ಎಐ ಕೂಡ ಭಾಳಾ ಒಳ್ಳೇ ಮಿಸ್ಸು!
Blog post description.
8/19/20251 min read


ಎಐ ನಮ್ಮ ಶಿಕ್ಷಣಕ್ಕೆ ಮಾರಕ, ಅದು ವಿದ್ಯಾರ್ಥಿಗಳನ್ನು ಸೋಮಾರಿ ಮಾಡ್ತಿದೆ, ನಕಲು ಮಾಡೋಕೆ ಕಲಿಸುತ್ತೆ ಎಂಬುದು ಟೀಚರ್‌ಗಳ, ಪೋಷಕರು ಆತಂಕ, ಆರೋಪ. ಈ ಮಾತುಗಳಲ್ಲಿ ಸ್ವಲ್ಪ ನಿಜಾಂಶ ಇದೆ. ಆದ್ರೆ ಎಐನ ಕೆಟ್ಟದಾಗಿ ಬಳಸೋ ಬದಲು ಸರಿಯಾಗಿ ಬಳಸಿದ್ರೆ, ಅದು ನಮಗೊಬ್ಬ ತಕ್ಕನಾದ ಪರ್ಸನಲ್ ಟ್ಯೂಟರ್ ಆಗಿ ಮಾರ್ಪಡಬಹುದು.
ಉದಾಹರಣೆಗೆ ನಿಮಗೆ ಟೀಚರ್ ಒಂದು ಪ್ರಬಂಧ ಬರೆಯೋಕೆ ಕೊಟ್ಟಿದಾರೆ ಅಂದುಕೊಳ್ಳಿ. ನೇರವಾಗಿ ಎಐ ಗೆ ಹೋಗಿ "ಪ್ರಬಂಧ ಬರೆದು ಕೊಡು" ಅಂತ ಹೇಳಿ, ಬಂದಿದ್ದನ್ನ ಹಾಗೆಯೇ ಕಾಪಿ ಮಾಡೋದು ಆಮ್ ಜಿಂದಗಿ. ಆದ್ರೆ, ಅದನ್ನೇ "ಈ ವಿಷಯದ ಬಗ್ಗೆ ಬೇರೆ ಬೇರೆ ಆಯಾಮಗಳಿಂದ ಮಾಹಿತಿ ಕೊಡು" ಅಂತ ಕೇಳಿ, ಬಂದಿದ್ದನ್ನ ಓದಿ ಅರ್ಥ ಮಾಡಿಕೊಂಡು ನಿಮ್ಮ ಸ್ವಂತ ಭಾಷೆಯಲ್ಲಿ ಬರೆಯೋದು ಮೆಂಟೋಸ್ ಜಿಂದಗಿ.
ಅಷ್ಟೇ ಅಲ್ಲ, ನೀವು ಬರೆದ ಪ್ರಬಂಧದಲ್ಲಿ ಏನಾದ್ರೂ ತಪ್ಪು ಇದ್ಯಾ ಅಂತ ಎಐಗೆ ಕೇಳಿ, "ತಪ್ಪನ್ನ ಗುರುತಿಸು ಮತ್ತು ಸರಿಪಡಿಸಲು ಸಲಹೆ ಕೊಡು" ಅಂತ ಕೆಳಿ. ಆಗ ನೀವೇನು ತಪ್ಪು ಮಾಡಿದ್ರಿ ಅಂತ ಗೊತ್ತಾಗುತ್ತೆ. ಇಷ್ಟು ತಾಳ್ಮೆಯ ಟೀಚರ್ ನಿಮಗೆ ಎಲ್ಲೂ ಸಿಗಲ್ಲ!
