ಜನಪ್ರಿಯ ಇತಿಹಾಸಕಾರ ಮತ್ತು ಚಿಂತಕ ಯುವಲ್ ನೋವಾ ಹರಾರಿ, ಇತ್ತೀಚೆಗೆ ಭಾರತದ ಯುವ ಉದ್ಯಮಿ ನಿಖಿಲ್ ಕಾಮತ್ ಅವರ ‘WTF’ ಪಾಡ್‌ಕಾಸ್ಟ್‌ನಲ್ಲಿ ಸುದೀರ್ಘ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಅವರು 2026ರ ಜಾಗತಿಕ ವಿದ್ಯಮಾನಗಳು, ಅಮೆರಿಕದ ರಾಜಕೀಯ ಸ್ಥಿತ್ಯಂತರಗಳು, ಪುಟಿನ್ ಮತ್ತು ಟ್ರಂಪ್ ನಡುವಿನ ‘ವೈಯಕ್ತಿಕ’ ಸಂಬಂಧಗಳು ಜಗತ್ತನ್ನು ಮತ್ತೆ ಮಧ್ಯಯುಗದ ವಂಶಾಡಳಿತದ ರಾಜಕೀಯಕ್ಕೆ ತಳ್ಳುತ್ತಿವೆಯೇ? ಜಾಗತಿಕ ನಂಬಿಕೆ ಕುಸಿಯುತ್ತಿದೆಯೇ? ಎಂಬಂತಹ ಗಂಭೀರ ವಿಷಯಗಳ ಬಗ್ಗೆ ಚರ್ಚಿಸಿದ್ದರು. ಅಷ್ಟೇ ಅಲ್ಲದೆ, ಎಐ ಅಲ್ಗಾರಿದಮ್‌ಗಳು ಮನುಷ್ಯರ ನಡುವಿನ ಸಂವಹವನ್ನು ಹೇಗೆ ತಮ್ಮ ಹತೋಟಿಗೆ ತೆಗೆದುಕೊಳ್ಳುತ್ತಿವೆ ಮತ್ತು ಆಧುನಿಕ ಬಂಡವಾಳಶಾಹಿ ಹೇಗೆ ಅಮರರಾಗಿರುವ ಆಸೆಯ ಹಿಂದೆ ಬಿದ್ದಿದೆ ಎಂಬುದರ ಬಗ್ಗೆಯೂ ಎಚ್ಚರಿಸಿದ್ದರು.
ಮುಖ್ಯವಾಗಿ, ಎಐ ನಮ್ಮ ಗಮನವನ್ನು (Attention) ಸೆಳೆಯುವುದರ ಜೊತೆಗೆ, ಈಗ ಮನುಷ್ಯರೊಂದಿಗೆ ಆಪ್ತತೆಯನ್ನೂ (Intimacy) ಸಾಧಿಸುವ ಹಂತಕ್ಕೆ ತಲುಪುತ್ತಿರುವ ಬಗ್ಗೆ ಬೆಳಕು ಚೆಲ್ಲಿದ್ದರು. ಇಂದಿನ ಯುವಜನತೆಗೆ ಕೇವಲ ಕೋಡಿಂಗ್‌ನಂತಹ ಸಂಕುಚಿತ ಕೌಶಲಗಳಿಗಿಂತ ‘ಹೃದಯ, ಮೆದುಳು ಮತ್ತು ಕೈಗಳ’ ಸಮತೋಲನವಿರುವ ವಿಶಾಲವಾದ ಬೌದ್ಧಿಕ ತಳಹದಿ ಅಗತ್ಯ ಎಂದು ಕಿವಿಮಾತು ಹೇಳಿದ್ದರು.
ಹರಾರಿ ಅವರ ವಿಚಾರಗಳು ನಿಸ್ಸಂಶಯವಾಗಿ ಕೇಳುಗರಲ್ಲಿ ಮೋಡಿ ಮಾಡುತ್ತವೆ. ಆದರೆ ಸೂಕ್ಷ್ಮವಾಗಿ ಅವಲೋಕಿಸಿದಾಗ ಅವರ ವಿಚಾರಗಳಲ್ಲಿ ಕೆಲವು ವಿರೋಧಾಭಾಸಗಳು ಕಂಡುಬರುತ್ತವೆ. ಇವರು ನಿಜಕ್ಕೂ ನಮ್ಮ ಪೌರಸ್ತ್ಯ (Eastern) ಚಿಂತನಾ ಲಹರಿಯನ್ನು ಮೆಚ್ಚಿ ಅನುಕರಿಸುತ್ತಿದ್ದಾರೋ ಅಥವಾ ಕೇವಲ ಪಾಶ್ಚಿಮಾತ್ಯ ಕನ್ನಡಕದ ಮೂಲಕ ನೋಡಿ ವ್ಯಾಖ್ಯಾನಿಸುತ್ತಿದ್ದಾರೋ ಎಂಬ ಸಂಶಯಕ್ಕೆ ತಳ್ಳುತ್ತವೆ. ಮೇಲಿನ ಸಂದರ್ಶನದಲ್ಲಿ ಅವರು ಮಂಡಿಸಿದ ನಾಲ್ಕು ಪ್ರಮುಖ ವಿಷಯಗಳ ಬಗ್ಗೆ – ಅಂದರೆ ದುಃಖದ ಸ್ವರೂಪ, ಕ್ರೈಸ್ತ ಧರ್ಮದ ಪ್ರಸಾರ, ಎಐ ನ ಸಾಂಸ್ಕೃತಿಕ ಪಾತ್ರ ಮತ್ತು ಸತ್ಯದ ಸಂಕೀರ್ಣತೆ – ತಾಂತ್ರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ನನಗೆ ಕೆಲವು ಭಿನ್ನಾಭಿಪ್ರಾಯಗಳು ಮೂಡಿ ಸಬ್‌ಸ್ಟ್ಯಾಕ್‌ನಲ್ಲೊಂದು ಪತ್ರ ಬರೆದಿದ್ದೆ. ಅದರ ಕನ್ನಡದ ಪ್ರತಿರೂಪ ಇಲ್ಲಿದೆ.
