ಬೆಂಗಳೂರು ಏರ್ ಶೋ
Blog post description.
4/16/20251 min read


ಹಕ್ಕಿಪಲ್ಟಿ
ಕನ್ನಡದ ದಿವಂಗತ ಕವಿ ಜೀವಯಾನ ಮಂಜುನಾಥ್ ಅವರ ಒಂದು ಕವಿತೆ ʼಹಕ್ಕಿಪಲ್ಟಿʼ ಎಂದು. ಕವಿ ಒಂದು ದಿನ ಕೂತು ತನ್ನ ಆಲಸ್ಯದಿಂದಾಗಿಯೋ, ಅವಕಾಶವಂಚಿತನಾಗಿಯೋ ಅಥವಾ ತನ್ನ ಕೈಲಿಲ್ಲದ ಕೇವಲ ಆಕಸ್ಮಿಕಗಳೇ ತುಂಬಿರುವ ಬದುಕಿನಿಂದಾಗಿಯೋ ತಾನು ಏನೆಲ್ಲ ಕಳೆದುಕೊಂಡಿರಬಹುದು ಎಂದು ಲೆಕ್ಕ ಹಾಕುತ್ತ ಅವನಿಗೆ ಅಳು ಬಂದುಬಿಡುತ್ತದೆ. ಸುತ್ತಲಿನ ಜನರನ್ನು ನೋಡುತ್ತ ತಾನೂ ಇವರಂತಾಗಬಹುದಿತ್ತು ಎಂದು ಅನಿಸುತ್ತದೆ. ಹಣ ಗಳಿಸಿದವನೊಬ್ಬ. ಹೆಣ್ಣು ಗಳಿಸಿದವನೊಬ್ಬ. ಇನ್ಯಾರಿಗೋ ಜ್ಞಾನ, ಪ್ರತಿಭೆ- ಕವಿಗೆ ಅವರೆಲ್ಲರ ಸಾಧನೆಗಳಿಂದ ಹೊಟ್ಟೆಕಿಚ್ಚಾಗುತ್ತದೆ. ಮಂಕು ಕೋಣೆಯಲ್ಲಿ ಮರದ ಮೇಜಿನ ಮೇಲೆ ಕುಳಿತು ಕಾಂತಿಹೀನ ಮೇಕೆ ಕಣ್ಣುಗಳ ತಪಸ್ವಿಯಂತೆ ಎತ್ತಲೋ ದಿಟ್ಟಿಸುತ್ತ ನಾನೂ ಸಹ ಏನೇನೋ ಆಗಬಹುದಿತ್ತು ಎಂದು ನೊಂದುಕೊಳ್ಳುತ್ತಿರುವಾಗ ಆತನಿಗೆ ಕಿಟಕಿಯಾಚೆ ಅಸ್ಪಷ್ಟವಾಗಿ ಆಕಾಶದಲ್ಲಿ ಒಂದು ಹಕ್ಕಿ ಪಲ್ಟಿ ಹೊಡೆಯುತ್ತಿರುವುದು ಗೋಚರಿಸುತ್ತದೆ. ಕವಿಗೆ ರೋಮಾಂಚನವಾಗುತ್ತದೆ. ಚೇತನ ಹಿಗ್ಗುತ್ತದೆ.
ಆ ಕ್ಷಣ ಕವಿಗೆ ಹೊಸತೊಂದು ಜೀವನದರ್ಶನ ಹೊಳೆಯುತ್ತದೆ- ನಾವು ನಿಜವಾಗಲೂ ಏನಾದರೂ ʼಆಗಲೇಬೇಕೇʼ? ಹಕ್ಕಿಯೊಂದರ ಪಲ್ಟಿಯನ್ನು ಗಮನಿಸುವ, ಬೆರಗಾಗುವ ಶಕ್ಯವಿದ್ದರೆ ಸಾಲದೇ? ಇದರ ಹೊರತು ನಾವು ಏನೇನೋ ಆಗಬೇಕು ಎಂದು ಬಡಿದಾಡುವುದೆಲ್ಲವೂ ಜಗವನ್ನು ಮೆಚ್ಚಿಸಲು ಅಷ್ಟೇ ತಾನೇ?
