ಮುಂದಿನ ಜಮಾನದ ಫೋನ್‍ಗಳು

article m6

ಭವಿಷ್ಯದಲ್ಲಿ ಮನುಷ್ಯ ದಡ್ಡ ಅಥವಾ ಸೋಂಬೇರಿ ಆಗುತ್ತಾನೆ ಎನ್ನುವುದು ಸುಳ್ಳು

ಸುಮಾರು ಇಪ್ಪತ್ತು ವರುಷಗಳ ಹಿಂದೆ ಇದ್ದ ನೋಕಿಯಾ ಫೋನ್‍ಗಳನ್ನು 2ಜಿ ಫೋನು ಎನ್ನುತ್ತಿದ್ದೆವು. ನಮ್ಮ ಕೈಲಿರುವ ಫೋನುಗಳನ್ನು 5ಜಿ ಫೋನು ಎನ್ನುತ್ತೇವೆ. ಈಗ ಮಾರುಕಟ್ಟೆಯಲ್ಲಿ ಹೊಸತು ಬಂದಿದೆ- ‘ಎಐ ಫೋನುಗಳು’! ಇವುಗಳ ಬಗ್ಗೆ ಸ್ವಲ್ಪ ತಿಳಿಯೋಣ.

ನಮ್ಮ ಫೋನುಗಳಲ್ಲಿರುವ ಚಾಟ್‍ಜಿಪಿಟಿ, ಮೆಟಾ ಎಐಗಳು ಕೇವಲ ಪ್ರಶ್ನೆ ಸ್ವೀಕರಿಸಲು ಮತ್ತು ಉತ್ತರ ತೋರಿಸಲು ಇರುವ ಆಪ್‍ಗಳು. ಪ್ರಶ್ನೆಗೆ ಉತ್ತರ ಹುಡುಕುವ ಪ್ರಕ್ರಿಯೆ ಕಣ್ಣೆವೆಯಲ್ಲಿ ಜರುಗುತ್ತದೆ. ಅಂದರೆ ಇಂಟರ್ನೆಟ್ ಇಲ್ಲದಿದ್ದರೆ ಇವು ನಿರರ್ಥಕ.

ನಮ್ಮ ಫೋನುಗಳಲ್ಲಿ ಎಐ ಕ್ಯಾಮೆರಾಗಳು ಇರುವವು. ಈ ಕ್ಯಾಮೆರಾಗಳಲ್ಲಿನ ಕೆಲವು ಎಐ ಗುಣಗಳು ಸ್ಥಳೀಯವಾಗಿ ಜರುಗುತ್ತವೆ. ಎದುರಿನ ದೃಶ್ಯವನ್ನು ಗುರುತು ಹಿಡಿಯುವುದು, ದೃಶ್ಯದಲ್ಲಿನ ಹಿನ್ನೆಲೆಯ ಗದ್ದಲ ತೆಗೆಯುವುದು ಮುಂತಾಗಿ ಕೆಲವು ವಿಶೇಷಣಗಳು ಕಣ್ಣೆವೆಯಲ್ಲಿ ಜರುಗುತ್ತವೆ. ಕಟ್ಟಡಕ್ಕೆ ಕ್ಯಾಮೆರಾ ಹಿಡಿದಾಗ ಇದು ದೇವಸ್ಥಾನವೋ ಚರ್ಚೋ ಎಂದು ತಿಳಿಸಲು, ಧ್ವನಿ ಕೇಳಿಸಿಕೊಂಡು ಭಾಷಾಂತರಿಸಲು ಮುಂತಾಗಿ.. ಒಟ್ಟಾರೆ ಇವೆಲ್ಲವೂ ಇನ್ನು ಸಾಫ್ಟ್‌ವೇರ್ ಮಟ್ಟದ ಎಐ ಫೋನುಗಳು.

