ತಾತ್ವಿಕ ಜಿಜ್ಞಾಸೆಗಳಲ್ಲಿ ಸಂಕೀರ್ಣ ವಾದ ತಿರಸ್ಕರಿಸಲು ಓಕಾಮ್ ಮಾರ್ಗ ಅನುಕೂಲ
ಜಗತ್ತು ಬಹಳ ಸಂಕೀರ್ಣವಾಗುತ್ತಿದೆ. ಸತ್ಯವೆಂಬುದು ಒಂದು ಅಭಿಪ್ರಾಯ ಮಾತ್ರವಾಗಿರುತ್ತದೆ. ಜನ ಏನನ್ನು ನಂಬಬೇಕು ಏನನ್ನು ಬಿಡಬೇಕು ಎಂದು ಗೊಂದಲಕ್ಕೀಡಾಗುತ್ತಿದ್ದಾರೆ. ಹೀಗಾದಾಗ ಮನುಷ್ಯ ವರದಿಗಳಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಾನೆ. ತೋಳ ಬಂತು ತೋಳ ಕತೆಯಾಗುತ್ತದೆ. ನೈಜ ಅಪಾಯ ಎದುರಾದಾಗಲೂ ‘ಇವರಲ್ಲಿಯೂ ಯಾರೋ ಮೋಸಸ್ತು, ಕಪಟ ಇರಬಹುದು’ ಎಂದು ಶಂಕಿಸಿ ನಿಷ್ಕ್ರಿಯನಾಗುತ್ತಾನೆ. ಇದು ಜನಸಾಮಾನ್ಯ ನಿಷ್ಠೆ ಎದುರಿಸುವ ದ್ವಂದ್ವ. ವಿಜ್ಞಾನಿಗಳು ತಂತ್ರಜ್ಞಾನಿಗಳು ಇಂಥ ದ್ವಂದ್ವಕ್ಕೆ ಬಿದ್ದರೆ ಏನಾಗುತ್ತದೆ? ದಿನನಿತ್ಯ ಕೆಲಸಗಳಲ್ಲಿ ಸಮಸ್ಯೆಗಳಲ್ಲಿ ಸಂಶೋಧನೆಗಳಲ್ಲಿ ಸಂದಿಗ್ಧಗಳು, ವಿರುದ್ಧ ದಿಕ್ಕಿನ ‘ಸತ್ಯಗಳು’ ಎದುರಾದಾಗ ಅವರು ಏನು ಮಾಡುತ್ತಾರೆ? ‘ತಲೆಕೆಟ್ಟು’ ಲ್ಯಾಪ್‌ಟಾಪ್ ಮುಚ್ಚಿಟ್ಟು ಮನೆಗೆ ಹೋಗಿ ಬೆಚ್ಚಗೆ ಹೊದ್ದು ಮಲಗುತ್ತಾರೆಯೇ?
ವೈಜ್ಞಾನಿಕ ಲೋಕ ಇಂಥ ಸಮಸ್ಯೆಗಳು ಎದುರಾಗುತ್ತವೆಂದೇ ಹಲವು ತತ್ವಗಳನ್ನು ಪಾಲಿಸುತ್ತದೆ. ಅವುಗಳಲ್ಲಿ ‘ಓಕಾಮ್ ರೇಜರ್’ ಎಂಬುದು ಒಂದು. ಕಹಿಯಿಂದ ವಾಸ್ತವವನ್ನು ಭ್ರಮೆಯಿಂದ ಸತ್ಯವನ್ನು ಸಂಕೀರ್ಣತೆಯಿಂದ ಸರಳತೆಯನ್ನು ಬೇರ್ಪಡಿಸಲು ಈ ಆಲೋಚನಾ ಮಾರ್ಗವನ್ನು ಬಳಸಲಾಗುತ್ತದೆ. ಇದು ಹೇಳುವುದು ಇಷ್ಟೇ- ಯಾವುದೇ ವಿಷಯದ ಸಲುವಾಗಿ ಹುಟ್ಟಿಕೊಳ್ಳುವ ಹಲವಾರು ಅಂಶಗಳಲ್ಲಿ/ಸಿದ್ಧಾಂತಗಳಲ್ಲಿ (Hypotheses) ಯಾವುದರಲ್ಲಿ ಅತ್ಯಂತ ಕಡಿಮೆ ಎಣಿಕೆಗಳಿರುತ್ತವೋ (assumptions) ಅದನ್ನು ಆಯ್ದುಕೊಳ್ಳುವುದು ಸೂಕ್ತ. ಇತಿಹಾಸದುದ್ದಕ್ಕೂ ಈ ಕ್ರಮ ತತ್ವಜ್ಞಾನಿಗಳಿಗೆ, ವಿಜ್ಞಾನಿಗಳಿಗೆ ಎರಡರಲ್ಲಿ ಒಂದು ಆಯ್ಕೆ ಮಾಡಲಿ ಬಹಳ ಸಹಾಯ ಮಾಡಿದೆ.
