ಭೂಮಿ ನಿಜಕ್ಕೂ ಚಪ್ಪಟೆಯಾಗಿದೆಯೇ?
Blog post description.
6/26/20251 min read


The world is Flat, ಥಾಮಸ್ ಫ್ರೀಡ್ಮನ್ 2005ರಲ್ಲಿ ಬರೆದ ಪುಸ್ತಕ. ಥಾಮಸ್ ಫ್ರೀಡ್ಮನ್ ಅಮೆರಿಕಾದ ಲೇಖಕ, ರಾಜಕೀಯ ವಿಶ್ಲೇಷಕ. ಫ್ರೀಡ್ಮನ್ 2000ರ ದಶಕದಲ್ಲಿ ಒಮ್ಮೆ ಬೆಂಗಳೂರಿಗೆ ಬಂದಿದ್ದಾಗ ಇಲ್ಲಿ ಡೆಲ್, ಮೈಕ್ರೋಸಾಫ್ಟ್, ಎಒಲ್ ಮುಂತಾದ ಅಮೆರಿಕಾ ಕಂಪನಿಗಳು ನೆಲೆ ನಿಂತಿರುವುದು; ಅವುಗಳಲ್ಲಿ ಭಾರತೀಯರು ಕೆಲಸ ಮಾಡುತ್ತಿರುವುದು; ಅವುಗಳ ಸಾಫ್ಟವೇರು ಜಗತ್ತಿನಾದ್ಯಂತ ರಫ್ತಾಗುವುದು- ಇದನ್ನೆಲ್ಲ ನೋಡಿ ಮೂಕವಿಸ್ಮಿತನಾಗಿ 'ತಂತ್ರಜ್ಞಾನ ಮತ್ತು ವ್ಯಾಪಾರ ಜಗತ್ತಿನ ಗೋಡೆಗಳನ್ನು ಒಡೆಯುತ್ತಿವೆ, ಅದೃಶ್ಯ ಬೆಟ್ಟಗಳು ಕರಗುತ್ತಿವೆ, ಪ್ರಪಂಚ ಚಪ್ಪಟೆಯಾಗುತ್ತಿದೆ, ಈ ಗಡಿಗಳಿಲ್ಲದ ನೆಲದ ಮೇಲೆ ಇನ್ನು ಮುಂದೆ ಹಣ, ಐಡಿಯಾ, ಸ್ಪರ್ಧೆ ನೀರಿನಂತೆ ಎಲ್ಲಾ ಕಡೆ ಹರಿಯಲಿದೆ' ಎಂದು ಭಾವುಕನಾಗಿ ಈ ಪುಸ್ತಕ ಬರೆಯುತ್ತಾನೆ. ಇದಕ್ಕೆ 'ಜಾಗತೀಕರಣ-3' ಎಂದು ಹೆಸರಿಡುತ್ತಾನೆ. 'ಬರೀ ಸರಕಾರಗಳು, ಕಂಪನಿಗಳಷ್ಟೇ ಅಲ್ಲ ಇನ್ನು ಮುಂದೆ ಪ್ರತಿಯೊಬ್ಬ ವ್ಯಕ್ತಿಯೂ ಈ ಜಾಗತಿಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ' ಎಂದು ಘೋಷಿಸುತ್ತಾನೆ. ಅವನ ಆಲೋಚನೆಗೆ ವ್ಯಾಪಕವಾದ ಮನ್ನಣೆ ಸಿಗುತ್ತದೆ. ಇದು ಮನುಷ್ಯಕುಲಕ್ಕೆ ಒಳಿತು ಮಾಡಲಿದೆ ಎಂಬ ಯೂಟೋಪಿಯನ್ ಆಶಾಭಾವನೆ ಮೂಡುತ್ತದೆ.
