ತೆರೆದಿದೆ ಎಐ ಮನೆ, ಬಾ ಅತಿಥಿ
Blog post description.
Madhu Y N
8/5/20251 min read


ನಿಮ್ಮ ಎಐ ಅದು ಮಾಡುತ್ತೆ ಇದು ಮಾಡುತ್ತೆ ಅಂತ ಬೊಂಬಡ ಹೊಡ್ಕೊತೀರಿ ಆದರೆ ನಮಗದು ಒಂದಿನ ಚಟ್ನಿ ರುಬ್ಬಿ ಕೊಟ್ಟಿಲ್ಲ, ನೆಲ ಒರೆಸಿಕೊಟ್ಟಿಲ್ಲ ಅನ್ನೋದು ಗೃಹಿಣಿಯರ ದೊಡ್ಡ ಗೋಳಾಟ. ಈ ಲೇಖನದಲ್ಲಿ ಎಐ ಹೇಗೆ ಗೃಹೋಪಯೋಗಿಯಾಗಬಹುದು ಎಂದು ನೋಡೋಣ.
ಮೊದಲಿಗೆ ಅಡಿಗೆಮನೆ. ದಿನಾ ಈ ಪ್ರಶ್ನೆ ಏಳುತ್ತಲ್ಲವೇ? ಇವತ್ತೇನು ಅಡಿಗೆ ಮಾಡೋಣ? ಈ ತರಕಾರಿ ಇದೆ, ಇದರಿಂದೇನು ಅಡಿಗೆ ಮಾಡಬಹುದು ಎಂದು.
ಚಾಟ್ ಜಿಪಿಟಿ ಓಪನ್ ಮಾಡಿ. ನಿಮ್ಮ ಬಳಿಯಿರುವ ತರಕಾರಿ, ಬೇಳೆ, ಸೊಪ್ಪುಗಳನ್ನು ಹೆಸರಿಸಿ, ಇದರಿಂದ ಏನೆಲ್ಲ ಅಡಿಗೆ ಮಾಡಬಹುದು, ಕೇಳಿ. ಉದಾಹರಣೆಗೆ ನಿಮ್ಮ ಬಳಿ ಕ್ಯಾರೆಟ್, ಟೊಮ್ಯಾಟೋ ಮತ್ತು ಈರುಳ್ಳಿ ಇದ್ದರೆ, ಎಐ ನಿಮಗೆ "ಕ್ಯಾರೆಟ್-ಟೊಮ್ಯಾಟೋ ಸಾರು" ಅಥವಾ "ಕ್ಯಾರೆಟ್ ಟೊಮ್ಯಾಟೋ ಪಲ್ಯ" ಮಾಡುವ ವಿಧಾನ ಹೇಳಿಕೊಡುತ್ತದೆ.
ಅಡಿಗೆ ಮಾಡುವಾಗ ಫೋನ್ ಮುಟ್ಟುವುದು ಕಷ್ಟ ತಾನೇ? ಫೋನ್‌ನೊಂದಿಗೆ ಮಾತಾಡಿ. ಹೇ ಗೂಗಲ್ ಅನ್ನಿ. ಅಲೆಕ್ಸಾ ಎಂದು ಕರೆಯಿರಿ. ೧೦೦ ಎಮ್ಎಲ್ ಅಂದರೆ ಎಷ್ಟು ಕಪ್ಪು? ಈ ಎಣ್ಣೆಯಲ್ಲಿ ಎಷ್ಟು ಜಿಡ್ಡಿನಂಶ ಇದೆ.. ಎಂದೆಲ್ಲಾ ಕೇಳುತ್ತ ಹೋಗಿ. ಯಾವುದೋ ವಸ್ತು ಖಾಲಿಯಾಗಿದೆ. ಮರೆಯುವ ಮುನ್ನ ಇದನ್ನು ನನ್ನ ಶಾಪಿಂಗ್ ಲಿಸ್ಟಿಗೆ ಸೇರಿಸು ಅನ್ನಿ. ಸಡನ್ನಾಗಿ ಯಾವುದೋ ಹಾಡು ನೆನಪಾಯ್ತು. ಈ ಹಾಡನ್ನು ಪ್ಲೇ ಮಾಡು ಅನ್ನಿ.
