ಸಿಮ್ ವಿಚಾರದಲ್ಲಿ ನಾವು ಎಷ್ಟು ಬೇಗ ಎಷ್ಟು ದೂರ ಬಂದುಬಿಟ್ಟೆವು! 1991ರಲ್ಲಿ ತಯಾರಾದ ಮೊದಲ ಸಿಮ್ ಒಂದು ಎಟಿಎಂ ಕಾರ್ಡಿನ ಗಾತ್ರವಿತ್ತು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಅದರಲ್ಲಿ ಐದು ಎಸ್ಸೆಮ್ಮೆಸ್‌ಗಳು, ಇಪ್ಪತ್ತು ನಂಬರುಗಳನ್ನು ಸೇವ್ ಮಾಡಬಹುದಿತ್ತಂತೆ. ಬಹುತೇಕ ಭಾರತೀಯರಿಗೆ ಪರಿಚಯವಿರುವ ಸಿಮ್ ಅದರ ಮಗಿರಾಯ ‘ಮಿನಿ ಸಿಮ್’, 1996ರಲ್ಲಿ ಬಂದಿದ್ದು; ಒಂದಿಂಚು ಉದ್ದ ಇತ್ತು. ಮೊಮ್ಮಗ ಬಂದಿದ್ದು 2010ರಲ್ಲಿ; ‘ಮೈಕ್ರೋ ಸಿಮ್’ ಎಂದು ಕರೆಸಿಕೊಂಡಿತು. ಇದನ್ನು ಕಷ್ಟಪಟ್ಟು ನಮ್ಮ ಬೆರಳುಗಳಲ್ಲಿ ಹಿಡಿಯಬಹುದಾಗಿತ್ತು. 2012ರ ಹೊತ್ತಿಗೆ ಮರಿಮಗನ ಜನನ, ಅದೇ ‘ನ್ಯಾನೋ ಸಿಮ್’; ಬೆರಳುಗಳಲ್ಲಿ ಹಿಡಿಯುವುದು ಅಸಾಧ್ಯವಾಗಿತ್ತು. ಇದು ಈಗಲೂ ಚಾಲ್ತಿಯಲ್ಲಿದೆ. ಆದರೆ, ಈಗ ಅಂದರೆ 2024ರಲ್ಲಿ ಅದೂ ಬಹುತೇಕ ಅದೃಶ್ಯವಾಗುವ ಹಂತದಲ್ಲಿದೆ, ತನ್ನ ಆಧುನಿಕ ಸುಪುತ್ರ ಇ-ಸಿಮ್‌ನ ಪ್ರವೇಶದ ಮೂಲಕ. ಸಾಮಾನ್ಯವಾಗಿ ಜನ ಅಂದುಕೊಳ್ಳುವಂತೆ ಇದರ ವಿಸ್ತಾರ ರೂಪ ‘ಎಲೆಕ್ಟ್ರಾನಿಕ್ ಸಿಮ್’ ಅಲ್ಲ, ಅದು ‘ಎಂಬೆಡೆಡ್ ಸಿಮ್’ ಎಂದು. ಇದರ ಅರ್ಥ ಫೋನಿನೊಳಗೆ ನೆಟ್ಟಿರುವ (ಎಂಬೆಡ್ ಆಗಿರುವ) ಸಿಮ್ ಎಂದು. ಹಾಗಾದರೆ, ಏರ್‌ಟೆಲ್‌ನಿಂದ ಜಿಯೋಗೆ ಅಥವಾ ಜಿಯೋದಿಂದ ಏರ್‌ಟೆಲ್‌ಗೆ ಜಂಪ್ ಹೊಡೆಯಬೇಕೆಂದರೆ ಏನು ಮಾಡುವುದು?
