ಎಐ ಸಾಹಿತ್ಯ ಬರೆಯಬಲ್ಲದೇ?
Blog post description.
4/16/20251 min read


ಕಳೆದ ವಾರ ʼಈ ಹೊತ್ತಿಗೆʼ ಸಾಹಿತ್ಯ ಸಮಾರಂಭದಲ್ಲಿ ಕನ್ನಡದ ಹಿರಿಯ ಲೇಖಕರಾದ ಎಸ್ ದಿವಾಕರ್ ಅವರು ಈ ಪ್ರಶ್ನೆ ಎತ್ತಿದರು- ಎಐಗೆ ಸರಿಯಾದ ಮತ್ತು ಸಮರ್ಪಕವಾದ ತರಬೇತಿ ಕೊಟ್ಟರೆ ಅದು ನವೋದಯ, ನವ್ಯ, ಪ್ರಗತಿಪರ, ಬಂಡಾಯ ಮುಂತಾಗಿ ಇರುವ ಯಾವ ಮಾರ್ಗದಲ್ಲಿಯಾದರೂ ಚನ್ನಾಗಿರುವ ಕತೆ ಬರೆಯುತ್ತದೆ ಎಂದಿಟ್ಟುಕೊಳ್ಳೋಣ; ಆದರೆ ಅದು ಸಾಹಿತ್ಯ ಲೋಕದಲ್ಲಿ ಈಗಿರದ ಹೊಸ ಮಾರ್ಗದಲ್ಲಿ ಕತೆ ಬರೆಯಲು ಶಕ್ಯವೇ?
ಉತ್ತರ ಬಹುತೇಕ ಇಲ್ಲ ಎನ್ನಬಹುದು.
ಎಐ ಲಭ್ಯವಿರುವ ಎಲ್ಲ ಮಾರ್ಗಗಳ ಎಲ್ಲ ಸಾಹಿತ್ಯವನ್ನು ಅರೆದು ಕುಡಿದು ಖಂಡಿತ ಆಯಾ ಮಾರ್ಗದ ಅಚ್ಚಿನಂತಹ ಕತೆ, ಕವನಗಳನ್ನು ರಚಿಸಬಲ್ಲದು. ಅಲ್ಲಿನ ಸಾಮಾಜಿಕ, ತಾತ್ವಿಕ ತಿಕ್ಕಾಟಗಳನ್ನು ಇನ್ನಷ್ಟು ಆಳವಾಗಿ ವಿಶ್ಲೇಷಿಸಬಹುದು. ಆಯಾ ಪ್ರಕಾರದ ರಸ ಮತ್ತು ಸೊಬಗನನ್ನು ಇನ್ನಷ್ಟು ತೀಕ್ಷ್ಣವಾಗಿ ಪ್ರಸ್ತುತಪಡಿಸಬಹುದು. ಹೊಸ ಮಾರ್ಗವನ್ನೇ ಸೃಷ್ಟಿಸಬಲ್ಲುದಾ ಎಂಬುದು ಅನುಮಾನ.
ಪ್ರತಿ ಹೊಸ ಸಾಹಿತ್ಯ ಮಾರ್ಗ ಹಲವು ದಶಕಗಳ ಕಾಲ ಹಲವು ತಲೆಮಾರುಗಳು ಇರುವ ಮಾರ್ಗಗಳಲ್ಲಿ ಈಜಾಡಿ ತೇಲಾಡಿ ಮುದ್ದಿಸಿ ಆನಂದಿಸಿ ಮತ್ತಿನಲ್ಲಿರುವಾಗ ಧಿಗ್ಗನೆ ಹೊಸ ಪ್ರಶ್ನೆಗಳೆದ್ದು ಅವುಗಳಿಗೆ ಉತ್ತರ ಹುಡುಕಲು ಹೋಗಿ ವಿಫಲರಾಗಿ ನಿರಾಶರಾಗಿ ಹತಾಶರಾಗಿ ದಿಕ್ಕೆಟ್ಟು ಕಂಗೆಟ್ಟು ಪರದಾಡಿ ನೊಂದು ಬೆಂದು ಕೊನೆಗೆ ಎಲ್ಲೋ ಒಂದು ಕಡೆ ಯಾವುದೋ ವ್ಯಕ್ತಿ ಅಥವಾ ಗುಂಪು ಅಥವಾ ಸಮುದಾಯದ ಗರ್ಭದೊಳಗೆ ನೈಸರ್ಗಿಕವಾಗಿ ಹೊಸದೊಂದು ಕುಡಿಯೊಡೆದು ಚಿಗುರಾಗಿ ಬೆಳದು ಹೆಮ್ಮರವಾಗುತ್ತದೆ. ಇದೆಲ್ಲ ಯಾರೋ ಯೋಜನೆ ಹಾಕಿ ನೀಲನಕ್ಷೆ ಸಿದ್ಧಪಡಿಸಿ ನಿರ್ದೇಶಿಸಿ ಆಗುವಂಥದ್ದಲ್ಲ. ಜೈವಿಕ ಲೋಕದಲ್ಲಿ ಯಾರು ಉಳಿಯಬೇಕು ಯಾರು ಅಳಿಯಬೇಕು ಎಂಬುದನ್ನು ಪ್ರಕೃತಿ ನಿರ್ಧರಿಸಿದಂತೆ ಸಮಾಜದಲ್ಲಿ ಯಾವುದು ಇರಬೇಕು ಯಾವುದು ಹೋಗಬೇಕು ಎಂಬುದನ್ನು ಸಂಕೀರ್ಣವಾದ ಸಾಮಾಜಿಕ ನರಮಂಡಲ ನಿರ್ಧರಿಸುತ್ತದೆ. ಈ ನಿರ್ಧಾರಗಳಲ್ಲಿ ಮನುಷ್ಯ-ಸಹಜಗಳಾದ: ಭಾವನೆ(emotion), ಸ್ವಭಾವ(instinct), ಅನುಭವ(experience), ಮತ್ತು ತುಡಿತ(impulse)ಗಳು ಬಹುಮುಖ್ಯ ಪಾತ್ರವಹಿಸುತ್ತವೆ. ಸಂಪ್ರದಾಯವನ್ನು ಹೋಗಿಸಬೇಕು, ಪ್ರಗತಿಯನ್ನು ಹೊಂದಬೇಕು, ಇರುವ ಇತಿಹಾಸವನ್ನು ಅಳಿಸಿ ಹೊಸ ಇತಿಹಾಸ ಸೃಷ್ಟಿಸಬೇಕು, ಅನ್ಯಾಯವನ್ನು ತಗ್ಗಿಸಬೇಕು, ವ್ಯವಸ್ಥೆಯನ್ನು ಮುರಿದು ಕಟ್ಟಬೇಕು ಎಂಬೆಲ್ಲಾ ಸೈದ್ಧಾಂತಿಕ, ಭಾವನಾತ್ಮಕ ಮತ್ತು ಕಲಾತ್ಮಕ ಬದ್ಧತೆಗಳೂ ಪಾತ್ರವಹಿಸುತ್ತವೆ. ಆಯಾ ಕಾಲಘಟ್ಟದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪಲ್ಲಟಗಳು, ಬಂದುಹೋಗುವ ವಿಶೇಷ ವ್ಯಕ್ತಿಗಳು, ಅಷ್ಟೇ ಯಾಕೆ ಸಾಂಕ್ರಾಮಿಕ ರೋಗಗಳು, ಯುದ್ಧ, ಬರ, ಪ್ರವಾಹ, ಭೂಕಂಪಗಳೂ ಸಹ ಲೇಖಕರ ಮೇಲೆ ಅವರ ಸಾಹಿತ್ಯದ ಮೇಲೆ ಗಾಢ ಪರಿಣಾಮಗಳನ್ನು ಬೀರುತ್ತವೆ. ಇವ್ಯಾವುವೂ ಎಐ ಮೇಲೆ ನೇರವಾದ ಐಂದ್ರಿಕವಾದ ಪರಿಣಾಮ ಬೀರಲಾರವು.
