ದೈತ್ಯತೋಳಗಳ ಮರುಸೃಷ್ಟಿಯ ಕತೆ

Blog post description.

6/26/20251 min read

ಇತ್ತೀಚೆಗೆ ಅಮೆರಿಕಾದ ಬಯೋಟೆಕ್ನಾಲಜಿ ಕಂಪನಿ ಕೊಲೋಸಲ್‌ ಬಯೋಸೈನ್ಸ್‌ ಸುಮಾರು ಹನ್ನೆರಡು ಸಾವಿರ ವರುಷಗಳ ಹಿಂದೆ ಅಳಿದುಹೋಗಿದ್ದ Dire Wolf ಅಂದರೆ ದೈತ್ಯ ತೋಳಗಳನ್ನು ಮರುಸೃಷ್ಟಿಸುವ(De-extinction) ಮೂಲಕ ಜಗತ್ತಿನಾದ್ಯಂತ ಸುದ್ದಿ ಮಾಡಿದೆ. ನೀವು Games Of Thrones ಸಿರೀಸ್‌ ನೋಡಿದ್ದರೆ ಅಲ್ಲಿ ಮನುಷ್ಯರಿಗಿಂತ ಎತ್ತರಕ್ಕಿದ್ದ ಈ ದೈತ್ಯ ತೋಳಗಳನ್ನು ಕಾಣಬಹುದು. ನಿಜರೂಪದಲ್ಲಿ ತೀರಾ ಅಷ್ಟಲ್ಲದಿದ್ದರೂ ಇಂದಿನ ತೋಳಗಳಿಗಿಂತ ಅವು ಬಹಳ ದೊಡ್ಡ ಆಕಾರದಲ್ಲಿದ್ದವು. ೧೨ ಇಂಚುಗಳಷ್ಟು ಉದ್ದದ ತಲೆಬುರುಡೆ, ೬೦ಕೆಜಿ ತೂಕ, ಶೀತಪ್ರದೇಶಕ್ಕೆ ಸೂಕ್ತವಾದ ಚರ್ಮ ಹೊಂದಿದ್ದವು. ಇವುಗಳ ಪಳಯುಳಿಕೆಗಳು ಕ್ಯಾಲಿಫೋರ್ನಿಯಾದ ಗೋಮಾಳದಲ್ಲಿ ಸಾಕಷ್ಟು ದೊರೆತಿವೆ. ಒಂದೇ ಪ್ರದೇಶದಲ್ಲಿ ಅನೇಕ ತೋಳಗಳ ಮೂಳೆ ಸಿಕ್ಕಿರುವುದರಿಂದ ಇವು ಸದಾ ಗುಂಪಿನಲ್ಲಿರುತ್ತಿದ್ದು ಗುಂಪು ಗುಂಪಾಗಿ ದಾಳಿ ಮಾಡುತ್ತಿದ್ದವು ಎಂದು ಹೇಳಬಹುದು. ಕುದುರೆ, ಕಾಡೆಮ್ಮೆಗಳಂತಹ ದೈತ್ಯಪ್ರಾಣಿಗಳೇ ಇವುಗಳಿಗೆ ಆಹಾರ. ಇವುಗಳ ಉಳಿಕೆಗಳು ವೆನೆಝುವೆಲಾ, ಪೆರು, ಬೊಲಿವಿಯಾ, ಚೈನಾದಲ್ಲಿಯೂ ದೊರೆತಿವೆ. ತೀವ್ರಗತಿಯ ಹವಾಮಾನ ಬದಲಾವಣೆಯಿಂದಲೋ, ಆಹಾರದ ಸರಪಳಿಯಲ್ಲಿ ಉಂಟಾದ ಏರುಪೇರಿನಿಂದಲೋ ಈ ದೈತ್ಯತೋಳಗಳು ಕಣ್ಮರೆಯಾಗಿರಬಹುದು ಎಂದು ವಿಜ್ಞಾನಿಗಳು ಊಹಿಸುತ್ತಾರೆ.

