ಕನ್ನಡ ಆಸ್ಕಿ ಮತ್ತು ಯುನಿಕೋಡ್ ವ್ಯತ್ಯಾಸ

Blog post description.

4/16/20251 min read

ಕನ್ನಡಿಗರಿಗೆ ಇದೊಂದು ತಾಂತ್ರಿಕ ಮಾಹಿತಿ ಗೊತ್ತಿದ್ದಲ್ಲಿ ಅನುಕೂಲವಾಗುತ್ತೆ ಅಂತ-

ಆಸ್ಕಿ ಮತ್ತು ಯುನಿಕೋಡ್‌ ನಡುವಿನ ವ್ಯತ್ಯಾಸವೇನು?

ಒಂದಾನೊಂದು ಕಾಲದಲ್ಲಿ(1960s) ಕಂಪ್ಯೂಟರು ಮೊದಲ ಸಲ ಜಗತ್ತಿಗೆ ಕಾಲಿಟ್ಟಾಗ ಆಗಿನ್ನೂ ಅದು ಎಳಸು ಇದ್ದು ಆಗಿನ ಅಗತ್ಯ ಅದಕ್ಕೆ ಕೇವಲ ಇಂಗ್ಲೀಷನ್ನು ಮಾತ್ರ ಅರ್ಥ ಮಾಡಿಸುವುದಾಗಿದ್ದು ಮತ್ತು ಅದಕ್ಕೆ ಕೇವಲ ಒಂದು-ಸೊನ್ನೆ(ಬಿಟ್) ಅರ್ಥವಾಗುತ್ತಿದ್ದರಿಂದ ಇಂಗ್ಲೀಷನ್ನು ಬಿಟ್‌ಗೆ ಭಾಷಾಂತರ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಅದಕ್ಕಾಗಿ 7 ಬಿಟ್‌ಗಳನ್ನು ನಿಗದಿ ಮಾಡಲಾಯಿತು. ಆಗಿನ ಕಂಪ್ಯೂಟರಿನ ಶಕ್ತಿ ಎಂಟು ಬಿಟ್‌ಗಳಾಗಿದ್ದು ಎಂಟನೆಯ ಬಿಟ್‌ಅನ್ನು ಎರರ್‌ ಚೆಕಿಂಗಿಗೆ ಎತ್ತಿಡಲಾಗಿತ್ತು.(ಗಮನಿಸಿ: ನಮ್ಮ ಈಗಿನ ಕಂಪ್ಯೂಟರುಗಳು 64 ಬಿಟ್‌ ಶಕ್ತಿಶಾಲಿಯಾಗಿವೆ). ಮನುಷ್ಯನ ಸಂಖ್ಯಾಶಾಸ್ತ್ರದಲ್ಲಿ 0-9 ಅಂದರೆ ಒಟ್ಟು ಹತ್ತು ಸಂಖ್ಯೆಗಳು ಇದಾವೆ. ಇದಕ್ಕಿಂತ ಜಾಸ್ತಿ ಬೇಕಂದರೆ ಎರಡು ಸಂಖ್ಯೆಗಳನ್ನು ಅಕ್ಕಪಕ್ಕ ಜೋಡಿಸಿಬೇಕು. ಹಾಗೆ ಮಾಡಿದಾಗ ನಮಗೆ 00-99 ಅಂದರೆ ಒಟ್ಟು ನೂರು ಸಂಖ್ಯೆಗಳು ಸಿಗುತ್ತವೆ. ಅದೇ ರೀತಿ 7 ಬಿಟ್‌ಗಳನ್ನು ಅಕ್ಕಪಕ್ಕ ಜೋಡಿಸಿದಾಗ ನಮಗೆ 128 ಸಂಖ್ಯೆಗಳು ಅಥವಾ ಕೋಡ್‌ಗಳು ದೊರೆಯುತ್ತವೆ. ಇಂಗ್ಲೀಷಿನ A-Z, a-z, 0-9, . , ? ! @ # ಹಾಳುಮೂಳು ಸೇರಿ ಒಟ್ಟು ನೂರಿಪ್ಪತ್ತೆಂಟು ಮನುಷ್ಯ ಭಾಷೆಯ ಚಿನ್ಹೆಗಳನ್ನು ನೂರಿಪ್ಪತ್ತೆಂಟು ಕೋಡ್‌ಗಳಿಗೆ ನಿಗದಿ ಮಾಡಿ ಮೊದಲ ಸಲ ಮನುಷ್ಯ ಭಾಷೆಯನ್ನು ಕಂಪ್ಯೂಟರಿಗೆ ಭಾಷಾಂತರಿಸಿ ಅರ್ಥ ಮಾಡಿಸಲಾಯಿತು. ಇದೇ ಮತ್ತು ಇಷ್ಟೇ ಆಸ್ಕಿ ಕೋಡ್. ಉದಾಹರಣೆಗೆ ಇಂಗ್ಲೀಷಿನ ಅಕ್ಷರ A ಗೆ ನಿಗದಿಯಾಗಿರುವುದು 65ನೇ ಆಸ್ಕಿ ಕೋಡ್‌(01000001).