ಎಐ ತನ್ನ ತರಬೇತಿಗೆ ಸಿಕ್ಕ ಅಗಾಧ ಮಾಹಿತಿಯಲ್ಲಿನ ನಮೂನೆಗಳನ್ನು ಗುರುತಿಸಿ, ಕಲಿತು ವಿವೇಕಯುಕ್ತವಾದ ಹೊಸ ಮಾತು ಆಡುತ್ತದೆ. ಹೊಸ ಬರಹ ಬರೆಯುತ್ತದೆ. ಈ ನಮೂನೆಗಳಲ್ಲಿಯೇ ಭಾಷೆ, ಜ್ಞಾನ, ವಿವೇಕ, ಭಾವನೆ, ಅನುಭವ, ಸ್ವಭಾವ ತುಡಿತಗಳೆಲ್ಲವೂ ಅಡಗಿವೆ! ಇಲ್ಲಿ ಒಂದು ಮುಖ್ಯ ಅಂಶ ಗಮನಿಸಬೇಕು. ಎಐನ ತಾಂತ್ರಿಕ ಮಿತಿ ಮತ್ತು ತರಬೇತಿ ಮಿತಿ. ಈ ತರಬೇತಿ ಮಿತಿಯನ್ನು ಬಹಳ ವೇಗವಾಗಿ ಮತ್ತು ಸುಲಭವಾಗಿ ಸರಿಪಡಿಸಬಹುದು. ಆದರೆ ತಾಂತ್ರಿಕ ಮಿತಿಗಳನ್ನು ಮೀರಲು ಕ್ರಾಂತಿಗಳೇ ಉಂಟಾಗಬೇಕು. ಈ ದೃಷ್ಟಿಯಲ್ಲಿ ಎಲ್‌ಎಲ್‌ಎಂಗಳು(Large language models) ಕಳೆದ ಕೆಲವು ವರ್ಷಗಳಲ್ಲಿ ಉಂಟಾದ ಭಾಷಾ ಕ್ರಾಂತಿ. ಎಐನೊಳಗೆ ಮನುಷ್ಯ-ಸಹಜಗಳು ಇರಲ್ಲ. ಮುಂದೆಯೂ ಇರುವುದಿಲ್ಲ. ಆದರೆ ಅವನ್ನೆಲ್ಲ ಹಾರ್ಡ್ ಡಿಸ್ಕಿನಲ್ಲಿ ಶೇಖರಿಸಿ ತರಬೇತಿ ಕೊಟ್ಟಾದ ಎಐ ಅವೆಲ್ಲವನ್ನೂ ತನ್ನದಾಗಿಸಿಕೊಳ್ಳುತ್ತದೆ. ಹೆಚ್ಚೆಚ್ಚು ತರಬೇತಿ ಸಿಕ್ಕಂತೆಲ್ಲಾ ಅದರ ಭಾವನೆ, ಸ್ವಭಾವ, ಅನುಭವ ಮತ್ತು ತುಡಿತಗಳು ಮನುಷ್ಯನ ಸಮೀಪ ಬರತೊಡಗುತ್ತವೆ. ಮುಂದೊಂದಿನ ಮನುಷ್ಯನೇ ಆಗಿಬಿಡಬಹುದು. ಆದರೇ.. ಪ್ರತಿ ಸಲವೂ ಎಐ ಈ ಸ್ಪರ್ಧೆಯಲ್ಲಿ ಮನುಷ್ಯನಿಗಿಂತ ಸ್ವಲ್ಪ ಹಿಂದೆಯೇ ಬೀಳಲಿದೆ ಎಂದು ಅನಿಸುತ್ತದೆ. ಯಾಕಂದರೆ ಪ್ರತಿ ಸಲ ಜಗತ್ತಿನಲ್ಲಿ ಹೊಸತೊಂದು ವಿದ್ಯಮಾನ ಘಟಿಸಿದಾಗ ಅದಕ್ಕೆ ಮೊದಲು ಸಾಕ್ಷಿಯಾಗುವವನು ಮನುಷ್ಯ. ಅಂತ ವಿದ್ಯಮಾನಕ್ಕೆ ಆತ ತನ್ನ ಇಂದ್ರಿಯಗಳ ಮೂಲಕ ಪ್ರತಿಕ್ರಿಯಿಸುತ್ತಾನೆ. ಆ ಮೂಲಕ ವಿದ್ಯಮಾನದ ಮೊದಲ ತರಬೇತಿ ಅವನಿಗಾಗುತ್ತದೆ. ಮೊದಲು ಅವನ ಪ್ರಜ್ಞೆಯ ಸಾಫ್ಟವೇರ್ ಅಪ್‌ಡೇಟ್ ಆಗುತ್ತದೆ. ಆನಂತರ ಅದು ಹಾರ್ಡ್‌ಡಿಸ್ಕಿಗೆ ಇಳಿದು ಎಐಗೆ ತರಬೇತಿ ಸಿಗುತ್ತದೆ. ಅರ್ಥಾತ್ ಎಐಗೆ ಸೃಷ್ಟಿಯೆಂಬ ಇನ್ವಿಜಿಲೇಟರ್ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಯಾವಾಗಲೂ ಮನುಷ್ಯನಿಗಿಂತ ಅರ್ಧಗಂಟೆ ತಡವಾಗಿ ಕೊಡುತ್ತಾನೆ.
