ಈ ವರ್ಷದ ಆರಂಭದಲ್ಲಿ ಮೈಕ್ರೋಸಾಫ್ಟ್ ಕಂಪನಿ ಅರ್ಚನಾ ಮನೋಹರನ್ ಎಂಬುವವರನ್ನು ಉದ್ಯೋಗಕ್ಕೆ ಸೇರಿಸಿಕೊಂಡಿತು. ಇವರು ಅದಕ್ಕೂ ಮೊದಲು ಸಣ್ಣಗಾತ್ರದ ನ್ಯೂಕ್ಲಿಯರ್ ರಿಯಾಕ್ಟರುಗಳನ್ನು ತಯಾರಿಸುವ ಕಂಪನಿಯ ನಿರ್ದೇಶಕಿಯಾಗಿದ್ದರು. ಇವರು ಇಲ್ಲಿಯ ಸಾಫ್ಟ್ವೇರು ಇಲ್ಲಿಯ ನ್ಯೂಕ್ಲಿಯರ್ ರಿಯಾಕ್ಟರು?
ಸುದ್ದಿಯೇನೆಂದರೆ ಮುಂಬರುವ ದಿನಗಳಲ್ಲಿ ಮೈಕ್ರೋಸಾಫ್ಟ್ ತನ್ನ ಡೇಟಾಸೆಂಟರುಗಳ ವಿದ್ಯುತ್ ಬೇಡಿಕೆಗಾಗಿ ಸಣ್ಣ ಗಾತ್ರದ ನ್ಯೂಕ್ಲಿಯರ್ ರಿಯಾಕ್ಟರುಗಳ ಮೊರೆ ಹೋಗಲಿದೆ ಎಂದು. ಮೊದಲಿಗೆ ಡೇಟಾ ಸೆಂಟರೆಂದರೆ ಡಿಜಿಟಲೀಕರಣಗೊಂಡಿರುವ ಜಗತ್ತಿನ ಗರ್ಭಗುಡಿ. ಅದು ಬ್ಯಾಂಕುಗಳಿರಲಿ, ಫೇಸ್ಬುಕ್ಕಿರಲಿ, ಇನ್ಸ್ಟಾಯಿರಲಿ, ನಮ್ಮೆಲ್ಲರ ಮಾಹಿತಿ ಕೆಬಿಹೆಚ್ ಆಗಿರುವ, ನಾವು ಬಳಸುವ ಸಾಫ್ಟ್ವೇರುಗಳ ಜೀವತಾಣ ಈ ಡೇಟಾ ಸೆಂಟರು. ಇಲ್ಲಿನೂರಾರು ಶಕ್ತಿಶಾಲಿ ಕಂಪ್ಯೂಟರುಗಳನ್ನು ರ್ಯಾಕ್ ಕಟ್ಟಿ ಗಳಂತೆ ಒಂದರ ಮೇಲೊಂದು ಪೇರಿಸಲಾಗಿರುತ್ತದೆ. ಅಷ್ಟು ಕಂಪ್ಯೂಟರುಗಳು ಮುನ್ನೂರು ಅರವತ್ತೈದು ದಿವಸ 24X7 ಓಡುತ್ತಿರುತ್ತವೆ. ಹಾಗಾಗಿ ಅಷ್ಟೂ ಕಂಪ್ಯೂಟರುಗಳು ನಿರಂತರ ವಿದ್ಯುತ್ ಬೇಡುತ್ತವೆ.
ಎರಡನೆಯದಾಗಿ- ನಾವು ದಿನನಿತ್ಯ ಬಳಸುವ ಲ್ಯಾಪಟಾಪ್ಗಳಲ್ಲಿ ಫ್ಯಾನುಗಳು ಇರುತ್ತವಲ್ಲ ಅವು ಇರುವುದು ಸಿಪಿಯು ಹೀಟಾಗುವುದನ್ನು ತಪ್ಪಿಸಲು. ತೀರಾ ಗೌಡ್ರು ವಿಧಾನ ಅನಿಸುತ್ತದಲ್ಲವೇ? ಬಿಸಿಯಾದಾಗ ಫ್ಯಾನ್ ಹಾಕಿಕೊಂಡ ಹಾಗೆ. ನಮ್ಮಲ್ಲಿ ಕೆಲವು ಸಮಸ್ಯೆಗಳಿಗೆ ಇರುವ ತಂತ್ರಜ್ಞಾನಗಳೂ ತೀರಾ ಬೇಸಿಕ್ಕು. ಇರಲಿ, ಫ್ಯಾನುಗಳಿದ್ದೂ ನಾವು ಒಂದೇ ಸಮನೆ ಲ್ಯಾಪಟಾಪ್ ಉಪಯೋಗಿಸಿದರೆ ತುಂಬಾ ಹೀಟಾಗಿ ಆಫ್ ಮಾಡಬೇಕಾಗುತ್ತದೆ.
ವಿಷಯವೇನೆಂದರೆ ದೊಡ್ಡ ಕಂಪನಿಗಳು ಬಳಸುವ ಶಕ್ತಿಶಾಲಿ ಸರ್ವರುಗಳಲ್ಲಿ ಇರುವುದೂ ಫ್ಯಾನುಗಳೇ! ಅಂದರೆ ಯೋಚನೆ ಮಾಡಿ, 365X24X7 ಓಡಬೇಕಾದ ಈ ಸರ್ವರುಗಳನ್ನು ಫ್ಯಾನುಗಳು ಎಷ್ಟು ತಾನೆ ಕೂಲ್ ಮಾಡಬಲ್ಲವು? ಅದರಿಂದ ಡೇಟಾಸೆಂಟರುಗಳಲ್ಲಿ ನಿರಂತರವಾಗಿ ಓಡುವ ಬೃಹತ್ತಾದ ಎಸಿಗಳಿರುತ್ತವೆ. ತಲೆ ಮೇಲಿಂದ ದೊಡ್ಡ ಎಸಿ (ಎಸಿ ಪೈಪು) ಇದ್ದರೆ, ನೆಲಮಳಿಗೆ ಕೊರೆದು ಕೆಳಗಿಂದಲೂ ಒಂದು ಡಕ್ಟ್ ಬಿಟ್ಟಿರುತ್ತಾರೆ. ಅರ್ಥಾತ್ ಎಲ್ಲ ದಿಕ್ಕುಗಳಿಂದಲೂ ಎಸಿ ನುಗ್ಗುತ್ತಿರುತ್ತದೆ. ಇದರಿಂದಾಗಿ ಡೇಟಾಸೆಂಟರುಗಳಲ್ಲಿ ಎಂಜಿನಿಯರುಗಳಿಗೆ ಪರಸ್ಪರ ಮಾತಾಡುವುದು ಕೇಳಿಸಲ್ಲ ಕಿವಿ ತೂತುಗಳು ಮುಚ್ಚಿಕೊಂಡಿರುತ್ತದೆ. ಅಲ್ಲಿ ಒಂದು ಗಂಟೆ ನಿರಂತರ ನಿಲ್ಲಲಾಗಲ್ಲ ಸಹ. ಕೊರೆಯುವ ಚಳಿಯಲ್ಲೇ ಇಲ್ಲ ನೆಲದಿಂದಲೂ ಎಸಿಯ ಪ್ರವಾಹ ಉಕ್ಕುತ್ತಿದ್ದು ಸೆಟ್ಟೇ ಹೋಗಿಬಿಡವೆ ಅನಿಸುತ್ತದೆ. ಕೆಲವೇ ನಿಮಿಷಗಳಲ್ಲಿ ತಲೆನೋವು ಆವರಿಸಿಕೊಳ್ಳುತ್ತದೆ.
