ತೇಜಸ್ವಿ ಬದುಕು-ಬರವಣಿಗೆ-ಚಿಂತನೆ: ನಿಸರ್ಗವೇ ಪ್ರೇರಣೆ

article r2

ತೇಜಸ್ವಿ ಸಮಕಾಲೀನರಲ್ಲಿ ತೇಜಸ್ವಿಯಷ್ಟೇ ಚೆನ್ನಾಗಿ ಬರೆದವರು, ತೇಜಸ್ವಿಯಷ್ಟೇ ಪ್ರಾಮಾಣಿಕ, ಪರಿಶುದ್ಧ, ಅರ್ಥಪೂರ್ಣವಾಗಿದ್ದವರು, ಸರಳ ನೇರವಾಗಿದ್ದವರು ಇದ್ದಿರಬಹುದು. ಇರುತ್ತಾರೆ. ತೇಜಸ್ವಿಗಿದ್ದ ಒಂದೇ ಒಂದು ಯೋಗ ಎಂದರೆ ಇವರು ಕುವೆಂಪು ಮಗ ಎಂಬ ಅಟೆನ್ಶನ್ ಮತ್ತು ಪ್ರೀತಿ. ಅದು ಅವರಿಗೆ ನಿಸ್ಸಂಶಯವಾಗಿ ಸಹಾಯ ಮಾಡಿದೆ. ತೇಜಸ್ವಿ ಅದಕ್ಕೆ ಮಿಗಿಲಾದ ಕಾರ್ಯಗಳನ್ನು ಮಾಡಿರುವುದರಿಂದ ಈ ಪ್ರೀತಿ ಇಮ್ಮಡಿಗೊಂಡಿದೆ.

ಕಳೆದ ಎರಡು ವರುಷಗಳಿಂದ ಈಚೆಗೆ ‘ತೇಜಸ್ವಿಯನ್ನು ವಿಮರ್ಶೆ ಮಾಡಬೇಕು’ ಎಂಬಂತಹ ಕೆಲವು ಧ್ವನಿಗಳು ಕನ್ನಡದ ಸಾಹಿತ್ಯ-ಸಾಂಸ್ಕೃತಿಕ-ಚಳವಳಿ ಲೋಕದ ಒಳಗಿಂದ ಕೇಳಿಸಿವೆ. ತೇಜಸ್ವಿ ತೀರಿಕೊಂಡು ಹದಿನೇಳು ವರುಷಗಳು ಉರುಳಿವೆ. ಇಷ್ಟೂ ವರುಷಗಳಿಂದ ಇಲ್ಲದ ಆಸೆ, ವಿಶೇಷ ಆಸಕ್ತಿ ಈಗ ಯಾಕೆ ಎಂಬ ಪ್ರಶ್ನೆ ಹಾಕಿಕೊಂಡಾಗ ನಮಗೆ ಉತ್ತರ ಹುಡುಕುವುದಕ್ಕೆ, ವಿಮರ್ಶೆ ಮಾಡುವುದಕ್ಕೆ ಸರಿಯಾದ ದಿಕ್ಕು ಸಿಗುತ್ತದೆ.

ಬಹಳ ಸರಳ ಕಾರಣವೇನಂದರೆ ಎಂಬತ್ತರ ದಶಕದ ನಂತರ ಹುಟ್ಟಿದವರು, ಅಂದರೆ ಈಗಿನ ಇಪ್ಪತ್ತರಿಂದ ನಲವತ್ತರ ನಡುವಿನ ಪ್ರಾಯದ ಓದುಗರು ಮತ್ತು ಜನ ಸಾಮಾನ್ಯರು ತೇಜಸ್ವಿಯನ್ನು ಬಹುವಾಗಿ ಅಪ್ಪಿಕೊಂಡಿದ್ದಾರೆ. ಇದರಲ್ಲಿ ಗಂಡಸರು, ಹೆಂಗಸರು, ವಿಭಿನ್ನ ಜಾತಿಯವರು, ಹಿಂದೂ, ಮುಸ್ಲಿಂ, ಕ್ರೈಸ್ತರು, ಶ್ರೀಮಂತರು, ಬಡವರು, ಅಮೆರಿಕಾ-ಯೂರೋಪಿನಲ್ಲಿ ನೆಲೆಸಿರುವವರು, ಎಲೆಕ್ಟ್ರಾನಿಕ್ ಸಿಟಿ-ವೈಟ್‌ಫೀಲ್ಡಿನಲ್ಲಿರುವವರು, ಕಲಾಸಿಪಾಳ್ಯ-ಪೀಣ್ಯ-ದಾಸರಹಳ್ಳಿಯಲ್ಲಿ ಇರುವವರು, ಕರಾವಳಿಯವರು, ಮಲೆನಾಡಿಗರು, ಬೆಳಗಾವಿಯವರು, ಕೊಡಗು, ರಾಯಚೂರಿನವರು, ಗ್ರಾಮ, ಕುಗ್ರಾಮ, ಗುಡಿಸಲು, ಮೂಲೆಮನೆ, ಹಟ್ಟಿ ಕೇರಿಯವರು, ಅಷ್ಟೇ ಯಾಕೆ ಎಡ-ಬಲ-ನಡು-ನೇರ ಎಲ್ಲಾ ಪಂಥದವರು ಇದ್ದಾರೆ.

ಇದು ಹೇಗೆಯಾಯಿತು?

ಆಧುನಿಕ ಸಮಾಜ ಸಾಹಿತ್ಯವನ್ನು ಕಡೆಗಣಿಸಿ ಮುಂದೆ ಚಲಿಸುತ್ತಿರುವಾಗ, ದಾರ್ಶನಿಕರನ್ನು ಮರೆತು ದೃಶ್ಯ ಮಾಧ್ಯಮದ ಸೆಲೆಬ್ರಿಟಿಗಳ ಹಿಂದೆ ಬಿದ್ದಿರುವಾಗ ಅದು ಹೇಗೆ ತೇಜಸ್ವಿ ಮಾತ್ರ ಪ್ರಸ್ತುತವಾಗಿ ಉಳಿದಿದ್ದಾರೆ? ಈ ಧ್ವನಿಗಳಲ್ಲಿನ ಆಸಕ್ತಿ ಇದು. ಈ ಆಸಕ್ತಿ ಹೊಂದಿರುವವರಲ್ಲಿ ಎರಡು ವಿಧಗಳಿವೆ:

ಒಂದು, ಅಫ್ಕೋರ್ಸ್ ಇದೆಲ್ಲ ಹೇಗೆ ಎಂದು ಅಚ್ಚರಿ, ಕುತೂಹಲ, ವಿಸ್ಮಯ ಹೊಂದಿರುವವರು. ನಿಷ್ಕಲ್ಮಶವಾಗಿ ಬೆರಗಾಗಿರುವವರು. ತೇಜಸ್ವಿಯನ್ನು ಅರಿಯುವ ಮೂಲಕ, ಅವರ ಸಾಹಿತ್ಯವನ್ನು ಮರು ಓದುವ ಮೂಲಕ ಬಹುಶಃ ನಮ್ಮ ಇಂದಿನ ಸಮಸ್ಯೆಗಳಿಗೆ ಪರಿಹಾರವೇನಾದರೂ ಸಿಗಬಹುದಾ ಎಂದು ಆಸೆ ಹೊಂದಿರುವವರು. ಇವರ ಕಾಳಜಿ ಅರ್ಥವಾಗುತ್ತದೆ.