ಸರಿ ಇರುವ 128 ಸಂಖ್ಯೆಗಳನ್ನು ಬರೀ ಇಂಗ್ಲೀಷಿಗೆ ಖರ್ಚು ಮಾಡಿಬಿಟ್ಟರೆ ಉಳಿದ ಭಾಷೆಗಳು ಏನು ಮಾಡಬೇಕು? ಹೊಸ ಕೋಡ್‌ಗಳು ಬೇಕು. ಅಂದರೆ ಇನ್ನಷ್ಟು ಒಂದು-ಸೊನ್ನೆಗಳನ್ನು ಬಳಸಬೇಕು. ಹೀಗೆ ಯೋಚಿಸಿದಾಗ ಹುಟ್ಟಿದ್ದೇ ಯೂನಿವರ್ಸಲ್‌ ಕ್ಯಾರಕ್ಟರ್‌ ಎಂಕೋಡಿಂಗ್ (ಯೂನಿಕೋಡ್).‌

ನಮ್ಮಲ್ಲಿ ಮೂರು ಸಂಖ್ಯೆಗಳನ್ನು ಅಕ್ಕಪಕ್ಕ ಇಟ್ಟರೆ 000-999 ಒಟ್ಟು ಸಾವಿರ ಸಂಖ್ಯೆಗಳು ಸಿಗುತ್ತವಲ್ವ ಹಾಗೆ ಯುನಿಕೋಡಿನಲ್ಲಿ ಎಂಟರ ಬದಲಾಗಿ ಹದಿನಾರು ಬಿಟ್‌ಗಳನ್ನು ಎತ್ತಿಟ್ಟರು. ಇದರಿಂದಾಗಿ ಏಕ್ದಂ ಅರವತ್ತೈದು ಸಾವಿರ ಹೊಸ ಕೋಡ್‌ಗಳು ಸಿಕ್ಕಂತಾಯಿತು. ಯಾವುದಕ್ಕೂ ಇರಲಿ ಎಂದು ಹೆಚ್ಚುವರಿಯಾಗಿ ಇನ್ನು ಹದಿನಾರು ಬಿಟ್‌ ಎತ್ತಿಟ್ಟಿದ್ದರು. ಮೊದಲ ಹದಿನಾರು ಬಿಟ್‌ ಬಳಸಿಕೊಂಡು ಪ್ರತಿ ಭಾಷೆಯ ಪ್ರತಿ ಅಕ್ಷರಕ್ಕೆ ಹೊಸ ಕೋಡ್‌ ಕೊಡುತ್ತಾ ಹೋದರು. ಆಗ ಏನಾಯಿತೆಂದರೆ ಅಲ್ಲಿ ತನಕ ಆಸ್ಕಿ ಬಳಸುತ್ತಿದ್ದವರೆಲ್ಲ ನಿಮ್ಮ ಯುನಿಕೋಡ್‌ನಿಂದಾಗಿ ನಮ್ಮ ಹಳೆಯ ಬರಹವೆಲ್ಲಾ ಗಜಿಬಿಜಿಯಾಗುತ್ತಿದೆ ಎಂದು ಬಾಯಿ ಬಡಿದುಕೊಂಡರು. ತಂತ್ರಜ್ಞರು ʼಅರರೆ ನಮ್ಮ ಪೂರ್ವಿಕರ ಕಷ್ಟವನ್ನೂ ಆಲಿಸಬೇಕಲ್ಲಾʼ ಎಂದು ಮನಸು ಬದಲಾಯಿಸಿ ಯುನಿಕೋಡಿನ ಮೊದಲ 128 ಕೋಡುಗಳನ್ನು ಮೂಲ ಆಸ್ಕಿಯಲ್ಲಿದ್ದಂತೆಯೇ ಇಂಗ್ಲೀಷಿಗೆ ನಿಗದಿ ಮಾಡಿದರು. ಮೊದಲು ತಂದದ್ದು UTF-16 ಎಂದು ಕರೆದರು, ಆಸ್ಕಿ ಗೋಳಾಟಕ್ಕಾಗಿ ತಿದ್ದುಪಡಿ ಮಾಡಿದ್ದನ್ನು UTF-8 ಎಂದು ಕರೆದರು. ಆದ್ದರಿಂದಲೇ ಗಮನಿಸಿದ್ದಲ್ಲಿ ನಿಮ್ಮ ವರ್ಡ್‌ ಫೈಲಿನಲ್ಲಿ ಆಸ್ಕಿಯಿಂದ ಯೂನಿಕೋಡಿಗೆ ಅಥವಾ ಯುನಿಕೋಡಿಂದ ಆಸ್ಕಿಗೆ ಬದಲಾಯಿಸಿದಾಗ ಕನ್ನಡ ಅಕ್ಷರಗಳು ಗಜಿಬಿಜಿಯಾಗುತ್ತವೇ ವಿನಾ ಇಂಗ್ಲೀಷಿನದು ಅಲ್ಲ. ಇದು ಯಾಕಂದರೆ ಡೀಫಾಲ್ಟ್‌ ಯೂನಿಕೋಡ್‌ UTF-8 ಸೆಟ್‌ ಆಗಿರುತ್ತದೆ.

