ಜಿಬ್ಲಿ ಬಗ್ಗೆ
Blog post description.
4/16/20251 min read


ಎಐ ಅಬ್ಬರ ಶುರುವಾದಾಗಿಂದ ತಿಂಗಳಿಗೊಂದು ʼಜಗತ್ತಿನಾದ್ಯಂತʼ ಬೆಳವಣಿಗೆಗಳು ಉಂಟಾಗುತ್ತಿವೆ. ಮೊನ್ನೆ ಮೊನ್ನೆ ಡೀಪ್‌ಸೀಕ್ ಬಂದಿತ್ತು; ಇದೀಗ ಜಿಬ್ಲಿ ಚಿತ್ರಗಳು. ದೇಶ ದೇಶಗಳ ಪ್ರಧಾನಿ/ಅಧ್ಯಕ್ಷರುಗಳು, ಬಿಲಿಯನೇರ್ ಮಟ್ಟದ ಸಿಯಿವೋಗಳು, ಜಾಗತಿಕ ಮಟ್ಟದ ಸೆಲೆಬ್ರಿಟಿಗಳು, ಕ್ರೀಡಾಪಟುಗಳು ನಾ ಮುಂದು ತಾ ಮುಂದು ಎಂದು ಮಗಿಬಿದ್ದು ತಮ್ಮ ಭಾವಚಿತ್ರಗಳನ್ನು ಜಿಬ್ಲಿಯನ್ನಾಗಿಸಿಕೊಳ್ಳುತ್ತಿದ್ದಾರೆ. ಹಾಲಿವುಡ್, ಬಾಲಿವುಡ್‌ನಂತಹ ಬೃಹತ್ ಚಿತ್ರರಂಗಗಳು ಜಿಬ್ಲಿಯಲ್ಲಿ ಮುಳುಗೇಳುತ್ತಿವೆ. ಸೂರ್ಯ ಮುಳುಗದ ನಾಡಿನ ಶ್ರೀಮಂತನಿಂದ ಹಿಡಿದು ಬೆಂಗಳೂರಿನ ಸ್ಲಂ ಹುಡುಗನವೆರೆಗೆ; ವಿಜ್ಞಾನಿ ತಂತ್ರಜ್ಞಾನಿಗಳಿಂದ ಹಿಡಿದು ನಿವೃತ್ತ ಮುದುಕ, ಗೃಹಿಣಿಯವರೆಗೆ ಎಲ್ಲರಿಗೂ- ತಾವು ಜಿಬ್ಲಿ ಕನ್ನಡಿಯಲ್ಲಿ ಹೇಗೆ ಕಾಣುತ್ತೇವೆ ಎಂದು ನೋಡುವ ಕುತೂಹಲ, ಹಂಬಲ ಶುರುವಾಗಿದೆ.
ಏನಿದು ಜಿಬ್ಲಿ ಕನ್ನಡಿ?