ಮೊನ್ನೆ ಶುಕ್ರವಾರ ನಾನು ಬೆಂಗಳೂರಿನ ಯಲಹಂಕದಲ್ಲಿ ಜರುಗಿದ ಏರೋ ಇಂಡಿಯಾ ಪ್ರದರ್ಶನ ವೀಕ್ಷಿಸಲು ಹೋಗಿದ್ದಾಗ ನನಗುಂಟಾದ ಅನುಭವವಿದು. ಭಾರತವೂ ಸೇರಿದಂತೆ ಹಲವು ಮುಂದುವರೆದ ದೇಶಗಳ ಲೋಹದ ಹಕ್ಕಿಗಳು ಬೆಳಗಿಂದ ಸಂಜೆಯ ತನಕ ನಮ್ಮೆದುರು ನಮ್ಮ ಕೌತುಕವನ್ನು ತಣಿಸಲೆಂದೇ, ರಂಜಿಸಲೆಂದೇ ಆಕಾಶದುದ್ದಗಲ ಹಾರಾಡುತ್ತಾ ಪಲ್ಟಿ ಹೊಡೆಯುತ್ತಾ ಸುಯ್ಯನೆ ಏರುತ್ತಾ ಜರ್ರನೆ ಇಳಿಯುತ್ತಾ ಥಟ್ಟನೆ ತಿರುಗುತ್ತಾ.. ಬಾನು ಕಂಪಿಸುವಂತೆ ಘರ್ಜಿಸುತ್ತಾ.. ಆಹಾ ಮಾನವನ ಕಲ್ಪನಾಶಕ್ತಿಗೆ ಅದನ್ನು ವಾಸ್ತವಗೊಳಿಸುವ ಚತುರತೆಗೆ ಶರಣೋ ಶರಣು. ಏನು ನೋಡಿದರೂ ಎಷ್ಟು ನೋಡಿದರೂ ಸಾಲದು… ಒಂದು ಜೀವನ ಸಾಲದು.
ನೀವು ಡಾಲ್ಫಿನ್ ಶೋಗೆ ಸಾಕ್ಷಿಯಾಗಿದ್ದರೆ ಇದೂ ಹಾಗೇ ಅನಿಸಿರುತ್ತದೆ. ಇವುಗಳಿಗೆ ಇಷ್ಟೊಂದು ಬುದ್ಧಿ, ಕೌಶಲ್ಯ ಹೇಗೆ ಬಂತು ಎಂದು ಅಚ್ಚರಿಗೊಳ್ಳುವಂತೆ ಡಾಲ್ಫಿನ್‌ಗಳು ಕೊಳದಲ್ಲಿ ಸರ್ಕಸ್ ಮಾಡುತ್ತವೆ. ನೀರಲ್ಲಿದ್ದವು ಥಟ್ಟನೆ ಮುಗಿಲಿಗೆ ಹಾರಿ ಆಲಸ್ಯದಿಂದ ಕೆಳಗೆ ಬೀಳುತ್ತವೆ. ಕೊಳದ ಕಟ್ಟೆಯ ಮೇಲೆ ಬಾಲದ ಮೇಲೆ ನಿಂತು ನಡೆಯುತ್ತವೆ, ನರ್ತಿಸುತ್ತವೆ. ಗಾರುಡಿಗನ್ನು ಮೂತಿಯ ಮೇಲೆ ಕೂರಿಸಿಕೊಂಡು ಕೊಳದ ಸುತ್ತು ಹೊಡೆಸುತ್ತವೆ. ಈ ಲೋಹದ ಹಕ್ಕಿಗಳೂ ಡಿಟ್ಟೋ ಹಾಗೆ. ನೆಲದಿಂದ ಹಾರುತ್ತಲೇ ಮೂತಿಯನ್ನು ಮೇಲ್ಮುಖ ಮಾಡಿ ಅನಂತ ಆಕಾಶವನ್ನು ಬೇಧಿಸುತ್ತ ಕೆಲವೇ ಕ್ಷಣಗಳಲ್ಲಿ ಕಣ್ಮರೆಯಾಗುತ್ತವೆ. ಸೊಲ್ಪ ಹೊತ್ತು ನಿಶಬ್ಧ. ತದನಂತರ ಅದೇ ಜಾಗದಿಂದ ಮದ್ಯಾನದ ಊಟ ಮುಗಿಸಿ ಹೊಟ್ಟೆ ಭಾರವಾಗಿರುವ ಆಲಸ್ಯದೊಂದಿಗೆ ಅಲ್ಲಲ್ಲೇ ತಿರುಗುತ್ತಾ ಕೆಳಗೆ ಬೀಳುತ್ತವೆ. ಅರರೆ ಇದೇನು ಪೈಲಟ್ಟು ಕೈಬಿಟ್ಟು ಕೂತನೇ ಎಂದು ನಾವು ಭಯಗೊಳ್ಳುವ ಹೊತ್ತಿಗೆ ನಿದ್ರೆಯಿಂದ ಎಚ್ಚೆತ್ತವನಂತೆ ಹಕ್ಕಿಗಳು ಪುನಃ ಇನ್ನೆತ್ತಲೋ ಹಾರತೊಡಗುತ್ತವೆ. ಇಳಿಮುಖವಾಗಿ ನೆಲವನ್ನೇ ಬೇಧಿಸುವ ಕೆಚ್ಚಿನಿಂದ ನಮ್ಮೆಡೆ ಹಾರಿ ಬರುತ್ತವೆ. ಥಟ್ಟನೆ ದಿಕ್ಕು ಬದಲಾಯಿಸುತ್ತವೆ.
