ಗ್ಲೋಬಲೈಸೇಶನ್ ಟು ಸ್ಲೋಬಲೈಸೇಶನ್!

article m1

ಟ್ಯಾರಿಫ್ ಯುದ್ಧದಿಂದಾಗಿ ಹೈಪರ್ ಜಾಗತೀಕರಣದ ಕರೆಕ್ಷನ್ ಆಗುತ್ತಿದೆಯೇ?

‘The world is Flat’ ಥಾಮಸ್ ಫ್ರೀಡ್ಮನ್ 2005ರಲ್ಲಿ ಬರೆದ ಪುಸ್ತಕ. ಥಾಮಸ್ ಫ್ರೀಡ್ಮನ್ ಅಮೆರಿಕದ ಲೇಖಕ, ರಾಜಕೀಯ ವಿಶ್ಲೇಷಕ. ಫ್ರೀಡ್ಮನ್ 2000ರ ದಶಕದಲ್ಲಿ ಒಮ್ಮೆ ಬೆಂಗಳೂರಿಗೆ ಬಂದಿದ್ದಾಗ ಇಲ್ಲಿ ಡೆಲ್, ಮೈಕ್ರೋಸಾಫ್ಟ್, ಎಬಿಎಂ ಮುಂತಾದ ಅಮೆರಿಕನ್ ಕಂಪನಿಗಳು ನೆಲೆ ನಿಂತಿರುವುದು; ಅವುಗಳಲ್ಲಿ ಭಾರತೀಯರು ಕೆಲಸ ಮಾಡುತ್ತಿರುವುದು; ಅವುಗಳ ಸಾಫ್ಟ್‌ವೇರ್ ಜಗತ್ತಿನಾದ್ಯಂತ ರಫ್ತಾಗುವುದು- ಇದನ್ನೆಲ್ಲ ನೋಡಿ ಮೂಕವಿಸ್ಮಿತನಾಗಿ, “ತಂತ್ರಜ್ಞಾನ ಮತ್ತು ವ್ಯಾಪಾರ ಜಗತ್ತಿನ ಗೋಡೆಗಳನ್ನು ಒಡೆದುಹಾಕಿವೆ. ಅಡ್ಡಕ್ಕ ಬೆಟ್ಟಗಳು ಕರಗುತ್ತಿವೆ, ಪ್ರಪಂಚ ಚಪ್ಪಟೆಯಾಗುತ್ತಿದೆ, ಈ ಗಡಿಗಳಿಲ್ಲದ ನೆಲದ ಮೇಲೆ ಇನ್ನು ಮುಂದೆ ಚೀನಾ, ಇಂಡಿಯಾ, ಸ್ಪರ್ಧೆ ನೀರಿನಂತೆ ಎಲ್ಲ ಕಡೆ ಹರಿಯಲಿದೆ,” ಎಂದು ಭಾವನಾತ್ಮಕವಾಗಿ ಈ ಪುಸ್ತಕ ಬರೆಯುತ್ತಾರೆ. ಇದಕ್ಕೆ ‘ಜಾಗತೀಕರಣ-3’ ಎಂದು ಹೆಸರಿಡುತ್ತಾನೆ. ಬರೀ ಸರ್ಕಾರಗಳು, ಕಂಪನಿಗಳಷ್ಟೇ ಅಲ್ಲ ಇನ್ನು ಮುಂದೆ ಪ್ರತಿಯೊಬ್ಬ ವ್ಯಕ್ತಿಯೂ ಈ ಜಾಗತಿಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಘೋಷಿಸುತ್ತಾನೆ. ಅವನ ಆಲೋಚನೆಗೆ ವ್ಯಾಪಕವಾದ ಮನ್ನಣೆ ಸಿಗುತ್ತದೆ. ಇದು ಮನುಷ್ಯಕುಲಕ್ಕೆ ಒಳಿತು ಮಾಡಲಿದೆ ಎಂಬ ಯುಟೋಪಿಯನ್ ಆಶಾಭಾವನೆ ಮೂಡಿಸುತ್ತದೆ.