ಕಳೆದ ವಾರ ಓಪನ್‌ಎಐ ಕಂಪನಿ ತನ್ನ ಚಾಟ್‌ಜಿಪಿಟಿ ಮೂಲಕ ಜಿಬ್ಲಿ ಶೈಲಿಯ ಚಿತ್ರಗಳನ್ನು ಸೃಷ್ಟಿಸುವ ಕಲೆಯನ್ನು ಸಾದರಪಡಿಸಿತ್ತು. ಎಐ ಉಪಕರಣಗಳ ಮೂಲಕ ನೀವು ಈಗಾಗಲೇ ಸಾಕಷ್ಟು ಚಿತ್ರಗಳನ್ನು ಸೃಷ್ಟಿಸಿರುತ್ತೀರಿ ಅಲ್ಲವೇ.. ಇದು ಅದರ ಮುಂದುವರೆದ ಭಾಗ. ಆದರೆ ಇಲ್ಲಿನ ವಿಶೇಷತೆ ಏನಂದರೆ ಇದು ಎಐ ತನಗೆ ತೋಚಿದಂತೆ ಸೃಷ್ಟಿಸುವ ಬದಲು ಜಿಬ್ಲಿ ಶೈಲಿಯಲ್ಲಿ ಎಂದು ಕೇಳಿದರೆ ಅದೇ ಶೈಲಿಯಲ್ಲಿ ಚಿತ್ರ ಬಿಡಿಸಿಕೊಡುತ್ತದೆ. ಅದು ಈಗಾಗಲೇ ಇರುವ ನಿಮ್ಮ ಭಾವಚಿತ್ರವಾಗಿರಬಹುದು; ಹೊಸ ಕಲ್ಪನೆಯಾಗಿರಬಹುದು. ಈ ಜಿಬ್ಲಿ ಶೈಲಿ ಬಹಳ ಮುದ್ದಾಗಿದೆ. ಚಿತ್ರಗಳು ಗೊಂಬೆಗಳಂತಿವೆ. ನಮ್ಮನ್ನು ನಾವು ಗೊಂಬೆಯನ್ನಾಗಿಸಿ ನೋಡುವುದು ಮುದವಲ್ಲವೇ? ಹಾಗಾಗಿ ಜನ ಈ ʼಕನ್ನಡಿಗಾಗಿʼ ಮುಗಿಬೀಳುತ್ತಿದ್ದಾರೆ. ಎಷ್ಟೆಂದರೆ.. ಖುದ್ದು ಎಐ ಕಂಪನಿಯ ಮುಖ್ಯಸ್ಥ ಎರಡೇ ದಿನಗಳಲ್ಲಿ ʼಸಾಕು ಮಾಡ್ರೋ, ನಮ್ಮ ಎಂಜಿನೀರುಗಳು ನಿದ್ದೆ ಮಾಡಬೇಕಿದೆʼ ಎಂದು ಕೈಮುಗಿದು ಬೇಡಿಕೊಳ್ಳುವಷ್ಟು. ʼನಮ್ಮ ಜಿಪಿಯುಗಳು ಅಕ್ಷರಶಃ ಶಾಖದಿಂದ ಕರಗುತ್ತಿವೆʼ ಎಂದು ಗೋಳಾಡುವಷ್ಟು.
ನಿಮ್ಮದೇ ಭಾವಚಿತ್ರಗಳನ್ನು ಜಿಬ್ಲಿಯನ್ನಾಗಿಸುವುದು ಹೇಗೆ?
೧. ಎಐ ಉಪಕರಣಗಳಾದ ಚಾಟ್‌ಜಿಪಿಟಿ, ಲಿಯೋನಾರ್ಡೋ ಎಐ, ಮಿಡ್‌ಜರ್ನಿ, ಬಿಂಜ್ ಮುಂತಾದ ಕಡೆ ಹೋಗಿ ನಿಮ್ಮ ಫೋಟೋ ಅಪ್ಲೋಡ್ ಮಾಡಿ ʼgenerate ghibli style image of this picture’ ಎಂದು ಕೇಳಬಹುದು.
೨. ಹೊಸ ಕಾಲ್ಪನಿಕ ಚಿತ್ರ ಬೇಕಿದ್ದಲ್ಲಿ ಈ ಬಗೆಯ ಪ್ರಾಂಪ್ಟನ್ನು ಕೊಡಬಹುದು- ʼ A Studio Ghibli-style portrait of a young man with curly black hair, glasses, smiling gently, with soft watercolor background, in a hand-drawn anime lookʼ
ಜಿಬ್ಲಿ ಎಲ್ಲಿಂದ ಬಂತು?
