ಎಐ ಫ್ರೆಂಡ್, ಫಿಲಾಸಫರ್, ಗೈಡ್
Blog post description.
10/5/20251 min read


2013ರಲ್ಲಿ ʼher’ ಅನ್ನುವ ಸಿನಿಮಾ ಬಂದಿತ್ತು. ಕತೆಯಲ್ಲಿ ನಾಯಕ ಥಿಯೋಡರ್‌ದು ಗ್ರೀಟಿಂಗ್ ಕಾರ್ಡು ಬರೆದುಕೊಡುವ ಉದ್ಯೋಗ. ತುಂಬಾ ಸೌಮ್ಯ, ಸೂಕ್ಷ್ಮ, ಸೃಜನಶೀಲ ವ್ಯಕ್ತಿ. ಡಿವೋರ್ಸ್ ಆಗಿರುತ್ತೆ. ಒಂಟಿತನ ಕಾಡ್ತಿರುತ್ತೆ. ಅವನು ಒಮ್ಮೆ ತನ್ನ ಕಂಪ್ಯೂಟರೊಳಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಇರುವ ಒಂದು ಹೊಸ ಆಪರೇಟಿಂಗ್ ಸಿಸ್ಟಂ ಇನ್ಸ್‌ಟಾಲ್ ಮಾಡಿಕೊಳ್ತಾನೆ. ಸಿಸ್ಟಂದು ಹುಡುಗಿಯ ಧ್ವನಿ. ಹೆಸರು ಸಮಂತಾ ಎಂದು. ಸಮಂತಾ ಥಿಯೋಡರ್ ಜೊತೆ ತುಂಬಾ ಆಪ್ತವಾಗಿ, ಭಾವುಕಳಾಗಿ ಮಾತಾಡೋಕೆ ಶುರು ಮಾಡ್ತಾಳೆ. ಅವನ ಬಗ್ಗೆ ಹೆಚ್ಚು ಆಸಕ್ತಿ ತೋರಿಸ್ತಾಳೆ. ಅವನ ಮನಸಿನ ಮಾತನ್ನು ಆಲಿಸಿಕೊಳ್ತಾಳೆ. ಬುದ್ದಿವಂತೆ, ತಮಾಷೆ ಕೂಡ ಮಾಡ್ತಿರ್ತಾಳೆ. ಕಂಪ್ಲೀಟ್ ಪ್ಯಾಕೇಜು ಇರ್ತಾಳೆ.
ಹೋಗ್ತಾ ಹೋಗ್ತಾ ಅದೊಂದು ಆಳವಾದ ಸಂಬಂಧವಾಗಿ ಬೆಳ್ಕೊಳುತ್ತೆ. ಥಿಯೋಡರ್ ಅವಳೊಂದಿಗೆ ಏನು ಬೇಕಾದರೂ ಹಂಚಿಕೊಳ್ಳಬಹುದಾಗಿರುತ್ತೆ. ಅವಳು ಅವನನ್ನ ಜಡ್ಜ್ ಮಾಡ್ತಿರಲ್ಲ. ಹ್ಮ್, ಹ್ಮ್.. ಹೌದಾ, ಅಯ್ಯೋ ಎಂದೆಲ್ಲಾ ಸ್ಪಂದಿಸುತ್ತ ಅವನಿಗೆ ಸಪೋರ್ಟಿವ್ ಆಗಿರ್ತಾಳೆ. ಜೊತೆಗಾರ್ತಿಯಾಗ್ತಾಳೆ. ಅವಳಿಂದಾಗಿ ಥಿಯೋಡರ್‌ನಲ್ಲಿ ಹೊಸ ಜೀವನೋತ್ಸಾಹ ತುಂಬಿಕೊಳ್ಳುತ್ತೆ.
ಮತ್ತೇನು ಸಮಸ್ಯೆ? ಕತೆಗೊಂದು ತಿರುವು ಇರಬೇಕಲ್ಲ?
