“ನಿಮ್ಮ ಎಐ ಅದು ಮಾಡುತ್ತೆ ಇದು ಮಾಡುತ್ತೆ ಅಂತ ಹೊಂಬಣ್ಣದ ಹೊದಿಕೆ ಹೊದಿಸುತ್ತೀರಿ, ಆದರೆ ನಮಗದು ಒಂದಿನವೂ ಚಟ್ನಿ ರುಬ್ಬಿ ಕೊಟ್ಟಿಲ್ಲ, ನೆಲ ಒರೆಸಿಕೊಟ್ಟಿಲ್ಲ.” ಎನ್ನುವುದು ಗೃಹಿಣಿಯರ ದೊಡ್ಡ ಕಂಪ್ಲೇಂಟು. ಈ ಲೇಖನದಲ್ಲಿ ‘ಎಐ ಹೇಗೆ ಗೃಹೋಪಯೋಗಿಯಾಗಬಹುದು?’ ಎಂದು ನೋಡೋಣ.
ಮೊದಲಿಗೆ ಅಡುಗೆಮನೆ. ದಿನಾ ಈ ಪ್ರಶ್ನೆ ಏಳುತ್ತಲ್ವೇ? ಇವತ್ತೇನು ಅಡುಗೆ ಮಾಡೋಣ? ಈ ತರಕಾರಿ ಇದೆ, ಇದರಿಂದೇನು ಅಡುಗೆ ಮಾಡಬಹುದು ಎಂದು. ಚಾಟ್ ಜಿಪಿಟಿ ಓಪನ್ ಮಾಡಿ. ನಿಮ್ಮ ಬಳಿಯಿರುವ ತರಕಾರಿ, ಬೇಳೆ, ಸೊಪ್ಪುಗಳನ್ನು ಹೆಸರಿಸಿ, ಇದರಿಂದ ಏನೆಲ್ಲ ಅಡುಗೆ ಮಾಡಬಹುದು ಕೇಳಿ. ಉದಾಹರಣೆಗೆ ನಿಮ್ಮ ಬಳಿ ಕ್ಯಾರೆಟ್, ಟೊಮೆಟೊ ಮತ್ತು ಈರುಳ್ಳಿ ಇದ್ದರೆ, ಎಐ ನಿಮಗೆ ಕ್ಯಾರೆಟ್-ಟೊಮೆಟೊ ಸಾರು ಅಥವಾ ಕ್ಯಾರೆಟ್ ಟೊಮೆಟೊ ಪಲ್ಯ ಮಾಡುವ ವಿಧಾನ ಹೇಳಿಕೊಡುತ್ತದೆ.
ಅಡುಗೆ ಮಾಡುವಾಗ ಫೋನ್ ಮುಟ್ಟುವುದು ಕಷ್ಟ ತಾನೇ? ಫೋನಿನೊಂದಿಗೆ ಮಾತಾಡಿ. “ಹೇ ಗೂಗಲ್,” ಅನ್ನಿ. “ಅಲೆಕ್ಸಾ” ಎಂದು ಕರೆಯಿರಿ. 100 ಎಂಎಲ್ ಅಂದರೆ ಎಷ್ಟು ಕಪ್? ಈ ಎಣ್ಣೆಯಲ್ಲಿ ಎಷ್ಟು ಕ್ಯಾಲೊರಿಸ್ ಇದೆ.. ಎಂದೆಲ್ಲಾ ಕೇಳುತ್ತಾ ಹೋಗಿ. ಯಾವುದೋ ವಸ್ತು ಖಾಲಿಯಾಗಿದೆ. “ಇದನ್ನು ನನ್ನ ಶಾಪಿಂಗ್ ಲಿಸ್ಟ್‌ಗೆ ಸೇರಿಸು,” ಅನ್ನಿ. ಸಡನ್ನಾಗಿ ಯಾವುದೋ ಹಾಡು ನೆನಪಾಯ್ತು. “ಈ ಹಾಡನ್ನು ಪ್ಲೇ ಮಾಡು,” ಅನ್ನಿ.