ಇನ್ನೊಂದು ವಿಧ ಇದೆ. ಇವರ ‘ವಿಮರ್ಶೆ ಮಾಡಬೇಕು’ ಎಂಬ ಧ್ವನಿಯಲ್ಲಿಯೇ ಹೆಂಗಾದರೂ ಮಾಡಿ ತಪ್ಪುಗಳನ್ನು ಹುಡುಕಬೇಕು, ನೋಡಿ ಈ ವ್ಯಕ್ತಿ ಸಹ ಪರಿಪೂರ್ಣನಲ್ಲ ಎಂದು ಸಾರಬೇಕು, ಓದುಗರ ಎದೆಯಲ್ಲಿ ಕಟ್ಟಿಕೊಂಡಿರುವ ಪ್ರತಿಮೆಯನ್ನು ಕೆಡವಬೇಕು ಎಂಬ ಒಳಧ್ವನಿ ಕೇಳಿಸುತ್ತದೆ. ಇದು ನಿಸ್ಸಂಶಯವಾಗಿ ಅಸೂಯೆ ಮತ್ತು ಅಸಮಾಧಾನಗಳಿಂದ ಹುಟ್ಟಿರುವ ದುರುದ್ದೇಶಿತ ಆಸಕ್ತಿ. ಈ ಎರಡು ವರುಷಗಳಲ್ಲಿ ಅಲ್ಲಲ್ಲಿ ‘ಹಜೇನಿಗೆ ಕಲ್ಲೆಸೆದರೆ ಏನಾಗುತ್ತದೆ ನೋಡುವ’ ಎಂಬಂತಹ ಸಣ್ಣಸಣ್ಣ ವ್ಯವಸ್ಥಿತ ಪರೀಕ್ಷಾರ್ಥ ಉಡಾವಣೆಯಗಳು ನಡೆಯುತ್ತಿರುವುದನ್ನು ನಾವು ಗಮನಿಸಬಹುದಾಗಿದೆ. ಸಣ್ಣ ಸಣ್ಣದಾಗಿ ಗೋಣಿಗುತ್ತ ಸಂಶಯ ಬಿತ್ತುವ ಯತ್ನಗಳನ್ನು ಕಾಣಬಹುದಾಗಿದೆ.

ಆದ್ದರಿಂದ ಇಂತಹ ಸಂದರ್ಭದಲ್ಲಿ ತೇಜಸ್ವಿಯನ್ನು ಯಾವ ದಿಕ್ಕಿನಿಂದ ವಿಮರ್ಶೆ ಮಾಡಬೇಕು ಎಂದು ಚರ್ಚಿಸಲು ಸಮಾಜಮುಖಿ ಪತ್ರಿಕೆ ವೇದಿಕೆ ಒದಗಿಸಿಕೊಟ್ಟಿರುವುದು ಅತ್ಯಂತ ಸಮಂಜಸ ಕೆಲಸವಾಗಿದೆ. ಯಾವುದೇ ಸಾರ್ವಜನಿಕ ವ್ಯಕ್ತಿ, ಆತನ ಸಾಹಿತ್ಯ ವಿಚಾರ, ಕೊಡುಗೆಗಳು ಸಾಮಾಜಿಕ ಚೌಕಟ್ಟಿನಲ್ಲಿ ಚರ್ಚೆಗೆ ಅರ್ಹ. ಆದರೆ ಇದು ಅಧ್ಯಯನದ ಆಸಕ್ತಿಯೋ, ಪ್ರತಿಮೆ ಕೆಡಹುವ ಉತ್ಸಾಹವೋ ಎಂಬುದನ್ನು ಆರಂಭದಲ್ಲಿಯೇ ಬಿಡಿಸಿಕೊಳ್ಳುವುದು ಅತ್ಯಗತ್ಯ. ಸಮಾಜ ಘಾತುಕ ಶಕ್ತಿಗಳು ಎಲ್ಲಾ ಕಾಲದಲ್ಲಿಯೂ ಇರುತ್ತವೆ. ಸಭ್ಯರನಿಸಿಕೊಂಡವರಲ್ಲಿಯೂ ಘಾತುಕ ಆಲೋಚನೆಗಳು ಮರಿ ಹಾಕುತ್ತಿರುತ್ತವೆ. ತೇಜಸ್ವಿ ಮೌಲ್ಯಗಳು ಇಂತಹವರ ಬಗ್ಗೆ ಎಚ್ಚರಿಕೆ ಇರಬೇಕು ಎನ್ನುತ್ತವೇ ವಿನಾ ಅದರಡೆಗೆ ಸಮಯ ಶಕ್ತಿ ಹರಿಸುವುದನ್ನು ವಿರೋಧಿಸುತ್ತವೆ. ‘ಕಾಲ ಮಿಕ್ಕಾ ಇದೆ, ಮುಖ್ಯ ವಿಷಯ ಬಿಟ್ಟು ಅಡ್ಡ ದಾರಿ ತುಳಿಯಬೇಡಿ’ ಎಂದು ಎಚ್ಚರಿಸಿದವರು ತೇಜಸ್ವಿ.

ಇನ್ನೊಂದು ವಿಷಯ. ನಮ್ಮಲ್ಲಿ ವಿಮರ್ಶೆ ಎಂದಾಕ್ಷಣ ಅದೊಂದು ತಕ್ಕಡಿ ಎಂದು ಭಾವಿಸಿರುವುದು ದುರಂತ. ಅದು ಹೇಗೆ ಎಲ್ಲಿಂದ ಇದರ ಬೇರು ಹೊಡೆಯಿತೋ ಕಾಣೆ; ಸೋಷಿಯಲ್ ಮೀಡಿಯಾಗಳಿಂದ ಹಿಡಿದು ಪತ್ರಿಕೆಗಳವರೆಗೆ, ಹಿರಿಯರಿಂದ ಹಿಡಿದು ಕಿರಿಯರವರೆಗೆ ಯಾವುದಾದರೂ ಕೃತಿಯ ಬಗ್ಗೆ ಮಾತನಾಡಬೇಕು ಎಂದಾಕ್ಷಣ ಅದು ಶುರುವಾಗುವುದೇ ಇತರೆ ಕೃತಿಗಳೊಂದಿಗಿನ ಹೋಲಿಕೆಯೊಂದಿಗೆ. ಒಬ್ಬ ಬರಹಗಾರನ ಬಗ್ಗೆ ಹೊಗಳುವಾಗಲೂ ಇನ್ನಾರನ್ನೋ ತೆಗಳಿ ಈತ/ಈಕೆಯನ್ನು ಅಟ್ಟಕ್ಕೇರಿಸುವುದೇ ಆಗಿರುತ್ತದೆ. ಮಕ್ಕಳ ಟುಕು ಟುಕು ಬಂಡಿಯಂತೆ. ಈ ವಿಮರ್ಶ ತಂತ್ರ ಬಹಳ ಕ್ಷೀಣವಾದದ್ದು, ಅಲ್ಪವಾದದ್ದು.

ತೇಜಸ್ವಿಯ ಸಮಕಾಲೀನರಲ್ಲಿ ಅನೇಕರು ಅತ್ಯುತ್ತಮ ಲೇಖಕರೇ ಆಗಿದ್ದಾರೆ. ಸಾಮಾಜಿಕ ಕಳಕಳಿ ಉಳ್ಳವರಾಗಿದ್ದಾರೆ. ಜನರ ಪ್ರೀತಿಯನ್ನು ಗಳಿಸಿದ್ದಾರೆ. ಅವರೊಂದಿಗೆ ಹೋಲಿಕೆ ಸಲ್ಲದು. ತೇಜಸ್ವಿಯನ್ನು, ಅವರ ಸಾಹಿತ್ಯವನ್ನು ಸ್ವತಂತ್ರವಾಗಿ ನೋಡಬೇಕು. ಹೀಗೆ ಸ್ವತಂತ್ರವಾಗಿ ಅಳೆಯಲು ಅಗಾಧ ಶ್ರಮ ಮತ್ತು ಸೃಜನಶೀಲತೆ ಬೇಕಾಗುತ್ತದೆ. ತೇಜಸ್ವಿಯ ಬರಹಗಳನ್ನು ಅಳೆಯುವ ಅನೇಕ ಪ್ರಯತ್ನಗಳು ಒಂದೋ ಶ್ರೇಷ್ಠತೆಯೆಂದು ಅಥವಾ ನ್ಯೂನತೆಗಳನ್ನು ಹುಡುಕುವುದಾಗಿದೆ. ಇಲ್ಲಿ ಶ್ರೇಷ್ಠತೆಯೆಂದು ಇಟ್ಟುಕೊಂಡಿರುವ ಮಾನದಂಡಗಳು ಅಥವಾ ನ್ಯೂನತೆಗಳನ್ನು ಹುಡುಕಲು ಇಟ್ಟುಕೊಂಡಿರುವ ದುರ್ಬಿನುಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಟೆಲಿಸ್ಕೋಪಿನ ಜಾಗದಲ್ಲಿ ಮೈಕ್ರೋಸ್ಕೋಪನ್ನು ಉಪಯೋಗಿಸಿದರೆ ಹೇಗೆ? ಅಥವಾ ವೈಸ್ ವರ್ಸ.

