ಎಐ ಬಬಲ್ ನಿಜವಾ?

Blog post description.

9/30/20251 min read

ಒಂದೆರಡು ವಾರಗಳ ಹಿಂದೆ ಓಪನ್‌ಎಐ ಮುಖ್ಯಸ್ಥ ಸ್ಯಾಮ್‌ ಆಲ್ಟ್‌ಮನ್‌ ಒಂದು ಸಂದರ್ಶನದಲ್ಲಿ ʼಎಐ ಬಬಲ್‌ʼ ಎಂಬ ಪದ ಬಳಸಿದ್ದರು. ಇಲ್ಲಿ ಬಬಲ್‌ ಅಂದರೆ.. ನೀರ ಮೇಲಿನ ಗುಳ್ಳೆ ಎಂದು ಅರ್ಥ. ಇಪ್ಪತ್ತನೇ ಶತಮಾನದ ಅಂತ್ಯದಲ್ಲಿ ಈ ಪದದ ಮೊದಲ ಬಳಕೆಯಾಗಿತ್ತು. ಆಗ ಜರುಗಿದ್ದನ್ನು ಪಂಡಿತರು ʼಇಂಟರ್‌ನೆಟ್‌ ಬಬಲ್‌ʼ ಅಥವಾ ಡಾಟ್‌-ಕಾಮ್‌ ಬಬಲ್ ಎಂದು ಕರೆದಿದ್ದರು. ಅದು ಇಂಟರ್‌ನೆಟ್‌(ಅಂತರ್ಜಾಲ) ಜಗತ್ತಿಗೆ ಪರಿಚಯಗೊಳ್ಳುತ್ತಿದ್ದ ದಿನಗಳು. ಎಲ್ಲೆಲ್ಲೂ ವೆಬ್‌ಸೈಟ್‌ಗಳು. ಎಲ್ಲದಕ್ಕೂ ವೆಬ್‌ಸೈಟ್‌ಗಳು.. ಮಾರುಕಟ್ಟೆ ಸಂಪೂರ್ಣ ಬದಲಾಗಲಿದೆ, ಜಗತ್ತು ಹೊಸ ಲೋಕಕ್ಕೆ ತೆರೆದುಕೊಳ್ಳಲಿದೆ ಎಂಬ ಆತಂಕ, ಆಶಾಭಾವನೆ ಎರಡೂ. ತತ್ಪರಿಣಾಮ ಆ ವಲಯದಲ್ಲಿ ಹೇರಳವಾದ ಹಣ ಹೂಡಿಕೆ. ಆ ದಿನಗಳಲ್ಲಿ ನೀವೊಂದು ವೆಬ್‌ಸೈಟ್‌ ತೆರೆದುಕೊಂಡಿದ್ದರೆ ಸಾಕು.. ನಿಮ್ಮದೂ ಒಂದು ʼಸ್ಟಾರ್ಟಪ್‌ʼ ಇದ್ದ ಹಾಗೆ. ನೀವೂ ಒಬ್ಬ ಸಿಯಿವೋ.. ನಿಮ್ಮ ಕಂಪನಿಯ ಮೌಲ್ಯ ಲಕ್ಷ ಲಕ್ಷ ಡಾಲರು.

