ಮೊನ್ನೆ ನಮ್ಮಮ್ಮ ಕಾಲ್ ಮಾಡಿದ್ರು. ‘ಬಾಳ್ಳೆಗುಪ್ಪೆ ರಾಜಪ್ಪ ಐಟಿಐ ಕೃಷಿ ತರಬೇತಿಗೆ ಹೋದ’ ಅಂತ. ಅರೆರೆ, ಭವ್ಯ ಭಾರತ ಈ ಮಟ್ಟಿಗೆ ಬೆಳಗುತ್ತಿದ್ದೆಯಾ ಅಂತ ನನಗೆ ಅಚ್ಚರಿಯಾಯಿತು. ರಾಜಪ್ಪ ರೈತರು. ಒಂದಾನೊಂದು ಕಾಲದಲ್ಲಿ ಬಾಳೆಕೋಟೆ ಕಟ್ಟಿದ್ದರಿಂದ ಆ ಹೆಸರು ಅಂಟಿಕೊಂಡಿದೆ. ಮಗ ‘ಜೀಡಪ್ಪ’ ತೋಟಗಾರಿಕೆ ಇಲಾಖೆಯಲ್ಲಿ ಕೃಷಿ ಅಧಿಕಾರಿ ಆಗಿರುವುದರಿಂದ ಇವರು ಪ್ರಗತಿಪರ ರೈತರಾಗಿದ್ದಾರೆ. ನನಗೆ ಒಂದು ಕ್ಷಣ ಇದ್ದರೂ ಇರಬಹುದು ಅನಿಸಿಬಿಟ್ಟಿತ್ತು!
‘ಎದಕಮ್ಮ?’, ಕೇಳಿದೆ.
‘ಮುಸುಕಿನ ಜೋಳಕ್ಕೆ ಬೆಂಕಿ ವರ್ಷದಂತ ಕೀಟಗಳ ಕಾಟ ಇತ್ತಲ್ವಾ ಅದಕ್ಕೆ ಮದ್ದು ಹೊಡೆಯೋಕ್ಕೆ ಮಂತ್ರ ಹಾಕಿದ್ದಾರೆ ಅಂತ’. ‘ಅಯ್ಯೋ ಮಂತ್ರ ಅಲ್ಲ ಅದು; ಡ್ರೋನ್ ತರಿಸಿದ್ದಾರೆ! ಆದರೂ ಡ್ರೋನ್ ಆದರೇನು ಕಡಿಮೆ ಮಾತಾ? ಬೆಳಿಗ್ಗೆ ಮದ್ದು ಹೊಡೆಯೋದು, ಅದೂ ನಮ್ಮೂರಲ್ಲೇ!’.
‘ಅಯ್ಯಮ್ಮ ಅಷ್ಟು ತೂಕದ್ದನ್ನ ಅದು ಎತ್ತುತ್ತಾ?’, ಒಂದು ಡ್ರಮ್ಮು ನೀರು ತುಂಬಿಸಿ ಔಷಧಿ ಬೆರೆಸಿ ಸಿಂಪಡಿಸುವುದು ವಾಡಿಕೆ. ಹಾಗಾಗಿ ಪ್ರಶ್ನೆ.
‘ಅಷ್ಟಿಷ್ಟು ಕೆಪಾಸಿಟಿ ಅಂತೆ. ಹತ್ತು ಲೀಟರು ದ್ರವ ಎಷ್ಟು ಎಕರೆಗಾಗಬಹುದು, ಅಷ್ಟನ್ನು ಮೇಲೆ ಹೊತ್ತು ಹಾರುತ್ತೆ’. ನನ್ನ ಇಂಜಿನಿಯರಿಂಗ್ ಕುತೂಹಲ ಮುಂದುವರೆಯಿತು.
‘ಒಂದೇ ಸಮನೆ ಎಷ್ಟು ಹೊತ್ತು ಹಾರಾಡುತ್ತೆ?’.