ತೇಜಸ್ವಿ ಬದುಕಿದ್ದಾಗಲೇ ಕೆಲವರು ಅವರ ಕಾದಂಬರಿಗಳಲ್ಲಿ ನಿಗೂಢ ಅರ್ಥಗಳನ್ನು ಹುಡುಕುತ್ತಿದ್ದರಂತೆ. ಸಂಕೀರ್ಣ ಭಾವಾರ್ಥಗಳನ್ನು ಕಲ್ಪಿಸಿಕೊಂಡು ಗಹನವಾದದ್ದನ್ನು ಆರೋಪಿಸುತ್ತಿದ್ದರಂತೆ. ತೇಜಸ್ವಿ ಅಂತಹವರಿಗೆ ‘ನೋಡೋ, ಅದರಲ್ಲಿ ಏನು ಬರೆದಿದೆಯೋ ಅಷ್ಟೇ ಅರ್ಥ, ಗೊತ್ತಾಯ್ತಾ’ ಎನ್ನುತ್ತಿದ್ದರಂತೆ. ಸೈದ್ಧಾಂತಿಕ, ಪಾಶ್ಚಿಮಾತ್ಯ ತಾತ್ವಿಕ, ದೇಶೀ ಸಾಂಪ್ರದಾಯಿಕ/ಪೌರಾಣಿಕ- ಈ ಬಗೆಯ ಅಕಾಡೆಮಿಕ್ ಮಾನದಂಡಗಳು ಮತ್ತು ದುರ್ಬಿನುಗಳು ತೇಜಸ್ವಿಯ ಸಾಹಿತ್ಯಕ್ಕೆ ಅನ್ವಯಿಸಲಾಗದು, ಅನ್ವಯಿಸಬಾರದು.

ತೇಜಸ್ವಿಯ ಸಾಹಿತ್ಯವನ್ನು ಓದಲು, ಆಸ್ವಾದಿಸಲು ಇರಬೇಕಾದ ಮೊದಲ ಮಾನದಂಡ ಮುಗ್ಧ ಮನಸು. ಅಂತಹ ಓದುಗನ ತುಂಬ ಕುತೂಹಲ, ಕೌತುಕಗಳು ತುಂಬಿರಬೇಕು. ಮೊದಲು ಲಿಟರರಿ ಸಾಹಿತ್ಯವನ್ನು ಓದಿ ಓದಿ ಪಳಗಿರಬಾರದು. ಪಳಗಿದ್ದರೂ ಅನಕ್ಷರಸ್ಥ ಆಗಿ ಉಳಿಧಿರಬೇಕು. ಇಷ್ಟೆಲ್ಲ ಯಾಕಂದರೆ ಅವರ ಸಾಹಿತ್ಯವೂ ಸಹ ಅದೇ ಮನಸ್ಸಿನಿಂದ ಸೃಷ್ಟಿಯಾಗಿದೆ. ಮುಗ್ಧತೆ ಮುಗ್ಧತೆಯನ್ನೇ, ನಿಷ್ಕಲ್ಮಶತೆ ನಿಷ್ಕಲ್ಮಶತೆಯನ್ನೇ ಬೆಂಬತ್ತದೆ. ತೇಜಸ್ವಿ ಸೃಷ್ಟಿಸುವ ಪಾತ್ರಗಳು ತನ್ನದೇ ಸುತ್ತಮುತ್ತಲಿನ, ತನ್ನೊಂದಿಗೆ ಒಡನಾಡಿದ ರಕ್ತ ಮಾಂಸ ತುಂಬಿದ ತೊಗಲು ಹೊದ್ದ ಜೀವಿಗಳು. ಅವರು ಬರೆದ ಕಥೆಗಳು ಅವರ ಸುತ್ತಲೇ ಜರುಗುವ, ಅವರೇ ಭಾಗಿಯಾಗಿರುವ ಘಟನೆಗಳು. ಅವರ ಪಾತ್ರಗಳು ಯಾರೂ ಮೇಧಾವಿಯಲ್ಲ, ಫಿಲಾಸಫರ್ ಅಲ್ಲ. ಹುಟ್ಟು, ಸಾವು, ಬದುಕಿನ ಅರ್ಥ ಹುಡುಕಿ ಹೊರಟವರಲ್ಲ. ತೇಜಸ್ವಿ ತಮ್ಮ ಕಥನಕ್ಕೆ ಕಲಾತ್ಮಕ ಮೌಲ್ಯ ತುಂಬಲೆಂದು ಪಾತ್ರಗಳಿಗೆ ಇಲ್ಲದ ಮೌಲ್ಯಗಳನ್ನು ಆರೋಪಿಸುವುದಿಲ್ಲ, ತಿರುಚುವುದಿಲ್ಲ. ಕತೆಯನ್ನು ಸಾರ್ವತ್ರಿಕಗೊಳಿಸುವ ಹಠಕ್ಕೆ ಬಿದ್ದು ಸಂಕೀರ್ಣಗೊಳಿಸುವ, ಅಮೂರ್ತಗೊಳಿಸುವ ಸರ್ಕಸ್ ಮಾಡುವುದಿಲ್ಲ.

ತೇಜಸ್ವಿಯ ಈ ಪ್ರಯೋಗದಿಂದ ಅವರಿಗೆ ತಮ್ಮ ಪಾತ್ರಗಳನ್ನು ಒಂದು ಕ್ಯಾರಿಕೇಚರ್ ದೃಷ್ಟಿಯಿಂದ ನೋಡಲು ಸಾಧ್ಯವಾಗಿದೆ. ಇಂತಹ ದೃಷ್ಟಿಯಲ್ಲಿ ಪಾತ್ರಗಳೆಡೆ ಅಗಾಧ ಪ್ರೀತಿ ಮತ್ತು ಸ್ನೇಹ ತುಂಬಿರುತ್ತದೆ. ಹಾಗಿದ್ದಾಗ ನಿರೂಪಕ ಪಾತ್ರಗಳೊಂದಿಗೆ ಅತ್ಯಂತ ಸಲಿಗೆಯಿಂದಿರಲು ಸಾಧ್ಯವಾಗುತ್ತದೆ.

ಇನ್ನೂ ವಿಶೇಷ ಏನೆಂದರೆ ಅವರ ನಿರೂಪಕ ಸಹ ಅತ್ಯಂತ ಸಾಮಾನ್ಯ ವ್ಯಕ್ತಿ. ಆದರ ಸಾಹಸಿ ವ್ಯಕ್ತಿಯಷ್ಟೇ. ಸಾಮಾನ್ಯವಾಗಿ ನಿರೂಪಕನಿಗೆ ಎಲ್ಲವೂ ಗೊತ್ತಿರುತ್ತದೆ ಮತ್ತು ಇಡೀ ಪುಸ್ತಕದಲ್ಲಿ ಅವನೇ ಅತ್ಯಂತ ಹೆಚ್ಚು ತಿಳಿದವನಾಗಿರುತ್ತಾನೆ. ಲೇಖಕ ತನ್ನ ಅರಿವಿನ ಆಳವನ್ನು ನಿರೂಪಕನ ಮೂಲಕ ಪ್ರದರ್ಶಿಸುತ್ತಾನೆ. ತೇಜಸ್ವಿಯ ನಿರೂಪಕನೊಳಗೆ ಅಂತಹ ಪಂಡಿತ, ಸಂತ, ದೈವತ್ವ ಬೌದ್ಧಿಕತೆಯ ಪ್ರದರ್ಶನ ಕಾಣಿಸೋಲ್ಲ. ಬದಲಾಗಿ ಯಾವುದೇ ಮನುಷ್ಯನಲ್ಲಿ ಇರಬಹುದಾದ ಜೈವಿಕವಾಗಿ ನಿಸರ್ಗ ಮತ್ತು ಸಾಮಾಜಿಕವಾಗಿ ಸುತ್ತಲಿನ ಪರಿಸರ ಪ್ರಭಾವಿಸಿರುವ ಮಾನವೀಯತೆ ಮತ್ತು ಮೌಲ್ಯಗಳು ಈ ನಿರೂಪಕನಲ್ಲಿವೆ. ಯಾವುದೇ ಹಂದರಕ್ಕೆ ವಿರುದ್ಧವಾಗಿ ವರ್ತಿಸಲು ಸಾಧ್ಯವೇ ಇಲ್ಲ.

