜಗದೊಳಗೆ

article7 cover

ಅಂಕಣ: ಟೆಕ್ ಪೋಸ್ಟ್ ಲೇಖಕರು: ಮಧು ವೈ. ಎನ್.

ಗುಟೆನ್‌ಬರ್ಗ್ ಪ್ರಿಂಟಿಂಗ್ ಪ್ರೆಸ್ ಕಂಡುಹಿಡಿದದ್ದು 15ನೇ ಶತಮಾನದಲ್ಲಿ. ಮಾರ್ಕೋನಿ ರೇಡಿಯೋ ಕಂಡುಹಿಡಿದದ್ದು 1900ರ ಆಸುಪಾಸಿನಲ್ಲಿ. ಟಿವಿ ರೇಡಿಯೋವನ್ನು ಹಿಂದಿಕ್ಕಿದ್ದು 1950ರ ದಶಕದಲ್ಲಿ. ಸುದ್ದಿ ಮಾಧ್ಯಮದ ತಂತ್ರಜ್ಞಾನ ಬದಲಾಗುತ್ತಾ ಬಂದಿದ್ದು ಹೀಗೆ. ಈಗ ಸದ್ದಿಲ್ಲದೆ ಟಿವಿ ಮಾಧ್ಯಮದ ಅಂತ್ಯ ಶುರುವಾಗಿರುವುದು ಗೋಚರಿಸುತ್ತಿದೆ. ಥ್ಯಾಂಕ್ಸ್ ಟು ಟೆಕ್ನಾಲಜಿ!

15ನೇ ಶತಮಾನದ ತನಕ ಪುಸ್ತಕಗಳು ಕೈಬರಹ, ತಾಮ್ರದ ಬರಹದಿಂದ ಮರುಮುದ್ರಣಗೊಳ್ಳುತ್ತಿದ್ದವು. ಆದ್ದರಿಂದ ಅವು ಕೇವಲ ರಾಜರ, ಆಸ್ಥಾನ ಪಂಡಿತರ ಸ್ವತ್ತಾಗಿದ್ದವು. ಪ್ರಿಂಟಿಂಗ್ ಪ್ರೆಸ್ ಪುಸ್ತಕಗಳನ್ನು ಅರಮನೆಯಿಂದ ಹೊರಗೆ ತಂದು ಕ್ರಾಂತಿ ಉಂಟುಮಾಡಿತು. ಮುದ್ರಣ ಮತ್ತು ಹಂಚಿಕೆ ಸುಲಭವಾಯಿತು. ಆದರೆ, ಅದೂ ಸಹ ಓದು ಬಲ್ಲ ಸಾಮಾನ್ಯರಿಗಷ್ಟೇ ಸೀಮಿತವಾಗಿತ್ತು. ರೇಡಿಯೋ ಓದು ಬರದವರಿಗೂ ಸುದ್ದಿಯನ್ನು ಮುಟ್ಟಿಸಿತು. ಟಿವಿ ಬಂತು. ಆದರೆ, ಅದು ಬಡವರಿಗೆ ತಲುಪಲು ಸುಮಾರು ವರ್ಷ ತೆಗೆದುಕೊಂಡಿತು. ಈ ದೃಷ್ಟಿಯಲ್ಲಿ ಬಹಳ ವರ್ಷಗಳ ಕಾಲ ಅನಕ್ಷರಸ್ಥರು ಮತ್ತು ಬಡವರು ಇಬ್ಬರಿಗೂ ಸುದ್ದಿ ಮುಟ್ಟಿಸಿದ ಶ್ರೇಯಸ್ಸು ಪ್ರಿಂಟಿಂಗ್‌ಗೆ ಅಲ್ಲದ, ಟಿವಿಯಷ್ಟೂ ಆಕರ್ಷಕವಲ್ಲದ, ಇಬ್ಬರನ್ನೂ ಮಹತ್ವಾಕಾಂಕ್ಷಿಯಲ್ಲದ ಸಾದಾ ಜೀವಿ ರೇಡಿಯೋಗೆ ಸಲ್ಲಬೇಕು.

