ಅಂತಃಸ್ಫೋಟ ಅಂದರೇನು?

Blog post description.

6/26/20251 min read

ಸಾಮಾನ್ಯವಾಗಿ ನಾವು ಸ್ಫೋಟ ಎಂಬುದನ್ನು Explode ಎಂಬರ್ಥದಲ್ಲಿ ಬಳಸುತ್ತೇವೆ. ಈ ಪ್ರಕ್ರಿಯೆಯಲ್ಲಿ ವಸ್ತು ಬಹಿರ್ಮುಖವಾಗಿ ಛಿದ್ರಗೊಳ್ಳುತ್ತದೆ. ಇತ್ತೀಚೆಗೆ ಏರ್‌ಇಂಡಿಯಾ ವಿಮಾನ ಕಟ್ಟಡದ ಮೇಲೆ ಬಿದ್ದು ಸ್ಫೋಟಗೊಂಡಿತಲ್ಲ ಹಾಗೆ. ನಮಗೆ ಗೋಚರಿಸುವ ಬಹುತೇಕ ಸ್ಫೋಟಗಳು ಇದೇ ಬಗೆಯವು. ಇನ್ನೊಂದು ಬಗೆಯಿದೆ. ಅದನ್ನು Implode(ಅಂತಃಸ್ಫೋಟ) ಅಂತ ಕರೆಯುತ್ತಾರೆ. ಇಲ್ಲಿ ವಸ್ತು ಒಳಮುಖವಾಗಿ ಛಿದ್ರಗೊಳ್ಳುತ್ತದೆ. ಇಂತಹ ಅಪಘಾತಗಳು ಬಹಳ ವಿರಳ. ಯಾಕೆ ವಿರಳ ಅನ್ನುವುದು ಆಸಕ್ತಿಕರ.

೨೦೨೩ರಲ್ಲಿ ಓಶಿಯನ್‌ಗೇಟ್‌ ಎಂಬ ಕಂಪನಿಯ ಟೈಟನ್‌ ಎಂಬ ಪುಟ್ಟ ಜಲಾಂತರ್ಗಾಮಿ(ಸಬ್‌ಮರ್ಸಿಬಲ್) ಕಂಪನಿಯ ಮುಖ್ಯಸ್ಥನನ್ನೂ ಸೇರಿದಂತೆ ಐದು ಶ್ರೀಮಂತ ಪ್ರವಾಸಿಗರನ್ನು ಹೊತ್ತು ಉತ್ತರ ಅಟ್ಲಾಂಟಿಕ್ ಸಾಗರದೊಳಗೆ ಇಳಿಯುತ್ತದೆ. ಉದ್ದೇಶ ಟೈಟಾನಿಕ್‌ ಹಡಗಿನ ಅವಶೇಷಗಳನ್ನು ನೋಡಿಕೊಂಡು ಬರುವುದು. ಆದರೆ ಕೆಳಗೆ ಹೋದವರು ಮೇಲೆ ಬರೋದೇ ಇಲ್ಲ! ಟೈಟನ್‌ ಸಾಗರದೊಳಗೆ ಸ್ಫೋಟಗೊಂಡಿರುತ್ತದೆ. ವಿಮಾನದಲ್ಲಿ ಇಂಧನ ಇರುತ್ತದೆ, ಕಿಡಿ ತಾಗಿದರೆ ಸ್ಫೋಟಗೊಳ್ಳುತ್ತದೆ. ಟೈಟನ್‌ನಲ್ಲಿ ಬ್ಯಾಟರಿ ಹೊರತು ಯಾವುದೇ ಇಂಧನವಿರಲಿಲ್ಲ, ಆದರೂ ಸ್ಫೋಟಗೊಂಡಿದ್ದು ಹೇಗೆ? ಇದೇ ಪ್ರಕೃತಿಯ ವಿಸ್ಮಯ.

