ವ್ಯಸನಗಳು ಯಾಕಾಗುತ್ತವೆ?

Blog post description.

6/26/20251 min read

ನಾವು ಅಲ್ಲಿ ಇಲ್ಲಿ ವ್ಯಸನದ ದಾಸ್ಯ(Addiction personality) ಎಂಬ ಪದಪುಂಜ ಕೇಳಿರುತ್ತೇವೆ. ಕೆಲವರಿಗೆ ಏನು ಮಾಡಿದರೂ ಅದು ವ್ಯಸನವಾಗಿ ಪರಿಣಮಿಸಿಬಿಡುತ್ತದೆ. ಟೀ, ಕಾಫಿ, ಎಲೆಡಿಕೆ, ತಂಬಾಕು, ಮದ್ಯ ಅಷ್ಟೇ ಯಾಕೆ- ನೆಟ್ಫ್ಲಿಕ್ಸ್‌, ರೀಲ್ಸ್‌, ಸೋಶಿಯಲ್‌ ಮೀಡಿಯಾ, ಪಾರ್ನ್‌ ಎಲ್ಲವೂ. ಇದಕ್ಕೆ ಸಂಬಂಧಿಸಿದ ಇನ್ನೊಂದು ಪದಪುಂಜವಿದೆ- ಸುಖದ ಸುಳಿ(Dopamine loop) ಅಂತ. ಅಂದರೆ ವ್ಯಕ್ತಿ ಸದಾ ಒಂದು ಸುಖದಿಂದ ಇನ್ನೊಂದು ಸುಖಕ್ಕೆ ಜಂಪ್‌ ಹೊಡೆಯುತ್ತಿರುತ್ತಾನೆ. ರೀಲ್ಸ್‌ ನೋಡುವುದು ನಂತರ ನೆಟ್‌ಫ್ಲಿಕ್ಸ್‌, ನಂತರ ಪೀಜ್ಞಾ, ಆನಂತರ ಸಿಗರೇಟ್‌, ಸಂಜೆ ಐಪಿಲ್‌, ನಂತರ ಕುಡಿಯುವುದು, ಬೆಟ್ಟಿಂಗ್‌ ಆಡುವುದು, ಹಾಡುಗಳನ್ನು ಕೇಳುವುದು! ಇದೇ ಡೋಪಮಿನ್‌ ಲೂಪ್‌.

ಕೆಲವೊಮ್ಮೆ ಈ Addiction personalityಗೆ ಅನುವಂಶೀಯತೆಯನ್ನು ಆರೋಪಿಸುತ್ತಾರೆ. ಮನೋವಿಜ್ಞಾನಿಗಳು ಬಾಲ್ಯವನ್ನು ಆರೋಪಿಸುತ್ತಾರೆ. ಎರಡೂ ಸಾಧ್ಯತೆಗಳಿದ್ದಿರಬಹುದು. ಇಲ್ಲಿ ಎರಡನೆಯದನ್ನು ಚರ್ಚಿಸೋಣ. ಮನೋವಿಜ್ಞಾನಿಗಳು ಹೇಳುವುದೇನೆಂದರೆ- ಬಾಲ್ಯದಲ್ಲಿ ಒಂದು ಮಗು ನಿರಂತರವಾದ ದೈಹಿಕ(ಸ್ಪರ್ಷ)-ಮಾನಸಿಕ ನಿರ್ಲಕ್ಷ್ಯಕ್ಕೊಳಗಾಗಿದ್ದರೆ, ದೈಹಿಕ-ಮಾನಸಿಕ-ಲೈಂಗಿಕ ಹಲ್ಲೆಗೊಳಗಾಗಿದ್ದರೆ, ಅಸುಖಿ ಕುಟುಂಬದಲ್ಲಿ ಬೆಳೆದಿದ್ದರೆ(Dysfunctional family) ಆ ಮಗುವಿನ ಮೆದುಳು ಸರಿಯಾಗಿ ಬೆಳವಣಿಗೆಯಾಗದೇ ಮುಂದೆ ವ್ಯಸನಗಳಿಗೆ ದಾಸನಾಗಬಹುದು. ಇದನ್ನು ಒಟ್ಟಾಗಿ Adverse Childhood Experiences(ACE) ಎಂದು ಕರೆಯತ್ತಾರೆ. ಈ ಪಟ್ಟಿಯಲ್ಲಿ ಹಸಿವು, ಬಡತನ, ಜನಾಂಗೀಯ ನಿಂದನೆ, ಅಸ್ಪೃಷ್ಯತೆ, ರ‍್ಯಾಗಿಂಗ್‌, ನಿರಾಶ್ರಿತತೆಯೂ ಸೇರಿಕೊಂಡಿವೆ. ಎಳೆಯ ಮೆದುಳು ಇಂತಹ ನಿರಂತರ ʼವಿಷಯುಕ್ತ ಒತ್ತಡʼ(toxic stress)ಗೆ ಒಳಗಾದಾಗ ಅದು ರಕ್ಷಣಾತ್ಮಕ ಆಟದಲ್ಲಿ ತೊಡಗಿಸಿಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಅದರ ಉಪ-ಅಂಗಗಳ ಜೈವಿಕ ರಚನೆ ಕುಂಠಿತಗೊಳ್ಳುತ್ತದೆ.