ಆದರೆ ಆಗ ಇಂಟರ್‌ನೆಟ್‌ ಅಂದುಕೊಂಡ ವೇಗದಲ್ಲಿ ಜಗತ್ತನ್ನು ಬದಲಾಯಿಸಲಿಲ್ಲ. ಹೀಗೆ ಹೇಳುವುದೂ ತಪ್ಪು. ಅದು ತನ್ನ ವೇಗದಲ್ಲಿ ತಾನು ಕಾರ್ಯನಿರ್ವಹಿಸುತ್ತಿತ್ತು. ತಂತ್ರಜ್ಞಾನೇತರ ಜಗತ್ತು ತುಸು ಆತುರಕ್ಕೆ ಬಿದ್ದು ಇದ್ದಬಿದ್ದ ದುಡ್ಡನ್ನೆಲ್ಲ ಅದರಲ್ಲಿ ಸುರಿದಿತ್ತಷ್ಟೆ. ʼರಿಟರ್ನ್ಸ್‌ʼ ಅಥವಾ ತಕ್ಕಮಟ್ಟಿಗಿನ ಲಾಭವಿರದೇ ಕೈಸುಟ್ಟಿಕೊಂಡಿತ್ತು. ನ್ಯಾಸ್‌ಡಾಕ್‌ ಶೇಖಡಾ ೭೮%ರಷ್ಟು ಮೌಲ್ಯ ಕಳೆದುಕೊಂಡಿತ್ತು. ಸ್ಟಾರ್ಟಪ್‌ಗಳು ದಿವಾಳಿಯೆದ್ದಿದ್ದವು. ಸಾವಿರಾರು ಜನ ಉದ್ಯೋಗ ಕಳೆದುಕೊಂಡರು. ದೊಡ್ಡ ತಿಮಿಂಗಿಲಗಳು.. ಅಥವಾ ಸಣ್ಣ ಸಣ್ಣ ಮೀನುಗಳು ಒಟ್ಟುಗೂಡಿ ದೊಡ್ಡ ತಿಮಿಂಗಲವಾಗಿ.. ಅಮೆಜಾನ್‌, ಇ-ಬೇ, ಗೂಗಲ್‌ ಮುಂತಾದವು ಉಳಿದಕೊಂಡವು.

FOMO(fear of missing out) ಭರದಲ್ಲಿ ಇಷ್ಟೆಲ್ಲ ಜರುಗಿತ್ತು.

೨೦೦೮ರಲ್ಲಿ ಮತ್ತೆ ಇದೇ ಮರುಕಳಿಸಿತು. ಈ ಸಲ ಅದನ್ನು ಹೌಸಿಂಗ್‌ ಬಬಲ್‌ ಎಂದು ಕರೆದರು. ಅಮೆರಿಕಾದಲ್ಲಿ ಮನೆ ಕಟ್ಟಲು ಎಗ್ಗಾಮುಗ್ಗಾ ಸಾಲ ಕೊಟ್ಟರು. ಕಟ್ಟಿದ ಮನೆಗಳ ಬೆಲೆ ಕುಸಿಯಿತು. ಸಾಲ ತಗೊಂಡವರು ತೀರಿಸದಾದರು. ಸಾಲ ಕೊಟ್ಟ ಬ್ಯಾಂಕುಗಳು ದಿವಾಳಿಯೆದ್ದವು. ಈ ಸುನಾಮಿಯ ಪರಿಣಾಮ ಜಗತ್ತಿನಾದ್ಯಂತ ಹಬ್ಬಿತ್ತು.

ಈಗ ಎಐ. ಸ್ಯಾಮ್‌ ಈಗಿನ ಎಐ-ಬಬಲ್‌ ಅನ್ನು ಡಾಟ್‌-ಕಾಮ್‌ ಬಬಲ್‌ಗೆ ಹೋಲಿಸುತ್ತಿದ್ದಾರೆ. ಮೆಟಾ(ಫೇಸ್‌ಬುಕ್)ನ ಮುಖ್ಯಸ್ಥ ಮಾರ್ಕ್‌ ಝುಕರ್‌ಬರ್ಗ್‌ ಇದೇ ಮಾತನ್ನು ಅನುಮೋದಿಸುತ್ತಿದ್ದಾರೆ. ಹಾಗಾದರೆ ಇದು ನಿಜವೇ? ನಾವು ಮತ್ತೊಂದು ಬಬಲ್‌ನತ್ತ ದಾಪುಗಾಲು ಹಾಕುತ್ತಿದ್ದೇವೆಯೇ?

ಇಲ್ಲಿ ಮೂರು ಬಗೆಯ ನೀರಿನ ಗುಳ್ಳೆಗಳ ಬಗ್ಗೆ ಚರ್ಚಿಸಲಾಗುತ್ತಿದೆ.