ಪ್ರಿಯ ಯುವಲ್,
ಇತ್ತೀಚೆಗೆ ನಿಖಿಲ್ ಕಾಮತ್ ಅವರೊಂದಿಗಿನ ನಿಮ್ಮ ಸಂದರ್ಶನವನ್ನು ನೋಡಿದೆ. ಸಂಕೀರ್ಣವಾದ ಮಾನವ ಇತಿಹಾಸವನ್ನು ನೀವು ಸರಳೀಕರಿಸುವ ರೀತಿಗೆ ನಾನು ನಿಮ್ಮ ದೊಡ್ಡ ಅಭಿಮಾನಿ. ನಿಮ್ಮ ಎಲ್ಲ ಪುಸ್ತಕಗಳನ್ನೂ ಓದಿದ್ದೇನೆ; ನಿಮ್ಮ ‘ಸೇಪಿಯನ್ಸ್’ ನನಗೊಂದು ಅಚ್ಚರಿ. ಆದರೆ ಈ ಬಾರಿ ನಿಮ್ಮ ಮಾತುಗಳನ್ನು ಕೇಳುವಾಗ, ನಿಮ್ಮ ಹಲವು ಆಲೋಚನೆಗಳನ್ನು ಹಿಂತಿರುಗಿ ಮರುಪರಿಶೀಲಿಸಬೇಕೇನೋ ಎಂಬ ಅನುಮಾನ ಮೂಡಿತು. ಹಾಗಾಗಿ ಈ ಪತ್ರ. ನಿಮ್ಮ ಮಾತುಗಳಲ್ಲಿ ನನಗೆ ನಾಲ್ಕು ಸಮಸ್ಯೆಗಳು ಕಂಡವು. ಈ ಮನುಷ್ಯ ತಾನು ಓದಿದ್ದೆಲ್ಲವನ್ನೂ ಆಳವಾಗಿ ಬದುಕಿಲ್ಲವೇನೋ ಎಂದು ಅನ್ನಿಸಿತು. ಅದನ್ನು ಇಲ್ಲಿ ವಿವರಿಸುತ್ತೇನೆ:
೧) ದುಃಖ ಮತ್ತು ಮುಕ್ತಿಯ ಕುರಿತು
ನೀವು ಹೇಳ್ತೀರಿ: ಬದುಕಿನ ಕಠೋರ ವಾಸ್ತವ ದುಃಖ ಎಂದು. ಬದುಕು ಜಟಕಾಬಂಡಿ ಎಂಬುದೆಲ್ಲ ಸುಳ್ಳು ಎಂದೂ ಹೇಳುತ್ತೀರಿ, ಒಪ್ಪೋಣ. ಕಡೆಯದಾಗಿ ಇಂತಹ ಬದುಕಿನ ಅಂತಿಮ ಉದ್ದೇಶ ಈ ದುಃಖದ ಮೂಲವನ್ನು ಅರಿಯುವುದು ಮತ್ತು ಆ ಮೂಲಕ ದುಃಖದಿಂದ ಮುಕ್ತಿ ಪಡೆಯುವುದು ಎನ್ನುತ್ತೀರಿ. ಅಜ್ಞಾನ ದುಃಖಕ್ಕೆ ಕಾರಣವಾಗುತ್ತದೆ, ಅವಲೋಕನ ತಿಳಿವಳಿಕೆಗೆ ದಾರಿ ಮಾಡಿಕೊಡುತ್ತದೆ, ಈ ತಿಳಿವಳಿಕೆ ಮುಕ್ತಿಗೆ ಕಾರಣವಾಗುತ್ತದೆ- ಹೀಗಿದೆ ನಿಮ್ಮ ವಾದ ಸರಣಿ.
ಯುವಲ್, ಇದು ಓದಿ ಕಲಿತ ಪೌರಸ್ತ್ಯ ತತ್ವಶಾಸ್ತ್ರ (Learnt Eastern Philosophy). ಅನುಭವಿಸಿದ ಪೌರಸ್ತ್ಯ ದರ್ಶನವಲ್ಲ (Lived Eastern Philosophy). ಇವೆರಡಕ್ಕೂ ವ್ಯತ್ಯಾಸವಿದೆ.
ಪೂರ್ವದ ಯಾವ ತತ್ವಶಾಸ್ತ್ರವೂ ದುಃಖದ ಮೂಲ ಅರ್ಥಮಾಡಿಕೊಂಡರೆ ನಿಮಗೆ ಮುಕ್ತಿ ಸಿಗುತ್ತದೆ ಎಂದು ಹೇಳುವುದಿಲ್ಲ. ಬದಲಿಗೆ ದುಃಖದ ಅರಿವು ಅದನ್ನು ಸಹಿಸಿಕೊಳ್ಳಲು ಸಹಾಯ ಮಾಡುತ್ತದೆ ಎನ್ನುತ್ತವಷ್ಟೆ. ಒಮ್ಮೆ ದುಃಖದ ಮೂಲ ಅರಿತರೆ ಅದನ್ನು ಬೇರೆಯದೇ ರೀತಿಯಲ್ಲಿ ಹೊರಬಲ್ಲಿರಿ. ಅದರ ಮೂಲಕ ಏಗುವಾಗ ದುಃಖಕ್ಕೆ ಪ್ರತ್ಯಕ್ಷವಾಗಿ ಸಾಕ್ಷಿಯಾಗಬಲ್ಲಿರಿ. ಅಷ್ಟೇ. ಲೌಕಿಕ ಮಿತಿಯಲ್ಲಿ ಮುಕ್ತಿ ಎಂಬುದಕ್ಕೆ ಆಸ್ಪದವಿಲ್ಲ. ಒಬ್ಬ ವ್ಯಕ್ತಿ ದುಃಖದಿಂದ ಮುಕ್ತಿ ಹೊಂದಿದ್ದಾನೆ ಎಂದಾಕ್ಷಣ ಅವನು ಅಲೌಕಿಕ ಹಂತಕ್ಕೆ ಏರಿದ್ದಾನೆ ಎಂದರ್ಥ ಬರುತ್ತದೆ. ವೈಚಾರಿಕ ಮಿತಿಯೊಳಗೆ ಅದು ಅಸಾಧ್ಯ.
ಕರ್ನಾಟಕದ ದಲಿತ ಬರಹಗಾರ ದೇವನೂರು ಮಹಾದೇವ ಒಮ್ಮೆ ಹೇಳಿದ್ದರು – “ನಾನು ಅಜ್ಞಾನಿಯಾಗಿದ್ದಾಗಲೇ ಹೆಚ್ಚು ನೆಮ್ಮದಿಯಿಂದಿದ್ದೆ” ಎಂದು. ಅವರು ವಿದ್ಯಾವಂತರಾದ ಮೇಲೆ, ತಮ್ಮ ಸಮುದಾಯದ ನೋವನ್ನು ಸುಶಿಕ್ಷಿತ ಕಣ್ಣುಗಳಿಂದ ನೋಡದಿರಲು ಅವರಿಗೆ ಸಾಧ್ಯವಾಗಲೇ ಇಲ್ಲವಂತೆ. ಅದು ಅವರು ಜೀವನಪರ್ಯಂತ ಹೊರಬೇಕಾದ ಭಾರ. ಸಮುದಾಯದ ಉದ್ಧಾರಕ್ಕಾಗಿ ಆ ತಿಳಿವಳಿಕೆ ಅಗತ್ಯವಿತ್ತು ನಿಜ. ಪೂರ್ವ ದರ್ಶನಗಳು ಹೇಳುವಂತೆ ಸಮುದಾಯದ ದುಃಖವನ್ನು ನೀಗಿಸಲು ವೈಯಕ್ತಿಕ ದುಃಖ ಅನಿವಾರ್ಯ ಎನ್ನುತ್ತಾರಲ್ಲ ಹಾಗೆ.