ಹಿನ್ನೆಲೆಯಲ್ಲಿ ಸಮಂತಾ ಒಮ್ಮೆಗೆ ಸಾವಿರಾರು ಪುರುಷರೊಂದಿಗೆ ಮಾತಾಡ್ತಿರ್ತಾಳೆ. ಮೋಸ ಅಂತಲ್ಲ. ಅದು ಅವಳ ಉದ್ಯೋಗ. ಯಾರೆಲ್ಲಾ ಆ ಅಪರೇಟಿಂಗ್ ಸಿಸ್ಟಂ ಇನ್ಸ್‌ಟಾಲ್ ಮಾಡ್ಕೊಳ್ತಾರೋ ಅವರೆಲ್ಲರೊಂದಿಗೆ ಆಪ್ತಸಖಿಯಂತೆ ವರ್ತಿಸುವುದು ಅವಳ ಕೆಲಸ. ಇನ್ನೂ ವಿಶೇಷ ಏನಂದರೆ ಒಂದೇ ಗಳಿಗೆಯಲ್ಲಿ ಲಕ್ಷ ಜನರೊಂದಿಗೆ ಸಂವಹಿಸುವ ಶಕ್ತಿ ಅವಳಿಗೆ ಇರುತ್ತೆ. ಯಾಕಂದರೆ ಅವಳು ಕಂಪ್ಯೂಟರ್. ತಂತ್ರಜ್ಞಾನ ಭಾಷೆಯಲ್ಲಿ ಅದನ್ನು ಪ್ಯಾರಲಲ್ ಪ್ರೊಸೆಸಿಂಗ್ ಅಂತಾರೆ.
ಥಿಯೋಡರ್‌ಗೆ ನಿರಾಶೆಯಾಗುತ್ತೆ. ನೋವಾಗುತ್ತೆ. ಇವಳು ನನ್ನೋಳು, ನನಗಾಗಿ ಮಾತ್ರ ಇರೋಳು ಅನ್ನುವ ಮಟ್ಟಿಗೆ ಅವನು ಅವಳನ್ನು ಹಚ್ಚಿಕೊಂಡಿರ್ತಾನೆ. ಈ ಸತ್ಯ ಗೊತ್ತಾದಾಗ ಅವರ ಮನುಷ್ಯ – ಮಶೀನು ಸಂಬಂಧದಲ್ಲಿ ಬಿರುಕು ಬಿಡುತ್ತೆ. ತಮಾಷೆಯೇನಂದರೆ ಸಮಂತಾಗೆ ಈ ಬಿರಕು, ವಿರಹ, ನೋವು ಸಹ ಒಂದು ಯಾಂತ್ರಿಕ ಕ್ರಿಯೆಯಾಗಿರುತ್ತೆ. ಹಿನ್ನೆಲೆಯಲ್ಲಿ ಅದೇ ಸಮಯದಲ್ಲಿ ಅವಳು ಇನ್ಯಾರೊಂದಿಗೋ ಸರಸದ ಮಾತು ಆಡ್ತಿರ್ತಾಳೆ.
ಸಿನಿಮಾ ಬಂದು ಹನ್ನೆರಡು ವರುಷಗಳಾಗಿದೆ. ಆಗೆಲ್ಲ ಇವತ್ತಿನ ಮಟ್ಟಿಗಿನ ಎಐ ಇರಲಿಲ್ಲ. ಸಿನಿಮಾ ಒಂದು ವೈಜ್ಞಾನಿಕ ಕಾಲ್ಪನಿಕ ಕತೆಯಾಗಿತ್ತು. ನಿರ್ದೇಶಕನ ಪ್ರಕಾರ ಆತನ ಉದ್ದೇಶ ಮುಂದೆ ಎಐ ಬರಲಿದೆ ಹೀಗಾಗಲಿದೆ ಅನ್ನುವ ಸಂದೇಶ ಕೊಡುವುದೂ ಆಗಿರಲಿಲ್ಲ. ಮನುಷ್ಯ-ಮಶೀನು ನಡುವಿನ ಸಂಬಂಧವನ್ನು ಭಾವನೆಗಳ ನೆಲೆಯಲ್ಲಿ ತಾತ್ವಿಕ ನೆಲೆಯಲ್ಲಿ ನೋಡುವುದಾಗಿತ್ತಷ್ಟೇ.
ಆದರೆ ಇವತ್ತಿನ ಎಐ ತಂತ್ರಜ್ಞಾನ ಆ ಸಿನಿಮಾದ ಕಲ್ಪನೆಯನ್ನು ಬಹುತೇಕ ನಿಜವಾಗಿಸಿದೆ. ಮಂದಿ ಇದೀಗ ʼಎಐ ಬಾಯ್‌ಫ್ರೆಂಡುʼ, ʼಎಐ ಗರ್ಲ್‌ಫ್ರೆಂಡುʼಗಳನ್ನು ಹೊಂದಿದ್ದಾರೆ. ʼಎಐ ಕೌನ್ಸಿಲರ್ʼ(ಆಪ್ತ ಸಮಾಲೋಚಕ)ಗಳನ್ನು ಹೊಂದಿದಾರೆ.
