ತಲೆಯೊಳಗೆ ಡೈನಾಸೊರನ್ನೇ ಬಿಟ್ಟುಕೊಳ್ಳೋಣ

Madhu Y N

12/17/20241 min read

ನಾವೆಲ್ಲಾ ಅಲ್ಲಿ ಇಲ್ಲಿ ಓದ್ತಿರ್ತೇವೆ. ಆಫ್ರಿಕಾದಲ್ಲಿ, ಅಮೆರಿಕಾದಲ್ಲಿ, ಯುರೋಪಲ್ಲಿ- ಲಕ್ಷಾಂತರ ವರ್ಷಗಳ ಹಿಂದೆ ಬದುಕಿದ್ದ ಡೈನೋಸರುಗಳದ್ದು ಬೆನ್ನು ಮೂಳೆ ಸಿಗ್ತು, ಆದಿಮಾನವನದ್ದು ತಲೆ ಬುರುಡೆ ಸಿಗ್ತು, ಸಾವಿರ ವರ್ಷಗಳ ಹಿಂದೆ ಜರುಗಿದ ಯುದ್ಧದಲ್ಲಿ ಮಡಿದ ಸೈನಿಕನ ಶವ ಸಿಕ್ತು, ರಾಜನ ಕುದುರೆಬಂಡಿ ಸಿಗ್ತು ಅಂತೆಲ್ಲಾ. ಆದರೆ ಇವೆಲ್ಲ ನಮ್ಮ ದೇಶದಲ್ಲಿ ಯಾಕೆ ಸಿಗಲ್ಲ ಯೋಚಿಸಿದ್ದೀರಾ? ನಮ್ಮಲ್ಲಿ ಡೈನೋಸರ್ ಇರಲಿಲ್ಲವೇ? ಆದಿಮಾನವರು ವಾಸಿಸಿರಲಿಲ್ಲವೇ? ರಾಜರುಗಳು ಇರಲಿಲ್ಲವೇ? ಯುದ್ಧಗಳು ಜರುಗಿಲ್ಲವೇ?

ಉತ್ತರ ಹುಡುಕುತ್ತಾ ಹೋದರೆ ಕೆಲವು ಅಚ್ಛರಿಯ ಮಾಹಿತಿಗಳು ಒದಗುತ್ತವೆ. ನಮ್ಮಲ್ಲಿ ಡೈನಾಸರ್‌ಗಳು ಇದ್ದವು. ಪಳಯುಳಿಕೆಗಳು ದೊರಿತಿವೆ. ಆದರೆ ತೀರಾ ಕಡಿಮೆ ಪ್ರಮಾಣದಲ್ಲಿ. ಸಿಕ್ಕಿರುವ ಪಳಯುಳಿಕೆಗಳಿಗೆ ಬರಾಪೋಸಾರಸ್, ಜೈನೋಸಾರಸ್, ರಾಜಾಸಾರಸ್ ,ಇಂಡೋಸಾರಸ್, ಬೃಹತ್ಕಾಯೋಸಾರಸ್ ಮುಂತಾಗಿ ಅನೇಕ ಹೆಸರುಗಳನ್ನು ಇಟ್ಟಿದಾರೆ. ಕಳೆದ ವರ್ಷ ಮಧ್ಯಪ್ರದೇಶದಲ್ಲಿ ಡೈನೋಸರ್‌ಗಳ ಸುಮಾರು ೨೬೦ ಮೊಟ್ಟೆಗಳು ಸಿಕ್ಕಿದ್ದವು. ಅಲ್ಲಿನ ಒಂದು ಹಳ್ಳಿಯ ಜನ ಡೈನೋಸರ್‌ ಮೊಟ್ಟೆಯನ್ನು ಕಲ್ಲಿನ ದೇವರೆಂದು ಬಗೆದು ಪೂಜೆ ಮಾಡುತ್ತಿದ್ದರು.