ಆರ್ಥಿಕ ಗುಳ್ಳೆ: ಹೂಡಿಕೆದಾರರು ಲಾಭದ ಅಂದಾಜು ಇಲ್ಲದೇ ಸಿಕ್ಕಾಪಟ್ಟ ಹಣ ಹೂಡುತ್ತಿದ್ದಾರಾ ಎಂಬ ಆತಂಕ.

ಮೂಲಸೌಕರ್ಯದ ಗುಳ್ಳೆ: ಸಿಕ್ಕಾಪಟ್ಟೆ ಡೇಟಾಸೆಂಟರ್‌ಗಳು, ಜಿಪಿಯುಗಳು, ವಿದ್ಯುತ್‌ ಶಕ್ತಿ ಮುಂತಾದುವನ್ನು ಎಐಗೆಂದು ಕೂಡಿಡಲಾಗುತ್ತಿದೆ. ಇದು ನಿಜಕ್ಕೂ ಪೂರ್ಣಮಟ್ಟದಲ್ಲಿ ಬಳಕೆಯಾಗುತ್ತದೆಯೇ ಎಂಬ ಆತಂಕ.

ಉತ್ಪ್ರೇಕ್ಷೆಯ ಗುಳ್ಳೆ: ನಿಜಾಂಶ ಗೊತ್ತಿಲ್ಲದೇ ಎಐ ಅದು ಮಾಡುತ್ತೆ ಇದು ಮಾಡುತ್ತೆ ಅನ್ನುವಂತಹ ಭ್ರಮೆ ಸೃಷ್ಟಿಸುತ್ತಿದ್ದೇವಾ ಎನ್ನುವ ಆತಂಕ.

ಯುಎಸ್‌ನ ಎಮ್‌ಐಟಿ ವಿಶ್ವವಿದ್ಯಾಲಯ ಮಾಹಿತಿ ಕಲೆಹಾಕಿರುವ ಪ್ರಕಾರ ಈ ತನಕ ಎಐನಲ್ಲಿ ಹೂಡಿರುವ ೯೫%ರಷ್ಟು ಹಣ/deploymentಗಳು ಫಲಫ್ರದವಾಗಿಲ್ಲ. ಅರ್ಥಾತ್‌ ಮಣ್ಣಲ್ಲಿ ಊಣಿದ ಬೀಜ ಇನ್ನೂ ಹಣ್ಣು ಬಿಡುವಂತಾಗಿಲ್ಲ. ಕೆಲವು ಕಡೆ ಎಐ ತಾನು ಕಲಿತದ್ದನ್ನು ನೆನಪು ಇಟ್ಟುಕೊಳ್ಳುತ್ತಿಲ್ಲ ಎಂಬ ದೂರು. ಕೆಲವು ಕಡೆ ಎಐ ʼಮ್ಯಾಜಿಕ್‌ʼ ಹೊರತಾಗಿ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ ಎಂಬ ದೂರು. ಅನೇಕ ಕಡೆ ತರಬೇತಿಗೆ ಅಗತ್ಯವಿರುವ ಮಾಹಿತಿ ಕೊರತೆಯ, ಮಾಹಿತಿಯ ಗುಣಮಟ್ಟದ ಕೊರತೆಯ ದೂರು. ಮುಖ್ಯವಾಗಿ ಕೌಶಲ್ಯ ಕೊರತೆಯ ದೂರು. ಎಐ ಅನ್ನು ಅಳವಡಿಸಿಕೊಳ್ಳಲು ಎಐ ಗೊತ್ತಿರುವ ಎಂಜಿನೀರ್‌ಗಳು ಬೇಕು. ಆ ಬಗೆಯ ಎಂಜಿನೀರುಗಳು ಇನ್ನೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಅನೇಕ ಪೋಷಕರು ತಮ್ಮ ಮಕ್ಕಳನ್ನು ಎಂಜಿನೀರಿಂಗ್‌ಗೆ ಸೇರಿಸುವಾಗ ಯಾವ ಬ್ರಾಂಚ್‌ ಉತ್ತಮವೆಂದು ನನ್ನನ್ನು ಕೇಳಿದಾಗ ಇದೇ ಉತ್ತರವನ್ನು ಕೊಟ್ಟಿದ್ದೇನೆ. ನಮ್ಮಲ್ಲಿ ಅಂತಹ ಎಂಜಿನೀರ್‌ಗಳೇ ಇಲ್ಲ ಇನ್ನು ಶಿಕ್ಷಕರು ಎಲ್ಲಿಂದ ಬರ್ತಾರೆ? ಕಾಲೇಜುಗಳು ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡಲು ಆಯಾ ಬ್ರಾಂಚ್‌ಗಳನ್ನು ತೆರೆದುಕೊಂಡಿರುವುದು ನಿಜ. ಆದರೆ ಪಾಠ ಮಾಡಲು ತಕ್ಕನಾದ ಶಿಕ್ಷಕರಿದ್ದಾರಾ ಅನ್ನುವುದು ಅನುಮಾನ.