ಸರಿ De-extinction ಅಂದರೇನು? ಹೇಗೆ ಮಾಡುತ್ತಾರೆ? ಅಳಿದಿರುವ ಪ್ರಾಣಿಗಳನ್ನು ಪುನರ್‌ಸೃಷ್ಟಿಸುವುದೇ De-extinction. ಇದಕ್ಕಾಗಿ ವಿಜ್ಞಾನಿಗಳು ಮೂರು ವಿಧಾನಗಳನ್ನು ಬಳಸುತ್ತಾರೆ. ಒಂದು Back-breeding. ಅಂದರೆ ಅಳಿದ ಪ್ರಾಣಿಗಳ ಜೀನ್‌ಗಳನ್ನು ಹೋಲುವ ಈಗಿನ ಪ್ರಾಣಿಗಳ ನಡುವೆ ಕೂಡಿಕೆ ಮಾಡುತ್ತಾ ಹೋಗುವುದು. ಹೀಗೆ ಕೆಲವು ತಳಿಗಳ ಹಸುಗಳ ನಡುವೆ ಕೂಡಿಕೆ ಮಾಡಿ Aurochs ಎಂಬ ಅಳಿದ ಕಾಡುಹಸುವನ್ನು ಸೃಷ್ಟಿಸುವಲ್ಲಿ ವಿಜ್ಞಾನಿಗಳು ಸಫಲರಾಗಿದ್ದಾರೆ. ಈ ವಿಧಾನದಿಂದ ಬಾಹ್ಯ ದೇಹಲಕ್ಷಣಗಳನ್ನು ಮತ್ತು ಈಗಿರುವ ಜೀನ್‌ಗಳನ್ನಷ್ಟೇ ಮರುಸೃಷ್ಟಿಸಬಹುದು. ಅಳಿದ ಜೀನ್‌ಗಳನ್ನಲ್ಲ.

ಇನ್ನೊಂದು ಕ್ಲೋನಿಂಗ್.‌ ಒಂದು ಪ್ರಾಣಿ ತನ್ನ ಕುಲದಲ್ಲಿ ಅದೇ ಕೊನೆಯದಾಗಿದ್ದಲ್ಲಿ ವಿಜ್ಞಾನಿಗಳು ಅದರ ಜೀವಕೋಶಗಳನ್ನು ಸಂರಕ್ಷಿಸುತ್ತಾರೆ. ಆ ಜೀವಕೋಶದ ಡಿಎನ್‌ಎಯನ್ನು ಜೆನೆಟಿಕ್ಕಾಗಿ ಹೋಲುವ ಇನ್ನೊಂದು ಪ್ರಾಣಿಯ ಅಂಡಾಣುವಿನೊಳಗೆ ಸೇರಿಸುತ್ತಾರೆ. ಆ ಅಂಡಾಣುವಿಂದ ಮರಿ ಮಾಡಿಸುತ್ತಾರೆ. 2003ರಲ್ಲಿ ನಡೆದ ಇಂಥ ಒಂದು ಪ್ರಯತ್ನದಲ್ಲಿ Pyrenean ibex ಎಂಬ ಆಗಷ್ಟೇ ಅಳಿದಿದ್ದ ಟಗರನ್ನು ಮರುಸೃಷ್ಟಿಸಿದ್ದರು. ಹುಟ್ಟಿದ ಕೆಲವೇ ನಿಮಿಷಗಳಲ್ಲಿ ಮರಿ ಸತ್ತುಹೋಗಿ ಈ ಟಗರು ಜಗತ್ತಿನಲ್ಲಿ ಎರಡು ಸಲ ಅಳಿದ ಪ್ರಾಣಿ ಎಂಬ ಕುಖ್ಯಾತಿ ಪಡೆದಿದೆ.