ಡೈನೋಸರ್‌ಗಳ ಮೂಲ ಹೇಳೋದಾದರೆ, ನಮ್ಮ ಭೂಮಿಯ ಎಲ್ಲಾ ಖಂಡಗಳು ಮೊದಲಿಗೆ ಒಟ್ಟಿಗೆ ಅಂಟಿಕೊಂಡಿದ್ದವು. ಅರ್ದಂಬರ್ಧ ಕಟ್ಟಿದ ಮುದ್ದೆಯಂತೆ. ಈ ಒಟ್ಟು ಖಂಡವನ್ನು ಪ್ಯಾಂಗೇಯಿಯಾ ಎನ್ನುತ್ತಾರೆ. ಅಗಲೇ ಡೈನೋಸರ್‌ಗಳು ಇದ್ದವು. ನಿಮಗೆ ಆಶ್ಚರ್ಯವಾಗಬಹುದು, ಭಾರತದ ಆಗಿನ ನೆರೆಯವರೆಂದರೆ ಆಫ್ರಿಕಾ, ಅಂಟಾರ್ಟಿಕಾ ಮತ್ತು ಅಸ್ಟ್ರೇಲಿಯಾ. ಆಗೆಲ್ಲಾ ನಾವು ಬದ್ಕಿದ್ದರೆ ಸುಮ್ನೆ ಹಿಂಗೆ ಟುಪಕ್‌ ಅಂತ ಜಂಪ್‌ ಹೊಡೆದು ಆಫ್ರಿಕಾ, ಅಂಟಾರ್ಟಿಕಾ, ಅಸ್ಟ್ರೇಲಿಯಾಕ್ಕೆ ಹೋಗಿ ಬರ‍್ಬೋದಿತ್ತು. ಇಂತಹ ಒಟ್ಟು ಖಂಡ ಕ್ರಮೇಣ ಟೆಕ್ಟಾನಿಕ್‌ ಮೂವ್ಮೆಂಟುಗಳಿಂದ ಅಂದರೆ ಭೂಮಿಯ ಒಳಪದರಗಳ ಬೇರ್ಪಡಿಕೆಯಿಂದ ತುಂಡು ತುಂಡುಗಳಾಗಿ ದೂರ ಸರಿದವು. ಹಂಗೇ ಆಯಾ ಪ್ರದೇಶದ ಡೈನೋಸರ್‌ಗಳು ಬೇರ್ಪಟ್ಟವು. ಮಡಗಾಸ್ಕರ್‌ ಎಂಬ ದ್ವೀಪ ಈಗ ಆಫ್ರಿಕಾ ಖಂಡದ ಬುಡದಲ್ಲಿದೆ. ನಮ್ಮ ಮತ್ತು ಅಲ್ಲಿನ ಡೈನಾಸರ್‌ಗಳ ಪಳಯುಳಿಕೆಗಳು ಒಂದೇ ಜಾತಿಯದ್ದಾಗಿವೆ.

ಇವತ್ತಿಗೂ ನಮ್ಮ ಖಂಡಗಳು ವರುಷಕ್ಕೆ ಒಂದು ಇಂಚಿನಂತೆ ದೂರ ಸರಿಯುತ್ತಿವೆ. ಇಂದಿನಿಂದ ಮಿಲಿಯನ್‌ ವರ್ಷಗಳ ನಂತರ ಹೇಳಕ್ಕಾಗಲ್ಲ ಯಾವ ದೇಶ ಯಾವ ಕಡೆ ತಿರುಗಿರುತ್ತೆ ಅಂತ. ಇದೊಂಥರ ರಜೆಯಲ್ಲಿ ಅಜ್ಜನ ಮನೆಯ ಹಜಾರದಲ್ಲಿ ಒಟ್ಟಿಗೆ ಮಲಗಿದ್ದ ಮಕ್ಕಳು ಬೆಳಗೆದ್ದಾಗ ಎತ್ತೆತ್ತಲೋ ಉರುಳಿಕೊಂಡು ಹೋಗಿದ್ದಂತೆ. ಗೊತ್ತಾ.. ಆಫ್ರಿಕಾ ಖಂಡ ಇದೀಗ ಲೈವ್‌ ಆಗಿ ದಿನೇ ದಿನೇ ಇಷ್ಟಿಷ್ಟೇ ಒಡೆದು ಹೋಳಾಗುತ್ತಿದೆ. ಯಾರದೋ ಜಮೀನು ಬಿರುಕು ಬಿಟ್ಟಂತೆ ಆ ಖಂಡದ ಬಿರುಕು ಹಲವು ದೇಶಗಳನ್ನು ಹಬ್ಬಿಕೊಂಡಿದೆ. ಹೊಸ ಸಮುದ್ರ ಉತ್ಪತ್ತಿಯಾಗುತ್ತಿದೆ. ಇದರ ಬಗ್ಗೆ ಮತ್ಯಾವಾಗಾದರೂ ವಿವರವಾಗಿ ತಿಳಿದುಕೊಳ್ಳುವ.

ಸರಿ, ನಮ್ಮಲ್ಲಿ ಆದಿಮಾನವರ ಬುರುಡೆ ಸಿಕ್ಕಿದ್ಯಾ? ಹೌದು ಆದರೆ ಸಿಕ್ಕಿದಾರೆ ಅಂತ ಬಹುವಚನ ಬಳಸಿಯೂ ಹೇಳಂಗಿಲ್ಲ ಅಷ್ಟು ವಿರಳವಾಗಿ! ೧೯೮೨ರಲ್ಲಿ ಮಧ್ಯಪ್ರದೇಶದ ನರ್ಮದಾ ನದಿ ತೀರದಲ್ಲಿ ಗೋಚರಿಸಿದ ನರ್ಮದಾ ಮ್ಯಾನ್ ನಮಗೆ ಸಿಕ್ಕಿರುವ ಏಕೈಕ ಆದಿಮಾನವ. ಹೋಮೋಸೇಪಿಯನ್ನುಗಳಿಗಿಂತ ಪೂರ್ವದವನು. ೨೫-೩೦ವರ್ಷದ ವಯಸಿನವ. ಅದ್ಯಾಕೆ ಅದು ಹೆಂಗೆ ಅವನೊಬ್ಬನೇ ಉಳಿದುಕೊಂಡನೋ ಗೊತ್ತಿಲ್ಲ. ಪಾಪ The lonely man ಎಂದೇ ಫೇಮಸ್ಸಾಗಿದಾನೆ. ಇಡೀ ದಕ್ಷಿಣ ಏಶಿಯಾದಲ್ಲೇ ಅತ್ಯಂತ ಹಳಬ. ಸುಮಾರು ಎರಡು ಮೂರು ಲಕ್ಷ ವರುಷಗಳಷ್ಟು ಹಿಂದೆ ಬದುಕಿದ್ದವ ಅಂತಾರೆ.

ನಮ್ಮ ಪೂರ್ವಜರಾದ ಆದಿಮಾನವರು ಫ್ಯಾಂಗೇಯಿಯಾ ಕಾಲದಲ್ಲಿ ಇದ್ದಿರಲಿಲ್ಲ. ಹಂಗೆಲ್ಲಾ ಹೋದರೆ ಮನುಷ್ಯ ತೀರ ಇತ್ತೀಚೆಗಿನ ಪ್ರಾಣಿ. ಡೈನೋಸರ್‌ಗಳು ಅಳಿದು ಎಷ್ಟೋ ಮಿಲಿಯನ್‌ ವರುಷಗಳ ನಂತರ ಮನುಷ್ಯನ ಉಗಮವಾಗಿದ್ದು.