ಒಬ್ಬ ವ್ಯಕ್ತಿ ಹೇಗೆ ಬಲವಂತವಾಗಿ ತಾನಿರುವುದಕ್ಕಿಂತ ದುಷ್ಟಂತೆ ವರ್ತಿಸಲು ಆಗದೋ ಹಾಗೆ ಬಲವಂತದಿಂದ ತಾನಲ್ಲದ ಸಜ್ಜನಿಕೆಯನ್ನೂ ತೋರಿಸಲಾಗಲ್ಲ. ಅಕಸ್ಮಾತ್ ನೀವು ನಿವಲ್ಲದ ದುಷ್ಟನಾಗಿ ಯಾರ ಮೇಲೋ ಕೈಯೆತ್ತಿದಾಗ ನಿಮ್ಮ ಮೇಲೆ ಕೋಪ ಬರುವ ಬದಲು ಅನುಕಂಪ ಮೂಡುತ್ತದೆ. ನೀವಲ್ಲದ ಸಿಹಿ ಮಾತು, ಸಿಹಿ ನಡೆ ಪ್ರದರ್ಶಿಸಿದಾಗ ಕಪಟ ಅನಿಸುತ್ತದೆ ಮತ್ತು ಇದು ಎಲ್ಲಾ ಸಂದರ್ಭದಲ್ಲಿಯೂ ಎದುರಿರುವ ಜನಕ್ಕೆ ಗೊತ್ತಾಗುತ್ತದೆ, ತಪ್ಪಿಸಿಕೊಳ್ಳುವ ಚಾನ್ಸೇ ಇಲ್ಲ. ಯಾರೂ ಬಾಯಿ ತೆರೆದು ಹೇಳಲ್ಲವಷ್ಟೇ. ಜನರಿಗೆ ಗೊತ್ತಾಗಲ್ಲವೆಂದು ಮನುಷ್ಯ ಪದೇ ಪದೇ ಇಂತಹ ಟ್ರ್ಯಾಪ್ ಒಳಗೆ ಬೀಳುವುದು ಅತ್ಯಾಶ್ಚರ್ಯಕರವಾಗಿದೆ. ಇಂತಹ ನೈಸರ್ಗಿಕ ಮೌಲ್ಯಗಳ ಪ್ರಮಾಣ ವ್ಯಕ್ತಿಯಿಂದ ವ್ಯಕ್ತಿಗೆ ಹೆಚ್ಚು ಕಡಿಮೆಯಿರುತ್ತದೆ. ಪ್ರಕಟಣೆಯಲ್ಲಿ ವ್ಯತ್ಯಾಸವಿರುತ್ತದೆ. ಕೆಲವರು ನಯವಾಗಿ, ಕೆಲವರು ಒರಟಾಗಿ. ಈ ವ್ಯತ್ಯಾಸಗಳಿಂದಲೇ ನಾವು ಜನರನ್ನು ಒಳ್ಳೆಯವರು ಕೆಟ್ಟವರು ಪೆದ್ದರು ಬುದ್ಧಿವಂತರು ಎಂದು ಗುರುತಿಸಬಹುದಾಗಿದೆ. ತೇಜಸ್ವಿ ತಮ್ಮ ಪಾತ್ರ ಮತ್ತು ನಿರೂಪಕನ ಮೂಲಕ ಅದನ್ನೇ ಮಾಡುತ್ತಾರೆ. ಹೀಗಾಗಿಯೇ ಅವರ ಸಾಹಿತ್ಯ ಇತರರಿಗಿಂತ ಭಿನ್ನ, ವಿಶೇಷ.

ಇದರ ಇನ್ನೊಂದು ಅಡ್ವಾಂಟೇಜ್ ಏನಪ್ಪ ಎಂದರೆ ಇಂತಹ ಸಾಹಿತ್ಯವನ್ನು ಪ್ರವೇಶಿಸಲು ಓದುಗನಿಗೆ ಬೌದ್ಧಿಕ ತಯಾರಿಯ ಅಗತ್ಯವೇ ಇರುವುದಿಲ್ಲ! ಹಾಗೆಂದಾಕ್ಷಣ ಅವರ ಸಾಹಿತ್ಯವೇ ಸರಳವಾದದ್ದು ಎಂದಲ್ಲ. ಮೇಲೆ ಹೇಳಿದಂತೆ ಪಾತ್ರ ಮತ್ತು ನಿರೂಪಕ ಪ್ರಾಮಾಣಿಕನಾಗಿದ್ದಾಗ ಅವನನ್ನು ಸುಲಿದು ನೋಡುವ ಹೊರೆ ಓದುಗನಿಗೆ ತಪ್ಪುತ್ತದೆ. ಸಾಹಿತ್ಯೇತರರಿಗೆ ಇಷ್ಟವಾಗುವ, ಸರಕ್ಕಂತೆ ಸೆಳೆಯುವ ಕ್ರೈಂ, ಸೆಕ್ಸ್, ಹಾರರ್ ಮುಂತಾಗಿ ಅನೇಕ ವಿಷಯಗಳಿದ್ದರೂ ಯಾವುದರ ಸೋಂಕಿಲ್ಲದೆ ಪರಿಶುದ್ಧವಾಗಿ ಎಲ್ಲಾ ದಿಕ್ಕಿನ ಓದುಗರನ್ನು ಸೆಳೆದಿರುವುದಕ್ಕೆ, ತೇಜಸ್ವಿ ರೀಚೆಬಿಲಿಟಿಗೆ ಇದೇ ಕಾರಣ.

‘ತೇಜಸ್ವಿ ಸಾಹಿತ್ಯದಲ್ಲಿ ಮಹಿಳೆಯರಿಗೆ ಸ್ಥಾನಮಾನವಿಲ್ಲ’ ಎಂದು ಆರೋಪಿಸುವುದನ್ನು ಕೇಳಿದ್ದೇನೆ. ಮಹಿಳೆಗೆ ಸ್ಥಾನಮಾನ ಕೊಡುವುದಂದರೆ ಕಂಡ ಕಂಡವರನ್ನೆಲ್ಲಾ ‘ತಾಯಿಯೇ, ತಂಗಿಯೇ’ ಎಂದು ಕರೆಯುವುದಲ್ಲ ಅಥವಾ ಮಹಿಳೆಯರೆಂದರೆ ಸೆಕ್ಸಿಲ್ಲದೇ ಸದಾ ಅತೃಪ್ತರಾಗಿ ನರಳುವ ಜೀವಿಗಳೆಂದು ಲಾಲನೆಯ ಕಾಳಜಿ ತೋರುವುದಲ್ಲ; ಗ್ಯಾಬ್ರಿಯೆಲ್ಲಾ ಎನ್ನುತ್ತಲೇ ಅವರೊಳಗಿನ ಗಡಸುತನವನ್ನು ಪರಿಚಯಿಸುವುದು, ಚೈತನ್ಯವನ್ನು ಹಿಗ್ಗಿಸುವುದು. ನಿಮಗೆ ಗೊತ್ತಿರಲಿ, ಇಪ್ಪತ್ತರ ಹರೆಯದ ಹುಡುಗಿಯರು ಇನ್‌ಸ್ಟಾಗ್ರಾಮಿನಲ್ಲಿ ತೇಜಸ್ವಿಯನ್ನು ‘swag’ ಎಂದು ಬರೆದುಕೊಳ್ಳುತ್ತಾರೆ. ಹುಡುಗಿಯರ ಸೆನ್ಸಿಬಿಲಿಟಿಗೆ ದಕ್ಕುವ ತೇಜಸ್ವಿ ಕುರುಡುಗಣ್ಣಿನ ಭಂಜಕರಿಗೆ ದಕ್ಕದ್ದು ದುರಂತ.