ಇಂಗ್ಲಿಷ್ ತತ್ವಜ್ಞಾನಿ ವಿಲಿಯಂ ಓಕಾಮ್ ಎಂಬುವವನಿಂದ ಇದಕ್ಕೆ ಈ ಹೆಸರು ಬಂದಿದೆ. ಆತನೇ ಕಂಡುಹಿಡಿದ ವಿಧಾನವೆಂದರೆ ತಾತ್ವಿಕ ಜಿಜ್ಞಾಸೆಗಳಲ್ಲಿ ಸಂಕೀರ್ಣ ವಾದಗಳನ್ನು ತಿರಸ್ಕರಿಸಲು ಅವನು ಬಳಸಿದ ಮಾರ್ಗವಿದು. ಹಿಂದೆ ಹಿಂದೆ ಹೋದರೆ ‘ಸರಳತೆಯೇ ಸತ್ಯ’ ಎಂದು ಬೋಧಿಸಿದ ಅರಿಸ್ಟಾಟಲ್ ನೆನಪಾಗುತ್ತಾನೆ. ನ್ಯೂಟನ್ ಸಹ “ಸರಳವಾಗಿದ್ದೆಲ್ಲವೂ ಉಪಯುಕ್ತ; ಸಂಕೀರ್ಣವೆಲ್ಲವೂ ಬಹುತೇಕ ವ್ಯರ್ಥ,” ಎಂಬಂಥ ಮಾತು ಹೇಳಿದ್ದಾನೆ. ವಿಜ್ಞಾನ 3 ಮುಖ್ಯ ತತ್ವ ಪಾಲಿಸುತ್ತದೆ…
Falsifiability- ಈ ವಾದವನ್ನು ಪರೀಕ್ಷಿಸಿ ಸುಳ್ಳು ಎಂದು ಸಾಬೀತುಪಡಿಸಬಹುದೇ? ಇಲ್ಲವಾದಲ್ಲಿ ಅದು ವೈಜ್ಞಾನಿಕ ವಾದವಲ್ಲ. ಉದಾಹರಣೆಗೆ ನಮ್ಮನ್ನೆಲ್ಲ ದೇವರು ಸೃಷ್ಟಿಸಿದ ಎಂಬುದನ್ನು ಸುಳ್ಳು ಎಂದು ಪ್ರಾಯೋಗಿಕವಾಗಿ ಸಾಬೀತುಪಡಿಸಲು ಸಾಧ್ಯವಿಲ್ಲ. ಆದರೆ, ಬಿಗ್‌ಬ್ಯಾಂಗ್ ಸದ್ದನ್ನೇನೂ ಥಿಯರಿಯಾದರೂ ಮುಂದೊಂದು ಅದು ಹೊಸ ಪ್ರಯೋಗಗಳ ಫಲಿತಾಂಶದಿಂದ ಸತ್ಯವೋ ಅಥವಾ ಸುಳ್ಳೋ ಆಗಬಹುದು.
Repeatability- ಯಾವುದೇ ಒಂದು ವಾದವನ್ನು ಮತ್ತೆ ಮತ್ತೆ ಪ್ರಯೋಗಕ್ಕೆ ಒಳಪಡಿಸಿದಾಗ ನಮಗೆ ಅದೇ ಫಲಿತಾಂಶ ಬರುವಂತಿರಬೇಕು. ಉದಾಹರಣೆಗೆ 24 ಗಂಟೆಗೊಮ್ಮೆ ಹಗಲು ರಾತ್ರಿಗಳ ಚಕ್ರ ಉರುಳುತ್ತದೆ. ಎಷ್ಟು ಸಲ ಪರೀಕ್ಷಿಸಿದರೂ ಅದು ಅಚೀಚೆ ಆಗುವುದಿಲ್ಲ. ಅದೇ ಒಂದು ಗಿಣಿ ‘ನಮ್ಮ ಭವಿಷ್ಯ ಹೇಳು,” ಎಂದಾಗ ಅದು ಪ್ರತಿ ಸಲ ಅದೇ ಕಾರ್ಡು ತೆಗೆಯುತ್ತದೆ ಎಂಬ ಗ್ಯಾರಂಟಿ ಇರುವುದಿಲ್ಲ. ಅದು ತೆಗೆಯುವ ಕಾರ್ಡಿನ ಮೇಲೆ ಅಜ್ಜಮ್ಮ ಭವಿಷ್ಯವನ್ನು ಹೊಂದಿಸಿ ಹೇಳುತ್ತಾಳೆ.