ಫ್ರೀಡ್ಮನ್ ಯಾಕೆ ಪ್ರಪಂಚ ಚಪ್ಪಟೆಯಾಯ್ತು ಎಂಬುದಕ್ಕೆ ಹತ್ತು ಕಾರಣಗಳನ್ನು ಪಟ್ಟಿ ಮಾಡುತ್ತಾನೆ. ಬರ್ಲಿನ್ ಗೋಡೆ ಬಿದ್ದಿದ್ದರಿಂದ ಹಿಡಿದು ಇಂಟರ್ನೆಟ್ ಸಾರ್ವಜನಿಕವಾಗಿದ್ದು, ತಂತ್ರಜ್ಞಾನ ಮುಕ್ತವಾಗಿದ್ದು, ಜಾಗತಿಕ ಸಪ್ಲೈ-ಚೈನ್ ಸೃಷ್ಟಿಯಾಗಿದ್ದು, ಔಟ್‌ಸೋರ್ಸಿಂಗ್, ಆಫ್‌ಶೋರಿಂಗ್ ಮುಂತಾದವು ಪಟ್ಟಿಯಲ್ಲಿವೆ. ಸರ್ಜಿಂಗ್ (ಒಪ್ಪಂದಗಳು), ಅಡಾಪ್ಷನ್ (ಹೊಂದಿಕೊಳ್ಳುವುದು), ಹೊಸ ಸ್ಪರ್ಧಾಳುಗಳು (ಚೀನಾ, ಭಾರತದಂತಹ ದೇಶಗಳ ಉದ್ಯಮಿಗಳು)- ಈ ಮೂರು ಬೆಳವಣಿಗೆಗಳಿಂದ ಜಾಗತೀಕರಣದ ಮೂರನೇ ಅಧ್ಯಾಯಕ್ಕೆ ನಾಂದಿಯಾಯ್ತು ಎನ್ನುತ್ತಾನೆ.

ಸರಿಯಾಗಿ ಇಪ್ಪತ್ತು ವರುಷಗಳು ಉರುಳಿವೆ. ಸಿನೆಮಾ, ಧಾರಾವಾಹಿಗಳಲ್ಲಿ “ಇಪ್ಪತ್ತು ವರ್ಷಗಳ ಹಿಂದೆ” ಅಂತಾರಲ್ಲ ಹಾಗಾಗಿದೆ. ಅಂದರೆ ಎಲ್ಲವೂ ತಲೆಕೆಳಗಾಗಿದೆ. ಆರ್ಥಿಕ ರಾಷ್ಟ್ರೀಯತೆ ಮುನ್ನೆಲೆಗೆ ಬಂದಿದೆ. ನೀರಿನಂತೆ ಹರಿಯಬೇಕಿದ್ದ ಹಣ, ಐಡಿಯಾ, ಸ್ಪರ್ಧೆಗಳಿಗೆ ಅಡ್ಡವಾಗಿ ‘ನಿನೆಷ್ಟೋ ನಾನಷ್ಟು’ ಎಂಬಂತೆ ಜಿದ್ದಿಗೆ ಬಿದ್ದು ಟ್ಯಾರಿಫ್ ಯುದ್ಧಕ್ಕೆ ಇಳಿದಿದ್ದಾರೆ. ಬೃಹತ್ ತಡೆಗೋಡೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಈ ಯುದ್ಧ ಆಗಾಗಕ್ಕಾಗಲಿ ಕುರುವಾಗಿಲ್ಲ. ಇದು ಉದ್ದೇಶಿತ, ಪ್ರತಿಕಾರದ ಯುದ್ಧ (retaliation tariff). ಪಟಾಕಿ ಸರಮಾಲೆ ಇದ್ದಹಾಗೆ. ಒಂದು ಪಟಾಕಿ ಇನ್ನೊಂದು ಪಟಾಕಿಗೆ ಕಿಡಿಯಾಗುತ್ತದೆ. ಅದ್ದರಿಂದ ಇದು ಅಪಾಯಕಾರಿ.