ಸಿಮ್‌ನ ಉದ್ದೇಶ ಮತ್ತು ಒಟ್ಟು ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂದು ಅರ್ಥಮಾಡಿಕೊಳ್ಳೋಣ. SIM (subscriber identification module), ಹೆಸರೇ ಹೇಳುವಂತೆ ಇದೊಂದು ಗುರುತಿನ ಚೀಟಿ. ನಮ್ಮ ಪಾಸ್‌ಪೋರ್ಟ್ ಇದ್ದಂತೆ. ಇದರಲ್ಲಿ IMSI (International Mobile Subscriber Identity) ಎಂಬ ಸಂಖ್ಯೆ ಸೇವ್ ಆಗಿರುತ್ತದೆ. ಹೆಸರೇ ಹೇಳುವಂತೆ IMSI ಅಂತಾರಾಷ್ಟ್ರೀಯ ಮಟ್ಟದ ಗುರುತಿನ ಸಂಖ್ಯೆ. ನಾವು ಯಾವ ದೇಶಕ್ಕೆ ಹೋದರೂ ಗುರುತಿನ ಸಂಖ್ಯೆ ಇನ್ನೊಂದು ಸಿಮ್‌ನೊಂದಿಗೆ ತಾಳೆ ಆಗುವುದಿಲ್ಲ. IMSIನಲ್ಲಿ 3 ಭಾಗಗಳಿವೆ. MCC (Mobile Country Code), ದೇಶದ ಗುರುತು; MNC (Mobile Network Code), ಸರ್ವಿಸ್ ಪ್ರೊವೈಡರ್‌ನ ಗುರುತು; MSIN (Mobile Subscriber Identification Number), ನಿಮಗೇಂದೇ ಮೀಸಲಿಟ್ಟ ವಿಶಿಷ್ಟ ಗುರುತು.
ನಾವು ಸಿಮ್ಮನ್ನು ಮೊಬೈಲೊಳಗೆ ಹಾಕಿದ ತಕ್ಷಣ ನಮ್ಮ ಫೋನು ಅದರಲ್ಲಿನ ಗುರುತಿನ ಸಂಖ್ಯೆಯನ್ನು ಸಮೀಪದ ಟವರ್‌ಗಳಿಗೆ ಕಳುಹಿಸುತ್ತದೆ. ಟವರ್‌ಗಳಲ್ಲಿರುವ ಕೊಡೆಗಳು ಈ ಗುರುತು ನಮ್ಮದಾ ಎಂದು ಪರೀಕ್ಷಿಸುತ್ತವೆ. ಹೌದೆಂದಾದರೆ ಫೋನಿಗೆ ‘ಹೌದು, ಇದು ನಮ್ಮದೇ ಸಿಮ್ಮು’ ಎಂದು ಮರುತ್ಸರಿಸುತ್ತವೆ. ಅಲ್ಲಿಗೆ ಫೋನ್ ಮತ್ತು ಸಮೀಪದ ಟವರಿನ ನಡುವೆ ಸಂಪರ್ಕ ಏರ್ಪಡುತ್ತದೆ. ಸಿಮ್ ನಲ್ಲಿ ಇನ್ನಷ್ಟು ಮಾಹಿತಿ ಅಡಕವಾಗಿರುತ್ತದೆ. ಸೆಕ್ಯೂರಿಟಿಗೋಸ್ಕರ Key Identification Number (Ki) ಎಂಬ ಸಂಖ್ಯೆ ಸೇವ್ ಆಗಿರುತ್ತದೆ. ಇದು ಮನೆಯ ಬೀಗ ಇದ್ದಂಗೆ. ಪ್ರತಿ ಕ್ಯಾರಿಯರ್ (ಏರ್‌ಟೆಲ್, ಜಿಯೋ…) ಸಿಮ್‌ನೊಳಗೊಂದು ಬೀಗ ಇಟ್ಟು ಬೀಗದ ಕೈಯನ್ನು ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ. ನಮ್ಮ ಫೋನು ಸ್ಥಳೀಯ ಟವರಿನೊಂದಿಗೆ ಸಂಪರ್ಕ ಸಾಧಿಸಿದಾಗ ಅಲ್ಲಿನ ಕೊಡೆ ಮೊದಲು ತನ್ನ ಬಳಿಯಿರುವ ಬೀಗದ ಕೈಯಿಂದ ಈ ಬೀಗ ಓಪನ್ ಆಗುತ್ತದೆಯೇ ಎಂದು ಪರೀಕ್ಷಿಸುತ್ತದೆ. ಅದು ಪಾಸಾದರೆ ಮಾತ್ರ ಮುಂದಿನ ಮಾತುಕತೆ! ಇದರಿಂದಾಗಿ ಇನ್ಯಾರೋ ಕಳ್ಳರು ಡೂಪ್ಲಿಕೇಟ್ ಸಿಮ್ ತಯಾರಿಸಿ ಏರ್‌ಟೆಲ್, ಜಿಯೋ ನೆಟ್‌ವರ್ಕ್‌ಗಳನ್ನು ಕಳ್ಳತನದಿಂದ ಬಳಸುವುದು ತಪ್ಪಿಸಿದಂತಾಗುತ್ತದೆ.
