ನಾವು ಇಲ್ಲಿ ಅಲ್ಲಿ ಓದುತ್ತೇವೆ. ಆಫ್ರಿಕಾದಲ್ಲಿ, ಅಮೆರಿಕದಲ್ಲಿ, ಯುರೋಪಿನಲ್ಲಿ ಲಕ್ಷಾಂತರ ವರ್ಷಗಳ ಹಿಂದೆ ಬದುಕಿದ್ದ ಡೈನೋಸಾರ್‌ಗಳ ಬೆನ್ನು ಮೂಳೆ ಸಿಕ್ಕಿತು, ಆದಿಮಾನವನ ತಲೆ ಬುರುಡೆ ಸಿಕ್ಕಿತು, ಸಾವಿರ ವರ್ಷಗಳ ಹಿಂದೆ ನಡೆದ ಯುದ್ಧದಲ್ಲಿ ಮಡಿದ ಸೈನಿಕನ ಶವ ಸಿಕ್ಕಿತು, ರಾಜನ ಕುದುರೆ ಬಂಡಿ ಸಿಕ್ಕಿತು ಅಂತಲ್ಲಾ. ಆದರೆ, ಇವೆಲ್ಲ ನಮ್ಮ ದೇಶದಲ್ಲಿ ಯಾಕೆ ಸಿಗಲಿಲ್ಲ ಯೋಚಿಸಿದ್ದೀರಾ? ನಮ್ಮಲ್ಲಿ ಡೈನೋಸಾರ್ ಇರಲಿಲ್ವೇ? ಆದಿ ಮಾನವರು ವಾಸಿಸಿರಲಿಲ್ವೇ? ರಾಜರುಗಳು ಇರಲಿಲ್ವೇ? ಯುದ್ಧಗಳು ಜರುಗಿಲ್ಲವೇ?
ಉತ್ತರ ಹುಡುಕುತ್ತಾ ಹೋದರೆ ಕೆಲವು ಆಶ್ಚರ್ಯ ಮಾಹಿತಿಗಳು ಒದಗುತ್ತವೆ. ನಮ್ಮಲ್ಲಿ ಡೈನೋಸಾರ್‌ಗಳು ಇದ್ದವು. ಪಳೆಯುಳಿಕೆಗಳು ದೊರೆತಿವೆ. ಆದರೆ, ತೀರಾ ಕಡಿಮೆ ಪ್ರಮಾಣದಲ್ಲಿ. ಸಿಕ್ಕಿರುವ ಪಳೆಯುಳಿಕೆಗಳಿಗೆ ಬರಾಪಾಸಾರಸ್, ಜೈನೋಸಾರಸ್, ರಾಜಾಸಾರಸ್, ಇಂಡೋ ಸಾರಸ್, ಬೃಹತ್ಕಾಯೋಸಾರಸ್ ಮುಂತಾಗಿ ಅನೇಕ ಹೆಸರುಗಳನ್ನು ಇಟ್ಟಿದ್ದಾರೆ. ಕಳೆದ ವರ್ಷ ಮಧ್ಯಪ್ರದೇಶದಲ್ಲಿ ಡೈನೋಸಾರ್‌ಗಳ ಸುಮಾರು 260 ಮೊಟ್ಟೆಗಳು ಸಿಕ್ಕಿದ್ದವು. ಅಲ್ಲಿನ ಒಂದು ಹಳ್ಳಿಯ ಜನ ಡೈನೋಸಾರ್ ಮೊಟ್ಟೆಯನ್ನು ಕಲ್ಲಿನ ದೇವರೆಂದು ಬಗೆದು ಪೂಜೆ ಮಾಡುತ್ತಿದ್ದರು.