ಹಾಗಾದರೆ ಇಡೀ ಎಐ ಅನ್ನೋದೇ ಬೋಗಸ್ಸಾ? ಭ್ರಮೆಯಾ?

ನಾವು ತೀರಾ ಅಷ್ಟು ನಿರಾಶರಾಗಬೇಕಿಲ್ಲ. ದಿಗ್ಭ್ರಾಂತರಾಗಬೇಕಿಲ್ಲ. ಇದಕ್ಕೆ ಬೇರೆಲ್ಲೂ ಹೋಗಬೇಕಿಲ್ಲ ನಾವು ಹೋಲಿಸುತ್ತಿರುವ ಇಂಟರ್‌ನೆಟ್‌ ಬಬಲ್‌ ಅನ್ನೇ ಉದಾಹರಣೆಗೆ ತೆಗೆದುಕೊಂಡರೆ ಸಾಕು. ಇಂಟರ್‌ನೆಟ್‌ ಬಂದು ಸುಮಾರು ಮೂವತ್ತು ವರುಷಗಳಾಗಿವೆ. ಇವತ್ತಿಗೆ ಜಗತ್ತು ಸಂಪೂರ್ಣ ಇಂಟರ್‌ನೆಟ್‌ಮಯವಾಗಿದೆ. ನಮಗೀಗ ಎಳನೀರು ಬೇಕೆಂದರೂ ಹದಿನೈದು ನಿಮಿಷದಲ್ಲಿ ಐದು ರುಪಾಯಿ ಕಡಿಮೆ ವೆಚ್ಚದಲ್ಲಿ ಮನೆ ಬಾಗಿಲಿಗೆ ತಂದುಕೊಡುತ್ತಾರೆ. ಡಾಕ್ಟರು ಬೇಕಂದರೆ ವಿಡಿಯೋ ಕಾಲ್‌ನಲ್ಲಿ ಸಿಗುತ್ತಾರೆ. ಆದರೇ ಈ ತರಹದ ಉದ್ಯಮಕ್ಕೆ ಇಪ್ಪತ್ತು ವರ್ಷಗಳ ಹಿಂದೆಯೇ ಮುಗಿಬಿದ್ದು ಹಣ ಹೂಡಿದರೆ ಸಮಸ್ಯೆ ಯಾರದ್ದು ಅನ್ನಬೇಕು? ತಂತ್ರಜ್ಞಾನದಲ್ಲಿ ಒಂದು ಪದ ಇದೆ. ಸ್ಯಾಚುರೇಶನ್‌ ಎಂದು. ಎಲ್ಲವೂ ಈ ಸ್ಯಾಚುರೇಶನ್‌ ಮಟ್ಟಕ್ಕೆ ಬಂದಿಳಿದಾಗ ನೈಜ ಉತ್ಪಾದನೆ, ನೈಜ ಉಪಯೋಗ ಹೊರಬರಲು ಆರಂಭವಾಗುತ್ತದೆ. ಇದನ್ನು market correction ಕೂಡ ಅನ್ನುತ್ತಾರೆ. ಆನೆ ತನ್ನ ಪಾಡಿಗೆ ತಾನು ತನ್ನ ವೇಗದಲ್ಲಿ ತಾನು ನಡೆಯುತ್ತಿರುತ್ತದೆ. ಆನೆ ಹಂಗಂಗೆ ಹಿಂಗಂತೆ ಅನ್ನುವ ಊಹಾಪೋಹಗಳಿಗೆ ತೆರೆಬೀಳಬೇಕಿದೆ. ಡಾಟ್‌ಕಾಮ್‌ ಬಬಲ್‌ನಿಂದ ಕೆಲವು ಪಾಠಗಳಿವೆ. ಒಂದು- ಮುಂದಾಲೋಚನೆ, ಪೂರ್ವಸಂಶೋಧನೆ ಇಲ್ಲದೇ ಎಐ ಸ್ಟಾರ್ಟಪ್‌ ಎಂದು ಹೋದರೆ ಕೈಸುಟ್ಟುಕೊಳ್ಳುವುದು ನಿಶ್ಚಿತ. ಎರಡು- ಇಲ್ಲಿ ಈಗಾಗಲೇ ದೊಡ್ಡ ತಿಮಿಂಗಲಗಳು ಅಂಡಡಿ ಸಾಕಷ್ಟು ಹಣ ಇಟ್ಟುಕೊಂಡು ಕೂತಿವೆ. ಅದರಲ್ಲಿ ಎರಡು ಕಂತೆ ತೆಗೆದು ಎಐ ಕಡೆ ಎಸೆದರೆ ಅವರಿಗೆ ಏನೂ ನಷ್ಟವಿಲ್ಲ. ಮಾರ್ಕ್‌ ಅದನ್ನೇ ಹೇಳುತ್ತಾರೆ. ನಷ್ಟದ ಭಯದಿಂದ ಹಿಂದೆ ಕೂರುವ ಬದಲು ಇನ್ನೂರು ಬಿಲಿಯನ್‌ ಎಐಗಾಗಿ ಕರಗಿಸಿದರೆ ತಪ್ಪೇನಿಲ್ಲವೆಂದು. ಮೂರನೆಯದಾಗಿ.. ದೊಡ್ಡ ಆಟಗಾರರು ಮಾರುಕಟ್ಟೆಯಲ್ಲಿ ತಮ್ಮ ಹಿಡಿತ ಇಟ್ಟುಕೊಳ್ಳಲು ತಮ್ಮ ಸಾರ್ವಭೌಮತ್ವ ಕಾಪಾಡಿಕೊಳ್ಳಲು ಸಣ್ಣಪುಟ್ಟ ಮೀನುಗಳನ್ನು ಹೆದರಿಸುತ್ತಲೂ ಇರಬಹುದಲ್ಲವೇ? ಪ್ರತಿ ಪ್ರಾಡಕ್ಟು POC(proof of concept) ನಿಂದ MVP(minimum viable product) ಆಗಿ ಆನಂತರ ಕಡೆಗೆ ಪೂರ್ಣಪ್ರಮಾಣದಲ್ಲಿ ಲಭ್ಯವಾಗುತ್ತದೆ. ಐಟಿ ಜಗತ್ತಿನಲ್ಲಿ ಈ ಸೈಕಲ್ಲಿಗೆ ಕನಿಷ್ಟ ಎರಡು ಮೂರು ವರುಷಗಳು ಬೇಕಾಗುತ್ತದೆ. ಇಷ್ಟು ಮಾತ್ರ ನಿಜ.. ಎಐ ಎಲ್ಲೆಲ್ಲಿ ಸೂಕ್ತವಾಗಿ ಕೂರುತ್ತೋ ಅಲ್ಲೆಲ್ಲಾ ಈಗಾಗಲೇ ವಸ್ತುಸ್ಥಿತಿಯನ್ನು ಬದಲಾಯಿಸಿಬಿಟ್ಟಿದೆ.