ಮೊನ್ನೆ ಕನ್ನಡದ ಖ್ಯಾತ ಲೇಖಕಿಯೊಬ್ಬರು ಫೋನ್ ಮಾಡಿ “ಮಧು, ಕನ್ನಡ ಸಾಹಿತ್ಯಲೋಕಕ್ಕೆ ತುಂಬಲಾರದ ನಷ್ಟ ಆಗಿಬಿಟ್ಟಿದೆ,” ಎಂದರು. “ಅರೆರೆ ಯಾರಾದ್ರೂ ಹೋಗ್ಬಿಟ್ರಾ?” ಅಂತ ಕೇಳಿದೆ.
“ಇಲ್ಲಾರೀ ನನ್ನ ಹಾರ್ಡ್ಡಿಸ್ಕು ಹೊಗೆ ಹಾಕಿಕೊಂಡಿದೆ, ಲ್ಯಾಪ್ಟಾಪು ಎತ್ತಿ ಹಾಕುತ್ತಿದೆ. ಎರಡು ವರ್ಷಗಳ ಬರಹಗಳು, ಎರಡು ಕಾದಂಬರಿಗಳು…” ಎಂದು ನೋವನ್ನಿತ್ತುಕೊಂಡರು. ಅಲ್ಲಿಗಾಗಲೇ ತಮಗೆ ತಿಳಿದಿದ್ದ ‘ವೈದ್ಯರ’ ಬಳಿಗೆಲ್ಲ ಹೋಗಿ ಬಂದಿದ್ದರು. “ನೋಡಿ ಎತ್ತಿಹಾಕ್ತೀರಿ ಅಂತೀರಿ. ಡೇಟಾ ಹೋಗಿರಲ್ಲ ಚಿಂತಿಸಬೇಡಿ. ಸಾಮಾನ್ಯವಾಗಿ ನೀರು, ಬೆಂಕಿಗಳಂಥವು ತಾಗಿದರೆ ಮಾತ್ರ ಡೇಟಾ ನಷ್ಟ ಆಗುವುದು. ನಿಮ್ಮ ಕೇಸಿನಲ್ಲಿ ಬಹುಶಃ ಹೆಡ್ ಹೋಗಿರುತ್ತೆ. ಆದ್ದರಿಂದ ಇದು ಕೇವಲ ಸಾಫ್ಟ್ವೇರ್ ವೈದ್ಯರಿಂದ ವಾಸಿಯಾಗಲ್ಲ, ಹಾರ್ಡ್ವೇರ್ ವೈದ್ಯರಿಗೆ ತೋರಿಸಬೇಕು. ಬೆಂಗಳೂರಿನಲ್ಲಿ ಸಾಕಷ್ಟು ಡೇಟಾ ರಿಕವರಿ ಮಾಡಿಕೊಡುವ ‘ಕ್ಲಿನಿಕ್’ ಇದಾವೆ. ಅಲ್ಲಿ ತೋರಿಸಿ. ಸರಿಹೋಗುತ್ತೆ,” ಎಂದು ತಿಳಿಸಿದ್ದೆ. “ಹಾಗಾದ್ರೆ ಕೊರಿಯರ್ ಮಾಡ್ಲಿಬಿಡಾ?” ಎಂದು ಕೇಳಿದರು. “ಅಲ್ಲಾ, ತಲೆಗೆ ಪೆಟ್ಟಾಗಿರೋ ಪೇಷಂಟು ಅಂತೀರಾ. ಅಂಬುಲೆನ್ಸ್ ಮಾಡೋಕ್ಳಲ್ವಾ?” ಅಂದೆ. ಅರ್ಥಾತ್ ನೀವೇ ತಗಂಡ್ಕೋಗಿ ಎಂದು. ಅವರು ಹಾಗೇ ಮಾಡಿದ್ದಾರೆ.