‘ಅತ್ತಿಪ್ಪೆ ಕೊಂಡುಕೊಳ್ಳಿ ಇಸ್ತಾರೆ. ಬ್ಯಾಟರಿ ಬದಲಾಯಿಸ್ತಾರೆ. ನಾಲ್ಕು ಬ್ಯಾಟರಿ ಇಟ್ಟುಕೊಂಡಿದ್ದಾರೆ, ಒಂದೊಂದನ್ನೇ ಚಾರ್ಜಿಂಗಿಗೆ ಹಾಕ್ತಾರಂತೆ’.
ಆಯ್ತು, ವಿಚಾರಣೆಯ ಕಡೆಯ ಪ್ರಶ್ನೆ. ‘ದುಡ್ಡು?’.
‘ಗಂಟೆಗೆ ನೂರು ರೂಪಾಯಿ’.
‘ಓ ಬಾಡಿಗೆನಾ?’.
‘ಉಹೂಂ ಮತೆ ಇನ್ನೇನು ಕರಡಿ ತರಲಾಗೋದಿಲ್ಲ. ಅಕ್ಕ ಪಕ್ಕದವರೆಲ್ಲ ಸೇರಿ ಹತ್ತು ಸಾವಿರದ ರೂಪಾಯಿಗಳಲ್ಲಿ ರೌಂಡ್ ಫಿಗರ್ ಇಟ್ಕೊಂಡಿದ್ದಾರಂತೆ’. ಸರಿ ಅಂತ ‘ಜೀಡಪ್ಪನಿಗೆ’ ಕಾಲ್ ಮಾಡಿದೆ. ‘ಇದರ ಮೇಲೆ ಇರುತ್ತಣ್ಣ’ ಅಂದ ಅವನು. ಅವನು ಸಿಕ್ಕಿದ್ದರಿಂದ ಇನ್ನಷ್ಟು ಮಾಹಿತಿ ಸಿಕ್ಕಿತು. ಒಂದು ಎಕರೆಗೆ ಹತ್ತು ಲೀಟರು ಹತ್ತು ನಿಮಿಷ, ಇಷ್ಟು ಗಣಿತ. ಕನಿಷ್ಠ ಇಬ್ಬರು ಕೂಲಿ, ಒಂದಿಡೀ ದಿನ ತಗೊಳ್ತಿದ್ದ ಕೆಲಸ ಅರ್ಧ ಗಂಟೆಯಲ್ಲಿ ಹತ್ತು ನಿಮಿಷದಲ್ಲಿ ಯಂತ್ರ-ನಿಖರ ಸಮಪ್ರಮಾಣದ ಸಿಂಪಡಣೆಯೊಂದಿಗೆ.
ಡ್ರೋನ್‌ಗಳು ಹೇಗೆ ಕ್ರಾಂತಿ ಉಂಟು ಮಾಡುತ್ತಿವೆ ಎಂದು ಅಚ್ಚರಿಯಾಯಿತು. ಇವು ಮೂಲತಃ ತುರ್ತುಗಾಡಿ ಅಥವಾ ಮಿಲಿಟರಿ ಕಾರ್ಯಾಚರಣೆಗಳಿಗೆಂದು ರೂಪುಗೊಂಡವು. ಹಾಗೆ ನೋಡಿದರೆ ನಮ್ಮ ಜಿಪಿಎಸ್ ಟೆಕ್ನಾಲಜಿ ಸಹ ಮಿಲಿಟರಿ ಇಂಜಿನಿಯರುಗಳ ಕೃಪೆ. ಸ್ವಲ್ಪ ಹಿಂದೆ ಹೋದರೆ ನಮ್ಮ ಇಂಟರ್ನೆಟ್ ಕೂಡ. ಅರೆ ಇನ್ನು ಸ್ವಲ್ಪ ಹಿಂದೆ ಹೋದರೆ ಕಂಪ್ಯೂಟರುಗಳು ಸಹ. ಅಷ್ಟೇ ಯಾಕೆ ನಮ್ಮ ಜೆಟ್ ವಿಮಾನಗಳು, ರೇಡಾರುಗಳು, ಪೆನ್ಸಿಲಿನ್ ಇಂಜೆಕ್ಷನ್ನನ್ನು ಒಬ್ಬರ ರಕ್ತ ಇನ್ನೊಬ್ಬರಿಗೆ ಕೊಡುವುದು, ನಮ್ಮ ಅಡುಗೆ ಮನೆಯ ಮೈಕ್ರೋವೇವ್ ಓವನ್ಗಳು ಇವೆಲ್ಲವೂ ಮಿಲಿಟರಿ ಅವಶ್ಯಕತೆಗಳ ಕೊಡುಗೆಯಲ್ಲವೇ? ಇರಲಿ ವಿಷಯಕ್ಕೆ ಬರುವ.