ಇದರ ನಂತರ ಇನ್ನೂ ಒಂದು ಹೊಸ ಸಮಸ್ಯೆ ಹುಟ್ಟಿಕೊಂಡಿತು. ಆಗಲೇ ಹೇಳಿದಂತೆ ಮೂರು ಸಂಖ್ಯೆಗಳನ್ನು ಜೋಡಿಸಿದರೆ ಒಟ್ಟು ಸಾವಿರ ಸಂಖ್ಯೆಗಳು ಸಿಗುತ್ತವೆ ಎಂದೆನಲ್ಲಾ ಅದರಲ್ಲಿ ನೀವು 99 ಸಂಖ್ಯೆಯನ್ನು 099 ಎಂದು ಬರೆಯೋದಿಲ್ಲ ಅಲ್ಲವಾ? UTF-8ನಲ್ಲಿಯೂ ಹಾಗೇ ಆರಂಭದಲ್ಲಿ ಬರುವ ಇಂಗ್ಲೀಷಿನ ಅಕ್ಷರಗಳನ್ನು 8 ಬಿಟ್‌ಗಳಲ್ಲಿ ಬರೆದು ಮುಗಿಸಿಬಿಡುತ್ತಿದ್ದರು. ಕನ್ನಡದಂಥ ಅಕ್ಷರಗಳಿಗೆ ಮಾತ್ರ ಹೆಚ್ಚಿನ ಬಿಟ್‌ಗಳನ್ನು ಬಳಸುತ್ತಿದ್ದರು. ಕಂಪ್ಯೂಟರಿನ ಕೆಲವು ಕಡೆ ಇದು ತೊಂದರೆ ಕೊಡಲಾರಂಭಿಸಿತು. ಅಂದ್ರೆ 999 ಎಂಬುದನ್ನು 9 ಮತ್ತು 99 ಎಂದೂ ಓದಬಹುದಲ್ಲ, ಅಂತಹ ಗೊಂದಲ. ಆದ್ದರಿಂದ ಎಲ್ಲಾ ಅಕ್ಷರಗಳಿಗೂ ಕಡ್ಡಾಯವಾಗಿ 32 ಒಂದು-ಸೊನ್ನೆಗಳನ್ನು ಬಳಸಲೇಬೇಕು ಎಂಬ ನಿಯಮ ಹೊರಡಿಸಿದರು. ಅಂತಹ ನಿಯಮ ಹೊತ್ತ ಎಂಕೋಡಿಂಗ್‌ ಅನ್ನು UTF-32 ಎಂದು ಕರೆದರು.