ಮೂರನೆಯದಾಗಿ- ಯಾವುದೇ ಕಂಪನಿ ಕೇವಲ ಒಂದು ಡೇಟಾ ಸೆಂಟರಿಗೆ ನಂಬುವುದಿಲ್ಲ ಸದಾ ಯುದ್ಧ, ಭೂಕಂಪ, ಪ್ರವಾಹಗಳ ಕರಿಮೋಡ ನೆತ್ತಿಮೇಲೆ ತೂಗುತ್ತಿರುತ್ತದೆ. ಒಂದು ಕಡೆ ಭೂಕಂಪವಾಯಿತೆಂದು ಬ್ಯಾಂಕು ಆಸ್ಪತ್ರೆಗಳನ್ನು ಶಟ್ಡೌನ್ ಮಾಡಲಾಗಲ್ಲ ಅದರಿಂದ ಕಂಪನಿಗಳು ಒಂದು ಸಾಲದು ಎಂದು ಎರಡು ಮೂರು ಡೇಟಾ ಸೆಂಟರುಗಳನ್ನು ಹೊಂದಿರುತ್ತವೆ. ಬೇಗಡ ಕೈ ಒಂದು ಕಳೆದುಹೋದರೆ ಇನ್ನೊಂದಿರಲಿ ಎಂದು ಇಟ್ಟಿರ್ತೀವಲ್ಲ ಹಾಗೆ. ಇದನ್ನು ಡಿಸಾಸ್ಟರ್ ರಿಕವರಿ ಎನ್ನುತ್ತಾರೆ. ಅರ್ಥಾತ್ ಅಷ್ಟೂ ಡೇಟಾ ಸೆಂಟರುಗಳು ನಿರಂತರವಾಗಿ ಪರಸ್ಪರ ಮಾಹಿತಿಯನ್ನು ಕಾಪಿ ಮಾಡಿಕೊಳ್ಳುತ್ತಿರುತ್ತವೆ. ಕೊನೆಯದಾಗಿ ಎಐ. ಕಂಪ್ಯೂಟಿಂಗ್ ಶಕ್ತಿ ಮತ್ತು ವಿದ್ಯುತ್ ಬೇಡಿಕೆಯ ವಿಷಯದಲ್ಲಿ ಎಐ ಬಕಾಸುರನೇ ಸರಿ. ಈ ತನಕದ ಸರ್ವರುಗಳು 1kW ವಿದ್ಯುತ್ ಬೇಡಿದರೆ ಒಂದು ಎಐ ಸರ್ವರು 2kW-4kW ವಿದ್ಯುತ್ ಬೇಡುತ್ತದೆ. ಅಂದರೆ ಎರಡರಿಂದ ನಾಲ್ಕು ಪಟ್ಟು ಹೆಚ್ಚು ಇದರಿಂದಾಗಿ ಅದು ಬೇಡುವ ಕೂಲಿಂಗ್ ಶಕ್ತಿಯೂ ಹೆಚ್ಚು ಒಂದಕ್ಕೊಂದು ಸೇರಿಕೊಂಡು 2030ರಷ್ಟಿಗೆ ಡೇಟಾಸೆಂಟರುಗಳ ವಿದ್ಯುತ್ ಬೇಡಿಕೆ 160% ಏರಲಿದೆ ಎಂದು ಅಂದಾಜಿಸಲಾಗಿದೆ.
ಐಟಿಯೆತರ ಕಂಪನಿಗಳು ಕೆಲವೇ ಕೆಲವು ಡೇಟಾಸೆಂಟರುಗಳನ್ನು ಹೊಂದಿದ್ದರೆ ಗೂಗಲ್ ಮೈಕ್ರೋಸಾಫ್ಟ್ ಅಮೆಜಾನ್ನಂತಹ ಕ್ಲೌಡ್ ಸರ್ವಿಸು ಒದಗಿಸುವ ಕಂಪನಿಗಳು ನೂರಾರು ಡೇಟಾಸೆಂಟರುಗಳನ್ನು ಹೊಂದಿರುತ್ತವೆ. ಈ ಕಾರಣದಿಂದ ಈ ಕಂಪನಿಗಳು ಬಹಳ ವರ್ಷಗಳಿಂದ ವಿದ್ಯುತ್ಗಾಗಿ ಪರ್ಯಾಯ ಸಂಪನ್ಮೂಲ ಹುಡುಕುತ್ತಿವೆ.
