ಸಣ್ಣ ಉದ್ಯಮಿಗಳಿಗೆ ಎಐ

Blog post description.

Madhu Y N

9/7/20251 min read

ಎಐ ಎಂದರೆ ಯಾವಾಗಲೂ ಬಿಳಿ ಕಾಲರ್‌ ಮತ್ತು ಅದಕ್ಕಿಂತ ಮೇಲಿನ ಜನರ ದೃಷ್ಟಿಯಿಂದಲೇ ಮಾತಾಡ್ತಿರ್ತೇವೆ. ಕೃಷಿಕರು, ವ್ಯಾಪಾರಿಗಳು, ಸಣ್ಣ ಉದ್ದಿಮೆದಾರರ ಪಾಡೇನು? ಅವರು ಹೇಗೆ ಎಐ ಅಥವಾ ಒಟ್ಟಾರೆ ತಂತ್ರಜ್ಞಾನದ ಲಾಭ ಪಡೆಯಬಹುದು? ನಮ್ಮಲ್ಲಿ ಯಾಕೆ ಟೆಕ್ನಾಲಜಿ ಇನ್ನೂ ಈ ವಲಯವನ್ನು ಪ್ರವೇಶಿಸಿಲ್ಲ? ಈ ಸಂಚಿಕೆಯಲ್ಲಿ ಇದು ಸಾಧ್ಯವಾ ನೋಡೋಣ.

ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ, ಸಣ್ಣ ವ್ಯಾಪಾರಿಗಳು ಮತ್ತು ಅಂಗಡಿ ಮಾಲೀಕರಿಗೆ ದೊಡ್ಡ ತಿಮಿಂಗಿಲಗಳ ನಡುವೆ ತಮ್ಮ ವ್ಯಾಪಾರವನ್ನು ಉಳಿಸಿ ಬೆಳೆಸುವುದೇ ಒಂದು ದೊಡ್ಡ ಸವಾಲು. ಬೃಹತ್‌ ಗಾತ್ರದ ವ್ಯಾಪಾರಿ ಸಂಸ್ಥೆಗಳು ತಮ್ಮದೇ ಆದ ವೆಬ್ಸೈಟ್‌, ಡೆಲಿವರಿ ತಂಡ, ಅಟೋಮ್ಯಾಟಿಕ್‌ ಮೆಸೇಜು, ಈಮೇಲು ಮುಂತಾಗಿ ಎಲ್ಲನ್ನೂ ಇಟ್ಕೊಂಡಿರುತ್ತಾರೆ. ಅವರೊಂದಿಗೆ ಸೆಣೆಸುವುದು ಸಾಧ್ಯವೇ?

ಅವರ ಮಾರುಕಟ್ಟೆ ದೊಡ್ಡದು, ಹೂಡಿಕೆ ಮೊತ್ತ ದೊಡ್ಡದು, ಅವರ ಕಷ್ಟಸುಖಗಳೂ ಅಷ್ಟೇ ದೊಡ್ಡವು. ಇಷ್ಟು ಅರಿತರೆ ಸಣ್ಣ ಉದ್ಯಮಗಳು ಧೃತಿಗೆಡದೆ ತಮ್ಮದೇ ಲಭ್ಯವಿರುವ ತಂತ್ರಜ್ಞಾನ ಬಳಸಿಕೊಂಡು ಸೀಮಿತ ಮಾರುಕಟ್ಟೆಗೆ ಅತ್ಯಂತ ಪರಿಣಾಮಕಾರಿಯಾಗಿ ತಲುಪಬಹುದು. ಇದರಲ್ಲಿ ಎಷ್ಟೊಂದು ಕ್ಲೀಷೆ ಅನಿಸಬಹುದು, ಆದರೆ ಪ್ರಯೋಗಿಸಿದಾಗ ಮಾತ್ರ ಅದರ ಲಾಭ ನಿಮಗೆ ತಿಳಿಯುವುದು.