ನಿಜವಾದ ಎಐ ಫೋನುಗಳು ಬರಲು ಇನ್ನೂ ಕೆಲವು ವರ್ಷಗಳು ಹಿಡಿಯುತ್ತವೆ. ಅವುಗಳಲ್ಲಿ ನೂರಕ್ಕೆ ತೊಂಬತ್ತು ಭಾಗ ಕೆಲಸಗಳು ಸ್ಥಳೀಯವಾಗಿ ಜರುಗಲಿವೆ. ಅದಕ್ಕಾಗಿ ವಿಶೇಷ ಪ್ರೊಸೆಸರ್‍ಗಳ ಅವಶ್ಯಕತೆ ಇದೆ. ಅದನ್ನು ಸಿಪಿಯು ಬದಲಾಗಿ ಎನ್‌ಪಿಯು (ನ್ಯೂರಲ್ ಪ್ರೊಸೆಸಿಂಗ್ ಯುನಿಟ್) ಎಂದು ಕರೆಯುತ್ತಾರೆ. ಎನ್‌ಪಿಯುಗಳು ಮನುಷ್ಯನ ಮೆದುಳನ್ನು ಅನುಕರಿಸುವ, ಕಡಿಮೆ ವಿದ್ಯುತ್ ಬಳಸುವ, ಅತ್ಯಂತ ದಕ್ಷವಾಗಿ, ಪ್ಯಾರಲಲ್ಲಾಗಿ ಕಾರ್ಯನಿರ್ವಹಿಸುವ, ಎಐಗೆಂದೇ ತಯಾರಾದ ಸಿಪಿಯುಗಳು. ಮುಂದೆ ಇವು ಎಲ್ಲಾ ಫೋನುಗಳಲ್ಲಿ ಲ್ಯಾಪ್‌ಟಾಪ್‌ಗಳಲ್ಲಿ ರಾರಾಜಿಸಲಿವೆ. ಅಂತೆಯೇ ಈಗಿನ ಎಐ ಮಾಡೆಲ್‌ಗಳಿಗೆ LLMs (large language models) ಬೃಹತ್ ಕ್ಷಮತೆಯ ಸರ್ವರ್‌ಗಳು ಬೇಕು. ಮುಂದೆ ಇವುಗಳ ಪುಟ್ಟ ರೂಪದ SLM (small language models) ಬರಲಿದ್ದು ಆರಾಮಾಗಿ ಒಂದು ಫೋನಿನ ಮೇಲೆ ಕೂತು ನಿರ್ದಿಷ್ಟ ಕೆಲಸಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಲಿವೆ.

ಸರಿ, ಇವು ತರಲಿರುವ ಕ್ರಾಂತಿ ಏನು ಗೊತ್ತಾ? ನಮ್ಮ ಫೋನುಗಳು 2ಜಿ ಇದ್ದಾಗ ‘ಬೇಸಿಕ್’ ಅಂದೆವು, 3ಜಿಗೆ ಬಂದಾಗ ‘ಸ್ಮಾರ್ಟ್’ ಅಂದೆವು. ಬೇಸಿಕ್‌ನಲ್ಲಿ ಕಾಲ್, ಎಸ್‌ಎಮ್‌ಎಸ್ ಹೆಚ್ಚೆಂದರೆ ಸ್ನೇಕ್ ಗೇಮ್. ಅದೇ ಸ್ಮಾರ್ಟ್‌ಫೋನಿಗೆ ಬಂದಾಗ ನೂರೆಂಟು ಬಗೆಯ ಆಪ್‍ಗಳು ಹುಟ್ಟಿಕೊಂಡವು. ಈಗ ನಮ್ಮ ಬದುಕಿನ ಪ್ರತಿಯೊಂದು ಅಗತ್ಯಕ್ಕೂ ಒಂದು ಆಪ್ ಇದೆ. ಸಿಲ್ಪಿ ಆಪ್‌ಗಳಿವೆ. ಕ್ಯಾಮೆರಾ ಮೂಲಕ ದೆವ್ವಗಳನ್ನು ಹುಡುಕುವ ಆಪ್ ಇದೆ. ಪ್ರಪಂಚದ ಎಲ್ಲೆಲ್ಲಿ ಗೊಬ್ಬರ ಉದುರಿಸಿ ಬಂದಿದ್ದೇನೆ ಎಂದು ಗುರುತು ಮಾಡಿ ಕೊಟ್ಟುಕೊಳ್ಳುವ ಆಪ್ ಇದೆ. ಎದ್ದು ಕಿಟಕಿ ತೆರೆದು ನೋಡಲು ಸೋಂಬೇರಿಯಾಗಿದ್ದಲ್ಲಿ ಕುಂತಲ್ಲೇ ಕತ್ತಲೆಯಾಗಿದೆಯಾ ಎಂದು ಚೆಕ್ ಮಾಡುವ ಆಪ್ ಇದೆ. ಏನೂ ಮಾಡದೇ ಇರುವ ಆಪ್‌ಗಳೂ ಇವೆ.