Parsimony- ಯಾವುದೇ ಸಂಗತಿ ಅನಗತ್ಯ ವಿವರಣೆಗಳನ್ನು ಹೊಂದಿದೆಯೇ? ಇಲ್ಲಿ ಓಕಾಮ್ ರೇಜರ್ ಮಾರ್ಗ ಅನ್ವಯಿಸುತ್ತದೆ. ಉದಾಹರಣೆಗೆ ಅಮೆರಿಕ ಚಂದ್ರನ ಮೇಲೆ ಹೋಗಿತ್ತು ಎಂದು ನಂಬಲು ಸಾವಿರಾರು ವಿಜ್ಞಾನಿಗಳು ತಂತ್ರಜ್ಞಾನಿಗಳು ಹಲವಾರು ವರ್ಷಗಳು ಬಂದು ಸುಳ್ಳನ್ನು ಮುಚ್ಚಿ ಹಾಕಲಾರರು ಎಂಬ ಸರಳ ಸಂಗತಿಯನ್ನು ಒಪ್ಪಿರಲಾಯಿತು. ಅದೇ ಹೋಗಿಲ್ಲ ಎಂದು ವಾದಿಸಲು ಹತ್ತಾರು ಪ್ರಶ್ನೆಗಳನ್ನೇ ಹಾಕಿಕೊಳ್ಳಬೇಕಾಗುತ್ತದೆ. ಬಾವುಟ ಯಾಕೆ ಹಾರುತ್ತಿತ್ತು? ಚಂದ್ರನಿಂದ ವಾಪಸ್ ಹೇಗೆ ಹಾರಿತ್ತು? ಚುಕ್ಕೆಗಳಿಲ್ಲ ಯಾಕೆ? ನೆರಳು ಬಿದ್ದಿದ್ದಿಲ್ಲ ಯಾಕೆ? ಎಂದೆಲ್ಲಾ.
ಆಯಿತು, ಸರಳವೇ ಶ್ರೇಷ್ಠವೆನ್ನುತ್ತಾ ಅದನ್ನೇ ಸಂಕೀರ್ಣವಾಗಿ ಹೇಳಬಾರದಲ್ಲವೇ? ದೈನಂದಿನ ಅನುಭವದ ಮೂಲಕ ಅರ್ಥಮಾಡಿಕೊಳ್ಳೋಣ. ನಿಮ್ಮ ಸ್ನೇಹಿತ ಹೊಸದಾಗಿ ಹೋಟೆಲ್ ತೆರೆದಿರುತ್ತಾನೆ. ನೀವು ಹೋಗಿ ರುಚಿಯಾದ ಪಾನಿಪುರಿ ತಿಂದು ಚೊಗಣಿ ಮಾಡಿ ಬಂದಿರುತ್ತೀರಿ. ಮಲಗುವಾಗ ಇದ್ದಕ್ಕಿದ್ದಂತೆ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ನೀವು ಹೋಟೆಲ್ ತೆರೆಯಲು ಸ್ನೇಹಿತನಿಗೆ 20 ಲಕ್ಷ ರೂ. ಸಾಲ ಕೊಟ್ಟಿದ್ದೀರಿ. ಅವನು ಬೇರೆ ಗ್ರಾಹಕರಿಗೆ ಕೊಡುವ ಪಾನಿಪುರಿ ಕೊಡದೆ ನಿಮಗೇ ಒಳಗೆ ಹೋಗಿ ಬೇರೊಂದು ತಟ್ಟೆಯಲ್ಲಿ ತಂದುಕೊಟ್ಟಿರುತ್ತಾನೆ. ಅವನು ಹಿಂದೊಮ್ಮೆ ಶಾಲಾ ದಿನಗಳಲ್ಲಿ ನಿಮಗೆ ಬದ್ಧ ವೈರಿಯಾಗಿದ್ದು ಮೋಸ ಮಾಡಿದ್ದು ಮನಸ್ಸಿಗೆ ಬರುತ್ತದೆ. ದೊಡ್ಡವರಾದ ನಂತರ ಮನ್ನಿಸಿ ಸ್ನೇಹಿತರಾಗಿರುತ್ತೀರಿ. ಸ್ನೇಹಿತ ಪಾನಿಪುರಿಯಲ್ಲಿ ವಿಷ ಹಾಕಿರಬಹುದು ಎಂದು ಸಂಶಯ ಬರುತ್ತದೆ. ಹಾಕಿದ್ದಾನೆ ಅಂದರೆ ಸುಮ್ಮನೆ ಹೊಟ್ಟೆನೋವು ಬಂದು ಹೋಗುವಂಥ ವಿಷ ಹಾಕಿರಲ್ಲ, ರಾತ್ರಿ ಮಲಗಿದ್ದಷ್ಟೇ ಗೊತ್ತಾಗುವಂಥದ್ದೋ ಬೆರೆಸಿರುತ್ತಾನೆ. ರಾತ್ರಿಯಿಡೀ ನಿದ್ರೆಯಿಲ್ಲದೆ ಹೊರಳಾಡುತ್ತೀರಿ. ಎಂಥ ತಪ್ಪು ಮಾಡಿದೆ ಎಂದು ನರಳುತ್ತೀರಿ. ಇದು ಅಪ್ರಮಾಣಿಕ ಯೋಜನಾ ಮಾರ್ಗ. ಓಕಾಮ್ ರೇಜರ್ ಪ್ರಕಾರ ಯೋಚಿಸಿದರೆ, ಸ್ನೇಹಿತ ಪಾನಿಪುರಿ ಮತ್ತು ನಿಮ್ಮ ಹೊಟ್ಟೆ ಸದ್ದು ಮಾಡಿದ್ದು ಆಕಸ್ಮಿಕವಾಗಿದ್ದಿರಬಹುದು. ಹೀಗಾದಲ್ಲಿ, ಬರುಬರುತ್ತಾ ಸ್ನೇಹಿತರಾಗುತ್ತಾ ಸರಿಯಾಗುತ್ತದೆ, ಅಷ್ಟೆ.
ವಿಜ್ಞಾನಕ್ಕೆ ಮರಳೋಣ. ಬಹಳ ಹಿಂದೆ ವಿಶ್ವದ ಕೇಂದ್ರಬಿಂದು ಭೂಮಿ, ಭೂಮಿಯ ಸುತ್ತಲೂ ಸಕಲ ಬಾಹ್ಯಾಕಾಶ ಕಾಯಗಳು ಸುತ್ತುತ್ತವೆ ಎಂದು ವೈಜ್ಞಾನಿಕವಾಗಿ ನಂಬಲಾಗಿತ್ತು. ಇದು ಸತ್ಯ ಎಂದು ಸಾಬೀತು ಮಾಡಲು ಹಲವು ಎಣಿಕೆಗಳನ್ನು (Assumptions) ಇಟ್ಟುಕೊಂಡು ಸಂಕೀರ್ಣ ಪಥಗಳನ್ನು ಕಲ್ಪಿಸಿಕೊಂಡು ಗಣಿತದೊಳಗೆ ಕೂರಿಸಲು ಪ್ರಯತ್ನಿಸಲಾಗಿತ್ತು. ಕೊಪರ್ನಿಕಸ್ ಬಂದು ಹೀಲಿಯೋಸೆಂಟ್ರಿಕ್ ಮಾಡೆಲ್ ಮಂಡಿಸಿದಾಗ ಈ ಯಾವುದೇ ಎಣಿಕೆಗಳು ಸಂಕೀರ್ಣ ಪಥಗಳ ಅಗತ್ಯವಿಲ್ಲದೆ ಸೌರಮಂಡಲವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು.