ಮೂರನೆಯದ್ದು ನಿಜವಾದ‌ ಜೆನೆಟಿಕ್‌ ಎಂಜಿನೀರಿಂಗ್ (CRISPR/Cas9). ಈ ವಿಧಾನದ ಮೂಲಕವೇ ದೈತ್ಯತೋಳವನ್ನು ಮರುಸೃಷ್ಟಿಸಿರುವುದು. ಇಲ್ಲಿ ವಿಜ್ಞಾನಿಗಳು ತಮಗೆ ದೊರಕಿದ ಪಳಯುಳಿಕೆಗಳಿಂದ ದೈತ್ಯತೋಳದ ಜೀನ್‌ಗಳನ್ನು ಹೆಕ್ಕಿದರು. ಈಗಿರುವ ತೋಳಗಳ ಜೀನ್‌ಗಳೊಂದಿಗೆ ಹೋಲಿಸಿದರು. ಸುಮಾರು 99.5% ಹೋಲಿಕೆ ಸಿಕ್ಕಿದ ಕಂದುತೋಳಗಳನ್ನು ಆಯ್ಕೆ ಮಾಡಿಕೊಂಡರು. ಹೋಲಿಕೆಯಿಲ್ಲದ 0.5% ಜೀನ್‌ಗಳನ್ನು ಅವುಗಳ ವಿಶೇಷತೆಯನ್ನು ಗುರುತಿಸಿದರು. ಅಂದರೆ ಯಾವೆಲ್ಲಾ ದೈಹಿಕ ಅಂಶಗಳು ಆ ತೋಳಗಳನ್ನು ದೈತ್ಯವನ್ನಾಗಿಸಿದ್ದವೋ ಅಂತಹ ವಿಶೇಷ ಜೀನ್‌ಗಳು. ನಂತರ ಕಂದುತೊಳದಲ್ಲಿನ ಸಮಾನ ಉದ್ದೇಶದ ಜೀನ್‌ಗಳನ್ನು ದೈತ್ಯತೋಳದ ಜೀನ್‌ಗಳಂತೆ ಮಾರ್ಪಡಿಸಿದರು. ಅಂತಹ ಕಂದುತೋಳದಿಂದ ಮೂರು ಮರಿಗಳನ್ನು ಹಾಕಿಸಿದರು. ರೋಮುಲಸ್‌, ರೆಮಾಸ್‌ ಮತ್ತು ಖಲೀಸಿ ಎಂದು ಅವುಗಳ ಹೆಸರು. ಇವೇ ಈಗಿನ ಹೊಸ ದೈತ್ಯತೋಳಗಳು.

ಈ ವಿಧಾನದಲ್ಲಿಯೂ ಕೆಲವು ವೈಜ್ಞಾನಿಕ ಸವಾಲುಗಳಿವೆ. aDNA(ancient DNA) ಇಮ್ಯೂಟೇಬಲ್‌ ಅಲ್ಲ. ಅರ್ಥಾತ್‌ ಪ್ರಾಣಿ ಸತ್ತ ನಂತರ ಅದರ ದೇಹದಲ್ಲಿನ ಡಿಎನ್‌ಎ ಹಲವಾರು ಪ್ರಾಕೃತಿಕ ಕಾರಣಗಳಿಂದ ಅಳಿಸುತ್ತಾ/ಬದಲಾಗುತ್ತಾ ಹೋಗುತ್ತದೆ. ಎಷ್ಟೋ ಸಲ ಹೀಗೆ ಪಳಯುಳಿಕೆಗಳಿಂದ ದೊರೆತ ಡಿಎನ್‌ಎ ಮೂಲ ಪ್ರಾಣಿಯದ್ದಾಗಿರದೇ ಅದನ್ನು ಆಹಾರವಾಗಿಸಿಕೊಂಡ ಮೈಕ್ರೋಬುಗಳ ಅಥವಾ ಆನಂತರ ಶೇಖರಣೆಗೊಂಡ ಬೇರಾವುದೋ ಪ್ರಾಣಿಯದ್ದಾಗಿರಬಹುದು. ಕೆಮಿಕಲಿ ಡ್ಯಾಮೇಜ್‌ ಆಗಿರಬಹುದು. ಭಾರತದಂತಹ ಬಯಲ-ಬಿಸಿಲ ಪ್ರದೇಶದಲ್ಲಿ ದೊರೆಯುವ ಪಳಯುಳಿಕೆಗಳಿಂದ ಡಿಎನ್‌ಎ ಸೃಷ್ಟಿಸುವುದು ಅಸಾಧ್ಯವೇ ಸರಿ ಎನ್ನುತ್ತಾರೆ ವಿಜ್ಞಾನಿಗಳು.

ಎರಡನೆಯ ಸವಾಲು ಡಿಎನ್‌ಎ ಸಿಕ್ಕಿದರೂ ಅದನ್ನು ಸರಿಯಾದ ಕ್ರಮಾಂಕದಲ್ಲಿ ಸರಿಯಾದ ಆಕಾರದಲ್ಲಿ ಜೋಡಿಸುವುದು ಬಹಳ ಕಷ್ಟ. ಆದ್ದರಿಂದ ಯಾವ ಡಿಎನ್‌ಎ ಯಾವ ಉದ್ದೇಶದ್ದು ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟ. ಎಷ್ಟೋ ಸಲ ಕೆಲವು ಡಿಎನ್‌ಎಗಳು ಆ ಕಾಲಮಾನಕ್ಕೆ ಆ ಹವಾಮಾನಕ್ಕೆ ಸ್ಪಂದಿಸಲೆಂದೇ ಕೋಡ್‌ ಆಗಿರುತ್ತವೆ. ಅಂಥ ಡಿಎನ್‌ಎಯನ್ನು ಈಗಿನ ಪ್ರಾಣಿಗಳಲ್ಲಿ ಸೇರಿಸಿದರೆ ಆ ಕೋಡ್‌ ಕೆಲಸ ಮಾಡದಿರಬಹುದು.