ಸಂದರ್ಶನದಲ್ಲಿ ನಿಖಿಲ್ ಇದನ್ನು ಪ್ರಶ್ನಿಸಿದರು – “ದುಃಖದ ಬಗ್ಗೆ ಅಜ್ಞಾನವಿದ್ದರೆ ನನ್ನ ನೋವು ಕಡಿಮೆಯಾಗುವುದಿಲ್ಲವೇ?” ಎಂದು. ನೀವು ಅದನ್ನು ‘ನುಣುಚಿಕೊಳ್ಳುವ ಕೆಟ್ಟ ಚಟವಾಗಬಹುದು, ಮುಂದೆ ಆ ದುರಭ್ಯಾಸ ವೈಯುಕ್ತಿಕ ಬದುಕಿಗೂ ಕಾಲಿಡಬಹುದು’ ಎಂದು ಬೇಗನೇ ತಳ್ಳಿಹಾಕಿದಿರಿ. ನನಗನ್ನಿಸಿದ ಹಾಗೆ ನೀವಿಬ್ಬರೂ ಬೇರೆ ಬೇರೆ ದ್ವೀಪಗಳಲ್ಲಿ ಕುಳಿತು ಮಾತನಾಡುತ್ತಿದ್ದಿರಿ. ಜಗತ್ತಿನ ದುಃಖಗಳಿಗೆ ನಾವು ಕುರುಡರಾಗಬಾರದು ಎಂಬುದು ನಿಮ್ಮ ಕಾಳಜಿ. ಜಗತ್ತಿನ ಎಲ್ಲಾ ದುಃಖಗಳಿಗೆ ಕಿವಿಗೊಡುತ್ತಾ ಹೋದರೆ ಅದು ಒಳ್ಳೆಯದಕ್ಕಿಂತ ಕೆಟ್ಟದ್ದನ್ನೇ ಹೆಚ್ಚು ಮಾಡುತ್ತದೆ ಎಂಬುದು ನಿಖಿಲ್‌ರ ಕಾಳಜಿ. ನಾವಿಂದು ಪ್ರತಿದಿನವೂ ಹೊಸ ಹೊಸ ದುಃಖಗಳಿಗೆ ಇಂದ್ರಿಯಗಳನ್ನು ಒಡ್ಡುತ್ತಿದ್ದೇವೆ. ಆದರೆ ಮೊದಲಿನ ಹಾಗೆ ಸ್ಪಂದಿಸುವಲ್ಲಿ ಸೋಲುತ್ತಿದ್ದೇವೆ. ನರಸತ್ತವರಾಗುತ್ತಿದ್ದೇವೆ. ಭಾರತೀಯ ಚಿಂತಕರು ಶತ ಶತಮಾನಗಳಿಂದ ಇದರ ಬಗ್ಗೆ ಮಂಥನ ನಡೆಸಿದ್ದಾರೆ. ಸಾಂದರ್ಭಿಕವಾಗಿ ಜಗತ್ತಿನ ದುಃಖಗಳ ಬಗ್ಗೆ ಅವಲೋಕನ ಮತ್ತು ತಿಳಿವಳಿಕೆ ಅಗತ್ಯವಿರಬಹುದು, ಆದರೆ ಬದುಕಿನ ದೊಡ್ಡ ಚಿತ್ರಣದಲ್ಲಿ ದುಃಖ ಮತ್ತು ಮುಕ್ತಿ ನೀವು ಜೋಡಿಸುವ ರೀತಿಯಲ್ಲಿ ಸಂಪರ್ಕ ಹೊಂದಿಲ್ಲ. ನೀವು ಪೌರಸ್ತ್ಯ ತತ್ವಶಾಸ್ತ್ರವನ್ನು ಕೇವಲ ಒಂದು ‘ಸೆಲ್ಫ್-ಹೆಲ್ಪ್ ಟೆಕ್ನಾಲಜಿ’ಯಂತೆ ಬಳಸುತ್ತಿದ್ದೀರಿ ಎಂದು ನನಗನ್ನಿಸಲು ಶುರುವಾಗಿದೆ.
೨) ಕ್ರೈಸ್ತ ಧರ್ಮ ಅದೃಷ್ಟದಿಂದ ಹರಡಲಿಲ್ಲ
ಕ್ರೈಸ್ತ ಧರ್ಮ ಜಗತ್ತಿನಾದ್ಯಂತ ಹರಡಲು ಅದೃಷ್ಟ ಮತ್ತು ಕಥೆ ಹೇಳುವ ಕಲೆ ಕಾರಣ ಎಂದು ನೀವು ಹೇಳುತ್ತೀರಿ. ಯಾವುದೋ ಒಂದು ವಿಷಯ ಶತಮಾನಗಳ ಕಾಲ, ವಿವಿಧ ಖಂಡಗಳಲ್ಲಿ, ಸಾವಿರಾರು ಜನಸಮುದಾಯಗಳ ನಡುವೆ ಕೇವಲ ಅದೃಷ್ಟದಿಂದ ಅಥವಾ ಆಕಸ್ಮಿಕವಾಗಿ ನಡೆಯಲು ಸಾಧ್ಯವಿಲ್ಲ ಯುವಲ್. ಅದೆಂತಹ ದುರ್ಬಲ ಹೇಳಿಕೆ ನಿಮ್ಮದು! ಕಥೆ ಆಕರ್ಷಕವಾಗಿದೆ ಎಂದು ನೀವು ಒಪ್ಪುತ್ತೀರಿ – ‘ದೇವರು ನಿಮ್ಮನ್ನು ಪ್ರೀತಿಸುತ್ತಾನೆ, ಒಬ್ಬ ಸರ್ವಶಕ್ತ ಸೃಷ್ಟಿಕರ್ತ ನಿಮ್ಮ ಬಗ್ಗೆ ಎಲ್ಲವನ್ನೂ ತಿಳಿದೂ ನಿಮ್ಮನ್ನು ಪ್ರೀತಿಸುತ್ತಾನೆ’. ಆದರೆ ಈ ಕತೆ ಹರಡಿದ್ದು ಆಕಸ್ಮಿಕವಾಗಿ ಮತ್ತು ಅದೃಷ್ಟದಿಂದ ಎನ್ನುತ್ತೀರಲ್ಲ!
ಯುವಲ್, ಇಲ್ಲಿ ನಿಮ್ಮದೇ ದುಃಖದ ವ್ಯಾಖ್ಯಾನ ಈ ನಿಮ್ಮ ಇತಿಹಾಸದ ವಾದವನ್ನು ವಿರೋಧಿಸುತ್ತದೆ. ಕ್ರೈಸ್ತ ಧರ್ಮ ಎಲ್ಲೆಂದರಲ್ಲಿ ಹರಡಲಿಲ್ಲ; ಎಲ್ಲಿ ತೀವ್ರವಾದ ದುಃಖವಿತ್ತೋ ಅಲ್ಲಿ ನಿಖರವಾಗಿ ಹರಡಿತು. ಯೇಸುವಿನ ಕಥೆಯು ಒಂದು ಔಷಧದಂತಿತ್ತು. ರೋಗ ಎಲ್ಲಿ ತೀವ್ರವಾಗಿದೆಯೋ ಅಲ್ಲಿ ಔಷಧ ಹರಡುತ್ತದೆ. ಈ ಮಾದರಿಯನ್ನು ಗಮನಿಸಿ. ಕ್ರೈಸ್ತ ಧರ್ಮವು ಪ್ರಕೃತಿಯ ವಿಕೋಪಗಳಾದ – ಅತಿಯಾದ ತಾಪಮಾನ, ಮಳೆ, ಚಳಿ, ಕತ್ತಲು ಮತ್ತು ಒಂಟಿತನ ಇರುವಲ್ಲಿ ಹೆಚ್ಚಾಗಿ ಹರಡಿತು. ಪ್ಯಾಲೆಸ್ತೀನ್‌ನಿಂದ ಹೊರಬಂದು ಅದು ರೋಮ್, ಗ್ರೀಸ್, ಉತ್ತರ ಆಫ್ರಿಕಾದ ಗುಲಾಮಗಿರಿ ಮತ್ತು ದೌರ್ಜನ್ಯ ಅನುಭವಿಸುತ್ತಿರುವ ಜನರನ್ನೂ ತಲುಪಿತು. ನಂತರ ಉತ್ತರ ಯುರೋಪ್, ರಷ್ಯಾ ಮತ್ತು ನಾರ್ಡಿಕ್ ದೇಶಗಳ ಕತ್ತಲೆ ಮತ್ತು ಕ್ರೂರವಾಗಿದ್ದ ಊಳಿಗಮಾನ್ಯ ಬದುಕನ್ನೂ ತಲುಪಿತು. “ದೀನ ದುರ್ಬಲರೇ ಈ ಭೂಮಿಯನ್ನು ಆಳುವವರು” ಎಂಬ ಮಿಶನರಿಗಳ ಕಥನವಾಕ್ಯ ಅತ್ಯಂತ ಕಷ್ಟದ ಬದುಕಿನಲ್ಲಿರುವವರನ್ನು ಸಹಜವಾಗಿ ಹೆಚ್ಚು ಆಕರ್ಷಿಸಿತು.
