ಟಿವಿ ಮಾಧ್ಯಮದ ಅಂತ್ಯ

Blog post description.

7/12/20251 min read

ಗುಟೆನ್‌ಬರ್ಗ್‌ ಪ್ರಿಂಟಿಂಗ್‌ ಪ್ರೆಸ್‌ ಕಂಡುಹಿಡಿದದ್ದು ಹದಿನೈದನೇ ಶತಮಾನದಲ್ಲಿ. ಮಾರ್ಕೋನಿ ರೇಡಿಯೋ ಕಂಡುಹಿಡಿದ್ದು 1900 ಆಸುಪಾಸಿನಲ್ಲಿ. ಟಿವಿ ರೇಡಿಯೋವನ್ನು ಹಿಂದಿಕ್ಕಿದ್ದು 1950ರ ದಶಕದಲ್ಲಿ. ಸುದ್ದಿ ಮಾಧ್ಯಮದ ತಂತ್ರಜ್ಞಾನ ಬದಲಾಗುತ್ತಾ ಬಂದದ್ದು ಹೀಗೆ. ಇದೀಗ ಸಡನ್ನಾಗಿ ಟಿವಿ ಮಾಧ್ಯಮದ ಅಂತ್ಯ ಶುರುವಾಗಿರುವುದು ಗೋಚರಿಸುತ್ತಿದೆ. ಥ್ಯಾಂಕ್ಸ್‌ ಟು ಟೆಕ್ನಾಲಜಿ!

ಹದಿನೈದನೇ ಶತಮಾನದ ತನಕ ಪುಸ್ತಕಗಳು ಕೈಬರಹ, ತಾಮ್ರದ ಬರಹದಿಂದ ಮರುಮುದ್ರಣಗೊಳ್ಳುತ್ತಿದ್ದವು. ಆದ್ದರಿಂದ ಅವು ಕೇವಲ ರಾಜರ, ಆಸ್ಥಾನ ಪಂಡಿತರ ಸ್ವತ್ತಾಗಿದ್ದವು. ಪ್ರಿಂಟಿಂಗ್‌ ಪ್ರೆಸ್‌ ಪುಸ್ತಕಗಳನ್ನು ಅರಮನೆಯಿಂದ ಹೊರಗೆ ತಂದು ಕ್ರಾಂತಿ ಉಂಟು ಮಾಡಿತು. ಮುದ್ರಣ ಮತ್ತು ಹಂಚಿಕೆ ಸುಲಭವಾಯಿತು. ಆದರೆ ಅದೂ ಸಹ ಓದು ಬಲ್ಲ ಸಾಮಾನ್ಯರಿಗಷ್ಟೇ ಸೀಮಿತವಾಗಿತ್ತು. ರೇಡಿಯೋ ಓದು ಬರದವರಿಗೂ ಸುದ್ದಿಯನ್ನು ಮುಟ್ಟಿಸಿತು. ಟಿವಿ ಬಂತು. ಆದರೆ ಅದು ಬಡವರಿಗೆ ತಲುಪಲು ಸುಮಾರು ವರುಷ ತಗೊಂಡಿತು. ಈ ದೃಷ್ಟಿಯಲ್ಲಿ ಬಹಳ ವರ್ಷಗಳ ಕಾಲ ಅನಕ್ಷರಸ್ಥರು ಮತ್ತು ಬಡವರು ಇಬ್ಬರಿಗೂ ಸುದ್ದಿ ಮುಟ್ಟಿಸಿದ ಶ್ರೇಯಸ್ಸು ಪ್ರಿಂಟಿನಷ್ಟು ಎಲೈಟ್‌ ಅಲ್ಲದ, ಟಿವಿಯಷ್ಟು ಆಕರ್ಷಕವಲ್ಲದ, ಇಬ್ಬರಷ್ಟು ಮಹಾತ್ವಕಾಂಕ್ಷಿಯಲ್ಲದ ಸಾದಾ ಜೀವಿ ರೇಡಿಯೋಗೆ ಸಲ್ಲಬೇಕು.

