ಹೈಡ್ರೋಪ್ಲೇನಿಂಗ್ ಎಂದರೇನು?

article5 cover

ಕಳೆದ ಗುರುವಾರ ನಾನು ಮೈಸೂರಿನಿಂದ ಬೆಂಗಳೂರಿಗೆ ಬರುವಾಗ ಮಾರ್ಗಮಧ್ಯೆ ಒಂದು ಅಪಘಾತ ನೋಡಿದೆ. ಸಮಯ ಸಂಜೆ ಸುಮಾರು ಮೂರು ಗಂಟೆ. ಹೆದ್ದಾರಿಯ ಕೆಳಗೆ ಅಡ್ಡ ರಸ್ತೆಯೊಂದು ಅಡಕೊಂದು ಗವಾಕ್ಷಿಯಿದ್ದು ಈ ಕಾರು ಗವಾಕ್ಷಿಯ ಅಂಚಿನ ಮೇಲೆ ಕೂತಿತ್ತು, ಮೈಸೂರಿನ ದಿಕ್ಕಿನಲ್ಲಿ ಜನ ನೆರೆದಿದ್ದರು, ಒಬ್ಬರ ಕೈಗೆ ಬ್ಯಾಂಡೇಜ್ ಕಟ್ಟುತ್ತಿದ್ದರು, ರಕ್ತ ಸೋರುತ್ತಿತ್ತು. ‘ಏನಾಯ್ತು?’, ಕೇಳಿದೆ. ‘ಮಳೆ ನೀರಿನಿಂದ ಸ್ಕಿಡ್ಡಾಗಿದೆ’ ಉತ್ತರ. ‘ಅದು ಹೇಗೆ? ಈ ಗವಾಕ್ಷಿ ಮೇಲೆ ಹಾರಿ ಕೂತಿದೆಯಲ್ಲ?’ ‘ಇದು ಬೆಂಗಳೂರಿನ ಕಡೆಗೆ ಹೋಗುತ್ತಿದ್ದ ಕಾರು. ನೀರಿನಿಂದ ಸ್ಕಿಡ್ಡಾಗಿ ಡಿವೈಡರ್‌ಗೆ ಹೊಡೆದು ಅದೃಷ್ಟವಶಾತ್ ಗವಾಕ್ಷಿಯ ಗೋಡೆಗೆ ಬಡಿದು ತಿರುಗಿ ಮೈಸೂರಿನ ಮುಖ ಮಾಡಿ ಕೂತಿದೆ’.

ನಾನು ಸಹ ಅಲ್ಲಲ್ಲಿ ನಿಂತಿದ್ದ ನೀರು ದಾಟಿಕೊಂಡು ಬಂದಿದ್ದೆ. ಕೆಲವೊಮ್ಮೆ ರಸ್ತೆಯಲ್ಲಿ ನಿಂತ ನೀರಲ್ಲಿ ಚಕ್ರ ಹರಿದಾಗ ನೀರು ಹಾರುತ್ತದಲ್ಲ, ಅದು ಮೋಜಿನಂತಿರುತ್ತದೆ. ಸಣ್ಣ ರಸ್ತೆಗಳಲ್ಲಿ ಹಾಗೆ ಮಾಡಿದರೆ ಪಕ್ಕದ ಅಂಗಡಿಗಳ ಅಂಗಳಕ್ಕೆ ಅಥವಾ ಪಾದಚಾರಿಗಳ ಮೇಲೆ ಹಾರುತ್ತದೆ. ಹಾಗೆ ಮಾಡಬಾರದು. ಹೆದ್ದಾರಿಗಳು ವಿಶ್ರಾಮದಂತಿರುತ್ತವಂದು ಹಾರಿಸಬಹುದೇ?