ಪ್ರಕೃತಿಯಲ್ಲಿ ಎಲ್ಲಾ ವಸ್ತುಗಳೂ ಅವು ಇದ್ದಂತೆ ಇರುವುದಕ್ಕೆ ಮೂಲ ಕಾರಣ ಒಳಗೂ ಹೊರಗೂ ಸಮನಾದ ಒತ್ತಡ ಇರುವುದು. ನಮ್ಮ ದೇಹವನ್ನೂ ಸೇರಿಸಿ. ಇದರಲ್ಲಿ ಸ್ವಲ್ಪ ಏರುಪೇರಾದರೂ ವಸ್ತು ವಿರೂಪಗೊಳ್ಳುತ್ತದೆ. ಬಲೂನು ಊದಿದಾಗ ಒಳಗೆ ಗಾಳಿ ಶೇಖರಣೆಯಾಗುತ್ತದೆ. ಹೊರಗಿನ ಗಾಳಿ ತೆಳುವಾಗಿರುತ್ತದೆ. ಆದ್ದರಿಂದ ಒಳಗೆ ಹೆಚ್ಚಿನ ಒತ್ತಡವಿರುತ್ತದೆ. ಬಲೂನಿಗೆ ಸೂಜಿ ಚುಚ್ಚಿದಾಗ ಒತ್ತಡಕ್ಕೆ ಬಿಡುಗಡೆ ಸಿಕ್ಕಿ ಬಲೂನು ಸ್ಫೋಟಗೊಳ್ಳುತ್ತದೆ.

ಇದೇ ಬಲೂನನ್ನು ಬಲವಂತದಿಂದ ಸಮುದ್ರದೊಳಗೆ ಅದುಮಿದರೆ ಏನಾಗುತ್ತದೆ? ಸಮುದ್ರದ ಭಾರ ಬಲೂನಿನ ಮೇಲೆ ಬೀಳತೊಡಗುತ್ತದೆ. ನೀವು ಸೂಜಿ ಚುಚ್ಚುವುದೇ ಬೇಡ, ಬಲೂನನ್ನು ಕೆಳಗೆ ತಗೊಂಡೋದರೆ ತಾನಾಗೇ ಸ್ಫೋಟಗೊಳ್ಳುತ್ತದೆ, ಒಳಮುಖವಾಗಿ. ಟೈಟನ್‌ಗೆ ಆಗಿದ್ದೂ ಇದೇ.

ಓಶಿಯನ್‌ಗೇಟ್‌ ಮುಖ್ಯಸ್ಥ ಸ್ಟಾಕ್ಟನ್‌ ರಶ್‌ ಮೂಲತಃ ಒಬ್ಬ ಎಂಜಿನೀರ್.‌ ಚಿಕ್ಕವಾಗಿದ್ದಾಗಲೇ ಬಿಡಿ ಉಪಕರಣಗಳನ್ನು ಜೋಡಿಸಿ ತನ್ನದೇ ಪುಟ್ಟ ವಿಮಾನ ತಯಾರಿಸಿಕೊಂಡಿದ್ದಂಥವನು. ತನ್ನನ್ನು ಎಲಾನ್‌ ಮಸ್ಕ್‌, ಜೆಫ್‌ ಬೆಜೋಸ್‌ಗೆ ಹೋಲಿಸಿಕೊಳ್ಳುವಷ್ಟು ಮಹಾತ್ವಕಾಂಕ್ಷಿ. ಮಸ್ಕ್‌ ಮಂಗಳದ ಮೇಲೆ ಕಣ್ಣಿಟಿದ್ದರೆ ರಶ್‌ ಸಾಗರದ ತಳದ ಮೇಲೆ ನೆಟ್ಟಿರುತ್ತಾನೆ. ಮಸ್ಕ್‌ ಮರುಪಯೋಗದ ಕಡಿಮೆ ವೆಚ್ಛದ ರಾಕೆಟ್‌ಗಳನ್ನು ತಯಾರಿಸಿದರೆ ರಶ್‌ ಅದೇ ಬಗೆಯ ಸಬ್‌ಮರ್ಸಿಬಲ್‌ಗಳನ್ನು ತಯಾರಿಸುತ್ತಾನೆ.

