ಡಿಜಿಟಲ್ ಕಳ್ಳರ ವಿರುದ್ಧ ಹೋರಾಟ

article n2

ಟೆಕ್ ಪೋಸ್ಟ್ | ಮಧು ವೈ. ಎನ್.

ನಾವೆಲ್ಲ ಸೈಫೈ ಸಿನಿಮಾಗಳಲ್ಲಿ, ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಈ ದೃಶ್ಯ ನೋಡಿದ್ದೇವೆ. ಅಲ್ಲಿ ಒಂದು ಭದ್ರತಾ ಕೋಣೆ ಇರುತ್ತದೆ. ಅದರಲ್ಲಿ ಕೆಜಿ ಕೆಜಿ ಚಿನ್ನದ ಗಟ್ಟಿಗಳು ಅಥವಾ ಕಂತೆ ಕಂತೆ ಹಣ ತುಂಬಿರುತ್ತದೆ. ಅದಕ್ಕೊಂದು ಬೃಹತ್ ಗಾತ್ರದ ಕಬ್ಬಿಣದ ಬೀಗ ಹಚ್ಚಿರಲ್ಲ. ಒಳಗೆ ಹೋಗಬೇಕೆಂದರೆ ಪಾಸ್‌ವರ್ಡ್ ಒತ್ತಬೇಕು. ಅಲ್ಲೊಂದು ಕಡೆ ಪಾಸ್‌ವರ್ಡ್ ಒತ್ತುವ ಕೀಬೋರ್ಡ್ ಇರುತ್ತದೆ. ಸ್ಫುರದ್ರೂಪಿ ಯುವಕನೊಬ್ಬ ಪಾಸ್‌ವರ್ಡ್ ಒತ್ತುತ್ತಾನೆ. ಬಾಗಿಲು ತೆರೆಯಲ್ಲ. ಅವನೊಂದಿಗೆ ಸ್ಫುರದ್ರೂಪಿ ಯುವತಿ ಇರುತ್ತಾಳೆ. ಅಲ್ಲೊಂದು ಪರದೆ ಇರುತ್ತದೆ. ಇವಳು ಅದರ ಎದುರು ಮುಖ ಹಿಡಿಯುತ್ತಾಳೆ. ಪರದೆ ಅವಳ ಕಣ್ಣುಗಳಲ್ಲಿ ಬೆಳಕು ಹಾಯಿಸಿ ಗುರುತು ಪತ್ತೆ ಹಚ್ಚುತ್ತದೆ. ಬಾಗಿಲು ತೆರೆಯುತ್ತದೆ. ಇದು ನಿಜ ಜೀವನದಲ್ಲೂ ಸಾಧ್ಯವಾ? ಅಥವಾ ಕಲ್ಪನೆಗಷ್ಟೇ ಸೀಮಿತವಾ?

ಈಗಾಗಲೇ ಬೆರಳನ್ನು ಸ್ಕ್ಯಾನ್ ಮಾಡಿ ಆಧಾರ್ ದೃಢೀಕರಣ ಮಾಡ್ತಾರಲ್ಲ? ಹಾಗೆಯೇ ಕಣ್ಣುಗಳನ್ನು ಸ್ಕ್ಯಾನ್ ಮಾಡುವಂತಿದ್ದರೆ? ನಿಮ್ಮ ಈಗಿನ ಎಟಿಎಂ ಕಾರ್ಡು ಕಳೆದು ಹೋಗಬಹುದು. ಪಿನ್ ಮರೆತು ಹೋಗಬಹುದು. ಪಾಸ್‌ವರ್ಡ್‌ನ್ನು ಕದಿಯಬಹುದು. ಬರೀ ಕಣ್ಣು ತೋರಿಸಿ ಬಾಗಿಲು ತೆರೆಯುವಂತಿದ್ದರೆ? ಈ ಬಗ್ಗೆಯ ಒಂದು ಯೋಜನೆ ತೆರೆಮರೆಯಲ್ಲಿ ರೂಪುಗೊಳ್ಳುತ್ತಿದೆ. ಸೂತ್ರಧಾರ ಓಪನ್ ಎಐ (ಚಾಟ್ ಜಿಪಿಟಿ) ಕಂಪನಿಯ ಮಾಲೀಕ ಸ್ಯಾಮ್ ಆಲ್ಟ್‌ಮನ್. ಯೋಜನೆಯ ಹೆಸರು ‘ವರ್ಲ್ಡ್ ಕಾಯಿನ್’. ಇವರು ಹೊಸ ಡಿಜಿಟಲ್ ನಾಣ್ಯ ತಂದಿದ್ದಾರೆ. ಅದರ ಹೆಸರು WLD (worldcoin).