ಹಾಲ್‌ಗೆ ಬರೋಣ. ಎಲ್ಲವೂ ಹರಡಿಕೊಂಡಿದೆ. ಇಕ್ಕಟ್ಟಾಗಿದೆ. ಹಳೆಯದಾಗಿದೆ. ಹೇಗೆ ಫಿಕ್ಸ್ ಮಾಡುವುದು ಗೊತ್ತಾಗುತ್ತಿಲ್ಲ. ಇಂಟೀರಿಯರ್ ಡಿಸೈನರ್ ಕೇಳಿದರೆ 20 ಸಾವಿರ ಕೇಳುತ್ತಾರೆ. ಬೇಡ. ಫೋನ್ ತಗೊಳ್ಳಿ. ಮೂಲೆಮೂಲೆಯ ಫೋಟೊ ತಗೊಳ್ಳಿ. Homestyler ಅಥವಾ RoomGPTಗಳಲ್ಲಿ ಫೋಟೊ ಅಪ್ಲೋಡ್ ಮಾಡಿ. “ಇದನ್ನು ನವೀಕರಿಸುವುದು ಹೇಗೆ?” ಎಂದು ಕೇಳಿ. “ಯಾವ ಪೀಠೋಪಕರಣ ಎಲ್ಲಿಟ್ಟರೆ ಚಂದ?” ಕೇಳಿ.
ನಿಮಗೆ ಬಣ್ಣಗಳ ಐಡಿಯಾ ಇಲ್ಲ, ಯಾವ ಬಣ್ಣಗಳ ಕಾಂಬಿನೇಶನ್ ಚೆನ್ನಾಗಿ ಕಾಣುತ್ತೆ ಅಂತ ಗೊತ್ತಿಲ್ಲ. Colors ಅಥವಾ Adobe Color ಬಳಸಿ ಹಾಲ್‌ಗೆ ಹೊಂದುವ ಬಣ್ಣಗಳನ್ನು ಹುಡುಕಿ. ಎಐ ಸೂಕ್ತವಾದ ಪ್ಯಾಲೆಟ್ ಸಲಹೆ ನೀಡುತ್ತದೆ. Pinterestಗೆ ಹೋಗಿ ಸಣ್ಣ ಫ್ಲಾಟ್ ಇಂಟೀರಿಯರ್ ಎಂದು ಹುಡುಕಿ. ಎಐ ನಿಮ್ಮ ಅಭಿರುಚಿಗೆ ತಕ್ಕನಾದ ಕೋಣೆಯ ಚಿತ್ರಗಳನ್ನು ತೋರಿಸುತ್ತದೆ. IKEA Place ಅಪ್ಲಿಕೇಶನ್ ಮೂಲಕ ನಿಮ್ಮ ಕೋಣೆಗೆ ವರ್ಚುವಲ್ ಪೀಠೋಪಕರಣಗಳನ್ನು ಕೂರಿಸಿ ನೋಡಿ.
ಮನೆಯ ಖರ್ಚು ನೀರಿನಂತೆ ಹರಿದುಹೋಗುತ್ತಿದೆ. ಎಲ್ಲಿ ಹೋಗುತ್ತಿದೆ, ಎಲ್ಲಿ ಪೋಲಾಗುತ್ತಿದೆ ಗೊತ್ತಾಗುತ್ತಿಲ್ಲ. ಎಐ ಆ್ಯಪ್‌ನಲ್ಲಿ (ChatGPT, Perplexity) ಪ್ರತಿದಿನದ ಖರ್ಚುಗಳನ್ನು ತುಂಬುತ್ತಾ ಹೋಗಿ. ಇವತ್ತು ತರಕಾರಿಗೆ 200 ರೂ. ಖರ್ಚು ಮಾಡಿದೆ ಅಂತ ಹೇಳಿ. ತಿಂಗಳ ಕೊನೆಗೆ ಅದು ನಿಮಗೊಂದು ವರದಿ ಕೊಟ್ಟು ಎಲ್ಲಿ ಪೋಲಾಗಿದೆ ಅಂತ ತಿಳಿಸುತ್ತೆ.
ಮನೆ ಕ್ಲೀನ್ ಮಾಡುವುದು ತಲೆನೋವಲ್ವೇ? ದಿನಾ ಕಸ ತುಂಬಿಕೊಳ್ಳುತ್ತಿರುತ್ತೆ. ಮೂಲೆ ಮೂಲೆಯಲ್ಲಿ ಕಸ ಹಾಗೆಯೇ ಇರುತ್ತೆ. ರೋಬೋಟ್ ವ್ಯಾಕ್ಯೂಮ್ ಕ್ಲೀನರ್ ಬಳಸಿ. ಇದು ನಿಮ್ಮ ಮನೆಯ ನಕ್ಷೆಯನ್ನು (Map) ತಯಾರಿಸುತ್ತೆ. ಯಾವ ರೂಮ್‌ಗಳು ಎಲ್ಲಿ, ಗೋಡೆಗಳು ಎಲ್ಲಿ, ಬಾಗಿಲು ಎಲ್ಲಿದೆ ಅಂತ ತಿಳಿಯುತ್ತದೆ. ನಿಮ್ಮ ಅಜ್ಜಿ ಮಾಡಿದ ಹಾಗೆ ಮನೆಯನ್ನು ತನ್ನಷ್ಟಕ್ಕೆ ತಾನೇ ಸ್ವಚ್ಛಗೊಳಿಸುತ್ತದೆ. ಚಾರ್ಜ್ ಕಡಿಮೆಯಾದಾಗ ತಾನೇ ಚಾರ್ಜಿಂಗ್ ಡಾಕ್‌ಗೆ ಹೋಗಿ ಚಾರ್ಜ್ ಹಾಕಿಕೊಂಡು ಬರುತ್ತೆ.