ಉದಾಹರಣೆಗೆ ಮೊದಲಿಗೆ ನೀವು ವಾಟ್ಸಾಪ್‌ ಬಿಸಿನೆಸ್‌ ಆಪ್‌ ಬಳಸುವುದು ರೂಢಿಸಿಕೊಳ್ಳಬೇಕು. ಅದರಿಂದ ನಿಮ್ಮಲ್ಲಿನ ವಸ್ತು, ಅವುಗಳ ಬೆಲೆ, ಲಭ್ಯತೆ ಮುಂತಾಗಿ ನೇರ ನಿಮ್ಮ ಗ್ರಾಹಕರಿಗೆ ಮೆಸೇಜು ಮೂಲಕ ತಿಳಿಸಬಹುದು. ಗ್ರಾಹಕರಿಂದ ಆರ್ಡರ್ ಮೆಸೇಜ್ ಬಂದಾಗ, ಎಐ ಆಧಾರಿತ ಆಟೋ ರಿಪ್ಲೇಗಳನ್ನು ಬಳಸಿ ತಕ್ಷಣವೇ ಉತ್ತರ ನೀಡಬಹುದು. ಓದಲು ಬರೆಯಲು ಬರದ ಗ್ರಾಹಕರು ತಮ್ಮ ಧ್ವನಿಯಿಂದಲೇ ಆರ್ಡರ್ ಮಾಡಬಹುದು. ಇದರ ಮುಖ್ಯ ಉಪಯೋಗವೆಂದರೆ ನಿಮಗೆ ಅಷ್ಟೂ ಸಕ್ರಿಯ ಗ್ರಾಹಕರ ನಿರಂತರ ಸಂಪರ್ಕ ಇರುತ್ತದೆ.

ಎರಡನೆಯದಾಗಿ- ಜೆಮಿನೈ, ಚಾಟ್‌ಜಿಪಿಟಿ ಮುಂತಾದ ಎಐ ಉಪಕರಣಗಳನ್ನು ಬಳಸಿ ನಿಮ್ಮ ವ್ಯಾಪಾರ ಹೇಗೆ ವೃದ್ಧಿಸಬಹುದು ಎಂದು ಸಲಹೆ ಕೇಳಬಹುದು. ನಿಮ್ಮ ಪ್ರಾಡಕ್ಟುಗಳಿಗೆ ತಕ್ಕಂತೆ ಜಾಹೀರಾತಿನ ಸಾಲುಗಳನ್ನು ಪಡೆಯಬಹುದು, ಚಿತ್ರಗಳನ್ನು ಪಡೆಯಬಹುದು. ಮಾರುಕಟ್ಟೆ ವಿಸ್ತರಿಸುವ ಬಗ್ಗೆ ಉಪಾಯಗಳನ್ನು ಕೇಳಿ ತಿಳಿದುಕೊಳ್ಳಬಹುದು. ನಮ್ಮಲ್ಲಿ ಅನೇಕ ಸಣ್ಣ ಉದ್ಯಮಿದಾರರು ಸಾಂಪ್ರದಾಯಿಕ ತಂತ್ರಗಳನ್ನು ಬಳಸುತ್ತಾರೆ. ಈಗಿನ ಮಾರುಕಟ್ಟೆ ಬಂಡವಾಳಶಾಹಿ ತಂತ್ರಗಳನ್ನು ಬಳಸುತ್ತದೆ. ಗ್ರಾಹಕರನ್ನು ಸೆಳೆಯುವ ಆಕರ್ಷಿಸುವ ಸಂಭಾಳಿಸುವ ತೃಪ್ತಿ ಪಡಿಸುವ ವಿಧಾನಗಳು ಬದಲಾಗಿದ್ದಾವೆ. ಗ್ರಾಹಕರೇ ಬದಲಾಗಿದ್ದಾರೆ!