ಆದರೆ ಜನ ಇದನ್ನು ಎರಡೂ ತೋಳು ಅಗಲಿಸಿ ಬಾಚಿ ತಬ್ಬಿಕೊಳ್ಳಲಿಲ್ಲ. ಯಾಕಂದರೆ ಒಂದು ಬೈಟ್‌ ಜಾಗದಲ್ಲಿ ನಾಲ್ಕು ಬೈಟ್‌ ಬಳಸಿ ಸುಮ್ಮನೇ ಮೂರು ಬೈಟ್‌ ದಂಡ ಮಾಡುವುದು ಸಮಂಜಸ ಅನ್ನಿಸಲಿಲ್ಲ. ಉದಾಹರಣೆಗೆ ಒಂದು ಮೆಗಾ ಬೈಟ್‌ ಸೈಜಿನ (ಇಂಗ್ಲೀಷಿನ) ವರ್ಡ್‌ ಫೈಲನ್ನು ಸುಮ್ಮ ಸುಮ್ಮನೇ ನಾಲ್ಕು ಮೆಗಾ ಬೈಟ್‌ ಸೈಜ್‌ಗೆ ಏರಿಸಿದರೆ ಇಂಟರ್ನೆಟ್‌ ಸ್ಪೀಡು ದಂಡ ಅನಿಸುವುದಿಲ್ಲವೇ?

ಹಾಗಾಗಿ ಇಂದು ಜಗತ್ತಿನಾದ್ಯಂತ ಯೂನಿಕೋಡ್‌, ಅದರಲ್ಲಿಯೂ UTF-8 ಮಾತ್ರ ವ್ಯಾಪಕ ಬಳಕೆಯಲ್ಲಿದೆ. ನೀವು ಏನು ಮಾಡ್ತಿದ್ದೀರಿ ಎಂದು ನಿಮಗೆ ಗೊತ್ತಿದ್ದರೆ ಮಾತ್ರ UTF-16 ಅಥವಾ UTF-32 ಬಳಸಬಹುದಾಗಿದೆ.

ಆರಂಭದಲ್ಲಿ ಹೇಳಿದಂತೆ ಕಂಪ್ಯೂಟರು ಹುಟ್ಟಿದಾಗ ಶುರುವಾತಿನಲ್ಲಿ ಆಸ್ಕಿ ವ್ಯವಸ್ಥೆ ಇತ್ತು. ಮೊಬೈಲ್‌ಗಳು ಬರುವಷ್ಟರಲ್ಲಿ ಯುನಿಕೋಡ್‌ ಬಂದಾಗಿತ್ತು. ಆದ್ದರಿಂದಲೇ ನೀವು ಬರಹ ನುಡಿ ಮುಂತಾದ್ದು ಬಳಸಿ ಆಸ್ಕಿ ಕೋಡಿನಲ್ಲಿ ಬರೆದ ಕನ್ನಡವನ್ನು ಮೊಬೈಲಿನಲ್ಲಿ ತೆರೆಯಲಾಗಲ್ಲ. ಯಾಕಂದರೆ ಮೊಬೈಲಿಗೆ ಆ ಕೋಡ್‌ವರ್ಡ್ಗಳು ಅರ್ಥವಾಗಲ್ಲ.

ಇಷ್ಟು ಅರ್ಥವಾಗಿದ್ದಲ್ಲಿ ಅಕಸ್ಮಾತ್‌ ನಿಮ್ಮ ಕಣ್ಣಿಗೆ ʼಅರೆ ಈ ಕನ್ನಡ ಅಕ್ಷರ ಕಂಪ್ಯೂಟರಿನಲ್ಲಿ ಇಲ್ಲವಲ್ಲಪ್ಪʼ ಅನಿಸಿದರೆ ಅಗತ್ಯವಾಗಿ ಅದನ್ನು ಯೂನಿಕೋಡ್‌ ಸಂಸ್ಥೆಯ ಗಮನಕ್ಕೆ ತರಬಹುದು. ಅವರು ಅದಕ್ಕೆ ಒಂದು ಕೋಡ್‌ ನಿಗದಿ ಮಾಡುತ್ತಾರೆ. ಆನಂತರ ಫಾಂಟ್‌ ಡೆವಲಪ್‌ ಮಾಡುವವರು ಹೊಸ ಅಕ್ಷರವನ್ನು ವಿನ್ಯಾಸ ಮಾಡಿ ನಿಗದಿಯಾಗಿರುವ ಯೂನಿಕೋಡ್‌ ಸೆಟ್‌ ಮಾಡಿ ತಮ್ಮ ಫಾಂಟಿನಲ್ಲಿ ಸೇರಿಸಬೇಕಾಗುತ್ತದೆ.

(ಕನ್ನಡದ ದಿನಪತ್ರಿಕೆಗಳು ಪುಸ್ತಕ ಮುದ್ರಕರು ಇನ್ನು ಆಸ್ಕಿ ಬಳಸುತ್ತಿದಾರೆ ಎಂಬುದು ಆಶ್ಚರ್ಯ, ವಿಸ್ಮಯ, ಬೆರಗಿನ ಸಂಗತಿ).

ಹಾಗಾದರೆ, ಇಷ್ಟೂ ದಿವಸ ನಾವು ಕನ್ನಡದಲ್ಲಿ ಆಸ್ಕಿ ಫಾಂಟು ಅಂತ ಮಾತಾಡುತ್ತಿದ್ದೆವಲ್ಲ, ಅದು ಹೇಗೆ? ಕನ್ನಡ ದಿನಪತ್ರಿಕೆಗಳು ಮತ್ತು ಪುಸ್ತಕ ಮುದ್ರಕರು ಇನ್ನೂ ಆಸ್ಕಿಗೆ ಅಂಟಿಕೊಂಡಿದ್ದಾರೆ ಎಂದು ಸಹ ಕಡೆಯ ಸಾಲಿನಲ್ಲಿ ಬರೆದಿದ್ದೆ.

ಉತ್ತರ ಹೀಗಿದೆ.

ಕನ್ನಡ ಆಸ್ಕಿ ಫಾಂಟ್‌ ಎಂಬುದು ಒಂಥರಾ ಜುಗಾಡ್‌ ಎಂಜಿನೀರಿಂಗ್. ತಂತ್ರಜ್ಞರು ಎಂಟು ಬಿಟ್‌ ಶಕ್ತಿಯ ಕಂಪ್ಯೂಟರುಗಳಲ್ಲಿ ಏಳು ಬಿಟ್‌ಗಳ ನೂರಿಪ್ಪತ್ತೆಂಟು ಕೋಡುಗಳನ್ನು ಇಂಗ್ಲೀಷ್‌ ಅಕ್ಷರಗಳಿಗೆ ಬಳಸಿಕೊಂಡಿದ್ದರು ಎಂದಿದ್ದೆನಲ್ಲಾ, ಕನ್ನಡ ತಂತ್ರಜ್ಞರು ಈ ABCDಗಳ ಜಾಗದಲ್ಲಿ ಕನ್ನಡದ ಅ ಆ ಇ ಈ ಕೂರಿಸಿಬಿಟ್ಟು ಅದನ್ನೇ ಕನ್ನಡದ ಆಸ್ಕಿ ಫಾಂಟ್( ನುಡಿ) ಎಂದು ಕರೆದುಬಿಟ್ಟರು. ನೀವು ಕೀಬೋರ್ಡಿನಲ್ಲಿ A ಎಂದು ಒತ್ತಿದಾಗ ಕಣ್ಣ ಮುಂದೆ ಇಂಗ್ಲೀಷಿನ A ಬರುವ ಬದಲು ಕನ್ನಡದ ಅನುಸ್ವಾರ(ಂ) ಬರುವಂತೆ, C ಒತ್ತಿದರೆ ಕನ್ನಡದ 'ಅ' ಬರುವಂತೆ ಮಾಡಿದರು. (ಇಲ್ಲಿ ಕೊಟ್ಟಿರುವ ಚಿತ್ರದಲ್ಲಿ 128 ಬದಲಾಗಿ 256 ಅಕ್ಷರಗಳ ಎಂಕೋಡಿಂಗ್‌ ಇದೆ. ಕಾರಣ ಕನ್ನಡ ಫಾಂಟುಗಳು extended ascii ಅಂದರೆ ಎಂಟನೇ ಬಿಟ್ಟನ್ನೂ ಸೇರಿಸಿಕೊಂಡು ಮ್ಯಾಪಿಂಗ್‌ ಮಾಡಿದ್ದಾರೆ).