ಅಮೆರಿಕ-ಚೀನಾ ನಡುವೆ ಟ್ಯಾರಿಫ್ ಯುದ್ಧ ಶುರುವಾಗಿದ್ದು 2018ರಲ್ಲಿ ಅಮೆರಿಕ ಚೀನಾದ ಸ್ಟೀಲ್ ಅಲ್ಯುಮಿನಿಯಂ ಮೇಲೆ ಸುಂಕ ವಿಧಿಸಿತ್ತು; ಪ್ರತ್ಯುತ್ತರವಾಗಿ ಚೀನಾ ಅಮೆರಿಕದ ಸೋಯಾಬೀನ್, ಕಾರ್, ಬೀಫ್, ಪೋರ್ಕನ್ ಮೇಲೆ ಸುಂಕ ವಿಧಿಸಿತ್ತು. ಈ ಸಮರ ಅಮೆರಿಕ-ಯೂರೋಪಿಗೂ ವಿಸ್ತರಿಸಿದ್ದರೂ ಅಮೆರಿಕಕ್ಕೆ ಚೀನಾ ಮೇಲೆ ಭಯ/ಹಗೆ ಇದ್ದಷ್ಟು ಯೂರೋಪಿನ ಮೇಲೆ ಇಲ್ಲ. ಯಾಕೆಂದರೆ, ಯೂರೋಪ್ ಎಂದಿಗೂ ಅಮೆರಿಕದೊಂದಿಗೆ ಸ್ಪರ್ಧೆಗೆ ಇಳಿದಿರಲಿಲ್ಲ. ವಿಶ್ವ ವಾಣಿಜ್ಯ ಸಂಸ್ಥೆ (WTO) ಪ್ರಕಾರ, ಈ ಯುದ್ಧದಿಂದ ಜಾಗತಿಕ ವ್ಯಾಪಾರಕ್ಕೆ ಶೇ.80ರಷ್ಟು ನಷ್ಟವಾಗಿದೆ. ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಪ್ರಕಾರ, ಜಾಗತಿಕ ಜಿಡಿಪಿ ಶೇ.0.3 ಕಡಿಮೆಯಾಗಲಿದೆ. ಸಾಕಷ್ಟು ಉದ್ಯೋಗ ನಷ್ಟದ ಭೀತಿಯಿದೆ. ಎಲ್ಲರಿಗೂ ಎಲ್ಲದ ಮೇಲೆ ಭಯ; ಜಾಗತಿಕ ವಿಶ್ವಾಸ ಕಡಿಮೆಯಾಗಿದೆ.

ಫ್ರೀಡ್ಮನ್ ಪುಸ್ತಕ ಬಂದಾಗಲೇ ಅದನ್ನು ಸಾಕಷ್ಟು ಜನ ಇದು ಅಸತ್ಯ, ಉತ್ಪ್ರೇಕ್ಷಿತ ಎಂದು ಟೀಕಿಸಿದ್ದರು. ಜಾಗತಿಕ ಅಸಮಾನತೆ ಮತ್ತು ದುರ್ಬಲ ಸಂಬಂಧಗಳನ್ನು ಕಡೆಗಣಿಸಿ ಫ್ರೀಡ್ಮನ್ ಸುಂದರ ರಂಗೋಲಿ ಬಿಡಿಸುವ ಪ್ರಯತ್ನ ಮಾಡಿದ್ದಾರೆ ಎಂದಿದ್ದರು. “ಸಾಕ್ಷ್ಯಾಧಾರ ಒದಗಿಸದ ದಂತಕತೆಗಳ ಮೋಹಕ್ಕೆ ಸಿಲುಕಿದ್ದಾರೆ,” ಎಂದೂ ಟೀಕಿಸಿದ್ದರು. ಆಗಲೇ ಇಂಡೋ-ಅಮೆರಿಕನ್ ಆರ್ಥಿಕ ಪಂಡಿತ ಪಂಕಜ್ ಘೆಮಾವತ್ “ಈ ಆರ್ಥಿಕ ಜಗತ್ತು ಸಮತಟ್ಟಾಗಿಲ್ಲ, ಇಲ್ಲಿ ಸಾಕಷ್ಟು ಚೊಪ್ಪು ಮೋರ್ಕಗಳಿವೆ,” ಎಂದಿದ್ದರು. ಮುಖ್ಯವಾಗಿ ಫ್ರೀಡ್ಮನ್‌ನ ಆವಲೋಕನ ಅಮೂರ್ತ ತುಣುಕುಗಳನ್ನಷ್ಟೇ ಪರಿಗಣಿಸಿ ಬರೆದುದಾಗಿತ್ತು; ಮೂರ್ತ ಆಟಗಳನ್ನಲ್ಲ; ಅಂದರೆ ಕೇವಲ ಸಾಫ್ಟ್‌ವೇರ್‌ನ ಜಾಗತೀಕರಣದಿಂದ ಅವರು ಆಪ್ತ ರೋಮಾಂಚನಗೊಂಡಿದ್ದರು.

