ಕಳೆದ ಗುರುವಾರ ನಾನು ಮೈಸೂರಿನಿಂದ ಬೆಂಗಳೂರಿಗೆ ಬರುವಾಗ ಮಾರ್ಗಮಧ್ಯೆ ಒಂದು ಅಪಘಾತ ನೋಡಿದೆ. ಸಮಯ ಸಂಜೆ ಸುಮಾರು ಮೂರು ಗಂಟೆ. ಹೆದ್ದಾರಿಯ ಕೆಳಗೆ ಅಡ್ಡ ರಸ್ತೆಯಿದ್ದು ಅದಕ್ಕೊಂದು ಗವಾಕ್ಷಿಯಿದ್ದು ಈ ಕಾರು ಗವಾಕ್ಷಿಯ ಅಂಚಿನ ಮೇಲೆ ಕುಳಿತಿತ್ತು, ಮೈಸೂರಿನ ದಿಕ್ಕಿನಲ್ಲಿ ಜನ ನೆರೆದಿದ್ದರು, ಒಬ್ಬರ ಕೈಯಿಗೆ ಬ್ಯಾಂಡೇಜ್ ಕಟ್ಟುತ್ತಿದ್ದರು, ರಕ್ತ ಸೋರುತ್ತಿತ್ತು.
‘ಏನಾಯಿತು?’, ಕೇಳಿದೆ.
‘ಮಳೆ ನೀರಿನಿಂದ ಸ್ಕಿಡ್ಡಾಗಿದೆ’ ಉತ್ತರ.
‘ಅದು ಹೇಗೆ? ಈ ಗವಾಕ್ಷಿ ಮೇಲೆ ಹಾರಿ ಕುಳಿತಿದೆಯಲ್ಲ?’
‘ಇದು ಬೆಂಗಳೂರಿನ ಕಡೆಗೆ ಹೋಗುತ್ತಿದ್ದ ಕಾರು. ನೀರಿನಿಂದ ಸ್ಕಿಡ್ಡಾಗಿ ಡಿವೈಡರ್ಗೆ ಹೊಡೆದು ಅದೃಷ್ಟವಶಾತ್ ಗವಾಕ್ಷಿಯ ಗೋಡೆಗೆ ಬಡಿದು ತಿರುಗಿ ಮೈಸೂರಿಗೆ ಮುಖ ಮಾಡಿ ಕುಳಿತಿದೆ’.
ನಾನು ಸಹ ಅಲ್ಲಲ್ಲಿ ನಿಂತಿದ್ದ ನೀರು ದಾಟಿಕೊಂಡು ಬಂದಿದ್ದೆ. ಕೆಲವು ಬಾರಿ ರಸ್ತೆಯಲ್ಲಿ ನಿಂತ ನೀರಲ್ಲಿ ಚಕ್ರ ಹರಿದಾಗ ನೀರು ಹಾರುತ್ತದಲ್ಲ, ಅದು ಮೋಜಿನ ಸಂಗತಿ. ಸಣ್ಣ ರಸ್ತೆಗಳಲ್ಲಿ ಹಾಗೆ ಮಾಡಿದರೆ ಪಕ್ಕದ ಅಂಗಡಿಗಳ ಅಂಗಳಕ್ಕೆ ಅಥವಾ ಪಾದಚಾರಿಗಳ ಮೇಲೆ ಹಾರುತ್ತದೆ. ಹಾಗೆ ಮಾಡಬಾರದು. ಹೆದ್ದಾರಿಗಳು ವಿಶ್ರಮಾದಿಂದಿರುತ್ತವೆಂದು ಹಾರಿಸಬಹುದೇ?