ಆದರೆ ಒಂದು ತಮಾಷೆ ಹೇಳಲಾ? ನವಮಾನವರಾದ ನಾವೇ ಡೈನೋಸರ್‌ಗಳೊಂದಿಗೆ ಬದುಕ್ತಿದ್ದೇವೆ ಅಂದ್ರೆ ನಂಬ್ತೀರಾ? ಏನಿದು ಆಧುನಿಕ ಬಕಾಸುರರನ್ನೇ ಡೈನಾಸರ್‌ ಅಂತಿದ್ದೀನಾ ನಾನು? ಹಾಗೇನಿಲ್ಲ. ಇವತ್ತು ತಲೆ ಎತ್ತಿ ಆಕಾಶನೋ ಮರಗಳನ್ನೋ ನೋಡಿ. ಅಲ್ಲಿ ನಿಮಗೆ ಡೈನೋಸರ್‌ಗಳ ಮರಿಮೊಮ್ಮಕ್ಕಳು ಕಾಣಿಸ್ತಾರೆ. ಅವರೂ ಸಹ ಡೈನೋಸರ್‌ಗಳಂತೆಯೇ ಹಾರುತ್ತಾರೆ. ಚೀರುತ್ತಾರೆ. ಸೈಜು ಸ್ವಲ್ಪ ಚಿಕ್ದಾಗಿ, ಕಂಠ ಸ್ವಲ್ಪ ಕೋಮಲವಾಗಿಬಿಟ್ಟಿದೆ ಅಷ್ಟೇ. ಅಂದ್ರೇ ನಾವೇನು ಇವತ್ತು ಪಕ್ಷಿಗಳು ಅಂತೀವಲ್ಲ, ಅವು ಮೂಲತಃ ಡೈನೋಸರ್‌ಗಳು! ದಯಮಾಡಿ ಯಾರೂ ದೊಣ್ಣೆ ಹಿಡ್ಕೊಂಡು ನನ್ನನ್ನು ಅಟ್ಟಿಸ್ಕೊಂಡು ಬರಬೇಡಿ ಆಯ್ತ, ಇದು ನಿಜಾ!

ಥೆರಪೋಡ್‌ ಎಂಬ ಜಾತಿಯ ಡೈನೋಸರ್‌ಗಳ ಮರಿಮೊಮ್ಮಕ್ಕಳೇ ನಮ್ಮ ಇಂದಿನ ಪಕ್ಷಿಗಳು.
ವಾಪಸ್ ವಿಷಯಕ್ಕೆ ಬರುವ.

ನಮ್ಮಲ್ಲಿ ಯಾಕೆ ಈ ಡೈನೋಸರ್‌ಗಳ, ಆದಿಮಾನವರ ಪಳಯುಳಿಕೆಗಳು ಕಮ್ಮಿ? ಇತ್ತೀಚೆಗೆ ಯುರೋಪಿನಲ್ಲಿ ಕೇವಲ ಸಾವಿರ ವರುಷಗಳ ಹಿಂದಿನ ಸರಳಿನ ಶಿರಸ್ತ್ರಾಣವಿದ್ದ ಸೈನಿಕನ ಜಜ್ಜಿಹೋಗಿದ್ದ ತಲೆ ಸಿಕ್ಕಿದೆ. ಫ್ರಾನ್ಸಲ್ಲಿ ಪ್ರತಿವರ್ಷ ಎರಡನೇ ಮಹಾಯುದ್ಧದಲ್ಲಿ ಮಡಿದ ಸೈನಿಕರ ದೇಹಗಳು ಸಿಗ್ತಿರ್ತವಂತೆ. ನಮ್ಮಲ್ಲಿ ಯಾಕಿಲ್ಲ?

ಅನೇಕ ಭೌಗೋಳಿಕ ಮತ್ತು ಕೆಲವು ಸಾಮಾಜಿಕ ಕಾರಣಗಳುಂಟು. ಮುಖ್ಯವಾಗಿ ನಮ್ಮ ದೇಶದ ಮಣ್ಣು ಅಸಿಡಿಕ್. ಆದ್ದರಿಂದ ಈ ಮಣ್ಣಿನಲ್ಲಿ ಮೂಳೆಗಳು ತುಂಬಾ ವರುಷ ಉಳಿಯಲ್ಲ. ಹಾಗೇ ಇಲ್ಲಿನ ಭೂಮಿ ನಿರಂತರವಾಗಿ ಸವೆಯುತ್ತಿರುತ್ತದೆ, ಅದರಿಂದಾಗಿ ಪಳಯುಳಿಕೆಗಳು ತೇಲಿ ಪ್ರಾಕೃತಿಕ ಕಾರಣಗಳಿಂದ ನಾಶಗೊಳ್ಳುತ್ತವೆ. ನಾವು ಭೂಮಧ್ಯರೇಖೆಗೆ ಹತ್ತಿರವಿದ್ದೇವೆ. ಆದ್ದರಿಂದ ಇಲ್ಲಿನ ಹವಾಮಾನ ಬಿಸಿಯಾಗಿದೆ, ತೇವಾಂಶ ಜಾಸ್ತಿಯಿದೆ. ಉತ್ತರಾರ್ಧದಲ್ಲಿರುವ ಭೂಭಾಗಗಳಲ್ಲಿ ಸಿಕ್ಕಾಪಟ್ಟೆ ಥಂಡಿಯಿದ್ದು ಅಲ್ಲಿನ ನೆಲ ಹಲವೆಡೆ ಲಕ್ಷಾಂತರ ವರ್ಷಗಳಿಂದ ಅನೇಕ ಕಡೆ ಸಾವಿರಾರು ವರ್ಷಗಳಿಂದ ಮಂಜಿನಿಂದ ಮುಚ್ಚಿಕೊಂಡಿದೆ. ಆದ್ದರಿಂದ ಅಲ್ಲಿ ಸಿಕ್ಕಾಕೊಂಡಿದ್ದೆಲ್ಲಾ ಫ್ರಿಡ್ಜಿನಲ್ಲಿಟ್ಟಂಗೆ ಹಂಗಂಗೇ ಉಳ್ಕೊಂಡುಬಿಟ್ಟಿರುತ್ತೆ.