ಈಗ ಭಾರತವನ್ನು ನೋಡಿ. ಇಲ್ಲಿ ಕ್ರೈಸ್ತ ಧರ್ಮ ಒಂದನೇ ಶತಮಾನದಿಂದಲೇ ಇದೆ. ಕೇರಳದ ಥಾಮಸ್ ಪರಂಪರೆಗೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಆದರೂ ಅದು ಭಾರತದ ಒಳನಾಡನ್ನಾಗಲಿ ಅಥವಾ ಚೀನಾವನ್ನಾಗಲಿ ಅಷ್ಟಾಗಿ ತಲುಪಲಿಲ್ಲ. ಭಾರತದಲ್ಲಿಯೂ ಅದು ಕರಾವಳಿ ತೀರಕ್ಕೆ ಮಾತ್ರ ಸೀಮಿತವಾಯಿತು. ಮಿಷನರಿಗಳು ಕರಾವಳಿಯಲ್ಲಿ ಇಳಿದರು, ಹಾಗಾಗಿ ಅದು ಅಲ್ಲಿ ಮಾತ್ರ ಹರಡಿತು ಎಂಬುದು ಸಾಮಾನ್ಯ ವಾದ. ಆದರೆ ಸ್ವಲ್ಪ ಯೋಚಿಸಿ ನೋಡಿ – ಮರದ ಹಡಗುಗಳಲ್ಲಿ ಪ್ರಾಣದ ಹಂಗು ತೊರೆದು ಅಷ್ಟು ದೊಡ್ಡ ಕ್ರೂರ ಸಾಗರಗಳನ್ನು ದಾಟಿ ಬಂದವರು, ಅಲ್ಲಿಂದ ಕೆಲವು ನೂರು ಕಿಲೋಮೀಟರ್ ಒಳನಾಡಿಗೆ ನಡೆದು ಬರಲು ಸಾಧ್ಯವಿರಲಿಲ್ಲವೇ? ಖಂಡಿತಾ ಸಾಧ್ಯವಿತ್ತು, ಬಂದಿದ್ದರೂ ಸಹ. ಆದರೆ ಒಳನಾಡಿನಲ್ಲಿ ಅವರ ಪ್ರಭಾವ ಜರುಗಲಿಲ್ಲ.
ಏಕೆಂದರೆ ಒಳನಾಡಿನ ಜನರಿಗೆ ಈಗಾಗಲೇ ಒಂದು ಸಾಂಸ್ಕೃತಿಕ ವ್ಯವಸ್ಥೆ ಇತ್ತು. ಅದು ಅವರಿಗೆ ಘನತೆ ಮತ್ತು ಸಾಂತ್ವನವನ್ನು ನೀಡುತ್ತಿತ್ತು. ಕರ್ನಾಟಕದ ಲಿಂಗಾಯತ, ಗೌಡರಿಗಾಗಲಿ ಅಥವಾ ಉತ್ತರಪ್ರದೇಶದ ಬ್ರಾಹ್ಮಣನಿಗಾಗಲಿ ಯೇಸುವಿನ ಕಥೆಯ ಅಗತ್ಯವೇಕೆ ಇತ್ತು? ಅವರ ಅಂದಿನ ಚೌಕಟ್ಟಿನಲ್ಲಿ ತಮಗೆ ಈಗಾಗಲೇ ಬೆಲೆ ಇದೆ ಎಂದು ತಿಳಿದಿತ್ತು. ಕ್ರೈಸ್ತ ಧರ್ಮದ ಸಾಂತ್ವನ ಅವರ ನಂಬಿಕೆಗಳನ್ನು ಪಲ್ಲಟ ಮಾಡುವಷ್ಟು ತೀವ್ರವಾದ ದುಃಖ ಅವರಲ್ಲಿ ಇರಲಿಲ್ಲ. ಹಾಗಾದರೆ ಮಿಷನರಿಗಳು ಒಳನಾಡನ್ನು ತಲುಪಲು ಏನು ಮಾಡಿದರು? ಸಹಜವಾಗಿ ಅವರು ಒಳನಾಡಿನಲ್ಲಿ ತಮ್ಮ ಸಾಂತ್ವನಕ್ಕೆ ಸಮನಾದ ದುಃಖಿಗಳನ್ನು ಹುಡುಕಿದರು. ಅಸ್ಪೃಶ್ಯರೆಂದು ಪರಿಗಣಿಸಲ್ಪಟ್ಟ, ಮೇಲ್ಜಾತಿಗಳಿಂದ ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳಲ್ಪಡುತ್ತಿದ್ದ ಕೆಳಜಾತಿ ಜನರನ್ನು ಅತ್ಯಂತ ಯಶಸ್ವಿಯಾಗಿ ತಲುಪಿದರು. ದಿನನಿತ್ಯ ಅವಮಾನ ಅನುಭವಿಸುತ್ತಿದ್ದ ಮನುಷ್ಯನಿಗೆ “ದೇವರು ನಿನ್ನನ್ನು ಪ್ರೀತಿಸುತ್ತಾನೆ, ಸೃಷ್ಟಿಕರ್ತನ ಮುಂದೆ ನೀವೆಲ್ಲರೂ ಸಮಾನ” ಎಂಬ ಸಂದೇಶ ಅತ್ಯಂತ ಸಿಹಿಯಾಗಿ, ಗಾಯಕ್ಕೆ ಮದ್ದಾಗಿ ಕೇಳಿಸುತ್ತದೆ. ಇದನ್ನೆಲ್ಲ ಅದೃಷ್ಟವೆನ್ನಲಾಗದು.
ಇದು ಪುನಃ ನಿಮ್ಮ ದುಃಖದ ವ್ಯಾಖ್ಯಾನವನ್ನು ವಿರೋಧಿಸುತ್ತದೆ. ಕ್ರೈಸ್ತ ಧರ್ಮವು ಜನರಿಗೆ ದುಃಖದ ಅರಿವು ಮೂಡಿಸಿ ಹಬ್ಬಲಿಲ್ಲ. ಬದಲಿಗೆ ಅದರಿಂದ ತಪ್ಪಿಸಿಕೊಳ್ಳುವ ದಾರಿ, ಅದರೊಳಗೆ ಪ್ರೀತಿ ಮತ್ತು ತದನಂತರದ ಪ್ರತಿಫಲದ ಭರವಸೆಯನ್ನು ನೀಡಿ ಹಬ್ಬಿತು. ಕ್ರೈಸ್ತ ಮತ ದುಃಖದಲ್ಲಿದ್ದವರಿಗೆ ಸಾಂತ್ವನ ನೀಡಿತೇ ಹೊರತು ವಿಪಾಸನವನ್ನಲ್ಲ. ತೀವ್ರ ದುಃಖದಲ್ಲಿರುವವರು ಯಾರೂ ಮರದ ಕೆಳಗೆ ಕುಳಿತು ದೀರ್ಘವಾಗಿ ಉಸಿರು ಎಳೆದುಕೊಳ್ಳುತ್ತ ತಮ್ಮ ನೋವನ್ನು ಗಮನಿಸಲು ಬಯಸುವುದಿಲ್ಲ. ಅವರು ತಮ್ಮ ನೋವಿಗೊಂದು ಬೆಲೆ ಇದೆ, ಇದೆಲ್ಲ ಕ್ಷಣಿಕ ಮತ್ತು ತಮ್ಮನ್ನೂ ಸಹ ಯಾರೋ ಪ್ರೀತಿಸುತ್ತಿದ್ದಾರೆ ಎಂದು ಕೇಳಲು ಬಯಸುತ್ತಾರೆ. ಅದನ್ನೇ ಕ್ರೈಸ್ತ ಧರ್ಮ ಮಾಡಿತು.