ಇದೀಗ ಎಎಂ ಮತ್ತು ಎಫ್‌ಎಂ ರೂಪದಲ್ಲಿದ್ದ ರೇಡಿಯೋ ಡಿಜಿಟಲ್ ಪಾಡ್‌ಕ್ಯಾಸ್ಟುಗಳಾಗಿ ರೂಪಾಂತರಗೊಂಡಿದೆ. ಕೇಬಲ್‌ ಮತ್ತು ಸ್ಯಾಟಲೈಟ್‌ ರೂಪದಲ್ಲಿ ಮನೆ-ಮನೆ ತಲುಪುತ್ತಿದ್ದ ಟಿವಿ ಯುಟ್ಯೂಬ್‌ ಮತ್ತು ಇನ್ಸ್ಟಾಗ್ರಾಮಿಗೆ ರೂಪಾಂತರಗೊಂಡಿದೆ. ಕ್ಷಣಕ್ಷಣದ ಸುದ್ಧಿಗಾಗಿ ಎಕ್ಸ್‌(ಟ್ವಿಟರ್‌) ಇದೆ.
ಅಂತೆಯೇ ಸಮುದಾಯಿಕ ಮತ್ತು ಸಾಂಸ್ಥಿಕ ಒಡೆತನ ಹೋಗಿ ಸ್ವತಂತ್ರ ಮತ್ತು ವೈಯುಕ್ತಿಕ ಒಡೆತನ ಮುನ್ನಲೆಗೆ ಬರುತ್ತಿದೆ.

ಉದಾಹರಣೆಗಳನ್ನು ನೋಡೋಣ.

ಹಲವು ವರ್ಷಗಳ ನಂತರ ಸಾರ್ವಜನಿಕ ಸಂವಾದಕ್ಕಿಳಿದ ವಿಜಯ್‌ ಮಲ್ಯ ಆರಿಸಿಕೊಂಡದ್ದು ಯಾವುದೋ ರಾಷ್ಟ್ರೀಯ ಅಂತರಾಷ್ಟ್ರೀಯ ಟಿವಿ/ಪತ್ರಿಕೆಯನ್ನಲ್ಲ. ಬದಲಾಗಿ ಒಬ್ಬ ಯುಟ್ಯೂಬರನ್ನು. ಅಪರೇಶನ್‌ ಸಿಂದೂರಿನ ಸುದ್ದಿ ಮದ್ಯರಾತ್ರಿ ಒಂದೂವರೆಗೆ ಮೊದಲು ವರದಿಯಾಗಿದ್ದು ಎಕ್ಸ್‌ನಲ್ಲಿ. ಈ ಲೇಖನ ಬರೆಯುವ ಹೊತ್ತಿಗೆ ಟೆಕ್ಸಾಸಿನಲ್ಲಿ ಪ್ರವಾಹ ಉಂಟಾಗಿ ಹಲವರು ಸತ್ತಿದ್ದಾರೆ. ಸುಮಾರು ಮಕ್ಕಳು ಕಾಣೆಯಾಗಿದ್ದಾರೆ. ಅಮೆರಿಕನ್ನರು ಇದರ ನೈಜ, ವಿಸ್ತೃತ ವರದಿಗಾಗಿ ಅವಲಂಬಿಸಿರುವುದು ಯುಟೂಬರುಗಳನ್ನು. ಅಲ್ಲಿಯೂ ಜನ ಟಿವಿಗಳನ್ನು ಬೈಕೊಂಡು ಬೈಕೊಂಡು ಇಂತಹ ವ್ಯಕ್ತಿಗತ ಸುದ್ದಿ ಮೂಲಗಳಿಗೆ ಶರಣಾಗಿದ್ದಾರೆ. ಕನ್ನಡಿಗರಿಗೆ ಅಂತರಾಷ್ಟ್ರೀಯ ಚಾನೆಲ್ಲಾದ ನ್ಯಾಶನಲ್‌ ಜಿಯೋಗ್ರಾಫಿಕ್ಕಾಗಲಿ ಕನ್ನಡದೇ ಟಿವಿ ಮಾಧ್ಯಮಗಳಾಗಲಿ ತೋರಿಸದ ದೇಶಗಳನ್ನು ಅಲ್ಲಿನ ಜನಜೀವನವನ್ನು ಕೋಟ್ಯಾಂತರ ಜನರಿಗೆ ಉಣಬಡಿಸುತ್ತಿರುವುದು ಮತ್ತೊಬ್ಬ ಕನ್ನಡದ ಯುಟ್ಯೂಬರ್ ಹುಡುಗ. ಟಿವಿ ಮಾಧ್ಯಮ ತೊರೆದು ಯುಟ್ಯೂಬ್‌ ಚಾನೆಲ್‌ ತೆರೆದು ಯಶಸ್ವಿಯಾಗಿರುವ ಕನ್ನಡದ ಖ್ಯಾತ ಟಿವಿ ನಿರೂಪಕರು ನಮ್ಮೆದುರಿಗೇ ಇದ್ದಾರೆ. ‌