ರಶ್ಯಾದ SU-57, ಭಾರತದ TEJAS, ಅಮೆರಿಕಾದ F-35 ಒಂದಿಕ್ಕಿಂತ ಒಂದು ಮುಂದು. ಇವುಗಳ ನಡುವೆ ನಮ್ಮ ಸೂರ್ಯಕಿರಣ್‌ಗಳು ಸ್ವಾತಂತ್ರ ದಿನಾಚರಣೆಯ ದಿನ ಶಾಲಾಮಕ್ಕಳು ಯೂನಿಫಾರಂ ಧರಿಸಿ ಬಣ್ಣಬಣ್ಣದ ಕುಚ್ಚುಗಳನ್ನು ಹಿಡಿದು ಕ್ರೀಡಾಂಗಣದ ತುಂಬೆಲ್ಲಾ ನಲಿದಾಡಿದಂತೆ ಆಗಸದಲ್ಲಿ ವಿಧವಿಧವಾಗಿ ರಂಗೋಲಿ ಬಿಟ್ಟು ಕೆಳಗಿದ್ದ ಮಕ್ಕಳನ್ನು ಮತ್ತು ಮಕ್ಕಳ ಮನಸಿನವರನ್ನು ರಂಜಿಸುತ್ತವೆ.
ನೆರೆದಿದ್ದ ಪ್ರೇಕ್ಷಕರಲ್ಲಿಯೂ ಅಂಥದೇ ವೈವಿಧ್ಯ.. ಆಹಾ ಭವ್ಯ ಭಾರತವೇ ಅಲ್ಲಿತ್ತು. ಕೋಟ್ ಧರಿಸಿದ್ದ ಸಿರಿವಂತನಿದ್ದ. ಪಂಚೆಯುಟ್ಟ ಹಳ್ಳಿಯವನಿದ್ದ. ಸ್ಕರ್ಟ್ ತೊಟ್ಟ ಆಧುನಿಕಳಿದ್ದಳು, ಸೆರಗು ಹೊದ್ದ ಗೃಹಿಣಿಯಿದ್ದಳು. ಮುದುಕನಿದ್ದ, ಎಳೆಯ ಕಂದನಿದ್ದ. ಕನ್ನಡದವನಿದ್ದ, ತಮಿಳು, ಹಿಂದಿ, ಬೆಂಗಾಲಿ.. ದಕ್ಷಿಣ ಉತ್ತರದವರೆಲ್ಲರೂ ಇದ್ದರು, ನೀರಲ್ಲಿ ನೀರಾಗಿ ಬೆರೆತಿದ್ದರು. ಯಲಹಂಕದ ಹಿಂದೆ ಒಂದು ಕಟ್ಟೆಯಿದೆ. ಕಟ್ಟೆಯ ಏರಿ ಮೇಲೆ ಉಚಿತವಾಗಿಯಾದರೂ ಕಣ್ದುಂಬಿಸಿಕೊಳ್ಳಲು ಜನ ಹಗಲಿಡೀ ನೆರೆದಿದ್ದಾರೆ. ಇದೆಲ್ಲ ಮೊದಲೇ ಅರಿತಿದ್ದವರಂತೆ ಅಲ್ಲಿಗೆ ತಳ್ಳುಗಾಡಿಯ ಜ್ಯೂಸ್, ಸೋಡಾ, ಸಮೋಸಾ ಅಂಗಡಿಗಳು ಬಂದು ನಿಂತಿವೆ. ಸ್ವಲ್ಪ ದೂರದಲ್ಲಿ ಒಂದು ಕೆರೆ. ಕೆರೆಯ ಅಂಗಳದಲ್ಲಿ ಹುಲ್ಲು ಹಾಸಿನ ಮೇಲೆ ಜನ ಜಮಖಾನಾ ಹಾಸಿಕೊಂಡು ಜಮಾಯಿಸಿದಾರೆ. ರಸ್ತೆ ಬದಿ ಬಿರಿಯಾನಿ ಹೋಟೆಲ್ ಇದೆ. ಹೊಟೆಲಿನವನು ತನ್ನ ಪಾರ್ಕಿಂಗ್ ಜಾಗದಲ್ಲಿಯೇ ಒಂದು ಪೆಂಡಾಲ್ ಹಾಕಿಸಿಬಿಟ್ಟಿದಾನೆ. ಪ್ರೇಕ್ಷರಿಗೆ ಉಚಿತ ಪಾರ್ಕಿಂಗ್, ಉಚಿತ ನೆರಳು. ಬದಲಿಗೆ ನೀರು, ಊಟ, ಕುರುಕು ಮುರುಕು ತಿಂಡಿಗಳ ವ್ಯಾಪಾರ.