ಹಾಲ್‌ಗೆ ಬರೋಣ. ಎಲ್ಲನೂ ಹರಡಿಕೊಂಡಿದೆ. ಇಕ್ಕಟ್ಟಾಗಿದೆ. ಹಳೆಯದಾಗಿದೆ. ಹೆಂಗೆ ಫಿಕ್ಸ್ ಮಾಡವುದು ಗೊತ್ತಾಗ್ತಿಲ್ಲ. ಇಂಟೀರಿಯರ್ ಡಿಸೈನರ್ ಕೇಳಿದರೆ ಇಪ್ಪತ್ತು ಸಾವಿರ ಕೇಳ್ತಾನೆ. ಬೇಡ. ಫೋನ್ ತಗೊಳ್ಳಿ. ಮೂಲೆ ಮೂಲೆಯ ಫೋಟೋ ತಗೊಳ್ಳಿ. Homestyler ಅಥವಾ RoomGPTಗಳಲ್ಲಿ ಫೋಟೋ ಅಪ್ಲೋಡ್ ಮಾಡಿ. ಇದನ್ನು ನವೀಕರಿಸುವುದು ಹೇಗೆ ಎಂದು ಕೇಳಿ. ಯಾವ ಪೀಠೋಪಕರಣವನ್ನು ಎಲ್ಲಿಟ್ಟರೆ ಚಂದ, ಕೇಳಿ.
ನಿಮಗೆ ಬಣ್ಣಗಳ ಐಡಿಯಾ ಇಲ್ಲ. ಯಾವ ಬಣ್ಣಗಳ ಕಾಂಬಿನೇಶನ್ ಚನ್ನಾಗಿ ಕಾಣುತ್ತೆ ಅಂತ ಗೊತ್ತಿಲ್ಲ. Coolors ಅಥವಾ Adobe Color ಬಳಸಿ "ಹಾಲ್‌ಗೆ ಹೊಂದುವ ಬಣ್ಣಗಳು" ಎಂದು ಹುಡುಕಿ. ಎಐ ಸೂಕ್ತವಾದ ಪ್ಯಾಲೆಟ್ ಸಲಹೆ ನೀಡುತ್ತದೆ. Pinterestಗೆ ಹೋಗಿ "ಸಣ್ಣ ಫ್ಲ್ಯಾಟ್‌ನ ಇಂಟೀರಿಯರ್" ಎಂದು ಹುಡುಕಿ. ಎಐ ನಿಮ್ಮ ಅಭಿರುಚಿಗೆ ತಕ್ಕನಾದ ಕೋಣೆಯ ಚಿತ್ರಗಳನ್ನು ತೋರಿಸುತ್ತದೆ. IKEA Place ಅಪ್ಲಿಕೇಶನ್ ಮೂಲಕ ನಿಮ್ಮ ಕೊಠಡಿಗೆ ವರ್ಚುವಲ್ ಪೀಠೋಪಕರಣಗಳನ್ನು ಕೂರಿಸಿ ನೋಡಿ.
ಮನೆಯ ಖರ್ಚು ನೀರಿನಂತೆ ಹರಿದೋಗ್ತಿದೆ. ಎಲ್ಲಿ ಹೋಗ್ತಿದೆ ಎಲ್ಲಿ ಪೋಲಾಗ್ತಿದೆ ಗೊತ್ತಾಗ್ತಿಲ್ಲ. ಎಐ ಆಪ್‌ನಲ್ಲಿ(chatGPT, Perplexity) ಪ್ರತಿದಿನದ ಖರ್ಚುಗಳನ್ನು ತುಂಬುತ್ತಾ ಹೋಗಿ. "ಇವತ್ತು ತರಕಾರಿಗೆ ₹200 ಖರ್ಚು ಮಾಡಿದೆ" ಅಂತ ಹೇಳಿ. ತಿಂಗಳ ಕೊನೆಗೆ, ಅದು ನಿಮಗೆ ಒಂದು ವರದಿ ಕೊಟ್ಟು, ಎಲ್ಲಿ ಪೋಲಾಗ್ತಿದೆ ಅಂತ ತಿಳಿಸುತ್ತೆ.
ಮನೆ ಕ್ಲೀನ್ ಮಾಡುವುದು ತಲೆನೋವಲ್ಲವೇ? ದಿನಾ ಕಸ ತುಂಬ್ಕೊಳ್ತಿರುತ್ತದೆ. ಮೂಲೆ ಮೂಲೆಯಲ್ಲಿ ಕಸ ಹಂಗೇ ಇರುತ್ತೆ. ರೋಬೋಟ್ ವ್ಯಾಕ್ಯೂಮ್ ಕ್ಲೀನರ್ ಬಳಸಿ. ಇದು ನಿಮ್ಮ ಮನೆಯ ನಕ್ಷೆಯನ್ನು (Map) ತಯಾರಿಸುತ್ತೆ. ಯಾವ ರೂಮ್‌ಗಳು, ಎಲ್ಲಿ ಗೋಡೆಗಳು, ಎಲ್ಲಿ ಬಾಗಿಲು ಇದೆ ಅಂತ ತಿಳ್ಕೊಳುತ್ತೆ. ನಿಮ್ಮ ಆಜ್ಞೆ ಮಾಡಿದ ಹಾಗೆ ಮನೆಯನ್ನು ತನ್ನಷ್ಟಕ್ಕೆ ತಾನೇ ಸ್ವಚ್ಛಗೊಳಿಸುತ್ತೆ. ಚಾರ್ಜ್ ಕಡಿಮೆಯಾದಾಗ ತಾನೇ ಚಾರ್ಜಿಂಗ್ ಡಾಕ್‌ಗೆ ಹೋಗಿ ಚಾರ್ಜ್ ಹಾಕಿಕೊಂಡು ಬರುತ್ತೆ.