ಭೈರಪ್ಪನನ್ನು ಓದುವವರೆಲ್ಲಾ ತೇಜಸ್ವಿಯನ್ನು ಓದುತ್ತಾರೆ ಎಂದೂ ತೇಜಸ್ವಿಯನ್ನು ಓದಿದವರೆಲ್ಲಾ ಬಲಪಂಥೀಯರು ಇದ್ದಾರೆ ಎಂದೂ ಇನ್ನೊಂದು ಆರೋಪ ಕೇಳಿದೆ. ಇದು ಹೊಗಳಿಕೆಯೋ ತೆಗಳಿಕೆಯೋ ಓದುಗರೇ ನಿರ್ಧರಿಸಬೇಕು. ಇತ್ತೀಚಿನ ಒಂದು ಉಪನ್ಯಾಸದಲ್ಲಿ ಹಿರಿಯ ಕವಯಿತ್ರಿ ಲಲಿತಾ ಸಿದ್ಧಬಸವಯ್ಯ ಇನ್ನೊಬ್ಬರ ಒಂದು ಮಾತನ್ನು ಕೋಟ್ ಮಾಡಿದ್ದರು: “We are educating the educated, what’s the use ಅಂತ”. ಅಂದರೆ ವೇದಿಕೆ ಮೇಲೂ ವೇದಿಕೆ ಕೆಳಗೂ ಒಂದೇ ಬಗೆಯ ಜನವಿದ್ದು, ವೇದಿಕೆ ಮೇಲಿನವರು ಹೇಳುವುದನ್ನೆಲ್ಲಾ ಕೆಳಗಿರುವವರು ಈಗಾಗಲೇ ಸಾವಿರ ಬಾರಿ ಕೇಳಿಕೊಂಡು ಮನನ ಮಾಡಿಕೊಂಡಿದ್ದಾಗ ಅವರನ್ನೇ ಕೂರಿಸಿಕೊಂಡು ಇನ್ನೊಮ್ಮೆ ಹೇಳಿ ಏನು ಪ್ರಯೋಜನ?

ನೀವು ಯಾರದೋ ಮೇಲೆ ಯುದ್ಧ ಸಾರಬೇಕೆಂದಿದ್ದಲ್ಲಿ ಅದಕ್ಕಾಗಿ ಒಂದು ಸೈನ್ಯ ಕಟ್ಟುತ್ತಿದ್ದಲ್ಲಿ ಆಗಾಗ ಒಂದೆಡೆ ಸೇರಿ ‘ಒತ್’ ತೆಗೆದುಕೊಳ್ಳುವುದು ಅವಶ್ಯಕವಾಗಿರುತ್ತದೆ. ಮೂಲಭೂತವಾದಿಗಳು ಅದನ್ನೇ ಮಾಡುವುದು, ಒಟ್ಟಿನಂತೆ. ಮನುಷ್ಯಪ್ರೇಮ ಸಾರಬೇಕಾದ, ಮನುಷ್ಯಧರ್ಮ ಸಾರಬೇಕಾದ, ನಾವೆಲ್ಲರೂ ಒಂದೇ, ನಮ್ಮೆಲ್ಲರ ಸಮಸ್ಯೆಗಳೂ ಒಂದೇ ಎಂದು ಪದೇಪದೇ ಹೇಳಬೇಕಾದ ಯಾವುದೇ ಲೇಖಕ, ದಾರ್ಶನಿಕ, ಸಂತ ಎಲ್ಲರ ಎದೆಯ ಕದವನ್ನು ತಟ್ಟುತ್ತಿರಬೇಕು. ತೇಜಸ್ವಿಯನ್ನು ಒಂದು ಪಂಥಕ್ಕೆ ಸೀಮಿತಗೊಳಿಸುವುದು ಸಂಕುಚಿತತನ. ನಮ್ಮ ಪೂರ್ವಿಕ ಮಹಾತ್ಮರೆಲ್ಲರೂ ಯಾವ ಪಂಥಕ್ಕೆ ಸೀಮಿತರಾಗಿದ್ದರು?

ನನಗೆ ಒಬ್ಬ ಓದುಗರು ಹೇಳಿದ ಮಾತು ನೆನಪಾಗುತ್ತಿದೆ. “ನೀವು ಚಂದದ ಬದುಕಿನ ಕತೆ ಹೇಳಿ ಸಾಕು; ಅದರೊಳಗಿನ ಅರ್ಥಗಳನ್ನು ನಾವು ಹುಡುಕಿಕೊಳ್ಳುತ್ತೇವೆ”. ಲೇಖಕ ಓದುಗರನ್ನು ದಡ್ಡರೆಂದೋ ಅಮಾನಷರೆಂದೋ, ತಾನು ಓದುಗನಿಗಿಂತ ಬೌದ್ಧಿಕವಾಗಿ ಎತ್ತರದಲ್ಲಿರುವೆನೆಂದೂ ಭಾವಿಸುವುದು ಬಹುದೊಡ್ಡ ಮೂರ್ಖತನ, ಓದುಗನಿಗೆ ಮಾಡುವ ಅವಮಾನ.

ಅಕ್ಕರೆಯಲಿ ತೇಜಸ್ವಿಯೆಂಬ ಒಗಟನ್ನು ಇಷ್ಟು ಮಾತ್ರದಿಂದ ಬಿಡಿಸಲಾಗುವುದಿಲ್ಲ. ಚೆನ್ನಾಗಿ ಬರೆದಿರುವ ಅನೇಕ ಲೇಖಕರು ಇದ್ದಾರೆ. ಅತ್ಯುನ್ನತ ಪ್ರಶಸ್ತಿಗಳನ್ನು ಅರ್ಹವಾಗಿಯೇ ಗಳಿಸಿದ್ದಾರೆ.

ನಾನು ಇತ್ತೀಚೆಗೆ ಒಬ್ಬ ಪುಸ್ತಕ ಮಾರಾಟಗಾರರ ಬಳಿ ಮಾತಾಡುತ್ತಿದ್ದೆ. ಜನ ಯಾರ ಪುಸ್ತಕಗಳನ್ನು ಹೆಚ್ಚು ಓದುತ್ತಾರೆ ಮತ್ತು ಯಾಕೆ ಎಂಬುದು ನನ್ನ ಪ್ರಶ್ನೆ. ಅವರು ಹೇಳಿದ್ದು “ಸರ್ ಜನ ಒಳ್ಳೆಯ ಪುಸ್ತಕ ಓದುತ್ತಾರೆ. ಮೊದಲಿಗೆ ಒಳ್ಳೆಯ ಪುಸ್ತಕ ಬರಬೇಕಷ್ಟೆ. ಆದರೆ ಅಷ್ಟೇ ಸಾಲದು. ಜನ ಅದರೊಂದಿಗೆ ಬರೆದವನ ವ್ಯಕ್ತಿತ್ವವನ್ನೂ ನೋಡುತ್ತಾರೆ. ಒಮ್ಮೆ ವ್ಯಕ್ತಿ ಹಿಡಿಸಿದರೆ ನಂತರ ಆತ ಏನು ಬರೆದರೂ ಎತ್ತಿಕೊಂಡು ಓದುತ್ತಾರೆ. ಅದು ಶ್ರೇಷ್ಠ ಕನಿಷ್ಠ ಎಂದು ಅಳೆಯಲು ಹೋಗುವುದಿಲ್ಲ” ಎಂದಿದ್ದರು.