ಈ ಡ್ರೋನ್‌ಗಳು ಹೇಗೆ ಹಾರುತ್ತವೆ? ಇಲ್ಲಿ ಮೂರು ವೈಜ್ಞಾನಿಕ ಸಂಗತಿಗಳು ಕೆಲಸ ಮಾಡುತ್ತವೆ. ತಳ್ಳುಬಲ(thrust), ಎತ್ತುವಿಕೆ(lift) ಮತ್ತು ತಿರುಗುಬಲ(torque). ಹೆದರಬೇಡಿ, ಬಹಳ ಸರಳ ವಿಷಯಗಳು. ಒಂದೇ ಫ್ಯಾನಿನ ಡ್ರೋನಿನಿಂದ ಶುರು ಮಾಡೋಣ. ಇಲ್ಲಿ ಫ್ಯಾನುಗಳನ್ನು propellers ಅನ್ನೋಣ. ಮತ್ತು ಅವು ಮನೆಯ ಫ್ಯಾನಿನಂತಿರುವುದಿಲ್ಲ. ಒಂದು ರೀತಿಯ ಯಾರೋ ತಿರುಚಿಟ್ಟಿದ್ದಾರೇನೋ ಅನ್ನುವ ಆಕಾರದಲ್ಲಿರುತ್ತವೆ. ಆಯ್ತು, ಈ ಫ್ಯಾನನ್ನು ಆನ್ ಮಾಡಿದಾಗ ಅದು ಜೋರಾಗಿ ತಿರುಗುತ್ತಾ ತನ್ನ ಅಡಿಯ ಭಾಗದಲ್ಲಿ ಗಾಳಿಯ ಒತ್ತಡ ಸೃಷ್ಟಿಸುತ್ತದೆ. ಈ ಒತ್ತಡ ಡ್ರೋನಿನ ತೂಕ ಮೀರಿಸಿದಾಗ ಡ್ರೋನ್ ಮೇಲೆ ಎದ್ದೇಳುತ್ತದೆ. ಸೇಮ್ ಹೆಲಿಕಾಪ್ಟರ್‌ನಂತೆ. ಇದನ್ನೇ ಲಿಫ್ಟ್ ಎನ್ನುವುದು. ಆದರೆ ಒಂದೇ ಫ್ಯಾನಿನ ಡ್ರೋನ್ ಗಾಳಿಯಲ್ಲಿ ನಿಂತಲ್ಲೇ ನಿಲ್ಲಬಲ್ಲದಷ್ಟೇ (hover ಎನ್ನುವರು), ಯಾವ ದಿಕ್ಕಿಗೂ ಚಲಿಸಲಾಗದು.
