ಡೀಪ್ ಸೀಕ್ ಬಗ್ಗೆ

Blog post description.

4/16/20251 min read

ಕಳೆದ ಎರಡು ವಾರ ಎಐ ವಲಯದಲ್ಲಿ ಜಗತ್ತು ಎರಡು ಮಹತ್ವದ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಒಂದು ನಿಮಗೆಲ್ಲ ಈಗಾಲೇ ತಿಳಿದಿರುವ ಡೀಪ್‌ಸೀಕ್.‌ ಇನ್ನೊಂದು ಅದರಷ್ಟೇ ಮುಖ್ಯವಾದ, ಜನ ಅಷ್ಟಾಗಿ ಗಮನಿಸದ ಓಪನ್‌ಎಐ ಅಮೆರಿಕಾದಲ್ಲಿ ಮಾತ್ರ ಬಿಡುಗಡೆ ಮಾಡಿರುವ ‘ಆಪರೇಟರ್‌’ ಎಂಬ ಎಐ ಏಜೆಂಟ್. ಮೊದಲಿಗೆ ಡೀಪ್‌ಸೀಕ್‌ ಬಗೆಗಿನ ಸತ್ಯ ಮಿಥ್ಯಗಳನ್ನು ತಿಳಿಯೋಣ.
೧.ಡೀಪ್‌ಸೀಕ್‌ ತಾನೇ ಗುಂಡಿ ಹೊಡೆದು ಪಾಯ ಹಾಕಿ ಕಟ್ಟಿರುವ ಮನೆಯಲ್ಲ. ಈಗಾಗಲೇ ತರಬೇತಿ ಪಡೆದಿದ್ದ ಬೇಸ್ ಮಾಡೆಲ್‌ ಒಂದನ್ನು ಎತ್ತಿಕೊಂಡು ಬದಲಾಯಿಸಿರುವುದು.
೨. ಡೀಪ್‌ಸೀಕ್ ಕೇವಲ ಆರು ಮಿಲಿಯನ್‌ಗಳಲ್ಲಿ ತಯಾರಾದ ಉಪಕರಣವಲ್ಲ. ಮಾಡೆಲ್‌ನ ಕೇವಲ ಒಂದು ಸುತ್ತಿನ ತರಬೇತಿಯ ಖರ್ಚು ಆರು ಮಿಲಿಯನ್.‌ ಅಲ್ಲಿವರೆಗಿನ ಮತ್ತು ಆನಂತರದ ತರಬೇತಿಯ ಖರ್ಚುಗಳು ಮತ್ತು ಮುಖ್ಯವಾಗಿ ಬೇಸ್‌ ಮಾಡೆಲ್‌ನ ಖರ್ಚು ಲೆಕ್ಕದಲ್ಲಿ ಸೇರಿಸಿಲ್ಲ.
೩. ಡೀಪ್‌ಸೀಕ್‌ proof of concept(POC) ಇದ್ದಂಗೆ.‌ ದಿನನಿತ್ಯ ಮತ್ತು ಹೆಚ್ಚೆಚ್ಚು ಜನ ಬಳಸಲು ಹೆಚ್ಚೆಚ್ಚು ಜಿಪಿಯುಗಳು ಬೇಕೇ ಬೇಕಾಗುತ್ತದೆ. ಆದ್ದರಿಂದ ಅಮೆರಿಕಾ ಹೇರಿರುವ ನಿರ್ಬಂಧ ಚೈನಾಗೆ ತೊಂದರೆಯಾಗಲಿದೆ.