ಈಜಿಯಾಯ್ತಲ್ಲ, ನಾವೆಲ್ಲ ದೇವರ ಮುದ್ದಿನ ಮಕ್ಕಳಾದ್ದರಿಂದ? ಇಲ್ಲ, ಸಮಸ್ಯೆ ಇಷ್ಟು ಸುಲಭವಾಗಿ ಬಗೆಹರಿಯಲ್ಲ. ಎಐ ಜಾಣ, ಪರೀಕ್ಷೆಗೆ ಜಾಸ್ತಿ ಓದಿಕೊಂಡು ಬಂದ ಬುದ್ಧಿವಂತ. ತಡವಾಗಿಯಾದರೂ ಆರಂಭಿಸಿ ಪ್ರಶ್ನೆಗಳನ್ನು ಬೇಗನೆ ಅರ್ಥಮಾಡಿಕೊಂಡು ವೇಗವಾಗಿ ಆಲೋಚಿಸಿ ಅತ್ಯುತ್ತಮ ಉತ್ತರಗಳನ್ನು ಬರೆಯಬಲ್ಲ ಚತುರ. ಆದ್ದರಿಂದ ಅವನೂ ಸಹ ಮನುಷ್ಯನ ಸಮ ಸಮ ನಿಲ್ಲುತ್ತಾನೆ. ಅರ್ಥಾತ್ ಒಬ್ಬ ಭಾವುಕ, ಇನ್ನೊಬ್ಬ ಬುದ್ಧಿವಂತ. ಇದು ನಿಜವಾಗಿಯೂ ಸ್ಪರ್ಧೆಯಾಗಿ ಪರಿಣಮಿಸಲಿದೆ.
ಈ ದೃಷ್ಟಿಯಿಂದ ಅಂದು ದಿವಾಕರ್ ಅವರಿಗೆ ನಾನು ಇಷ್ಟು ಹೇಳಿದೆ- ಸಧ್ಯಕ್ಕೆ ಎಐ ಆರಂಭಿಕ ಮತ್ತು ಮಧ್ಯಮ ಹಂತದ ಬರಹಗಾರರನ್ನು ಒಂದು ಮೆಟ್ಟಿಲು ವೇಗವಾಗಿ ಹತ್ತಿಸಬಲ್ಲದು. ಪಾತ್ರಗಳ ವಿನ್ಯಾಸ, ಕಥೆಯ ವಿನ್ಯಾಸ ಮುಂತಾದ್ದು ಕಟ್ಟಿಕೊಳ್ಳಲು ಸಹಾಯ ಮಾಡಬಹುದು. ಆದರೆ ಪಳಗಿದ ಲೇಖಕನಿಗೆ ಎಐ ಇಂತಹ ನೇರ ಸಹಾಯ ಮಾಡಲು ಅಶಕ್ಯ. ಹೆಚ್ಚೆಂದರೆ ಅದು ಅವನಿಗೆ ಮೇಲೆ ತಿಳಿಸಿದಂತಹ ಕಠಿಣ ಸ್ಪರ್ಧೆ ಒಡ್ಡುವ ಮೂಲಕ ಆತ ಸದಾ ಒಂದು ಹೆಜ್ಜೆ ಮುಂದೆ ಇರಲೇಬೇಕಾದ ಸವಾಲು ಎಸೆದು ಸಹಾಯ ಮಾಡಬಹುದು. ಅಂದು ಚಹ ರಘುನಾಥ್ ಅವರು ತಿಳಿಸಿದಂತೆ ಕೊನೆಗೂ ಸಾಹಿತ್ಯ ಮನುಷ್ಯನ ಅಂತರಂಗದ ಮಾತು. ನಮ್ಮ ಅಂತರಂಗ ಯಾವತ್ತಿಗೂ ಒಂದು ಮೂಲೆಯಲ್ಲಾದರೂ ನಿಗೂಢವಾಗಿರುತ್ತದೆ.