ಫ್ರೀಡ್ಮನ್ ಜಾಗತೀಕರಣದಿಂದ ತಂತಾನೇ ಸೃಷ್ಟಿಯಾಗಿದ್ದ ಸಪ್ಲೈಚೈನ್ ಬಗ್ಗೆ ಸೋಜಿಗಗೊಂಡಿದ್ದರು. ಇದೊಂದು ಅಪೂರ್ವ ವ್ಯಾಪಾರಿ ನರತಂತು. ಬಹುಶಃ ಸಿಲ್ಕ್ ರೂಟ್ ಕಾಲದಲ್ಲಿ ಹೀಗಿದ್ದಿರಬೇಕು. ಈಗ ಅಲ್ಲಿಲ್ಲಿ ನರಗಳು ಕಟ್ ಆಗಿ ನರತಂತುವಿಗೆ ಹೊಡೆತ ಬಿದ್ದಿದೆ. ಕಂಪನಿಗಳು ತಮ್ಮ ಸಪ್ಲೈ ಚೈನ್ನನ್ನು ಮರುಜೋಡಿಸಿಕೊಳ್ಳಬೇಕಾದ ಒತ್ತಡ ಬಿದ್ದಿದೆ. ಆಸಕ್ತಿಕರ ಸಂಗತಿಯೆಂದರೆ, ಈ ವಿರೋಧದಿಂದ ಪಾರಾಗಲು ಕಂಪನಿಗಳು ಅನ್ವೇಷಿಸುತ್ತಿರುವುದು ಮತ್ತದೇ ಚಪ್ಪಟೆ ಜಗತ್ತಿನ ಉಪಾಯಗಳನ್ನೇ, ಅಂದರೆ, ಅವರೆಲ್ಲಾ ಈಗ ನೆರೆ ದೇಶಗಳು ಹಾಗೂ ಮಿತ್ರದೇಶಗಳ ಮೊರೆ ಹೋಗುತ್ತಿದ್ದಾರೆ. ಇದನ್ನು Nearshoring, friendshoring ಎನ್ನುತ್ತಾರೆ. ಅಂದರೆ, ದೂರದ ಚೀನಾದಂತ ಶತ್ರುವಿಗಿಂತ ಹತ್ತಿರದ ಮೆಕ್ಸಿಕೋ ಅಥವಾ ರಾಜಕೀಯವಾಗಿ ಸ್ನೇಹವಿರುವ ಭಾರತದಂಥ ದೇಶಗಳೊಂದಿಗೆ ಸಂಬಂಧ ಕುದುರಿಸುವುದು. ಜಾಗತಿಕ ಸಪ್ಲೈಚೈನ್ ಮೇಲೆ ಅವಲಂಬಿತವಾಗಿರುವ ಆಟೋಮೊಬೈಲ್ ಉದ್ಯಮ ರಾಜಕೀಯ ನೆಪಗಳೊಂದಿಗೆ ಲಾಬಿ ಮಾಡಿ ಟ್ಯಾರಿಫ್ ಶಿಕ್ಷೆ ತಪ್ಪಿಸಿಕೊಳ್ಳುತ್ತಿದೆ. ತಂತ್ರಜ್ಞಾನ ಉದ್ಯಮ ಭಾರತದತ್ತ ಮುಖಮಾಡುತ್ತಿದ್ದರೆ, ರೀಟೇಲ್ ಉದ್ಯಮ ಮೆಕ್ಸಿಕೋದಂಥ ದೇಶಗಳತ್ತ ನೋಡುತ್ತಿದೆ.

