ವರ್ಲ್ಡ್ ಕಾಯಿನ್ ಬಗ್ಗೆ
Blog post description.
9/16/20251 min read


ನಾವೆಲ್ಲ ಸೈಫೈ ಸಿನಿಮಾಗಳಲ್ಲಿ, ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಈ ದೃಶ್ಯ ನೋಡಿರ್ತೇವೆ. ಅಲ್ಲೊಂದು ಭೂಗತ ಕೋಣೆ ಇರುತ್ತದೆ. ಅದರಲ್ಲಿ ಕೇಜಿ ಕೇಜಿ ಚಿನ್ನದ ಗಟ್ಟಿಗಳು ಅಥವಾ ಕಂತೆ ಕಂತೆ ಹಣ ತುಂಬಿರುತ್ತದೆ. ಅದಕ್ಕೊಂದು ಬೃಹತ್ ಗಾತ್ರದ ಅಗುಣಿ ಇರುವ ಹೆಬ್ಬಾಗಿಲು. ಒಳಗೆ ಹೋಗಬೇಕಂದರೆ ಪಾಸ್ವರ್ಡ್ ಒತ್ತಬೇಕು.
ಅಲ್ಲೊಂದು ಕಡೆ ಪಾಸ್ವರ್ಡ್ ಒತ್ತುವ ಕೀಬೋರ್ಡ್ ಇರುತ್ತದೆ.
ಸ್ಟೈಲಾಗಿರೋ ಯುವಕನೊಬ್ಬ ಪಾಸ್ವರ್ಡ್ ಒತ್ತುತ್ತಾನೆ. ಬಾಗಿಲು ತೆರೆಯಲ್ಲ. ಅವನೊಂದಿಗೆ ಸ್ಟೈಲಾಗಿರೋ ಯುವತಿ ಇರ್ತಾಳೆ. ಅಲ್ಲೊಂದು ಪರದೆ ಇರತ್ತೆ. ಇವಳು ಅದರ ಎದುರು ಮುಖ ಹಿಡಿಯುತ್ತಾಳೆ. ಪರದೆ ಅವಳ ಕಣ್ಣುಗಳಲ್ಲಿ ಬೆಳಕು ಹಾಯಿಸಿ ಗುರುತು ಪತ್ತೆ ಹಚ್ಚುತ್ತದೆ. ಬಾಗಿಲು ತೆರೆಯುತ್ತದೆ.
ಇದು ನಿಜಜೀವನದಲ್ಲೂ ಸಾಧ್ಯವಾ? ಅಥವಾ ಕಲ್ಪನೆಗಷ್ಟೇ ಸೀಮಿತವಾ? ಈಗಾಗಲೇ ಬೆರಳನ್ನು ಸ್ಕ್ಯಾನ್ ಮಾಡಿ ಆಧಾರ್ ದೃಢೀಕರಣ ಮಾಡ್ತಾರಲ್ಲ? ಹಾಗೆ ಕಣ್ಣುಗಳನ್ನು ಸ್ಕ್ಯಾನ್ ಮಾಡುವಂತಿದ್ದರೆ? ನಿಮ್ಮ ಈಗಿನ ಎಟಿಎಂ ಕಾರ್ಡು ಕಳೆದೋಗಬಹುದು. ಪಿನ್ ಮರೆತೋಗಬಹುದು. ಪಾಸ್ವರ್ಡನ್ನು ಕದಿಯಬಹುದು. ಬರೀ ಕಣ್ಣು ತೋರಿಸಿ ಬಾಗಿಲು ತೆರಯುವಂತಿದ್ದರೆ?