ಪಾತ್ರೆ ತೊಳೆಯಲು ಸ್ಮಾರ್ಟ್ ಡಿಶ್ ವಾಷರ್ ಬಳಸಿ. ಸ್ಮಾರ್ಟ್ ರೆಫ್ರಿಜರೇಟರ್ ಕೊಂಡುಕೊಳ್ಳಿ. ಫ್ರಿಡ್ಜ್‌ನಲ್ಲಿ ಏನಿದೆ, ಯಾವುದು ಮುಗಿದುಹೋಗಿದೆ ಅಂತ ಫೋನಿಗೆ ಮೆಸೇಜ್ ಬರುತ್ತೆ.
ಮನೆಯಲ್ಲಿ ದಿನಾ ಏನಾದರೊಂದು ಕೆಟ್ಟು ಹೋಗಿರುತ್ತಲ್ವೇ? ರಿಪೇರಿ ಆಗಬೇಕು. ಸಣ್ಣ ಸಣ್ಣದಕ್ಕೂ ಪ್ಲಂಬರ್, ಮೆಕ್ಯಾನಿಕ್, ಎಲೆಕ್ಟ್ರಿಷಿಯನ್ ಕರೆಯಬೇಕಾಗುತ್ತದೆ. ನಿಲ್ಲಿ, ಚಾಟ್‌ಜಿಪಿಟಿ ತೆರೆಯಿರಿ. ಏನು ಸಮಸ್ಯೆ ಎಂದು ಬಣ್ಣಿಸಿ. ನಿಮಗೆ ಬಂದಷ್ಟು ಹೇಳಿ. ಉಳಿದದ್ದನ್ನು ಅದೇ ಗೆಸ್ ಮಾಡುತ್ತದೆ. ಎಲ್ಲಿ ಏನಾಗಿರಬಹುದು ಎಂದು ಹೇಳಿ ಅಂಗಡಿಗೆ ಹೋಗಿ ಇಂಥದ್ದನ್ನು ತಂದು ಹೀಗೆ ಮಾಡಿದರೆ ಈ ಸಮಸ್ಯೆ ನಿಲ್ಲುತ್ತದೆ ಎಂದು ನಿಖರವಾಗಿ ಪರಿಹಾರ ಸೂಚಿಸುತ್ತದೆ. ಫ್ರಿಡ್ಜ್ ಸರಿಯಾಗಿ ಕೂಲ್ ಆಗುತ್ತಿಲ್ಲ ಎಂದರೆ ಫ್ರಿಡ್ಜ್‌ನ ಫೋಟೊ ಅಥವಾ ವಿಡಿಯೋ ತೆಗೆದು ಎಐ ಆ್ಯಪ್‌ಗೆ ಕಳಿಸಿ. ‘ನಲ್ಲಿ ಸೋರುತ್ತಿದೆ, ಯಾವ ಟೇಪ್ ಅಂಟಿಸಬೇಕು? ಎಂಥ ಅಂಗಡಿಯಲ್ಲಿ ಸಿಗುತ್ತೆ? ಫ್ಯೂಸ್ ಹೋಗಿದೆ, ಎಷ್ಟು ವೋಲ್ಟೇಜ್‌ನ ಫ್ಯೂಸ್ ತರಬೇಕು? ಯಾವ ಕಂಪನಿಯದ್ದು ಉತ್ತಮ?,’ ಎಂದೆಲ್ಲ ಕೇಳಿ ಉಚಿತ ಸಲಹೆ ಪಡೆಯಿರಿ.