ಇನ್ನು ಟಾರ್ಕ್(ತಿರುಗುಬಲ) ಎಂದರೆ ಫ್ಯಾನು ಒಂದು ದಿಕ್ಕಿನಲ್ಲಿ ಭರನೆ ತಿರುಗುವಾಗ ಅದಕ್ಕೆ ಜೇತು ಬಿದ್ದಿರುವ ಡ್ರೋನ್ ಉಲ್ಟಾ ತಿರುಗಲಾರಂಭಿಸುತ್ತದೆ. ಇದು ಯಾಕೆ? ನೀವು ನಡೆಯುವಾಗ ಭೂಮಿಯನ್ನು ಹಿಂದೆ ತಳ್ಳಿದರಷ್ಟೇ ಮುಂದೆ ಹೋಗುವುದಲ್ಲವೇ? ಹಾಗೆ ಫ್ಯಾನು ಒಂದು ದಿಕ್ಕಿನಲ್ಲಿ ತಿರುಗುವಾಗ ಡ್ರೋನನ್ನು ವಿರುದ್ಧ ದಿಕ್ಕಿಗೆ ತಳ್ಳುತ್ತಿರುತ್ತದೆ. ಆದ್ದರಿಂದ ಡ್ರೋನ್ ಸಹ ಉಲ್ಟಾ ತಿರುಗಲಾರಂಭಿಸುತ್ತದೆ! ಆದ್ದರಿಂದ ಒಂದು ಫ್ಯಾನಿನ ಡ್ರೋನ್ ನಿಷ್ಪ್ರಯೋಜಕ. ಹಾಗಾದರೆ ಹೆಲಿಕಾಪ್ಟರ್‌ನಲ್ಲಿ ಒಂದೇ ಫ್ಯಾನಿದ್ದರೂ ಅದು ಉಲ್ಟಾ ತಿರುಗಲ್ವಲ್ಲ? ಬಿಟ್ಟರೆ ಅದೂ ತಿರುಗುತ್ತೆ, ಅದನ್ನು ತಡೆಯಲೆಂದೇ ಬಾಲದಲ್ಲಿ ಸಣ್ಣ ಫ್ಯಾನು ಇಟ್ಟಿರುತ್ತಾರೆ. ಅದು ಹೆಲಿಕಾಪ್ಟರ್ ಅನ್ನು ನಿಯಂತ್ರಣದಲ್ಲಿಟ್ಟಿರುತ್ತದೆ. ನೀವು ಸಿನಿಮಾಗಳಲ್ಲಿ ನೋಡಿರಬಹುದು, ಹೆಲಿಕಾಪ್ಟರ್‌ನ ಬಾಲಕ್ಕೆ ಬೆಂಕಿ ಬಿದ್ದರೆ ಅದು ಗರಗರನೆ ತಿರುಗುತ್ತಾ ನೆಲಕ್ಕೆ ಅಪ್ಪಳಿಸುವುದನ್ನು!
ಒಂದು ಡ್ರೋನಿಗೆ ಎರಡು ಫ್ಯಾನುಗಳಿದ್ದರೆ ತಕ್ಕಮಟ್ಟಿಗೆ ಬ್ಯಾಲೆನ್ಸ್ ಸಿಗುತ್ತದೆ. ಎರಡೂ ಫ್ಯಾನುಗಳು ತಿರುಗಿದಾಗ ಲಿಫ್ಟ್ ಸಿಗುತ್ತದೆ. ಪರಸ್ಪರ ವಿರುದ್ಧ ದಿಕ್ಕಿನಲ್ಲಿ ತಿರುಗಿದಾಗ ಈ ತಿರುಗುಬಲ ಕೂಡ ಕ್ಯಾನ್ಸಲ್ಲಾಗುತ್ತದೆ. ಅಲ್ಲಿಗೆ ಡ್ರೋನ್ ಗಾಳಿಯಲ್ಲಿ ಸ್ಥಿರವಾಗಿ ನಿಲ್ಲುತ್ತದೆ. ಇದು ಹಿಂದೆ ಮುಂದೆ ಸಹ ಚಲಿಸಬಲ್ಲದು. ಆದರೆ ಎರಡೇ ಫ್ಯಾನು ಇರುವುದರಿಂದ ಅಷ್ಟೇ ನಿಖರವಾದ ನಿಯಂತ್ರಣ ಸಿಗಲ್ಲ.
ಮೂರು ಫ್ಯಾನುಗಳ ಡ್ರೋನ್ ಒಂದು ಫ್ಯಾನಿನ ಡ್ರೋನಿಗೆ ಸಮ, ನಿಷ್ಪ್ರಯೋಜಕ ಕಲ್ಪನೆ.
