ಸರ್ಜೆ ಕ್ರಿಕಲಾವ್ ಮತ್ತು ಸುನಿತಾ ವಿಲಿಯಮ್ಸ್

Blog post description.

4/16/20251 min read

ಸುನಿತಾ ವಿಲಿಯಮ್ಸ್‌ ಬಗ್ಗೆ ಅಗತ್ಯಕ್ಕಿಂತ ಹೆಚ್ಚೇ ಚರ್ಚೆಯಾಗಿದೆ. ಆಕೆಗಿಂತ ಆಸಕ್ತಿಕರ, ಕಷ್ಟಕರ, ಸಂದಿಗ್ಧ ಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಇನ್ನೊಬ್ಬ ಗಗನಯಾನಿಯ ಕಥೆಯಿದೆ. ಸರ್ಜೆ ಕ್ರಿಕಲಾವ್‌ ಎಂದು ಹೆಸರು, ರಶ್ಯಾದವನು. ರಶ್ಯಾದವರು ಗಗನಯಾನಿಗಳನ್ನು ಆಸ್ಟ್ರಾನಟ್‌ ಅನ್ನಲ್ಲ, ಕಾಸ್ಮಾನಟ್‌ ಅಂತಾರೆ. ಇರಲಿ,

೧೯೯೧ರ ಮೇನಲ್ಲಿ ಈತ ರಶಿಯಾದ ಸ್ಪೇಸ್‌ ಸ್ಟೇಶನ್ನಿಗೆ ಹೋಗಿದ್ದ. ಆಗಿನ್ನೂ ರಶ್ಯಾ ಸೋವಿಯತ್‌ ಒಕ್ಕೂಟವಾಗಿತ್ತು. ಈತ ಮೇಲೆ ಹೋಗಿ ತಂಗಿದ್ದಾಗ ಕೆಳಗೆ ಆ ದೇಶದಲ್ಲಿ ದಂಗೆಯೆದ್ದುಬಿಟ್ಟಿತ್ತು. ಅಧ್ಯಕ್ಷ ಮಿಖಾಯ್ಲ್ ಗೋರ್ಬೆಚೋವ್‌ನನ್ನು ಕೆಳಗಿಳಿಸುವ ಸಂಚು ವಿಫಲವಾಗಿತ್ತು. ಮುಂದಿನ ಕೆಲವು ತಿಂಗಳುಗಳಲ್ಲಿ ಸೋವಿಯತ್ ಒಕ್ಕೂಟ ಒಡೆದು ವಿವಿಧ ಸ್ವತಂತ್ರ ದೇಶಗಳಾಗಿದ್ದವು. ಅಂದ್ರೆ ಅವನು ಮೇಲೆ ಹೋಗುವಾಗ ವಿಶಾಲವಾಗಿದ್ದ ಒಂದು ದೇಶ, ವಾಪಸ್ ಬರುವಷ್ಟರಲ್ಲಿ ಹರಿದು ಚಿಂದಿಯಾಗಿತ್ತು.

ಈ ಆಂತರಿಕ ಸಂಘರ್ಷದಿಂದಾಗಿ ಅವನನ್ನು ವಾಪಸ್ ಕರೆದುಕೊಂಡು ಬರಲು ಸರಕಾರದ ಬಳಿ ದುಡ್ಡೇ ಇಲ್ಲವಾಗಿ ಪಾಪ ಅವನು ಅಲ್ಲೇ ಸಿಕ್ಕಿಹಾಕಿಕೊಂಡಿದ್ದ. ಇದೆಲ್ಲ ಯಾವಾಗ ನಿಲ್ಲುತ್ತೆ, ಯಾವಾಗ ಸರಿಹೋಗುತ್ತೆ, ಯಾರಾದರೂ ಕರೆದುಕೊಂಡು ಹೋಗಲು ಬರ್ತಾರಾ ಅಥವಾ ಹೀಗೆಯೇ ಬಿಟ್ಟುಬಿಡ್ತಾರಾ ಎಂಬ ಸುಳಿವು, ಸೂಚನೆ, ಭರವಸೆಗಳಿಲ್ಲದೆ ದಿನಗಳನ್ನು ದೂಡಿದ್ದ. ಕೆಳಗೆ ಅವನಿಗಾಗಿ ಮಡದಿ ಎಲೆನಾ ಮತ್ತು ಪುಟ್ಟ ಮಗು ಜೀವ ಹಿಡಿದು ಕಾದಿದ್ದರು. ಜನ ಇಲ್ಲಿ ತಮ್ಮದೇ ದಂಗೆ, ಸ್ವಾರ್ಥ, ಜಂಜಡಗಳಲ್ಲಿ ಮುಳುಗಿದ್ದರಿಂದ ಆತನಿಗೆ ಕಾಲಕಾಲಕ್ಕೆ ಮಾತಾಡಿಸಿ ಕ್ಷೇಮಸಮಾಚಾರ ವಿಚಾರಿಸಿಕೊಳ್ಳುವವರೂ ಇರಲಿಲ್ಲವಂತೆ.