ಇದು ನನಗೆ ಅಚ್ಚರಿಯ ಸಂಗತಿಯಾಗಿತ್ತು. ಒಂದು ಪುಸ್ತಕ ಓದುಗನಿಗೆ ಏನು ತಲುಪಿಸುತ್ತದೆ, ಎಷ್ಟು ತಲುಪಿಸುತ್ತದೆ ಎಂಬುದಷ್ಟೇ ಮುಖ್ಯವಾಗಿರಬೇಕಿತ್ತಲ್ಲವೇ. ಗಣಿತ ಹಾಗಿಲ್ಲ. ಈ ಓದುಗ ಪ್ರಪಂಚದಲ್ಲಿ ಪುಸ್ತಕದೊಂದಿಗೆ ಲೇಖಕ ತನ್ನನ್ನೂ ಓದುಗನಿಗೆ ದಾಟಿಸಿರುತ್ತಾನೆ. ಆದ್ದರಿಂದ ಪುಸ್ತಕದ ವ್ಯಕ್ತಿಯೂ ಶ್ರೇಷ್ಠವಾಗಿರಬೇಕು ಅಂದರೆ ಜನಪ್ರಿಯನಾಗಿರಬೇಕು ಎಂದಲ್ಲ, ಜನ ಮೂಗಿನ ಮೇಲೆ ಬೆರಳಿಟ್ಟು ನೋಡುವಂತಿರಬೇಕು. ಆದರ್ಶನಾಗಿರಬೇಕು, ಅನುಕರಣೀಯನಾಗಿರಬೇಕು. ಭಾರತೀಯ ಸಮಾಜ ಬಹಳ ವಿಶಿಷ್ಟ ಅದು ತನ್ನಲ್ಲಿಲ್ಲದ, ತಾನು ಅನುಸರಿಸಬೇಕೆಂದಿರುವ ಮೌಲ್ಯಗಳನ್ನು ಸದಾ ಹುಡುಕುತ್ತಿರುತ್ತದೆ. ಯಾರಲ್ಲಿಯಾದರೂ ಕಂಡರೆ ತಕ್ಷಣ ಆತನನ್ನು ಅಪ್ಪಿಕೊಳ್ಳುತ್ತದೆ. ಹೀಗಾಗಿಯೇ ನಮ್ಮಲ್ಲಿ ಸಾಧುಸಂತರು ಹೆಚ್ಚಿರುವುದು. ಸದಾ ಹೊಸಹೊಸ ರೂಪದಲ್ಲಿ ಹುಟ್ಟಿಕೊಳ್ಳುತ್ತಿರುವುದು. ಅವರು ಗಬ್ಬೆದ್ದು ಹೋಗಿದ್ದಾರೆ ಅದು ಬೇರೆ ವಿಷಯ. ಆದರೆ ಜನರಿಗೆ ಅವರ ಅಗತ್ಯವಿದೆ. ಪಶ್ಚಿಮದಲ್ಲಿ ಹೀಗಿಲ್ಲ. ಅಲ್ಲಿನ ಓದುಗರು ಲೇಖಕ ಮತ್ತು ಲೇಖನವನ್ನು ಬೇರ್ಪಡಿಸಿ ನೋಡುತ್ತಾರೆ. ಈ ವ್ಯತ್ಯಾಸವನ್ನು ಅರಿಯದೇ ನಮ್ಮಲ್ಲಿ ಅಮೂಲ್ಯವಾದ ಅವಕಾಶಗಳನ್ನು ಕಳೆದುಕೊಂಡ ಉತ್ತಮ ಲೇಖಕರಿದ್ದಾರೆ.

ತೇಜಸ್ವಿ ವಿಷಯದಲ್ಲಿ ಯಾರೂ ಹೆಚ್ಚಾಗಿ ಗಮನಿಸದೇನೆಂದರೆ ತೇಜಸ್ವಿ ಬರೆದಿರುವ ಸೃಜನಶೀಲ ಸಾಹಿತ್ಯದಷ್ಟೇ ಅಥವಾ ಅದಕ್ಕಿಂತ ಹೆಚ್ಚಾಗಿ ಅವರು ಬದುಕಿನ ಬಗ್ಗೆ ಬರೆದಿರುವ ಸಾಹಿತ್ಯವಿದೆ. ಬಹುಶಃ ಅವರ ಬದುಕಿದ್ದ ಎಲ್ಲ ದಿನಗಳೂ ದಾಖಲಾಗಿಬಿಟ್ಟಿವೆ. ಆದರೆ ಅಷ್ಟೂ ಪುಸ್ತಕಗಳಲ್ಲಿ ನಮಗೆ ಅವರ ಸರಳ, ನೇರ ವ್ಯಕ್ತಿತ್ವ ಪರಿಚಯವಾಗುತ್ತದೆಯೇ ವಿನಾ ಎಲ್ಲಿಯೂ ಒಂದು ಸಣ್ಣತನ, ಒಂದು ಭ್ರಷ್ಟತನ, ಒಂದು ಸುಳ್ಳು, ಅನಾಚಾರ ದಾಖಲಾಗಿಲ್ಲ. ನಡೆ ಬೇರೆ ನುಡಿ ಬೇರೆ ಅನ್ನಿಸಿಲ್ಲ.

ಸಹ ಇನ್ಯಾರಾದರೂ ‘ತೇಜಸ್ವಿಯೊಂದಿಗೆ ಕಳೆದ ದಿನಗಳು’ ಎಂದು ಹೊಸ ಪುಸ್ತಕ ತಂದರೆ ಜನ ಬಾಚಿಕೊಂಡು ಓದುತ್ತಾರೆ. ಇದು ತೇಜಸ್ವಿ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.

ತೇಜಸ್ವಿ ಬಲ್ಲವರಿಗೆ ಈಗಾಗಲೇ ಇದೆಲ್ಲ ಗೊತ್ತಿರುತ್ತದೆ. ತೇಜಸ್ವಿ ಆರ್ಥಿಕ ಕಾರಣಗಳಿಗಾಗಿ, ಅನುಕೂಲಗಳಿಗಾಗಿ, ಹೆಸರು ಮನ್ನಣೆಗಳಿಗಾಗಿ, ಮಾನಸಿಕವಾಗಿ ಭ್ರಷ್ಟರಾಗಿರಲಿಲ್ಲ. ಅವರು ಬೇಕಿದ್ದರೆ ಮೈಸೂರಿನ ವಿಶ್ವವಿದ್ಯಾಲಯದ ಕುಲಪತಿಯಾಗಬಹುದಿತ್ತು, ಆಗಲಿಲ್ಲ. ಹಾ.ಮಾ.ನಾಯಕರಿಗೆ ‘ಹಾಗೇನಾದರೂ ಮಾಡಿದ್ದರೆ ನಿಮ್ಮ ಕಣ್ಣಲ್ಲಿ ಹೇಳ್ತಿಂದ ಮನುಷ್ಯನಂತೆ ಕಾಣ್ತಿದ್ದೆ ಅಲ್ವಾ’ ಎಂದಿದ್ದರಂತೆ. ಹಾಗೆ ಇನ್ನೊಮ್ಮೆ ಎಂಎಲ್‌ಸಿ ಆಗುವ ಆಫರ್ ಬಂದಾಗ ಅದನ್ನು ತಿರಸ್ಕರಿಸಿದ್ದಾರೆ. ಮತ್ಯಾವಾಗಲೋ ಅಕ್ಕ ಸಮ್ಮೇಳನಕ್ಕೆ ಅಮೆರಿಕಾಗೆ ಆಹ್ವಾನ ಬಂದಾಗ ಏರ್ ಟಿಕೆಟ್ಸ್‌ನ್ನೇ ಹರಿದು ಎಸೆದಿದ್ದಾರೆ. ಪ್ರಶಸ್ತಿಗಳನ್ನು ಕೊಟ್ಟರೂ ಇಸಿಕೊಳ್ಳಲು ಹೋಗಿಲ್ಲ.