ಸಣ್ಣ ವ್ಯಾಪಾರಿಗಳು ಉದ್ದಿಮೆದಾರರು ಯಾಕೆ ಇನ್ನೂ ಸೋಶಿಯಲ್‌ ಮಿಡಿಯಾದಲ್ಲಿ ಒಂದು ಅಕೌಂಟ್‌ ತೆಗೆಯುವ ಸಾಹಸ ಮಾಡಿಲ್ಲ ಅನ್ನೋದೆ ಗೊತ್ತಾಗ್ತಿಲ್ಲ. ನೀವೊಂದು ಎಳನೀರು ಅಂಗಡಿ ಇಟ್ಟಿದ್ದರೂ ಅದಕ್ಕೊಂಡು ಅಕೌಂಟ್‌ ತೆರೆದು ತಾಜಾ ಎಳನೀರು ಬಂದಾಗ ಫೋಟೋ ಅಪ್ಲೋಡ್‌ ಮಾಡಿ ಗ್ರಾಹಕರನ್ನು ಸೆಳೆಯಬಹುದು. ನಿಮ್ಮ ಊರಿನ/ಸ್ಥಳೀಯ ಗ್ರಾಹಕರು ನಿಮ್ಮ ಪೇಜನ್ನು ಲೈಕ್‌ ಒತ್ತಿದರೆ ಸಾಕು. ನಿಮ್ಮ ಅಪ್‌ಡೇಟ್‌ಗಳು ಅವರನ್ನು ತಾನಾಗೆ ತಲುಪುತ್ತವೆ. ಎಷ್ಟೋ ಸಲ ವ್ಯಾಪಾರದ ಮೊದಲ ತಂತ್ರ ಗ್ರಾಹಕರಿಗೆ ನೆನಪಿಸುವುದಾಗಿರುತ್ತದೆ.

ಇನ್ನು ಬಿಲ್‌ಗಳ ವಿಷಯಕ್ಕೆ ಬಂದರೆ ಇಂದಿನ ಗ್ರಾಹಕರು ಕಾಗದದ ಬಿಲ್ ಬಯಸುವುದಿಲ್ಲ. ಫೋನ್‌ಪೇ ಗೂಗಲ್‌ಪೇ ಇರಲೇಬೇಕು. ಬಿಲ್ಲಿಂಗ್ ವಿಭಾಗದಲ್ಲಿ ನೀವು Zoho Vyapar Khatabook ನಂತಹ ಆಪ್‌ಗಳನ್ನು ಬಳಸಿ, ಆರ್ಡರ್, ಬಿಲ್, ಹಳೆಯ ಪಾವತಿ, ಬಾಕಿ ಎಲ್ಲವನ್ನೂ ನಿಮ್ಮ ಮೊಬೈಲ್‌ನಿಂದಲೇ ನಿರ್ವಹಿಸಬಹುದು. ಗ್ರಾಹಕರ ಆರ್ಡರ್ ಹಿಸ್ಟರಿ ಮತ್ತು ಖರೀದಿಗಳನ್ನು ಗಮನಿಸಿ, ಅವರಿಗೆ ಬೇಕಾದ ಹೊಸ ವಸ್ತುಗಳ ಬಗ್ಗೆ ಸಲಹೆ ನೀಡಲು Zoho CRM Lite ಅಥವಾ Vyapar app ಗಳನ್ನು ಬಳಸಬಹುದು.