ಹಾಗಂತ ಸರಳತೆಯೇ ಪರಮ ಸತ್ಯವೇ? ಇಲ್ಲ. ನ್ಯೂಟನ್ ಗುರುತ್ವ ಗ್ರಹಗಳ ಪಥ, ಬಾಹ್ಯಾಕಾಶ ಮುಂತಾಗಿ ಎಲ್ಲವನ್ನೂ ಬಹಳ ಸರಳವಾಗಿ ಸೇಬು ತಲೆ ಮೇಲೆ ಬಿದ್ದಷ್ಟೇ ಉತ್ಸಾಹದಿಂದ ನ್ಯೂಟನ್‌ನ ‘ಮೂರು ನಿಯಮ’ಗಳ ಪ್ರಕಾರ ವಿವರಿಸಿದ್ದವು. ಐನ್‌ಸ್ಟೈನ್ ಬರುವವರೆಗೆ ಅದೇ ವೈಜ್ಞಾನಿಕ ಸತ್ಯವಾಗಿತ್ತು. ಐನ್‌ಸ್ಟೈನ್ ಬಂದು ಗುರುತ್ವವನ್ನು ಬಹಳ ಸಂಕೀರ್ಣ ಗಣಿತ ಸೂತ್ರಗಳ ಮೂಲಕ ವಿವರಿಸಿದ. ಗುರುತ್ವದ ಅಲೆಗಳ ರೂಪ, ಕಾಲದೇಶದೊಂದಿಗಿನ ಸಂಬಂಧ ಮುಂತಾದವು ಬೆಳಕಿಗೆ ಬಂತು. ನ್ಯೂಟನ್‌ನ ಹಲವು ‘ಸತ್ಯ’ಗಳನ್ನು ಹೊಡೆದು ಹಾಕಿತು. ಕ್ವಾಂಟಮ್ ಥಿಯರಿ ಗೆ ದಾರಿ ಮಾಡಿಕೊಟ್ಟಿತು. ಹಾಗಂತ ನ್ಯೂಟನ್‌ನ ಗುರುತ್ವ ಸುಳ್ಳೇ? ಇಲ್ಲ, ಆತನ ಸರಳ ಸೂತ್ರಗಳು ಜಗತ್ತಿನ ಸಂಕೀರ್ಣ ಸಂಗತಿಗಳನ್ನು ವಿವರಿಸಲು ಸೋಲುತ್ತವೆ ಎಂದಷ್ಟೇ. ಆದ್ದರಿಂದ ಸರಳ ವಿವರಣೆ ಸುಳ್ಳೆಂದು ಸಾಬೀತು ಪಡಿಸುವ ಪುರಾವೆಗಳಿದ್ದಾಗ ಮಾತ್ರ ನಾವು ಸಂಕೀರ್ಣತೆಯನ್ನು ಪರಿಗಣಿಸಬೇಕು. ಜ್ವರ ಬಂದ ತಕ್ಷಣ ಹತ್ತಾರು ವರ್ಷಗಳಿಂದ ಎಸಗಿದ ಪಾಪಗಳೆಲ್ಲ ಈಗ ಸುತ್ತಿಕೊಳ್ಳುತ್ತಿವೆ, ಸತ್ತೇ ಹೋಗಿಬಿಟ್ಟೆನಿ ಎಂದೆಲ್ಲ ಅನಿಸುತ್ತಿರುತ್ತದೆ. ವೈದ್ಯರು ಗುಣಲಕ್ಷಣಗಳನ್ನು ಪರೀಕ್ಷಿಸಿ ಸದ್ಯದ ಹವಾಮಾನವನ್ನು ಅವಲೋಕಿಸಿ “ಇದು ಸೀಸನಲ್ ಫೀವರ್, ಹೋಗಿ,” ಎಂದು ಮಾತ್ರ ಬರೆದುಕೊಡುತ್ತಾರೆ. ಒಂದೆರಡು ದಿನ ಬಿಟ್ಟು ಬನ್ನಿ ಅಂತಾರೆ. ಆಗಲೂ ಕಡಿಮೆಯಾಗದಿದ್ದರಷ್ಟೆ ಮುಂದಿನ ಹಂತದ ತಪಾಸಣೆ ಮಾಡುತ್ತಾರೆ.
ತಂತ್ರಜ್ಞರೂ ಇದನ್ನೇ ಮಾಡುತ್ತಾರೆ. ನಮ್ಮಲ್ಲಿ KISS (Keep It Simple, Stupid) ಎಂಬ ನಿಯಮ ಇದೆ. ಹೊಸಬರು ಸಣ್ಣಪುಟ್ಟ ಸಮಸ್ಯೆಗಳಿಗೆ ಒಕ್ಕಾಪಟ್ಟಿ ತಲೆಯೋಡಿಸಿ ಎಂಜಿನಿಯರಿಂಗ್‌ನಲ್ಲಿ ಓದಿದ್ದನ್ನೆಲ್ಲಾ ಅಳವಡಿಸಿ ಕೋಡ್ ಮಾಡಿರುತ್ತಾರೆ. ಎಷ್ಟೋ ಕಡೆ ಅಂಥ ಕೋಡಿಂಗ್ ಬೇಕೇ ಇರಲ್ಲ, ಸುಮ್ಮನೆ ‘ಇದು ಮಾಡಬೇಡಿ’ ಎಂದು ಬಳಕೆದಾರರ ಕೈಪಿಡಿಯಲ್ಲಿ (user guide) ಬರೆದರೆ ಸಾಕಾಗುತ್ತಿತ್ತು.