ಫ್ರೀಡ್ಮನ್ ಯಾಕೆ ಪ್ರಪಂಚ ಚಪ್ಪಟೆಯಾಯ್ತು ಎಂಬುದಕ್ಕೆ ಹತ್ತು ಕಾರಣಗಳನ್ನು ಪಟ್ಟಿ ಮಾಡುತ್ತಾನೆ. ಬರ್ಲಿನ್ ಗೋಡೆ ಬಿದ್ದುದರಿಂದ ಹಿಡಿದು ಇಂಟರ್ನೆಟ್ ಸಾರ್ವಜನಿಕವಾಗಿದ್ದು, ತಂತ್ರಜ್ಞಾನ ಮುಕ್ತವಾಗಿದ್ದು, ಜಾಗತಿಕ ಸಪ್ಲೈ-ಚೈನ್ ಸೃಷ್ಟಿಯಾಗಿದ್ದು, ಔಟ್‌ಸೋರ್ಸಿಂಗ್, ಆಫ್‌ಶೋರಿಂಗ್ ಮುಂತಾದವು ಪಟ್ಟಿಯಲ್ಲಿವೆ. ಸಿನರ್ಜಿ(ಒಪ್ಪಂದಗಳು), ಅಡಾಪ್ಟೇಶನ್(ಹೊಂದಿಕೊಳ್ಳುವುದು), ಹೊಸ ಸ್ಪರ್ಧಾಳುಗಳು(ಚೈನಾ, ಭಾರತದಂತಹ ದೇಶಗಳ ಉದ್ಯಮಿಗಳು)- ಈ ಮೂರು ಬೆಳವಣಿಗೆಗಳಿಂದ ಜಾಗತೀರಣದ ಮೂರನೇ ಅಧ್ಯಾಯಕ್ಕೆ ನಾಂದಿಯಾಯ್ತು ಎನ್ನುತ್ತಾನೆ.
ಇದೀಗ ಸರಿಯಾಗಿ ಇಪ್ಪತ್ತು ವರುಷಗಳು ಉರುಳಿವೆ. ಸಿನಿಮಾ, ದಾರವಾಹಿಗಳಲ್ಲಿ ʼಇಪ್ಪತ್ತು ವರ್ಷಗಳ ಹಿಂದೇ…ʼ ಅಂತಾರಲ್ಲ ಹಾಗಾಗಿದೆ. ಅಂದರೆ ಎಲ್ಲವೂ ತಲೆಕೆಳಗಾಗಿದೆ. ಆರ್ಥಿಕ ರಾಷ್ಟ್ರೀಯತೆ ಮುನ್ನಲೆಗೆ ಬಂದಿದೆ. ನೀರಿನಂತೆ ಹರಿಯಬೇಕಿದ್ದ ಹಣ, ಐಡಿಯಾ, ಸ್ಪರ್ಧೆಗಳಿಗೆ ಅಡ್ಡವಾಗಿ 'ನೀನೇಷ್ಟೋ ನಾನಷ್ಟು' ಎಂಬಂತೆ ಜಿದ್ದಿಗೆ ಬಿದ್ದು ಟ್ಯಾರಿಫ್ ಯುದ್ಧಕ್ಕೆ ಇಳಿದಿದ್ದಾರೆ. ಬೃಹತ್ ತಡೆಗೋಡೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಈ ಯುದ್ಧ ಆರ್ಗಾನಿಕ್ಕಾಗಿ ಶುರುವಾಗಿದ್ದಲ್ಲ. ಇದು ಉದ್ದೇಶಿತ, ಪ್ರತೀಕಾರದ ಯುದ್ಧ(retaliation tariff). ಪಟಾಕಿ ಸರಮಾಲೆಯಿದ್ದಂಗೆ. ಒಂದು ಪಟಾಕಿ ಇನ್ನೊಂದು ಪಟಾಕಿಗೆ ಕಿಡಿಯಾಗುತ್ತದೆ. ಆದ್ದರಿಂದ ಇದು ಅಪಾಯಕಾರಿ.