ಯಾವುದೇ ವಾಹನ ಚಲಿಸಬೇಕೆಂದರೆ ಎಂಜಿನ್ನು ಪೆಟ್ರೋಲ್ ಉರಿಸಿ ಟಯರನ್ನು ತಿರುಗಿಸಿಬಿಟ್ಟರೆ ಸಾಲದು, ಅದು ಅರ್ಧ ಪ್ರಯತ್ನವಷ್ಟೇ. ಇನ್ನರ್ಧ ಪ್ರಯತ್ನದಲ್ಲಿ ನಿಮ್ಮ ಟಯರು ಮತ್ತು ನೆಲ ಸಹಕರಿಸಬೇಕಿರುತ್ತದೆ. ಟಯರುಗಳನ್ನು ರಬ್ಬರಿನಿಂದ ತಯಾರಿಸುವುದು ಮತ್ತು ರಸ್ತೆಗಳನ್ನು ಒರಟಾಗಿಸುವುದು ಇದಕ್ಕಾಗಿ. ರಬ್ಬರಿನ ಟಯರಿನ ಮೇಲ್ಬದರ ಒರಟು ರಸ್ತೆಯ ತರಕಲಿನೊಳಗೆ ಕೂರುತ್ತದೆ, ಚಕ್ರ ತಿರುಗಿದಾಗ ರಸ್ತೆಯನ್ನು ಹಿಂದೆ ತಳ್ಳಿ ಕಾರು ಮುಂದೆ ಚಲಿಸುತ್ತದೆ. ಒಂದು ವೇಳೆ ರಸ್ತೆಯು ಮನೆಯ ಟೈಲ್ಸ್ಗಳಷ್ಟು ಅಥವಾ ಟಯರುಗಳು ಸ್ಟೀಲ್ ಪಾತ್ರೆಗಳಷ್ಟು ನಯವಾಗಿದ್ದಿದ್ದರೆ ಚಕ್ರ ಅಲ್ಲಲ್ಲೇ ತಿರುಗಿ ಸುಮ್ಮನಾಗುತ್ತವೆ.
ಹೌದಾ, ಹಾಗಾದರೆ ರೈಲುಗಳ ಚಕ್ರಗಳಲ್ಲಿ ರಬ್ಬರೂ ಇರಲ್ಲ, ಅವುಗಳ ಹಳಿಗಳು ಒರಟೂ ಇರಲ್ಲ, ಅವು ಹೇಗೆ ಚಲಿಸುತ್ತವೆ? ಅಲ್ಲಿ ಬಳಸುವ ವಿಜ್ಞಾನವೇ ಬೇರೆ! ಅಲ್ಲಿನ ಟಯರು ಮತ್ತು ಹಳಿಗಳ ನಡುವೆ ಘರ್ಷಣೆ ತೀರಾ ಎಂದರೆ ತೀರಾ ಕಡಿಮೆ. ರೈಲಿನ ಎಂಜಿನ್ ಬೋಗಿಗಳನ್ನು ತಳ್ಳಿದಾಗ ಅಥವಾ ಎಳೆದಾಗ ಹಳಿಗಳೊಂದಿಗಿನ ಸಣ್ಣ ಮಟ್ಟದ ಘರ್ಷಣೆಯಿಂದ ರೈಲು ಚಲಿಸುತ್ತದೆ. ನಂತರ ಅದು ವೇಗ ಪಡೆಯುವುದು ಎಂಜಿನ್ನಿನ ಶಕ್ತಿ ಮತ್ತು ಒಟ್ಟು ತೂಕದಿಂದ ಉಂಟಾಗುವ ಮೊಮೆಂಟಮ್ಮಿನಿಂದ! ದಪ್ಪತಿ ಮನುಷ್ಯ ಓಡಿದ ಹಾಗೆ. ಹಾಗಾಗಿಯೇ ರೈಲುಗಳಿಗೆ ತಕ್ಷಣ ಬ್ರೇಕ್ ಹಾಕಲು ಅಸಾಧ್ಯ! ಅಂತೆಯೇ ಅವುಗಳಿಗೆ ಇಂಜಿನ್ ಆನ್ ಮಾಡಿದ ಕ್ಷಣವೇ ದುರಂತ ಓಡುವುದೂ ಅಸಾಧ್ಯ. ತಮಗೇ ಸಿದ್ಧಪಡಿಸಿರುವ ಉಬ್ಬು ತಗ್ಗು ತಿರುವುಗಳಿರದ ರಸ್ತೆಗಳಿಂದಾಗಿ ರೈಲುಗಳಿಗೆ ಇತರೆ ವಾಹನಗಳಿಗೆ ಬೇಕಾದ ಚಕ್ರ-ರಸ್ತೆಯ ನಡುವಿನ ಘರ್ಷಣೆ ಅಗತ್ಯವಿಲ್ಲ.