ಯಾವುದೇ ವಾಹನ ಚಲಿಸಬೇಕೆಂದರೆ ಇಂಜಿನ್ನು ಪೆಟ್ರೋಲ್ ಉರಿಸಿ ಟಾಯರನ್ನು ತಿರುಗಿಸಿಬಿಟ್ಟರೆ ಸಾಕಾಗಲ್ಲ. ಅದು ಅರ್ಧ ಪ್ರಯತ್ನವಷ್ಟೇ. ಇನ್ನರ್ಧ ಪ್ರಯತ್ನದಲ್ಲಿ ನಿಮ್ಮ ಟಾಯರು ಮತ್ತು ನೆಲ ಸಹಕರಿಸಬೇಕಿರುತ್ತದೆ. ಟಾಯರುಗಳನ್ನು ರಬ್ಬರಿನಿಂದ ತಯಾರಿಸುವುದು ಮತ್ತು ರಸ್ತೆಗಳನ್ನು ಒರಟಾಗಿಸುವುದು ಇದಕ್ಕಾಗಿ. ರಬ್ಬರಿನ ಟಾಯರಿನ ಮೇಲ್ಪದರ ಒರಟು ರಸ್ತೆಯ ತರಕಲಿನೊಳಗೆ ಕೂರುತ್ತದೆ, ಚಕ್ರ ತಿರುಗಿದಾಗ ರಸ್ತೆಯನ್ನು ಹಿಂದೆ ತಳ್ಳಿ ಕಾರು ಮುಂದೆ ಚಲಿಸುತ್ತದೆ. ಒಂದು ವೇಳೆ ರಸ್ತೆಯು ಮನೆಯ ಟೈಲ್ಸ್‌ಗಳಷ್ಟು ಅಥವಾ ಟಾಯರುಗಳು ಸ್ಟೀಲ್ ಪಾತ್ರೆಗಳಷ್ಟು ನಯವಾಗಿದ್ದಿದ್ದರೆ ಚಕ್ರ ಅಲ್ಲಲ್ಲೇ ತಿರುಗಿ ಸುಮ್ಮನಾಗುತ್ತವೆ.

ಹೌದು, ಹಾಗಾದರೆ ರೈಲುಗಳ ಚಕ್ರಗಳಲ್ಲಿ ರಬ್ಬರೂ ಇಲ್ಲ, ಅವುಗಳ ಹಳಿಗಳು ಒರಟೂ ಇಲ್ಲ, ಅವು ಹೇಗೆ ಚಲಿಸುತ್ತವೆ? ಅಲ್ಲಿ ಬಳಸುವ ವಿಜ್ಞಾನವೇ ಬೇರೆ! ಅಲ್ಲಿನ ಟಾಯರು ಮತ್ತು ಹಳಿಗಳ ನಡುವೆ ಘರ್ಷಣೆ ತೀರಾ ಎಂದರೆ ತೀರಾ ಕಡಿಮೆ. ರೈಲಿನ ಎಂಜಿನ್ ಬೋಗಿಗಳನ್ನು ತಳ್ಳಿದಾಗ ಅಥವಾ ಎಳೆದಾಗ ಹಳಿಗಳೊಂದಿಗಿನ ಸಣ್ಣಮಟ್ಟದ ಘರ್ಷಣೆಯಿಂದು ರೈಲು ಚಲಿಸುತ್ತದೆ. ಆನಂತರ ಅದು ವೇಗ ಪಡೆಯುವುದು ಎಂಜಿನ್ನಿನ ಶಕ್ತಿ ಮತ್ತು ಒಟ್ಟು ತೂಕದಿಂದ ಉಂಟಾಗುವ ಮೊಮೆಂಟಮ್ಮಿನಿಂದ! ದರ್ಪದ ಮನುಷ್ಯ ಓಡಿದ ಹಾಗೆ. ಹಾಗಾಗಿಯೇ ರೈಲುಗಳಿಗೆ ತಕ್ಷಣ ಬ್ರೇಕ್ ಹಾಕಲು ಅಸಾಧ್ಯ! ಅಂತೆಯೇ ಅವುಗಳಿಗೆ ಇಂಜಿನ್ ಆನ್ ಮಾಡಿದಾಕ್ಷಣ ದುರಂತ ಓಡುವುದೂ ಅಸಾಧ್ಯ. ತಮಗೊಂದೇ ಸಿದ್ಧಪಡಿಸಿರುವ ಉಬ್ಬು ತಗ್ಗು ತಿರುವುಗಳಿರದ ರಸ್ತೆಗಳಿಂದಾಗಿ ರೈಲುಗಳಿಗೆ ಇತರೆ ವಾಹನಗಳಿಗೆ ಬೇಕಾದ ಚಕ್ರ-ರಸ್ತೆಯ ನಡುವಿನ ಘರ್ಷಣೆ ಅಗತ್ಯವಿಲ್ಲ.