ಈಗಿರುವ ಕ್ರಿಪ್ಟೋ ಕರೆನ್ಸಿ ನಾಣ್ಯಗಳಿಗೆ ಪರ್ಯಾಯವಾದದ್ದು. ನೆನಪಿರಲಿ WLD ಎಂದರೆ ಡಿಜಿಟಲ್ ನಾಣ್ಯ. ಒಟ್ಟು ಯೋಜನೆಯ ಹೆಸರು ‘ವರ್ಲ್ಡ್ ಕಾಯಿನ್’. ಅರ್ಥಾತ್ ಯೋಜನೆಯ ವ್ಯಾಪ್ತಿ ನಾಣ್ಯವನ್ನೂ ಮೀರಿದ್ದು. ತಂತ್ರಜ್ಞಾನ ಲೋಕ ಮಾಡಲು ಕೆಲಸವಿಲ್ಲದೆ ಹುಟ್ಟುಹಾಕುತ್ತಿರುವ ಇನ್ನೊಂದು ಫ್ಯಾನ್ಸಿ ಯೋಜನೆಯೇ ಇದು ಎಂದು ನಿಮಗೆ ಅನುಮಾನ ಬರುವ ಮುನ್ನ ಯಾಕೆ ಇದು ಭವಿಷ್ಯದಲ್ಲಿ ಮುಖ್ಯವಾಗಬಹುದು ಎಂದು ಹೇಳಿಬಿಡ್ತೇನೆ. ಈಗೀಗ ಎಲ್ಲದಕ್ಕೂ ಕೃತಕ ಬುದ್ಧಿಮತ್ತೆ (AI) ಕಾರಣ ಅನ್ನುವಹಾಗೆ.. ಇದಕ್ಕೂ ಎಐ ಕಾರಣ. ಹೀರೋ ಅಂದ ಮೇಲೆ ವಿಲನ್ ಇರಲೇಬೇಕು. ಈ ಸಿನಿಮಾದಲ್ಲಿ ವಿಲನ್ ಯಾರು? ಆತನೇ ಹೀರೋ ಆತನೇ ವಿಲನ್. ಒಂತರಾ ದ್ವಿಪಾತ್ರ. ಹಳೆಯ ಕಾಲದ ರಾಜಕುಮಾರ್ ಸಿನಿಮಾಗಳಿದ್ದಂತೆ. ಹೇಗೆ? ಮುಂದೆ ಬರಲಿರುವ ಎಐ ಜಮಾನಾದಲ್ಲಿ ಮನುಷ್ಯನಂತೆ ವರ್ತಿಸುವ ಬಾಟ್ ಮತ್ತು ರೋಬಾಟ್‌ಗಳು ಹುಟ್ಟಿಕೊಳ್ಳಲಿವೆ.

