ಇವತ್ತು ಮಿಂಚಿದ ಎಐ ಟೂಲ್, ನಾಳೆ ಇರೋಲ್ಲವೆಂದರೆ…

1f5ac09a f2e7 44d3 bd4c 22be32713efc

ಕಳೆದ ಸೆಪ್ಟೆಂಬರ್ 2025ರಲ್ಲಿ ಜಗತ್ತನ್ನೇ ಬೆರಗುಗೊಳಿಸಿದ್ದ ‘ಸೋರಾ’ (ಓಪನ್ಎಐ ಸಂಸ್ಥೆಯ ವಿಡಿಯೋ ಉತ್ಪಾದಕ ತಂತ್ರಜ್ಞಾನ) ಕೇವಲ ಆರೇ ತಿಂಗಳುಗಳಲ್ಲಿ ತೆರೆಮರೆಗೆ ಸರಿದಿದೆ. ಈ ಮಾರ್ಚ್ 24ರಂದು ಓಪನ್ ಎಐ ಸಂಸ್ಥೆ ಇದನ್ನು ಅಧಿಕೃತವಾಗಿ ಸ್ಥಗಿತಗೊಳಿಸಿತು. ಬಿಡುಗಡೆಯಾದ ಹೊಸತರಲ್ಲಿ ಇದು ಅದೆಷ್ಟು ಸಂಚಲನ ಸೃಷ್ಟಿಸಿತ್ತೆಂದರೆ, ವಿಶ್ವವಿಖ್ಯಾತ ಡಿಸ್ನಿ ಸಂಸ್ಥೆಯೂ ಇದರೊಂದಿಗೆ ಒಂದು ಬಿಲಿಯನ್ ಡಾಲರ್ ಮೊತ್ತದ ಬೃಹತ್ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಡಿಸ್ನಿ ಕೂಡ, “ಓಪನ್ಎಐ ನಿರ್ಧಾರಕ್ಕೆ ನಮ್ಮ ಅಭ್ಯಂತರವಿಲ್ಲ” ಎನ್ನುವ ಮೂಲಕ ಈ ಒಪ್ಪಂದದಿಂದ ಕೈತೊಳೆದುಕೊಂಡಿದೆ.

ಅಸಲಿಗೆ, ಇಷ್ಟೊಂದು ನಿರೀಕ್ಷೆ ಮೂಡಿಸಿದ್ದ ತಂತ್ರಜ್ಞಾನ ಹಠಾತ್ತನೆ ಮರೆಯಾಗಿದ್ದು ಏಕೆ? ಇದಕ್ಕೆ ತಗಲುವ ವೆಚ್ಚ, ಬರುವ ಲಾಭ ಮತ್ತು ಇದರಿಂದಾಗುವ ಜನೋಪಯೋಗಿ ಕಾರ್ಯಗಳನ್ನು ಅವಲೋಕಿಸಿದರೆ ಕಾರಣಗಳು ಬಹಳ ಸ್ಪಷ್ಟವಾಗಿ ತೆರೆದುಕೊಳ್ಳುತ್ತವೆ.