ಅಮೆರಿಕಾ-ಚೈನಾ ನಡುವೆ ಟ್ಯಾರಿಫ್ ಯುದ್ಧ ಶುರುವಾಗಿದ್ದು 2018ರಲ್ಲಿ. ಅಮೆರಿಕಾ ಚೈನಾದ ಸ್ಟೀಲ್ ಅಲ್ಯೂಮಿನಿಯಂ ಮೇಲೆ ಸುಂಕ ವಿಧಿಸಿತ್ತು; ಪ್ರತ್ಯುತ್ತರವಾಗಿ ಚೈನಾ ಅಮೆರಿಕಾದ ಸೋಯಾಬೀನ್, ಕಾರ್, ಬೀಫ್, ಪೋರ್ಕಿನ ಮೇಲೆ ಸುಂಕ ವಿಧಿಸಿತ್ತು. ಈ ಸಮರ ಅಮೆರಿಕಾ-ಯುರೋಪಿಗೆ ವಿಸ್ತರಿಸಿದ್ದರೂ ಅಮೆರಿಕಾಗೆ ಚೈನಾ ಮೇಲೆ ಭಯ/ಹಗೆ ಇದ್ದಷ್ಟು ಯುರೋಪಿನ ಮೇಲೆ ಇಲ್ಲ. ಯಾಕಂದರೆ ಯುರೋಪು ಎಂದಿಗೂ ಅಮೆರಿಕಾದೊಂದಿಗೆ ಸ್ಪರ್ಧೆಗೆ ಇಳಿದಿರಲಿಲ್ಲ. ವಿಶ್ವ ವಾಣೀಜ್ಯ ಸಂಸ್ಥೆ(WTO) ಪ್ರಕಾರ ಈ ಯುದ್ಧದಿಂದ ಜಗತ್ತಿನ ವ್ಯಾಪಾರಕ್ಕೆ ಶೇಖಡಾ 80%ರಷ್ಟು ನಷ್ಟವಾಗಲಿದೆ. ಅಂತರಾಷ್ಟ್ರೀಯ ಹಣಕಾಸು ನಿಧಿ(IMF) ಪ್ರಕಾರ ಜಾಗತಿಕ ಜಿಡಿಪಿ 0.3 ಕಡಿಮೆಯಾಗಲಿದೆ. ಸಾಕಷ್ಟು ಉದ್ಯೋಗ ನಷ್ಟದ ಭೀತಿಯಿದೆ. ಎಲ್ಲರಿಗೂ ಎಲ್ಲರ ಮೇಲೆ ಭಯ; ಜಾಗತಿಕ ವಿಶ್ವಾಸ ಕಡಿಮೆಯಾಗಿದೆ.
ಫ್ರೀಡ್ಮನ್ನಿನ ಪುಸ್ತಕ ಬಂದಾಗಲೇ ಅದನ್ನು ಸಾಕಷ್ಟು ಜನ ಇದು ಅಸತ್ಯ, ಉತ್ಪ್ರೇಕ್ಷಿತ ಎಂದು ಟೀಕಿಸಿದ್ದರು. ಜಾಗತಿಕ ಅಸಮಾನತೆ ಮತ್ತು ದುರ್ಬಲ ಸಂಬಂಧಗಳನ್ನು ಕಡೆಗಣಿಸಿ ಫ್ರೀಡ್ಮನ್ ಸುಂದರ ರಂಗೋಲಿ ಬಿಡಿಸುವ ಪ್ರಯತ್ನ ಮಾಡಿದ್ದಾರೆ ಎಂದಿದ್ದರು. ʼಸಾಕ್ಷ್ಯಾಧಾರ ಒದಗಿಸದೇ ದಂತಕತೆಗಳ ಮೋಹಕ್ಕೆ ಸಿಲುಕಿದ್ದಾರೆʼ ಎಂದೂ ಟೀಕಿಸಿದ್ದರು. ಆಗಲೇ ಇಂಡೋ ಅಮೇರಿಕನ್ ಆರ್ಥಿಕ ಪರಿಣಿತ ಪಂಕಜ್ ಘೆಮಾವತ್ ʼಈ ಆರ್ಥಿಕ ಜಗತ್ತು ಸಮತಟ್ಟಾಗಿಲ್ಲ, ಇಲ್ಲಿ ಸಾಕಷ್ಟು ಚೂಪು ಮೊನೆಗಳಿವೆʼ ಎಂದಿದ್ದರು. ಮುಖ್ಯವಾಗಿ ಫ್ರೀಡ್ಮನ್‌ನ ಅವಲೋಕನ ಅಮೂರ್ತ ಬಿಟ್ಸ್‌ಗಳನ್ನಷ್ಟೇ(software) ಪರಿಗಣಿಸಿ ಬರೆದುದಾಗಿತ್ತು; ಮೂರ್ತ ಆಟಮ್‌ಗಳನ್ನಲ್ಲ.(physical things) ಅಂದರೆ ಕೇವಲ ಸಾಫ್ಟವೇರ್‌ನ ಜಾಗತೀಕರಣದಿಂದ ಅವರು ಅಷ್ಟು ರೋಮಾಂಚನಗೊಂಡಿದ್ದರು.