ಕಾರುಗಳಿಗೆ ಮರಳೋಣ. ಇಂತಹ ಕಾರು ರಸ್ತೆ ಮೇಲೆ ವೇಗವಾಗಿ ಚಲಿಸುತ್ತಿರುವಾಗ ತಕ್ಷಣ ನೀರು ಎದುರಾದರೆ ಚಕ್ರ ಮತ್ತು ರಸ್ತೆಯ ನಡುವೆ ನೀರಿನ ಪದರ ಬಂದು ಈ ಘರ್ಷಣೆ ಇಲ್ಲವಾಗುತ್ತದೆ. ಚಕ್ರ ರಸ್ತೆಯ ಸಂಪರ್ಕ ಕಡಿದುಕೊಳ್ಳುತ್ತದೆ. ಒಂಥರ ಬಾಬಾಗಳು ನೀರಿನ ಮೇಲೆ ನಡೆದು ತೋರಿಸ್ತೀನಿ ಅಂತಾರಲ್ಲ ಹಾಗೆ. ಹೀಗಾದಾಗ ಚಾಲಕನಿಗೆ ಕಾರಿನ ನಿಯಂತ್ರಣ ತಪ್ಪುತ್ತದೆ, ಎತ್ತಲೋ ಎಳೆದಂತಾಗುತ್ತದೆ. ಇದನ್ನೇ ‘ಹೈಡ್ರೋಪ್ಲೇನಿಂಗ್’ ಎಂದು ಕರೆಯುತ್ತಾರೆ. ಇದನ್ನು ತಡೆಯಲೆಂದೇ ಈ ಚಕ್ರಗಳ ಮೇಲೆ ರಂಗೋಲಿ ಬಿಟ್ಟಂತೆ ಗೆರೆಗಳನ್ನು ಕೊರೆದಿರುವುದು. ಇವನ್ನು ‘ಥ್ರೆಡ್’ ಎನ್ನುತ್ತಾರೆ. ಈ ‘ಥ್ರೆಡ್’ಗಳ ನಡುವೆ ಗುಂಡಿಗಳಿರುತ್ತವಲ್ಲ, ಅವು ರಸ್ತೆ ಮೇಲಿನ ಸಾಧಾರಣ ಮಟ್ಟದ ನೀರಿನಿಂದ ರಕ್ಷಿಸುತ್ತವೆ. ಅರ್ಥಾತ್ ಚಕ್ರ ಚಲಿಸುವಾಗ ನೀರು ಎದುರಾದರೆ ನೀರಿಗೆ ಈ ಗುಂಡಿಗಳೊಳಗೆ ಉಸಿರಾಡಲು ಜಾಗ ಸಿಕ್ಕಿ ‘ಥ್ರೆಡ್’ಗಳಿಗೆ ನೀರಿನ ಅಡಿಯಿರುವ ರಸ್ತೆಯ ಸ್ಪರ್ಶ ಸಿಗುತ್ತದೆ. ಕಾರು ನಿರಾತಂಕವಾಗಿ ಮುಂದೆ ಚಲಿಸುತ್ತದೆ. ಸರಿ, ಈ ಥ್ರೆಡ್‌ಗಳು ಅದೇಕೆ ಸಾಫ್ಟ್‌ಟೀಯಾಗಿರುವುದು? ಈ ಥ್ರೆಡ್‌ಗಳು ಹೈಡ್ರೋಪ್ಲೇನಿಂಗ್ ತಡೆಯುವುದಷ್ಟೇ ಅಲ್ಲದೆ ಅವು ನೀರನ್ನು ಹೊರ ಹಾಕುತ್ತವೆ ಸಹ. ಗಮನಿಸಿದ್ದಲ್ಲಿ ಒದ್ದೆ ರಸ್ತೆಯಲ್ಲಿ ಚಲಿಸುವಾಗ ನೀರು ಸಿಡಿಯುತ್ತಿರುತ್ತದೆ! ಚಕ್ರ ಹಾದು ಹೋದ ಪಥದಲ್ಲಿ ರಸ್ತೆ ಒಣಗಿರುತ್ತದೆ. ಇದರಿಂದ ನಿಮಗೆ ಅರ್ಥವಾಗಿರಬೇಕು ನಿಮ್ಮ ಕಾರಿನ ಚಕ್ರಗಳ ಮೇಲಿನ ರಂಗೋಲಿಗಳು ಸವೆದಿದ್ದರೆ ಥ್ರೆಡ್‌ಗಳು ಇಲ್ಲವಾಗಿ ನಿರಪಾಯಕಾರಿ ಮಟ್ಟದ ನೀರೂ ನಿಮ್ಮನ್ನು ಜಾರಿಸಿಬಿಡುತ್ತದೆ! ಆದ್ದರಿಂದಲೇ ಕಾಲಕಾಲಕ್ಕೆ ಟಾಯರುಗಳನ್ನು ಬದಲಿಸಬೇಕು ಎನ್ನುವುದು.