ಸಬ್‌ಮರೀನ್‌ ಎಂದರೆ ಬೃಹತ್‌ ಜಲಾಂತರ್ಗಾಮಿ. ಸಬ್‌ಮರ್ಸಿಬಲ್‌ ಎಂದರೆ ಪುಟ್ಟ ಜಲಾಂತರ್ಗಾಮಿ.

ಸಾಗರದ ಅಂದಾಜು ಆಳ ನಾಲ್ಕು ಕಿಲೋಮೀಟರ್.‌ ಅಂದರೆ ನಾವು ತಳದಲ್ಲಿರುವಾಗ ಅಷ್ಟು ನೀರಿನ ತೂಕ ನಮ್ಮ ಮೇಲೆ ಬಿದ್ದಿರುತ್ತದೆ. ಸಬ್‌ಮರ್ಸಿಬಲ್ ದೇಹ ಈ ತೂಕವನ್ನು ತಡೆದುಕೊಳ್ಳಬೇಕಿರುತ್ತದೆ. ಕಬ್ಬಿಣ, ಸ್ಟೀಲ್‌, ಟೈಟ್ಯಾನಿಯಂ ಮುಂತಾದವು ಇದಕ್ಕೆ ಸೂಕ್ತ. ಆದರೆ ಆಗ ಅವುಗಳದ್ದೇ ಒಂದು ತೂಕವಾಗಿಬಿಡುತ್ತದೆ. ಸಬ್‌ಮರ್ಸಿಬಲ್‌ ತಯಾರಿಕೆ, ಸಾಗಾಣಿಕೆ ಮತ್ತು ಪ್ರಯಾಣ ಎಲ್ಲ ದಿಕ್ಕಿನಿಂದಲೂ ವೆಚ್ಛ ಹೆಚ್ಚಾಗುತ್ತದೆ. ರಶ್‌ ಇದಕ್ಕೆ ಕಂಡುಕೊಂಡ ಉಪಾಯ ಕಡಿಮೆ ತೂಕದ ಹೆಚ್ಚು ಒತ್ತಡ ತಾಳಬಲ್ಲ ಕಾರ್ಬನ್‌ ಫೈಬರ್‌ಗಳನ್ನು ಬಳಸುವುದು. ಅಪಘಾತಕ್ಕೊಳಗಾದ ಬೊಯಿಂಗ್ ಡ್ರೀಮ್‌ಲೈನರಿನಲ್ಲಿಯೂ ೫೦% ಕಾರ್ಬನ್‌ ಫೈಬರ್‌ ಇತ್ತು. ವಿಮಾನಗಳಲ್ಲಿ ತೂಕ ಕಡಿಮೆ ಮಾಡಲು, ಇಂಧನದ ವೆಚ್ಚ ತಗ್ಗಿಸಲು ಕಾರ್ಬನ್‌ ಫೈಬರ್‌ ಬಳಸಲಾಗುತ್ತದೆ.

ಇದು ಎಷ್ಟು ಮಜಾ ಇದೆ ನೋಡಿ. ನೆಲದ ಮೇಲೆ ಗಾಳಿಯಿದೆ. ನೆಲದ ಕೆಳಗೆ(ಸಮುದ್ರದೊಳಗೆ) ನೀರಿದೆ. ಎರಡೂ ಅವುಗಳ ತೂಕದ ಪ್ರಕಾರ ಒತ್ತಡ ಸೃಷ್ಟಿಸುತ್ತವೆ. ಆದರೆ ನಾವು ನೆಲದಿಂದ ಮೇಲೆ ಹೋದಂತೆಲ್ಲಾ ವಾತಾವರಣದಲ್ಲಿ ಗಾಳಿಯ ಪ್ರಮಾಣ ಕಡಿಮೆಯಾಗಿ ಒತ್ತಡವೂ ಕಡಿಮೆಯಾಗ್ತಾ ಹೋಗುತ್ತದೆ. ಅದೆ ನಾವು ಸಮುದ್ರದೊಳಗೆ ಇಳಿದಂತೆಲ್ಲಾ ನೀರಿನ ಪ್ರಮಾಣ ಜಾಸ್ತಿಯಾಗಿ ಬಾಹ್ಯ ಒತ್ತಡ ಜಾಸ್ತಿಯಾಗ್ತಾ ಹೋಗುತ್ತದೆ. ಆದ್ದರಿಂದಲೇ ಸಾಮಾನ್ಯವಾಗಿ ನೆಲದ ಮೇಲೆ ಉಂಟಾಗುವುದೆಲ್ಲವೂ Explosion, ನೀರಿನೊಳಗೆ ಉಂಟಾಗುವುದೆಲ್ಲವೂ Implosion!