೩) ಎಐನ ಸಾಂಸ್ಕೃತಿಕ ರಾಯಭಾರಿ
ಎಐ ಗೆಳತಿ, ಎಐ ಗೆಳೆಯರು, ಎಐ ಪಾದ್ರಿಗಳು, ಎಐ ಮಿಷನರಿಗಳು ಎಐ ಹೊಸ ಧರ್ಮಗಳನ್ನು ಸೃಷ್ಟಿಸುವುದು, ಮನುಷ್ಯರೊಂದಿಗೆ ಎಐ ಆತ್ಮೀಯತೆ ಬೆಳೆಸುವುದು – ಹೀಗೆ ನೀವು ಒಂದು ಆಕರ್ಷಕ ಚಿತ್ರಣ ಕೊಡುತ್ತ ಹೋಗುತ್ತೀರಿ. ಒಬ್ಬ ಕಳವಳಕಾರಿ ವೀಕ್ಷಕನಂತೆ ಎಚ್ಚರಿಕೆ ನೀಡುತ್ತಿದ್ದೀರಿ ಎಂಬಂತೆ ಬಿಂಬಿಸಿಕೊಳ್ಳುತ್ತೀರಿ. ಆದರೆ ಯುವಲ್, ನೀವು ಎಂದೂ ಈ ಬೆಳವಣಿಗೆಯ ವಿರುದ್ಧ ಒಂದು ಮಾತನ್ನು ಹೇಳುವುದಿಲ್ಲ. “ಇದನ್ನು ಅನುಮತಿಸಬಾರದು” ಎಂದು ಆಕ್ಷೇಪಿಸುವುದಿಲ್ಲ. “ಮಕ್ಕಳಿಗೆ ಎಐ ಸಂಗಾತಿಗಳನ್ನು ನೀಡುವುದರ ಮೇಲೆ ಕಾನೂನು ನಿಷೇಧವಿರಲಿ” ಎಂದು ಎಚ್ಚರಿಸುವುದಿಲ್ಲ. “ನಾವು ಇಲ್ಲಿ ಒಂದು ಗೆರೆ ಎಳೆದುಕೊಳ್ಳಬೇಕು” ಎಂದು ಜಾಗೃತಿ ಮೂಡಿಸುವುದಿಲ್ಲ. ನೀವು ಕೇವಲ ಬಣ್ಣಿಸುತ್ತೀರಿ, ಅಚ್ಚರಿಪಡುತ್ತೀರಿ, ಕೈ ಹಿಸುಕಿಕೊಳ್ಳುತ್ತೀರಿ ಮತ್ತು ಮುಂದೆ ಹೋಗುತ್ತೀರಿ.
ನಾನೊಬ್ಬ ಇಂಜಿನಿಯರ್. ನಾನು ಈ ಸಿಸ್ಟಮ್‌ಗಳ ಜೊತೆ ಕೆಲಸ ಮಾಡುತ್ತೇನೆ. ಇವು ಹೇಗೆ ಕೆಲಸ ಮಾಡುತ್ತವೆ ಎಂದು ಸ್ವಲ್ಪ ಮಟ್ಟಿಗಾದರೂ ತಿಳಿದಿದೆ ಎಂದು ಭಾವಿಸುತ್ತೇನೆ. ಯಾವುದೋ ಲ್ಯಾಬ್‌ನಲ್ಲಿ ಗುಪ್ತವಾಗಿ ಬೇರೇನೋ ನಳಪಾಕ ಜರುಗುತ್ತಿರದ ಹೊರತು ಎಐ ನಮ್ಮಲ್ಲಿರುವುದು ಕೇವಲ ಅತ್ಯಾಧುನಿಕ ‘ಪ್ಯಾಟರ್ನ್ ಮ್ಯಾಚಿಂಗ್’ ತಂತ್ರಜ್ಞಾನವಷ್ಟೆ. “ಎಐ ಮುಂದಿನ ಪದವನ್ನು ಊಹಿಸುತ್ತದೆ” ಎಂಬ ಸ್ಥಿತಿಯಿಂದ “ಎಐ ಹೊಸ ಧರ್ಮಗಳನ್ನು ಕಂಡುಹಿಡಿದು ನಿಮ್ಮ ಜೀವನ ಸಂಗಾತಿಯಾಗುತ್ತದೆ” ಎಂಬ ಹಂತಕ್ಕೆ ಜಿಗಿಯುವುದು ಇಂಜಿನಿಯರಿಂಗ್ ಅಲ್ಲ. ಅದು ಕಥೆ ಕಟ್ಟುವಿಕೆ. ಮತ್ತು ಈ ಕಥೆಗೆ ಒಂದು ನಿರ್ದಿಷ್ಟ ಸಾಂಸ್ಕೃತಿಕ ಕಾರ್ಯಸೂಚಿ ಇದೆ ಎಂಬುದು ನನ್ನ ಊಹೆ.
ಇಲ್ಲಿ ಇನ್ನೊಂದು ಆಳವಾದ ವಿಷಯವಿದೆ. ಸೋಶಿಯಲ್ ಮೀಡಿಯಾ ಅಲ್ಗಾರಿದಮ್‌ಗಳ ವಿಷಯದಲ್ಲಿ ಏನಾಯಿತು ಎಂದು ನೀವು ಸರಿಯಾಗಿಯೇ ಗುರುತಿಸಿದ್ದೀರಿ. ಅವುಗಳಿಗೆ ‘ಎಂಗೇಜ್‌ಮೆಂಟ್’ ಎಂಬ ಅಳತೆಗೋಲು ನೀಡಲಾಯಿತು, ಅದಕ್ಕಾಗಿ ದ್ವೇಷ ಮತ್ತು ಭಯದ ಬಟನ್‌ಗಳನ್ನು ಒತ್ತಿಸಬೇಕು ಎಂಬುದನ್ನು ಕಂಡುಕೊಳ್ಳಲಾಯಿತು, ಇದರಿಂದಾಗಿ ಇಡೀ ಜಗತ್ತಿನ ಸಾರ್ವಜನಿಕ ಚರ್ಚೆಗಳನ್ನೇ ಹಾಳುಗೆಡವಲಾಯಿತು- ನಿಮ್ಮ ಈ ಜಗತ್ತಿಗೆ ಹಬ್ಬಿರುವ ರೋಗದ ತಪಾಸಣೆ ಸರಿ ಇದೆ. ಆದರೆ ನೀವು ಇದರ ಮುಂದಿನ ಪ್ರಶ್ನೆಯನ್ನು ಕೇಳುವುದಿಲ್ಲ, ಇದು ಯಾಕಾಗಿ ನಡೆಯಿತು?