ಗಮನಿಸಬೇಕಾದ್ದು ಇದೆನ್ನೆಲ್ಲ ಅವರು ದೊಡ್ಡ ವ್ಯಕ್ತಿಯೆನಿಸಿಕೊಳ್ಳಲು ಮಾಡಿದ್ದಲ್ಲ. ಎಲ್ಲೂ ತಾವಾಗೇ ಈ ತ್ಯಾಗಗಳನ್ನು ಬರೆದುಕೊಂಡಿಲ್ಲ. ಯಾಕೆಂದರೆ ಅವರ ಪ್ರಕಾರ ಅವು ತ್ಯಾಗಗಳಲ್ಲ. ಬೇರೆಯವರು ಬರೆದಾಗಲೇ ನಮಗೆ ಅವರ ಈ ನಿರ್ಧಾರಗಳ ಬಗ್ಗೆ ಗೊತ್ತಾಗಿರುವುದು. ನಮಗೆ ಇದರಿಂದ ತಿಳಿಯುವುದೇನೆಂದರೆ ಇದೆಲ್ಲ ಅವರ ವ್ಯಕ್ತಿತ್ವದ ಭಾಗವಾಗಿತ್ತು. ತನ್ನ ತೀವ್ರ ಬದುಕಿಗೆ ಧಕ್ಕೆಯಾಗದಿರಲೆಂದು, ಮಾಡಲು ಇನ್ನೂ ಉತ್ತಮ ಕೆಲಸಗಳಿವೆಯೆಂದು ಮತ್ತು ತನ್ನ ಆಸಕ್ತಿ, ಪರಿಣತಿ ವಲಯವೇ ಬೇರೆಯೆಂದು ಸ್ಪಷ್ಟತೆ ಇತ್ತು. ಅವರೇ ಹೇಳುವಂತೆ ‘ಎಲ್ಲರೂ ದೊಡ್ಡವರೆಂದು ಕರೆದರು ಎಂದ ಮಾತ್ರಕ್ಕೆ ನಾವು ದೊಡ್ಡವರಂತೆ ನಟಿಸಬಾರದು’. ಈ ಸ್ಪಷ್ಟತೆ ಯುವಕರಿಗೆ ಹಿಡಿಸುತ್ತದೆ, ಆಕರ್ಷಕವೆನಿಸುತ್ತದೆ, ಪ್ರಾಮಾಣಿಕವೆನಿಸುತ್ತದೆ. Swag ಎಂದರೆ ಇದೇನೇ.

ಎಲ್ಲರೂ ಕನಸು ಕಾಣುವ ಬದುಕನ್ನು ತೇಜಸ್ವಿ ಸಹಜವಾಗಿ ಆಯ್ಕೆ ಮಾಡಿಕೊಂಡಿದ್ದರು. ಮೇಲಿನ ಎಲ್ಲಾ ಅಂಶಗಳಿಗೆ ಪೂರಕವಾಗಿ ರಾಜಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ನೆನಪಾಗುತ್ತಿದ್ದಾರೆ. ಜನ ಯಾಕೆ ಈ ನಟರನ್ನೂ ಎದೆಗೆ ಇಳಿಸಿಕೊಂಡಿದ್ದಾರೆ ಎಂದರೆ ಇದೇ ಕಾರಣಗಳಿಂದಾಗಿ.

ಇನ್ನು ವಿಚಾರಕ್ಕೆ ಬಂದರೆ ತೇಜಸ್ವಿಯಷ್ಟು ಸ್ಪಷ್ಟವಾಗಿ, ಸರಳವಾಗಿ, ನೇರವಾಗಿ ಮತ್ತು ಸ್ನೇಹದಿಂದ ಹೇಳಿದವರಿಲ್ಲ. ಇದಕ್ಕೆ ಸಾಕ್ಷಿ ನಮ್ಮ ಕಣ್ಣೆದುರಿಗೆ ಸಿಗುತ್ತದೆ. ಇಂದಿನ ಯುವಕರು ಅಲ್ಲಿಲ್ಲಿ ಅವರ ಒಂದು ಸಾಲಿನ, ಒಂದು ಪ್ಯಾರಾದ ‘ಕೋಟ್ಸ್‌’ಗಳನ್ನು ಪೋಸ್ಟರ್ ಮಾಡಿ ಹಂಚಿಕೊಳ್ಳುತ್ತಿರುತ್ತಾರೆ. ಆ ಪ್ರತಿಯೊಂದು ವಿಚಾರವೂ ಮನುಷ್ಯಪ್ರೇಮಕ್ಕೆ ಪೂರಕವಾಗಿ, ಮಾರಕ ಶಕ್ತಿಗಳ ವಿರುದ್ಧವಾಗಿ, ಸ್ವಯಂ ಸಹಾಯಕ ಪ್ರೇರಣೆಗಳಾಗಿವೆ. ಮುಖ್ಯವಾಗಿ ಜನರ ಭಾಷೆಯಲ್ಲಿವೆ!

ಅವರ ಸಮಕಾಲೀನ ಸಂದರ್ಭದಲ್ಲಿ ಪುರೋಹಿತರು ದೇವರಿಗೊಂದೇ ಮಂತ್ರಭಾಷೆ ಹುಟ್ಟಿಸಿಕೊಂಡಂತೆ ಆಗಿನ ವೈಚಾರಿಕಲೋಕ ಜನರಿಗೆ ಅರ್ಥವಾಗದ ಮಂತ್ರಭಾಷೆ ಸೃಷ್ಟಿಸಿಕೊಂಡಿರುವುದು ಕಂಡುಬರುತ್ತದೆ. ಅದು ಈಗಲೂ ಚಾಲ್ತಿಯಲ್ಲಿದೆ. ತೇಜಸ್ವಿ ಅದಕ್ಕೆ ಸಂಪೂರ್ಣ ವಿರುದ್ಧವಾದ ಭಾಷೆ ಆಯ್ಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಈ ಭಾಷೆ ಬಹಳ ಸ್ನೇಹಮಯವಾಗಿದೆ. ನೀವು ಅವರ ಅನುವಾದಗಳನ್ನೇ ತಗೊಂಡರೂ ತೇಜಸ್ವಿ ಅವರನ್ನು ಸಂಪೂರ್ಣವಾಗಿ ಕನ್ನಡಿೀಕರಿಸಿದ್ದಾರೆ.

ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ತೇಜಸ್ವಿ ವಿಚಾರವನ್ನು ಮತ್ತು ಕಥನವನ್ನು ಒಂದು ಮಟ್ಟಿಗೆ ಬೇರ್ಪಡಿಸಿದ್ದಾರೆ. ಕಥನದಲ್ಲಿ ವಿಚಾರ ತುಂಬಿದಾಗ ಸಾಕಷ್ಟು ಗೊಂದಲಗಳಿಗೆ ಆಸ್ಪದವಿರುತ್ತದೆ. ಈ ಗೊಂದಲಗಳಿಂದಾಗಿ ಎಷ್ಟೋ ಸಲ ಲೇಖಕ ‘ಕನ್ನಿಂಗ್’ ಅನಿಸುತ್ತದೆ. ಬದಲಾಗಿ ಒಂದು ಸುಂದರ ಕಥೆ ಹೇಳಿ, ಪ್ರಬಂಧದಲ್ಲಿ ಸ್ಪಷ್ಟವಾದ ತನ್ನ ನಿಲುವನ್ನು ಸರಳವಾಗಿ ಪ್ರಕಟಿಸಿದಾಗ ಅದಕ್ಕೆ ಅಥೆಂಟಿಸಿಟಿ ದಕ್ಕುತ್ತದೆ. ಮತ್ತೊಮ್ಮೆ ಹೇಳೀನೇ, ಓದುಗ ದಡ್ಡನಲ್ಲ, ಓದುಗ ವಿಶಾಲ ಹೃದಯದವನು. ತನಗೇನು ಬೇಕೋ ಅಷ್ಟನ್ನು ಎತ್ತಿಕೊಳ್ಳಬಲ್ಲನು. ಬೇಡದ್ದನ್ನು ಪಕ್ಕಕ್ಕಿಡುವನು. ತೇಜಸ್ವಿಯ ವೈಚಾರಿಕ ದೃಷ್ಟಿ, ಲೇಖನ, ಪುಸ್ತಕಗಳು ಅವರ ಎಲ್ಲಾ ಓದುಗರಿಗೂ ಗೊತ್ತಿದೆ. ತೇಜಸ್ವಿಯಲ್ಲಿ ಅಡಗಿರುವ ವಿಶೇಷತೆ ಅವರ ವ್ಯಕ್ತಿತ್ವದ ಅಥೆಂಟಿಸಿಟಿ.