೧. ಜಿಪಿಯು ತೆರಿಗೆ

ವಿಡಿಯೋ ಸೃಷ್ಟಿಸುವುದು ಅಂದುಕೊಂಡಷ್ಟು ಸುಲಭ ಅಥವಾ ಅಗ್ಗದ ಕೆಲಸವಲ್ಲ. ಹತ್ತು ಸೆಕೆಂಡಿನ ಒಂದು ಪುಟ್ಟ ಸೋರಾ ಕ್ಲಿಪ್ ತಯಾರಿಸಲು ಓಪನ್ಎಐ ಸಂಸ್ಥೆಗೆ ಸುಮಾರು ಒಂದೂವರೆ ಡಾಲರ್ (ಅಂದಾಜು 125 ರೂಪಾಯಿ) ಖರ್ಚಾಗುತ್ತಿತ್ತು. ಅಷ್ಟು ಸಣ್ಣ ವಿಡಿಯೋ ಸಿದ್ಧವಾಗಲು ಮೂರರಿಂದ ಎಂಟು ನಿಮಿಷ ಬೇಕು. ಈ ಆಪ್ ತನ್ನ ಇಡೀ ಜೀವಿತಾವಧಿಯಲ್ಲಿ ಗಳಿಸಿದ್ದು ಕೇವಲ 2.1 ಮಿಲಿಯನ್ ಡಾಲರ್. ಆದರೆ ಇದರ ದೈನಂದಿನ ಕಾರ್ಯಾಚರಣೆಯ ವೆಚ್ಚ (Inference Cost) ಬರೋಬ್ಬರಿ 15 ಮಿಲಿಯನ್ ಡಾಲರ್! ಇದು ವ್ಯವಹಾರಸ್ಥನೊಬ್ಬ ನಡೆಸುವ ಸಭ್ಯ ವ್ಯವಹಾರವಲ್ಲ. ಚಳಿ ಕಾಯಿಸಲೆಂದು ಹಣವನ್ನು ಸುಡುವ ಮೂರ್ಖ ಕೆಲಸ.

ಓಪನ್ಎಐ ಸಂಸ್ಥೆ ಈಗ ಷೇರು ಮಾರುಕಟ್ಟೆ ಪ್ರವೇಶಕ್ಕೆ (IPO) ಸಿದ್ಧತೆ ನಡೆಸುತ್ತಿದೆ. ಇಂತಹ ಭೀಕರ ನಷ್ಟದ ಹಾದಿಯನ್ನು ಯಾವ ಹೂಡಿಕೆದಾರನೂ ಒಪ್ಪುವುದಿಲ್ಲ.

೨. ಡೀಪ್‌ಫೇಕ್ ಎಂಬ ದುಃಸ್ವಪ್ನ

ಸೋರಾದಲ್ಲಿ “ಕ್ಯಾಮಿಯೋ” ಎಂಬ ವೈಶಿಷ್ಟ್ಯವಿತ್ತು. ಬಳಕೆದಾರರು ತಮ್ಮ ಮುಖವನ್ನು ಸ್ಕ್ಯಾನ್ ಮಾಡಿ ವಿಡಿಯೋ ಸೃಷ್ಟಿಸಬಹುದಿತ್ತು. ಆದರೆ ಇದು ದುರುಪಯೋಗಕ್ಕೆ ರಾಜಮಾರ್ಗವಾಯಿತು. ದುರ್ಬಳಕೆದಾರರು ಸ್ವತಃ ಸಂಸ್ಥೆಯ ಮುಖ್ಯಸ್ಥ ಸ್ಯಾಮ್ ಆಲ್ಟ್‌ಮನ್ ಅವರ ಮುಖವನ್ನೇ ಬಳಸಿ ಅವರು ಹಂದಿ ಕಸಾಯಿಖಾನೆಯಲ್ಲಿ ಇರುವಂತೆ ನಕಲಿ ವಿಡಿಯೋ ಮಾಡಿದರು. ಸುಲಭವಾಗಿ ವಿಡಿಯೋ ಸೃಷ್ಟಿಸುವ ಈ ಶಕ್ತಿ ಅನಾಮಧೇಯ ಬಳಕೆದಾರರ ಕೈಗೆ ಸಿಕ್ಕಾಗ ಸೃಷ್ಟಿಯಾದ ಅನಾಹುತಗಳು ವಿಪರೀತ.