ಈಗ ಎಎಂ ಮತ್ತು ಎಫ್ಎಂ ರೂಪದಲ್ಲಿದ್ದ ರೇಡಿಯೋ ಡಿಜಿಟಲ್ ಪಾಡ್‌ಕಾಸ್ಟ್‌ಗಳಾಗಿ ರೂಪಾಂತರಗೊಂಡಿದೆ. ಕೇವಲ ಕೇಬಲ್ ಮತ್ತು ಸ್ಯಾಟಲೈಟ್ ರೂಪದಲ್ಲಿ ಮನೆಮನೆ ತಲುಪುತ್ತಿದ್ದ ಟಿವಿ, ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ಗೆ ರೂಪಾಂತರಗೊಂಡಿದೆ. ಕ್ಷಣಕ್ಷಣದ ಸುದ್ದಿಗಾಗಿ ‘ಎಕ್ಸ್’ (ಟ್ವಿಟರ್) ಇದೆ. ಅಂತೆಯೇ, ಸಾಮುದಾಯಿಕ ಮತ್ತು ಸಾಂಸ್ಕೃತಿಕ ಒಡೆತನ ಹೋಗಿ ಸ್ವತಂತ್ರ ಮತ್ತು ವೈಯಕ್ತಿಕ ಒಡೆತನ ಮುನ್ನೆಲೆಗೆ ಬರುತ್ತಿದೆ. ಉದಾಹರಣೆಗಳನ್ನು ನೋಡೋಣ.

ಹಲವು ವರ್ಷಗಳ ನಂತರ ಸಾರ್ವಜನಿಕ ಸಂವಾದಕ್ಕಿಲ್ಲದ ವಿಜಯ್ ಮಲ್ಯ ಅರಿಸಿಕೊಂಡಿದ್ದು ಯಾವುದೋ ರಾಷ್ಟ್ರೀಯ ಅಂತಾರಾಷ್ಟ್ರೀಯ ಟಿವಿ/ ಪತ್ರಿಕೆಯನ್ನಲ್ಲ, ಬದಲಾಗಿ ಒಬ್ಬ ಯೂಟ್ಯೂಬರನ್ನು. ‘ಆಪರೇಶನ್ ಸಿಂದೂರ’ದ ಸುದ್ದಿ ಮಧ್ಯರಾತ್ರಿ ಒಂದೂವರೆ ಗಂಟೆಗೂ ಮೊದಲು ವರದಿಯಾಗಿದ್ದು ‘ಎಕ್ಸ್’ನಲ್ಲಿ. ಈ ಲೇಖನ ಬರೆಯುವ ಹೊತ್ತಿಗೆ ಚೆನ್ನೈನಲ್ಲಿ ಪ್ರವಾಹ ಉಂಟಾಗಿ ಹಲವಾರು ಸತ್ತಿದ್ದಾರೆ. ಸುಮಾರು ಮಕ್ಕಳು ಕಾಣೆಯಾಗಿದ್ದಾರೆ. ಅಮೆರಿಕನ್ನರು ಇದರ ನೈಜ, ವಿಸ್ತೃತ ವರದಿಗಾಗಿ ಅವಲಂಬಿಸಿರುವುದು ಯೂಟ್ಯೂಬರ್‌ಗಳನ್ನು.

ಅಲ್ಲಿಯೂ ಜನ ಟಿವಿಗಳನ್ನು ಬೈಕೊಂಡು ಬೈಕೊಂಡು ಇಂಥ ವೈಯಕ್ತಿಕ ಸುದ್ದಿ ಮೂಲಗಳಿಗೆ ಶರಣಾಗಿದ್ದಾರೆ. ಕನ್ನಡಿಗರಿಗೆ ಅಂತಾರಾಷ್ಟ್ರೀಯ ಚಾನೆಲ್ಲಾದ ನ್ಯಾಷನಲ್ ಜಿಯೋಗ್ರಾಫಿಕ್ ಆಗಲಿ, ಕನ್ನಡದೇ ಟಿವಿ ಮಾಧ್ಯಮಗಳಾಗಲಿ ತೋರಿಸದ ದೇಶಗಳನ್ನು ಅಲ್ಲಿನ ಜನಜೀವನವನ್ನು ಕೋಟ್ಯಂತರ ಜನರಿಗೆ ಉಣಬಡಿಸುತ್ತಿರುವುದು ಮತ್ತೊಬ್ಬ ಕನ್ನಡದ ಯೂಟ್ಯೂಬರ್ ಹುಡುಗ. ಟಿವಿ ಮಾಧ್ಯಮ ತೊರೆದು ಯೂಟ್ಯೂಬ್ ಚಾನೆಲ್ ತೆರೆದು ಯಶಸ್ವಿಯಾಗಿರುವ ಕನ್ನಡದ ಖ್ಯಾತ ಟಿವಿ ನಿರೂಪಕರು ನಮ್ಮೆದುರಿಗಿದ್ದಾರೆ. ಇದೆಲ್ಲ ಯಾಕಾಗುತ್ತಿದೆ? ಕಾರಣಗಳೇನು?