ಪೌರಸ್ತ್ಯ ದೇಶಗಳಲ್ಲೂ ಬಂಡವಾಳಶಾಹಿಗಳಿದ್ದಾರೆ ಯುವಲ್. ಆದರೆ ಅವರ ಸಾಹಸಗಳೆಲ್ಲವೂ ಪೌರಸ್ತ್ಯ ನಾಗರಿಕತೆಯ ತಳಹದಿಯ ಮೇಲೆಯೇ ನಿಂತಿವೆ. ಅಂದರೆ, ಒಂದು ವೇಳೆ ಈ ಕಡೆಯ ಬಂಡವಾಳಶಾಹಿಗಳಿಗೆ ೩೦ ವರ್ಷಗಳ ಹಿಂದೆಯೇ ಈ ಅಲ್ಗಾರಿತಂಗಳ ತಂತ್ರಜ್ಞಾನ ಸಿಕ್ಕಿದ್ದರೆ, ಅವರು ಈ ಪರಿ ಮನುಷ್ಯ ಲೋಕವನ್ನು ಅಲ್ಗಾರಿದಮ್‌ಗಳಿಗೆ ನಿಯಂತ್ರಿಸಲು ಬಿಡುತ್ತಿರಲಿಲ್ಲ. ಜಪಾನ್‌ನಲ್ಲಿ ದಶಕಗಳಿಂದ ಅತ್ಯಾಧುನಿಕ ರೋಬೋಟಿಕ್ಸ್ ಇದೆ. ಅವರು ಅದನ್ನು ವೃದ್ಧರಿಗೆ ಸಹಾಯ ಮಾಡಲು, ಫ್ಯಾಕ್ಟರಿ ಕೆಲಸಗಳಿಗೆ ಬಳಸುತ್ತಾರೆ. ಅವರ ಸಾಂಸ್ಕೃತಿಕ ಪ್ರಜ್ಞೆ ಎಂದರೆ – ರೋಬೋಟ್‌ಗಳು ಕೇವಲ ಉಪಕರಣಗಳು ಅಥವಾ ಸಹಾಯಕರು. ಆದರೆ ಅಮೆರಿಕದ ಕಂಪನಿಗಳಿಗೆ ಇಂತಹ ಎಐ ಸಾಮರ್ಥ್ಯ ಸಿಕ್ಕ ಕೂಡಲೇ ಅವರು ಮಾಡಿದ್ದೇನು? ಕೆಲವೇ ವರ್ಷಗಳಲ್ಲಿ ಒಂಟಿ ಹುಡುಗ ಹುಡುಗಿಯರಿಗೆ ‘ಎಐ ಗರ್ಲ್‌ಫ್ರೆಂಡ್’ ಎಐ ಬಾಯ್‌ಫ್ರೆಂಡ್‌ಗಳನ್ನು ಸೃಷ್ಟಿಸಿ ಮಾರಾಟ ಮಾಡುವುದು. ಇದು ತಂತ್ರಜ್ಞಾನದ ವ್ಯತ್ಯಾಸವಲ್ಲ; ಏನನ್ನು ಮಾರುಕಟ್ಟೆಯ ಸರಕನ್ನಾಗಿಸಬೇಕು ಎಂಬ ನಾಗರಿಕತೆಯ ಪ್ರಜ್ಞೆಯ ವ್ಯತ್ಯಾಸ. ಅಂದರೆ ಪಾಶ್ಚಿಮಾತ್ಯ ಬಂಡವಾಳಶಾಹಿಗಳಿಗೆ ಆ ಪೂರ್ವ ನಾಗರೀಕತೆಯ ತಳಹದಿ ಇಲ್ಲ. ಅವರಿಗೆ ಪ್ರತಿಯೊಂದೂ ಒಂದು ಮಾರುಕಟ್ಟೆ. ನಾಗರೀಕರ ಗಮನ ಒಂದು ಮಾರುಕಟ್ಟೆ, ಅವರ ಒಂಟಿತನ ಒಂದು ಮಾರುಕಟ್ಟೆ, ಆಧ್ಯಾತ್ಮಿಕ ಹಸಿವು ಕೂಡ ಮಾರುಕಟ್ಟೆಯೇ. ಪಾಶ್ಚಿಮಾತ್ಯ ಬಂಡವಾಳಶಾಹಿಗಳ ಈ ಆಧ್ಯಾತ್ಮಿಕ ಪೊಳ್ಳುತನವೇ(Spiritual shallowness) ಅಲ್ಗಾರಿದಮ್‌ಗಳು ಮನುಕುಲವನ್ನು ಆಳಲು ಕಾರಣವಾಯಿತು. ಅದು ತಂತ್ರಜ್ಞಾನದ ಆಧುನೀಕರಣವಾಗಿರಲಿಲ್ಲ.
ಅದನ್ನು ಪೊಳ್ಳುತನವೂ ಅನ್ನಲಾಗದು. ನಿರ್ವಾತವೆಂಬುದೇ ಸೂಕ್ತ.
ಈಗ ಅದೇ ಮಾದರಿ ಎಐ ವಿಷಯದಲ್ಲಿಯೂ ಪುನರಾವರ್ತನೆಯಾಗುತ್ತಿದೆ. ಒಂದು ವೇಳೆ ಪೂರ್ವದ ಬಂಡವಾಳಶಾಹಿಗಳಿಗೆ ಎಐ ನೀಡಿದರೆ ಅವರು ಅದನ್ನು ಫ್ರಿಡ್ಜ್ ರಿಪೇರಿ ಮಾಡಲು, ಸೇತುವೆ ಕಟ್ಟಲು ಅಥವಾ ರೋಗ ಪತ್ತೆಹಚ್ಚಲು ಬಳಸುತ್ತಾರೆ. ಅವರು ಅದನ್ನು ಜೀವನ ಸಂಗಾತಿಯನ್ನಾಗಿ ಮಾಡುವುದಿಲ್ಲ. ಆದರೆ ಅಪಾಯವಿರುವುದು ಏನೆಂದರೆ ಎಐ ಮತ್ತೆ ಪಾಶ್ಚಿಮಾತ್ಯರ ಕೈಯಲ್ಲಿದೆ. ಸೋಶಿಯಲ್ ಮೀಡಿಯಾದಂತೆಯೇ ಇದನ್ನು ಕೂಡ ಅವರು ಈ ಭಾಗದ ಜನರ ಗಂಟಲಿಗೆ ಬಲವಂತದಿಂದ ಒಲ್ಲದ ರೂಪದಲ್ಲಿ ತುರುಕಲಿದ್ದಾರೆ. ಅಂದರೆ ಐಟಿ, ಮೆಡಿಸಿನ್, ಸಂಶೋಧನೆಗಳಂತಹ ಗಂಭೀರ ವಲಯಗಳ ಹೊರತಾಗಿ. ಜಿಬ್ಲಿ, ಡೀಪ್‌ಫೇಕ್, ಪಾರ್ನ್ ಮಣ್ಣು ಮಸಿಯ ರೂಪದಲ್ಲಿ. ಯುವಲ್, ನೀವು ಇದನ್ನು ವಿರೋಧಿಸುವಂತೆ ಕಂಡರೂ, ವಾಸ್ತವವಾಗಿ ನೋಡಿದರೆ ನೀವು ಈ ಆಲೋಚನೆಗಳನ್ನು ಬೀಜಗಳಂತೆ ಬಿತ್ತುತ್ತಿದ್ದೀರಿ. ಪ್ರತಿ ಬಾರಿ ನೀವು ಎಐ ಆತ್ಮೀಯತೆಯನ್ನು ವಿವರವಾಗಿ ವರ್ಣಿಸಿ “ಮುಂದೇನಾಗುತ್ತದೋ ಯಾರಿಗೂ ಗೊತ್ತಿಲ್ಲ” ಎಂದಾಗ, ನೀವು ಎಚ್ಚರಿಕೆ ನೀಡುತ್ತಿಲ್ಲ ಬದಲಿಗೆ ಜನರ ರಕ್ಷಣಾ ಗೋಡೆಗಳನ್ನು ಕುಸಿಯುವಂತೆ ಮಾಡುತ್ತಿದ್ದೀರಿ. ನೀವು ಅದನ್ನು ‘ಸಾಧ್ಯ’ವಾಗಿಸುತ್ತಿದ್ದೀರಿ. ಅದು ‘ಅನಿವಾರ್ಯ’ ಎಂಬಂತೆ ಬಿಂಬಿಸುತ್ತಿದ್ದೀರಿ. ಅನಿವಾರ್ಯತೆ ಎನ್ನುವುದು ಸಮ್ಮತಿಯನ್ನು ಪಡೆಯುವ ಇನ್ನೊಂದು ಮಾರ್ಗ. ನಿಮ್ಮ ಮಾತನ್ನು ಕೇಳಿದ ಮೇಲೆ ಎಐ ಮನುಷ್ಯ ಸಂಬಂಧಗಳನ್ನು ಆಕ್ರಮಿಸಿಕೊಳ್ಳುವುದು ಒಂದು ಹವಾಮಾನ ಮುನ್ಸೂಚನೆಯಂತೆ ಭಾಸವಾಗುತ್ತದೆ – ಅಂದರೆ ಅದು ಬರುತ್ತದೆ, ನಾವು ಸಿದ್ಧರಾಗಬೇಕು ಅಷ್ಟೆ. ಅದನ್ನು ನಿರಾಕರಿಸುವ ದಾರಿಯೇ ಇಲ್ಲ ಎಂಬಂತೆ ಕಾಣುತ್ತದೆ. ಇದು ಬೌದ್ಧಿಕ ಪ್ರತಿರೋಧವಲ್ಲ; ಇದು ಕೇವಲ ಒಂದು Aesthetic concern. ಪಾಶ್ಚಿಮಾತ್ಯರು ತಮ್ಮ ನಾಗರಿಕತೆಯ ತಪ್ಪುಗಳೆಲ್ಲವನ್ನೂ ಹೀಗೆಯೇ ವಿಶ್ಲೇಷಿಸುತ್ತಾರೆ. ಬೆಡ್‌ಶೀಟ್ ಹೊದಿಸಿ ಮುಚ್ಚುತ್ತಾರೆ. ಅವರು ಅವುಗಳ ಬಗ್ಗೆ ಬಹಳ ಸುಂದರವಾಗಿ ಮರುಗಿ ಮುಂದುವರೆಯುತ್ತಾರೆ. ಪುನಃ ಪುನರಾವರ್ತಿಸುತ್ತಾರೆ.
ನೀವು ಬೇಕೆಂದೋ ಬೇಡವೆಂದೋ ಎಐ ಭವಿಷ್ಯದ ಒಬ್ಬ ಸಾಂಸ್ಕೃತಿಕ ರಾಯಭಾರಿಯಂತೆ ವರ್ತಿಸುತ್ತಿದ್ದೀರಿ. ನಿಜವಾಗಿ ಅಂತಹ ಭವಿಷ್ಯದ ವಿರುದ್ಧ ನಾವು ಬಂಡಾಯ ಎದ್ದಿರಬೇಕಿತ್ತು, ಆದರೆ ನೀವು ನಮ್ಮನ್ನು ಕೇವಲ ಚರ್ಚೆ ಅಥವಾ ತತ್ವಶಾಸ್ತ್ರದಲ್ಲಿ ತೊಡಗಿಸುತ್ತಿದ್ದೀರಿ. ಫೈರ್‌ವಾಲ್ ಆಗಿ ನಿಲ್ಲಬೇಕಿದ್ದವರು, ಆ ಭವಿಷ್ಯದ ಒಂದು ಪ್ಯಾಕೇಜಿಂಗ್ ಆಗಿ ಕಾಣಿಸುತ್ತಿದ್ದೀರಿ.
೪) ಬದಲಾಗುವ ಸತ್ಯ
ಕೊನೆಯದಾಗಿ ಇನ್ನೊಂದು ವಿಷಯ. ಸಂದರ್ಶನದ ಆರಂಭದಲ್ಲಿ “ಸತ್ಯ ಎಂದರೇನು?” ಎಂಬ ಪ್ರಶ್ನೆಗೆ ನೀವು “ಸತ್ಯವು ಒಂದೇ ಏಕೆಂದರೆ ವಾಸ್ತವವು ಒಂದೇ” ಎಂದು ದೃಢವಾಗಿ ಹೇಳುತ್ತೀರಿ. ಸಿನಿಕತನದ ವಿರುದ್ಧ ವಾದ ಮಾಡುತ್ತೀರಿ. ಯಾವಾಗಲೂ ಸತ್ಯ ಮುಖ್ಯ ಎನ್ನುತ್ತೀರಿ. ಆದರೆ ನಿಖಿಲ್ ಇಸ್ರೇಲ್-ಪ್ಯಾಲೆಸ್ಟೈನ್ ಬಗ್ಗೆ ಕೇಳಿದಾಗ, ಸಡನ್ನಾಗಿ ನಿಮಗೆ ಸತ್ಯ “ಅದಕ್ಕಿಂತ ಬಹಳ ಸಂಕೀರ್ಣ”ವಾಗಿಬಿಡುತ್ತದೆ. ಎರಡು ಕಡೆಯೂ ಅನಾಹುತಗಳಾಗಿವೆ, ಇಬ್ಬರ ಕಡೆಯೂ ಸತ್ಯವಿದೆ ಎನ್ನುತ್ತೀರಿ. ಯಾರು ಸರಿ ಅಥವಾ ಯಾರು ತಪ್ಪು ಎಂದು ನೀವು ಖಚಿತವಾಗಿ ಹೇಳುವುದಿಲ್ಲ. ಹತ್ತು ನಿಮಿಷಗಳ ಮೊದಲು ಇದ್ದ ‘ಏಕ ಸತ್ಯ’ವು ಇದ್ದಕ್ಕಿದ್ದಂತೆ ಸಂಕೀರ್ಣತೆಯಲ್ಲಿ ಕಳೆದುಹೋಗುತ್ತದೆ.
ಯುವಲ್, ನೀವು ಯಾರನ್ನು ಸಿನಿಕರು ಎಂದು ಟೀಕಿಸುತ್ತಿದ್ದಿರೋ ಅದೇ ಸಿನಿಕರು ಮಾಡುವ ಕೆಲಸವಿದು. ಸತ್ಯವು ತಮಗೆ ವೈಯಕ್ತಿಕವಾಗಿ ಅನಾನುಕೂಲವಾದಾಗ “ಸಂಕೀರ್ಣತೆ”ಯನ್ನು ಒಂದು ತಪ್ಪಿಸಿಕೊಳ್ಳುವ ದಾರಿಯನ್ನಾಗಿ ಬಳಸುವುದು. ವಿಷಯ ಅಮೂರ್ತವಾಗಿದ್ದಾಗ ನೀವೊಬ್ಬ ಉಗ್ರ ನೈತಿಕವಾದಿ ಸತ್ಯವಾದಿ, ಆದರೆ ನಿಮ್ಮ ಸ್ವಂತ ದೇಶದ ವಿಷಯ ಬಂದಾಗ ಸತ್ಯಕ್ಕೆ ಹಲವು ಮಗ್ಗುಲುಗಳಿವೆ ಎಂಬ ಸೌಮ್ಯವಾದಿ, ಆಜ್ಞೇಯವಾದಿ! ಅಂದಹಾಗೆ, ನಿಮ್ಮ ಈ ದೌರ್ಬಲ್ಯ ಉಳಿದ ದೇಶಗಳಿಗೂ ಅನ್ವಯಿಸುತ್ತದೆ.