ಸರಿ, ರಸ್ತೆತುಂಬ ನೀರು ತುಂಬಿಕೊಂಡಿದ್ದರೆ ಏನು ಮಾಡುವುದು? ಅಗತ್ಯವಾಗಿ ನೀರಿನ ಮೂಲಕ ಹಾದು ಹೋಗಬಹುದು, ಆದರೆ ನಿಧಾನವಾಗಿ. ಚಕ್ರಗಳು ರಸ್ತೆಯ ಸಂಪರ್ಕ ಕಡಿದುಕೊಳ್ಳದ ಹಾಗೆ. ಸಾಮಾನ್ಯವಾಗಿ ಜನ ಹೀಗಾದಾಗ ಸಡನ್ನಾಗಿ ಬ್ರೇಕ್ ಹಚ್ಚಿಬಿಡುತ್ತಾರೆ. ಹೈಡ್ರೋಪ್ಲೇನಿಂಗ್ ಸಂದರ್ಭದಲ್ಲಿ ಸಡನ್ ಬ್ರೇಕ್ ಹಚ್ಚಿಬಿಟ್ಟರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಇದು ಯಾಕೆಂದರೆ ಬ್ರೇಕ್ ಒತ್ತಿದಾಗ ಟಾಯರು ರಸ್ತೆಯ ಸಂಪರ್ಕದಲ್ಲಿ ಇಲ್ಲದಿರುವುದರಿಂದ ಬ್ರೇಕಿನ ಪರಿಣಾಮ ಹಿಂದಿನ ಅಥವಾ ಮುಂದಿನ ಯಾವ ಚಕ್ರಗಳ ಮೇಲೆ ಯಾವ ಪರಿಣಾಮ ಬೀರುತ್ತದೆ ಹೇಳಲಾಗುವುದಿಲ್ಲ, ಅಲ್ಲಿ ತನಕ ಅಸ್ತಿತ್ವ ಎಳೆದಾಡುತ್ತಿದ್ದ ಕಾರು ಗರಕ್ಕನೆ ಉಲ್ಟಾ ತಿರುಗಿಬಿಡಬಹುದು, ಕಾರನ್ನು ರಸ್ತೆಯಿಂದಾಚೆ ಎಸೆದುಬಿಡಬಹುದು. ಆರಂಭದಲ್ಲಿ ಉದಾಹರಿಸಿದ ಅಪಘಾತದಲ್ಲಿ ಇದೇ ಆಗಿರುವುದು ಅನಿಸುತ್ತದೆ.