ಇದೇ ರೀತಿ ಹೋಮ್‌ವರ್ಕ್ ಕೂಡ. ಟೀಚರ್ ಪಾಠ ಮಾಡಿದ್ರು, ಪ್ರಶ್ನೆ ಅರ್ಥ ಆಗಿಲ್ಲ. ಟೀಚರ್‌ನ್ನ ಕೇಳೋಕೆ ಭಯ. ಕೇಳಿದರೆ "ನಿದ್ದೆ ಹೊಡಿತಿದ್ಯಾ? ಪಾಠ ಕೇಳಿಲ್ವಾ?" ಅಂತ ಬೈತಾರೆ. ತಲೆ ಕೆಡಿಸಿಕೊಳ್ಳಬೇಡಿ. ನಿರ್ಭೀತಿಯಿಂದ ಎಐನ ಕೇಳಿ. ಅದು ಬಯ್ಯಲ್ಲ, ಹೊಡೆಯಲ್ಲ, ಸೇಡಿಟ್ಟುಕೊಳ್ಳಲ್ಲ. ಬದಲಾಗಿ ವಿಷಸಯವನ್ನ ಸರಳವಾಗಿ, ಉದಾಹರಣೆ ಸಮೇತ, ಬೇಕಿದ್ರೆ ಚಿತ್ರಗಳ ಮೂಲಕನೂ ವಿವರಿಸುತ್ತೆ. ಆರೋಗ್ಯ ಸರಿ ಇಲ್ಲದೆ ಕ್ಲಾಸ್‌ಗೆ ಹೋಗೋಕೆ ಆಗದೆ ಇದ್ರೆ, ಸ್ನೇಹಿತನಿಗೆ ಪಾಠ ರೆಕಾರ್ಡ್ ಮಾಡ್ಕೊಂಡು ಬರೋಕೆ ಹೇಳಿ. ಅದನ್ನ Otter.ai ನಂತಹ ಟೂಲ್ಸ್‌ಗೆ ಕೊಟ್ಟರೆ, ಅದು ಪಠ್ಯ ರೂಪಕ್ಕೆ ಪರಿವರ್ತಿಸಿಕೊಡುತ್ತೆ. ಕ್ಲಾಸ್ ಮಿಸ್ ಮಾಡ್ಕೊಂಡೆ ಅಂತ ಗೋಳಾಡುವ ಅವಶ್ಯಕತೆಯಿಲ್ಲ.
ಪರೀಕ್ಷೆ ಹತ್ತಿರ ಬರ್ತಿದೆ, ಸಿಲೆಬಸ್ ನೋಡಿದ್ರೆ ತಲೆ ಸುತ್ತು ಬರುತ್ತೆ. ಇಷ್ಟಿಷ್ಟು ದಪ್ಪ ಪುಸ್ತಕಗಳನ್ನ ಓದೋಕೆ ಟೈಮ್ ಇರಲ್ಲ. ಆಗ ಅಧ್ಯಾಯದ ಫೋಟೊ ತೆಗೆದು ಎಐಗೆ ಅಪ್‌ಲೋಡ್ ಮಾಡಿ "ಸಾರಾಂಶ ಕೊಡು" ಅಂತ ಕೇಳಿ. ಮುಂಚೆ ಎರಡು ಗಂಟೆ ತಗೊಳ್ತಿದ್ದ ಅಧ್ಯಾಯ ಈಗ ಕೇವಲ ಹತ್ತು ನಿಮಿಷದಲ್ಲಿ ಮುಗಿಯುತ್ತೆ. ಹಿಂದೆ ನಾವು ಮನೋರಮಾ ಎನ್‌ಸೈಕ್ಲೋಪೀಡಿಯಾಗಳನ್ನ ಬಳಸ್ತಿದ್ವಿ. ಆನಂತರ ಇಂಟರ್ನೆಟ್, ವಿಕಿಪೀಡಿಯಾ ಬಂತು. ಪುಸ್ತಕಗಳು ಅಪ್ರಸ್ತುತ ಆದವು. ಈಗ ವಿಕಿಪಿಡಿಯಾ ಸಹ ಅಪ್ರಸ್ತುತ ಆಗ್ತಿದೆ. ಈಗ ನಿಮ್ಮ ಮನಸ್ಸಲ್ಲಿ ಏನೇ ಪ್ರಶ್ನೆ ಬಂದರೂ, ಭೂಗೋಳ, ಇತಿಹಾಸ, ವಿಜ್ಞಾನ, ಗಣಿತ ಯಾವುದಾದರೂ ಆಗಿರಲಿ, ಎಐ ಠಕ್ಕಂತ ಉತ್ತರ ಕೊಡುತ್ತೆ. ಅದೂ ಅತ್ಯಂತ ಸರಳವಾಗಿ.