ಇಲ್ಲಿ ಎರಡು ಮುಖ್ಯ ವಿಷಯ ಹೇಳಬೇಕು. ಒಂದು ಹಾರ್ಡ್ಡಿಸ್ಕುಗಳ ಬಗ್ಗೆ, ಇನ್ನೊಂದು ಕ್ಲೌಡ್ನ ಬಗ್ಗೆ. ಹಾರ್ಡ್ಡಿಸ್ಕ್ನಲ್ಲಿ ಎರಡು ವಿಧ. HDD (hard disk drive) ಮತ್ತು SSD (solid state drive). HDD ಅಂದ್ರೆ ಕಳೆದ ಇಪ್ಪತ್ತು ಮೂವತ್ತು ವರುಷಗಳಿಂದ ಬಳಸುತ್ತಿದ್ದ ಅಲ್ವಾ. ಒಳಗೆ ಮ್ಯಾಗ್ನೆಟಿಕ್ ಪ್ಲೇಟುಗಳು ಇರ್ತಿದ್ದು ಪ್ಲೇಟು ತಿರುಗುವಾಗ ಗುರ್ರ್ ಅನ್ನೋದು. ಪ್ಲೇಟಿನ ಮೇಲೆ ಡೇಟಾ ಬರೆಯಲು ಮತ್ತು ಓದಲು ಒಂದು ಹೆಡ್ ಅಂತ ಇರ್ತಿತ್ತು. ಗ್ರಾಮಾಫೋನಿಗಿದ್ದ ಹಾಗೆ. HDD ತೂಕ ಜಾಸ್ತಿ ಮತ್ತು ಸ್ಲೋ. ಪ್ಲೇಟಿನ ಮೇಲೆ ಬರೆಯುವುದು ಓದುವುದರಿಂದ ಹಚ್ಚು ಒಳಗಿಂದ ಹೊರಗೆ ಹೊರಗಿಂದ ಒಳಗೆ ಒಂದೊಂದೇ ಹೆಜ್ಜೆಯಿಟ್ಟು ಸರ್ಕಲ್ ದಾಟಬೇಕು. ಎಲ್ಲೆಂದರಲ್ಲಿ ಜಂಪ್ ಹೊಡೆಯೋಂಗಿಲ್ಲ. ಆದ್ದರಿಂದ ಇದು ನಿಧಾನ. ಈಗ SSD ಬಂದಿದಾವೆ. ಇವುಗಳ ಒಳಗೆ ಟೇಪ್ ಬದಲು ಚಿಪ್ ಇರ್ತವೆ. ಹೆಡ್ ಬೇಕಿಲ್ಲ, ಎಲೆಕ್ಟ್ರಾನಿಕ್ ಸರ್ಕ್ಯೂಟ್ ಮೂಲಕ ಚಿಪ್ಪಿನ ಮೇಲೆ ಎಲ್ಲೆಂದರಲ್ಲಿ ಬರೆಯಬಹುದು, ಓದಬಹುದು. ಆದ್ದರಿಂದ ಇವು ಹಗುರ ಮತ್ತು ವೇಗ.
ಇಂಥ ಡಿಸ್ಕುಗಳ ಮೇಲೆ ಡೇಟಾ ಬರೆಯುವಾಗ ಆಪರೇಟಿಂಗ್ ಸಿಸ್ಟಂಗಳು ಒಳಗೆ ಪುಟ ತುಂಬಿಸುತ್ತ ಅಂಚಿನಲ್ಲಿ ಒಂದು ಪರಿವಿದಿಯನ್ನ ಅಪ್ಡೇಟ್ ಮಾಡಿಕೊಳ್ಳುತ್ತಾ ಹೋಗ್ತಾವೆ. ಈ ಪರಿವಿದಿಯಲ್ಲಿ- ಈ ಡಿಸ್ಕಿನಲ್ಲಿ ಒಟ್ಟು ಎಷ್ಟು ಪುಟಗಳಿವೆ, ಯಾವ ಪುಟಗಳು ತುಂಬಿವೆ, ಫೈಲುಗಳ ಐಡಿಗಳೇನು, ಯಾವ ಪುಟಗಳು ಖಾಲಿ ಇವೆ ಮುಂತಾಗಿ. ನೀವು ಒಂದು ಫೈಲನ್ನು ಡಿಲೀಟ್ ಮಾಡಿದಾಗ ಅದು ಹೋಗುವುದು ಕಸದ ಬುಟ್ಟಿಗೆ. ಈ ‘ಕಸದಬುಟ್ಟಿ’ಯೂ ಡಿಸ್ಕಿನ ಮೇಲೆ ತನ್ನದೇ ಪುಟಗಳನ್ನು ಹೊಂದಿದ ಒಂದು ಅಧಿಕೃತ ಜಾಗವಾದ್ದರಿಂದ ಫೈಲು ಮತ್ತೆ ಬೇಕೆಂದರೆ ರಿಸೈಕಲ್ ಬಿನ್ಗೆ ಹೋಗಿ ರಿಸ್ಟೋರ್ ಒತ್ತಿದರೆ ಆಯಿತು.