ಇವತ್ತು ಯಾರಾದರೂ ಈ ತೇಜಸ್ವಿ-ಓದುಗ ಸಂಬಂಧವನ್ನು ‘ಭಕ್ತಿ’ ಎಂದು ಕರೆದರೆ ಅವರಷ್ಟು ಮೂರ್ಖರಿಲ್ಲ. ಜನ ತೇಜಸ್ವಿಯನ್ನು ದೇವರಂತಲ್ಲ, ಸ್ನೇಹಿತನಂತೆ ನೋಡುತ್ತಾರೆ. ತೇಜಸ್ವಿ ಇವತ್ತು ಬದುಕಿದ್ದರೆ ಎಂಬತ್ತೈದು ವರ್ಷದ ಮುದುಕ. ಆದರೆ ಯಾರಿಗೂ ತೇಜಸ್ವಿ ಅಜ್ಜ ಅನಿಸಲ್ಲ. ಜೊತೆಗಾರ, ಹಿರಿಯ, ಅಣ್ಣ, ಸ್ನೇಹಿತ – ಇಂತಹ ಭಾವನೆ ಹುಟ್ಟಿಸುತ್ತಾರೆ.

ತೇಜಸ್ವಿಗೆ ಇನ್ನೊಂದು ಸಹಜವಾಗಿ ಒಲಿದಿತ್ತು. ಏನಂದರೆ ಅವರ ಮೌಲ್ಯಗಳಲ್ಲಿ ಪರಿಸರ ಕಾಳಜಿ ಮುಖ್ಯವಾಗಿತ್ತು. ಅವರು ತಮ್ಮ ಕಾಲದಲ್ಲಿ ಆಡಿದ್ದೆಲ್ಲವೂ ಈಗ ನಿಜವಾಗಿ ಪರಿಣಮಿಸುತ್ತಿರುವುದು ಯುವಕರಿಗೆ ವಾವ್ ಅನಿಸುತ್ತದೆ. ಗಮನಿಸಿ, ಪರಿಸರ ಕಾಳಜಿಗೆ ಯಾವುದೇ ಪಂಥವಿಲ್ಲ.

ಒಟ್ಟಾರೆ ತೇಜಸ್ವಿಯನ್ನು ಸಾಹಿತ್ಯ-ವ್ಯಕ್ತಿತ್ವ-ವಿಚಾರ ಮೂರೂ ದಿಕ್ಕುಗಳಿಂದ ಅಳೆದು ನೋಡಿದರೂ ಒಂದೇ ತೇಜಸ್ವಿ ಸಿಗುತ್ತಾರೆ! ಅದೇ ಅವರ ಶ್ರೇಷ್ಠತೆ, ಆ ಥರದ್ದೇನಾದರೂ ಪದ, ಮಾನದಂಡ ಇದ್ದಲ್ಲಿ.

ಕೊನೆಯದಾಗಿ, ತೇಜಸ್ವಿ ಸಮಕಾಲೀನರಲ್ಲಿ ತೇಜಸ್ವಿಯಷ್ಟೇ ಚೆನ್ನಾಗಿ ಬರೆದವರು, ತೇಜಸ್ವಿಯಷ್ಟೇ ಪ್ರಾಮಾಣಿಕ, ಪರಿಶುದ್ಧ, ಅಥೆಂಟಿಕ್ ಆಗಿದ್ದವರು, ಸರಳ ನೇರವಾಗಿದ್ದವರು ಇದ್ದಿರಬಹುದು. ಇರುತ್ತಾರೆ. ತೇಜಸ್ವಿಯೊಬ್ಬ ಒಂದೇ ಒಂದು ಯೋಗ ಎಂದರೆ ಇವರು ಕುವೆಂಪು ಮಗ ಎಂಬ ಅಟೆನ್ಷನ್ ಮತ್ತು ಪ್ರೀತಿ. ಅದು ಅವರಿಗೆ ನಿಸ್ಸಂಶಯವಾಗಿ ಸಹಾಯ ಮಾಡಿದೆ. ತೇಜಸ್ವಿ ಅದಕ್ಕೆ ಮಿಗಿಲಾದ ಕಾರ್ಯಗಳನ್ನು ಮಾಡಿರುವುದರಿಂದ ಈ ಪ್ರೀತಿ ಇಮ್ಮಡಿಗೊಂಡಿದೆ. ಕಾಲ ನದಿಯಿದ್ದ ಹಾಗೆ. ಅದರ ಪ್ರಜ್ಞೆ ಬಂಜರಿಯುವ ಎಲ್ಲಾ ಕಡೆ ಹರಿದು ಎಲ್ಲಾ ಬರಡನ್ನು ನೀಗಿಸುವುದಿಲ್ಲ. ಎಲ್ಲಿ ಜಾಗ ಇರುತ್ತೋ ಅಲ್ಲಿ ಹರಿದು ಅದರ ಸುತ್ತಲೇ ಹಸಿರು ಉಸಿರನ್ನು ಬೆಳೆಸಿ ನಾಗರಿಕತೆಯನ್ನು ಕಟ್ಟುತ್ತದೆ. ತೇಜಸ್ವಿ ಈ ನೈಸರ್ಗಿಕ ಅಕಾಂಕ್ಷೆಗೆ ಮುಕ್ತಾಗದಂತೆ ಜೀವಿಸಿದ್ದಾರೆ.

ಇಂದು ತೇಜಸ್ವಿಯವರನ್ನು ಓದಿದ ಐಟಿ-ಬಿಟಿ ಹುಡುಗರು ಮಣ್ಣಿನ ಮಕ್ಕಳಾಗಿ, ಕನ್ನಡತನಕ್ಕೆ ಬದ್ಧವಾಗಿ, ಜಾಗತಿಕವಾಗಿ ಕಂಪೀಟೆಟಿವ್ ಆಗಿ ಬದುಕುತ್ತಿದ್ದಾರೆ. ಪರಿಸರ ಸಂರಕ್ಷಣೆ, ಕನ್ನಡಿಗರ ಉಳಿವಿನ್ ಬಗ್ಗೆ ಬೀದಿಗಿಳಿದು ಹೋರಾಡುತ್ತಿದ್ದಾರೆ. ಟ್ವಿಟರಿಂತಹ ಜಾಗತಿಕ ವೇದಿಕೆಯಲ್ಲಿ ಕನ್ನಡದ ಕಹಳೆ ಮೊಳಗಿಸುತ್ತಿದ್ದಾರೆ. ಅಲ್ಲದೆ ಇವರೆಲ್ಲರೂ ಜಾತಿ ಧರ್ಮ ಆರ್ಥಿಕ ಅಸಮಾನತೆಗಳ ಬಗ್ಗೆ ಬಲ್ಲವರಿದ್ದಾರೆ. ಅದನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿಕೊಂಡು ತಮ್ಮದೇ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಹೊರಟಿದ್ದಾರೆ. ಇದೂ ಸಹ ತೇಜಸ್ವಿಯ ವಿಶೇಷ.

ತೇಜಸ್ವಿ ಮೌಲ್ಯಗಳು ವ್ಯಕ್ತಿಯನ್ನು ಸ್ವತಂತ್ರ ಚಿಂತಕರನ್ನಾಗಿಸುತ್ತವೆ. ಸಮಸ್ಯೆಯ ಅರಿವಿರುವ ಮತ್ತು ಸದಾ ಪರಿಹಾರ ಶೋಧಿಸುವ ಮನೋಭಾವ ಬೆಳೆಸುತ್ತವೆ. ಸೋಂಬೇರಿತನ, ಅಡ್ಡದಾರಿ, ಸಂಕುಚಿತಗಳ ವಿರುದ್ಧ ಪ್ರಬುದ್ಧಗೊಳಿಸುತ್ತವೆ. ಹಂಗಾಗಿ ತೇಜಸ್ವಿ ಜ್ಞಾನಪೀಠ ಪಡೆಯದೇ ಪಡೆಯನ್ನೇ ಕಟ್ಟಿ ಹೋಗಿದ್ದಾರೆ.

Leave a Comment

Your email address will not be published. Required fields are marked *