ಮೂರನೆಯ ಸವಾಲು ಡಿಎನ್‌ಎ ಎಡಿಟ್‌ ಮಾಡುವ ತಾಂತ್ರಿಕತೆಗೆ ಸಂಬಂಧಿಸಿದ್ದು. CRISPR ತುಂಬಾ ಸೂಕ್ಷ್ಮವಾದ ಪ್ರಕ್ರಿಯೆ. 0.5% ವ್ಯತ್ಯಾಸದಲ್ಲಿಯೇ ಲಕ್ಷಾಂತರ ಗುಣ ವೈಪರೀತ್ಯಗಳಿರುತ್ತವೆ. ಕೊಲೋಸಲ್‌ ವಿಜ್ಞಾನಿಗಳು ಎಡಿಟ್‌ ಮಾಡಲೆಂದು ಆಯ್ಕೆಮಾಡಿದ್ದ ಇನ್ನೂ ಐದು ಜೀನ್‌ಗಳನ್ನು ಹುಟ್ಟುವ ತೋಳ ಅನಾರೋಗ್ಯಕ್ಕೀಡಾಗಬಹುದೆಂಬ ಭಯದಿಂದ ಕೈಬಿಟ್ಟರಂತೆ.

ಕೊಲೋಸಲ್ ಕಂಪನಿ ಈ ಮೂಲಕ ಅಳಿದ ಪ್ರಾಣಿಗಳನ್ನು ಮರುಸೃಷ್ಟಿಸಿ ಪರಿಸರ ಸಂರಕ್ಷಿಸುವ ಇರಾದೆ ಇಟ್ಟುಕೊಂಡಿದೆ. ಆದರೆ ವಿಜ್ಞಾನಿಗಳ ನಡುವೆಯೇ ಈ ಬೆಳವಣಿಗೆ ತಾತ್ವಿಕ, ನೈತಿಕ ಮತ್ತು ವೈಜ್ಞಾನಿಕ ಚರ್ಚೆ ಹುಟ್ಟುಹಾಕಿದೆ. ಅದು ಹೇಗೆ ಇವು ದೈತ್ಯತೋಳವಾಗುತ್ತವೆ? ಕಂದುತೋಳಗಳ ಕೆಲವೇ ಕೆಲವು ಜೀನುಗಳನ್ನು ದೈತ್ಯತೋಳಗಳಂತೆ ಬದಲಾಯಿಸಿದ್ದೀರಿ, ಹುಟ್ಟಿರುವ ಮರಿಗಳು 99.9% ಕಂದುತೋಳಗಳೇ ಆಗಿವೆ ಎಂದು ಒಂದು ವಾದ. ಹೀಗೆ ಮಾಡೋದು ಸರಿಯೇ ಅಂತ ಇನ್ನೊಂದು ವಾದ. ಮನುಷ್ಯ ಪ್ರಕೃತಿಯಲ್ಲಿ ಕೈಯಾಡಿಸುವ ಮುನ್ನವೇ ದೈತ್ಯತೋಳಗಳು ಅಳಿದಿವೆ. ಪ್ರಕೃತಿಯೇ ಅವುಗಳನ್ನು ತಿರಸ್ಕರಿಸಿಯಾಗಿದೆ. ಹಾಗಿರುವಾಗ ಮತ್ತೆ ಅದನ್ನು ಪ್ರಕೃತಿಯ ಮಡಿಲಿಗೆ ಹಾಕಲು ನಾವ್ಯಾರು? ಅದರ ಆಹಾರ ಒದಗಿಸುವವರು ಯಾರು? ಮೊದಲಿಗೆ ಈ ಯೋಜನೆಯ ಉದ್ದೇಶವೇನು?