೩. ಮೂಲ ಉದ್ದೇಶದತ್ತ ಗಮನ

ಓಪನ್ಎಐ ಈ ವಿಡಿಯೋ ಸಂಶೋಧನೆಯನ್ನು ಸಂಪೂರ್ಣವಾಗಿ ನಿಲ್ಲಿಸುತ್ತಿಲ್ಲ. ಬದಲಿಗೆ, ಸೋರಾ ತಂಡವನ್ನು ತನ್ನ ಹೊಸ ರೋಬೋಟಿಕ್ಸ್ ವಿಭಾಗಕ್ಕೆ ವರ್ಗಾಯಿಸಿದೆ. ಅಲ್ಲಿ ಅವರು “ವರ್ಲ್ಡ್ ಸಿಮ್ಯುಲೇಶನ್” ಅಂದರೆ ಭೌತಿಕ ಪ್ರಪಂಚದ ಮಾದರಿಯನ್ನು ತಯಾರಿಸುವ ಕೆಲಸ ಮಾಡಲಿದ್ದಾರೆ. ಅಂದರೆ, ಕೇವಲ ಸಿನಿಮಾ ಮಾಡುವ ಬದಲು, ಈ ತಂತ್ರಜ್ಞಾನವನ್ನು ಬಳಸಿ ರೋಬೋಟ್‌ಗಳಿಗೆ ಬಟ್ಟೆ ಮಡಚುವುದು ಹೇಗೆ ಅಥವಾ ವಸ್ತುಗಳನ್ನು ಗುರುತಿಸುವುದು ಹೇಗೆ ಎಂದು ಕಲಿಸಲಾಗುತ್ತದೆ. ಈ ಹೊಸ ಯೋಜನೆಯ ಸಂಕೇತ ನಾಮ: “ಸ್ಪಡ್” (Spud).

೪. ಮಾರುಕಟ್ಟೆಯ ಡಾರ್ವಿನಿಸಂ

ಗೂಗಲ್ ಮತ್ತು ಇತರ ಸಂಸ್ಥೆಗಳು ತಮ್ಮದೇ ಆದ ವಿಡಿಯೋ ಉತ್ಪಾದಕ ಮಾಡೆಲ್‌ಗಳನ್ನು ಅಭಿವೃದ್ಧಿಪಡಿಸಿವೆ. ಅವು ಸೋರಾಗಿಂತ ವೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ವಿಡಿಯೋ ನೀಡುತ್ತಿವೆ. ಆದ್ದರಿಂದ ಸೋರಾ ನಿರ್ಗಮನ ಅನಿವಾರ್ಯವಾಗಿದೆ.

ಈ ಎಲ್ಲ ಹೊರತಾಗಿ ಪ್ರತ್ಯೇಕವಾಗಿ ಹೇಳಬೇಕಿರುವ ಇನ್ನೊಂದು ಪ್ರಮುಖ ಕಾರಣವೆಂದರೆ ‘ಆಂಥ್ರೋಪಿಕ್’ ಎಂಬ ಪ್ರತಿಸ್ಪರ್ಧಿ ಸಂಸ್ಥೆ. ಆಂಥ್ರೋಪಿಕ್‌ನ ‘ಕ್ಲಾಡ್’ ಈವರೆಗೆ ಕೇವಲ ಪಠ್ಯದ ಮೇಲೆ ಮಾತ್ರ ಗಮನ ಹರಿಸಿದೆ. ನೀವು ಗಮನಿಸಿದ್ದಲ್ಲಿ ಅದು ಚಿತ್ರ ಅಥವಾ ವಿಡಿಯೋಗಳನ್ನು ಉತ್ಪಾದಿಸುವುದಿಲ್ಲ. ಬದಲಾಗಿ ಅದು ತನ್ನಲ್ಲಿರುವ ಕಂಪ್ಯೂಟಿಂಗ್ ಶಕ್ತಿಯನ್ನೆಲ್ಲ ಕೇವಲ ಪಠ್ಯ ಸಂಸ್ಕರಣೆ ಮತ್ತು ಪಠ್ಯ ಉತ್ಪಾದನೆಗೆ ಮಾತ್ರ ಬಳಸಿದ್ದರಿಂದ, ಇಂದು ಅದು ಎಲ್ಲರಿಗಿಂತ ಶಕ್ತಿಯುತ ಮತ್ತು ವಿಶ್ವಾಸಾರ್ಹ ಮಾದರಿ ಎನಿಸಿಕೊಂಡಿದೆ. ಎಐ ತಂತ್ರಜ್ಞಾನವನ್ನು ತಮ್ಮ ಉತ್ಪನ್ನಗಳಲ್ಲಿ ಅಳವಡಿಸಿಕೊಳ್ಳಲು ಹೊರಟಿರುವ ಜಾಗತಿಕ ಕಂಪನಿಗಳು ಇಂದು ಹೆಚ್ಚಾಗಿ ಕ್ಲಾಡ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಿವೆ. ಚಾಟ್‌ಜಿಪಿಟಿ ಒಂದರ್ಥದಲ್ಲಿ ಅಂತಿಮ ಹಂತದ ಗ್ರಾಹಕನ ಆಟದ ವಸ್ತುವಾಗಿ ಹಿಂದೆ ಉಳಿಯುತ್ತಿದೆ. ಈ ಗ್ರಾಹಕರು ಕೊಡುವ ಅಲ್ಪ ಚಂದಾದಾರಿಕೆ ಹಣ ಸಂಸ್ಥೆಯ ಬೃಹತ್ ವೆಚ್ಚಕ್ಕೆ ಸಾಲುವುದಿಲ್ಲ. ಇದನ್ನು ಗಮನಿಸಿದ ಓಪನ್ ಎಐ, ಚಮತ್ಕಾರಗಳನ್ನು ಬದಿಗಿಟ್ಟು ಉಪಯುಕ್ತ ಕೆಲಸಗಳತ್ತ ಮರಳಿದೆ.