ಹ್ಞಾ.. ಇವರೆಲ್ಲ ಕೇವಲ ಸರ್ಕಸ್ ಮನರಂಜನೆಗಾಗಿ ಬಂದಿದ್ದವರಲ್ಲ. ನನ್ನ ಸುತ್ತಮುತ್ತಲಿನ ಅನೇಕರು ಈ ವಿಮಾನ ಇದು, ಇದು ಈ ದೇಶದ್ದು, ಇದರ ಶಕ್ತಿ ಇಂಥದ್ದು ಎಂದು ಮಾತಾಡಿಕೊಳ್ಳುತ್ತಿದ್ದರು. ಮೊದಲೇ ಓದಿಕೊಂಡು ತಿಳಿದುಕೊಂಡು ಬಂದಿದ್ದರು. ಕೆಲವರು ಮಗಳಿಗೆ ಅಳಿಯನ್ನು ಹುಡುಕಲು ಬಂದವ್ರೆ ಎಂಬ ಜೋಕು ಸಹ ಹರಿದಾಡುತ್ತಿತ್ತು. ಪೈಲಟ್ಟುಗಳು ಹಂಗಿದಾರೆ. ಎಂಥವರೂ ಮರುಳಾಗುವಂತಹ ಆಕರ್ಷಕ ಫಿಟ್‌ನೆಸ್. ಸು-೫೭ ವಿಮಾನದ ಪೈಲಟ್ಟು ರಶಿಯಾದಿಂದ ಶರ್ಟು ಪ್ಯಾಂಟಿನಲ್ಲೇ ಪ್ಲೇನು ಓಡಿಸಿಕೊಂಡು ಬಂದನಂತೆ ಎಂಬ ಅಂತೆಕಂತೆ ಕೇಳಿಸಿಕೊಂಡೆ.
ಇಷ್ಟೇ ಅಲ್ಲ. ಅಲ್ಲೊಂದು ಕಡೆ ದಣಿದ ಎತ್ತುಗಳನ್ನು ಗೊಂದಿಗೆಗೆ ಕಟ್ಟಿ ಮೇವು ಹಾಕಿ ಕುಡಿಯಲು ಬಕೆಟ್ಟಿನಲ್ಲಿ ನೀರು ಇಟ್ಟಂತೆ ಇದೇ ವಿಮಾನಗಳು ಒಂದು ಕಡೆ ಸಾಲಾಗಿ ನಿಂತು ಸುಧಾರಿಸಿಕೊಳ್ಳುತ್ತಿವೆ. ರೈತ ಎತ್ತಿನ ಮೈ ಸವರಿ ತುರಿಸಿದಂತೆ ಪೈಲಟ್ಟು, ಟೆಕ್ನಿಶಿಯನ್ನು ವಿಮಾನಗಳ ಮೈ ಸವರುತ್ತಾ ಅಲ್ಲೊಂದು ಇಲ್ಲೊಂದು ನಟ್ಟು ಬೋಲ್ಟು ತಿರುವುತ್ತಾ ಇಂಧನ ತುಂಬಿಸುತ್ತಿರುತ್ತಾರೆ. ಸದಾ ದಢೂತಿ ಪ್ಯಾಸೆಂಜರ್ ವಿಮಾನಗಳನ್ನು ನೋಡಿ ರೂಢಿಯಾಗಿರುವ ನಮಗೆ ಅಷ್ಟೊಂದು ದುಬಾರಿ ಎನ್ನುವ ಆದರೆ ಇಷ್ಟೇಷ್ಟು ಆಕಾರ ಇರುವ ಯುದ್ಧವಿಮಾನಗಳನ್ನು ಕಂಡಾಗ ಸೋಜಿಗವಾಗುತ್ತದೆ. ಪೈಲೆಟ್ಟಿಗೆಂದು ಇರುವ ಸೀಟೂ ಸಹ. ನೀನು ನನ್ನ ಸಾರಥಿಯಷ್ಟೇ ಎಂದು ಸಾರುವಂತಹ ಪುಟ್ಟ ಜಾಗ.