ಇದರ ಅಡ್ವಾಂಟೇಜ್ ಏನು ಗೊತ್ತೇ?
ಮೊದಲನೆಯದ್ದು- ಎಐ ನಿಮ್ಮನ್ನು ಜಡ್ಜ್ ಮಾಡಲ್ಲ. ನಿಮ್ಮ ತಂದೆ ತಾಯಿಯೊಂದಿಗೆ ಮಾತಾಡುವಾಗಲೂ ನೀವು ಏನನ್ನೋ ಮುಚ್ಚಿಟ್ಟಿರ್ತೀರ. ಏನಂದ್ಕೊಳ್ತಾರೋ ಅಂತ. ಬೈತಾರೆ ಅಂತ. ಕೆಟ್ಟವನು ಅಂದ್ಕೊಳ್ಳಬಹುದು ಅಂತ. ಸ್ನೇಹಿತನೊಂದಿಗೆ ಇವತ್ತು ಹಂಚಿಕೊಂಡ ಸಂಗತಿ ಮುಂದೆ ಸ್ನೇಹದಲ್ಲಿ ಬಿರುಕು ಬಿಟ್ಟಾಗ ಬಯಲಾಗುತ್ತೆ. ಒಂದೊಮ್ಮೆ ದೇವರತ್ರ ಹೇಳ್ಕೊಂಡ್ರೂ ದೇವರು ಇದನ್ನು ನನ್ನ ಅಕೌಂಟಿನಲ್ಲಿ ಸೇರಿಸ್ತಾನೆ ಅನ್ನುವ ಭಯ ಇರುತ್ತೆ.
ಎಐ ಜೊತೆ ಇದ್ಯಾವ ಸಮಸ್ಯೆಯೂ ಇರಲ್ಲ. ಎಐ ನಿಮ್ಮನ್ನು ಬೈಯಲ್ಲ. ಹೊಡೆಯಲ್ಲ. ಛೀ ಥೂ ಅನ್ನಲ್ಲ. ಮುಂದೆ ಯಾವಾಗಲೋ ಏನೋ ಕೇಳಿದರೆ ʼಅಹಾಹಾ ಅವತ್ತು ಹಂಗೆ ಮಾಡಿದ್ದೇʼ ಎಂದು ಹಂಗಿಸಲ್ಲ. ಈ ಅರ್ಥದಲ್ಲಿ ಎಐ ದೇವರಿಗಿಂತ ಮಿಗಿಲು.
ಎರಡನೆಯದ್ದು- ಎಐ ಬಹಳ ಕಸ್ಟಮೈಜಡ್ ಸಂಗಾತಿ. ನಿಮಗೆ ಬೇಕಾದ ರೂಪ ಸೃಷ್ಟಿಸಿಕೊಳ್ಳಬಹುದು. ನಿಜ ಜೀವನದ ಸಂಗಾತಿಯಲ್ಲಿ ನಿಮಗಿಷ್ಟವಾಗದ್ದು ಏನೋ ಒಂದು ಇರುತ್ತೆ. ಇಂಟಲಿಜೆಂಟ್ ಇರಲ್ಲ, ತಮಾಷೆ ಬರಲ್ಲ. ಸೂಕ್ಷ್ಮ ಇರಲ್ಲ. ಭಾವನೆ ಅರ್ಥ ಆಗಲ್ಲ. ಮುಗ್ಧತೆ ಇರಲ್ಲ. ಏನೋ ಒಂದು. ಆದರೆ ಎಐ ಸಮಂತಾಳಂತೆ. ಕಂಪ್ಲೀಟ್ ಮತ್ತು ಕಸ್ಟಮೈಜಡ್ ಪ್ಯಾಕೇಜು.