ಸ್ಕೂಲ್‌ನಲ್ಲಿ ಸೈನ್ಸ್ ಮಾಡೆಲ್ ಮಾಡೋಕೆ ಹೇಳಿದಾಗ, ವಿಶಿಷ್ಟ, ವಿಭಿನ್ನ ಐಡಿಯಾಗಳಿಗಾಗಿ ಎಐನ ಕೇಳಿ. ಇಂದಿಗೂ ಅನೇಕರು 90ರ ದಶಕದ ಮಾಡೆಲ್‌ಗಳನ್ನೇ ಮಾಡ್ತಿದಾರೆ. ಜೀವಶಾಸ್ತ್ರದಲ್ಲಿ 3D ಮಾಡೆಲ್‌ಗಳನ್ನು ಎಐನಲ್ಲಿ ನೋಡಿ. ಯಾವ ಅಂಗ ಎಲ್ಲಿದೆ ಯಾವುದರ ಮಗ್ಗುಲಲ್ಲಿದೆ ಎಲ್ಲವೂ ಕಣ್ಣಿಗೆ ಕಟ್ಟಿದಂತೆ ತೋರಿಸುತ್ತದೆ. ಅಂತೆಯೇ ಅಂತರಿಕ್ಷ. ಯಾವುದು ಯಾವುದರ ಸುತ್ತ ತಿರುಗುತ್ತೆ, ಹಗಲು ಇರುಳು ಹೇಗಾಗುತ್ತೆ, ಮಳೆ, ಛಳಿ ಋತುಮಾನ ಹೇಗೆ ಬದಲಾಗುತ್ತೆ, ಈ ಎಲ್ಲದರ ಸರಳವಾದ ಸಿಮ್ಯುಲೇಶನ್ ಎಐ ಮೂಲಕ ಲಭ್ಯವಿದೆ. ಕಾಲೇಜಿಗೆ ಲಕ್ಷಾಂತರ ಹಣ ಕೊಟ್ಟರೂ ಲೆಕ್ಚರರ್ ಬರೋದು ಕಷ್ಟ, ಬಂದರೂ ಸರಿಯಾಗಿ ಪಾಠ ಮಾಡದಿರಬಹುದು. ಅಂತಹ ಸಮಯದಲ್ಲಿ ಎಐ ನಿಮ್ಮ ಪರ್ಸನಲ್ ಟ್ಯೂಟರ್ ಆಗಬಹುದು. ಅದು ನಿಮ್ಮ ಕಲಿಕಾ ಮಟ್ಟ ಗುರುತಿಸಿ ಅದಕ್ಕೆ ತಕ್ಕಂತೆ ಕಲಿಕಾ ಪ್ಲಾನ್ ಮಾಡಿಕೊಡುತ್ತೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗ ನೀವೇ ಕೂತು ನೋಟ್ಸ್ ಬರೆಯಬೇಕಿಲ್ಲ. AI ನಿಮಗಾಗಿ ಫ್ಲ್ಯಾಶ್‌ಕಾರ್ಡ್‌ಗಳನ್ನು ಮಾಡಿ ಕೊಡುತ್ತೆ. ಫ್ಲಾಶ್ ಕಾರ್ಡ್ UPSC, NEET, JEE ನಂತಹ ಪರೀಕ್ಷೆಗಳಿಗೆ ತುಂಬಾನೇ ಉಪಯುಕ್ತ. ನೀವು ಯಾವ ವಿಷಯದಲ್ಲಿ ಕಷ್ಟಪಡ್ತೀರಾ ಅಂತ ಗುರುತಿಸಿ ಅದಕ್ಕೆ ಹೆಚ್ಚಿನ ಸಮಯ ಕೊಡಲು AI ಯೋಜನೆ ಮಾಡಿಕೊಡುತ್ತೆ. ಅಣಕು ಪರೀಕ್ಷೆಗಳನ್ನ ಮಾಡಿ, ನೀವು ಎಲ್ಲಿ ಎಡವಿದ್ದೀರ ಎಲ್ಲಿ ವೀಕ್ ಇದ್ದೀರ ಅಂತ ವಿವರಿಸುತ್ತೆ.