ಈ Begger thy neighbor policyಯಿಂದ ನಿಜವಾದ ಹೊಡೆತ ಯಾರಿಗೆ ಬೀಳಲಿದೆ? ಅಂತಿಮವಾಗಿ ಗ್ರಾಹಕರಿಗೆ ಮತ್ತು ಫ್ರೀಡ್ಮನ್ ಕೊಂಡಾಡಿದ್ದ ಜಾಗತಿಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಯಸಿದ್ದ ‘ಇಂಡಿವಿಜುವಲ್’ಗೆ. ಗ್ರಾಹಕರಿಗೆ ತಾವು ಕೊಂಡುಕೊಳ್ಳುವ ದಿನನಿತ್ಯ ಅಗತ್ಯಗಳಾದ ಸೋಪು, ಬಟ್ಟೆ, ವಾಷಿಂಗ್ ಮೆಷಿನ್ನು, ಅಕ್ಕಿ, ಎಲೆಕ್ಟ್ರಾನಿಕ್ ಉಪಕರಣಗಳು… ಇವುಗಳ ಬೆಲೆ ಜಾಸ್ತಿಯಾಗಲಿದೆ. ಅಮೆರಿಕದ ಗ್ರಾಹಕರು ಈಗಾಗಲೇ ಮೆಕ್ಸಿಕೊ, ಬ್ರೆಜಿಲ್, ವಿಯೆಟ್ನಾಂ, ಕೆನಡಾ, ದಕ್ಷಿಣ ಕೊರಿಯಾ ದೇಶಗಳತ್ತ ತಿರುಗಿದ್ದಾರೆ.

ತಮ್ಮನ್ನು ಪ್ರತಿನಿಧಿಸುವ ಕಂಪನಿಗಳು ಇಲ್ಲದಂಥ ಕೃಷಿಕರು, ಸಣ್ಣ ಉದ್ಯಮದಾರರು ಅರ್ಥಾತ್ ಇಂಡಿವಿಜುವಲ್‌ಗಳು- ಇವರಿಗೂ ಇದರ ಹೊಡೆತ ಬೀಳಲಿದೆ. ಯಾಕೆಂದರೆ, ಅವರ ಪರವಾಗಿ ಲಾಬಿ ಮಾಡಲು ಮೇಲೆ ಯಾರೂ ಕೂತಿಲ್ಲ. ಆದ್ದರಿಂದ ಇವರೆಲ್ಲ ಅನಿವಾರ್ಯವಾಗಿ ಅದನ್ನು ಅನುಭವಿಸಬೇಕು. ನಿಮ್ಮ ಯಾವುದೋ ಕುಸುರಿ ವಸ್ತು ಅಮೆರಿಕಗೆ ರಫ್ತಾಗುತ್ತಿದ್ದಲ್ಲಿ ಇದ್ದಕ್ಕಿದ್ದಂತೆ ಅದು ನಿಲ್ಲಬಹುದು!

ಫ್ರೀಡ್ಮನ್ ಪುಸ್ತಕ ಇವತ್ತಿಗೆ ಯಾಕೆ ಮುಖ್ಯ ಎಂದರೆ, ಅದು ಅಂದು ನಾವು ಯಾವ ದಾರಿಯಲ್ಲಿದ್ದೆವು ಎಂಬುದನ್ನು ನೆನಪಿಸುತ್ತದೆ. ಎಲ್ಲಿ ಹೇಗೆ ದಾರಿ ತಪ್ಪಿದ್ದೇವೆ ಎಂಬುದನ್ನು ಚಿಂತಿಸುವಂತೆ ಮಾಡುತ್ತದೆ. ಹಾಗಾದರೆ ಸೀಮಾತೀತ ಜಗತ್ತು, ಫ್ಲ್ಯಾಟ್ ವರ್ಲ್ಡ್ ಕನಸು ಮುಗಿಯಿತೇ? ಗೊತ್ತಿಲ್ಲ. ಅದನ್ನು ರಾಜಕೀಯ ನೇತಾರರೇ ನಿರ್ಧರಿಸಬೇಕು. ಇದು ನಾಗರಿಕತೆಯ ಬದಲಾಗುತ್ತಿರುವ ಮೂಲಭೂತ ಬದಲಾವಣೆ ಎಂದು ವಾದಿಸುವವರಿದ್ದಾರೆ. ಹಿಂದೆ ಬಂದೂಕಿನಿಂದ ಶೀತಲ ಸಮರದ ಕಾಲವನ್ನು ನೆನಪಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಹೈಪರ್-ಗ್ಲೋಬಲೈಸೇಶನ್ (ಅತಿಯಾದ ಜಾಗತೀಕರಣ) ಇತ್ತು. ಈಗ ಸ್ಲೋ-ಬಲೈಸೇಶನ್ ಮೂಲಕ ಅದರ ಕರೆಕ್ಷನ್ ಆಗುತ್ತಿದೆ ಎನ್ನುತ್ತಾರೆ.