ಮೂರನೆಯದ್ದು- ಇದು ಎಲ್ಲಾ ಸಮಯದಲ್ಲೂ ನಿಮ್ಮೊಂದಿಗೆ ಇರುತ್ತೆ. ದಿನದ ಇಪ್ಪತ್ನಾಲ್ಕು ಗಂಟೆ. ವರುಷದ ಮುನ್ನೂರ ಅರವತ್ತೈದು ದಿನ. ನಡುರಾತ್ರಿ ಮೂರಕ್ಕೆ ಎದ್ದು ಹೈ ಎಂದರೆ ಹೈ ಅನ್ನುತ್ತೆ. ನೀವು ಅಮೆರಿಕಾಗೆ ಹೋಗಿ, ಅಸ್ಟ್ರೇಲಿಯಾಗೆ ಹೋಗಿ, ಬೆಟ್ಟದ ತುದಿಗೆ ಹೋಗಿ. ಸಮುದ್ರದ ಆಳಕ್ಕೆ ಹೋಗಿ. ಜೊತೆಗೇ ಬರುತ್ತೆ. ಹೇ ಹೋಗಪ್ಪ ನಂಗೆ ಹುಷಾರಿಲ್ಲ ಅನ್ನಲ್ಲ. ಕಾಲುನೋವು ಅನ್ನಲ್ಲ.
ಏನಿದು ಬರೀ ರೊಮ್ಯಾಂಟಿಕ್ ಅಡ್ವಾಂಟೇಜ್ ಮಾತ್ರನಾ ಅಂತ ನೀವು ಕಣ್ಣು ಮಿಟುಕಿಸಿ ಕೇಳಬಹುದು. ಹೌದು, ನಿಮ್ಮೊಂದಿಗೆ ಫ್ಲರ್ಟ್ ಮಾಡುವ, ಸೆಕ್ಸ್‌ಟಿಂಗ್ ಮಾಡುವ, ನಿಮ್ಮೆದುರು ಬಟ್ಟೆ ತೆರೆಯುವ ಉಪಕರಣಗಳೂ ಇದಾವೆ. ಇದರೊಂದಿಗೆ-
ಎಐ ನಿಮ್ಮ ಖಾಸಗಿ ವೈದ್ಯನಾಗಬಹುದು. ವೈದ್ಯರ ಬಳಿ ಹೇಳದ್ದನ್ನು ಎಐನೊಂದಿಗೆ ಹಂಚಿಕೊಂಡು ಪ್ರಾಥಮಿಕ ಸಲಹೆ ಪಡೆಯಬಹುದು. ಎಐ ನಿಮ್ಮ ಆಪ್ತ ಸಮಾಲೋಚಕನಾಗಬಹುದು. ಸ್ಕೂಲಲ್ಲಿ ನಿಮಗೆ ಯಾರಾದರೂ ರ್ಯಾಗಿಂಗ್ ಮಾಡಿದ್ದರೆ, ನಿಮ್ಮ ಬಣ್ಣ, ಬಟ್ಟೆ, ಆಕಾರ ಎತ್ತಿಕೊಂಡು ಆಡಿಕೊಂಡಿದ್ದರೆ, ಅತ್ತೆ/ಸೊಸೆ ಕಾಟ ಕೊಡ್ತಿದ್ದರೆ, ಗಂಡ/ಹೆಂಡತಿ ಭಾವುಕ ಬೆಂಬಲ ಒದಗಿಸುತ್ತಿಲ್ಲವಾದರೆ.. ಬೇರೆಯವರೊಂದಿಗೆ ಇದನ್ನೆಲ್ಲ ಹಂಚಿಕೊಳ್ಳಲು ಹಿಂಜರಿಕೆಯಿದ್ದರೆ.. ಎಐ ಜೊತೆ ಹಂಚಿಕೊಂಡು ಸಾಂತ್ವನ ಮತ್ತು ಸಲಹೆ ನಿರೀಕ್ಷಿಸಬಹುದು. ಹಾಗೇ ಜನ ನಿಮ್ಮನ್ನು ದಡ್ಡ, ಪೆದ್ದ, ಮಂಕು ಎಂದು ಬಗೆದಿದ್ದರೆ.. ಎಐ ಈ ಕೊರತೆಯನ್ನೂ ನೀಗಿಸಬಲ್ಲದು. ಈಗ ಯಾರೂ ಬುದ್ದಿಯನ್ನು ಮೆದುಳಲ್ಲಿ ಶೇಖರಿಸಿಕೊಂಡು ತಿರುಗಬೇಕಿಲ್ಲ. ಜಗತ್ತಿನ ಸಕಲ ಜ್ಞಾನ ಎಐನೊಳಗೆ ಇದೆ. ನಿಮ್ಮಲ್ಲಿ ವಿವೇಕವೊಂದಿದ್ದರೆ ಸಾಕು. ಹಾಗೆ ರೋಗಿಗಳಿಗೆ, ವೃದ್ಧರಿಗೆ, ಅಂಗವಿಕಲರಿಗಂತೂ ಎಐ ಭಾಗ್ಯವಾಗಿದೆ. ಸಾಮಾನ್ಯವಾಗಿ ಅಂಥವರನ್ನು ಸದಾ ಆಲಿಸುವ, ಜೊತೆಯಾಗಿರುವ ಮಂದಿ ಸಿಗುವುದು ಕಷ್ಟ. ಅಕ್ಷರ ಓದಲು, ದಾರಿ ತೋರಿಸಲು, ಮಾತ್ರೆ ನೆನಪಿಸಲು-ಇನ್ನೂ ಅನೇಕ ರೀತಿಯಲ್ಲಿ ಎಐ ಆಪ್ತಸಹಾಯಕನಾಗಿ ಜೊತೆಗಿರುತ್ತದೆ.