ಆದರೆ ಅಷ್ಟೂ ದಿನ ಆತ ಅದೆಲ್ಲವನ್ನೂ ಅದುಮಿಟ್ಟುಕೊಂಡು ತನ್ನ ಅಂತರಿಕ್ಷ ಸಂಶೋಧನೆಗಳನ್ನು ಮುಂದುವರೆಸಿದ್ದನಂತೆ. ಐದು ತಿಂಗಳಿಗೆಂದು ಹೋಗಿದ್ದವನು; ಆ ಕಾಲಕ್ಕೆ ಅತ್ಯಧಿಕ ಸಮಯವನ್ನು ಅಂತರಿಕ್ಷದಲ್ಲಿ ಕಳೆದ ರೆಕಾರ್ಡ್‌ ಸೆಟ್‌ ಮಾಡುತ್ತಾನೆ. ದೈಹಿಕವಾಗಿ ಮಾನಸಿಕವಾಗಿ ಘಾಸಿಗೆ ಒಳಗಾಗಿರುತ್ತಾನೆ. ಮೂಳೆಗಳು ಮುಟ್ಟಿದರೆ ಪುಡಿಯಾಗುವಷ್ಟು ಸವೆದಿರುತ್ತವೆ. ಮಾಂಸವನ್ನು ಹಿಡಿದಿಡುವ ನರಮಂಡಲ ದುರ್ಬಲಗೊಂಡು ನಿಲ್ಲಲು ಕೂರಲು ತ್ರಾಣವಿಲ್ಲದಂತಾಗಿರುತ್ತದೆ. ತನ್ನ ದೇಶದ ಸಿವಿಲ್‌ ವಾರ್‌ ತಗ್ಗಿ ಇವರಿಗೆ ಅವನ ಬಗ್ಗೆ ಯೋಚಿಸಲು ಸಮಯ ಸಿಗುವಷ್ಟರಲ್ಲಿ ಭರ್ತಿ ಹತ್ತು ತಿಂಗಳುಗಳು ಕಳೆದಿರುತ್ತವೆ. ಹೊಸ ದೇಶವಾಗಿ ಹೊಮ್ಮಿದ್ದ ರಶ್ಯಾ ರೆಸ್ಕ್ಯೂ ಮಿಶನ್‌ ಕಳಿಸಿ ಅವನನ್ನು ಕರೆತರುತ್ತದೆ. ಕ್ರಿಕಲಾವ್ ತಾಂತ್ರಿಕವಾಗಿ ಸೋವಿಯತ್ ಒಕ್ಕೂಟದ ಕಟ್ಟಕಡೆಯ ಕಾಸ್ಮಾನಟ್‌ ಎಂಬ ಅನುದ್ಧೇಶಿತ ಖ್ಯಾತಿಗೆ ಒಳಗಾಗುತ್ತಾನೆ.‌ ಆನಂತರ ಅವನಿಗೆ ಸಾಕಷ್ಟು ಮನ್ನಣೆಗಳು ಲಭಿಸುತ್ತವೆ.