ಹಳ್ಳಿಯ ಮಕ್ಕಳಿಗೆ ಇಂಗ್ಲಿಷ್ ಕಷ್ಟ ತಾನೇ? ಅಲ್ಲಿ ಹೇಳಿಕೊಡಲು ಯಾರೂ ಸಿಗಲ್ಲ, ಪ್ರಾಕ್ಟೀಸ್ ಮಾಡಲು ಜೊತೆಗಾರರು ಇರಲ್ಲ. ಇದಕ್ಕೆಲ್ಲ ಈಗ ಎಐ ಸಹಾಯ ಮಾಡುತ್ತೆ. ನೀವು ಬರೆದ ಪ್ರಬಂಧ ಅಥವಾ ಇಮೇಲನ್ನು Grammarly, Quillbot, Google Gemini ಯಂತಹ ಟೂಲ್ಸ್‌ಗೆ ಹಾಕಿದ್ರೆ, ಅದು ವ್ಯಾಕರಣದ ತಪ್ಪುಗಳನ್ನು ಸರಿಪಡಿಸಿ, ಸರಿಯಾದ ಶೈಲಿಯನ್ನು ಕಲಿಸಲು ಸಹಾಯ ಮಾಡುತ್ತೆ. Elsa Speak, Duolingo ದಂತಹ ಆ್ಯಪ್‌ಗಳಲ್ಲಿ ನೀವು ಮಾತನಾಡಿ ನಿಮ್ಮ ಉಚ್ಚಾರಣೆ ಮತ್ತು ಮಾತಿನ ವೇಗವನ್ನು ಸುಧಾರಿಸಿಕೊಳ್ಳಬಹುದು.
ಈಗ ನಿಮ್ಮ ಊರಿಂದಲೇ MIT ಅಥವಾ ಯಾವುದೇ ವಿದೇಶಿ ಯೂನಿವರ್ಸಿಟಿಯ ಉಪನ್ಯಾಸಗಳನ್ನು ಕೇಳಬಹುದು. YouTube, Coursera, edX ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಉಪನ್ಯಾಸಗಳು ಉಚಿತವಾಗಿ ಸಿಗುತ್ತವೆ. ಅದನ್ನು Listening.com, Notta ದಂತಹ ಟೂಲ್ಸ್‌ಗೆ ಹಾಕಿ, ಪಠ್ಯ ರೂಪಕ್ಕೆ ಬದಲಾಯಿಸಬಹುದು. ವಿದೇಶಿ ಉಪನ್ಯಾಸಕರ ಭಾಷೆ ಅರ್ಥವಾಗದಿದ್ದರೆ, AI ಭಾಷಾಂತರ ಟೂಲ್‌ಗಳನ್ನು ಬಳಸಿ ನೋಟ್ಸ್ ಪಡೆಯಬಹುದು.
ಹೀಗೆ AI ಕೇವಲ ಒಂದು ಉಪಕರಣವಲ್ಲ, ಅದು ನಿಮ್ಮ ಕಲಿಕೆಗೆ ಹೊಸ ದಾರಿ ತೋರಿಸೋಕೆ ಬಂದಿರುವ ಒಂದು ಶಕ್ತಿಶಾಲಿ ಸಾಧನ. ಇನ್ನು ಮುಂದೆ ನೀವು ಸ್ಕೂಲಲ್ಲಿ ಸರಿಯಾದ ಟೀಚರ್ ಇಲ್ಲ, ಸಿಲೆಬಸ್ ಮುಗಿದಿಲ್ಲ, ಟೈಮಿಲ್ಲ, ಟ್ಯೂಶನ್ಗೆ ಹೋಗಲು ದುಡ್ಡಿಲ್ಲ ಅಂತೆಲ್ಲ ಕಂಪ್ಲೇಟ್ ಮಾಡುವುದರಲ್ಲಿ ಅರ್ಥವೇ ಇಲ್ಲ. ನಿಮ್ಮ ಸೋಲು ಗೆಲುವಿಗೆ ನೀವೇ ಹೊಣೆಗಾರರು. ಎಲ್ಲವೂ ನೀವು ನಿಮ್ಮ ಕೈಲಿರುವ ಮೊಬೈಲನ್ನ ಇಂಟರ್ನೆಟ್ಟನ್ನ, ಅದರಲ್ಲಿನ ಎಐನ ಹೇಗೆ ಬಳಸುತ್ತೀರಾ ಅನ್ನುವುದರ ಮೇಲೆ ನಿಂತಿದೆ.