ಈ ಬಗೆಯ ಒಂದು ಯೋಜನೆ ತೆರೆಮರೆಯಲ್ಲಿ ರೂಪುಗೊಳ್ಳುತ್ತಿದೆ. ಸೂತ್ರಧಾರ ಓಪನ್ಎಐ(ಚಾಟ್ ಜಿಪಿಟಿ) ಕಂಪನಿಯ ಮಾಲೀಕ ಸ್ಯಾಮ್ ಆಲ್ಟಮನ್. ಯೋಜನೆಯ ಹೆಸರು ವರ್ಲ್ಡ್‌ಕಾಯಿನ್. ಇವರು ಹೊಸ ಡಿಜಿಟಲ್ ನಾಣ್ಯ ತರ್ತಿದಾರೆ. ಅದರ ಹೆಸರು WLD(worldcoin). ಈಗಿರುವ ಕ್ರಿಪ್ಟೋಕರೆನ್ಸಿ ನಾಣ್ಯಗಳಿಗೆ ಪರ್ಯಾಯವಾದ್ದು. ನೆನಪಿರಲಿ WLD ಎಂದರೆ ಡಿಜಿಟಲ್ ನಾಣ್ಯ. ಒಟ್ಟು ಯೋಜನೆಯ ಹೆಸರೂ ವರ್ಲಡ್ ಕಾಯಿನ್. ಅರ್ಥಾತ್ ಯೋಜನೆಯ ವ್ಯಾಪ್ತಿ ನಾಣ್ಯವನ್ನು ಮೀರಿದ್ದು.
ತಂತ್ರಜ್ಞಾನ ಲೋಕ ಮಾಡಲು ಕೆಲಸವಿಲ್ಲದೇ ಹುಟ್ಟುಹಾಕುತ್ತಿರುವ ಇನ್ನೊಂದು ಫ್ಯಾನ್ಸಿ ಯೋಜನೆಯೇ ಇದು ಎಂದು ನಿಮಗೆ ಅನುಮಾನ ಬರುವ ಮುನ್ನ ಯಾಕೆ ಇದು ಭವಿಷ್ಯದಲ್ಲಿ ಮುಖ್ಯವಾಗಬಹುದು ಎಂದು ಹೇಳಿಬಿಡ್ತೇನೆ. ಈಗೀಗ ಎಲ್ಲದಕ್ಕೂ ಶನೇಶ್ವರನೇ ಕಾರಣ ಅನ್ನುವ ಹಾಗೆ.. ಇದಕ್ಕೆ ಎಐನೇ ಕಾರಣ. ಹೀರೋ ಆಗಿ ಅಲ್ಲ. ಖಳನಾಗಿ. ವಿಚಿತ್ರವೆಂಬಂತೆ ಈ ಸಿನಿಮಾದಲ್ಲಿ ಖಳನೂ ಅವನೇ ಹೀರೋನೂ ಅವನೇ. ಒಂಥರಾ ದ್ವಿಪಾತ್ರ. ಹಳೆಯ ಕಾಲದಲ್ಲಿ ರಾಜ್ಕುಮಾರ್ ಸಿನಿಮಾಗಳಿದ್ದಂತೆ.
ಹೇಗೆ? ಮುಂದೆ ಬರಲಿರುವ ಎಐ ಜಮಾನಾದಲ್ಲಿ ಮನುಷ್ಯನಂತೆ ವರ್ತಿಸುವ ಬಾಟ್ ಮತ್ತು ರೊಬಾಟ್‌ಗಳು ಹುಟ್ಟಿಕೊಳ್ಳಲಿವೆ. ಬಾಟ್ ಅಂದರೆ ಸಾಫ್ಟವೇರ್ ಮಟ್ಟದ ಕೃತಕ ಮನುಷ್ಯ. ರೊಬಾಟ್ ಅಂದರೆ ಸಾಫ್ಟವೇರಿನೊಂದಿಗೆ ಹಾರ್ಡವೇರು ಬೆರೆತು ನಾವು ಮುಟ್ಟಿ ಮಾತಾಡಿಸಬಲ್ಲ ಕೃತಕ ಮನುಷ್ಯ.
ಇವರು ಬಂದಾಗ ಒಂದು ಹೊಸ ಅಪಾಯ ಎದುರಾಗಲಿದೆ. ಏನಂದರೆ ಇವರು ಕಳ್ಳರೂ ಖದೀಮರೂ ಆಗಬಹುದಾಗಿದೆ! ಅಂದರೆ ಇವರು ನಿಮ್ಮಿಂದ ಎಟಿಎಂ ಕಾರ್ಡು, ಪಿನ್ನು ಪಾಸ್ವರ್ಡು ಎಗರಿಸಿ ನಿಮ್ಮ ದುಡ್ಡು ಹೊಡೆಯಬಹುದಾಗಿದೆ.
ಇದೇನಿದು ಎಐ ಕಳ್ಳರ ಉದ್ಯೋಗವನ್ನೂ ಕಸಿಯಲಿದೆಯಾ ಅಂತೀರಾ? ಯಾಕಾಗಬಾರದು ಅಂತೀನಿ.
ವರ್ಲ್ಡ್‌ಕಾಯಿನ್ ಸಧ್ಯಕ್ಕೆ ಈ ಬಾಟ್ ಕಳ್ಳರಿಂದ ನಮ್ಮನ್ನು ರಕ್ಷಿಸುವ ಉದ್ದೇಶ ಹೊಂದಿದೆ. ರೋಬಾಟ್ ಕಳ್ಳರನ್ನು ಹಿಡಿಯಲು ಬಹುಶಃ ರೋಬಾಟ್ ಪೋಲೀಸರೇ ಬರಬೇಕೇನೋ. ಇರಲಿ-
ಇದರಲ್ಲಿನ ತಂತ್ರಜ್ಞಾನಗಳು ಯಾವುವು?
ನಮ್ಮಲ್ಲಿ ಈಗಾಗಲೇ ಬ್ಲಾಕ್‌ಚೈನ್ ತಂತ್ರಜ್ಞಾನ ಇದೆ. ಅದೇ ಕ್ರಿಪ್ಟೋಕರೆನ್ಸಿಯ ತಂದೆ ಅಥವಾ ತಾಯಿ. ನಮ್ಮಲ್ಲಿ ಎಐ ತಂತ್ರಜ್ಞಾನ ಸಹ ಇದೆ. ಮತ್ತು ಐರಿಸ್ ಬಯೋಮೆಟ್ರಿಕ್ ಸ್ಕ್ಯಾನ್ ಎಂಬ ಕಣ್ಣುಗಳನ್ನು ಸ್ಕ್ಯಾನ್ ಮಾಡುವ ತಂತ್ರಜ್ಞಾನವೂ ಇದೆ. ಬ್ರಹ್ಮ ವಿಷ್ಣು ಮಹೇಶ್ವರ ಪಿಚ್ಚರಲ್ಲಿನ ಹಾಗೆ ಈ ಮೂವರೂ ಸೇರಿಕೊಂಡರೆ ಸೃಷ್ಟಿಯಾಗುವುದೇ ವರ್ಲ್ಡ್‌ಕಾಯಿನ್, ಡಿಜಿಟಲ್ ಕಳ್ಳರ ವಿರುದ್ಧ ಹೋರಾಡುವ ಹೀರೋ.