ಭಾರತದಲ್ಲಿ ಈಗ ‘ಪರಾವಲಂಬಿ’ (Wrapper) ಕಂಪನಿಗಳ ಹಾವಳಿ ಹೆಚ್ಚಿದೆ. ಅಂದರೆ ಓಪನ್ಎಐ ಅಥವಾ ಗೂಗಲ್‌ನಂತಹ ದೊಡ್ಡ ಕಂಪನಿಗಳ ತಂತ್ರಜ್ಞಾನವನ್ನು (API) ಎರವಲು ಪಡೆದು, ಅದಕ್ಕೆ ಸ್ವಲ್ಪ ಮೆರುಗು ನೀಡಿ ತಮ್ಮದೇ ಉತ್ಪನ್ನವೆಂದು ಮಾರುವ ಸಂಸ್ಥೆಗಳಿವು. ಮೂಲ ಕಂಪನಿಯೇ ತನ್ನ ಉತ್ಪನ್ನವನ್ನು ಉಳಿಸಿಕೊಳ್ಳಲಾಗದಿದ್ದರೆ, ಇನ್ನು ಈ ಪರಾವಲಂಬಿ ಸಂಸ್ಥೆಗಳ ಭವಿಷ್ಯವೇನು? ಪ್ರಸ್ತುತ ಮುಚ್ಚುತ್ತಿರುವ ಸ್ಟಾರ್ಟ್‌ಅಪ್‌ಗಳಲ್ಲಿ ಇವೇ ಹೆಚ್ಚು. ಸ್ಟಾರ್ಟಪ್‌ಗಳ ಗಮನ ಎತ್ತ ಇರಬೇಕೆಂದು ಇದೊಂದು ಎಚ್ಚರಿಕೆಯ ಗಂಟೆ.

ವ್ಯವಹಾರದಲ್ಲಿ ಎಐ ಯಶಸ್ವಿಯಾಗಬೇಕೆಂದರೆ ಕೇವಲ ‘ಡೆಮೋ’ ಸಾಲದು, ಅದರ ಲಾಭದ ಲೆಕ್ಕಾಚಾರ ಸ್ಪಷ್ಟವಿರಬೇಕು. ಹೆಚ್ಚಿನ ಕಂಪನಿಗಳು ಈಗ ಎಐಗಾಗಿ ಒಂದು ವಿಶೇಷ ‘ಲಾಭ-ವೆಚ್ಚದ ಅನುಪಾತ’ವನ್ನು (Benefit-Cost Ratio) ಬಳಸುತ್ತಿವೆ. ಇದರಲ್ಲಿ ಮನುಷ್ಯನ ಮೇಲ್ವಿಚಾರಣೆಯ ವೆಚ್ಚವನ್ನೂ ಸೇರಿಸಲಾಗುತ್ತದೆ:

BCR_AI = [(Time Saved x Hourly Rate) + Error Reduction Value] / [Token/API Cost + Human Review Cost]

ಹೆಚ್ಚಿನ ಉದ್ಯಮಗಳಲ್ಲಿ ಈ ಅನುಪಾತವು 2.0 ಕ್ಕಿಂತ ಹೆಚ್ಚಿದ್ದರೆ ಮಾತ್ರ ಆ ಯೋಜನೆಯನ್ನು ಜಾರಿಗೆ ತರಲಾಗುತ್ತದೆ. ಏಕೆಂದರೆ ಸಾಂಪ್ರದಾಯಿಕ ಸಾಫ್ಟ್‌ವೇರ್‌ಗಳಿಗಿಂತ ಎಐ ಮಾದರಿಗಳು ಅನಿಶ್ಚಿತವಾಗಿರುತ್ತವೆ (Nondeterministic), ಅಂದರೆ ಅವು ಯಾವಾಗ ಹೇಗೆ ವಿಫಲವಾಗುತ್ತವೆ ಎಂದು ಊಹಿಸುವುದು ಕಷ್ಟ. ಈ ನಿಟ್ಟಿನಲ್ಲಿ ಕಂಪನಿಗಳು ಮೊದಲು ಎಐ ಖರೀದಿಸಿ ನಂತರ ಸಮಸ್ಯೆ ಹುಡುಕುವ ಬದಲು, ಇರುವ ಸಮಸ್ಯೆಯನ್ನು ಗುರುತಿಸಿ ಅದಕ್ಕೆ ಎಐ ಹೇಗೆ ನೆರವಾಗುತ್ತದೆ ಎಂದು ಯೋಚಿಸಬೇಕು. ಇಲ್ಲಾಂದರೆ ಬಹುತೇಕ ಮಂದಿ “ಪಿಒಸಿ ಬಲೆ” (PoC Trap) ಬೀಳುವ ಸಾಧ್ಯತೆ ಇದೆ. ಅಂದರೆ ಬರೀ ಪ್ರಯೋಗಗಳಲ್ಲೇ ಕಾಲ ಕಳೆದು, ಅಂತಿಮವಾಗಿ ಯಾವುದೇ ಉತ್ಪನ್ನ ಹೊರಬರುವುದಿಲ್ಲ.

ಒಟ್ಟಾರೆ ವಿಶ್ಲೇಷಕರು ಈಗಿನ ಹಂತವನ್ನು “ಮಾಯಾಜಾಲದಿಂದ ಲೆಕ್ಕಾಚಾರದತ್ತ” (Magic to Metrics) ಪಯಣ ಎಂದು ಕರೆಯುತ್ತಿದ್ದಾರೆ. ಇನ್ನು ಮುಂದೇನಿದ್ದರೂ ಎಲ್ಲಿ ಉಪಯೋಗ ಮತ್ತು ಲಾಭ ಎರಡೂ ಇರುತ್ತದೋ ಅಲ್ಲಿ ಮಾತ್ರ ಎಐ ಅಸ್ತಿತ್ವ ಕಂಡುಕೊಳ್ಳಲಿದೆ. ಜಿಪಿಯುಗಳನ್ನು ಹೆಚ್ಚಾಗಿ ಐಟಿ, ಔಷಧಿ, ರೋಬೋಟಿಕ್ಸ್ ಮತ್ತು ಸಂಶೋಧನೆಯಂತಹ ಗಂಭೀರ ವಲಯಗಳಿಗಾಗಿ ಮೀಸಲಿಡಲಾಗುತ್ತದೆ.

(ಲೇಖಕರು: ವಿಶ್ಲೇಷಣ ಪರಿಣತರು)

Leave a Comment

Your email address will not be published. Required fields are marked *