ಅಂತಿಮವಾಗಿ ಜಗತ್ತು ಯಾವತ್ತಿಗೂ ಚಪ್ಪಟೆಯಾಗಿರಲಿಲ್ಲ ಎಂಬುದೇ ಸತ್ಯ. ಅದೊಂದು ಆದರ್ಶ ಆಶಾಭಾವನೆ ಮಾತ್ರ. ಯಾಕೆಂದರೆ ಯಾವುದೇ ದೇಶ ತಾನು ಅಸುರಕ್ಷಿತ ಅಂದುಕೊಂಡ ಕೂಡಲೇ ಅದು ತನ್ನದನ್ನು ಭದ್ರಮಾಡಿಕೊಳ್ಳಲು ಏನೆಲ್ಲ ಮಾಡಬೇಕೋ ಅಷ್ಟನ್ನೂ ಮಾಡುತ್ತದೆ. ಪ್ರತಿ ದೇಶವೂ ಹಾಗೆ ಮಾಡಿದಾಗ ಜಗತ್ತು ದ್ವೀಪಗಳಾಗುತ್ತದೆ. ಜನರು ಬುಡಕಟ್ಟಿನ ಮನೋಭಾವಕ್ಕೆ ಮರಳುತ್ತಾರೆ.

ಪುಸ್ತಕದ ಅಂತ್ಯದಲ್ಲಿ ಫ್ರೀಡ್ಮನ್ Dell Theory of Conflict Prevention ಎಂಬ ಥಿಯರಿಯನ್ನು ಮಂಡಿಸುತ್ತಾನೆ. ಅದು ಏನು ಹೇಳುತ್ತೆ ಅಂದರೆ ಯಾವುದೇ ಎರಡು ದೇಶಗಳು ಒಂದೇ ಸಪ್ಲೈ-ಚೈನ್‌ನ ಬಳಕೆದಾರರಾಗಿದ್ದಲ್ಲಿ ಅವು ಪರಸ್ಪರ ಯುದ್ಧಕ್ಕೆ ಇಳಿಯುವುದಿಲ್ಲ. ಸರಳವಾಗಿ – ನಮ್ಮ ದೇಶದ ಬಹುದೊಡ್ಡ ಉದ್ಯಮಿಯೊಬ್ಬರು ಬ್ರೆಜಿಲ್‌ನಲ್ಲಿ ವ್ಯಾಪಕವಾಗಿ ತೊಡಗಿಸಿಕೊಂಡಿದ್ದಲ್ಲಿ ಭಾರತ ಮತ್ತು ಬ್ರೆಜಿಲ್ ಯುದ್ಧ ಮಾಡುವುದಿಲ್ಲ. ಮಾಡೋದೇ ಇಲ್ಲ ಅಂತಲ್ಲ, ಮಾಡಿದರೆ ಇಬ್ಬರಿಗೂ ಉಂಟಾಗುವ ನಷ್ಟ ಅಪಾರ.

ಈ ಥಿಯರಿಯನ್ನು ಒಡೆದು ಹಾಕುವಷ್ಟು ಉಂಟಾಗುವ ನಷ್ಟಕ್ಕೆ ಕ್ಯಾರೆ ಅನ್ನದಷ್ಟು ಆರ್ಥಿಕ ರಾಷ್ಟ್ರೀಯತೆ ಬಲಗೊಂಡಿರುವುದು ಕಹಿಯಾದ ವಾಸ್ತವ.

Leave a Comment

Your email address will not be published. Required fields are marked *