ಡೈನೋಸಾರ್‌ಗಳ ಮೂಲ ಹೆಸರೊಡಾದರೆ, ನಮ್ಮ ಭೂಮಿಯ ಎಲ್ಲಾ ಖಂಡಗಳು ಮೊದಲಿಗೆ ಒಟ್ಟಿಗೆ ಅಂಟಿಕೊಂಡಿದ್ದವು. ಅರ್ಧಂಬರ್ಧ ಕಚ್ಚಿದ ಮುದ್ದೆಯಂತೆ. ಈ ಒಟ್ಟು ಖಂಡವನ್ನು ‘ಪ್ಯಾಂಗಿಯಿಯಾ’ ಎನ್ನುತ್ತಾರೆ. ಆಗಲೇ ಡೈನೋಸಾರ್‌ಗಳು ಇದ್ದವು. ನಿಮಗೆ ಆಶ್ಚರ್ಯವಾಗಬಹುದು, ಭಾರತದ ಆಗಿನ ನೆರೆಯವರೆಂದರೆ ಆಫ್ರಿಕಾ, ಅಂಟಾರ್ಟಿಕಾ ಮತ್ತು ಆಸ್ಟ್ರೇಲಿಯಾ. ಆಗಲ್ಲಾ ನಾವು ಬದುಕಿದ್ದಿದ್ದರೆ ಸುಮ್ಮನೆ ಹಿಂಗೆ ಟುಪಕ್ ಅಂತ ಜಂಪ್ ಹೊಡೆದು ಆಫ್ರಿಕಾ, ಅಂಟಾರ್ಟಿಕಾ, ಆಸ್ಟ್ರೇಲಿಯಾಕ್ಕೆ ಹೋಗಿ ಬರಬಹುದಿತ್ತು. ಇಂಥ ಒಟ್ಟು ಖಂಡ ಕ್ರಮೇಣ ಟೆಕ್ಟಾನಿಕ್ ಮೂವ್‌ಮೆಂಟ್ಸ್‌ನಿಂದ ಅಂದರೆ ಭೂಮಿಯ ಒಳಪದರಗಳ ಚೇಪರ್ಡಿಕೆಯಿಂದ ತುಂಡು ತುಂಡುಗಳಾಗಿ ದೂರ ಸರಿದವು. ಹಂಗೇ ಆಯಾ ಪ್ರದೇಶದ ಡೈನೋಸಾರ್‌ಗಳು ಬೇರ್ಪಟ್ಟವು. ಮಡಗಾಸ್ಕರ್ ಎಂಬ ದ್ವೀಪ ಈಗ ಆಫ್ರಿಕಾ ಖಂಡದ ಬುಡದಲ್ಲಿದೆ. ನಮ್ಮ ಮತ್ತು ಅಲ್ಲಿನ ಡೈನೋಸಾರ್‌ಗಳ ಪಳೆಯುಳಿಕೆಗಳು ಒಂದೇ ಜಾತಿಯದ್ದಾಗಿವೆ.
ಇವತ್ತಿಗೂ ನಮ್ಮ ಖಂಡಗಳು ವರ್ಷಕ್ಕೆ ಒಂದು ಇಂಚಿನಂತೆ ದೂರ ಸರಿಯುತ್ತಿವೆ. ಇಂದಿನಿಂದ ಮಿಲಿಯನ್ ವರ್ಷಗಳ ನಂತರ ಹೇಳಕ್ಕಾಗಲ್ಲ ಯಾವ ದೇಶ ಯಾವ ಕಡೆ ತಿರುಗಿರುತ್ತೆ ಅಂತ. ಇದೊಂಥರ ರಜೆಯಲ್ಲಿ ಅಜ್ಜನ ಮನೆಯ ಹಜಾರದಲ್ಲಿ ಒಟ್ಟಿಗೆ ಮಲಗಿದ್ದ ಮಕ್ಕಳು ಬೆಳಗ್ಗಾದಾಗ ಎತ್ತೆತ್ತಲೋ ಉರುಳಿಕೊಂಡು ಹೋಗಿದ್ದಂತೆ. ಗೊತ್ತಾ.. ಆಫ್ರಿಕಾ ಖಂಡ ಈಗ ಲೈವ್ ಆಗಿ ದಿನೇದಿನೆ ಇಷ್ಟಿಷ್ಟೇ ಒಡೆದು ಹೋಗುತ್ತಿದೆ. ಯಾರೋ ಜಮೀನು ಬಿರುಕು ಬಿಟ್ಟಂತೆ ಆ ಖಂಡದ ಬಿರುಕು ಹಲವು ದೇಶಗಳನ್ನು ಹಚ್ಚಿಕೊಂಡಿದೆ. ಹೊಸ ಸಮುದ್ರ ಉತ್ಪತ್ತಿಯಾಗುತ್ತಿದೆ. ಇದರ ಬಗ್ಗೆ ಮತ್ತಾವಾಗಾದರೂ ವಿವರವಾಗಿ ತಿಳಿದುಕೊಳ್ಳುವ.