ಇನ್ನೊಂದು ಹೆಜ್ಜೆ ಮುಂದೆ ಹೋದರೆ ನಿಮ್ಮ ಅಂಗಡಿಯದ್ದೇ ನೀವೊಂದು ವೆಬ್‌ಸೈಟ್‌ ತೆರೆಯಬಹುದು. ಅಲ್ಲಿಂದಲೇ ಆರ್ಡರ್‌ ಪಡೆಯಬಹುದು. Shopify Magic, Wix ADI, GoDaddy ನಂತಹ ಟೂಲ್‌ಗಳನ್ನು ಬಳಸಿಕೊಂಡು ನಿಮ್ಮ ವ್ಯಾಪಾರಕ್ಕೆ ತಕ್ಕನಾಗಿ ಕೆಲವೇ ನಿಮಿಷಗಳಲ್ಲಿ ವೆಬ್‌ಸೈಟ್ ನಿರ್ಮಿಸಬಹುದು. ನಿಮ್ಮ ಫೋನ್‌ನಲ್ಲಿರುವ ಫೋಟೋಗಳನ್ನು ಅಪ್ಲೋಡ್‌ ಮಾಡಿದರೆ ಸಾಕು, ಬಹಳ ಜಾಣತನದಿಂದ ಸುಂದರವಾದ ವೆಬ್‌ಸೈಟ್ ವಿನ್ಯಾಸಗೊಳಿಸಿಕೊಡುತ್ತವೆ. Perci.ai, Amazon JungleScout ನಂತಹ ಟೂಲ್‌ಗಳು ನಿಮ್ಮಲ್ಲಿನ ಪದಾರ್ಥಗಳ ವಿವರಣೆ, ಫೋಟೋಗಳನ್ನು ವೆಬ್ಸೈಟಿಗೆ ಅಪ್‌ಲೋಡ್‌ ಮಾಡಲು ಸಹಾಯ ಮಾಡುತ್ತವೆ. Zendesk ಎಂಬ ಸಂಸ್ಥೆ ನಿಮ್ಮ ವೆಬ್ಸೈಟಿಗಾಗಿ ಕಸ್ಟಮೈಜಡ್‌ ಎಐ ಏಜೆಂಟುಗಳನ್ನು ಸಿದ್ಧಪಡಿಸಿಕೊಡುತ್ತದೆ. ಅವರು ಕೊಡುವ ಎಐ ಚಾಟ್‌ಬಾಟ್‌ಗಳು ಗ್ರಾಹಕರ ಪ್ರಶ್ನೆಗಳಿಗೆ 24x7 ಉತ್ತರ ನೀಡುತ್ತವೆ. ಇದು ಆರ್ಡರ್ ಟ್ರ್ಯಾಕಿಂಗ್, ಪ್ರತಿಕ್ರಿಯೆ ಮತ್ತು ಇತರ ವಿಷಯಗಳಲ್ಲಿಯೂ ಸಹಾಯ ಮಾಡುತ್ತದೆ. Zoho CRM, Shopify ai, Prisync ನಂತಹ ಟೂಲ್‌ಗಳು ನಿಮ್ಮ ಪ್ರತಿಸ್ಪರ್ಧಿಗಳ ಬೆಲೆಗಳನ್ನು ವಿಶ್ಲೇಷಿಸಿ, ನಿಮ್ಮ ಪ್ರಾಡಕ್ಟುಗಳಿಗೆ ಉತ್ತಮ ಬೆಲೆ ನಿಗದಿಪಡಿಸಲು ಸಹಾಯ ಮಾಡುತ್ತವೆ. ನಿಮ್ಮ ವೆಬ್‌ಸೈಟ್‌ನಲ್ಲಿನ ಎಐ, ಗ್ರಾಹಕರ ಹಿಂದಿನ ಖರೀದಿಗಳು ಮತ್ತು ಹುಡುಕಾಟದ ಇತಿಹಾಸದ ಆಧಾರದ ಮೇಲೆ ಅವರಿಗೆ ಇಷ್ಟವಾಗಬಹುದಾದ ಹೊಸ ಉತ್ಪನ್ನಗಳನ್ನು ಶಿಫಾರಸು ಮಾಡುತ್ತದೆ. Zoho Inventory, Shopify Magic, QuickBooks ಎಐ ನಂತಹ ಆಪ್‌ಗಳು ಉತ್ಪನ್ನಗಳ ದಾಸ್ತಾನು, ಚಲನೆ ಮತ್ತು ಪುನಃ ಆರ್ಡರ್ ಮಾಡುವ ಸಮಯವನ್ನು ಒಂದೇ ಕಡೆ ವಿಶ್ಲೇಷಿಸುತ್ತವೆ. ಹಿಂದಿನ ಮಾರಾಟ ಮತ್ತು ಹಬ್ಬಗಳ ಸಮಯದಲ್ಲಿನ ಬೇಡಿಕೆಯನ್ನು ವಿಶ್ಲೇಷಿಸಿ, ಭವಿಷ್ಯದಲ್ಲಿ ಯಾವ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಬರಬಹುದು ಎಂದು ಊಹಿಸುತ್ತವೆ.

Microsoft Power BI with Copilot, Tableau AI, Zoho Analytics, Google Looker Studio ನಂತಹ ಟೂಲ್‌ಗಳು ನಿಮ್ಮ ಅಂಗಡಿ/ವ್ಯಾಪಾರದ ಮಾರಾಟ, ಗ್ರಾಹಕರ ಅಗತ್ಯಗಳು, ಉತ್ಪನ್ನಗಳ ಹರಿವು ಮತ್ತು ಇತರ ಡೇಟಾವನ್ನು ವಿಶ್ಲೇಷಿಸಿ, ಅವುಗಳನ್ನು ಗ್ರಾಫ್‌ಗಳು ಮತ್ತು ಒಳನೋಟಗಳ ರೂಪದಲ್ಲಿ ನೀಡುತ್ತವೆ. ದೊಡ್ಡ ಕಂಪನಿಗಳು ಇಂತಹ ಗ್ರಾಫ್‌ಗಳಿಗಾಗಿ ಕೋಟ್ಯಾಂತರ ರುಪಾಯಿ ಖರ್ಚು ಮಾಡುತ್ತಾರೆ!