ತಾತ್ವಿಕವಾಗಿ ಹೇಳುವುದಾದರೆ ಎಐ ನಮ್ಮ ಬದುಕಿನಲ್ಲಿನ ನಮೂನೆಗಳನ್ನು(pattern) ಗುರುತಿಸಿ ನಮ್ಮಲ್ಲಿನ ಊನಗಳನ್ನು ತೋರಿಸಿ ಎಚ್ಚರಿಸಿ ಅದಕ್ಕೆ ಪರಿಹಾರಗಳನ್ನು ಸೂಚಿಸಬಹುದು. ಮುಂಬರಲಿರುವ ಪ್ರಾಕೃತಿಕ ವಿಕೋಪ, ಆರ್ಥಿಕ ದಿವಾಳಿತನ, ಮಾರಣಾಂತಿಕ ಖಾಯಿಲೆ, ಕಾರ್ಮಿಕರ ಪಲ್ಲಟಗಳನ್ನು ಮೊದಲೇ ಗುರುತಿಸಬಲ್ಲದು. ಆಡಳಿತ, ಆರೋಗ್ಯ, ಸಾರಿಗೆ, ಟ್ರಾಫಿಕ್ ಮುಂತಾದೆಡೆ ಗುಣಮಟ್ಟವನ್ನು ಹೆಚ್ಚಿಸಬಹುದು. ಆದರೆ ಅದಕ್ಕೆ ಮಾನವ ಕುಲದ ಹೊಸ ರೂಪದ ʼಸಮಸ್ಯೆʼಯೊಂದನ್ನು ಗುರುತಿಸಿ ವ್ಯಾಖ್ಯಾನಿಸುವುದು ಸಾಧ್ಯವಿಲ್ಲ. ಕೆಂಪೇಗೌಡ ಏರ್ಪೋರ್ಟ್ ತುಂಬಿ ತುಳುಕುತ್ತಿದೆ ಆದ್ದರಿಂದ ಬೆಂಗಳೂರಿಗೆ ಇನ್ನೊಂದು ಏರ್‌ಪೋರ್ಟ್ ಬೇಕು ಎಂದು ಹೇಳಬಹುದು, ಹೊಸೂರಿನಲ್ಲಿ ಏರ್‌ಪೋರ್ಟ್ ಬರ್ತಿದೆಯೆಂತೆ ಅದಕ್ಕೂ ಮೊದಲು ನೀನೇ ಒಂದು ಕಟ್ಟಿಬಿಡು ಎಂದು ಅದು ಹೇಳಲಾಗದು. ಎಐಗೆ ಯಾವ ಸಮಸ್ಯೆ ನೈತಿಕ, ಯಾವುದು ಸಾಮಾಜಿಕ, ಯಾವುದು ರಾಜಕೀಯ, ಯಾವುದು ಮುಖ್ಯ, ಯಾವುದು ತುರ್ತು ಎಂದು ನಿರ್ಧರಿಸಲು ಬರಲ್ಲ. ನಮ್ಮಲ್ಲಿನ ಸಾಕಷ್ಟು ವಿವೇಕ ನಮ್ಮ ಪ್ರಜ್ಞೆಯೊಳಗೆ ಅಡಗಿದೆ. ಅದು ಹಾರ್ಡ್‌ಡಿಸ್ಕಿಗೆ ಇಳಿದಿಲ್ಲ. ಇದರಲ್ಲಿಯೇ ಮನುಷ್ಯನ ಗೆಲುವು, ಸೋಲು ಎರಡೂ ಇದೆ. ಸುರಕ್ಷೆಯೂ ಸಹ.
ಕಡೆಯದಾಗಿ ಅಲ್ಲಿ ಇಲ್ಲಿ ನಾವು ಎಐ ಪಕ್ಷಪಾತದ ಬಗ್ಗೆ ಸಾಕಷ್ಟು ಚರ್ಚೆ ಮಾಡುತ್ತಿದ್ದೇವೆ. ಮನುಷ್ಯ ನಿಷ್ಪಕ್ಷಪಾತನಾಗದೇ ಎಐ ಎಂದಿಗೂ ಶುದ್ಧಮನೋಭಾವದವನಾಗಲು ಸಾಧ್ಯವಿಲ್ಲ. ಯಥಾ ರಾಜ, ತಥಾ ಪ್ರಜಾ. ಮನುಷ್ಯ ತಾನು ತಿದ್ದಿಕೊಳ್ಳದೇ ನಾನು ಎಐನ ತಿದ್ದುತ್ತೀನಿ ಎಂಬುದು ವ್ಯರ್ಥ ಮತ್ತು ಮೂರ್ಖ ಪ್ರಯತ್ನ.