ಹೀಗಿದ್ದಾಗ ನಮ್ಮ ಫೋನುಗಳು ಸಿಪಿಯುಗಳಿಂದ ಎನ್‌ಪಿಯುಗಳಿಗೆ ತೇರ್ಗಡೆಯಾದರೆ ಎಷ್ಟೆಲ್ಲಾ ಕ್ರಾಂತಿ ಉಂಟಾಗಬಹುದು ಯೋಚಿಸಿ. ಈಗಿನ ಕ್ಯಾಲ್ಕುಲೇಟರ್, ವೆದರ್ ಆಪ್‌ಗಳಿಂದ ಹಿಡಿದು ಇಡೀ ಆಪರೇಟಿಂಗ್ ಸಿಸ್ಟಮ್ ತನಕ, ಪ್ರತಿಯೊಂದು ಆಪ್ ಅನ್ನು ಮರುಬರೆಯಲಾಗುತ್ತದೆ. ಇದಕ್ಕೆ ಇನ್ನೂ ಲಕ್ಷ ಬಗೆಯ ಆಪ್‌ಗಳು ಸೇರಿಕೊಳ್ಳಲಿವೆ. ಈಗಿನ ಆಪ್‌ಗಳು ನಮ್ಮ ಅಗತ್ಯಗಳನ್ನು ಕೇವಲ ಆಟೋಮೇಟ್ ಮಾಡುತ್ತವೆ. ಅವಕ್ಕೆ ಅವುಗಳದ್ದೇ ಬುದ್ಧಿ ಅಂತಿಲ್ಲ. ಬರಲಿರುವ ಎಐ ಆಪ್‌ಗಳು ಸ್ವತಂತ್ರವಾಗಿ ಯೋಚಿಸಲಿವೆ. ನಿಮ್ಮನ್ನು ಗೈಡ್ ಮಾಡಲಿವೆ.

ಹೇಗೆ ಹಳೆಯ ನೋಕಿಯಾ ಸೆಟ್‌ಗಳನ್ನು ಬೇಸಿಕ್ ಎನ್ನುತ್ತೇವೋ, ಹಾಗೆ ಮುಂದೆ ಇಪ್ಪತ್ತು ನಮ್ಮ ಕೈಲಿರುವ ಫೋನುಗಳನ್ನು ಬೇಸಿಕ್ ಎನ್ನಲಿದ್ದೇವೆ. ನಿಜವಾದ ಎಐ ಫೋನುಗಳ ಉಗ್ರಾವತಾರಕ್ಕೆ ಸಾಕ್ಷಿಯಾಗಿ ಹಿಂದಿದ್ದ ಸ್ಮಾರ್ಟ್ ಫೋನುಗಳೇ ಪರವಾಗಿರಲಿಲ್ಲ ಎಂದೂ ಅನಿಸಬಹುದು. ಇದೆಲ್ಲವನ್ನೂ ಲ್ಯಾಪ್‌ಟಾಪ್‌ಗಳಿಗೂ ಅನ್ವಯಿಸಿಕೊಳ್ಳಿ. ಏನಾಗುತ್ತೆ ಅಂದರೆ ನಿಧಾನವಾಗಿ ನೀವು ಹೊಸ ಫೋನುಗಳಿಗೆ ಬದ್ಧಗೊಳ್ಳುವಿರಿ. ಕ್ರಮೇಣ ಅದು ನಿಮ್ಮ ವೈಯಕ್ತಿಕ ಪರ್ಸನಲ್ ಅಸಿಸ್ಟೆಂಟ್ ಆಗಿ ಬದಲಾಗುತ್ತದೆ. ನಮ್ಮ ಇಂದಿನ ಫೋನು ಈಗಲೂ ಒಂದು ಉಪಕರಣವಷ್ಟೇ. ನಾವೇ ಎತ್ತಿಕೊಂಡು ನಾವೇ ನಂಬರ್ ಒತ್ತಿ ಕಾಲ್ ಮಾಡಬೇಕು, ಮೆಸೇಜು ಟೈಪಿಸಬೇಕು. ಪರ್ಸನಲ್ ಅಸಿಸ್ಟೆಂಟ್‌ಗಳು ಪರ್ಮಿಷನ್ ಕೊಟ್ಟರೆ ಅವೇ ನಮ್ಮ ಹಲವು ಕೆಲಸಗಳನ್ನು ನಿರ್ವಹಿಸಲಿವೆ. ಸಣ್ಣ ಸರಳ ಉದಾಹರಣೆ: ದಿನಾ 7 ಗಂಟೆಗೆ ಎಬ್ಬಿಸುವ ಅಲಾರಂ ಒಂದಿನ ನೀವು ತಡವಾಗಿ ಮಲಗಿದರೆ ಅಮ್ಮ ‘ಪಾಪ ಮಲಗಿಕೊಳ್ಳಲಿ’ ಎಂದು ಪಾನಾಗಿ ಸುಮ್ಮನಾಗಬಹುದು!