ಏನಿದ್ದರೂ ಡೀಪ್‌ಸೀಕ್‌ ಕ್ರಾಂತಿಕಾರಿ, ಹೇಗೆಂದರೆ-

೧. ಓಪನ್‌ಎಐ ಕಂಪನಿ ಟ್ರಾನ್ಸಫಾರ್ಮರ್‌ ಆರ್ಕಿಟೆಕ್ಚರ್‌ ಮೂಲಕ ಆಮೆಯಂತೆ ಸಾಗುತ್ತಿದ್ದ ಎಐಗೆ ಮೊಲದ ವೇಗ ಕೊಟ್ಟಿತ್ತು. ಡೀಪ್‌ಸೀಕ್‌ MoE(mixture of experts) ಎಂಬ ಪರಿಷ್ಕೃತ ಆರ್ಕಿಟೆಕ್ಚರ್‌ ಮೂಲಕ ಎಐಗೆ ಜೆಟ್ ವೇಗ ಒದಗಿಸಿದೆ.
೨. ಡೀಪ್‌ಸೀಕ್‌ ತನ್ನ ಮಾಡೆಲ್‌ಗಳನ್ನು ಮುಕ್ತ ತಂತ್ರಜ್ಞಾನವನ್ನಾಗಿಸುವ ಮೂಲಕ ಅಮೆರಿಕಾದ ಏಕಸ್ವಾಮ್ಯತ್ವಕ್ಕೆ ಹೊಡೆತ ಕೊಟ್ಟಿರುವುದಷೇ ಅಲ್ಲದೆ ತಂತ್ರಜ್ಞಾನವನ್ನು ಡೆಮಾಕ್ರಟೈಸ್‌ ಮಾಡಿದೆ. ಉಳಿದೆಲ್ಲಾ ದೇಶಗಳು ಈ ಓಟದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟು ಜಗತ್ತು ಊಹಿಸಿದ್ದಕ್ಕಿಂತ ವೇಗವಾಗಿ ಎಐ-ಮಯವಾಗಲಿದೆ. ಇದೀಗ ಕಾಲೇಜು ವಿದ್ಯಾರ್ಥಿಗಳೂ ಸಹ ಒಂದು ಲ್ಯಾಪ್‌ಟಾಪ್‌ ಇಟ್ಟುಕೊಂಡು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
೩. ಬಹುಶಃ ಮುಂದಿನ ದಿನಗಳಲ್ಲಿ ಚೈನಾ ಯಾವುದಾದರೂ ಮಾರ್ಗದ ಮೂಲಕ ತಾನೇ ಜಿಪಿಯುಗಳನ್ನು ತಯಾರಿಸುವ ಸಾಮರ್ಥ್ಯ ಪಡೆಯಲಿದೆ. ಅದು ಸಾಧ್ಯವಾದರೆ ಎಐ ಬಹುಬೇಗ ಜನಸಾಮಾನ್ಯನ ಅಂಗೈಯಲ್ಲಿನ ಆಟದ ವಸ್ತುವಾಗಲಿದೆ.

ಸರಿ, ನಮ್ಮ ದೇಶದ ಕತೆಯೇನು?