ಕೊಲೋಸಲ್‌ ಕಂಪನಿ ಬಹುಶಃ ಈ ತೋಳಗಳನ್ನು ಮೃಗಾಲಯದಲ್ಲಿ ಬಿಟ್ಟುಬಿಡಬಹುದು. ಹೀಗೆ ವ್ಯಾಪಕವಾಗಿ ಸುದ್ದಿಯಾಗಲಿ ಚರ್ಚೆಯಾಗಲಿ ಎಂದೇ ಜನಪ್ರಿಯ ಟಿವಿ ಸಿರಿಯಲ್‌ನಲ್ಲಿ ಬಂದಿರುವ ಪ್ರಾಣಿಯನ್ನು ಪ್ರಯೋಗಕ್ಕೆ ಆಯ್ಕೆ ಮಾಡಿಕೊಂಡಿರಬಹುದು. ಈ ಜನಪ್ರಿಯತೆಯ ಮೂಲಕ ಅದು ತನ್ನ ಬೇರಾವುದೋ ರಹಸ್ಯ ಉದ್ದೇಶದ ಮಾರುಕಟ್ಟೆಯ ಬಾಗಿಲು ತಟ್ಟುತ್ತಿರಬಹುದು. ವಿಜ್ಞಾನಿಗಳು ಇದು ಸಾರ್ವಜನಿಕರನ್ನು ಆಕರ್ಷಿಸಲೆಂದು ಅವರನ್ನು ದಾರಿ ತಪ್ಪಿಸುವ, ತಪ್ಪನ್ನು ವೈಭವೀಕರಿಸುವ ಪ್ರಕ್ರಿಯೆ ಎಂದು ಟೀಕಿಸಿದ್ದಾರೆ. ಕೇವಲ ಕಣ್ಣಿಗೆ ಗೋಚರಿಸುವ ಲಕ್ಷಣಗಳನ್ನು ಮಾರ್ಪಡಿಸಿದರೆ ಅದನ್ನು ಅಳಿದ ಜೀವಿಯ ಮರುಸೃಷ್ಟಿಯೆನ್ನಲಾಗದು ಎನ್ನುತ್ತಾರೆ. ಅಮೆರಿಕಾದ ಪರಿಸರ ದೈತ್ಯತೋಳಗಳಿಲ್ಲದೇ ಹತ್ತುಸಾವಿರ ವರುಷ ಸವೆಸಿ ಬಹಳ ದೂರ ಬಂದಿದೆ. ಈಗ ಇವು ಮತ್ತೆ ಪ್ರತ್ಯಕ್ಷವಾದರೆ ಇರುವ ಕಂದುತೋಳಗಳಿಗೆ ಆಹಾರ ಕೊರತೆಯಾಗಬಹುದು. ಪ್ರಾಕೃತಿಕ ಅಸಮತೋಲನ ಉಂಟುಮಾಡಬಹುದು. ಇಂಥ ಹೊಸ ಪ್ರಾಣಿಗಳು ಯಾವ ಬಗೆಯ ಖಾಯಿಲೆ ತರಬಲ್ಲವು ಹೇಳಲಾಗದು. ಯಾವ ಬಗೆಯಲ್ಲಿ ಮನುಷ್ಯನ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತವೋ ಊಹಿಸಲಾಗದು ಎಂದೆಲ್ಲಾ ಟೀಕೆಗಳು ಬರುತ್ತಿವೆ.

ಇದನ್ನು ಸಮರ್ಥಿಸುವವರೂ ಇದಾರೆ. ದೈತ್ಯತೋಳಗಳು ಆಹಾರ ಸರಪಳಿಯಲ್ಲಿ ಬಹಳ ಎತ್ತರದಲ್ಲಿರುವವು. ಅಪೆಕ್ಸ್‌ ಪ್ರಿಡೇಟರ್‌ ಅನ್ನುತ್ತಾರೆ. ಅಮೆರಿಕಾದಲ್ಲಿ ಜಿಂಕೆಗಳ ಹಾವಳಿ ಜಾಸ್ತಿಯಿದೆ. ಅಲ್ಲಿ ಜಿಂಕೆಗಳನ್ನು ಕೊಂದರೆ ಬಹುಮಾನವನ್ನೇ ಕೊಡುವ ಸಂಪ್ರದಾಯವಿದೆ. ಹಾಗಾಗಿ ದೈತ್ಯತೋಳಗಳಿಂದ ಖರ್ಚಿಲ್ಲದೇ ಈ ಹಾವಳಿ ತಪ್ಪಿಸಬಹುದು ಎಂಬುದು ಕೆಲವರ ಆಸೆ. ಮಾನವ ತನ್ನ ದುರಾಸೆಯಿಂದ ಪ್ರಕೃತಿಗೆ ವಿರುದ್ಧವಾಗಿ ಕೆಲವು ಪ್ರಾಣಿಗಳನ್ನು ಇಲ್ಲವಾಗಿಸಿದ್ದಾನೆ. ಅಂಥ ಪ್ರಾಣಿಗಳಿಗೆ ಮರು ಅವಕಾಶ ಕೊಡುವುದು ನಮ್ಮ ನೈತಿಕ ಹೊಣೆ ಅಂತ ಒಂದು ವಾದ. ಈ ವೈಜ್ಞಾನಿಕ ಸಾಧನೆ ಮುಂದೆ ಮನುಷ್ಯನ ಜೆನೆಟಿಕ್‌ ಎಂಜಿನೀರಿಂಗಿಗೆ ಹೇಗೆಲ್ಲಾ ಸಹಾಯವಾಗಬಹುದು ಎಂದು ಕೆಲವರ ಆಸೆ.