ಜಿಬ್ಲಿ ಶೈಲಿ ಎಂಬುದು ೧೯೭೦ರ ದಶಕದಲ್ಲಿ ಜಪಾನಿನ ಕಲಾಕಾರ, ಸಿನಿಮಾಕರ್ಮಿಯಾದ ಹಯಾ ಮಿಯಾಝಾಕಿ ಆ ಕಾಲದಲ್ಲಿ ಲಭ್ಯವಿದ್ದ ಅನಿಮೇಶನ್ನಿನಿಂದ ಬೇಸತ್ತು ಹುಟ್ಟುಹಾಕಿದ ಕಲೆ. ನಾವೇನು ಕಾರ್ಟೂನ್, ಅನಿಮೇಶನ್ ಅಂತೀವಲ್ಲ ಅದರಲ್ಲೇ ಹೊಸ ಬಗೆಯ ಶೈಲಿಯಿದು. ನೀವು ಚಿತ್ರಕಲೆಯಲ್ಲಿ ನೋಡಿರ್ತೀರಿ. ಒಂದು ಶೈಲಿಯಲ್ಲಿ ಇಡೀ ಜಗತ್ತನ್ನು ಕಡ್ಡಿಯಂತೆ ಬಿಡಿಸಿರ್ತಾರೆ. ಇನ್ನೊಂದು ಶೈಲಿಯಲ್ಲಿ ಎಲ್ಲವನ್ನೂ ಡುಮ್ಮನೆ ಆಕಾರದಲ್ಲಿ ಚಿತ್ರಿಸಿರ್ತಾರೆ. ಇದೂ ಹಾಗೆ. ಉಳಿದ ಅನಿಮೇಶನ್ನಿಗೆ ಹೋಲಿಸಿದರೆ ಜಿಬ್ಲಿ ಶೈಲಿಯಲ್ಲಿ ಚಿತ್ರಗಳು ಮೃದುವಾದ, ನೀರಿನ ಬಣ್ಣದ, ಕೈಗಳಿಂದ ಬಿಡಿಸಿದಂತಿರುತ್ತವೆ. ಇವು ಹೆಚ್ಚಾಗಿ ಭಾವನಾತ್ಮವಾಗಿಯೂ, ಮೂಡಿಯಾಗಿಯೂ, ಏನನ್ನೋ ಚಿಂತಿಸುತ್ತ ಧ್ಯಾನಿಸುತ್ತ ಇರುವಂತೆಯೂ, ಕನಸು ಕಾಣುವ ವ್ಯಕ್ತಿತ್ವದ ರೂಪದಲ್ಲಿರುತ್ತವೆ. ನಿಧಾನಗತಿಯಲ್ಲಿರುತ್ತವೆ, ಚಕಾಚಕನೆ ಚಲಿಸುವ ಬದಲು ನಯಸ್ಸಾಗಿ ಚಲಿಸುತ್ತವೆ. ಆದ್ದರಿಂದಲೇ ಮಾಮೂಲಿ ಅನಿಮೇಶನ್ನಿನ ಪಾತ್ರಗಳ ಕಣ್ಣು ಮೂಗು ಬಾಯಿ ಕೈಕಾಲುಗಳೆಲ್ಲವೂ ವಿಚಿತ್ರಾಕಾರದಲ್ಲಿ ಹಿಗ್ಗಿದ್ದು, ವೇಗವಾಗಿದ್ದು, ಚಕಾಚಕನೆ ಚಲಿಸುತ್ತಿದ್ದು ಅವು ಮಕ್ಕಳು ತರುಣರಿಗೆ ಮಾತ್ರ ಇಷ್ಟವಾಗುತ್ತವೆ. ಜಿಬ್ಲಿ ವಯೋವೃದ್ಧರಿಗೂ ಆಪ್ತವಾಗುತ್ತವೆ. ಮಾಗಿದ ಪಾತ್ರಗಳು ಜಿಬ್ಲಿಯಲ್ಲಿ ಮಾತ್ರ ಪರಿಣಾಮಕಾರಿಯಾಗಿ ಮೂಡಿಬರುತ್ತವೆ. ಆದ್ದರಿಂದಲೇ ಮೊನ್ನಿನ ಎಐನ ಜಿಬ್ಲಿ ಕನ್ನಡಿಯಲ್ಲಿ ಮಧ್ಯವಯಸ್ಕರು ವಯೋವೃದ್ಧರೂ ಕೂಡ ಪಾಲ್ಗೊಂಡಿರುವುದು. ಭಾವುಕರಾಗಿರುವುದು.
ಹಾ ಮರೆತೆ.. ಜಿಬ್ಲಿ ಶೈಲಿಯ ಮುಖ್ಯ ವಿಶೇಷವೇ ಅವು ನಿಜನಿಜವಾಗಿಯೂ ಕೈಯಿಂದ ಬಿಡಿಸಿದ ಚಿತ್ರಗಳಾಗಿರುವುದು!