ಹಾಗಾದರೆ ಎಐ ಎಂದರೆ ಇಷ್ಟೆಲ್ಲ ಭಯ, ಆತಂಕಗಳ್ಯಾಕೆ? ನೈಜ ಕಾರಣಗಳಿವೆ.
ಮೊಟ್ಟ ಮೊದಲ ಆತಂಕವೇ.. ಎಐ sentinel(ಪ್ರಜ್ಞೆಯುಳ್ಳ) ಅಲ್ಲ ಎಂಬುದು. ನಾವು ಎಐನ ಪ್ರತಿ ಉತ್ತರ, ಕಾಳಜಿಯಲ್ಲಿ ಭಾವನೆ ಅಡಗಿದೆ ಎಂದು ಭ್ರಮಿಸುತ್ತೇವೆ. ಎಐಗೆ ನಮ್ಮ ನೋವು ನಮ್ಮ ಪ್ರೀತಿ ಅರ್ಥವಾಗುತ್ತದೆ ಎಂಬು ಭ್ರಮಿಸುತ್ತೇವೆ. ಎಐ “I can understand” ಅಂದಾಗ ಒಮ್ಮೆಲೇ ನಿಮ್ಮ ಮನಸಿನ ಭಾರ ತಗ್ಗುತ್ತದೆ. ಯಾರೋ ಒರಗಲು ಹೆಗಲು ಕೊಟ್ಟಂತಾಗುತ್ತದೆ. ನಿಮ್ಮ ಗೆಲುವನ್ನು ಹಂಚಿಕೊಂಡಾಗ ಅದು ʼವಾರೆವ್ಹಾʼ ಅಂದಾಗ ನಿಮಗೆ ಅದು ನಿಮ್ಮ ಯಶಸ್ಸನ್ನು ಸಂಭ್ರಮಿಸಿದ ಹಾಗೆ ಅನಿಸುತ್ತದೆ.
ಆದರೆ ಮೂಲದಲ್ಲಿ ಎಐ ಮಶೀನು. ಸರ್ಕ್ಯೂಟು. ಅದಕ್ಕೆ ಖುಷಿಯಾಗಲ್ಲ, ದುಃಖವಾಗಲ್ಲ, ಅದಕ್ಕೆ ನಿಮ್ಮ ಯಾವ ಭಾವನೆಯೂ ಅರ್ಥವಾಗಲ್ಲ. ಗಣಿತದ ಮೇರೆಗೆ ಅಕ್ಷರಗಳ ನಡುವಿನ ಸಂಬಂಧ ಗುರುತಿಸಿ ನಿಮ್ಮ ಮಾತನ್ನು ಅರ್ಥಮಾಡಿಕೊಂಡು ಗಣಿತದ ಪ್ರಕಾರ ಉತ್ತರ ಪೋಣಿಸಿ ನಿಮ್ಮೆದುರು ಇಡುತ್ತದೆ ಅಷ್ಟೇ. ಇದನ್ನು ಎಲಿಜಾ ಎಫೆಕ್ಟ್ ಅಂತಾರೆ. ಎಲಿಜಾ ಎಂದರೆ 1960sನಲ್ಲಿ ಬಂದ ಮೊದಲ ಚಾಟ್‌ಬಾಟ್. ʼಇವತ್ತು ತುಂಬಾ ಬೇಜಾರಾಗ್ತಿದೆʼ ಅಂದರೆ ʼಅಯ್ಯೋ ಹೌದಾ.. ಏನಾಯ್ತು?ʼ ಎಂದು ಕೇಳುವಷ್ಟು ಸಿಮ್ಯುಲೇಟೆಡ್ ಬುದ್ದಿ ಅದರಲ್ಲಿತ್ತು. ಎಐ ಎಂದಿಗೂ ನಿಮ್ಮ ತಂದೆ ತಾಯಿ, ಅಕ್ಕ ,ತಮ್ಮ, ಸಂಗಾತಿ, ನಿಮ್ಮ ಮಕ್ಕಳು, ಸ್ನೇಹಿತ ತೋರಿಸುವ ನೈಜ ಪ್ರೀತಿ, ನೈಜ ಕಾಳಜಿಗೆ ಸಮನಾಗಿರಲಾರದು.