ಏನಿದ್ದರೂ ಈ ಹೊಸ ಬೆಳವಣಿಗೆ ತೊಂಭತ್ತರ ದಶಕದ ವಿದ್ಯಾರ್ಥಿಗಳಿಗೆ ಡಾಲಿ ಕುರಿಯನ್ನು ನೆನಪಿಸಿರುವುದಂತೂ ಖಚಿತ. ಆ ಕಾಲದಲ್ಲಿ ಒಂದು ಬಲಿತ ಕುರಿಯ ಚರ್ಮದಿಂದ ಜೀವಕೋಶ ಎತ್ತಿಕೊಂಡು ಇನ್ನೊಂದು ಕುರಿಯ ಅಂಡಾಣುವಿನೊಳಗಿನ ನ್ಯೂಕ್ಲಿಯಸ್‌ ತೆಗೆದುಹಾಕಿ ಈ ಜೀವಕೋಶದ ಡಿಎನ್‌ಎ ಸೇರಿಸಿ ಮೂರನೇ ಕುರಿಯ ಗರ್ಭದಲ್ಲಿರಿಸಿ ಮರಿ ಮಾಡಿಸಿದ್ದರು. ಅದರ ವಿಶೇಷತೆ ಏನಂದರೆ ಆ ತನಕ ವಿಜ್ಞಾನಿಗಳಿಗೆ ಬಲಿತ ಜೀವಕೋಶಗಳಿಂದ ಹೊಸ ಜೀವಿ ಸೃಷ್ಟಿಸಬಹುದು ಎಂಬ ಕಲ್ಪನೆಯಿರಲಿಲ್ಲ. ಡಾಲಿಯ ಯಶಸ್ಸಿನಿಂದಾಗಿ ಬಯೋಟೆಕ್ನಾಲಜಿ ಕ್ಷೇತ್ರ ಸ್ಟೆಮ್‌ ಸೆಲ್‌ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರೆದಿದ್ದು ಈಗ ಇತಿಹಾಸ. ಅನೇಕ ಸೆಲೆಬ್ರಿಟಿಗಳು ಮುಂದೆಂದಾದರೂ ಉಪಯೋಗವಾಗಬಹುದು ಎಂದು ತಮ್ಮ ದೇಹದ ಸ್ಟೆಮ್‌ಸೆಲ್‌ಗಳನ್ನು ಆಸ್ಪತ್ರೆಗಳ ಖಜಾನೆಯಲ್ಲಿ ಸಂರಕ್ಷಿಸುತ್ತಿದ್ದಾರೆ. ಅದೊಂಥರಾ ಬಯೋ ಡೇಟಾ ಸೆಂಟರ್.‌ ಮುಂದೆ ಅವರಿಗೆ ಯಾವುದೋ ಅಂಗ ಇಲ್ಲವಾಗಿ ಯಾರೂ ಹೊಸ ಅಂಗ ಕೊಡಲು ಮುಂದೆ ಬಾರದಿದ್ದಲ್ಲಿ ತಮ್ಮದೇ ಸ್ಟೆಮ್‌ ಸೆಲ್‌ನಿಂದ ಅಗತ್ಯ ಅಂಗವನ್ನು ಮರುಸೃಷ್ಟಿಸಿಕೊಳ್ಳುವ ಆಸೆ ಅವರದ್ದು.