ಇದನ್ನು ‘ಎಡ್ಜ್ ಕಂಪ್ಯೂಟಿಂಗ್’ ಎನ್ನುತ್ತಾರೆ. ಈ ವಿಷಯದಲ್ಲಿಯೂ ಒಂದು ಕಾಲಚಕ್ರ ಉರುಳಿದ ಹಾಗಾಯಿತು. 2ಜಿ ಕಾಲದಲ್ಲಿ ಫೋನಿನಲ್ಲಿ ಏನೆಲ್ಲ ಸಾಧ್ಯವಿತ್ತೋ ಅದೆಲ್ಲವೂ ಸ್ಥಳೀಯವಾಗಿ ಜರುಗುತ್ತಿತ್ತು. 3ಜಿ ಬಂದಾಗ ಕ್ಲೌಡ್ ಶುರುವಾಯಿತು. 5ಜಿಯಷ್ಟೊತ್ತಿಗೆ ಅದು ಉತ್ತುಂಗಕ್ಕೆ ಹೋಯಿತು. ಎಲ್ಲವೂ ಕ್ಲೌಡ್‌ನಲ್ಲಿಯೇ ಸಾಧ್ಯವಾಗತೊಡಗಿತು. ಸ್ಥಳೀಯ ಆಪ್‌ಗಳ ಅವಶ್ಯಕತೆಯೇ ಇರಲಿಲ್ಲ. ಬ್ರೌಸರಿನ ಮೂಲಕವೇ ನೆಟ್‌ಫ್ಲಿಕ್ಸ್, ವರ್ಡ್ ಸಾಧ್ಯವಾಯಿತು. ಈಗ ಮತ್ತೆ ಲೋಕಲ್ ಕಂಪ್ಯೂಟಿಂಗ್‌ ನತ್ತ ತಿರುಗಿದ್ದೇವೆ. ನಮ್ಮ ಅನೇಕ ತರಹ ಪ್ರಕ್ರಿಯೆ ಬೇಕಿರುವಂಥ ಕೆಲಸಗಳನ್ನು ಕ್ಲೌಡ್‌ಗೆ ವರ್ಗಾಯಿಸಿದಾಗ ಅದು ಒಂದಷ್ಟು ಇಂಟರ್ನೆಟ್ ಬೇಡುತ್ತದೆ. ನಮ್ಮ ಮನವಿ ಅಲ್ಲಿ ಹೋಗಿ ಪ್ರೊಸೆಸ್ ಆಗಿ ಮತ್ತೆ ಮರಳಲು ಒಂದಷ್ಟು ಸಮಯ ಬೇಡುತ್ತದೆ. ಎನ್‌ಪಿಯು ನಿಮ್ಮ ಫೋನಿನಲ್ಲೇ ಬಂದು ಕೂರುವುದರಿಂದ ಈ ಕೊರತೆಗಳು ನೀಗಿ ನಿಜನಿಜವಾದ ಸೂಪರ್ ಇಂಟೆಲಿಜೆಂಟ್ ಪರ್ಸನಲ್ ಫೋನುಗಳು ಸಾಧ್ಯವಾಗಲಿವೆ. ಆಗ ನೀವು ಚಾಟ್ ಜಿಪಿಟಿಯನ್ನು ಏನೇ ಕೇಳಿ, ಇಲ್ಲೇ ಯೋಚಿಸಿ ಇಲ್ಲೇ ಉತ್ತರಿಸುತ್ತದೆ.