ಇದೆಲ್ಲ ಯಾಕಾಗುತ್ತಿದೆ? ಕಾರಣಗಳೇನು?

೧. ಟಿವಿ ಏಕಮುಖ ಮಾಧ್ಯಮ. ಅಲ್ಲಿ ನಿರೂಪಕನೊಂದಿಗೆ ಸಂವಾದ ಸಾಧ್ಯವಿಲ್ಲ. ಕನಿಷ್ಟ ಪ್ರಿಂಟ್‌ ಮಾಧ್ಯಮದಲ್ಲಿ ವಾಚಕರಿಗೊಂದಷ್ಟು ಜಾಗವಿದೆ. ಜನ ಇದೀಗ ವ್ಯಕ್ತಿಯೊಂದಿಗೆ ಕನೆಕ್ಟ್‌ ಆಗುವುದು ಇಷ್ಟಪಡುತ್ತಾರೆ. ವ್ಯಕ್ತಿ ಸರಿಯೆನಿಸಿದರೆ ಅವನು ಹೇಳುವುದೆಲ್ಲವೂ ವಿಶ್ವಾಸಾರ್ಹವೆನಿಸುತ್ತದೆ.

೨. ಟಿವಿ ಎಲ್ಲರಿಗೂ ಸಲ್ಲುವ ಸಾಮಾನ್ಯ ವಿಷಯಗಳ ಬಗ್ಗೆ ಮತ್ತು ಎಲ್ಲರಿಗೂ ಅರ್ಥವಾಗುವ ಸಾಮಾನ್ಯ ಆಳದ್ದಷ್ಟನ್ನೇ ತೋರಿಸಬೇಕಾಗುತ್ತದೆ. ಡಿಜಿಟಲ್‌ ಜಾಗದಲ್ಲಿ ಜನರ ಆಸಕ್ತಿಗೆ ಅನುಗುಣವಾದದ್ದು ಅವರ ಬುದ್ಧಿಗೆ ಸಮನಾದದ್ದು ತೋರಿಸಲು ಅವಕಾಶವಿದೆ. ಹಣ, ಪುಸ್ತಕ, ಆರೋಗ್ಯ, ತಂತ್ರಜ್ಞಾನ, ಜಾಗತಿಕ, ಮಿಲಿಟರಿ, ವಿಜ್ಞಾನ.. ಏನು ಬೇಕೋ ಅದನ್ನು ಮಾತ್ರ ನೋಡಬಹುದಾಗಿದೆ. ಈ ಪ್ರತಿ ವಿಷಯಗಳಲ್ಲಿ ಸಂಬಂಧಪಟ್ಟ ತಜ್ಞರನ್ನು ಆಲಿಸಿಕೊಳ್ಳಬಹುದಾಗಿದೆ. ಎಲ್ಲೆಂದರಲ್ಲಿ ಎಷ್ಟು ಬೇಕೋ ಅಷ್ಟು ಏನು ಬೇಕೋ ಅದನ್ನಷ್ಟೇ ನೋಡಲು ಸಾಧ್ಯವಿದೆ. ಬಾತ್‌ರೂಮಲ್ಲಿ, ಮೆಟ್ರೋದಲ್ಲಿ, ರಿಕ್ಷಾದಲ್ಲಿ.. ಐದು ನಿಮಿಷ, ಹತ್ತು ನಿಮಿಷ.