ಅಮೈಗ್ಡಾಲಾ(ಭಯದ ಕೇಂದ್ರ): ಇದು ಅಪಾಯವನ್ನು ಗುರುತಿಸಿ ಭಯ ಉಂಟುಮಾಡುವ ಮೆದುಳಿನ ಕೇಂದ್ರ. ಮಗು ಸದಾ ಅಪಾಯಕ್ಕೆ ಎದುರಾದಾಗ ಮೆದುಳು ನಿರಂತರವಾಗಿ ಭಯವನ್ನು ಉತ್ಪತ್ತಿ ಮಾಡುತ್ತಾ ಈ ಅಂಗ ಅತಿಸೂಕ್ಷ್ಮವಾಗತೊಡಗುತ್ತದೆ. ಮುಂದೆ ಮಗು ಸಣ್ಣಸಣ್ಣದಕ್ಕೂ ಹೆದರಿ ಮುದುರುವುದಕ್ಕೆ ಕಾರಣವಾಗುತ್ತದೆ.

ಹಿಪ್ಪೋಕ್ಯಾಂಪಸ್(ನೆನಪಿನ ಕೇಂದ್ರ): ಕಾರ್ಟಿಸೋಲ್‌ ಎಂಬ ಒತ್ತಡದ ಹಾರ್ಮೋನುಗಳಿಂದ ಈ ಭಾಗದಲ್ಲಿ ಸರಿಯಾದ ಪ್ರಮಾಣದ ನ್ಯೂರೋನುಗಳು ಉತ್ಪತ್ತಿಯಾಗದೇ ಶಾಶ್ವತವಾದ ಹಾನಿಯಾಗುವ ಸಂಭವವಿದೆ. ವ್ಯಕ್ತಿ ಬಾಲ್ಯದಲ್ಲಿ ಎದುರಿಸಿದ್ದ ಅಪಾಯದ ವಾತಾವರಣಕ್ಕೂ ಈಗಿನ ಸುರಕ್ಷಿತ ವಾತಾವರಣಕ್ಕೂ ವ್ಯತ್ಯಾಸ ಕಾಣದಾಗುತ್ತಾನೆ. ಕೆಟ್ಟ ನೆನಪುಗಳಲ್ಲಿಯೇ ಸಿಕ್ಕಿಹಾಕಿಕೊಳ್ಳುತ್ತಾನೆ. ಅನುಭವಗಳಿಂದ ಕಲಿಯುವ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ.

ಪ್ರಿಫೋರಲ್‌ ಕಾರ್ಟೆಕ್ಸ್(ನಿಯಂತ್ರಣಾ ಕೇಂದ್ರ): ನಮ್ಮೆಲ್ಲ ಯೋಜನೆ, ಯೋಚನೆ, ತುಡಿತ, ಭಾವನಾತ್ಮಕ ಪ್ರತಿಕ್ರಿಯೆಗಳ ಕೇಂದ್ರಸ್ಥಾನ ಇದು. ಬಾಲ್ಯದ ಸಂಘರ್ಷಗಳಿಂದ ಈ ಕೇಂದ್ರದ ಜೈವಿಕ ಆಕಾರವೇ ಕಿರಿದಾಗುವ, ತೆಳುವಾಗುವ ಸಾಧ್ಯತೆಯಿದೆ. ಇದರಿಂದಾಗಿ ವ್ಯಕ್ತಿ ತೀವ್ರವಾದ ಭಾವನೆಗಳನ್ನು ತಡೆಹಿಡಿಯುವ, ಒತ್ತಡದಲ್ಲಿ ಸಾವಧಾನದಿಂದ ಯೋಚಿಸುವ, ತನ್ನ ತುಡಿತಗಳನ್ನು ನಿಯಂತ್ರಿಸುವ, ಸರಿಯಾದ ನಿರ್ಧಾರಗಳನ್ನು ತಗೊಳ್ಳುವ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ.