  • ಟಿವಿ ವಿಷುಯಲ್ ಮಾಧ್ಯಮ: ನಿರೂಪಕನೊಂದಿಗೆ ಸಂವಾದ ಸಾಧ್ಯವಿಲ್ಲ. ಕನಿಷ್ಠ ಪ್ರಿಂಟ್ ಮಾಧ್ಯಮದಲ್ಲಿ ವಾಚಕರೊಂದಿಗೆ ಇಷ್ಟಾದರೂ ಜಾಗವಿದೆ. ಜನ ಈಗ ವ್ಯಕ್ತಿಯೊಂದಿಗೆ ಕನೆಕ್ಟ್ ಆಗುವುದನ್ನು ಇಷ್ಟಪಡುತ್ತಾರೆ. ವ್ಯಕ್ತಿ ಸರಿಯೆನಿಸಿದರೆ ಅವನು ಹೇಳುವುದೆಲ್ಲವೂ ವಿಶ್ವಾಸಾರ್ಹವೆನಿಸುತ್ತದೆ.

  • ವೈವಿಧ್ಯತೆ: ಟಿವಿ ಎಲ್ಲರಿಗೂ ಸಲ್ಲುವ ಸಾಮಾನ್ಯ ವಿಷಯಗಳ ಬಗ್ಗೆ ಮತ್ತು ಎಲ್ಲರಿಗೂ ಅರ್ಥವಾಗುವ ಸಾಮಾನ್ಯ ಅಳತೆಯನ್ನೇ ತೋರಿಸಬೇಕಾಗುತ್ತದೆ. ಡಿಜಿಟಲ್ ಜಗತ್ತಿನಲ್ಲಿ ಜನರ ಆಸಕ್ತಿಗೆ ಅನುಗುಣವಾದದ್ದು, ಅವರ ಬುದ್ಧಿಗೆ ಸಮಾನವಾದದ್ದು ತೋರಿಸಲು ಅವಕಾಶವಿದೆ. ಹಣ, ಪುಸ್ತಕ, ಆರೋಗ್ಯ, ತಂತ್ರಜ್ಞಾನ, ಜಾಗತಿಕ, ಮಿಲಿಟರಿ, ವಿಜ್ಞಾನ… ಏನು ಬೇಕೋ ಅದನ್ನು ಮಾತ್ರ ನೋಡಬಹುದಾಗಿದೆ. ಈ ಪ್ರತಿ ವಿಷಯಗಳಲ್ಲಿ ಸಂಬಂಧಪಟ್ಟ ತಜ್ಞರನ್ನು ಆರಿಸಿಕೊಳ್ಳಬಹುದಾಗಿದೆ. ಎಲ್ಲಿಂದಾದರೂ ಎಷ್ಟು ಬೇಕೋ ಅಷ್ಟು, ಏನು ಬೇಕೋ ಅದನ್ನಷ್ಟೇ ನೋಡಲು ಸಾಧ್ಯವಿದೆ. ಬಾತ್‌ರೂಮ್‌ನಲ್ಲಿ, ಮೆಟ್ರೋದಲ್ಲಿ, ರಿಕ್ಷಾದಲ್ಲಿ… 5 ನಿಮಿಷ, 10 ನಿಮಿಷ…