ಬಾಟ್ ಅಂದರೆ ಸಾಫ್ಟ್‌ವೇರ್ ಮಟ್ಟದ ಕೃತಕ ಮನುಷ್ಯ. ರೋಬಾಟ್ ಅಂದರೆ ಸಾಫ್ಟ್‌ವೇರ್‌ನೊಂದಿಗೆ ಹಾರ್ಡ್‌ವೇರ್ ಬೆರೆತು ನಾವು ಮುಟ್ಟಿ ಮಾತಾಡಿಸಬಲ್ಲ ಕೃತಕ ಮನುಷ್ಯ. ಇವರು ಬಂದಾಗ ಒಂದು ಹೊಸ ಅಪಾಯ ಎದುರಾಗಲಿದೆ. ಏನೆಂದರೆ ಇವರು ಕಳ್ಳರೂ ಆಗಿಬಿಡಬಹುದು! ಅಂದರೆ ಇವರು ನಿಮ್ಮಿಂದ ಎಟಿಎಂ ಕಾರ್ಡ್, ಪಿನ್, ಪಾಸ್‌ವರ್ಡ್ ಎಗರಿಸಿ ನಿಮ್ಮ ದುಡ್ಡು ಹೊಡೆಯಬಹುದಾಗಿದೆ. ಇದೇನು ಈ ಕಳ್ಳರ ಉದ್ಯೋಗವನ್ನು ಕಸಿದುಕೊಂಡಿದೆಯಾ ಅಂತೀರಾ? ಯಾಕಾಗಬಾರದು ಅಂತೀನಿ. ವರ್ಲ್ಡ್ ಕಾಯಿನ್ ಸದ್ಯಕ್ಕೆ ಈ ಬಾಟ್ ಕಳ್ಳರಿಂದ ನಮ್ಮನ್ನು ರಕ್ಷಿಸುವ ಉದ್ದೇಶ ಹೊಂದಿದೆ. ರೋಬಾಟ್ ಕಳ್ಳರನ್ನು ಹಿಡಿಯಲು ಬಹುಶಃ ರೋಬಾಟ್ ಪೊಲೀಸರೇ ಬರಬೇಕೇನೊ. ಇರಲಿ ಇದರಲ್ಲಿರುವ ತಂತ್ರಜ್ಞಾನಗಳು ಯಾವುವು? ನಮ್ಮಲ್ಲಿ ಈಗಾಗಲೇ ಬ್ಲಾಕ್‌ಚೈನ್ ತಂತ್ರಜ್ಞಾನ ಇದೆ. ಅದೇ ಕ್ರಿಪ್ಟೋ ಕರೆನ್ಸಿಯ ತಂದೆ ಅಥವಾ ತಾಯಿ. ನಮ್ಮಲ್ಲಿ ಎಐ ತಂತ್ರಜ್ಞಾನ ಸಹ ಇದೆ. ಮತ್ತು ಐರಿಸ್ ಬಯೋಮೆಟ್ರಿಕ್ ಸ್ಕ್ಯಾನ್ ಎಂಬ ಕಣ್ಣುಗಳನ್ನು ಸ್ಕ್ಯಾನ್ ಮಾಡುವ ತಂತ್ರಜ್ಞಾನವೂ ಇದೆ. ಈ ಇಷ್ಟನ್ನೂ ಮಹೇಶ್ವರ್ ಚಿತ್ರದ ಹಾಗೆ ಈ ಮೂವರೂ ಸೇರಿಕೊಂಡರೆ ಸೃಷ್ಟಿಯಾಗುವುದೇ ವರ್ಲ್ಡ್ ಕಾಯಿನ್, ಡಿಜಿಟಲ್ ಕಳ್ಳರ ವಿರುದ್ಧ ಹೋರಾಡುವ ಹೀರೋ.