ಕೊನೆಯದಾಗಿ- ನಮ್ಮಲ್ಲಿ ಜನರೂ ಹಾಗೆ. ನಮಗೆ ಎಂದಿಗೂ ಪ್ಯಾಲಿಯೆಂಟಾಲಜಿ ಅಂದ್ರೆ ಪಳಯುಳಿಕೆಯರಿಮೆ, ಆರ್ಕಿಯಾಲಜಿ ಅಲ್ಲ, ಮುಖ್ಯ ಅನ್ನಿಸಿಯೇ ಇಲ್ಲ. ತಕ್ಕನಾದ ಶಿಕ್ಷಣ, ಕೌಶಲ್ಯ, ಪರಿಣಿತರನ್ನು ಸಿದ್ಧಪಡಿಸಿಯೇ ಇಲ್ಲ. ಈಗೀಗ ಅದು ಮುನ್ನಲೆಗೆ ಬರುತ್ತಿದೆ. ತೀರ ಇತ್ತೀಚಿನವರೆಗೆ ಈ ಭೂಪ್ರದೇಶವನ್ನು ಆ ದೃಷ್ಟಿಯಲ್ಲಿ ಮ್ಯಾಪಿಂಗ್ ಮಾಡಿದ್ದಿಲ್ಲ. ಆದ್ದರಿಂದ ಎಲ್ಲೆಲ್ಲಿ ಪಳಯುಳಿಕೆ ಇದ್ದಿರಬಹುದೋ ಅಲ್ಲೆಲ್ಲಾ ಊರು ನಗರಗಳು ಎದ್ದಿವೆ. ಹಾಗೆ ನಮ್ಮದು ಕೃಷಿ ಪ್ರಧಾನ ದೇಶವಾದ್ದರಿಂದ ನಿರಂತರವಾಗಿ ಉಳುಮೆಗೆ ಒಳಪಟ್ಟು ತೇಲುವ ಪಳಯುಳಿಕೆಗಳು ನಾಶವಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮಲ್ಲಿ ಇದರ ಬಗ್ಗೆ ಅಜ್ಞಾನ, ಅನಾಸಕ್ತಿ. ಕೇವಲ ಐನೂರು ವರ್ಷಗಳ ಹಿಂದಿದ್ದ ಕೃಷ್ಣದೇದೇವರಾಯನ ಹಂಪಿಯೇ ಜಾಲಿ ಬೇಲಿಗಳೊಳಗೆ ಕಳೆದುಹೋಗಿದ್ದು ಬ್ರಿಟೀಷರು ಬರಬೇಕಾಯ್ತಲ್ಲಾ! ಇಲ್ಲಿ ಅಂಥಾ ಹಳೆಯದೇನಾದರೂ ಕಂಡರೆ ಯಾರೂ ಇಲ್ಲದ ಹೊತ್ತಲ್ಲಿ ಹೋಗಿ ದೊಗೆಯುವವರೇ ಹೆಚ್ಚು.