ಸುನಿತಾ ಒಂದು ಸಂದರ್ಶನದಲ್ಲಿ ಹೇಳುತ್ತಾರೆ: ಮೇಲಿಂದ ಭೂಮಿ ಒಂದು ಉಂಡೆಯಾಗಿ ಮಾತ್ರ ಕಾಣಿಸುತ್ತದೆ ಅಂತ. ಇದನ್ನು ಗಗನಯಾನಿಗಳಷ್ಟೇ ಅನುಭವಿಸುವ ʼಓವರ್‌ ವ್ಯೂ ಎಫೆಕ್ಟ್‌ʼ ಎಂದು ಕರೆಯುತ್ತಾರೆ. ಅಂದ್ರೆ ಅವರಿಗೆ ಅಲ್ಲಿಂದ ಭೂಮಿ ಬರೀ ನೆಲ ಮತ್ತು ನೀರಿರುವ ಗ್ರಹವಾಗಿ ತೋರುತ್ತದೆ. ದೇಶಗಳು ಕಾಣ್ಸಲ್ಲ ಅವುಗಳ ನಡುವಿನ ಬಾರ್ಡರ್‌ಗಳು ಕಾಣ್ಸಲ್ಲ. ಪಕ್ಷಿನೋಟ ಅಂತಾರಲ್ಲ ಅದು. ನಮ್ಮ ಭೂಮಿ ಎಷ್ಟು ಸುಂದರ ಅನಿಸ್ತಿರುತ್ತೆ. ಈ ಅಖಂಡ ಜಾಗದಲ್ಲಿ ನಮ್ಮ ಗ್ರಹ ಎಷ್ಟು ಪುಟ್ಟದು ಎಂದೂ ಅನಿಸ್ತಿರುತ್ತೆ. ತಮ್ಮ ಗ್ರಹದ ಮೇಲೆ ಪ್ರೀತಿ ಮಮಕಾರ ಉಕ್ಕುತ್ತಿರುತ್ತದೆ. ಮಾನವನ ಸಣ್ಣತನಗಳ ಮೇಲೆ ಸಿಟ್ಟು ಅನುಕಂಪಗಳು ಮೂಡುತ್ತಿರುತ್ತವೆ.

ಅಂತರಿಕ್ಷ ನಿಜಕ್ಕೂ ಭಾವನಾತ್ಮಕವಾಗಿಯೂ ಕಾನೂನಾತ್ಮಕವಾಗಿಯೂ ನ್ಯೂಟ್ರಲ್ ಝೋನ್. ಕಾರ್ಮನ್‌ ಲೈನ್‌ (ಇಲ್ಲಿಂದ ನೂರು ಕಿಮೀ ಮೇಲೆ) ನಂತರ ಗಡಿಗಳಿಲ್ಲ. ಕ್ರಿಕಲಾವ್‌ಗೆ ಅಂದು ಬಾಹ್ಯಾಕಾಶದಿಂದ ಅವನ ದೇಶದ ಸಿವಿಲ್ ವಾರ್ ಹೇಗೆ ಕಂಡಿದ್ದಿರಬಹುದು? ಇತ್ತೀಚೆಗೆ ಒಂದು ಸಿನಿಮಾ ನೋಡ್ತಿದ್ದೆ.. ಬರ್ನಿಂಗ್‌ ಹೌಸ್‌ ಅಂತ. ಆರಂಭದಲ್ಲಿ ಒಬ್ಬ ಸೈಕಾಲಜಿಸ್ಕ್‌ ಕುಟುಂಬಸ್ಥರಿಗೆ ಕೇಳ್ತಾಳೆ, ನಿಮಗೆ ನೀವಿರುವ ಮನೆ ಹತ್ತಿ ಉರಿಯುವ ಕನಸು ಬಿದ್ದರೆ ರಕ್ಷಣೆಗೆಂದು ಯಾರ ಕೈಗಳಿಗಾಗಿ ತಡಕುತ್ತೀರಿ ಎಂದು. ಒಬ್ಬೊಬ್ಬರು ಒಂದೊಂದು ಉತ್ತರ ಕೊಡುತ್ತಾರೆ. ಯಾರಿಗೂ ತಮ್ಮ ಉತ್ತರಗಳನ್ನು ಬಹಿರಂಗವಾಗಿ ಹಂಚಿಕೊಳ್ಳುವ ಧೈರ್ಯ ಇರಲ್ಲ. ಯಾಕಂದರೆ ತಮ್ಮ ಉತ್ತರಗಳು ಅಲ್ಲಲ್ಲೇ ತಮ್ಮವರ ನಡುವೆಯೇ ಬೆಂಕಿ ಹಚ್ಚಬಹುದು ಎಂದು ಗೊತ್ತಿರುತ್ತದೆ. ಅದರಲ್ಲಿ ಒಬ್ಬಳು ಒಂದು ಹೆಜ್ಜೆ ಮುಂದೆ ಹೋಗಿ ಕನಸಲ್ಲಿ ʼಇಂಥವರನ್ನುʼ ಬೆಂಕಿಗೆ ಎಸೆಯುತ್ತೇನೆ ಎಂದೂ ಕನ್‌ಫೆಸ್‌ ಮಾಡಿಕೊಳ್ಳುತ್ತಾಳೆ.