ಫ್ರೀಡ್ಮನ್ ಜಾಗತೀಕರಣದಿಂದ ತಂತಾನೇ ಸೃಷ್ಟಿಯಾಗಿದ್ದ ಸಪ್ಲೈಚೈನ್ ಬಗ್ಗೆ ಸೋಜಿಗಗೊಂಡಿದ್ದರು. ಇದೊಂದು ಅಪೂರ್ವ ವ್ಯಾಪಾರೀ ನರತಂತು. ಬಹುಶಃ ಸಿಲ್ಕ್‌ರೂಟ್ ಕಾಲದಲ್ಲಿ ಹೀಗಿದ್ದಿತ್ತೇನೋ. ಇದೀಗ ಅಲ್ಲಲ್ಲಿ ನರಗಳು ಕಟ್ ಆಗಿ ನರತಂತುವಿಗೆ ಹೊಡೆತ ಬಿದ್ದಿದೆ. ಕಂಪನಿಗಳು ತಮ್ಮ ಸಪ್ಲೈಚೈನನ್ನು ಮರುಜೋಡಿಸಿಕೊಳ್ಳಬೇಕಾಗ ಒತ್ತಡ ಬಿದ್ದಿದೆ. ಆಸಕ್ತಿಕರವೇನೆಂದರೆ ಈ ಏರುಪೇರಿನಿಂದ ಪಾರಾಗಲು ಕಂಪನಿಗಳು ಆಶ್ರಯಿಸುತ್ತಿರುವುದು ಮತ್ತದೇ ಚಪ್ಪಟೆ ಜಗತ್ತಿನ ಉಪಾಯಗಳನ್ನು. ಅಂದರೆ ಅವರೆಲ್ಲಾ ಇದೀಗ ಹತ್ತಿರದ ದೇಶ, ಮಿತ್ರದೇಶಗಳ ಮೊರೆಹೋಗುತ್ತಿದ್ದಾರೆ. ಇದನ್ನು Nearshoring, friendshoring ಎನ್ನುತ್ತಾರೆ. ಅಂದರೆ ದೂರದ ಚೈನಾಗಿಂದ ಹತ್ತಿರದ ಮೆಕ್ಸಿಕೋ ಅಥವಾ ರಾಜಕೀಯವಾಗಿ ಸ್ನೇಹವಿರುವ ಭಾರತದಂತಹ ದೇಶಗಳೊಂದಿಗೆ ಸಂಬಂಧ ಕುದುರಿಸುವುದು. ಜಾಗತಿಕ ಸಪ್ಲೈಚೈನ್ ಮೇಲೆ ಅತಿಯಾಗಿ ಅವಲಂಬಿತವಾಗಿರುವ ಆಟೋಮೊಬೈಲ್ ಉದ್ಯಮ ರಾಜಕೀಯ ನೇತಾರರೊಂದಿಗೆ ಲಾಬಿ ಮಾಡಿ ಟ್ಯಾರಿಫ್ ಶಿಕ್ಷೆ ತಪ್ಪಿಸಿಕೊಳ್ಳುತ್ತಿದೆ. ತಂತ್ರಜ್ಞಾನ ಉದ್ಯಮ ಭಾರತ ಮತ್ತು ವಿಯೆಟ್ನಾಮಿನತ್ತ ತಿರುಗುತ್ತಿವೆ. ರೀಟೇಲ್ ಉದ್ಯಮ ಮೆಕ್ಸಿಕೋದಂತಹ ದೇಶಗಳತ್ತ ನೋಡುತ್ತಿವೆ.