ಕಾರುಗಳಿಗೆ ಮರಳೋಣ. ಇಂತಹ ಕಾರು ರಸ್ತೆ ಮೇಲೆ ವೇಗವಾಗಿ ಚಲಿಸುತ್ತಿರುವಾಗ ತಕ್ಷಣ ನೀರು ಎದುರಾದರೆ ಚಕ್ರ ಮತ್ತು ರಸ್ತೆಯ ನಡುವೆ ನೀರಿನ ಪದರ ಬಂದು ಈ ಘರ್ಷಣೆ ಇಲ್ಲವಾಗುತ್ತದೆ. ಚಕ್ರ ರಸ್ತೆಯ ಸಂಪರ್ಕ ಕಡಿದುಕೊಳ್ಳುತ್ತದೆ. ಒಂದರ್ಥ ಬಾಬಾಗಳು ನೀರಿನ ಮೇಲೆ ನಡೆದು ತೋರಿಸೋಣಿ ಅಂತಾರಲ್ಲ ಹಾಗೆ. ಹೀಗಾದಾಗ ಚಾಲಕನಿಗೆ ಕಾರಿನ ನಿಯಂತ್ರಣ ತಪ್ಪುತ್ತದೆ, ಎತ್ತಲೋ ಎಳೆದಂತಾಗುತ್ತದೆ. ಇದನ್ನೇ ‘ಹೈಡ್ರೋಪ್ಲೇನಿಂಗ್’ ಎಂದು ಕರೆಯುತ್ತಾರೆ. ಇದನ್ನು ತಡೆಯಲೆಂದೇ ಈ ಚಕ್ರಗಳ ಮೇಲೆ ರಂಗೋಲಿ ಬಿಟ್ಟಂತೆ ಗೆರೆಗಳನ್ನು ಕೊರೆದಿರುವುದು. ಇವನ್ನು ‘ಥ್ರೆಡ್’ ಎನ್ನುತ್ತಾರೆ. ಈ ‘ಥ್ರೆಡ್’ಗಳ ನಡುವೆ ಗುಂಡಿಗಳಿರುತ್ತವಲ್ಲ, ಅವು ರಸ್ತೆ ಮೇಲಿನ ಸಾಧಾರಣ ಮಟ್ಟದ ನೀರಿನಿಂದ ರಕ್ಷಿಸುತ್ತವೆ. ಅರ್ಥಾತ್ ಚಕ್ರ ಚಲಿಸುವಾಗ ನೀರು ಎದುರಾದರೆ ನೀರಿಗೆ ಈ ಗುಂಡಿಗಳೊಳಗೆ ಉಸಿರಾಡಲು ಜಾಗ ಸಿಕ್ಕಿ ‘ಥ್ರೆಡ್’ಗಳಿಗೆ ನೀರಿನ ಅಡಿಯಿರುವ ರಸ್ತೆಯ ಸ್ಪರ್ಶ ಸಿಗುತ್ತದೆ. ಕಾರು ನಿರಾತಂಕವಾಗಿ ಮುಂದೆ ಚಲಿಸುತ್ತದೆ.