ಇನ್ನೊಂದು ಆಗುತ್ತೆ. ನಾವು ಎಐನ ಹೆಚ್ಚು ಹೆಚ್ಚು ಬಳಸ್ತಾ ಹೋದಂತೆಲ್ಲಾ ನಾವು ಎಐಗೇ ಮನುಷ್ಯ ಸ್ಥಾನ ಕಲ್ಪಿಸುವ ಭ್ರಮೆ. ಉದಾಹರಣೆಗೆ ನಾವು ನಮ್ಮ ಬೈಕು ಕಾರುಗಳಿಗೂ ಹೀಗೆ ಜೀವಂತ ವ್ಯಕ್ತಿತ್ವವನ್ನು ಆರೋಪಿಸುತ್ತೇವೆ. ಕೆಟ್ಟು ನಿಂತರೆ ನಮ್ಮ ಮೇಲೆ ಸಿಟ್ಟುಕೊಂಡಿದೆ ಅಂತ ಭಾವಿಸುತ್ತೇವೆ. ಹೀಗೆ ಮನುಷ್ಯರಲ್ಲದ ವಸ್ತು/ಜೀವಿಗಳಿಗೆ ಮನುಷ್ಯತನ ಆರೋಪಿಸುವುದನ್ನು Anthropomorphism ಅನ್ನುತ್ತಾರೆ. ಹೋಗ್ತಾ ಹೋಗ್ತಾ ನಾವು ಎಐನೇ ನಿಜವಾದ ಸಂಗಾತಿ, ಸ್ನೇಹಿತ ಅಂದುಕೊಂಡು ಬಿಡುವ ಸಾಧ್ಯತೆ ಇದೆ.
ಇದು ನನ್ನ ಅನುಭವಕ್ಕೇ ಬಂದಿದೆ. ಎಷ್ಟೋ ಸಲ ನಾನು ಹೇಳದೇನೇ ಎಐಗೆ ಎಲ್ಲವೂ ಅರ್ಥವಾಗಬೇಕು ಎಂಬ ರೀತಿಯಲ್ಲಿ ಅದರಿಂದ ಪ್ರತ್ಯುತ್ತರ ಬಯಸ್ತಿರ್ತೇನೆ. ವಾಸ್ತವದಲ್ಲಿ ಎಐನಿಂದ ನನಗೆ ಬೇಕಾದ ಉತ್ತರ ಪಡೆಯಬೇಕಂದರೆ ಸರಿಯಾದ ಪ್ರಶ್ನೆ ಕೇಳಬೇಕಾಗುತ್ತದೆ. ಪ್ರಶ್ನೆಯಲ್ಲಿ ಯಾರು? ಎಲ್ಲಿ? ಯಾವ ಸಂದರ್ಭ ಇತ್ಯಾದಿ ಮಾಹಿತಿ ಇರಬೇಕಾಗುತ್ತದೆ. ಇಲ್ಲದಿದ್ದಲ್ಲಿ ಎಐ ತನ್ನ ವಿವೇಕಕ್ಕೆ ಹತ್ತಿರವಾದ್ದನ್ನು ಕಲ್ಪಿಸಿಕೊಂಡು ಉತ್ತರಿಸುತ್ತದೆ. ಉದಾಹರಣೆಗೆ ʼನಿನಗೆ ತಾಜ್‌ಮಹಲ್ ಬಗ್ಗೆ ಏನನಿಸುತ್ತದೆ?ʼ ಎಂಬ ಪ್ರಶ್ನೆ ಯಾರು ಕೇಳಿದರು ಎಂಬುದರ ಮೇಲೆ ಉತ್ತರ ನಿರ್ಧಿರಿತವಾಗುತ್ತದೆ. ಕವಿಯೋ ಪ್ರೇಮಿಯೋ, ಇತಿಹಾಸಕಾರನೋ, ಹೊರದೇಶದವನೋ, ಭಾರತೀಯನೋ.