ಈ Begger thy neighbhor policyಯಿಂದ ನಿಜವಾದ ಹೊಡೆತ ಯಾರಿಗೆ ಬೀಳಲಿದೆ? ಅಂತಿಮವಾಗಿ ಗ್ರಾಹಕರಿಗೆ ಮತ್ತು ಫ್ರೀಡ್ಮನ್ ಕೊಂಡಾಡಿದ್ದ ಜಾಗತಿಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದ್ದ ʼಇಂಡಿವಿಜುವಲ್ʼಗೆ. ಗ್ರಾಹಕರಿಗೆ ತಾವು ಕೊಂಡುಕೊಳ್ಳುವ ದಿನನಿತ್ಯ ಅಗತ್ಯಗಳಾದ ಸೋಪು, ಬಟ್ಟೆ, ವಾಶಿಂಗ್ ಮಶೀನು, ಅಕ್ಕಿ, ಎಲೆಕ್ಟ್ರಾನಿಕ್ ಉಪಕರಣಗಳು.. ಇವುಗಳ ಬೆಲೆ ಜಾಸ್ತಿಯಾಗಲಿದೆ. ಅಮೆರಿಕಾದ ಗ್ರಾಹಕರು ಈಗಾಗಲೇ ಮೆಕ್ಸಿಕೋ, ಬ್ರೆಜಿಲ್, ವಿಯೆಟ್ನಾಂ, ಕೆನಡಾ, ದಕ್ಷಿಣ ಕೊರಿಯಾ ದೇಶಗಳತ್ತ ತಿರುಗಿದ್ದಾರೆ.
ತಮ್ಮನ್ನು ಪ್ರತಿನಿಧಿಸುವ ಕಂಪನಿಗಳು ಇಲ್ಲದಂತಹ ಕೃಷಿಕರು, ಸಣ್ಣ ಉದ್ದಿಮೆದಾರರು ಅರ್ಥಾತ್ ಇಂಡಿವಿಡ್ಯುವಲ್‌ಗಳು-ಇವರಿಗೂ ಇದರ ಹೊಡೆತ ಬೀಳಲಿದೆ. ಯಾಕಂದರೆ ಅವರ ಪರವಾಗಿ ಲಾಬಿ ಮಾಡಲು ಮೇಲೆ ಯಾರೂ ಕೂತಿಲ್ಲ. ಆದ್ದರಿಂದ ಇವರೆಲ್ಲಾ ಏನಾಗುತ್ತೋ ಅದನ್ನು ಅನುಭವಿಸಬೇಕು. ನಿಮ್ಮ ಯಾವುದೋ ಕುಸುರಿ ವಸ್ತು ಅಮೆರಿಕಾಗೆ ರಫ್ತಾಗುತ್ತಿದ್ದಲ್ಲಿ ಇದ್ದಕ್ಕಿದ್ದಂಗೆ ಅದು ನಿಲ್ಲಬಹುದು!
ಫ್ರೀಡ್ಮನ್ ಪುಸ್ತಕ ಇವತ್ತಿಗೆ ಯಾಕೆ ಮುಖ್ಯ ಎಂದರೆ ಅದು ಅಂದು ನಾವು ಯಾವ ದಾರಿಯಲ್ಲಿದ್ದೆವು ಎಂಬುದನ್ನು ನೆನಪಿಸುತ್ತದೆ. ಎಲ್ಲಿ ಹೇಗೆ ದಾರಿ ತಪ್ಪಿದ್ದೇವೆ ಎಂಬುದನ್ನೂ ಚಿಂತಿಸುವಂತೆ ಮಾಡುತ್ತದೆ.