ಮೊದಲಿಗೆ ಐರಿಸ್ ಮೂಲಕ ಒರ್ಬ್ ಎಂಬ ಉಪಕರಣದಿಂದ ನಿಮ್ಮ ಕಣ್ಣುಗಳನ್ನು ಸ್ಕ್ಯಾನ್ ಮಾಡಿ ನಿಮ್ಮದೇ ಆದ ವಿಶಿಷ್ಠ ಐಡಿ ಮತ್ತು ಕೀ ಸೃಷ್ಟಿಸಲಾಗುತ್ತದೆ. ಎಐ ಪ್ರತಿ ಸ್ಕ್ಯಾನು ಯಾವುದೋ ಒಬ್ಬ ನಿರ್ದಿಷ್ಟ ಜೈವಿಕ ವ್ಯಕ್ತಿಗೆ ಜಂಟಿ ಬೀಳುವಂತೆ ನೋಡಿಕೊಳ್ಳುತ್ತದೆ. Anti-spoof ತಂತ್ರಜ್ಞಾನದ ಮೂಲಕ ಬಾಟುಗಳು ಈ ಸ್ಕ್ಯಾನುಗಳ ದುರ್ಬಳಕೆಯಾಗದಂತೆ ತಡೆಯುತ್ತದೆ. ಕೊನೆಯದಾಗಿ ಬ್ಲಾಕ್‌ಚೈನ್ ಈ ಇಡೀ ವ್ಯವಸ್ಥೆ ವಿಕೇಂದ್ರೀಕರಣಗೊಂಡು ನಡೆಯುವಂತೆ ನೋಡಿಕೊಳ್ಳುತ್ತದೆ. ಅರ್ಥಾತ್ ನಮ್ಮ ಇಂಟರ್ನೆಟ್ ಇದ್ದಂತೆ. ಇದಕ್ಕೆ ಯಾರೋ ಒಬ್ಬ ಅಥವಾ ಒಂದು ಕಂಪನಿ ಅಥವಾ ಒಂದು ದೇಶದ ಸರಕಾರ ಮಾಲೀಕನಾಗಿರುವುದಿಲ್ಲ. ಪ್ರತಿ ನಾಣ್ಯ ಅಥವಾ ಅದರ ನಾಕಾಣಿ ಎಂಟಾಣಿ ಮಟ್ಟಿಗಿನ ಹಣದ ಹಿಂದೆಯೂ ಇದು ಯಾರಿಂದ ಯಾರಿಗೆ ಎಷ್ಟೊತ್ತಿಗೆ ವರ್ಗವಾಯಿತು ಎಂಬ ಮಾಹಿತಿ ಅಡಕವಾಗಿರುತ್ತದೆ, ಇದು ವ್ಯವಹಾರ ಪಾರದರ್ಶಕವಾಗಿರುತ್ತದೆ ಆದರೆ ಹೆಸರುಗಳು ಗೋಪ್ಯವಾಗಿರುತ್ತವೆ.
ಸರಿ ಇದು ಬಂತಾ? ಬರ್ತಿದೆಯಾ? ಅಥವಾ ಬರುವ ಸಂಭವವಿದೆಯಾ?
ಅರೆ ಆಗಲೇ ಬಂದಿದೆ ಸ್ವಾಮಿ. ಈಗಾಗಲೇ ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿ ಈ ಸ್ಕ್ಯಾನರನ್ನು ಇಟ್ಟಿದಾರೆ. ಅದೆಷ್ಟೋ ಲಕ್ಷ ಮಂದಿ ರೆಜಿಸ್ಟರ್ ಮಾಡಿಸಿಕೊಂಡಿದ್ದಾರೆ. ಇವರು ಆರಂಭದಲ್ಲಿ ಅದೃಷ್ಟವಂತರಿಗೆ ಒಂದಷ್ಟು ಉಚಿತ ನಾಣ್ಯಗಳನ್ನೂ ಕೊಡ್ತಾರಂತೆ. ಹೊಸ್ದಾಗಿ ಅಂಗಡಿ ತೆಗೆದಾಗ ಉಚಿತ ತಿಂಡಿ ಕೊಡ್ತಾರಲ್ಲ ಹಾಗೆ.