ಇಲ್ಲಿಗೇ ನಿಲ್ಲಲ್ಲ. ನಿಮ್ಮ ಅಂಗಡಿ/ಆಫೀಸಿನದ್ದು ಗೂಗಲ್‌ ಮ್ಯಾಪಿನಲ್ಲಿ ಲಿಸ್ಟ್‌ ಆಗಿರಲೇ ಬೇಕು. ಅದು ಬೀಡಾ ಅಂಗಡಿ ಆಗಿರಲಿ ಪರವಾಗಿಲ್ಲ! ಜನ ಅದಕ್ಕೆ ರಿವ್ಯೂ(ರೇಟಿಂಗ್‌, ವಿಮರ್ಶೆ) ಕೊಡುತ್ತಾರೆ. Google Review, Repuso, Broadly, ReviewTrackers ನಂತಹ ಟೂಲ್‌ಗಳು ನಿಮ್ಮ ಅಂಗಡಿ ಅಥವಾ ಸೇವೆಗಳ ಬಗ್ಗೆ ಬಂದಿರುವ ವಿಮರ್ಶೆಗಳನ್ನು ಒಗ್ಗೂಡಿಸಿ, ಅವುಗಳಲ್ಲಿನ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ಪತ್ತೆಹಚ್ಚುತ್ತವೆ. ಗ್ರಾಹಕರ ಪ್ರತಿಕ್ರಿಯೆಯಲ್ಲಿರುವ ಭಾವನೆಗಳನ್ನು ಗುರುತಿಸಿ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಫಿಲ್ಟರ್ ಮಾಡುತ್ತದೆ. ಯಾವುದೇ ಹಾನಿಕರ ವಿಮರ್ಶೆ ಅಥವಾ ಕಂಪ್ಲೆಂಟ್‌ ಬಂದಾಗ, ನಿಮಗೆ ತಕ್ಷಣವೇ ನೋಟಿಫಿಕೇಶನ್‌ ಕಳುಹಿಸುತ್ತವೆ. ಇದರಿಂದ ನೀವು ನಿಮ್ಮ ಬ್ರ್ಯಾಂಡ್‌ನ ಗೌರವವನ್ನು ಕಾಪಾಡಿಕೊಳ್ಳಬಹುದು.

ಮುಖ್ಯವಾಗಿ ಬರುವ ರಿವ್ಯೂಗಳಿಂದ ನಿಮಗೆ ಎಲ್ಲಿ ಇಂಪ್ರೂ ಮಾಡಿಕೊಳ್ಳಬಹುದು ಎಂದು ಉಚಿತ ಸಲಹೆ ಸಿಕ್ಕಂತಾಗುತ್ತದೆ. ಈ ಸಲಹೆಗಳು ದುಡ್ಡು ಕೊಟ್ಟರೂ ಸಿಗಲ್ಲ.