ಹಾಗಾದರೆ ಸೀಮಾತೀತ ಜಗತ್ತು, ಫ್ಲಾಟ್ ವರ್ಲ್ಡ್‌ನ ಕನಸು ಮುಗಿಯಿತೇ? ಗೊತ್ತಿಲ್ಲ, ಅದನ್ನು ರಾಜಕೀಯ ನೇತಾರರೇ ನಿರ್ಧರಿಸಬೇಕು. ಇದು ನಾಗರೀಕತೆಯಲ್ಲಾಗುತ್ತಿರುವ ಮೂಲಭೂತ ಬದಲಾವಣೆ ಎಂದು ವಾದಿಸುವವರಿದ್ದಾರೆ. ಹಿಂದೆ ಬಂದುಹೋದ ಶೀತಲ ಸಮರದ ಕಾಲವನ್ನು ನೆನಪಿಸುತ್ತಾರೆ. ಇಲ್ಲಾ ಇದೊಂದು ಘಟ್ಟವಷ್ಟೇ ಅನ್ನುವವರೂ ಇದಾರೆ. ಇಷ್ಟು ದಿವಸ ಹೈಪರ್-ಗ್ಲೋಬಲೈಸೇಶನ್ ಇತ್ತು ಇದೀಗ ಸ್ಲೋ-ಬಲೈಸೇಶನ್ ಮೂಲಕ ಅದರ ಕರೆಕ್ಷನ್ ಆಗುತ್ತಿದೆ ಅನ್ನುತ್ತಾರೆ.
ಅಂತಿಮವಾಗಿ ಜಗತ್ತು ಯಾವತ್ತಿಗೂ ಚಪ್ಪಟೆಯಾಗಿರಲ್ಲ ಎಂಬುದೇ ಸತ್ಯ. ಅದೊಂದು ಆದರ್ಶ ಆಶಾಭಾವನೆ ಮಾತ್ರ. ಯಾಕಂದರೆ ಯಾವುದೇ ದೇಶ ತಾನು ಅಸುರಕ್ಷ ಅಂದುಕೊಂಡ ಕೂಡಲೇ ಅದು ತನ್ನದನ್ನು ಭದ್ರಮಾಡಿಕೊಳ್ಳಲು ಏನೆಲ್ಲ ಮಾಡಬೇಕೋ ಅಷ್ಟನ್ನೂ ಮಾಡುತ್ತದೆ. ಪ್ರತಿ ದೇಶವೂ ಹಾಗೆ ಮಾಡಿದಾಗ ಜಗತ್ತು ದ್ವೀಪಗಳಾಗುತ್ತವೆ. ಜನರು ಬುಡಕಟ್ಟಿನ ಮನೋಭಾವಕ್ಕೆ ಮರಳುತ್ತಾರೆ.
ಪುಸ್ತಕದ ಅಂತ್ಯದಲ್ಲಿ ಫ್ರೀಡ್ಮನ್ Dell Theory of Conflict Prevention ಎಂಬ ಥಿಯರಿಯನ್ನು ಮಂಡಿಸುತ್ತಾನೆ. ಅದು ಏನು ಹೇಳುತ್ತೆ ಅಂದರೆ ಯಾವುದೇ ಎರಡು ದೇಶಗಳು ಒಂದೇ ಸಪ್ಲೈ-ಚೈನ್‌ನ ಬಳಕೆದಾರರಾಗಿದ್ದಲ್ಲಿ ಅವು ಪರಸ್ಪರ ಯುದ್ಧಕ್ಕೆ ಇಳಿಯುವುದಿಲ್ಲಾ. ಸರಳವಾಗಿ- ನಮ್ಮ ದೇಶದ ಬಹುದೊಡ್ಡ ಉದ್ದಿಮೆಯೊಂದು ಬ್ರೆಜಿಲ್‌ನಲ್ಲಿ ವ್ಯಾಪಕವಾಗಿ ತೊಡಗಿಸಿಕೊಂಡಿದ್ದಲ್ಲಿ ಭಾರತ ಮತ್ತು ಬ್ರೆಜಿಲ್ ಯುದ್ಧ ಮಾಡುವುದಿಲ್ಲ. ಮಾಡೋದೇ ಇಲ್ಲ ಅಂತಲ್ಲ, ಮಾಡಿದರೆ ಇಬ್ಬರಿಗೂ ಉಂಟಾಗುವ ನಷ್ಟ ಅಪಾರ.
ಈ ಥಿಯರಿಯನ್ನು ಒಡೆದು ಹಾಕುವಷ್ಟು, ಉಂಟಾಗುವ ನಷ್ಟಕ್ಕೆ ಕ್ಯಾರೆ ಅನ್ನದಷ್ಟು ಆರ್ಥಿಕ ರಾಷ್ಟ್ರೀಯತೆ ಬಲಗೊಂಡಿರುವುದು ಕರಾಳ ವಾಸ್ತವ.