ಪಾತ್ರೆ ತೊಳೆಯಲು ಸ್ಮಾರ್ಟ್ ಡಿಶ್‌ವಾಷರ್ ಬಳಸಿ. ಸ್ಮಾರ್ಟ್ ರೆಫ್ರಿಜರೇಟರ್ ಕೊಂಡುಕೊಳ್ಳಿ. ಫ್ರಿಡ್ಜ್‌ನಲ್ಲಿ ಏನಿದೆ, ಯಾವುದು ಮುಗಿದುಹೋಗಿದೆ ಅಂತ ಫೋನ್‌ಗೆ ಮೆಸೇಜ್ ಬರುತ್ತೆ.
ಮನೆಯಲ್ಲಿ ದಿನಾ ಏನಾದರೊಂದು ಕೆಟ್ಟೋಗ್ತಿರುತ್ತಲ್ಲವೇ? ರಿಪೇರಿ ಆಗಬೇಕು. ಸಣ್ಣ ಸಣ್ಣದಕ್ಕೂ ಪ್ಲಂಬರ್, ಮೆಕ್ಯಾನಿಕ್, ಎಲೆಕ್ಟ್ರಿಷಿಯನ್ ಕರಿಯಬೇಕಾಗುತ್ತೆ. ನಿಲ್ಲಿ, ಚಾಟ್‌ಜಿಪಿಟಿ ತೆರೆಯಿರಿ. ಏನು ಸಮಸ್ಯೆ ಎಂದು ಬಣ್ಣಿಸಿ. ನಿಮಗೆ ಬಂದಷ್ಟು ಹೇಳಿ. ಉಳಿದದ್ದನ್ನು ಅದೇ ಗೆಸ್ ಮಾಡುತ್ತದೆ. ಎಲ್ಲಿ ಏನಾಗಿರಬಹುದು ಹೇಳಿ ಅಂಗಡಿಗೆ ಹೋಗಿ ಇಂಥದನ್ನು ತಂದು ಹೀಗೆ ಮಾಡಿದರೆ ಈ ಸಮಸ್ಯೆ ನಿಲ್ಲುತ್ತದೆ ಎಂದು ನಿಖರವಾಗಿ ಪರಿಹಾರ ಸೂಚಿಸುತ್ತದೆ. ಫ್ರಿಡ್ಜ್ ಸರಿಯಾಗಿ ಕೂಲ್ ಆಗುತ್ತಿಲ್ಲ. ಫ್ರಿಡ್ಜ್‌ನ ಫೋಟೋ ಅಥವಾ ವಿಡಿಯೋ ತೆಗೆದು ಎಐ ಆಪ್‌ಗೆ ಕಳಿಸಿ. "ನಲ್ಲಿ ಸೋರ್ತಿದೆ, ಯಾವ ಟೇಪು ಅಂಟಿಸಬೇಕು? ಎಂತಹ ಅಂಗಡಿಯಲ್ಲಿ ಸಿಗುತ್ತೆ?” " ಫ್ಯೂಸ್ ಹೋಗಿದೆ, ಎಷ್ಟು ವೋಲ್ಟೇಜಿನ ಫ್ಯೂಜ್ ತರಬೇಕು? ಯಾವ ಕಂಪನಿಯದ್ದು ಉತ್ತಮ" ಎಂದೆಲ್ಲಾ ಕೇಳಿ ಉಚಿತ ಸಲಹೆ ಪಡೆಯಿರಿ.