ಸಿಮ್‌ನೊಳಗೆ ಇನ್ನೂ ಒಂದು ಸಂಖ್ಯೆ ಇರುತ್ತದೆ. ಅದನ್ನು PIN (Personal Identification Number) ಎಂದು ಕರೆಯುತ್ತಾರೆ. ಇದು ನಮ್ಮ ಮತ್ತು ನಮ್ಮ ಸಿಮ್ ನಡುವೆ ಇರುವ ಸೆಕ್ಯೂರಿಟಿ ಸಿಸ್ಟಮ್ಮು. ನಾವು ಫೋನ್ ಓಪನ್ ಮಾಡಿದಾಗ ಮೂರು ಸಾರಿ ತಪ್ಪು PIN ಟೈಪಿಸಿದರೆ ಸಿಮ್ ಲಾಕಾಗುತ್ತದೆ. ಮತ್ತೆ ಅದನ್ನು ತೆರೆಯಬೇಕೆಂದರೆ PUK (Personal Unblocking Key) ಕೋಡ್ ಒತ್ತಬೇಕು. ಈ PUK ಕೋಡ್ ನಮ್ಮತ್ರ ಇರಲ್ಲ, ಕ್ಯಾರಿಯರ್ ಹತ್ತಿರ ಇರುತ್ತದೆ. ಅರ್ಥಾತ್ ಸರ್ವಿಸ್ ಸೆಂಟರಿಗೆ ಹೋಗಿ ಅನ್‌ಲಾಕ್ ಮಾಡಿಸಿಕೊಳ್ಳಬೇಕು. ಇಂಥ ಪಿನ್ ಅನ್ನು ಸಿಮ್ ತಗೊಂಡ ನಂತರ ನಾವು ಬದಲಾಯಿಸಬಹುದು, ಬದಲಾಯಿಸಬೇಕು!
ಇಷ್ಟೇ ಸಿಮ್‌ನ ಕೆಲಸ, ಒಂದು ನಾಲ್ಕಾರು ಗುರುತಿನ ಚೀಟಿಗಳನ್ನು ಇಟ್ಟುಕೊಳ್ಳುವುದು. ಇದರ ಮೇಲೆ ಎಸ್ಸೆಮ್ಮೆಸ್ಸು, ಫೋನ್ ನಂಬರುಗಳನ್ನು ಸೇವ್ ಮಾಡುವುದು ಅವೆಲ್ಲ ಬೋನಸ್. ಅವು ಮೂಲ ಉದ್ದೇಶದ ಭಾಗವಲ್ಲ, ಅಕಸ್ಮಾತ್ ಸಿಮ್ಮನ್ನು ಒಂದು ಫೋನಿನಿಂದ ಇನ್ನೊಂದು ಫೋನಿಗೆ ವರ್ಗಾಯಿಸಿದಾಗ ಕಾಂಟ್ಯಾಕ್ಟುಗಳು ತಪ್ಪಿ ಹೋಗದಿರಲಿ ಎಂದು ಸ್ವಲ್ಪ ಜಾಗ ಕೊಟ್ಟಿರುತ್ತಾರೆ.