ಆದ್ದರಿಂದಲೇ ಇಂದು ಜಗತ್ತಿನಾದ್ಯಂತ ನಾಲ್ಕು ಫ್ಯಾನುಗಳ ಡ್ರೋನ್‌ಗಳು ಚಾಲ್ತಿಯಲ್ಲಿರುವುದು. ಇವನ್ನು ಕ್ವಾಡ್‌ಕಾಪ್ಟರ್ ಎಂದು ಕರೆಯುತ್ತಾರೆ. ಇವುಗಳಲ್ಲಿ ಎದುರು ಮೂಲೆಗಳಲ್ಲಿರುವ ಫ್ಯಾನುಗಳು ಜೋಡಿ ಅಥವಾ ದೋಸ್ತಿ. ಇವುಗಳಲ್ಲಿ ಒಂದು ಜೋಡಿ ಒಂದು ದಿಕ್ಕಿನಲ್ಲಿ, ಇನ್ನೊಂದು ಜೋಡಿ ಇನ್ನೊಂದು ದಿಕ್ಕಿನಲ್ಲಿ ತಿರುಗುತ್ತಿರುತ್ತವೆ. ಆದ್ದರಿಂದ ಪರಸ್ಪರ ತಿರುಗುಬಲ ಕ್ಯಾನ್ಸಲ್ಲಾಗಿ ಡ್ರೋನ್ ಸ್ಥಿರವಾಗಿರುತ್ತದೆ.
ಆಯ್ತು, ಈ ಡ್ರೋನ್‌ಗಳು ಮುಂದೆ ಹೇಗೆ ಚಲಿಸುತ್ತವೆ? ಎಡ ಬಲ ಹೇಗೆ ತಿರುಗುತ್ತವೆ? ಬಹಳ ಸರಳವಾದ ತಂತ್ರ ಬಳಸುತ್ತಾರೆ. ನಿಂತಲ್ಲೇ ಎಡಕ್ಕೊ ಬಲಕ್ಕೊ ತಿರುಗಿಸಬೇಕೆಂದರೆ(yaw ಎನ್ನುವರು) ಒಂದು ಜೋಡಿಯ ಫ್ಯಾನುಗಳ ವೇಗ ತಗ್ಗಿಸಿದರಾಯ್ತು, ತಿರುಗುಬಲದ ಏರುಪೇರಿನ ಕಾರಣ ಡ್ರೋನ್ ತಿರುಗುತ್ತದೆ. ಹಿಂದೆ-ಮುಂದೆ ಎಡ-ಬಲ ಚಲಿಸಬೇಕೆಂದರೆ ದಿಕ್ಕಿನೆಡೆಗಿರುವ ಎರಡು ಫ್ಯಾನುಗಳ(ಜೋಡಿಯಲ್ಲ) ವೇಗ ತಗ್ಗಿಸುವುದು, ವಿರುದ್ಧ ದಿಕ್ಕಿನ ಫ್ಯಾನುಗಳ ವೇಗ ಹೆಚ್ಚಿಸುವುದು. ಹೀಗೆ ಮಾಡಿದಾಗ ವೇಗ ತಗ್ಗಿದ ಫ್ಯಾನುಗಳ ಕಡೆ ಗಾಳಿಯ ಒತ್ತಡ ಕಡಿಮೆಯಾಗಿ ಡ್ರೋನ್ ಬಾಗುತ್ತದೆ. ಬಾಗಿದಾಗ ಡ್ರೋನಿನ ನೆತ್ತಿ ಸಹ ಬಾಗುತ್ತದೆ. ಫ್ಯಾನುಗಳು ತಿರುಗಿದಾಗ ಡ್ರೋನ್ ಮೇಲೆಳುತ್ತದೆ ಎಂಬುದು ನಮಗೆ ಮನವರಿಕೆಯಾಗಿದ್ದರೆ, ಹೀಗೆ ಬಾಗಿದ ಡ್ರೋನ್ ಮೇಲೆ ಏಳುವ ಬದಲಾಗಿ ಬಾಗಿದ ದಿಕ್ಕಿನಲ್ಲಿ ಚಲಿಸುತ್ತದೆ ಎಂಬುದು ಹೊಳೆಯುತ್ತದೆ! ಇಷ್ಟೇ ತಂತ್ರಜ್ಞಾನ.