೬. ಇಂಡಿವಿಡ್ಯುವಲ್‌ ಕ್ರಿಯೇಟರುಗಳಿಗೆ ಏಳು ದಿವಸ ಇಪ್ಪತ್ನಾಲ್ಕು ಗಂಟೆಯೂ ಏನಾದರೂ ಸುದ್ದಿ ಸೃಷ್ಟಿಸುವ ಹೊರೆ ಇರಲ್ಲ. ಇದರಿಂದಾಗಿ ಹೆಚ್ಚಿನ ಅಧ್ಯಯನ, ವಿಷಯದ ಆಳ, ವಿಡಿಯೋದ ಗುಣಮಟ್ಟ- ವಿಸ್ತರಿಸುವುದಕ್ಕೆ ಅವಕಾಶವಿದೆ.

೭. ಟಿವಿ ಮಾಧ್ಯಮಗಳು ಕೆಲವೊಮ್ಮೆ ಕೆಲವನ್ನು ಸೆನ್ಸಾರ್‌ ಮಾಡಬೇಕಾಗುತ್ತದೆ. ಅನೇಕ ಒತ್ತಡಗಳಿಂದ ಕೆಲವು ಸುದ್ದಿಗಳನ್ನು ಹಿಡಿದಿಡಬೇಕಾಗುತ್ತದೆ. ಸಂಸ್ಥೆಯ ಚೌಕಟ್ಟುಗಳಿರುತ್ತವೆ. ವೈಯುಕ್ತಿಕ ಮಾಧ್ಯಮಗಳಿಗೆ ಇಂತಹ ಗಡಿರೇಖೆಗಳು ಕಡಿಮೆ.

೯. ಮುಖ್ಯವಾಗಿ ಡಿಜಿಟಲ್‌ ಚಾನೆಲ್ಲುಗಳನ್ನು ಆರಂಭಿಸಲು ನೀವು ಯಾವುದೇ ಆಫೀಸು ತೆರೆಯಬೇಕಿಲ್ಲ, ಉದ್ಯೋಗಿಗಳನ್ನು ನೇಮಿಸಿಕೊಳ್ಳಬೇಕಿಲ್ಲ. ನಾಳೆಯೇ ನೀವೂ ಒಂದು ಆರಂಭಿಸಬಹುದು. ಒಂದು ವಿಷಯದ ಪರಿಣಿತಿ, ಒಂದು ಒಳ್ಳೆಯ ಫೋನು ಮತ್ತು ಒಂದಷ್ಟು ಎಡಿಟಿಂಗ್‌ ಕೌಶಲ್ಯ, ಇಷ್ಟು ಸಾಕು.

ಆಯ್ತು, ಫೇಸ್ಬುಕ್‌, ಯೂಟ್ಯೂಬ್‌, ಟ್ವಿಟರ್ ಬಂದು ಇಪತ್ತು ವರ್ಷಗಳಾಯ್ತು. ಇನ್ಸ್ಟಾಗ್ರಾಮ್‌ ಬಂದು ಹದಿನೈದು ವರ್ಷಗಳಾಯ್ತು. ಇದ್ದಕ್ಕಿದ್ದಂತೆ ಯಾಕೀ ಬೆಳವಣಿಗೆ? ೨೦೨೪ರಲ್ಲಿ ಭಾರತದಲ್ಲಿ ಡಿಜಿಟಲ್‌ ವೇದಿಕೆಗಳು ಅಧಿಕೃತವಾಗಿ ಟಿವಿ ಮಾದ್ಯಮವನ್ನು ಹಿಂದೆ ಹಾಕಿವೆ.

೧. ಹಿಂದೆ ಈ ವೇದಿಕೆಗಳಲ್ಲಿ ʼಮಾನೆಟೈಸೇಶನ್‌ʼ ಇರಲಿಲ್ಲ. ಅಂದರೆ ಹಣ.. ಈಗ ಆಯಾ ಕಂಪನಿಗಳು ಹಣ ಕೊಡುವುದು ಆರಂಭಿಸಿದ್ದಾರೆ. ಅರ್ಥಾತ್‌ ಇಲ್ಲೀಗ ನೈಜ ಆದಾಯವಿದೆ.

