ಯಥಾ ಪ್ರಜಾ, ತಥಾ ಎಐ!

article m3

ಕಳೆದ ವಾರ ‘ಈ ಹೊತ್ತಿಗೆ’ ಸಾಹಿತ್ಯ ಸಮಾರಂಭದಲ್ಲಿ ಕನ್ನಡದ ಹಿರಿಯ ಲೇಖಕರಾದ ಎಸ್. ದಿವಾಕರ್ ಈ ಪ್ರಶ್ನೆ ಎತ್ತಿದರು- “ಎಐಗೆ ಸರಿಯಾದ ಮತ್ತು ಸಮರ್ಪಕವಾದ ತರಬೇತಿ ಕೊಟ್ಟರೆ ಅದು ನವೋದಯ, ನವ್ಯ, ಪ್ರಗತಿಶೀಲ, ಬಂಡಾಯ ಮುಂತಾಗಿ ಇರುವ ಯಾವ ಮಾರ್ಗದಲ್ಲಿಯಾದರೂ ಚೆನ್ನಾಗಿರುವ ಕವಿತೆ ಬರೆಯುತ್ತದೆ ಎಂದು ಇಟ್ಟುಕೊಳ್ಳೋಣ; ಆದರೆ, ಅದು ಸಾಹಿತ್ಯ ಲೋಕದಲ್ಲಿ ಈವರೆಗೆ ಕಂಡಿರದ ಹೊಸ ಮಾರ್ಗದಲ್ಲಿ ಕವಿತೆ ಬರೆಯಲು ಶಕ್ಯವೇ?”.

ಉತ್ತರ “ಬಹುತೇಕ ಇಲ್ಲ” ಎನ್ನುವಂತಿತ್ತು. ಎಐ ಲಭ್ಯವಿರುವ ಎಲ್ಲ ಮಾರ್ಗಗಳ ಎಲ್ಲಾ ಸಾಹಿತ್ಯವನ್ನೂ ಅರೆದು ಕುಡಿದು ಖಂಡಿತ ಆಯಾ ಮಾರ್ಗದ ಅತ್ಯಂತ ಹಳೆ ಕವಿತೆಗಳನ್ನು ರಚಿಸಬಲ್ಲದು. ಆದರೆ ಹೊಸ ಮಾರ್ಗವನ್ನು ಸೃಷ್ಟಿಸಬಲ್ಲದಾ ಎಂಬುದು ಅನುಮಾನ.

ಪ್ರತಿ ಹೊಸ ಸಾಹಿತ್ಯ ಮಾರ್ಗ ಹಲವು ದಶಕಗಳ ಕಾಲ ಹಲವು ತಲೆಮಾರುಗಳು ಇರುವ ಮಾರ್ಗಗಳಲ್ಲೇ ಓಡಾಡಿ ತಡಾಡಿ ದಣಿದು ಆಯಾಸಗೊಂಡಿರುವಾಗ ಧುತ್ತನೆ ಹೊಸ ಪ್ರಶ್ನೆಗಳು ಅವುಗಳಿಗೆ ಉತ್ತರ ಹುಡುಕಲು ಹೋಗಿ ವಿಫಲರಾಗಿ ನಿರಾಶರಾಗಿ ಹತಾಶರಾಗಿ ದಿಕ್ಕುಗಟ್ಟು ಪರದಾಡಿ ನೊಂದು ಬೆಂದು ಕೊನೆಗೆ ಎಲ್ಲೋ ಒಂದೆಡೆ ಯಾವುದೋ ಮುಕ್ತ ಅಥವಾ ಗುಂಪು ಅಥವಾ ಸಮುದಾಯದ ಗರ್ಭದೊಳಗೆ ನೈಸರ್ಗಿಕವಾಗಿ ಹೊಸದೊಂದು ಕುಡಿಯೊಡೆದು ಗಿಡವಾಗಿ ಬೆಳೆದು ಹೆಮ್ಮರವಾಗುತ್ತದೆ. ಇದು ಎಐನಲ್ಲಿ ಸಾಧ್ಯವಿಲ್ಲ.

ಎಐ ತನ್ನ ತರಬೇತಿಗೆ ಸಿಕ್ಕ ಅಗಾಧ ಮಾಹಿತಿಯಲ್ಲಿನ ಮಾದರಿಗಳನ್ನು ಗುರುತಿಸಿ, ಕಲಿತು ವಿವೇಕಯುಕ್ತವಾದ ಹೊಸ ಮಾತು ಆಡುತ್ತದೆ. ಹೊಸ ಬರೆಹ ಬರೆಯುತ್ತದೆ. ಈ ಮಾದರಿಗಳಲ್ಲಿ ಭಾಷೆ, ಜ್ಞಾನ, ವಿವೇಕ, ಭಾವನೆ, ಅನುಭವ ಅಡಗಿವೆ. ಆದರೆ ಎಐ ತಾಂತ್ರಿಕ ಮಿತಿಯನ್ನು ದಾಟಲು ಸಾಧ್ಯವಿಲ್ಲ. ತಾಂತ್ರಿಕವಾಗಿ ಹೇಳುವುದಾದರೆ ಎಐ ನಮ್ಮ ಬದುಕಿನಲ್ಲಿನ ನಮೂನೆಗಳನ್ನು (pattern) ಗುರುತಿಸಿ ನಮ್ಮಲ್ಲಿನ ಕೊರತೆಗಳನ್ನು ತೋರಿಸಿ ಎಚ್ಚರಿಸಿ ಅದಕ್ಕೆ ಪರಿಹಾರಗಳನ್ನು ಸೂಚಿಸಬಹುದು. ಆದರೆ ಮಾನವ ಕುಲದ ಹೊಸ ರೂಪದ ‘ಸಮಸ್ಯೆ’ಯೊಂದನ್ನು ಗುರುತಿಸಿ ವ್ಯಾಖ್ಯಾನಿಸುವುದು ಸಾಧ್ಯವಿಲ್ಲ. ಎಐಗೆ ಯಾವ ಸಮಸ್ಯೆ ನೈತಿಕ, ಯಾವುದು ಸಾಮಾಜಿಕ, ಯಾವುದು ರಾಜಕೀಯ ಎಂದು ನಿರ್ಧರಿಸಲು ಬರಲ್ಲ. ಅಂತಿಮವಾಗಿ ಮನುಷ್ಯ ನಿಷ್ಪಕ್ಷಪಾತಿಯಾಗದೆ ಎಐ ಎಂದಿಗೂ ಶುದ್ಧಮನೋಭಾವದವನಾಗಲು ಸಾಧ್ಯವಿಲ್ಲ. ಯಥಾ ರಾಜಾ, ತಥಾ ಪ್ರಜಾ; ಮನುಷ್ಯ ತಾನು ತಿದ್ದುಕೊಳ್ಳದೆ ನಾನು ಎಐ ತಿದ್ದುತೇನೆ ಎಂಬುದು ವ್ಯರ್ಥ ಮತ್ತು ಮೂರ್ಖ ಪ್ರಯತ್ನ.

Leave a Comment

Your email address will not be published. Required fields are marked *