ಅಧಿಕೃತವಾಗಿ ಲ್ಯಾಟಿನ್‌(ಇಂಗ್ಲೀಷ್) ಅಕ್ಷರಗಳಿಗೆ ಸೀಮಿತವಾಗಿದ್ದ ಕೋಡ್‌ಪಾಯಿಂಟ್‌ಗಳನ್ನು ಕನ್ನಡ ಅಕ್ಷರಗಳಿಗೆ ಬಳಸಿಕೊಂಡು ಕನ್ನಡದ್ದೇ ಆಸ್ಕಿ ಎಂಕೋಂಡಿಂಗ್‌ ಮಾಡಿದರು.

ಇಷ್ಟು ಅರ್ಥವಾಗಿದ್ದರೆ ಕೆಲವು ಸಂಗತಿಗಳು ಅರೆ ಇದು ಯಾಕೆ ಹೀಗೆ? ಎಂದಿದ್ದ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.

೧. ವರ್ಡಲ್ಲಿ ಸಿಕ್ಕಾಪಟ್ಟೆ ʼಓಣಜುʼ ಫಾಂಟುಗಳು ಕಾಣಿಸ್ತವಲ್ಲ ಯಾಕೆ?

n- ಓ

u- ಣ

d- ಜ

i- (ಉ ಕಾರ).

ಅಂದರೆ ಇಂಗ್ಲೀಷಿನಲ್ಲಿ nudi ಎಂದು ಟೈಪಿಸಿದಾಗ ಕನ್ನಡದಲ್ಲಿ ಓಣಜು ಎಂದು ತೋರಿಸುತ್ತದೆ.‌ ಅಂದರೆ ಇವೆಲ್ಲವೂ ನುಡಿಯ ಆಸ್ಕಿ ಫಾಂಟುಗಳು.

೨. ಎಷ್ಟೋ ಸಲ ಕನ್ನಡ ಅಕ್ಷರಗಳೊಂದಿಗೆ ಹೊಡೆದಾಡುವಾಗ ತಲೆ ಮೇಲೆ ಜುಟ್ಟಿರುವ AAEEO ಗಳಂತಹ ವಿದೇಶಿ ಅಕ್ಷರಗಳು ಧಿಗ್ಗನೆ ಎದುರಾಗುತ್ತವಲ್ಲ ಯಾಕೆ? ಜುಟ್ಟಿರುವ ಲ್ಯಾಟಿನ್‌ ಅಕ್ಷರಗಳಿಗೆ ಕನ್ನಡದ ಆಸ್ಕಿ ಫಾಂಟಿನಲ್ಲಿ ಕೊಂಬು ಕಹಳೆ ಅಕಾರ ಇಕಾರ ದೀರ್ಘಗಳನ್ನು ಮ್ಯಾಪ್‌ ಮಾಡಿದ್ದಾರೆ. ಹಂಗಾಗಿ ನುಡಿ ಆಸ್ಕಿಯಲ್ಲಿ ಬರೆದ ಕನ್ನಡವನ್ನು ಯುನಿಕೋಡಿನ ಫಾಂಟಿಗೆ ಬದಲಾಯಿಸಿದಾಗ ಕೊಂಬುಕಹಳೆಗಳೆಲ್ಲಾ AAEEಗಳಾಗಿ ಭಾಷಾಂತರಗೊಂಡು ಗಾಬರಿ ಬೀಳಿಸುತ್ತವೆ.

೩. ಕೆಲವೊಮ್ಮೆ ನೀವು ಯುನಿಕೋಡಿನಲ್ಲಿ ಬರೆದುಕೊಟ್ಟ ಪುಸ್ತಕವನ್ನು ಎಡಿಟರುಗಳು ಎಡಿಟ್‌ ಮಾಡಿ ವಾಪಸ್‌ ಕೊಟ್ಟಾಗಲೂ ಇವು ಅಲ್ಲೊಂದು ಇಲ್ಲೊಂದು ಸೇರಿಕೊಂಡಿರುತ್ತವೆ. ಕಾರಣ ಡಿಟಿಪಿ ಮಾಡುವವರಿಗೆ ಆಸ್ಕಿ ಪ್ರಿಯವಾಗಿದ್ದು ಎಲ್ಲೆಲ್ಲಿ ಅಕ್ಷರ ಸರಿಯಾಗಿ ಕೂರಿಸಬೇಕು ಅಂತಿರುತ್ತೋ ಅಲ್ಲೆಲ್ಲ ಆಸ್ಕಿ ಕೋಡಿನ ಕನ್ನಡ ಅಕ್ಷರಗಳನ್ನು ತೂರಿಸಿರುತ್ತಾರೆ.