ಅದು ಘಿಬ್ಲಿಯೋ ಜಿಬ್ಲಿಯೋ?
Ghibli ಮೂಲತಃ ಇಟಲಿಯ ಪದ. ಅದರ ಅರ್ಥ ಮರುಭೂಮಿಯ ಬಿಸಿಗಾಳಿ. ೧೯೮೫ರಲ್ಲಿ ಮಿಯಾಝಾಕಿ ಮತ್ತು ನಿರ್ಮಾಪಕ ತೊಶಿಯೋ ಸುಝುಕಿ ಒಟ್ಟಾಗಿ ಸ್ಟುಡಿಯೋ ಆರಂಭಿಸಿದಾಗ-ʼನಾವು ಅನಿಮೇಶನ್ ಪ್ರಪಂಚದಲ್ಲಿ ಹೊಸ ಅಲೆ ಎಬ್ಬಿಸಲಿದ್ದೇವೆʼ ಎಂಬ ಧ್ಯೇಯದೊಂದಿಗೆ ಸ್ಟುಡಿಯೋಗೆ ಜಿಬ್ಲಿ ಎಂದು ಹೆಸರಿಟ್ಟರು. ಮೂಲ ಇಟಾಲಿಯನ್ ಪದವನ್ನು ಘಿಬ್ಲಿ ಎಂದು ಉಚ್ಛರಿಸುತ್ತಾರೆ. ಆದರೆ ಮಿಯಾಝಾಕಿ ತನ್ನ ಕಲೆಗಿಟ್ಟ ಹೆಸರು ಮತ್ತು ಆತ ಅದನ್ನು ಉಚ್ಛಾರಣೆ ಮಾಡುವುದು ʼಜಿಬ್ಲಿʼ ಎಂದು. ಆದ್ದರಿಂದ ಕಲಾಶೈಲಿಯ ದೃಷ್ಟಿಯಿಂದ ಅದನ್ನು ಜಿಬ್ಲಿಯೆನ್ನುವುದೇ ಸೂಕ್ತ.
ಹೊಸ ವಿವಾದ!
ಈ ಹೊಸ ಕನ್ನಡಿ ಹೊಸ ವಿವಾದವನ್ನೂ ಹುಟ್ಟುಹಾಕಿದೆ. ಜಗತ್ತನ್ನು ಇಬ್ಬಾಗವಾಗಿ ಒಡೆದಿದೆ. ಒಂದು ಭಾಗ ಇದು ಕಲೆಯನ್ನು ಕೊಲ್ಲುತ್ತಿದೆ ಎಂದು ಬಹಳಾನೆ ನೊಂದಿದ್ದರೆ ಇನ್ನೊಂದು ಭಾಗ ಇದು ಕಲೆಯನ್ನು ಡೆಮಾಕ್ರಟೈಸ್ ಮಾಡಿದೆ ಎಂದು ಹಿರಿಹಿರಿ ಹಿಗ್ಗುತ್ತಿದೆ.
ವಿರೋಧಿಸುತ್ತಿರುವವರ ವಾದ-
- ಇದು ಮೂಲ ಕಲಾಕಾರನ ಕಲೆಯನ್ನು ಅದರ ಬೆಲೆಯನ್ನು ಗೌಣವಾಗಿಸುತ್ತದೆ.
- ಚಿತ್ರಗಾರರ ಉದ್ಯೋಗವನ್ನು ಕಸಿಯುತ್ತದೆ.
- ಕಲಾಕಾರನ ಒಪ್ಪಿಗೆ ಮತ್ತು ಆತನಿಗೆ ಪರಿಹಾರ ನೀಡದೇ ಆತನ ಕಲಾಸೃಷ್ಟಿಯನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ಅನೈತಿಕವಾಗಿದೆ. ಕಳ್ಳತನವಾಗಿದೆ.