ಸರಿ, ನಮ್ಮಲ್ಲಿ ಆದಿಮಾನವರ ಬುರುಡೆ ಸಿಕ್ಕಿದ್ಯಾ? 1982ರಲ್ಲಿ ಮಧ್ಯಪ್ರದೇಶದ ನರ್ಮದಾ ನದಿ ತೀರದಲ್ಲಿ ಗೋಚರಿಸಿದ ‘ನರ್ಮದಾ ಮ್ಯಾನ್’ ನಮಗೆ ಸಿಕ್ಕಿರುವ ವಿಶೇಷ ಆದಿಮಾನವ. ಹೋಮೋಸೇಪಿಯನ್ಸ್‌ಗಳಿಗಿಂತ ಪೂರ್ವದವನು. 25-30 ವರ್ಷದ ವಯಸ್ಸಿನವ. ಅದ್ಯಾಕೆ ಅದು ಹಂಗೆ ಒಬ್ಬನೇ ಉಳ್ಕೊಂಡನೋ ಗೊತ್ತಿಲ್ಲ ಪಾಪ The lonely man ಎಂದೇ ಫೇಮಸ್ಸಾಗಿದ್ದಾನೆ. ಇಡೀ ದಕ್ಷಿಣ ಏಷ್ಯಾದಲ್ಲೇ ಅತ್ಯಂತ ಹಳೆಯ. ಸುಮಾರು ಎರಡು ಮೂರು ಲಕ್ಷ ವರ್ಷಗಳಷ್ಟು ಹಿಂದೆ ಬದುಕಿದ್ದವ ಅಂತಾರೆ.
ನಮ್ಮ ಪೂರ್ವಜರಾದ ಆದಿಮಾನವರು ಫ್ಯಾಂಗಿಯಿಯಾ ಕಾಲದಲ್ಲಿ ಇರಲಿಲ್ಲ. ಹಂಗಲ್ಲಾ ಹೋದರೆ ಮನುಷ್ಯ ತೀರಾ ಇತ್ತೀಚಿನ ಪ್ರಾಣಿ. ಡೈನೋಸಾರ್‌ಗಳು ಅಳಿದು ಎಷ್ಟೋ ಮಿಲಿಯನ್ ವರ್ಷಗಳ ನಂತರ ಮನುಷ್ಯನ ಆಗಮನವಾಗಿದ್ದು. ಆದರೆ, ಒಂದು ತಮಾಷೆ ಹೇಳಲಾ? ನವಮಾನವರಾದ ನಾವೇ ಡೈನೋಸಾರ್‌ಗಳೊಂದಿಗೆ ಬದುಕುತ್ತಿದ್ದೇವೆ ಅಂದ್ರೆ ನಂಬ್ತೀರಾ? ಏನಿದು ಆಧುನಿಕ ಬಕಾಸುರರನ್ನೇ ಡೈನೋಸಾರ್ ಅಂತಿದ್ದೀನಾ ನಾನು? ಹಾಗೇನಿಲ್ಲ ಇವತ್ತು ತಲೆ ಎತ್ತಿ ಆಕಾಶನೋ ಮರಗಳನ್ನೋ ನೋಡಿ. ಅಲ್ಲಿ ನಿಮಗೆ ಡೈನೋಸಾರ್‌ಗಳೇ ಕಾಣುತ್ತಾರೆ. ಅವರು ಡೈನೋಸಾರ್‌ಗಳಂತೆಯೇ ಹಾರುತ್ತಾರೆ. ಚೀರುತ್ತಾರೆ. ಸೈಜು ಸ್ವಲ್ಪ ಚಿಕ್ಕದಾಗಿ, ಕಂಠ ಸ್ವಲ್ಪ ಕೋಮಲವಾಗಿಬಿಟ್ಟಿದೆ ಅಷ್ಟೇ. ಅಂದೇ ನಾವೇನು ಇವತ್ತು ಪಕ್ಷಿಗಳು ಅಂತೀವಲ್ಲ ಅವು ಮೂಲತಃ ಡೈನೋಸಾರ್‌ಗಳು! ದಯಮಾಡಿ, ಯಾರೂ ದೊಣ್ಣೆ ಹಿಡ್ಕೊಂಡು ನನ್ನನ್ನು ಅಟ್ಟಿಸೋಕೆ ಬರಬೇಡಿ ಆಯ್ತು, ಇದು ನಿಜ! ‘ಥೆರಪೋಡ್’ ಎಂಬ ಜಾತಿಯ ಡೈನೋಸಾರ್ ಗಳ ಮರಿಮಕ್ಕಳೇ ನಮ್ಮ ಇಂದಿನ ಪಕ್ಷಿಗಳು.