ಈಗ ಇ-ಸಿಮ್‌ಗೆ ಬರೋಣ. ಮೊದಲೇ ಹೇಳಿದಂತೆ ಇ-ಸಿಮ್ ಎಂದರೆ ಫೋನಿನೊಳಗೆ ಅಂಟಿಕೊಂಡಿರುವ ಸಿಮ್. ನಾವು ಜಿಯೋ ಏರ್ ಟೆಲ್‌ನಿಂದ ಖರೀದಿಸಿ ನಡೆಸಬೇಕಿಲ್ಲ, ಹಾಗಿದ್ದಲ್ಲಿ ಮೇಲಿನ ಎಲ್ಲಾ ವಿವರಗಳು ಇ-ಸಿಮ್‌ನಲ್ಲಿ ಹೇಗೆ ಬರುತ್ತವೆ? ಫೋನಿನ ತಯಾರಕರು ಫೋನಿನೊಳಗೆ ಒಂದು ಚಿಕ್ಕ ಖಾಲಿ ಸಿಮ್ ಇಟ್ಟು ಮಾರುತ್ತಾರೆ. ನಾವು ಏರ್‌ಟೆಲ್, ಜಿಯೋ ಬಳಿ ಹೋಗಿ ಸಿಮ್ ಕೇಳಿದಾಗ ಅವರು ನಮಗೊಂದು ಕ್ಯೂಆರ್ ಕೋಡ್ ಕೊಡುತ್ತಾರೆ. ಅದನ್ನು ಸ್ಕ್ಯಾನ್ ಮಾಡಿದಾಗ ನಮ್ಮ ಫೋನು ಇಂಟರ್ನೆಟ್‌ನಿಂದ ಒಂದು ಬಾಹ್ಯ ಸಿಮ್ ನೊಳಗೆ ಏನೇನಿತ್ತೋ ಅದನ್ನೆಲ್ಲ ಡೌನ್‌ಲೋಡ್ ಮಾಡಿಕೊಳ್ಳುತ್ತದೆ. ಅದನ್ನೇ ನಾವು ‘ಪ್ರೊಫೈಲ್’ ಎಂದು ಕರೆಯುತ್ತೇವೆ. ಒಂದರಿಂದ ಇನ್ನೊಂದಕ್ಕೆ ಜಂಪ್ ಹೊಡೆಯುವಾಗ ಹೊಸ ಕ್ಯಾರಿಯರ್ ಹೊಸ ಕ್ಯೂಆರ್ ಕೋಡ್ ಕೊಡುತ್ತಾರೆ. ನಮ್ಮ ಫೋನು ಪುನಃ ಹೊಸ ಪ್ರೊಫೈಲನ್ನು ಡೌನ್‌ಲೋಡ್ ಮಾಡಿಕೊಂಡು ಇ-ಸಿಮ್‌ನಲ್ಲಿ ಸೇವ್ ಮಾಡುತ್ತದೆ. ಇದರರ್ಥ ಇ-ಸಿಮ್ ಆಕ್ಟಿವೇಟ್ ಆಗಲು ಇಂಟರ್ನೆಟ್ ಕನೆಕ್ಷನ್ ಅವಶ್ಯ. ಯಾಕೆ ಇ-ಸಿಮ್? ಬಾಹ್ಯ ಸಿಮ್ ಇದ್ದಾಗ ಪ್ರತಿ ಸಲ ಕ್ಯಾರಿಯರ್ ಬದಲಾಯಿಸಿದಾಗ ಹೊಸ ಸಿಮ್ ಪಡೆಯಬೇಕಾದ ದುರ್ದು ನಮಗೆ; ಇದಕ್ಕೇಂದೇ ಫೋನಿನಲ್ಲಿ ಒಂದು ತೆರೆಯಬಹುದಾದ ತಟ್ಟೆ ಮಿಸಲಿಡಬೇಕಾದ ದುರ್ದು ಫೋನ್ ತಯಾರಕರಿಗೆ; ಇದೊಂದು ತಲೆನೋವಾಗಿ ಬಿಟ್ಟಿತ್ತು. ಫೋನಿನ ತಯಾರಕರು “ಅದೆಲ್ಲ ಬೇಡ, ನಾವೇ ಒಂದು ಖಾಲಿ ಸಿಮ್ ಇಟ್ಟೀವಿ, ನೀವು ನಿಮ್ಮ ಗುರುತಿನ ಚೀಟಿಗಳನ್ನು ಕೊಟ್ಟರೆ ಸಾಕು,” ಎಂದು ಈ ನಿರ್ಧಾರಕ್ಕೆ ಬಂದಿದ್ದಾರೆ.