- ಮೂಲ ಚಿತ್ರಗಳು ಕೈಯಿಂದ ಬಿಡಿಸಿದ್ದು ಜೀವಂತಿಕೆಯಿಂದ ತುಂಬಿದ್ದವು. ಎಐ ಚಿತ್ರಗಳು ನಿರ್ಜೀವ, ಕೃತಕವಾಗಿವೆ.
- ಎಐ ಇಡೀ ಜಿಬ್ಲಿ ಕಲೆಯ ಒರಿಜಿನಾಲಿಟಿಯನ್ನು ಇಲ್ಲವಾಗಿಸಿ ಕೇವಲ ಸರಕನ್ನಾಗಿಸುತ್ತದೆ.
- ಎಐ ನಕಲಿ ಸೃಷ್ಟಿಯನ್ನು ಕಾಪಿಕಾರರನ್ನು ಉತ್ತೇಜಿಸುತ್ತದೆ.
- ಇದರಿಂದಾಗಿ ಕಲೆ ನಿಂತ ನೀರಾಗುವ ಸಾಧ್ಯತೆಯಿದೆ. ಎಐ ಇರುವ ಕಲೆಯನ್ನು ನಕಲಿಸುತ್ತಿದೆಯಷ್ಟೇ. ಅದರಿಂದ ಹೊಸಾ ಸೃಷ್ಟಿ ಅಸಾಧ್ಯ.
ಎಐ ಕನ್ನಡಿಯ ಪರವಾಗಿರುವವರ ವಾದ-
- ಎಐ ಉಪಕರಣಗಳು ಹೊಸ ಆಲೋಚನೆಗಳಿಗೆ ಬೇಗನೇ ರೆಕ್ಕೆ ಪುಕ್ಕ ಕೊಡಲು ಸಹಾಯ ಮಾಡುತ್ತವೆ.
- ತಾಂತ್ರಿಕ ಕೌಶಲ್ಯವಿಲ್ಲದವರೂ ಸಹ ಕೇವಲ ಆಲೋಚಿಸುವ ಮತ್ತು ಸೃಷ್ಟಿಸುವ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಎಐ ಕಲೆಯನ್ನು ಡೆಮಾಕ್ರಟೈಸ್ ಮಾಡುತ್ತಿದೆ.
- ಮೂಲ ಕಲೆ ಕೆಲವೇ ಹಸ್ತಗಳ ಹಿಡಿತದಲ್ಲಿರುತ್ತದೆ. ಎಐ ಬಹುಸಂಖ್ಯಾತರು ಸೃಜನಶೀಲವಾಗಿ ಅಭಿವ್ಯಕ್ತಿಸುವುದಕ್ಕೆ ಅವಕಾಶ ಮಾಡಿಕೊಡುತ್ತದೆ.
- ಎಐ ಉಪಕರಣಗಳು ಸಾರ್ವಜನಿಕವಾಗಿ ಉಚಿತವಾಗಿ ಲಭ್ಯವಿರುವ ಮಾಹಿತಿಯನ್ನಷ್ಟೇ ತರಬೇತಿಗೆ ಬಳಸಿಕೊಂಡಿವೆ. ಅದು ಕಳ್ಳತನವಲ್ಲ.
- ಜಿಬ್ಲಿ ಶೈಲಿಯನ್ನು ಕೇವಲ ಕೆಲವೇ ಆಸಕ್ತರು ಮಾತ್ರ ನೋಡಿ ಆನಂದಿಸಿದ್ದರು. ಇದೀಗ ಎಐ ಆ ಆನಂದವನ್ನು ಇಡೀ ಜಗತ್ತಿಗೆ ಹಂಚಿದೆ.
- ಬದಲಾವಣೆಯೇ ಅಂತಿಮ. ಚಲನೆಯೇ ನಿರಂತರ. ಕಲೆಯ ಫಾರ್ಮ್ ನಿರಂತರವಾಗಿ ಬದಲಾಗುತ್ತಿರುತ್ತದೆ.