ಮೊದಲಿಗೆ ಐರಿಸ್ ಮೂಲಕ ಅರ್ಬ್ (Orb) ಎಂಬ ಉಪಕರಣದಿಂದ ನಿಮ್ಮ ಕಣ್ಣುಗಳನ್ನು ಸ್ಕ್ಯಾನ್ ಮಾಡಿ ನಿಮ್ಮದೇ ಆದ ವಿಶಿಷ್ಟ ಐಡಿ ಮತ್ತು ಕೀ ಸೃಷ್ಟಿಸಲಾಗುತ್ತದೆ. ಈ ಪ್ರತಿ ಸ್ಕ್ಯಾನ್ ಯಾವುದೋ ಒಬ್ಬ ನಿರ್ದಿಷ್ಟ ಜೈವಿಕ ವ್ಯಕ್ತಿಗೆ ಜೋಡಿಸಿ ಬೆಳೆಸುವಂತೆ ನೋಡಿಕೊಳ್ಳುತ್ತದೆ. Anti-spoof ತಂತ್ರಜ್ಞಾನದ ಮೂಲಕ ಬಾಟ್‌ಗಳು ಈ ಸ್ಕ್ಯಾನ್‌ಗಳ ದುರ್ಬಳಕೆಯಾಗದಂತೆ ತಡೆಯುತ್ತದೆ.

ಕೊನೆಯದಾಗಿ ಬ್ಲಾಕ್‌ಚೈನ್ ಈ ಇಡೀ ವ್ಯವಸ್ಥೆ ವಿಕೇಂದ್ರೀಕರಣಗೊಂಡು ನಡೆಯುವಂತೆ ನೋಡಿಕೊಳ್ಳುತ್ತದೆ. ಅರ್ಥಾತ್ ನಮ್ಮ ಇಂಟರ್ನೆಟ್ ಇದ್ದಂತೆ. ಇದಕ್ಕೆ ಯಾರೋ ಒಬ್ಬ ಅಥವಾ ಒಂದು ಕಂಪನಿ ಅಥವಾ ಒಂದು ದೇಶದ ಸರ್ಕಾರ ಮಾಲೀಕನಾಗಿರುವುದಿಲ್ಲ. ಪ್ರತಿ ನಾಣ್ಯ ಅಥವಾ ಅದರ ಲಾಭದ ಎಂಟಾಣೆ ಮಟ್ಟಿಗಿನ ಹಣದ ಹರಿವಿನ ಇಂದು ಯಾರಿಂದ ಯಾರಿಗೆ ಎಷ್ಟು ವರ್ಗವಾಯಿತು ಎಂಬ ಮಾಹಿತಿ ಅಡಕವಾಗಿರುತ್ತದೆ. ಇದರಿಂದ ವ್ಯವಹಾರ ಪಾರದರ್ಶಕವಾಗಿರುತ್ತದೆ ಆದರೆ ಹೆಸರುಗಳು ಗೌಪ್ಯವಾಗಿರುತ್ತವೆ. ಸರಿ ಇದು ಬಂತಾ? ಬತ್ತಿದೆಯಾ? ಅಥವಾ ಬರುವ ಸಂಭವವಿದೆಯಾ? ಅರೆ ಆಗಲೇ ಬಂದಿದೆ ಸ್ವಾಮಿ. ಈಗಾಗಲೇ ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿ ಈ ಸ್ಕ್ಯಾನರ್‌ನ್ನು ಇಟ್ಟಿದ್ದಾರೆ.

ಅದೆಷ್ಟೋ ಲಕ್ಷ ಮಂದಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಇವರು ಆರಂಭದಲ್ಲಿ ಅಡ್ವಪ್ಪಸ್‌ತಂಗೆ ಒಂದಷ್ಟು ಉಚಿತ ನಾಣ್ಯಗಳನ್ನು ಕೊಡುತ್ತಾರೆ. ಹೊಸದಾಗಿ ಅಂಗಡಿ ತೆಗೆದಾಗ ಉಚಿತ ತಿಂಡಿ ಕೊಟ್ಟಾರಲ್ಲ ಹಾಗೆ. ಕಳೆದ ವರ್ಷ ಈ ಯೋಜನೆಯನ್ನು ವರ್ಲ್ಡ್ ಕಾಯಿನ್ ನಿಂದ ಕೇವಲ ‘ವರ್ಲ್ಡ್’ ಎಂದು ಮರುನಾಮಕರಣ ಮಾಡಲಾಗಿದೆ. ಈ ವರ್ಷ ಯುಎಸ್‌ನ ಆರು ಮುಖ್ಯ ನಗರಗಳಲ್ಲಿ ಅರ್ಬ್ (orb) ಸ್ಕ್ಯಾನರ್‌ಗಳನ್ನು ಇಡಲಾಗಿದೆ. ಈ ವರ್ಷದಿಂದ ವೀಸಾ ಡೆಬಿಟ್ ಕಾರ್ಡ್‌ನ ಮೂಲಕ WLD ನಾಣ್ಯವನ್ನು ಚಲಾಯಿಸಬಹುದು ಎನ್ನುತ್ತಾರೆ. ಬ್ರಿಟನ್ ಅಮೆರಿಕಾದಲ್ಲಿ ಇದೀಗ ಮನೆ ಮನೆಗೆ ಬಂದು ಸ್ಕ್ಯಾನ್ ಮಾಡಿಕೊಂಡು ಹೋಗುವ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ.