ಹಾಗಾದರೆ ಏನು ಮಾಡಬೇಕು? ಆಕ್ಸಲರೇಟರಿನ ಮೇಲಿನ ಕಾಲನ್ನು ತೆಗೆಯಬೇಕಷ್ಟೆ. ಸ್ಟಿಯರಿಂಗ್‌ನ್ನು ಬಿಗಿಯಾಗಿ ಹಿಡಿದು ಕಾರನ್ನು ನಿಯಂತ್ರಿಸುತ್ತಿರಬೇಕು. ವೇಗ ತಗ್ಗುತ್ತಿದ್ದಂತೆ ಚಕ್ರಗಳು ರಸ್ತೆಯ ಸಂಪರ್ಕ ಪಡೆಯಲಾರಂಭಿಸುತ್ತವೆ. ಸಂಪರ್ಕ ಸಿಕ್ಕೊಡನೆ ಕಾರಿನ ನಿಯಂತ್ರಣ ಸಿಕ್ಕಿಬಿಡುತ್ತದೆ. ಹೀಗಾಗಿ ಮೋಜಿನಗಾದರೂ ಸರಿ, ವಿನಾಕಾರಣವಾಗೂ ಸರಿ, ರಸ್ತೆಯ ಮೇಲಿನ ನೀರಿನಿಂದ ದೂರ ಇರಿ. ದಾರಿ ಇಲ್ಲವಾದಲ್ಲಿ ನಿಧಾನವಾಗಿ ಚಲಿಸಿ. ಮಳೆಯಲ್ಲೂ ನಿಧಾನವೇ ಪ್ರಧಾನ.

ಮುಖ್ಯವಾಗಿ ಜನ ಇಂತಹ ಅಪಾಯಗಳನ್ನು ಎದುರಿಸದಿರಲೆಂದು ರಸ್ತೆಗಳನ್ನು ವೈಜ್ಞಾನಿಕವಾಗಿ ಕಟ್ಟುತ್ತಾರೆ. ರಸ್ತೆ ಡಿವೈಡರಿನ ಕಡೆ ಉಬ್ಬಿ ಪಾದಚಾರಿ ಕಡೆಗೆ ತಗ್ಗಿರಬೇಕು. ಆಗ ಮಳೆಯ ನೀರು ತಂತಾನೆ ಸೈಡಿಗೆ ಹರಿಯುತ್ತದೆ. ಇಷ್ಟು ಮಾತ್ರ ಸಾಲದು! ಹರಿದ ನೀರು ಮುಂದೆ ಹೋಗಲು ಜಾಗ ಮಾಡಿರಬೇಕು. ಇಲ್ಲಾಂದರೆ ಅಲ್ಲಿಯೇ ಕಟ್ಟಿಕೊಳ್ಳುತ್ತದೆ. ಕ್ರಮೇಣ ರಸ್ತೆಯನ್ನು ಆವರಿಸಿಕೊಳ್ಳುತ್ತದೆ. ಮೈಸೂರು-ಬೆಂಗಳೂರು ರಸ್ತೆ ಎಷ್ಟು ವೈಜ್ಞಾನಿಕ ಅಂದರೆ ಇಲ್ಲಿ ನೀರು ಡಿವೈಡರಿನ ಕಡೆಗೆ ಕಟ್ಟಿಕೊಂಡು ಕರೆಯಾಗಿರುತ್ತದೆ!

Leave a Comment

Your email address will not be published. Required fields are marked *