  • ಒತ್ತಡವಿಲ್ಲದ ಕೆಲಸ: ಇಂಡಿವಿಜುವಲ್ ಕ್ರಿಯೇಟರ್‌ಗಳಿಗೆ 7 ದಿವಸ 24 ಗಂಟೆಯ ಏನೇನಾದ್ರೂ ಸುದ್ದಿ ಸೃಷ್ಟಿಸುವ ಹೊರೆ ಇರಲ್ಲ. ಇದರಿಂದಾಗಿ ಹೆಚ್ಚಿನ ಅಧ್ಯಯನ, ವಿಷಯದ ಆಳ, ವಿಡಿಯೋದ ಗುಣಮಟ್ಟ ವಿಸ್ತರಿಸುವುದಕ್ಕೆ ಅವಕಾಶವಿದೆ.

  • ಸೆನ್ಸಾರ್ ಮುಕ್ತ: ಟಿವಿ ಮಾಧ್ಯಮಗಳು ಕೆಲವೊಮ್ಮೆ ಕೆಲವನ್ನೇ ಸೆನ್ಸಾರ್ ಮಾಡಬೇಕಾಗುತ್ತದೆ. ಅನೇಕ ಒತ್ತಡಗಳಿಂದ ಕೆಲವು ಸುದ್ದಿಗಳನ್ನು ಹಿಡಿದಿಡಬೇಕಾಗುತ್ತದೆ. ಸಂಸ್ಥೆಯ ಚೌಕಟ್ಟುಗಳಿರುತ್ತವೆ. ವೈಯಕ್ತಿಕ ಮಾಧ್ಯಮಗಳಿಗೆ ಇಂಥ ಗಡಿರೇಖೆಗಳು ಕಡಿಮೆ.

  • ಕಡಿಮೆ ಬಂಡವಾಳ: ಮುಖ್ಯವಾಗಿ ಡಿಜಿಟಲ್ ಚಾನೆಲ್‌ಗಳನ್ನು ಆರಂಭಿಸಲು ನೀವು ಯಾವುದೇ ಆಫೀಸು ತೆರೆಯಬೇಕಿಲ್ಲ, ಉದ್ಯೋಗಿಗಳನ್ನು ನೇಮಿಸಿಕೊಳ್ಳಬೇಕಿಲ್ಲ. ನಾಳೆಯೇ ನೀವೂ ಒಂದು ಆರಂಭಿಸಬಹುದು. ಒಂದು ವಿಷಯದ ಪರಿಣಿತಿ, ಒಂದು ಒಳ್ಳೆಯ ಫೋನು ಮತ್ತು ಒಂದಿಷ್ಟು ಎಡಿಟಿಂಗ್ ಕೌಶಲ್ಯ. ಇಷ್ಟು ಸಾಕು.

  • ಬೆಳವಣಿಗೆ: ಸರಿ, ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್ ಬಂದು 20 ವರ್ಷಗಳಾಯಿತು. ಇನ್‌ಸ್ಟಾಗ್ರಾಮ್ ಬಂದು 15 ವರ್ಷಗಳಾಯಿತು. ಇದ್ದಕ್ಕಿದ್ದಂತೆ ಯಾಕೀ ಬೆಳವಣಿಗೆ? 2024ರಲ್ಲಿ ಭಾರತದಲ್ಲಿ ಡಿಜಿಟಲ್ ವೇದಿಕೆಗಳು ಅಧಿಕೃತವಾಗಿ ಟಿವಿ ಮಾಧ್ಯಮವನ್ನು ಹಿಂದೆ ಹಾಕಿವೆ.

  • ಮಾನೆಟೈಸೇಶನ್: ಹಿಂದೆ ಈ ವೇದಿಕೆಗಳಲ್ಲಿ ‘ಮಾನೆಟೈಸೇಶನ್’ ಇರಲಿಲ್ಲ. ಅಂದರೆ, ಹಣ. ಈಗ ಆಯಾ ಕಂಪನಿಗಳು ಹಣ ಕೊಡಲು ಆರಂಭಿಸಿದ್ದಾರೆ. ಅರ್ಥಾತ್ ಇಲ್ಲಿ ಈಗ ನೈಜ ಆದಾಯವಿದೆ.