ಆದರೆ ಶಿಫ್ಟ್ ಡಿಲೀಟ್ ಮಾಡಿದಾಗ ಫೈಲು ಪೂರ್ತಿ ಮಾಯ ಆಗುತ್ತಲ್ಲ, ಹಾಗಾದರೆ ಅದು ಮತ್ತೆ ಸಿಗಲ್ಲಾ? ಸಿಗುತ್ತೆ. ಶಿಫ್ಟ್ ಡಿಲೀಟ್ ಎಂದರೆ ಆಪರೇಟಿಂಗ್ ಸಿಸ್ಟಂ ಫೈಲಿನ ಬರೀ ಪರಿವಿದಿಯಲ್ಲಿರುವ ಎಂಟ್ರಿಯನ್ನು ಮಾತ್ರ ಅಳಿಸಿರುತ್ತದೆ. ಒಳಗೆ ನಿರ್ದಿಷ್ಟ ಪುಟದಲ್ಲಿ ಫೈಲು ಹಂಗೇ ಇರುತ್ತದೆ. ನೀವು ಹೊಸ ಫೈಲೊಂದನ್ನು ಡಿಸ್ಕಿಗೆ ಕಾಪಿ ಮಾಡಿದಾಗ ಆಪರೇಟಿಂಗ್ ಸಿಸ್ಟಂ ತಪಾಸಣೆಗೆ ತಕ್ಕಂತೆ ಎಲ್ಲೆಲ್ಲಿ ಖಾಲಿ ಪುಟಗಳಿವೆಯೋ ಅಲ್ಲೆಲ್ಲಾ ತುಂಬಿಸುತ್ತಾ ಹೋಗುತ್ತದೆ. ನಿಮ್ಮ ಅದೃಷ್ಟದ ಮೇರೆಗೆ ಅದು ಹಳೆಯ ಫೈಲು ಬರೆದಿದ್ದ ಪುಟವೂ ಆಗಿರಬಹುದು, ಏನನ್ನೂ ಬರೆಯದ ಹೊಸ ಪುಟವೂ ಆಗಿರಬಹುದು. ಹೀಗೆ ಹಳೆಯ ಫೈಲು ಕೇವಲ ಪರಿವಿದಿಯಿಂದ ಅಳಿಸಿದಾಗ ಉಚಿತ ಸಾಫ್ಟ್ವೇರ್ಗಳ ಮೂಲಕ ನಿಮ್ಮ ಫೈಲನ್ನು ರಿಕವರಿ ಮಾಡಿಬಿಡಬಹುದು. ಅದೇ ಬೆಂಕಿ, ನೀರು ತಾಗಿದ್ದಾಗ ಸೇಮ್ ಕೆಡದವೊಂದರ ಕಟ್ಟನ್ನು ಮನೆ ಹೊರಗಿನ ಬುಟ್ಟಿಗೆ ಎಸೆದಿದ್ದು ಅದಕ್ಕೆ ಬೆಂಕಿಯೋ ಮಳೆನೀರೊ ಬಿದ್ದಿದ್ದು ಪುಟಗಳು ಹಾಳಾಗಿದ್ದು ಎಷ್ಟು ಪುಟ ಚೆನ್ನಾಗಿದ್ದಾವೂ ಅಷ್ಟನ್ನು ಆಯ್ದುಕೊಂಡು ಪುನರ್ಜೋಡಿಸಿಕೊಂಡಂತೆ ಕೆಲವು ವಿಶೇಷ ಸಾಫ್ಟ್ವೇರ್ಗಳು ಹಾಳಾದ ಪುಟಗಳಿಂದ ಸಾಧ್ಯವಾದ ಮಟ್ಟಿಗೆ ಫೈಲುಗಳನ್ನು ಪುನರ್ರಚಿಸುತ್ತವೆ. ಪಠ್ಯದ ಫೈಲುಗಳಾದರೆ ಅತ್ಯಂತ ಸುಲಭ. ಫೋಟೋ/ ವೀಡಿಯೋಗಳಾದರೆ ತುಂಬಾ ಕಷ್ಟ. SSDಗಳಲ್ಲಿ ಹೆಡ್ ಇರದಿದ್ದರೂ ಅಲ್ಲಿನ ಸರ್ಕ್ಯೂಟ್ ಹಾಳಾಗಿರುವ ಸಾಧ್ಯತೆ ಇರುತ್ತದೆ. ಈಗ ವಾಟರ್ಪ್ರೂಫ್ SSDಗಳೂ ಬಂದಿದಾವೆ.
ಇದೆಲ್ಲ ಬಿಡಿ. ಹಾರ್ಡ್ಡಿಸ್ಕುಗಳು ಕಟ್ಟದ ಕುಸಿದೋ, ನದಿಯಲ್ಲಿ ಬಿದ್ದೋ, ಕಳ್ಳರು ಎಗರಿಸಿಯೋ ಕೈಗೆ ಸಿಗದೇ ಹೋಗಬಹುದು. ಆಗ ಏನು ಮಾಡ್ತೀರಿ? ಇದಕ್ಕಾಗಿಯೇ ಈಗ ಕ್ಲೌಡ್ ಸ್ಟೋರೇಜ್ ಎಂದು ಬಂದಿರುವುದು. ಸರಳವಾಗಿ ಹೇಳುವುದಾದರೆ ಇದು ಇಂಟರ್ನೆಟ್ಟಿನಲ್ಲಿರುವ ಹಾರ್ಡ್ಡಿಸ್ಕು. ಮನೆಯಲ್ಲಿ ನೆಲಮಳಿಗೆ ಕೊರೆದು ಚಿನ್ನ ಅಡಗಿಸಿಡುವ ಬದಲು ವರ್ಷಕ್ಕಿಷ್ಟು ಫೀಜು ಕಟ್ಟಿ ಬ್ಯಾಂಕಿನ ಲಾಕರಿನಲ್ಲಿಟ್ಟಂತೆ ಅಷ್ಟೇ. ಬ್ಯಾಂಕುಗಳಾದರೂ ಪ್ರಕೃತಿ ವಿಕೋಪಗಳಿಂದ ಹೊರತಲ್ಲ ಆದರೆ ಕ್ಲೌಡ್ ಸ್ಟೋರೇಜು ಹಾಗಿಲ್ಲ. ಅವು ನಿಮ್ಮ ಮಾಹಿತಿಯನ್ನು ಎರಡು ಮೂರು ಕಡೆ ಕಾಪಿ ಮಾಡಿಟ್ಟಿರುತ್ತವೆ. ಒಂದು ಕಡೆ ಹಾಳಾದರೂ ಬಂಚೂರು ಮುಕ್ಕಾಗದ ಹಾಗೆ ಇನ್ನೊಂದು ಕಡೆಯಿಂದ ತಂದುಕೊಡುತ್ತವೆ. ಇದೆಲ್ಲಾ ನಿಮಗೆ ಗೊತ್ತೇ ಆಗದಂತೆ ತೆರೆಯ ಹಿಂದೆ ನಡೆಯುತ್ತಿರುತ್ತದೆ. ಗೂಗಲ್ ಡ್ರೈವ್ ಉಚಿತವಾಗಿ 15ಜಿಬಿ ಕ್ಲೌಡ್ ಸ್ಟೋರೇಜ್ ಕೊಡುತ್ತದೆ. ಇಷ್ಟರಲ್ಲಿ ನೀವು ಒಂದು ಸಾವಿರ ಕಾದಂಬರಿ, ಸಾವಿರ ಫೋಟೋ, ಐನ್ನೂರು ವೀಡಿಯೋ ಸೇವ್ ಮಾಡಬಹುದು. ಅಷ್ಟೇ ಅಲ್ಲ ಮೊಬೈಲ್ಲಿ ಆಫೀಸಿನ ಲ್ಯಾಪ್ಟಾಪಲ್ಲಿ ಬಸ್ಸ್ಟ್ಯಾಂಡ್ನಲ್ಲಿ ಬಾರ್ ರೂಮಲ್ಲಿ ವಿದೇಶಕ್ಕೆ ಹೋದರೂ ನಿಮ್ಮ ಸಂಪೂರ್ಣ ಡೇಟಾ ಅಂಗೈಯಲ್ಲಿರುತ್ತದೆ. ಮುಖ್ಯವಾಗಿ ಬರಹಗಳನ್ನು ವರ್ಡ್ನಲ್ಲಿ ಅಲ್ಲೇ ಬರೆದು ಅಲ್ಲೇ ಸೇವ್ ಮಾಡಬಹುದಲ್ಲ? ವರ್ಷಕ್ಕೆ ಎರಡು ಸಾವಿರ ರೂಪಾಯಿ ಕೊಟ್ಟರೆ ಒಂದು ಟೆರಾಬೈಟ್ ಜಾಗ ಸಿಗುತ್ತೆ, ಇಡೀ ಕುಟುಂಬದ ಸಮಸ್ತ ಡೇಟಾವನ್ನು ಅಲ್ಲಿಡಬಹುದು. ಆಫ್ಕೋರ್ಸ್ ಪಾಸ್ವರ್ಡ್ ಕಳ್ಳರಿಗೆ ಸಿಕ್ಕರೆ ನಿಮ್ಮ ಮಾಹಿತಿ ಅವರ ಪಾಲಾಗುವುದು. ಅಕೌಂಟ್ ಸೆಕ್ಯೂರ್ ಆಗಿಟ್ಟುಕೊಳ್ಳುವುದು ನಿಮ್ಮ ಜವಾಬ್ದಾರಿ.
ಅಂದಹಾಗೆ, ನಮ್ಮ ‘ತುಂಬಲಾರದ ನಷ್ಟ’ದ ಲೇಖಕಿ ಯಾರಂದೀರಾ? ‘ಯೋಳ್ತೀನ್ ಕೇಳಿ’ ಖ್ಯಾತಿಯ ಕುಸುಮಾ ಆಯರಹಳ್ಳಿ. ಅವರ ಹಾರ್ಡ್ಡಿಸ್ಕು ಸದ್ಯಕ್ಕಿನ್ನೂ ಐಸಿಯುನಲ್ಲಿದೆ. ಪ್ರಿಲಿಮಿನರಿ ಇನ್ವೆಸ್ಟಿಗೇಶನ್ ನಿಂದ ‘ಒಂದು ಇಪ್ಪತ್ತು ದಿವಸ ಟೈಂ ಬೇಕಾಗುತ್ತೆ ಈಗ್ಲೇ ಏನೂ ಹೇಳಕ್ಕಾಗಲ್ಲ’ ಎಂಬ ಉತ್ತರ ಬಂದಿದೆ. ಅವರು ಭರದ ಹೃದಯ ಹೊತ್ತು ಬರಿಗೈಲಿ ಮರಳಿದ್ದಾರೆ. ಅವರ HDD ಶೀಘ್ರ ಗುಣಮುಖವಾಗಲಿ ಎಂದು ಹಾರೈಸೋಣ.