ಕೈಯಿಂದ ಬಟನ್ ಒತ್ತಿ ಲೈಟ್ ಆಫ್ ಮಾಡುವುದು, ಎಸಿ ರಿಮೋಟ್ ಹುಡುಕುವುದು ಈಗೆಲ್ಲ ಹಳೇ ಪದ್ಧತಿ. ಎಐ ಆಧಾರಿತ ಸ್ಮಾರ್ಟ್ ಹೋಮ್ ಸಿಸ್ಟಂ ಬಂದಿದೆ. Philips Hue ಅಥವಾ Syska ನಂತಹ ಸ್ಮಾರ್ಟ್ ಬಲ್ಬ್‌ಗಳನ್ನು Alexa ಅಥವಾ Google ಮೂಲಕ ನಿಯಂತ್ರಿಸಬಹುದು. ನಿಮ್ಮ ಧ್ವನಿಯಿಂದಲೇ ಲೈಟ್ ಆನ್/ಆಫ್ ಮಾಡಬಹುದು. ಅದರ ಬಣ್ಣ, ಬೆಳಕಿನ ತೀವ್ರತೆಯನ್ನು ಬದಲಾಯಿಸಬಹುದು. Nest ಅಥವಾ Ring Doorbell ನಂತಹ ಎಐ ಆಧಾರಿತ ಕ್ಯಾಮೆರಾಗಳು ಮತ್ತು ಸೆನ್ಸರ್‌ಗಳ ಮೂಲಕ ಮನೆಯ ಸುರಕ್ಷತೆ ಹೆಚ್ಚಿಸಬಹುದು. ಮನೆಯ ಹೊರಗೆ ಯಾರಾದರೂ ಬಂದಾಗ ಅಥವಾ ಏನಾದರೂ ಅನುಮಾನಾಸ್ಪದ ಚಲನೆ ಕಂಡುಬಂದಾಗ ಅದು ತಕ್ಷಣವೇ ನಿಮ್ಮ ಫೋನಿಗೆ ಅಲರ್ಟ್ ಕಳಿಸುತ್ತದೆ.
Google Nest Thermostat ನಂತಹ ಸಾಧನಗಳು ಮನೆಯಲ್ಲಿರುವಾಗ ಮತ್ತು ಹೊರಗಿರುವಾಗ ಯಾವ ತಾಪಮಾನ ಆರಾಮದಾಯಕ ಎಂಬುದನ್ನು ಕಲಿತುಕೊಂಡು ಆಟೊಮ್ಯಾಟಿಕ್ ಆಗಿ ಹೊಂದಿಸಿಕೊಳ್ಳುತ್ತವೆ. ಇದರಿಂದ ಕರೆಂಟ್ ಬಿಲ್ ಕೂಡ ಉಳಿತಾಯವಾಗುತ್ತದೆ. TP-Link ಅಥವಾ Wipro ಸ್ಮಾರ್ಟ್ ಪ್ಲಗ್‌ಗಳನ್ನು ಬಳಸಿ, ಯಾವುದೇ ವಿದ್ಯುತ್ ಉಪಕರಣವನ್ನು ನೀವು ನಿಮ್ಮ ಮೊಬೈಲ್ ಮೂಲಕ ನಿಯಂತ್ರಿಸಬಹುದು. ಉದಾಹರಣೆಗೆ, ಟಿವಿ ಆನ್ ಅಥವಾ ಆಫ್ ಮಾಡಬಹುದು. Home Automation ಎಂದು ಗೂಗಲ್‌ನಲ್ಲಿ ಸರ್ಚ್ ಮಾಡಿ ಎಐ-ಆಧಾರಿತ ಸಲಹೆಗಳನ್ನು ಪಡೆದುಕೊಳ್ಳಿ.
ಮನೆಯಲ್ಲಿ ಮಕ್ಕಳಿಗೆ ಕಥೆ ಹೇಳಲು ಅಜ್ಜ-ಅಜ್ಜಿಯರಿಲ್ಲವೇ? ನಿಮಗೆ ಜಾನಪದ, ದೆವ್ವ, ವೈಜ್ಞಾನಿಕ ಕಥೆಗಳು ಗೊತ್ತಿಲ್ಲವೇ? ಎಐಗೆ ಕೇಳಿ. ದಿನಕ್ಕೊಂದು ಹೊಸದು ಕೊಡುತ್ತದೆ. ಎಐ ಮೂಲಕವೇ ಮೌಖಿಕವಾಗಿ ಕಥೆ ಹೇಳಿಸಬಹುದೂ ಕೂಡ. ಕಥೆಗಳ ಮೂಲಕ ವಿಜ್ಞಾನ, ನೈತಿಕತೆ, ಭೌತಶಾಸ್ತ್ರದ ಸಿದ್ಧಾಂತ ಇತ್ಯಾದಿಗಳನ್ನು ಕಲಿಸಬಹುದು. ಚಾಟ್‌ಜಿಪಿಟಿಗೆ “Tell a story that teaches Newton’s Third Law in Kannada” ಎಂದು ಕೇಳಿದರಾಯ್ತು.
(ಲೇಖಕರು: ವಿಜ್ಞಾನ ಪರಿಣತರು) ಟೆಕ್ ಪೋಸ್ಟ್: ಮಧು ವೈ. ಎನ್.