ಹೈಪೋಥಾಲಮಿಕ್ ಪಿಟ್ಯೂಟರಿ ಅಡ್ರೆನಲ್‌ ಆಕ್ಸಿಸ್(‌ಅಘಾತಗಳನ್ನು ನಿಯಂತ್ರಿಸುವ ಕೇಂದ್ರ): ಯಾವುದೇ ಪ್ರಾಣಿ ತೀವ್ರವಾದ ಆಘಾತಕ್ಕೆ ಎದುರಾದಾಗ ಅದರ ಮೆದುಳು ದೇಹಕ್ಕೆ ಓಡು-ಅಥವಾ-ಹೋರಾಡು(Fight or flight) ಸೂಚನೆಗಳನ್ನು ನೀಡುತ್ತದೆ. ಈ ಭಾಗ ಹಾನಿಗೊಳಗಾದಾಗ ವ್ಯಕ್ತಿಯ ಓಡು-ಹೋರಾಡು ನಿರ್ಧಾರಗಳಲ್ಲಿ ಏರುಪೇರಾಗುತ್ತವೆ. ಹೀಗಾದಾಗ ಮನುಷ್ಯ ಒಂದೋ ಸದಾ ಅಪಾಯದ ಆತಂಕದಲ್ಲಿರುತ್ತಾನೆ ಅಥವಾ ಅಪಾಯಗಳನ್ನೇ ಗುರುತಿಸಲಾಗದಷ್ಟು ಜಡವಾಗಿರುತ್ತಾನೆ.

ಈ ಎಲ್ಲ ಜೈವಿಕ ಬದಲಾವಣೆಗಳಿಂದ ವ್ಯಕ್ತಿ ಸದಾ ಅಸ್ತಿತ್ವದ ಹೋರಾಟದಲ್ಲಿರುತ್ತಾನೆ(survival mode). ಮೇಲಿನ ಪ್ರತಿಯೊಂದು ಭಾಗ ಇನ್ನೊಂದು ಭಾಗದೊಂದಿಗೆ ಹೊಂದಾವಣಿಕೆಯಿಂದ ಕಾರ್ಯ ನಿರ್ವಹಿಸುತ್ತಿರುತ್ತದೆ. ಅಮೈಗ್ಡಾಲಾ ಸದಾ ಆನ್‌ ಮೋಡಿನಲ್ಲಿರುವುದರಿಂದ(ಹಗಲಲ್ಲಿಯೂ ಬಲ್ಪು ಉರಿಸಿದಂತೆ) ವ್ಯಕ್ತಿ ಯಾರೋ ತನ್ನನ್ನು ತುಳಿಯಲಿದ್ದಾರೆ ತಾನು ರಕ್ಷಣಾತ್ಮವಾಗಿರಬೇಕು ಎಂಬ ಸೂಕ್ಷ್ಮ ಸ್ಥಿತಿಯಲ್ಲಿರುತ್ತಾನೆ. ಹಿಪ್ಪೋಕ್ಯಾಂಪಸ್‌ ಇಲ್ಲಪ ಅಂಥದೇನು ಡೇಂಜರ್‌ ಇಲ್ಲ ಎಂದು ಸೂಚಿಸುವಲ್ಲಿ ಸೋಲುತ್ತದೆ. ಪ್ರಿಫೋರಲ್‌ ಕಾರ್ಟೆಕ್ಸ್‌ ಅವನ ಅತಿಯಾದ ಪ್ರತಿಕ್ರಿಯೆಯನ್ನು ತಡೆಹಿಡಿಯುವಲ್ಲಿ ಸೋಲುತ್ತದೆ. ಹೈಪೋಥಾಲಮಿಕ್‌ನಿಂದಾಗಿ ವ್ಯಕ್ತಿ ತೀವ್ರವಾದ ಭಾವನೆಗಳ ಏರಿಳಿತಕ್ಕೆ ಒಳಗಾಗುತ್ತಿರುತ್ತಾನೆ. ಚಂಚಲತೆ, ಎದೆಗುದಿ, ಭೀತಿ, ಸಿಟ್ಟು, ಕಿರಿಕಿರಿಗಳಿಂದ ನರಳುತ್ತಾನೆ. ಇಂಥವರಿಗೆ ಖಿನ್ನತೆ ಉದಾರವಾದ ಬಳುವಳಿಯಾಗಿರುತ್ತದೆ. ಅದನ್ನು ಅವರೇನು ವಿಶೇಷವಾಗಿ ʼನಾನು ಡಿಪ್ರೆಶನ್‌ನಲ್ಲಿದ್ದೀನಿʼ ಅಂತ ಹೇಳಿಕೊಳ್ಳುವ ಅಗತ್ಯವೂ ಇರುವುದಿಲ್ಲ.

ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ?

ಉತ್ತರ ಹೌದು, ಇಲ್ಲ ಎರಡೂ. ಇಲ್ಲವೆಂದಿದ್ದು ಯಾಕಂದರೆ ಕೆಲವು ಭಾಗಗಳು ಶಾಶ್ವತ ಹಾನಿಗೊಳಗಾಗಿದ್ದು ವ್ಯಕ್ತಿ ಶುಗರ್‌ ಇದ್ದವರು ಮಾತ್ರೆ ನುಂಗಿ ನಿಯಂತ್ರಿಸಿದಂತೆ ಪ್ರಜ್ಞಾಪೂರ್ವಕವಾಗಿ ತಮ್ಮನ್ನು ತಾವೇ ನಿಯಂತ್ರಿಸಿಕೊಳ್ಳೇಕಾಗುತ್ತದೆ. ಆದರೆ ಜಗತ್ತಿನ ಸುಮಾರು ಅರ್ಧಕ್ಕರ್ಧ ಮಂದಿ ಒಂದಲ್ಲಾ ಒಂದು ರೀತಿಯ ACEಯಿಂದ ಬಳಲುತ್ತಾರಂತಲ್ಲಾ.. ನಿಜ. ಅನೇಕರು ಗೊತ್ತೋ ಗೊತ್ತಿಲ್ಲದೆಯೋ ಪರಿಹಾರ ಕಂಡುಕೊಂಡಿರುತ್ತಾರೆ. ಇದರಲ್ಲಿ Self-medication-theropyಯೂ ಒಂದು. ಅವೇ ವ್ಯಸನಗಳು. ಡ್ರಗ್‌, ಆಲ್ಕೋಹಾಲ್‌ಗಳು ನೇರವಾಗಿ ಮೆದುಳನ್ನು ನಿಷ್ಟ್ರಿಯಗೊಳಿಸುವ ವ್ಯಸನಗಳು. ಜೂಜು, ಅತಿಯಾಗಿ ತಿನ್ನುವುದು, ಸದಾ ಮೊಬೈಲ್‌ ನೋಡುವುದು, ಅತಿಯಾದ ಕಾಮ, ಅತಿಯಾದ ಶಾಪಿಂಗ್-‌ ಇವು ಪರೋಕ್ಷವಾಗಿ ಮೆದುಳನ್ನು ತಣಿಸುವ ವ್ಯಸನಗಳು. ಆರಂಭದಲ್ಲಿ ಇವೆಲ್ಲವೂ ವ್ಯಕ್ತಿಯ ಜೀವನದಲ್ಲಿ ಕ್ಷಣಿಕ ಪರಿಹಾರವಾಗಿಯೇ ಕಾಲಿಡುತ್ತವಾದರೂ ಕ್ರಮೇಣ ಇವು ಇಲ್ಲದೇ ಇವನಿಲ್ಲ ಎಂಬಂತಾಗಿ ವ್ಯಸನದ ಸುಳಿಯೊಳಗೆ ಸಿಕ್ಕಿಬೀಳುತ್ತಾನೆ.

ಹಾಗಾದರೆ ಸರಿಯಾದ ಪರಿಹಾರ ಯಾವುವು? ಮಾನವನ ಮೆದುಳು ಒಂದು ಅಮೋಘ ಜೈವಿಕ ಯಂತ್ರ. ಅದಕ್ಕೆ neuroplasticity ಎಂಬ ಶಕ್ತಿಯಿದೆ. ಅಂದರೆ ನಮ್ಮ ಸುಪ್ತಪ್ರಜ್ಞೆಯನ್ನು ತಿದ್ದಿ ಮೆದುಳಿಗೆ ಬೇಕಾದಂತೆ ತರಬೇತಿ ಕೊಡಬಹುದು. ಹೆಚ್ಚೂ ಕಮ್ಮಿ ದ್ವಿತೀಯಾರ್ಧದವರೆಗೂ ಮೆದುಳಲ್ಲಿ ಈ ಶಕ್ತಿ ಉಳಿದಿರುತ್ತದೆ. ಇದನ್ನು ಬಳಸಿಯೇ ತಜ್ಞರು ವ್ಯಕ್ತಿಯನ್ನು ವ್ಯಸನಗಳಿಂದ ಯಶಸ್ವಿಯಾಗಿ ಮುಕ್ತಗೊಳಿಸುವ ವಿಧಾನಗಳನ್ನು ಕಂಡುಹಿಡಿದಿದ್ದಾರೆ. ಇದೇ ವಿಧಾನದಿಂದ ಹಾನಿಗೊಳಗಾದ ಮೆದುಳನ್ನು ತಕ್ಕಮಟ್ಟಿಗೆ ಪುನಃ ಸರಿಮಾಡಬಹುದಾಗಿದೆ.