ವಾಪಸ್ ವಿಷಯಕ್ಕೆ ಬರುವ. ನಮ್ಮಲ್ಲಿ ಯಾಕೆ ಈ ಡೈನೋಸಾರ್‌ಗಳ, ಆದಿಮಾನವರ ಪಳೆಯುಳಿಕೆಗಳು ಕಡಿಮೆ? ಇತ್ತೀಚೆಗೆ ಯುರೋಪಿನಲ್ಲಿ ಕೇವಲ ಸಾವಿರ ವರ್ಷಗಳ ಹಿಂದಿನ ಸರಳಿನ ತಿರಸ್ಕಾರವಿಲ್ಲದ ಸೈನಿಕನ ಜಬ್ಬುಹೋಗಿದ್ದ ತಲೆ ಸಿಕ್ಕಿದೆ. ಫ್ರಾನ್ಸ್‌ನಲ್ಲಿ ಪ್ರತಿವರ್ಷ 2ನೇ ಮಹಾಯುದ್ಧದಲ್ಲಿ ಮಡಿದ ಸೈನಿಕರ ದೇಹಗಳು ಸಿಕ್ಕುತ್ತವೆ. ನಮ್ಮಲ್ಲಿ ಯಾಕಿಲ್ಲ?
ಅನೇಕ ಭೌಗೋಳಿಕ ಮತ್ತು ಕೆಲವು ಸಾಮಾಜಿಕ ಕಾರಣಗಳುಂಟು. ಮುಖ್ಯವಾಗಿ ನಮ್ಮ ದೇಶದ ಮಣ್ಣು ಆಸಿಡಿಕ್. ಆದ್ದರಿಂದ ಈ ಮಣ್ಣಿನಲ್ಲಿ ಮೂಳೆಗಳು ತುಂಬಾ ವರ್ಷ ಉಳಿಯಲ್ಲ. ಹಾಗೇ ಇಲ್ಲಿನ ಭೂಮಿ ನಿರಂತರವಾಗಿ ಸವೆಯುತ್ತಿರುತ್ತದೆ, ಅದರಿಂದಾಗಿ ಪಳೆಯುಳಿಕೆಗಳು ತೇಲಿ ಪ್ರಾಕೃತಿಕ ಕಾರಣಗಳಿಂದ ನಾಶಗೊಳ್ಳುತ್ತವೆ. ನಾವು ಭೂಮಧ್ಯರೇಖೆಗೆ ಹತ್ತಿರವಿದ್ದೇವೇ. ಆದ್ದರಿಂದ ಇಲ್ಲಿನ ಹವಾಮಾನ ಬಿಸಿಯಾಗಿದೆ, ತೇವಾಂಶ ಜಾಸ್ತಿಯಿದೆ. ಉತ್ತರಾರ್ಧದಲ್ಲಿರುವ ಭೂಭಾಗಗಳಲ್ಲಿ ಸಿಕ್ಕಾಪಟ್ಟೆ ಚಳಿಯಿದ್ದು ಅಲ್ಲಿನ ನೆಲ ಹಲವೆಡೆ ಲಕ್ಷಾಂತರ ವರ್ಷಗಳಿಂದ ಅನೇಕ ಕಡೆ ಸಾವಿರಾರು ವರ್ಷಗಳಿಂದ ಮಂಜಿನಿಂದ ಮುಚ್ಚಿಕೊಂಡಿದೆ. ಅದರಿಂದ ಅಲ್ಲಿ ಸಿಕ್ಕಾಕೊಂಡಿದ್ದೆಲ್ಲಾ ಫ್ರಿಡ್ಜನಲ್ಲಿಟ್ಟಂಗೆ ಹಂಗೇ ಉಳಿದುಬಿಟ್ಟಿರುತ್ತೆ.
ಕೊನೆಯದಾಗಿ- ನಮ್ಮಲ್ಲಿ ಜನರೂ ಹಾಗೆ. ನಮಗೆ ಎಂದಿಗೂ ಪ್ಯಾಲಿಯಂಟಾಲಜಿ ಅಂದ್ರೆ ಪಳೆಯುಳಿಕೆ ಅರಿಯುವಿಕೆ, ಆರ್ಕಿಯಾಲಜಿ ಅಂದ್ರೆ ಮುಬ್ಬು ಆಸಕ್ತಿಯೇ ಇಲ್ಲ. ತಕ್ಷಣದ ಶಿಕ್ಷಣ, ಕೌಶಲ್ಯ, ಪರಿಣತರನ್ನು ಸಿದ್ಧಪಡಿಸಿಯೇ ಇಲ್ಲ. ಈಗೀಗ ಅದು ಮುನ್ನೆಲೆಗೆ ಬರುತ್ತಿದೆ. ತೀರಾ ಇತ್ತೀಚಿನವರೆಗೆ ಈ ಭೂಪ್ರದೇಶವನ್ನು ಆ ದೃಷ್ಟಿಯಲ್ಲಿ ಮ್ಯಾಪಿಂಗ್ ಮಾಡಿದ್ದಿಲ್ಲ. ಆದ್ದರಿಂದ ಎಲ್ಲೆಲ್ಲಿ ಪಳೆಯುಳಿಕೆ ಇದ್ದಿರಬಹುದೋ ಅಲ್ಲೆಲ್ಲಾ ಊರು ನಗರಗಳು ಎದ್ದಿವೆ. ಹಾಗೆ ನಮ್ಮದು ಕೃಷಿ ಪ್ರಧಾನ ದೇಶವಾದ್ದರಿಂದ ನಿರಂತರವಾಗಿ ಉಳುಮೆಗೊಳಪಟ್ಟು ಪಳೆಯುಳಿಕೆಗಳು ನಾಶವಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮಲ್ಲಿ ಇದರ ಬಗ್ಗೆ ಅಜ್ಞಾನ, ಅನಾಸಕ್ತಿ. ಕೇವಲ ಐನೂರು ವರ್ಷಗಳ ಹಿಂದಿದ್ದ ಕೃಷ್ಣದೇವರಾಯನ ಹಂಪಿಯೇ ಜಾಲಿ ಬೆಳ್ಳಗಿಡಗಳಿಗೆ ಕಳೆದುಹೋಗಿದ್ದು ಅದನ್ನು ಹೊರಗೆಡವಲು ಬ್ರಿಟಿಷರು ಬರಬೇಕಾಯ್ತಲ್ಲಾ! ಇನ್ನು ಅಂಥಾ ಹಳೆಯದೇನಾದ್ರೂ ಕಂಡರೆ ಯಾರೂ ಇಲ್ಲದ ಹೊತ್ತಲ್ಲಿ ಹೋಗಿ ದೊಗೆಯುವವರೇ ಹೆಚ್ಚು!