ನೀವು ವಿಮಾನದಲ್ಲಿ ಹೋಗಿದ್ದಲ್ಲಿ, ಸಮುದ್ರದೊಳಗೆ ಸ್ಕೂಬಾಡೈವ್‌ ಮಾಡಿದ್ದಲ್ಲಿ(ಅಥವಾ ಬಾವಿಯಲ್ಲಿ ಈಜಿದ್ದಲ್ಲಿ) ಈ ವ್ಯತ್ಯಾಸ ಮೊದಲು ಅನುಭವಕ್ಕೆ ಬರುವುದು ನಿಮ್ಮ ಕಿವಿಗಳಿಗೆ. ಕಿವಿಗಳಲ್ಲಿ ತಮಟೆ ತೆಳುವಾಗಿರುತ್ತಾದ್ದರಿಂದ ವಿಮಾನದಲ್ಲಿ ಮೇಲೇರುವಾಗ ಹೊರಗಿನ ಒತ್ತಡ ಕಡಿಮೆಯಾಗಿ ತಮಟೆ ಉಬ್ಬುತ್ತದೆ, ನೀರಿನಲ್ಲಿ ಈಜುವಾಗ ಹೊರಗಿನ ಉತ್ತಡ ಜಾಸ್ತಿಯಾಗಿ ತಮಟೆ ಕುಗ್ಗುತ್ತದೆ. ಇದರಿಂದಾಗಿಯೇ ವಿಮಾನದೊಳಗೆ ಪ್ರಯಾಣದುದ್ದಕ್ಕೂ ಕೃತಕವಾದ ಒತ್ತಡ ಸೃಷ್ಟಿಸಲಾಗುತ್ತದೆ. ನಮಗೆ ಈ ವ್ಯತ್ಯಾಸಗಳು ಗೊತ್ತಿಲ್ಲದೇ ಹಾರುವಾಗ ಈಜುವಾಗ ಕಿವಿಗೆ ಏನೋ ಆಯ್ತು ಅಂತ ಮಾತ್ರ ಅನಿಸುತ್ತದೆ!

ರಶ್‌ ಕಾರ್ಬನ್‌ ಫೈಬರ್‌ ಬಳಸಿ ಟೈಟನ್ ತಯಾರಿಸಿ ಇಷ್ಟಿಷ್ಟೇ ಸಮುದ್ರದೊಳಗೆ ಇಳಿಸಿ ಪರೀಕ್ಷಿಸುತ್ತಾ ಹೋಗ್ತಾನೆ. ಹೆಸರೇ ಸೂಚಿಸುವಂತೆ ಕಾರ್ಬನ್‌ ಫೈಬರಿನಲ್ಲಿ ಫೈಬರ್(ನಾರು) ಇರುತ್ತದೆ. ಟೈಟನ್‌ ಕೆಳಗೆ ಇಳಿದಂತೆಲ್ಲಾ ಈ ನಾರು ಟಕ್‌ ಟಕ್‌ ಅಂತ ಕಟ್ಟಾಗಲು ಶುರುವಾಗುತ್ತದೆ. ಅಲ್ಲೊಂದು ಇಲ್ಲೊಂದು ಕಟ್ಟಾದ್ರೆ ಏನಾಗಲ್ಲ ಅನ್ನುವುದು ರಶ್‌ನ ಆಲೋಚನೆ. ಒಂದು ಹಂತದ ನಂತರವಷ್ಟೇ ಅಪಾಯ. ರಶ್‌ ನಾರು ಕಟ್ಟಾಗುವ ಪ್ರಮಾಣವನ್ನು ಅಳೆಯಲು ಟೈಟನ್ನಿನ ಮೈತುಂಬಾ ಮೈಕ್ರೋಫೋನ್‌ ಅಳವಡಿಸುತ್ತಾನೆ. ಟೈಟನ್‌ ಕೆಳಗೆ ಇಳಿದಂತೆಲ್ಲಾ ನಾರು ಪಟಪಟ ಅನ್ನಕ್ಕೆ ಶುರುವಾಗುತ್ತದೆ. ಈ ಪರೀಕ್ಷೆಯ ಆಧಾರದ ಮೇಲೆ ಆತ ಟೈಟನ್ನಿನ ದೇಹವನ್ನು ಇನ್ನಷ್ಟು ಬಲಿಷ್ಠಗೊಳಿಸ್ತಾ ಹೋಗ್ತಾನೆ.