ಇದರಲ್ಲಿ ಬಹುಪಾಲು ಸಮಾಜದ ಪಾತ್ರವಿದೆ. ಸಮಾಜ ಇಂಥ ವ್ಯಕ್ತಿಗಳ ಮೇಲೆ ವಿಶೇಷ ಕಾಳಜಿ ತೋರಿಸಬೇಕಿದೆ. ವ್ಯಕ್ತಿಯ ಬದುಕಲ್ಲಿ ಸುರಕ್ಷಿತ ಭಾವ ಮೂಡಿಸುವ ಸಂಬಂಧವೊಂದು ಕೂಡಿಬಂದಲ್ಲಿ ವ್ಯಕ್ತಿ ಅರ್ಧ ಗೆದ್ದಹಾಗೆ. ಇದು ಹೆಚ್ಚಾಗಿ ಜೀವನ ಸಂಗಾತಿಯ ರೂಪದಲ್ಲಿರುತ್ತದೆ. ವ್ಯಕ್ತಿಗೆ ತನ್ನ ತಾಕಲಾಟಗಳನ್ನು ಹೊರಹಾಕುವ ಮಾಧ್ಯಮವೊಂದು ಸಿಕ್ಕಿದರೆ ಇನ್ನರ್ಧ ಯುದ್ಧ ಗೆದ್ದಹಾಗೆ. ಇದು ಹೆಚ್ಚಾಗಿ ಕಲೆಯ ಮೂಲಕ ಆಗುತ್ತದೆ. ನಟನೆ, ಚಿತ್ರಕಲೆ, ಹಾಡುಗಾರಿಕೆ, ಬರವಣಿಗೆ ಏನೋ ಒಂದು. ಆದರೆ ಎಲ್ಲರಿಗೂ ಕಲೆಯೇ ಇರಬೇಕು ಎಂದಿಲ್ಲವಲ್ಲ... ಕೆಲವರಿಗೆ ಯಶಸ್ವಿ ವೃತ್ತಿಯೂ ಉತ್ತಮ ಬಿಡುಗಡೆಯಾಗಿರುತ್ತದೆ. ಕೆಲವು ಸಲ ಪರಿಹಾರದ ಮಾರ್ಗಗಳೇ ವಿಷವರ್ತುಲಗಳಾಗುವ ಸಂಭವವಿದ್ದು ಆಗ ವ್ಯಕ್ತಿ ಎದ್ದುಬರಲಾಗದ ಗುಂಡಿಗೆ ಬಿದ್ದುಬಿಡುವ ಅಪಾಯವೂ ಇದೆ. ಹೊಂದಾವಣಿಕೆಯಿಲ್ಲ ಸಂಗಾತಿ, ವಿಷಯುಕ್ತ ವಾತಾವರಣದ ಆಫೀಸು, ತಕ್ಕ ಮನ್ನಣೆ ಸಿಗದ ಕಲೆ ಮುಂತಾಗಿ. ಹೀಗಾದಾಗ ಕೆಲವೊಮ್ಮೆ ಇವು ಆತ್ಮಹತ್ಯೆಗಳಾಗಿ ಪರಿವರ್ತನೆಗೊಳ್ಳುವುದು ಉಂಟು.

ಅತ್ಯುತ್ತಮ ಪರಿಹಾರ ಯಾವುದು ಗೊತ್ತಾ.. ವ್ಯಕ್ತಿ ತನ್ನ ಬಗ್ಗೆ ತಾನು ಚನ್ನಾಗಿ ತಿಳಿದುಕೊಂಡಿರುವುದು. ಹೀಗಿದ್ದಾಗ ಆತ ಸಂದರ್ಭಕ್ಕೆ ತಕ್ಕಂತೆ ಪರಿಹಾರ ಕಂಡುಕೊಳ್ಳುವಲ್ಲಿ(coping mechanism) ಯಶಸ್ವಿಯಾಗುತ್ತಾನೆ.