೧. ನಮ್ಮ ದೇಶದ ಒಂದು ಭಾಗ ಪ್ರತಿಭೆ ಅಮೆರಿಕಾದಲ್ಲಿದ್ದು ಅಮೆರಿಕಾಗಾಗಿ ದುಡಿಯುತ್ತಿದೆ. ಒಂದು ಭಾಗ ಪ್ರತಿಭೆ ಭಾರತದಲ್ಲೇ ಇದ್ದು ಅಮೆರಿಕಾಗಾಗಿ ದುಡಿಯುತ್ತಿದೆ. ಇನ್ನುಳಿದ ಅಗಾಧ ಯುವ ಪ್ರತಿಭಾ ಸಾಗರ ಅವಕಾಶಗಳಿಲ್ಲದೇ ದಾರಿ ತೋರುವವರಿಲ್ಲದೇ ತನಗೆ ಪ್ರತಿಭೆ ಇದೆ ಎಂಬುದೂ ಗೊತ್ತಿಲ್ಲದೇ ಸಲ್ಲದ ಕೆಲಸಗಳಲ್ಲಿ ಸಮಯ ವ್ಯಯಿಸುತ್ತಿದೆ. ನಮ್ಮ ಯುವಜನತೆ ತುರ್ತಾಗಿ ಎಚ್ಚೆತ್ತುಕೊಳ್ಳಬೇಕಾಗಿದೆ, ಧೈರ್ಯಶಾಲಿಗಳಾಗಬೇಕಿದೆ, ನಮಗೂ ಇದೆಲ್ಲ ಸಾಧ್ಯ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕಿದೆ.
೨. ಅಂಬಾನಿಯವರು ಐನೂರು ಮಿಲಿಯನ್ನಿನ ಡೇಟಾ ಸೆಂಟರ್‌ ಸೆಟ್‌ ಮಾಡಲು ಉತ್ಸುಕರಾಗಿರುವುದು, ಕೇಂದ್ರ ಸರಕಾರ ಹತ್ತು ಸಾವಿರ ಕೋಟಿಗಳನ್ನು ಎಐಗೆಂದು ಎತ್ತಿಟ್ಟಿರುವುದು, ನೀತಿ ಆಯೋಗ್‌ National Strategy for Artificial Intelligence ಯೋಜನೆ ರೂಪಿಸಿರುವುದು ಎಲ್ಲವೂ ಸ್ವಾಗತಾರ್ಹ. ಇವೆಲ್ಲವೂ ನಮ್ಮ ದೇಶ ಎಐಅನ್ನು ಜವಾಬ್ಧಾರಿಯುತವಾಗಿ ಅಳವಡಿಸಿಕೊಳ್ಳುವ ದಿಕ್ಕಿನಲ್ಲಿ ಸಹಾಯ ಮಾಡಲಿವೆ. ಆದರೆ ಇದೆಲ್ಲ ನಾವೇ ನಮ್ಮದೇ ಮಾಡೆಲ್‌ ಸೃಷ್ಟಿಸಿಕೊಳ್ಳಲು, ಅಮೆರಿಕಾ-ಚೈನಾದೊಂದಿಗೆ ಪೈಪೋಟಿಗಿಳಿಯಲು ಸಹಕರಿಸಲ್ಲ. ನಾವು ಜುಗಾಡ್‌ ಎಂಜಿನೀರಿಂಗಿನಿಂದಲಾದರೂ ಏನಾದರೂ ಮ್ಯಾಜಿಕ್‌ ಆಗಲಿ ಎಂದು ನಿರೀಕ್ಷಿಸುವುದು ತಪ್ಪು. ಗಟ್ಟಿಯಾದ ಸಂಶೋಧನಾ ಪಾಯ ಹಾಕಿಕೊಳ್ಳುವುದೊಂದೇ ಮಾರ್ಗ.