ಸುಮಾರು ಸಲ ಟೈಟಾನಿಕ್‌ ತನಕ ಹೋಗಿಬರುವಲ್ಲಿಯೂ ಯಶಸ್ವಿಯಾಗುತ್ತಾನೆ.

ಪ್ರಾಬ್ಲಂ ಏನಾಗುತ್ತೆ ಅಂದರೆ ರಶ್‌ಗೆ ಓಟ, ಆತುರ, ಹುಚ್ಚು ಹುಮ್ಮಸ್ಸು, ಕೆಟ್ಟ ಧೈರ್ಯ. ಅವನ ಪರೀಕ್ಷೆಗಳಲ್ಲಿ ಎಂದಿಗೂ ಈ ನಾರಿನ ಪಟಪಟ ಸೊನ್ನೆಗೆ ಇಳಿಯುವುದೇ ಇಲ್ಲ! ಅರ್ಥಾತ್‌ ಪ್ರತಿಸಲ ಅಪಾಯವನ್ನು ಸೊಂಟಕ್ಕೆ ಕಟ್ಟಿಕೊಂಡೇ ಸಮುದ್ರಕ್ಕೆ ಇಳಿದಿರುತ್ತಾನೆ. ಪ್ರವಾಸಿಗರನ್ನೂ ಕರ್ಕೊಂಡು ಹೋಗಿರ್ತಾನೆ. ಈತನೇ ಜೊತೆಗೆ ಬರುವುದರಿಂದ ಪ್ರವಾಸಿಗರಿಗೂ ಫುಲ್ಲು ಕಾನ್ಫಿಡೆನ್ಸು. ಒಂದಿನ ಬಾಹ್ಯ ಒತ್ತಡ ತಾಳಲಾರದೇ ಟೈಟನ್‌ ಸ್ಫೋಟಗೊಳ್ಳುತ್ತದೆ. ಈ ಸ್ಪೋಟ ಕಲ್ಪಿಸಿಕೊಳ್ಳಲು ಪೆಪ್ಸಿ ಕ್ಯಾನು ಹಿಚುಕಿಕೊಂಡಂತಿರುತ್ತದೆ.

ಇನ್ನೂ ದುರಂತವೇನೆಂದರೆ ರಶ್‌ನ ಮಡದಿ ವೆಂಡಿಯ ಮುತ್ತಜ್ಜ ಮುತ್ತಜ್ಜಿ ನೂರು ವರುಷಗಳ ಹಿಂದೆ ಇದೇ ಟೈಟಾನಿಕ್‌ ಹಡಗಿನಲ್ಲಿ ಪ್ರಯಾಣಿಸಿ ತಳ ಸೇರಿರುತ್ತಾರೆ.

ಇದರ ಬಗ್ಗೆ ವಿಸ್ತೃತವಾದ ಡಾಕ್ಯುಮೆಂಟರಿ ನೆಟ್‌ಫ್ಲಿಕ್ಸಿನಲ್ಲಿದೆ, ಸಾಧ್ಯವಾದರೆ ನೋಡಿ.

ಹಾಗಾದರೆ ಮೀನು ಇನ್ನಿತರ ಜಲಚರ ಪ್ರಾಣಿಗಳು Implode ಆಗ್ವಲ್ವಲ್ಲ ಯಾಕೆ? ಇದೇ ನಿಮಗೆ ಹೋಮ್ವರ್ಕ್.