ನಾವೇನು ಇಂದು ಕೆಲವನ್ನು ಬಹಳ ಕೌಶಲ್ಯಯುತ, ಬುದ್ಧಿವಂತ ಕೆಲಸಗಳು ಎಂದುಕೊಳ್ಳುತ್ತಿದ್ದೇವೋ ಅದೆಲ್ಲವೂ ಕೇವಲ ಕಾಲೇಜಲ್ಲಿ ಪುಸ್ತಕ ಓದಿ ತರಬೇತಿ ಪಡೆದು ಕಂಪನಿಯಲ್ಲಿ ಮಾಡುವ ಕೂಲಿ ಕೆಲಸಗಳೇ ಆಗಿವೆ. ಸಾಫ್ಟ್‌ವೇರ್ ಎಂಜಿನಿಯರು, ಲಾಯರು, ವೈದ್ಯರು, ಟೀಚರು- ಎಲ್ಲರೂ ಮಾಡುತ್ತಿರುವುದು ಅದೇ. ಈ ಕೂಲಿ ಕೆಲಸಕ್ಕಾಗಿ ಸಂಬಳ ಪಡೆಯುತ್ತೇವೆ. ಒಂದು ಕಂಪ್ಯೂಟರು ಸಾವಿರ ಪಟ್ಟು ಜ್ಞಾನ ಪಡೆದು ಸಾವಿರ ಪಟ್ಟು ಕ್ಷಮತೆಯಿಂದ ಇದೇ ಕೂಲಿ ಕೆಲಸ ಮಾಡಿಕೊಡಗಿದಾಗ- ನಮ್ಮ ಇವತ್ತಿನ ತರಬೇತಿ ಪ್ರೇರಿತ ಜ್ಞಾನದ ಮೌಲ್ಯ ಸೊನ್ನೆಯಾಗುತ್ತದೆ. ಇವತ್ತು ಪ್ಲಾಸ್ಟಿಕ್ ಬಿಂದಿಗೆ ತಯಾರಿಸುವ ಮಷೀನುಗಳು ಇರುವುದರಿಂದ ಕುಂಬಾರನ ಕೌಶಲ್ಯದ ಮೌಲ್ಯ ಸೊನ್ನೆ. ಹಾಗೆ ಮುಂದೆ ಎಐನಿಂದ ಸಾಫ್ಟ್‌ವೇರ್ ಎಂಜಿನಿಯರ್ ಕೌಶಲ್ಯದ ಮೌಲ್ಯ ಸೊನ್ನೆ.

ಹಾಗಂತ ಮನುಷ್ಯ ದಡ್ಡನಾಗುತ್ತಾನೆ, ಸೋಂಬೇರಿಯಾಗುತ್ತಾನೆ ಎನ್ನುವುದು ಸುಳ್ಳು. ಮನುಷ್ಯನನ್ನು ಸುಮ್ಮನೆ ಕೂರಿಸುವ ಜಾಯಮಾನ ಅಲ್ಲವೇ ಅಲ್ಲ. ಎಲ್ಲಾದರೂ ಕೆರೆದು ಗಾಯ ಮಾಡಿಕೊಳ್ಳುವ ಗುಣ ಅವನ ರಕ್ತದಲ್ಲಿದೆ. ಅದು ಮುಂದುವರಿಯಲಿದೆ.

Leave a Comment

Your email address will not be published. Required fields are marked *