೪. ಈಗಿನ ಬಹುತೇಕ ಮೊಬೈಲ್‌ಗಳು ಆಸ್ಕಿ ಎಂಕೋಡಿಂಗ್‌ ಅನ್ನು ಸಪೋರ್ಟ್‌ ಮಾಡಲ್ಲ. ಆದಾಗ್ಯೂ ನೀವು ಕನ್ನಡದ ಆಸ್ಕಿ ಫಾಂಟುಗಳನ್ನು ಮೊಬೈಲಿನಲ್ಲಿ ಸೆಟ್‌ ಮಾಡಿಕೊಂಡಾಗ ಆಸ್ಕಿಯಲ್ಲಿ ಬರೆದ ಕನ್ನಡವೂ ಮೊಬೈಲ್‌ ಪರದೆ ಮೇಲೆ ಮುದ ನೀಡುವ ಕನ್ನಡದ ದುಂಡು ಅಕ್ಷರಗಳಾಗಿ ಕಂಗೊಳಿಸುತ್ತವೆ. ಮೊಬೈಲಿಗೆ ಗೊತ್ತಿರಲ್ಲ ನಾವು ಜುಗಾಡ್‌ ಮಾಡಿದ್ದೇವೆ ಎಂದು.

೫. ಇಂಗ್ಲೀಷ್‌ ಲೆಟರುಗಳಿಗೆ ಕನ್ನಡ ಅಕ್ಷರಗಳನ್ನು ಮ್ಯಾಪಿಂಗ್‌ ಮಾಡಿರುವುದರಿಂದ ಕನ್ನಡದ ಆಸ್ಕಿ ಫಾಂಟಿನ ಮೂಲಕ ನೀವು ಜಪ್ಪಯ್ಯ ಅಂದರೂ ಇಂಗ್ಲೀಷ್‌ ಲೆಟರುಗಳನ್ನು ಟೈಪಿಸಲಾರಿರಿ. ಆದರೆ ಕನ್ನಡದ ಯುನಿಕೋಡ್‌ ಫಾಂಟುಗಳಲ್ಲಿದ್ದುಕೊಂಡೇ ಯುನಿಕೋಡ್‌ ಎಂಜಿನ್‌ ಆಫ್‌ ಮಾಡಿ ಇಂಗ್ಲೀಷ್‌ ಲೆಟರುಗಳನ್ನು ಟೈಪಿಸಬಹುದು. ಯಾಕಂದರೆ ಯುನಿಕೋಡಿನಲ್ಲಿ ಇಂಗ್ಲೀಷ್‌ ಮತ್ತು ಕನ್ನಡ ಎರಡಕ್ಕೂ ಬೇರೆ ಬೇರೆ ಕೋಡ್‌ ಪಾಯಿಂಟುಗಳು ಇರುತ್ತವೆ.

೬. ಗಮನಿಸಿದ್ದರೆ ಕನ್ನಡದವನ್ನು ಆಸ್ಕಿಯಿಂದ ಯುನಿಕೋಡಿಗೆ ಬದಲಾಯಿಸಿದಾಗ ಅಕ್ಷರಗಳಷ್ಟೇ ಗಜಿಬಿಜಿಯಾಗುತ್ತವೆ. ಕನ್ನಡ ಸಂಖ್ಯೆಗಳು ಹಂಗೇ ಇರುತ್ತವೆ. ಇದು ಯಾಕಂದರೆ ಕನ್ನಡದ ಸಂಖ್ಯೆಗಳಿಗೆ ಅವುಗಳದೇ ಆದ ವಿಶಿಷ್ಠ ಕೋಡ್‌ ಪಾಯಿಂಟ್‌ ಇದ್ದರೂ ಸಹ ನಮ್ಮ ಯುನಿಕೋಡ್‌ ಫಾಂಟುಗಳಲ್ಲಿ ಇಂಗ್ಲೀಷ್‌ ಸಂಖ್ಯೆಗಳಿಗೆ ಕನ್ನಡ ಸಂಖ್ಯೆಗಳನ್ನು ಮ್ಯಾಪ್‌ ಮಾಡಲಾಗಿದೆ.