ಅಂತ್ಯದಲ್ಲಿ ಕಾರಣಾಂತರಗಳಿಂದ ಮನೆಗೆ ನಿಜಕ್ಕೂ ಬೆಂಕಿ ಬೀಳುತ್ತೆ. ಅಷ್ಟರಲ್ಲಾಗಲೇ ಅಂತರಂಗದ ಸಂಗತಿಗಳು ಬಹಿರಂಗಗೊಂಡು ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹೋಗಿರ್ತಾರೆ. ಮನೆಗೆ ಬೆಂಕಿ ಬಿದ್ದಾಗ ಎಲ್ಲರೂ ಓಡಿಬರುತ್ತಾರೆ. ಹತ್ತಿ ಉರಿಯುತ್ತಿರುವುದನ್ನು ಅಸಹಾಯಕರಾಗಿ ನಿಂತು ನೋಡುತ್ತಾರೆ. ಆಗ ಅಲ್ಲಿ ಒಂದು ಸಮಾಧಾನಕರ ಬೆಳವಣಿಗೆ ಆಗುತ್ತೆ. ಮನೆ ಉರಿಯುವದರೊಂದಿಗೆ ಆ ಕುಟುಂಬದೊಳಗಿನ ಮನಸ್ತಾಪಗಳು, ಹೊಟ್ಟೆಉರಿಗಳು, ದುಃಖಗಳು, ಸಿಟ್ಟುಗಳು ಉರಿದು ಭಸ್ಮವಾಗುತ್ತವೆ.

ಪ್ರೀತಿ ಶಾಂತಿ ನೆಮ್ಮದಿಗಳು ನೆಲೆಸುತ್ತವೆ.

ಆದರೆ ಇದು ಸಿನಿಮಾ. ನಿಜ ಜೀವನದಲ್ಲಿ ಹಿಂಗೆಲ್ಲ ಆಗಲ್ಲ ಅನ್ಸುತ್ತೆ. ನೆನ್ನೆ ಸ್ನೇಹಿತರೊಂದಿಗೆ ಹೇಳ್ತಾ ಇದ್ದೆ. ಸಿನಿಮಾಗಳು ಒಂದೂವರೆ ಗಂಟೆಯ ಸಂಗತಿಗಳು. ಸಬ್‌ಕಾನ್ಷಿಯಸ್‌ ಮೈಂಡ್‌ ಮೇಲೆ ಏನೂ ಪರಿಣಾಮ ಬೀರಲ್ಲ ಅಂತ. ಜನ ಮದ್ಯಾನ ಸಿನಿಮಾ ನೋಡಿ ಸಂಜೆ ಹೊತ್ತಿಗೆ ತಮ್ಮ ಎಂದಿನ ಚಾಳಿ ಮುಂದುವರೆಸಿರುತ್ತಾರೆ.

ಸುನಿತಾ, ಬುಚ್‌ ಇಬ್ಬರೂ ಅಂತರಾಷ್ಟ್ರೀಯ ಪ್ರಜೆಗಳು. ಮಾನವ ಕುಲದ ಪ್ರತಿನಿಧಿಗಳು. ಅವರಿಗೆ ಯಾವುದೇ ರಾಷ್ಟ್ರೀಯತೆ, ಜನಾಂಗೀಯತೆ, ಧರ್ಮೀಯತೆ, ಲಿಂಗತ್ವಗಳ ಗಡಿಗಳು ಇರುವುದಿಲ್ಲ. ಅಂತರಿಕ್ಷದಲ್ಲಿ ಭೂಮಿಯೇ ತನ್ನಾಟ ನಡೆಸಲು ಆಗಲ್ಲ. ಅಲ್ಲಿ ಅದರ ಆಕರ್ಷಣೆಯ ಶಕ್ತಿ ಸೊನ್ನೆಯಾಗಿ ಜನ ಲಿಟರಲಿ ತೇಲ್ತಿರ್ತಾರೆ.