- ಏನಿದ್ದರೂ ಎಐ ಉಪಕರಣವಷ್ಟೇ. ಕಲಾಕಾರರು ಈ ಉಪಕರಣಗಳನ್ನು ದೈನಂದಿನ ಶ್ರಮಿಕ ಕೆಲಸಗಳಿಗೆ ಬಳಸಿಕೊಳ್ಳುತ್ತಾ ಅವರು ತಮ್ಮ ಅಮೂಲ್ಯವಾದ ಸಮಯವನ್ನು ಇನ್ನೂ ಉತ್ಕೃಷ್ಟವಾದ, ನವೀನವಾದ ಕಲಾಸೃಷ್ಟಿಯ ಬಗ್ಗೆ ಆಲೋಚಿಸುವುದರಲ್ಲಿ ಕಳೆಯಬೇಕು.
ಅಂತಿಮವಾಗಿ..
ಇಂತಹ ಸಂದರ್ಭಗಳನ್ನು ಕಳೆದ ಕೆಲವು ವರ್ಷಗಳಿಂದ ಊಹಿಸಲಾಗಿತ್ತು, ಸಾಕಷ್ಟು ಬಾರಿ ಚರ್ಚಿಸಲಾಗಿತ್ತು; ಇದು ಮುಂದೆಯೂ ಮತ್ತೆ ಮತ್ತೆ ಎದುರಾಗುತ್ತಿರುತ್ತದೆ; ಇದರಿಂದ ಪ್ರವಾಹಕ್ಕೇನಾದರೂ ಪರಿಹಾರ ಸಿಕ್ಕಿತೇ ಎಂದರೆ.. ಇಲ್ಲ. ಕೊಚ್ಚಿಹೋಗುವೊಂದೇ ಗೊತ್ತಿರುವ ಮಾರ್ಗ. ಎಐ ಒಳ್ಳೆಯದು ಕೆಟ್ಟದು ಎರಡನ್ನೂ ಮಾಡುತ್ತದೆ. ಕಲೆಯನ್ನು ಡೆಮಾಕ್ರಟೈಜ್ ಮಾಡುತ್ತದೆ; ಜಗತ್ತನ್ನು ಇನ್ನಷ್ಟು ಸುಂದರಗೊಳಿಸುತ್ತದೆ; ಜೊತೆಜೊತೆಗೆ ಪ್ರತಿ ವಿರಳ ಕಲೆಯನ್ನು ಯತೇಚ್ಛಗೊಳಿಸುವ ಮೂಲಕ ಆ ಕಲೆಯನ್ನು ಕಸವನ್ನಾಗಿಸುತ್ತದೆ. ಜಿಬ್ಲಿ ಬಹುಬೇಗ ಜಗಿದು ಉಗಿದ ಕಬ್ಬಿನ ಸಿಪ್ಪೆಯಾಗಲಿದೆ. ಜನ, ಎಐ ಇಬ್ಬರೂ ಇನ್ನೊಂದು ಫಾರ್ಮ್‌ಗೆ ಜಂಪ್ ಹೊಡೆಯುತ್ತಾರೆ.
ಬಹುಶಃ ಎಐನ ಪ್ರವಾಹದಿಂದಾಗಿ ನಮ್ಮ ಮನೋಭಾವಗಳು ಕೊಂಚ ಬದಲಾಗಬೇಕಿದೆ. ಕಾಲ ಬದಲಾದಂತೆ ಕೆಲವು ಶಕ್ತಿಗಳು ಶಕ್ತಿಗಳಾಗಿ ಉಳಿಯುವುದಿಲ್ಲ. ಕ್ಯಾಲ್ಕುಲೇಟರ್ ಮತ್ತು ಕಂಪ್ಯೂಟರ್ ಬಂದಾಗಿಂದ ಗುಣಿಸೊ ಶಕ್ತಿ, ಸ್ಮರಣಶಕ್ತಿಗಳ ಅಗತ್ಯವಿಲ್ಲ. ಹಾಗೆ ಮುಂದಿನ ದಿನಗಳಲ್ಲಿ ಕೈಯಿಂದ ಬಿಡಿಸುವ ಕುಂಚದ ಶಕ್ತಿಯ ಅಗತ್ಯ ಇಲ್ಲವಾಗಬಹುದು.