ಗೂಗಲ್ ಬಹಳ ವರ್ಷಗಳಿಂದ ನವೀಕರಿಸಬಹುದಾದ ವಿದ್ಯುತ್ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿದೆ. ಅಮೆಜಾನ್ ಸುಮಾರು ವಿಂಡ್ ಮತ್ತು ಸೋಲಾರ್ ಎನರ್ಜಿ ಪ್ರಾಜೆಕ್ಟ್ಗಳಲ್ಲಿ ಹಣ ಹೂಡಿದೆ. ಮೈಕ್ರೋಸಾಫ್ಟ್ 2030ರಷ್ಟಿಗೆ ತಾನೂ ಝೀರೋ-ಕಾರ್ಬನ್ ಆಗುವುದಾಗಿ ಶಪಥ ಮಾಡಿದೆ.
ಝೀರೋ ಕಾರ್ಬನ್ ಗುರಿಯಲ್ಲಿ ಸಣ್ಣ ಗಾತ್ರದ ನ್ಯೂಕ್ಲಿಯರ್ ರಿಯಾಕ್ಟರುಗಳೂ ಒಂದು. ಇವು ಬಹಳ ಸುರಕ್ಷಿತ ಮತ್ತು ಕಾರ್ಬನ್ ಮುಕ್ತ ಎಂದು ಹೆಸರು ಮಾಡಿವೆ. ಇದೇ ಮುಂದಿನ ಪರ್ಯಾಯ ಮಾರ್ಗವೋ ಅಲ್ವೋ ಕಾಲವೇ ಹೇಳಬೇಕು.
ಅಂದಹಾಗೆ ಆರಂಭದಲ್ಲಿ ಗೌಡ್ರು ವಿಧಾನ ಎಂದು ಹೇಳಿದ್ನಲ್ಲ, ಬಿಸಿಯಾದರೆ ಫ್ಯಾನು ಹಾಕಿಕೊಳ್ಳುವುದು, ತಂತ್ರಜ್ಞಾನ ಸ್ವಲ್ಪ ಮಾತ್ರ ಮುಂದುವರಿದಿದೆ ಈಗ. ವಿನೂತನ ಹೊಸ ಐಡಿಯಾ ಅಂದರೆ ಈಗ ಫ್ಯಾನಿನ ಬದಲು ತಣ್ಣೀರು ಸುರಿಸಿಕೊಳ್ಳಬಹುದಾಗಿದೆ. ಅರ್ಥಾತ್ ಕಂಪ್ಯೂಟರುಗಳಿಗೆ ಲಿಕ್ವಿಡ್ ಕೂಲಿಂಗ್ ಟೆಕ್ನಾಲಜಿ ಬಂದಿದೆ. ಮನುಷ್ಯರ ಕರುಳುಗಳಿದ್ದ ಹಾಗೆ ಸರ್ವರುಗಳಿಗೆ ಸಣ್ಣ ಸಣ್ಣ ಪೈಪುಗಳನ್ನು ಅಳವಡಿಸಲಾಗಿರುತ್ತದೆ. ಅವುಗಳಲ್ಲಿ ವಿಶೇಷವಾದ ಥಂಡಿ ನೀರನ್ನು (ಕೂಲೆಂಟ್) ಹರಿಸಿ ಕಾವು ಇಳಿಸಲಾಗುತ್ತದೆ. ಇದು ಸದ್ಯಕ್ಕಿನ್ನೂ ಡೇಟಾ ಸೆಂಟರುಗಳ ಮಟ್ಟದಲ್ಲಿದೆ. ಜನಸಾಮಾನ್ಯರ ನಿತ್ಯ ಬಳಕೆಯ ಕಂಪ್ಯೂಟರುಗಳಲ್ಲಿ ಬಂದಿಲ್ಲ, ಲ್ಯಾಪಟಾಪ್ಗಳಿಗೆ ಬರುವುದೇ ಇಲ್ಲವೆನ್ನಬಹುದು. ಬಂದರೆ ಗಾಡಿಗೆ ಆಗಲೆ ಪೆಟ್ರೋಲ್ ತುಂಬಿಸಿದಂಗ ಲ್ಯಾಪಟಾಪಿಗೆ ಕೂಲೆಂಟ್ ತುಂಬಿಸಬೇಕಾಗುತ್ತದೆ. ಕಷ್ಟದ ಕೆಲಸ. ಇರಲಿ, ಲಿಕ್ವಿಡ್ ಕೂಲಿಂಗಿನ ಅನುಕೂಲಗಳು ಬಹಳ. ಮೊದಲಿಗೆ ಇವು ಫ್ಯಾನಿಗಿಂತ ಉತ್ತಮವಾಗಿ ಕೆಲಸ ಮಾಡುತ್ತವೆ. ಎರಡನೆಯದಾಗಿ ಸದ್ದಿಲ್ಲದೆ ಕೆಲಸ ಮಾಡುತ್ತವೆ. ಡೇಟಾಸೆಂಟರುಗಳು ಹಳ್ಳಿಕಾಪ್ಪರಂಗೆ ಅನಿಸಲ್ಲ ಮತ್ತು ಸರ್ವರುಗಳು ಅತ್ಯಂತ ವೇಗವಾಗಿ ಕೆಲಸ ಮಾಡುವಾಗಲೂ ಅವುಗಳ ತಾಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲವು. ಫ್ಯಾನಿಗಿಂತ ವೇಗವಾಗಿ ತಂಪು ಮಾಡುವುದರಿಂದ ಮತ್ತು ಫ್ಯಾನಿನಷ್ಟು ವಿದ್ಯುತ್ ಎಳೆಯದಿರುವುದರಿಂದ ಇವು ವಿದ್ಯುತ್ ಬೇಡಿಕೆ ತಗ್ಗಿಸುವುದರಲ್ಲಿಯೂ ಸಹಾಯಕಾರಿ. ಹೀಟಾಗುತ್ತವೆ ಎಂಬ ಭಯಕ್ಕೇ ಒಂದೇ ಸರ್ವರನಲ್ಲಿ ಹಲವು ಸಿಪಿಯುಗಳನ್ನು ಇಡುತ್ತಿಲ್ಲ. ಲಿಕ್ವಿಡ್ ಕೂಲಿಂಗಿನಿಂದಾಗಿ ಅದು ಸಾಧ್ಯವಾಗಲಿದ್ದು ನೂರಾರು ಸರ್ವರುಗಳ ಬದಲಾಗಿ ಹತ್ತಾರು ಸರ್ವರುಗಳಗೆ ಇಳಿಯುವ ಆಶಾಭಾವನೆ ಇದೆ.
ಗಮನಿಸಬೇಕಾದ್ದು ಜಗತ್ತಿನ ಅತ್ಯುತ್ತಮ ತಂತ್ರಜ್ಞಾನಗಳಲ್ಲಿ ಸಹ ಒಂದು ಫ್ಯಾನಿಗೆ ಒಂದು ಗ್ಲಾಸು ನೀರಿಗೆ ಬಹುಮುಖ್ಯ ಪಾತ್ರವಿದೆ. ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಹೀಟಿಂಗು ಕೂಲಿಂಗಿನಂತಹ ಮೂಲಭೂತ ಸಮಸ್ಯೆಗಳು ನಮ್ಮನ್ನು ಬಹುಮಟ್ಟಿಗೆ ಕಾಡುತ್ತವೆ, ಹಿಂದೆ ಎಳೆಯುತ್ತವೆ.