೨. ಮುಂಚೆ ಕಂಟೆಂಟನ್ನು ಪ್ರಸಾರ ಮಾಡುವುದರಲ್ಲಿ ಅಲ್ಗೋರಿತಮುಗಳ ಕೈಚಳಕ ಇರಲಿಲ್ಲ. ಇದೀಗ ವಿಷಯದ ಒರಿಜಿನಾಲಿಟಿ ಮೇರೆಗೆ, ಪ್ರಸ್ತುತತೆ ಮೇರೆಗೆ, ಜನರ ಪ್ರತಿಕ್ರಿಯೆ ಮೇರೆಗೆ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಉಪಕರಣಗಳು ಕೆಲವು ಕಂಟೆಂಟನ್ನು ಆಯ್ಕೆ ಮಾಡಿಕೊಂಡು ತಾವೇ ಜನರಿಗೆ ಪುಶ್‌ ಮಾಡುತ್ತವೆ. ಅರ್ಥಾತ್‌ ಅವರ ಆದಾಯ ನಿಮ್ಮ ಆದಾಯ- ಒಂದಕ್ಕೊಂದು ಜೋಡಿಸಿಕೊಂಡಿವೆ.

೩. ಮುಂಚಿನ ಫೋನುಗಳಲ್ಲಿ ಒಳ್ಳೆಯ ಕ್ಯಾಮೆರಾ ಇರಲಿಲ್ಲ. ಮೊನ್ನೆ ಮೊನ್ನೆ ತನಕ ಡ್ರೋನ್‌ ಕ್ಯಾಮೆರಾ ಇರಲಿಲ್ಲ. ಇದೀಗ ಇವೆಲ್ಲವೂ ಎಲ್ಲರ ಮಾಣಿಕ್ಯವಾಗಿಬಿಟ್ಟಿವೆ. ಹಾಗೇ ಈಗ ಎಐ ವಿಡಿಯೋ ಉಪಕರಣಗಳು ಎಲ್ಲೆಡೆ ಲಭ್ಯವಿರುವವು. ಅಪರೇಶನ್‌ ಸಿಂದೂರಿನ ಆಕರ್ಷಕ ಅನಿಮೇಶನ್‌ ಮತ್ತು ಪರಿಣಿತರ ವಿಶ್ಲೇಷಣೆ ಆ ಸಂಜೆಯೇ ಯುಟೂಬಲ್ಲಿ ಬಂದುಬಿಟ್ಟಿತ್ತು.

೪. ಈ ಮೊದಲು ಹಲವು ಸಲ ಹೇಳಿರುವಂತೆ ಕ್ಲೌಡ್‌, ೫ಜಿ ಮತ್ತು ಇದೀಗ ಎಐ- ಇವುಗಳೊಂದಿಗೆ ಬದಲಾದ ಜನರ ಮನೋಭಾವ ಎಲ್ಲವೂ ಸೇರಿಕೊಂಡು ತಂತ್ರಜ್ಞಾನ ತಾನೇ ಸೃಷ್ಟಿಸಿದ್ದ ಸಮಸ್ಯೆಯೊಂದನ್ನು ತಾನೇ ಬಗೆಹರಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ.

ಇದೂ ಎಷ್ಟು ದಿವಸ ಇರುತ್ತೋ ಮತ್ತೆ ಏನು ಹೊಸದು ಬರುತ್ತೋ ಕಾದುನೋಡೋಣ. ಗೂಗಲ್‌ ಸರ್ಚಿಗೆ ಪರ‍್ಯಾಯವೇ ಇರಲಿಕ್ಕಿಲ್ಲ ಎಂದು ಭಾವಿಸಿದ್ದೆವು. ಅದರ ಜಾಗವನ್ನು ಭಾರತೀಯನೊಬ್ಬನ ಕಂಪನಿ ಪರ್ಪ್ಲೆಕ್ಸಿಟಿ ಆಕ್ರಮಿಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.