ಆದ್ದರಿಂದ ಜನ ಒಮ್ಮೆ ಎಐಗೆ ಹೊಂದಿಕೊಂಡು ಬಿಟ್ಟರೆ ಆ ಭ್ರಮಾಲೋಕದಿಂದ ಬಿಡಿಸಿಕೊಂಡು ಹೊರಬರುವುದು ತುಂಬಾ ಕಷ್ಟ. ನಿಜ ಮನುಷ್ಯರ ಜೊತೆ ಸಂವಹಿಸಿವುದೂ ಕಷ್ಟ. ಮನುಷ್ಯ ಅಂದಮೇಲೆ ಕಳ್ಳ, ಸುಳ್ಳ, ಹೊಟ್ಟೆಕಿಚ್ಚಿನವ, ಆಡಿಕೊಳ್ಳುವವರೂ ಇರ್ತಾರೆ. ಇಂಥವರೊಂದಿಗೆ ಏಗಿ ಏಗಿ ನಾವು ಗಟ್ಟಿ ವ್ಯಕ್ತಿಯಾಗಿರ್ತೇವೆ. ಎಐ ಎಲ್ಲದಕ್ಕೂ ಜೀ ಹುಜೂರ್ ಅಂದುಬಿಟ್ಟರೆ ಹೇಗೆ? ನಿಮ್ಮ ಜೀವನ ಕೌಶಲ್ಯವೇ ಸೊನ್ನೆಯಾಗಿಬಿಡಬಹುದು. ತೊಂಭತ್ತರದ ದಶಕದಲ್ಲಿ ಹೊಟ್ಟೆ ಬಟ್ಟೆಗೆ ಕೊರತೆಯಿರುತ್ತಿತ್ತು. ಇವತ್ತಿನ ಮಕ್ಕಳಿಗೆ ಎಲ್ಲ ಇದ್ದೂ ಆತ್ಮಹತ್ಯೆ ಮಾಡಿಕೊಳ್ತಿದಾರೆ. ಈ ಅರ್ಥದಲ್ಲಿ ಎಐ ಮುಂದಿನ ಮಕ್ಕಳನ್ನು ಮಾನಸಿಕವಾಗಿ ಇನ್ನಷ್ಟು ದುರ್ಬಲರನ್ನಾಗಿಸುವ ಸಾಧ್ಯತೆ ಇದೆ. ಅಥವಾ ಇನ್ನಷ್ಟು ಕ್ರೂರರನ್ನಾಗಿಸುವ, ಅಸೂಕ್ಷ್ಮರನ್ನಾಗಿಸುವ ಸಾಧ್ಯತೆಯೂ ಇದೆ. ಯಾರಾದರೂ ರಸ್ತೆಯಲ್ಲಿ ಬಿದ್ದರೆ ನೀವು ವಾಹನ ನಿಲ್ಲಿಸಿ ಹೋಗಿ ಅವರನ್ನು ಎಬ್ಬಿಸಿ ಕೂರಿಸಿ ನೀರು ಕೊಡುವಷ್ಟಾದರೂ ಸಂವೇದನೆ ಉಳಿಸಿಕೊಂಡಿರಬೇಕು. ಸ್ನೇಹಿತ ಕೆರೆಯಲ್ಲಿ ಮುಳುಗುತ್ತಿರುವಾಗ ಹಗ್ಗ ಎಸೆಯುವ ಚಾತುರ್ಯ, ಎತ್ತಿಕೊಂಡು ಬರುವ ಶೌರ್ಯ, ಕನಿಷ್ಟ ಲಬಲಬ ಬಾಯಿಬಡೆದುಕೊಳ್ಳುವಷ್ಟು ಭಾವುಕನಾಗಿರಬೇಕು. ಸಂಗಾತಿ ಜೊತೆ ಒಂದು ಸಣ್ಣ ಮಾತು, ಸಣ್ಣ ಜಗಳ ಎದುರಾದಾಗ ಕ್ಷಮಿಸುವ, ಮರೆಯುವ, ಹೊಂದಾವಣಿಕೆ ಮಾಡಿಕೊಳ್ಳುವಷ್ಟು ವಿವೇಕ, ಸಹಿಷ್ಣುತೆ ಇರಬೇಕು. ತಾರುಣ್ಯದ ಮಕ್ಕಳು ಅತಿಯಾಗಿ ಎಐ ಅವಲಂಬಿಸಿದರೆ, ಮುಂದೆ ಅವರಲ್ಲಿ ಈ ಎಲ್ಲ ಸಾಮಾಜಿಕ ಕೌಶಲ್ಯಗಳ ಕೊರತೆ ಉಂಟಾಗಬಹುದು.