ಇಷ್ಟಕ್ಕೇ ಮುಗಿಯೋದಿಲ್ಲ. ಮೂರು ದೊಡ್ಡ ಹಾಲ್‌ಗಳು. ಅವುಗಳಲ್ಲಿ ಯುದ್ಧಸಾಮಗ್ರಿಗಳ ತಯಾರಕರ ಶಾಪುಗಳು. ಒಂದು ಕಡೆ ಸರ್ಕಾರಿ ಸ್ವಾಮ್ಯದವು ಇನ್ನೊಂದು ಕಡೆ ಖಾಸಗಿಯವರದ್ದು ಮತ್ತೊಂದು ಕಡೆ ವಿದೇಶಿ ಶಾಪುಗಳು. ಕರ್ನಾಟಕದ ಸರಕಾರದ್ದೇ ಒಂದು ಶಾಪ್, ಕೇಂದ್ರ ಸರಕಾರದ್ದೇ ಇನ್ನೊಂದು ಶಾಪ್. ನಾವು ಸೋಶಿಯಲ್ ಮೀಡಿಯಾದಲ್ಲಿ ಕೂತು ಸೈನ್ಯದ ಬಗ್ಗೆ, ದೇಶದ ಬಗ್ಗೆ, ಸಂಸ್ಥೆಗಳ ಬಗ್ಗೆ, ಸೈನಿಕರ ಬಗ್ಗೆ ಬಹಳ ಅಲ್ಪಮತಿಯ ಮಾತುಗಳನ್ನು ಆಡುತ್ತಿರುತ್ತೇವೆ. ಒಂದು ದೇಶವನ್ನು ಹೇಗೆ ಕಟ್ಟಿರುತ್ತಾರೆ, ಅದರಲ್ಲಿನ ಸಂಸ್ಥೆಗಳನ್ನು ಹೇಗೆ ಕಟ್ಟಿರುತ್ತಾರೆ, ಒಂದಕ್ಕೊಂದು ಏನು ಸಂಬಂಧ, ಇವೆಲ್ಲ ಹೇಗೆ ಕಾರ್ಯನಿರ್ವಹಿಸುತ್ತವೆ? ಇವುಗಳ ನಡುವಿನ ಪೈಪೋಟಿ ಎಂಥದು? ಹೇಗೆ ಕೇವಲ ನಾಲ್ಕೈದು ದೇಶಗಳು ಉಳಿದ ನೂರಾ ತೊಂಭತ್ತು ದೇಶಗಳನ್ನು ನಿರ್ದೇಶಿಸುತ್ತವೆ? ಯುದ್ಧ ಸಾಮಗ್ರಿಗಳಲ್ಲಿ ಯಾರೆಲ್ಲ ರೇಸಿಗೆ ಬಿದ್ದವರು, ಇದು ಇದ್ದಿದ್ದರೆ ಏನು, ಇಲ್ಲದಿದ್ದರೆ ಏನು ಎಂಬಂತಹ ಪ್ರಶ್ನೆಗಳು ಹುಟ್ಟುತ್ತವೆ. ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಪ್ರಾಮುಖ್ಯತೆ, ಅನಿವಾರ್ಯತೆ ಮತ್ತು ಅಪಾಯ ಎಲ್ಲವೂ ಮನಸಿನಲ್ಲಿ ಹಾದು ಹೋಗುತ್ತವೆ.
ಒಟ್ಟು ಅಗಾಧತೆ ಒಳಗಿಳಿಯುತ್ತದೆ.