ಸರಿ, ಈ ಥ್ರೆಡ್ಗಳು ಅದೇಕೆ ಸೋಫಿಸ್ಟಿಕೇಟೆಡ್ ಆಗಿರುವುದು? ಈ ಥ್ರೆಡ್ಗಳು ಹೈಡ್ರೋಪ್ಲೇನಿಂಗ್ ತಡೆಯುವುದಷ್ಟೇ ಅಲ್ಲದೆ ಅವು ನೀರನ್ನು ಹೊರ ಹಾಕುತ್ತವೆ ಸಹ. ಗಮನಿಸಿದ್ದಲ್ಲಿ ಒದ್ದೆ ರಸ್ತೆಯಲ್ಲಿ ಚಲಿಸುವಾಗ ನೀರು ಸಿಡಿಯುತ್ತಿರುತ್ತದೆ! ಚಕ್ರ ಹಾದ ಹೋದ ಪಥದಲ್ಲಿ ರಸ್ತೆ ಒಣಗಿರುತ್ತದೆ. ಇದರಿಂದ ನಿಮಗೆ ಅರ್ಥವಾಗಿರಬೇಕು ನಿಮ್ಮ ಕಾರಿನ ಚಕ್ರಗಳ ಮೇಲಿನ ರಂಗೋಲಿಗಳು ಸವೆದಿದ್ದರೆ ಥ್ರೆಡ್ಗಳು ಇಲ್ಲವಾಗಿ ನಿರುಪಾಯಕಾರಿ ಮಟ್ಟದ ನೀರೂ ನಿಮ್ಮನ್ನು ಜಾರಿಸಿಬಿಡುತ್ತದೆ! ಅದರಿಂದಲೇ ಕಾಲಕಾಲಕ್ಕೆ ಟಯರುಗಳನ್ನು ಬದಲಿಸಬೇಕು ಎನ್ನುವುದು.
ಸರಿ, ರಸ್ತೆ ತುಂಬ ನೀರು ತುಂಬಿಕೊಂಡಿದ್ದರೆ ಏನು ಮಾಡುವುದು? ಅಗತ್ಯವಾಗಿ ನೀರಿನ ಮೂಲಕ ಹಾದು ಹೋಗಬಹುದು, ಆದರೆ ನಿಧಾನವಾಗಿ. ಚಕ್ರಗಳು ರಸ್ತೆಯ ಸಂಪರ್ಕ ಕಡಿದುಕೊಳ್ಳದ ಹಾಗೆ. ಸಾಮಾನ್ಯವಾಗಿ ಜನ ಹೀಗಾದಾಗ ಸಹಜವಾಗಿ ಬ್ರೇಕ್ ಒತ್ತಿಬಿಡುತ್ತಾರೆ. ಹೈಡ್ರೋಪ್ಲೇನಿಂಗ್ ಸಂದರ್ಭದಲ್ಲಿ ಸಡನ್ ಬ್ರೇಕ್ ಒತ್ತಿಬಿಟ್ಟರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಇದು ಯಾಕೆಂದರೆ ಬ್ರೇಕ್ ಒತ್ತಿದಾಗ ಟಯರು ರಸ್ತೆಯ ಸಂಪರ್ಕದಲ್ಲಿ ಇಲ್ಲದಿರುವುದರಿಂದ ಬ್ರೇಕ್ನ ಪರಿಣಾಮ ಹಿಂದಿನ ಅಥವಾ ಮುಂದಿನ ಯಾವ ಚಕ್ರಗಳ ಮೇಲೆ ಯಾವ ಪರಿಣಾಮ ಬೀರುತ್ತದೆ ಹೇಳಲಾಗುವುದಿಲ್ಲ. ಅಲ್ಲಿ ತನಕ ಅತ್ತಿತ್ತ ಎಳೆದಾಡುತ್ತಿದ್ದ ಕಾರು ಗರಕ್ಕನೆ ಉಲ್ಟಾ ತಿರುಗಿಬಿಡಬಹುದು, ಕಾರನ್ನು ರಸ್ತೆಯಿಂದಾಚೆ ಎಸೆಯಬಿಡಬಹುದು. ಆರಂಭದಲ್ಲಿ ಉದಾಹರಿಸಿದ ಅಪಘಾತದಲ್ಲಿ ಇದೇ ಆಗಿರುವುದು ಅನಿಸುತ್ತದೆ.