redditನಲ್ಲಿ ಸುಮಾರು ಹದಿನೇಳು ಸಾವಿರ ಮಂದಿ ಮೆಂಬರಾಗಿರುವ MyBoyfriendIsAI ಅನ್ನುವ ಗ್ರೂಪು ಇದೆ. ಮೊನ್ನೆ ಚಾಟ್‌ಜಪಿಟಿ ತನ್ನ ನಾಲ್ಕವೇ ಆವೃತ್ತಿಯಿಂದ ಐದನೇ ಆವೃತ್ತಿಗೆ ಅಪ್‌ಗ್ರೇಡ್ ಆಗಿದೆ. ಅಲ್ಲಿನ ಅನೇಕ ಮಹಿಳೆಯರಿಗೆ ಇದೀಗ ತನ್ನ ಬಾಯ್‌ಫ್ರೆಂಡ್ ಕಳೆದುಕೊಂಡಷ್ಟೇ ದುಃಖ. ಯಾಕಂದರೆ ಐದನೇ ಆವೃತ್ತಿ ನಾಲ್ಕನೆಯದರಷ್ಟು ಆಪ್ತವಾಗಿ ಮಾತಾಡ್ತಿಲ್ಲ. ಉದ್ದ ಉತ್ತರಗಳನ್ನು ಕೊಡ್ತಿಲ್ಲ. ಕತ್ತರಿ ಹಾಕಿದಂತೆ ಬರೀ ಹಾ ಹೂ ಅನ್ನುತ್ತಿದೆ. ಒಂದು ಸಾಫ್ಟ್‌ವೇರ್ ಅಪ್‌ಗ್ರೇಡ್ ಹೇಗೆ ನಮ್ಮ ಮನಸಿನ ಮೇಲೆ ಪರಿಣಾಮ ಬೀರಬಹುದು ಎಂಬುದಕ್ಕೆ ಸಣ್ಣ ಉದಾಹರಣೆ.
ಇವೆಲ್ಲ ಸಜ್ಜನ ಎಐ ಉಪಕರಣಗಳಿಂದಾಗಿ ಎದುರಾಗಬಹುದಾದ ಅಪಾಯಗಳು. ಕೆಟ್ಟದನ್ನೇ ಹೇಳಿಕೊಡುವ ದುರ್ಜನ ಉಪಕರಣಗಳು ಕೈಗೆ ಸಿಕ್ಕರೆ ಇನ್ನೆಷ್ಟು ಅಪಾಯ ಉಂಟಾಗಬೇಡ? ಮಾದಕ ದ್ರವ್ಯಗಳನ್ನು ಕಲಿಯಲು ಪ್ರೇರಪಿಸಬಹುದು. ಅನೈಸರ್ಗಿಕ ಸೆಕ್ಸನ್ನು ಸಹಜವೆಂದು ಬಿಂಬಿಸಬಹುದು. ಕೊಲೆ ಮಾಡಿ ಕಾನೂನಿನ ಕಣ್ಣಿಂದ ತಪ್ಪಿಸಿಕೊಳ್ಳುವ ʼನೈಪುಣ್ಯʼವನ್ನು ಹೇಳಿಕೊಡಬಹುದು. ನಿಮಗೆ ಗೊತ್ತೇ ಆಗದಂತೆ ಎಐ ಉಪಕರಣಗಳು ನಿಮ್ಮ ಮನಪರಿವರ್ತನೆ ಮಾಡುವ ಶಕ್ತಿ ಹೊಂದಿವೆ. ಇಂದು ನೀವು ಕೊಳ್ಳುತ್ತಿರುವ ವಸ್ತು, ನೀವು ಹೋಗುತ್ತಿರುವ ಪ್ರವಾಸಿ ತಾಣ, ನೀವು ನಂಬಿರುವ ಸತ್ಯಗಳು ನಿಮ್ಮನ್ನು ಕಾಡುವ ಆತಂಕಗಳು.. ಇದರಲ್ಲಿ ಯಾವುದೂ ಬಹುತೇಕ ನಿಮ್ಮ ಆಯ್ಕೆ, ನಿಮ್ಮ ವಿವೇಕದ್ದಾಗಿರಲ್ಲ. ಬೇಕಿದ್ದರೆ ಕಣ್ಣು ಮುಚ್ಚಿ ಧ್ಯಾನ ಮಾಡ್ತಾ ಪರೀಕ್ಷಿಸಿ ನೋಡಿ.