  • ಆಲ್ಗೊರಿದಮ್ ಮತ್ತು ಎಐ: ಮುಂಚೆ ಕಂಟೆಂಟ್ ಅನ್ನು ಪ್ರಸಾರ ಮಾಡುವುದರಲ್ಲಿ ಆಲ್ಗೊರಿದಮ್‌ಗಳ ಕೈಚಳಕ ಇರಲಿಲ್ಲ. ಈಗ ವಿಷಯದ ಒರಿಜಿನಾಲಿಟಿ ಮೇರೆಗೆ, ಪ್ರಸ್ತುತತೆ ಮೇರೆಗೆ, ಜನರ ಪ್ರತಿಕ್ರಿಯೆ ಮೇರೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಉಪಕರಣಗಳು ಕೆಲವು ಕಂಟೆಂಟ್ ಅನ್ನು ಆಯ್ಕೆ ಮಾಡಿಕೊಂಡು ತಾವೇ ಜನರಿಗೆ ಪುಶ್ ಮಾಡುತ್ತವೆ. ಅರ್ಥಾತ್ ಅವರ ಆದಾಯ, ನಿಮ್ಮ ಆದಾಯ- ಒಂದಕ್ಕೊಂದು ಜೋಡಿಸಿಕೊಂಡಿವೆ.

  • ತಂತ್ರಜ್ಞಾನದ ಲಭ್ಯತೆ: ಮುಂಚಿನ ಫೋನುಗಳಲ್ಲಿ ಒಳ್ಳೆಯ ಕ್ಯಾಮೆರಾ ಇರಲಿಲ್ಲ. ಮೊನ್ನೆ ಮೊನ್ನೆ ತನಕ ಡ್ರೋನ್ ಕ್ಯಾಮೆರಾ ಇರಲಿಲ್ಲ. ಈಗ ಇವೆಲ್ಲವೂ ಎಲ್ಲರಿಗೂ ಸುಲಭವಾಗಿ ದೊರೆಯುತ್ತಿವೆ. ಹಾಗೆಯೇ, ಈಗ ಎಐ ವಿಡಿಯೋ ಉಪಕರಣಗಳು ಎಲ್ಲೆಡೆ ಲಭ್ಯವಿರುವವು. ‘ಆಪರೇಷನ್ ಸಿಂದೂರ’ದ ಆಕರ್ಷಕ ಅನಿಮೇಷನ್ ಮತ್ತು ಪರಿಸರ ವಿಶ್ಲೇಷಣೆ ಆ ಸಂಜೆಯೇ ಯೂಟ್ಯೂಬ್‌ನಲ್ಲಿ ಬಂದುಬಿಟ್ಟಿತ್ತು.

  • ಭವಿಷ್ಯದ ಹಾದಿ: ಈ ಮೊದಲು ಹಲವು ಸಲ ಹೇಳಿರುವಂತೆ ಕ್ಲೌಡ್, 5ಜಿ ಮತ್ತು ಈಗ ಎಐ- ಇವುಗಳೊಂದಿಗೆ ಬದಲಾದ ಜನರ ಮನೋಭಾವ ಎಲ್ಲವೂ ಸೇರಿಕೊಂಡು ತಂತ್ರಜ್ಞಾನ ತಾನೇ ಸೃಷ್ಟಿಸಿದ್ದ ಸಮಸ್ಯೆಯೊಂದನ್ನು ತಾನೇ ಬಗೆಹರಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ.

  • ಹೊಸ ಪರ್ಯಾಯ: ಇದೂ ಎಷ್ಟು ದಿವಸ ಇರುತ್ತೋ? ಮತ್ತೆ ಏನು ಹೊಸದು ಬರುತ್ತೋ? ಕಾದು ನೋಡೋಣ. ಗೂಗಲ್ ಸರ್ಚ್‌ಗೆ ಪರ್ಯಾಯವೇ ಇರಲಿಕ್ಕಿಲ್ಲ ಎಂದು ಭಾವಿಸಿದ್ದೆವು. ಅದರ ಜಾಗವನ್ನು ಭಾರತೀಯರಲ್ಲದ ಕಂಪನಿ ಪರ್ಪ್ಲೆಕ್ಸಿಟಿ ಆಕ್ರಮಿಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.

Leave a Comment

Your email address will not be published. Required fields are marked *