೩. ಅಮೆರಿಕಾ ಸಂಸ್ಕೃತಿ ಸ್ಮಾರ್ಟ್‌ವರ್ಕ್‌, ಚೈನಾ ಸಂಸ್ಕೃತಿ ಹಾರ್ಡ್‌ವರ್ಕ್‌ ಪ್ರೇರಪಿಸುತ್ತದೆ. ನಮ್ಮ ಸಂಸ್ಕೃತಿ ಸೇಫ್‌ವರ್ಕ್‌ ಪ್ರೇರಪಿಸುತ್ತದೆ. ಭಾರತಕ್ಕೆ ಐಟಿ ಬಂದು ಮೂವತ್ತು-ನಲವತ್ತು ವರ್ಷಗಳಾದರೂ ನಾವು ಸರ್ವೀಸ್‌ನಿಂದ ಪ್ರಾಡಕ್ಟುಗಳತ್ತ ಹೆಜ್ಜೆಯಿಟ್ಟಿಲ್ಲ. ಇನ್ನಾದರೂ ವೆಂಚರ್‌ ಕ್ಯಾಪಿಟಲಿಸ್ಟ್‌, ಸಿಯಿವೋ, ಎಂಜಿನೀರ್‌, ವಿದ್ಯಾರ್ಥಿ, ಶಿಕ್ಷಕ, ತಂದೆತಾಯಿ- ನಾವೆಲ್ಲರೂ ಸಾಹಸಮಯ(ರಿಸ್ಕ್) ಮನೋಭಾವ ಬೆಳೆಸಿಕೊಳ್ಳಬೇಕಿದೆ.
೫. ಅಮೆರಿಕಾದಲ್ಲಿ ಪ್ರೈವೇಟ್‌, ಚೈನಾದಲ್ಲಿ ಸ್ಟೇಟ್ ದೂರದೃಷ್ಟಿಯ ದೊಡ್ಡಮಟ್ಟದ ಸಂಶೋಧನೆಗಳಲ್ಲಿ ಹಣ ಹೂಡುತ್ತಾರೆ. ಉದಾಹರಣೆಗೆ ಸ್ಪೇಸ್‌ಎಕ್ಸ್‌ ಮತ್ತು ಡೀಪ್‌ಸೀಕ್. ನಮ್ಮಲ್ಲಿಯೂ ಅವರಂತೆಯೇ ವಿಜ್ಞಾನ ಮತ್ತು ತಂತ್ರಜ್ಞಾನದ ಸಂಶೋಧನೆಗಳ ವಿಷಯದಲ್ಲಿ ಸ್ಟೇಟ್‌ ಮತ್ತು ಪ್ರೈವೇಟ್‌ ಎರಡೂ ಕಡೆಯಿಂದ ಬಲ ತುಂಬಬೇಕಿದೆ.
೬. ಇಷ್ಟು ದೊಡ್ಡ ದೇಶಕ್ಕೆ ಒಂದು ಇಸ್ರೋ ಸಂಸ್ಥೆ, ಒಬ್ಬ ಗುಕೇಶ್ ಸಾಕಾಗಲ್ಲ. ಸ್ಟಾಟಿಸ್ಟಿಕ್ಸ್‌ ಪ್ರಕಾರ ಇಡೀ ಜಗತ್ತಿನಲ್ಲಿ ನಮ್ಮಲ್ಲೇ ಅತ್ಯಧಿಕ ಪ್ರತಿಭೆಗಳು ತುಂಬಿರಬೇಕು. ಅಂದರೆ ನಮ್ಮ ಐಐಟಿ-ಐಐಎಂ-ಐಐಎಸ್‌ಸಿಗಳೂ ಸೇರಿದಂತೆ ಎಲ್ಲಾ ವಿಶ್ವವಿದ್ಯಾಲಯಗಳಿಂದ ಹೆಚ್ಚೆಚ್ಚು ಗುಣಮಟ್ಟದ ಪೇಪರ್‌ ಪಬ್ಲಿಶ್‌ ಆಗಬೇಕಿದೆ. ನಾವೆಲ್ಲರೂ ತುರ್ತಾಗಿ ಸಂಶೋಧನಾಮಯ ಮನಸನ್ನು ರೂಢಿಸಿಕೊಳ್ಳಬೇಕಿದೆ. ನಮ್ಮ ಸರಕಾರಗಳು, ಇಂಡಸ್ಟ್ರಿ ಮತ್ತು ವಿಶ್ವವಿದ್ಯಾಲಯಗಳು ಪರಸ್ಪರ ಕೈಜೋಡಿಸಿ ಪ್ರತಿಭೆಗಳನ್ನು ಹುಡುಕುವ ಬೆಳೆಸುವ ಬುಡಮಟ್ಟದ ಕೈಂಕರ್ಯ ಕೈಗೊಳ್ಳಬೇಕಿದೆ.