ಕಳೆದ ವರ್ಷ ಈ ಯೋಜನೆಯನ್ನು ವರ್ಲ್ಡ್ ಕಾಯಿನ್‌ನಿಂದ ಕೇವಲ ‘ವರ್ಲ್ಡ್’ ಎಂದು ಮರುನಾಮಕರಣ ಮಾಡಲಾಗಿದೆ. ಈ ವರ್ಷ ಯುಎಸ್‌ನ ಆರು ಮುಖ್ಯ ನಗರಗಳಲ್ಲಿ ಒರ್ಬ್(orb) ಸ್ಕ್ಯಾನರುಗಳನ್ನು ನೆಡಲಾಗಿದೆ. ಈ ವರ್ಷದಿಂದ ವೀಸಾದ ಡೆಬಿಟ್ ಕಾರ್ಡಿನ ಮೂಲಕ WLD ನಾಣ್ಯವನ್ನು ಚಲಾಯಿಸಬಹುದಾಗಿದೆ ಅನ್ನುತ್ತಾರೆ. ಲ್ಯಾಟಿನ್ ಅಮೇರಿಕಾದಲ್ಲಿ ಇದೀಗ ಮನೆ ಮನೆಗೆ ಬಂದು ಸ್ಕ್ಯಾನ್ ಮಾಡಿಕೊಂಡು ಹೋಗುವ ವ್ಯವಸ್ಥೆ ಕಲ್ಪಿಸಿದ್ದಾರಂತೆ.
ಹಾಗಾದರೆ ಇನ್ನೂ ಯಾಕೆ ತಡ, ನಾಳೆಯಿಂದಲೇ ಇಡೀ ಜಗತ್ತು ಇದನ್ನು ಅಳವಡಿಸಿಕೊಳ್ಳಬಹುದಲ್ಲವ?
ತಂತ್ರಜ್ಞಾನ ದೃಷ್ಟಿಯಿಂದ ಯೆಸ್ ಹೌದು. ಆದರೆ ಸಾಮಾಜಿಕ ದೃಷ್ಟಿಯಿಂದ ಇದು ಇನ್ನೂ ಪೂರ್ತಿ ಸ್ವೀಕೃತವಾಗಿಲ್ಲ. ಕಾರಣ ಮತ್ತದೇ, ಗೌಪ್ಯತೆಯ ಪ್ರಶ್ನೆ. ಸುರಕ್ಷತೆಯ ಪ್ರಶ್ನೆ. ಉದ್ದೇಶ ಒಳಸುಳಿಗಳ ಪ್ರಶ್ನೆ. ಸ್ಪೇನ್ ದೇಶ ಈ ವ್ಯವಸ್ಥೆ ಜಿಡಿಪಿಆರ್(ಯುರೋಪಿನ ಮಾಹಿತಿ ಸುರಕ್ಷೆಯ ಕಾಯ್ದೆ) ನಿಯಮಗಳಿಗೆ ಪೂರಕವಾಗಿಲ್ಲವೆಂದು ಆರೋಪಿಸಿ ಇಡೀ ಐರಿಸ್ ಸ್ಕ್ಯಾನುಗಳನ್ನು ಡಿಲೀಟ್ ಮಾಡುವಂತೆ ಆದೇಶಿಸಿದೆ. ಹಾಂಗ್‌ಕಾಂಗಿನ ಪ್ರೈವಸಿ ರೆಗ್ಯುಲೇಟರು ಈ ವ್ಯವಸ್ಥೆ ಅಗತ್ಯಕ್ಕಿಂತ ಹೆಚ್ಚಾಗಿ ಮಾಹಿತಿಯನ್ನು ಪಡೆಯುತ್ತಿದೆ ಎಂದು ನೋಟೀಸ್ ನೀಡಿದೆ. ಅನೇಕರು ಇದು ವಿಕೇಂದ್ರೀಕರಣ ಎಲ್ಲಾಯ್ತು ಎಲ್ಲನೂ ಕೇಂದ್ರೀಕರಣಗೊಳ್ತಿದೆಯಲ್ಲವಾ ಅಂತನೂ ತಕರಾರು ತೆಗಿತಿದ್ದಾರೆ.
ಒಟ್ನಲ್ಲಿ.. ನಮ್ಮಲ್ಲೂ ಬರುತ್ತೋ ಬರಲ್ಲವೋ.. ಕಾದು ನೋಡುವ.