ಮುಂದೆ ಹೋಗ್ತಾ- ಯಾವುದೇ ವ್ಯವಹಾರದ ಯಶಸ್ಸಿಗೆ, ಮಾರಾಟ, ಹೊಸ ಗ್ರಾಹಕರನ್ನು (leads) ಹುಡುಕುವುದು ಮತ್ತು ವ್ಯಾಪಾರದ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. Zoho CRM Zia, Salesforce, HubSpot ನಂತಹ ಟೂಲ್‌ಗಳು ಗ್ರಾಹಕರ ಬಗ್ಗೆ ಡೇಟಾ ಸಂಗ್ರಹಿಸಿ, ಹೊಸ ಲೀಡ್‌ಗಳನ್ನು ಗುರುತಿಸಿ, ಅವರ ಆಸಕ್ತಿಯನ್ನು ಆಧರಿಸಿ ಸಂದೇಶಗಳನ್ನು ಕಳುಹಿಸುತ್ತವೆ. ನಿಮ್ಮ ಸಿಆರ್‌ಎಂಗೆ ಬರುವ enquiry ಗಳನ್ನು ವಿಶ್ಲೇಷಿಸಿ, ಯಾವ ಲೀಡ್ ಹೆಚ್ಚು ಮಾರಾಟಕ್ಕೆ ಯೋಗ್ಯವಾಗಿದೆ ಎಂದು ಗುರುತಿಸುತ್ತವೆ ಮತ್ತು ಅವುಗಳಿಗೆ ಹೆಚ್ಚು ಗಮನ ಹರಿಸಲು ಸೂಚಿಸುತ್ತವೆ. ಎಐ ನಿಮಗೆ "ಯಾವ ಗ್ರಾಹಕರು ಬಹಳ ದಿನಗಳಿಂದ ನಿಷ್ಕ್ರಿಯರಾಗಿದ್ದಾರೆ" ಅಥವಾ "ಯಾವ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಬೇಕು" ಅಂತ ತಿಳಿಸುತ್ತದೆ. QuickBill, Razorpay Sense, Shopify POS ನಂತಹ ಪಾವತಿ ಟೂಲ್‌ಗಳು ಅಸಹಜ ವಹಿವಾಟು ಅಥವಾ ವಂಚನೆಯ ಚಟುವಟಿಕೆಗಳನ್ನು ತಕ್ಷಣವೇ ಗುರುತಿಸಿ, ನಿಮಗೆ ಎಚ್ಚರಿಕೆ ನೀಡುತ್ತವೆ.

ಕಡೆಯದಾಗಿ- ಸಿಬ್ಬಂದಿಗಳನ್ನು ನೇಮಕ. Zoho Recruit, Freshteam, LinkedIn Recruiter ನಂತಹ ಎಐ ಆಧಾರಿತ ಟೂಲ್‌ಗಳು ಉದ್ಯೋಗಿಗಳ ಅರ್ಜಿಗಳನ್ನು ವಿಶ್ಲೇಷಿಸಿ, ನೀವು ಬಯಸಿದ ಅರ್ಹತೆ ಮತ್ತು ಅನುಭವ ಇರುವ ಅಭ್ಯರ್ಥಿಗಳನ್ನು ಗುರುತಿಸುತ್ತವೆ. Keka AI HR, BambooHR, Zoho People ನಂತಹ ಆಪ್‌ಗಳು ಹೊಸ ಸಿಬ್ಬಂದಿಯ ದಾಖಲಾತಿ, ವೇತನ, ಹಾಜರಾತಿ ಮತ್ತು ರಜೆ ನಿರ್ವಹಣೆಯನ್ನು ನೋಡಿಕೊಳ್ಳುತ್ತವೆ. OrAI, Yoodli ನಂತಹ ಎಐ ಕೋಚ್‌ಗಳು ಸಿಬ್ಬಂದಿಗೆ ಇಂಗ್ಲಿಷ್ ಮಾತನಾಡುವುದು, ಮಾರಾಟ ಕೌಶಲ್ಯಗಳು ಮತ್ತು ಸಂವಹನ ಕೌಶಲ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತವೆ.

ತಂತ್ರಜ್ಞಾನ ಮಾರುಕಟ್ಟೆ ಒಂಥರಾ ಬೆಂಗಳೂರಿನ ಎಸ್‌ಪಿ ರಸ್ತೆ ಇದ್ದ ಹಾಗೆ. ಇಂಥದ್ದು ಸಿಗಲ್ಲ ಅನ್ನಂಗಿಲ್ಲ. ಎಲ್ಲವೂ ಇದೆ. ನೀವು ಹುಡುಕಬೇಕಷ್ಟೆ. ಹಾ, ಈ ಆಪ್‌ಗಳಿಗೆ ಸಣ್ಣ ಮೊತ್ತದ ಹಣ ಕಟ್ಟಬೇಕಿರುತ್ತದೆ. ಆದರೆ ಅದರಿಂದಾಗುವ ಲಾಭ ಮಾತ್ರ ಹತ್ತು ಪಟ್ಟು.

ಹೇಳ್ತಾ ಹೋದರೆ ಪಟ್ಟಿ ಮುಗಿಯಲ್ಲ. ಇಲ್ಲಿಗೆ ನಿಲ್ಲಿಸೋಣ.

ಮನಸು ಮಾಡಿದರೆ ಬಳಸಲು ಎಷ್ಟೆಲ್ಲ ತಂತ್ರಜ್ಞಾನ ಇದೆ ಅನ್ಸಲ್ವಾ?