ಹಾಗಾದರೆ ಇನ್ನೇಕೆ ತಡ, ನಾಳೆಯಿಂದಲೇ ಇಡೀ ಜಗತ್ತು ಇದನ್ನು ಅಳವಡಿಸಿಕೊಳ್ಳಬಹುದಲ್ಲವಾ? ತಂತ್ರಜ್ಞಾನ ದೃಷ್ಟಿಯಿಂದ ಯೆಸ್ ಹೌದು. ಆದರೆ ಸಾಮಾಜಿಕ ದೃಷ್ಟಿಯಿಂದ ಇದು ಇನ್ನೂ ಪೂರ್ತಿ ಸ್ವೀಕೃತವಾಗಿಲ್ಲ. ಕಾರಣ ಮತ್ತದೇ, ಗೌಪ್ಯತೆಯ ಪ್ರಶ್ನೆ, ಸುರಕ್ಷತೆಯ ಪ್ರಶ್ನೆ, ಉದ್ದೇಶ ಲಸಿಕೆಗಳ ಪ್ರಶ್ನೆ. ಸ್ಪೇನ್ ದೇಶ ಈ ವ್ಯವಸ್ಥೆ ಜಿಡಿಪಿಆರ್ (ಯುರೋಪಿನ ಮಾಹಿತಿ ಸುರಕ್ಷತೆಯ ಕಾಯ್ದೆ) ನಿಯಮಗಳಿಗೆ ಪೂರಕವಾಗಿಲ್ಲವೆಂದು ಆರೋಪಿಸಿ ಇಡೀ ಐರಿಸ್ ಸ್ಕ್ಯಾನ್‌ಗಳನ್ನು ಡಿಲೀಟ್ ಮಾಡುವಂತೆ ಆದೇಶಿಸಿದೆ.

ಹಾಂಕಾಂಗ್ ಪ್ರೈವಸಿ ರೆಗ್ಯುಲೇಟರ್ ಈ ವ್ಯವಸ್ಥೆ ಅಗತ್ಯಕ್ಕಿಂತ ಹೆಚ್ಚಿ ಮಾಹಿತಿಯನ್ನು ಪಡೆಯುತ್ತಿದೆ ಎಂದು ನೋಟಿಸ್ ನೀಡಿದೆ. ಅನೇಕರು ಇದು ವಿಕೇಂದ್ರೀಕರಣ ಎಲ್ಲಿಯಾಯ್ತು ಎಲ್ಲವೂ ಕೇಂದ್ರೀಕರಣಗೊಳ್ಳಲಿದೆಯಲ್ಲವಾ ಅಂತಲೂ ತಕರಾರು ಎತ್ತಿದ್ದಾರೆ. ಒಟ್ಟಿನಲ್ಲಿ ನಮ್ಮನ್ನು ಬದುಕುತ್ತೋ ಬರಲ್ವೋ.. ಕಾದು ನೋಡುವಾ.

Leave a Comment

Your email address will not be published. Required fields are marked *