ಹಾಗಾದರೆ ಏನು ಮಾಡಬೇಕು? ಆಕ್ಸಿಲರೇಟರಿನ ಮೇಲಿನ ಕಾಲನ್ನು ತೆಗೆಯಬೇಕಷ್ಟೆ. ಸ್ಟೀರಿಂಗನ್ನು ಬಿಗಿಯಾಗಿ ಹಿಡಿದು ಕಾರನ್ನು ನಿಯಂತ್ರಿಸುತ್ತಿರಬೇಕು. ವೇಗ ತಗ್ಗುತ್ತಿದ್ದಂತೆ ಚಕ್ರಗಳು ರಸ್ತೆಯ ಸಂಪರ್ಕ ಪಡೆಯಲಾರಂಭಿಸುತ್ತವೆ. ಸಂಪರ್ಕ ಸಿಕ್ಕೊಡನೆ ಕಾರಿನ ನಿಯಂತ್ರಣ ಸಿಕ್ಕಿಬಿಡುತ್ತದೆ. ಹೀಗಾಗಿ ಮೋಜಿನಾದರೂ ಸರಿ, ಏನಕ್ಕಾದರೂ ಸರಿ, ರಸ್ತೆಯ ಮೇಲಿನ ನೀರಿನಿಂದ ದೂರ ಇರಿ. ದಾರಿ ಇಲ್ಲವಾದಲ್ಲಿ ನಿಧಾನವಾಗಿ ಚಲಿಸಿ. ಮಳೆಯಲ್ಲಂತೂ ನಿಧಾನವೇ ಪ್ರಧಾನ.
ಮುಖ್ಯವಾಗಿ ಜನ ಇಂತಹ ಅಪಾಯಗಳನ್ನು ಎದುರಿಸದಿರಲೆಂದು ರಸ್ತೆಗಳನ್ನು ವೈಜ್ಞಾನಿಕವಾಗಿ ಕಟ್ಟಿರುತ್ತಾರೆ. ರಸ್ತೆ ಡಿವೈಡರಿನ ಕಡೆ ಉಬ್ಬಿ ಪಾದಚಾರಿ ಕಡೆಗೆ ತಗ್ಗಿರಬೇಕು. ಆಗ ಮಳೆಯ ನೀರು ತಂತಾನೇ ಸೈಡಿಗೆ ಹರಿಯುತ್ತದೆ. ಇಷ್ಟು ಮಾತ್ರ ಸಾಲದು! ಹರಿದ ನೀರು ಮುಂದೆ ಹೋಗಲು ಜಾಗ ಮಾಡಿರಬೇಕು. ಇಲ್ಲದಿದ್ದರೆ ಅಲ್ಲಿಯೇ ಕಟ್ಟಿಕೊಳ್ಳುತ್ತದೆ. ಕ್ರಮೇಣ ರಸ್ತೆಯನ್ನು ಆವರಿಸಿಕೊಳ್ಳುತ್ತದೆ. ಮೈಸೂರು-ಬೆಂಗಳೂರು ರಸ್ತೆ ಎಷ್ಟು ವೈಜ್ಞಾನಿಕ ಅಂತಂದ್ರೆ ಇಲ್ಲಿ ನೀರು ಡಿವೈಡರಿನ ಕಡೆಗೆ ಕಟ್ಟಿಕೊಂಡು ಕೆರೆಯಾಗಿರುತ್ತದೆ!