ಇನ್ನು ಎಐ ಆಪರೇಟರ್‌ಗಳು(ಸಹಾಯಕರು ಅನ್ನೋಣವೇ?)-

ಇಷ್ಟೂ ದಿವಸ ಚಾಟ್‌ಜಿಪಿಟಿ ಮುಂತಾದವು ನಮ್ಮ ಬೇಡಿಕೆಗೆ ತಕ್ಕಂತೆ ಪಠ್ಯ ಮತ್ತು ಚಿತ್ರಗಳನ್ನಷ್ಟೇ ಸೃಷ್ಟಿಸುತ್ತಿದ್ದವು. ಅದನ್ನು ಬಳಸಿಕೊಂಡು ನಮ್ಮ ಮೂಲ ಕೆಲಸವನ್ನು ನಾವೇ ಪೂರೈಸಿಕೊಳ್ಳಬೇಕಿತ್ತು. ಆಪರೇಟರ್‌ಗಳು ಹಾಗಲ್ಲ; ಅವು ನಮ್ಮ ಅಸಿಸ್ಟೆಂಟುಗಳಂತೆ ಎಂಡ್-ಟು-ಎಂಡ್‌ ಹೇಳಿದ ಕೆಲಸವನ್ನು ಮಾಡಿಕೊಡುತ್ತವೆ. ಈಗ ಬಂದಿರುವ ಆಪರೇಟರ್‌ಗೆ ನಾವೊಂದು ದಿನಸಿ ಪಟ್ಟಿ ಕೊಟ್ಟರೆ ಸಾಕು, ನಾಳೆಯಷ್ಟೊತ್ತಿಗೆ ದಿನಸಿ ನಿಮ್ಮ ಮನೆಯ ಬಾಗಿಲ ಬಳಿ ಇರುತ್ತದೆ. ನಾವೊಂದು ಪ್ರವಾಸದ ಇಚ್ಛೆ ವ್ಯಕ್ತಪಡಿಸಿದರೆ ಸಾಕು, ಫ್ಲೈಟು, ಹೊಟೆಲು, ಊಟ, ಪ್ರವಾಸಿ ತಾಣ ಎಲ್ಲವೂ ಯೋಜನಾಬದ್ಧವಾಗಿ ಬುಕ್ಕಾಗಿ ನಿಮ್ಮ ಕೈಲಿ ಟಿಕೆಟ್‌ ಬಂದು ತಲುಪಿರುತ್ತದೆ. ಹಾಗಂತ ಓಪನ್‌ಎಐ ದಿನಸಿ ಅಂಗಡಿ, ಹೊಟೆಲು, ಫ್ಲೈಟುಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆಯಾ? ಇಲ್ಲಾ, ಇದು ನಮ್ಮ ಬದಲಾಗಿ ವೆಬ್ಸೈಟುಗಳಿಗೆ ಹೋಗಿ ತಾನೇ ಟೈಪಿಸಿ, ಕ್ಲಿಕ್‌ ಮಾಡಿ, ಹುಡುಕಿ, ವಿವರಗಳನ್ನು ತುಂಬಿಸಿ ವಸ್ತು/ಸರ್ವೀಸುಗಳನ್ನು ಬುಕ್‌ ಮಾಡುತ್ತದೆ. ಇದೆಲ್ಲ ಹೇಗೆ? ಅಪರೇಟರ್‌ ವೆಬ್ಸೈಟುಗಳ ಸ್ಕ್ರೀನ್‌ಶಾಟ್‌ ತಕ್ಕೊಂಡು ಯಾವ ಯಾವ ಬಟನ್‌ ಎಲ್ಲಿದೆ ಎಂದು ಪತ್ತೆ ಹಚ್ಚಿ ಎಲ್ಲಿ ಏನು ಟೈಪಿಸಿ ಏನನ್ನು ಒತ್ತಬೇಕು ಎಂದು ಸ್ವಯಂ ಕಲಿತು ಕಾರ್ಯ ಸಾಧಿಸುತ್ತದೆ. ನಾವು ಮೌಸ್‌ ಮತ್ತು ಕೀಬೋರ್ಡಿಂದ ಏನೆಲ್ಲ ಮಾಡುತ್ತಿದ್ದೆವೋ ಅದನ್ನು ಅಪರೇಟರ್‌ ಮಾಡುತ್ತದೆ.
ಇದು ಉಂಟು ಮಾಡಬಹುದಾದ ಪಲ್ಲಟ ಏನು ಗೊತ್ತ? ಈ ತನಕ ನಮ್ಮ ಮತ್ತು ತರಹೇವಾರಿ ವೆಬ್ಸೈಟುಗಳ ನಡುವೆ ಮಧ್ಯವರ್ತಿಗಳು ಇದ್ದರಲ್ಲ, ಟ್ರಾವೆಲ್‌ಮಾರ್ಟ್‌, ಟ್ರಾವೆಲ್‌ ಏಜೆಂಟ್, ಕ್ಲಿಯರ್‌ಟ್ಯಾಕ್ಸ್‌, ಆಧಾರ್‌/ಪ್ಯಾನ್‌ ಏಜಂಟ್‌ ಮುಂತಾಗಿ.. ಅವರು ಎತ್ತಂಗಡಿಯಾಗುತ್ತಾರೆ. ಹಾಗೆ ಒಂದು ತಗೊಳ್ಳಲು ಹೋಗಿ ಹತ್ತಾರು ವಸ್ತು ಖರೀದಿಸುವ ನಮ್ಮ ಅನಗತ್ಯ ಶಾಪಿಂಗ್‌ ತಗ್ಗಬಹುದಾಗಿದೆ.