ಕೈಯಿಂದ ಬಟನ್ ಒತ್ತಿ ಲೈಟ್ ಆಫ್ ಮಾಡುವುದು, ಎಸಿ ರಿಮೋಟ್ ಹುಡುಕುವುದು ಈಗೆಲ್ಲ ಹಳೇ ಪದ್ಧತಿ. ಎಐ ಆಧಾರಿತ ಸ್ಮಾರ್ಟ್ ಹೋಮ್ ಸಿಸ್ಟಂ ಬಂದಿದೆ. Philips Hue ಅಥವಾ Syskaನಂತಹ ಸ್ಮಾರ್ಟ್ ಬಲ್ಬ್‌ಗಳನ್ನು Alexa ಅಥವಾ Google ಮೂಲಕ ನಿಯಂತ್ರಿಸಬಹುದು. ನಿಮ್ಮ ಧ್ವನಿಯಿಂದಲೇ ಲೈಟ್ ಆನ್/ಆಫ್ ಮಾಡಬಹುದು. ಅದರ ಬಣ್ಣ, ಬೆಳಕಿನ ತೀವ್ರತೆಯನ್ನು ಬದಲಾಯಿಸಬಹುದು. Nest ಅಥವಾ Ring Doorbell ನಂತಹ ಎಐ ಆಧಾರಿತ ಕ್ಯಾಮೆರಾಗಳು ಮತ್ತು ಸೆನ್ಸರ್‌ಗಳ ಮೂಲಕ ಮನೆಯ ಸುರಕ್ಷತೆ ಹೆಚ್ಚಿಸಬಹುದು. ಮನೆಯ ಹೊರಗೆ ಯಾರಾದರೂ ಬಂದಾಗ ಅಥವಾ ಏನಾದರೂ ಅನುಮಾನಾಸ್ಪದ ಚಲನೆ ಕಂಡುಬಂದಾಗ ಅದು ತಕ್ಷಣವೇ ನಿಮ್ಮ ಫೋನ್‌ಗೆ ಅಲರ್ಟ್ ಕಳಿಸುತ್ತದೆ. Google Nest Thermostat ನಂತಹ ಸಾಧನಗಳು ಮನೆಯಲ್ಲಿರುವಾಗ ಮತ್ತು ಹೊರಗಿರುವಾಗ ಯಾವ ತಾಪಮಾನ ಆರಾಮದಾಯಕ ಎಂಬುದನ್ನು ಕಲಿತುಕೊಂಡು ಆಟೊಮ್ಯಾಟಿಕ್ಕಾಗಿ ಹೊಂದಿಸಿಕೊಳ್ಳುತ್ತವೆ. ಇದರಿಂದ ಕರೆಂಟ್ ಬಿಲ್ ಕೂಡ ಉಳಿತಾಯವಾಗುತ್ತೆ. TP-Link ಅಥವಾ Wipro ಸ್ಮಾರ್ಟ್ ಪ್ಲಗ್‌ಗಳನ್ನು ಬಳಸಿ, ಯಾವುದೇ ವಿದ್ಯುತ್ ಉಪಕರಣವನ್ನು ನೀವು ನಿಮ್ಮ ಮೊಬೈಲ್ ಮೂಲಕ ನಿಯಂತ್ರಿಸಬಹುದು. ಉದಾಹರಣೆಗೆ, ಟಿವಿ ಆನ್ ಅಥವಾ ಆಫ್ ಮಾಡಬಹುದು. "Home Automation" ಎಂದು ಗೂಗಲ್‌ನಲ್ಲಿ ಸರ್ಚ್ ಮಾಡಿ ಎಐ-ಆಧಾರಿತ ಸಲಹೆಗಳನ್ನು ಪಡೆದುಕೊಳ್ಳಿ.
ಮನೆಯಲ್ಲಿ ಮಕ್ಕಳಿಗೆ ಕತೆ ಹೇಳಲು ಅಜ್ಜ-ಅಜ್ಜಿಯರಿಲ್ಲವೇ? ನಿಮಗೆ ಜಾನಪದ, ದೆವ್ವದ, ವೈಜ್ಞಾನಿಕ ಕತೆಗಳು ಗೊತ್ತಿಲ್ಲವೇ? ಎಐನ ಕೇಳಿ. ದಿನಕ್ಕೊಂದು ಹೊಸೆದು ಕೊಡುತ್ತದೆ. ಎಐ ಮೂಲಕವೇ ಮೌಖಿಕವಾಗಿ ಕತೆ ಹೇಳಿಸಬಹುದೂ ಕೂಡ. ಕಥೆಗಳ ಮೂಲಕ ವಿಜ್ಞಾನ, ನೈತಿಕತೆ, ಭೌತಶಾಸ್ತ್ರದ ಸಿದ್ಧಾಂತ ಇತ್ಯಾದಿಗಳನ್ನು ಕಲಿಸಬಹುದು.
ChatGPTಗೆ "Tell a story that teaches Newton’s Third Law in Kannada." ಎಂದು ಕೇಳಿದರಾಯ್ತು