ವಾಸ್ತವ (Fact) ಮತ್ತು ಸತ್ಯ (Truth) ಎರಡೂ ಒಂದೇ ಅಲ್ಲ ಯುವಲ್. ವಾಸ್ತವ ಎಂದರೆ ನಡೆದ ಘಟನೆ. ಅದೊಂದು ಅಳೆಯಬಹುದಾದ ಸಂಗತಿ. ದೃಷ್ಟಿಕೋನ ಬದಲಾದ ತಕ್ಷಣ ವಾಸ್ತವ ಬದಲಾಗುವುದಿಲ್ಲ ಅಥವಾ ಸಂಕೀರ್ಣವಾಗುವುದಿಲ್ಲ. ಅದು ನಡೆದಿದೆ ಅಥವಾ ನಡೆದಿಲ್ಲ, ಅಷ್ಟೆ. ಸತ್ಯ ಎನ್ನುವುದು ಯಾರು ಸರಿ ಎಂಬುದು. ಅದಕ್ಕೊಂದು ನೈತಿಕ ಪದರವಿದೆ. ಆ ನೈತಿಕ ಪದರವು ಕಾಲ ಬದಲಾದಂತೆ ಬದಲಾಗಬಹುದು. ಇಂದಿನ ನೈತಿಕತೆ ನಾಳೆ ಭ್ರಷ್ಟವಾಗಬಹುದು. ಅದಕ್ಕೇ ಸತ್ಯಕ್ಕೆ ಹಲವು ಮುಖಗಳಿರುತ್ತವೆ ಎನ್ನುವುದು. ಪ್ರತಿಯೊಬ್ಬರೂ ತಮ್ಮ ತಮ್ಮ ನೈತಿಕ ಚೌಕಟ್ಟಿನಲ್ಲಿ ಸರಿಯಾಗಿಯೇ ಇರುತ್ತಾರೆ. ಹಾಗಾಗಿಯೆ ವಾಸ್ತವವನ್ನು ಪ್ರೂವ್ ಮಾಡಿದಂತೆ ಸತ್ಯವನ್ನು ಎಂದಿಗೂ ಇದೇ ಅಂತಿಮ ಎಂದು ಬಗೆಹರಿಸಲು ಸಾಧ್ಯವಿಲ್ಲ.
ಉದಾಹರಣೆಗೆ ಗಾಂಧೀಜಿಯವರನ್ನು ತಗೊಳ್ಳಿ. ಗಾಂಧೀಜಿಯವರ ಬಗ್ಗೆಗಿನ ವಾಸ್ತವಗಳು ಸ್ಥಿರವಾಗಿವೆ. ಅವರು ಉಪ್ಪಿನ ಸತ್ಯಾಗ್ರಹ ನಡೆಸಿದರು, ಸ್ವಾತಂತ್ರ್ಯಕ್ಕಾಗಿ ಓಡಾಡಿದರು, ಹೋರಾಡಿದರು ಎಂಬುದೆಲ್ಲವೂ ೧೯೪೦ರಲ್ಲಿಯೂ ವಾಸ್ತವ, ೨೦೨೬ರಲ್ಲಿಯೂ ವಾಸ್ತವ. ಅವರು ಬ್ರಹ್ಮಚರ್ಯ ಪ್ರಯೋಗಗಳನ್ನು ಮಾಡಿದ್ದರು ಎಂಬುದು ಅಂದಿಗೂ ವಾಸ್ತವ ಇಂದಿಗೂ ವಾಸ್ತವ. ಆದರೆ ೧೯೪೦ರ ಜನರಿಗೆ ಅವರು ‘ಮಹಾತ್ಮ’ರಾಗಿದ್ದರು. ಇಂದಿನ ಹಲವರಿಗೆ ಅವರು ಹಾಗೆ ಕಾಣದಿರಬಹುದು. ಇಲ್ಲಿ ಬದಲಾಗಿದ್ದು ಏನು? ವಾಸ್ತವಗಳಲ್ಲ, ನಮ್ಮ ನೈತಿಕ ಚೌಕಟ್ಟುಗಳು. ಹಾಗಾಗಿ ಆ ಸತ್ಯದ ಪದರವು ಪಲ್ಲಟವಾಯಿತು.
ನೀವು ವಾಸ್ತವ ಮತ್ತು ಸತ್ಯ ಎರಡನ್ನೂ ಒಂದೇ ಪದದಲ್ಲಿ ಸೇರಿಸಿ, ನಿಮಗೆ ಅನುಕೂಲವಾದಾಗ ಆ ಪದದ ಅರ್ಥವನ್ನು ಬದಲಿಸುತ್ತೀರಿ. ಧೈರ್ಯವಂತನಂತೆ ಕಾಣಬೇಕಾದಾಗ ಸತ್ಯವು ಒಂದೇ ಎನ್ನುತ್ತೀರಿ, ಇಸ್ರೇಲ್ ವಿಷಯ ಬಂದಾಗ ಸತ್ಯ ಸಂಕೀರ್ಣ ಎನ್ನುತ್ತೀರಿ. ಒಬ್ಬ ಗಂಭೀರ ಚಿಂತಕ ತಾನು ಯಾವ ಪದರದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬ ಬಗ್ಗೆ ಪ್ರಾಮಾಣಿಕವಾಗಿರಬೇಕು.
ಯುವಲ್, ನಾನು ಇದನ್ನು ನಿಮ್ಮ ಮೇಲೆ ವೈಯಕ್ತಿಕ ದಾಳಿ ಮಾಡಲು ಬರೆಯುತ್ತಿಲ್ಲ. ಭಾರತದ ಅನೇಕ ಯುವಕರು ನೀವು ನಮ್ಮ ಸಂಪ್ರದಾಯಗಳನ್ನು ನಮಗೇ ವ್ಯಾಖ್ಯಾನಿಸಿ ಹೇಳುತ್ತಿದ್ದೀರಿ ಎಂದು ನಂಬಿ ಕೇಳುತ್ತಿರುತ್ತಾರೆ. ಆದರೆ ನೀವು ಅವುಗಳನ್ನು ಪಾಶ್ಚಿಮಾತ್ಯ ಪ್ರೇಕ್ಷಕರಿಗಾಗಿ ಪಾಶ್ಚಿಮಾತ್ಯ ಚೌಕಟ್ಟಿನಲ್ಲಿ ವಿವರಿಸುತ್ತಿದ್ದೀರಿ. ನಾವು ಮಾಡಬಹುದಾದ ಕನಿಷ್ಠ ಕೆಲಸವೆಂದರೆ ಅದಕ್ಕೆ ಮರುಉತ್ತರ ನೀಡುವುದು.
ಗೌರವಪೂರ್ವಕ ಭಿನ್ನಾಭಿಪ್ರಾಯದೊಂದಿಗೆ,
ಮಧು ವೈ ಎನ್
