ಕುಂಭಮೇಳದ ಬಗ್ಗೆ

Blog post description.

4/16/20251 min read

ಕುಂಭಮೇಳ ಒಂದು ಧಾರ್ಮಿಕ ಸಂಭ್ರಮ. ಅದನ್ನು ದೇಶದ ಎಕಾನಮಿಗೆ ಥಳುಕು ಹಾಕುವುದು ಸಮಂಜಸವಲ್ಲ ಅನಿಸುತ್ತದೆ.

ಸಂಪತ್ತು ವೃದ್ಧಿಸುವುದು ಮೂರು ರೀತಿ:

೧. ಮೂರ್ತ ಉತ್ಪಾದನೆಗಳು: ಕಾರು, ಬೈಕು, ಕಟ್ಟಡ, ದವಸ ಧಾನ್ಯ ಮುಂತಾಗಿ.

೨. ಅಮೂರ್ತ ಉತ್ಪಾದನೆಗಳು(ಸರ್ವೀಸ್): ಬ್ಯಾಂಕಿಂಗ್, ಹಾಸ್ಪಿಟಾಲಿಟಿ, ಸಾರಿಗೆ ಮುಂತಾಗಿ

೩. ಸಂಶೋಧನೆಗಳು: ಇಂಟಲೆಕ್ಚುವಲ್ ಪ್ರಾಪರ್ಟಿ, ವಿಜ್ಞಾನ ತಂತ್ರಜ್ಞಾನ ವಲಯದಲ್ಲಿ ಹೊಸತು ಕಂಡುಹಿಡಿಯುವುದು ಮುಂತಾಗಿ.

ಜಿಡಿಪಿ ವೃದ್ಧಿಸುವುದು ಮೂರು ರೀತಿ:

೧. ಮೂರ್ತ ಮತ್ತು ಅಮೂರ್ತ ಉತ್ಪಾದನೆಗಳಿಂದ.

೨. ಆದಾಯ ಗಳಿಸುವುದರಿಂದ.

೩. ಖರ್ಚು ಮಾಡುವುದರಿಂದ.

ಈ ಗಾತ್ರದ ಕುಂಭಮೇಳ ಏರ್ಪಡಿಸಲು ತಗುಲುವ ಆದಾಯವಿಲ್ಲದ ವೆಚ್ಛಗಳು:

೧. ಲಾ ಅಂಡ್ ಆರ್ಡರ್: ಪೋಲೀಸು, ಆರ್ಮಿ(ಇದು ದುಬಾರಿ), ಸಿಸಿಟಿವಿ, ಡ್ರೋನು ಮುಂತಾಗಿ

೨. ಇನ್ಫ್ರಾಸ್ಟ್ರಕ್ಷರ್ : ರಸ್ತೆಗಳು, ಬ್ರಿಡ್ಜುಗಳು, ಟಾಯ್ಲೆಟ್ಟುಗಳು ಮುಂತಾಗಿ.

೩. ತುರ್ತು ಸೇವೆಗಳು: ಆಸ್ಪತ್ರೆ, ಆಂಬುಲೆನ್ಸು, ಅಗ್ನಿಶಾಮಕ ಮುಂತಾಗಿ.

೪. ವೇಸ್ಟ್ ಮ್ಯಾನೇಜ್ಮೆಂಟ್: ಅಷ್ಟು ಜನ ಉತ್ಪಾದಿಸುವ ಗಲೀಜನ್ನು ಮ್ಯಾನೇಜ್ ಮಾಡುವುದು. ಎಲ್ಲ ಮುಗಿದ ನಂತರ ಗಂಗಾ ನದಿಯನ್ನು ಶುಚಿ ಮಾಡುವುದು.

೫. ಅಷ್ಟೂ ಜನರಿಗೆ ನೀರು ಮತ್ತು ವಿದ್ಯುತ್ ಒದಗಿಸುವುದು.

ಕುಂಭಮೇಳದಿಂದ ಬರುವ ಉತ್ಪಾದಕ ಆದಾಯ:

೧. ಮೂರ್ತ ಉತ್ಪಾದನೆ : ಸೊನ್ನೆ

೨. ಅಮೂರ್ತ ಉತ್ಪಾದನೆ: ಹೊಟೆಲು, ಟೆಂಟು, ಬಸ್ಸು, ರೈಲು, ಪ್ಲೇನು.

ಕುಂಭಮೇಳದಿಂದ ಜಿಡಿಪಿಯ ವೃದ್ಧಿ:

೧. ಈ ಗಾತ್ರದ ಮೇಳ ಒಂದಷ್ಟು ಹಣ ಕೈಬದಲಿಗೆ ಕಾರಣವಾಗುತ್ತದೆ. ಅದು ಜಿಡಿಪಿಗೆ ಸೇರುತ್ತದಾದರೂ ಅದರಿಂದ ವ್ಯವಕಲನ ಮಾಡಬೇಕಿರುವ ಲೆಕ್ಕ ಕಳಕಂಡಂತಿದೆ.

೨. ಇದರಲ್ಲಿ ದೇಶದ ನಲವತ್ತೈದು ಕೋಟಿ ಜನರ ಕನಿಷ್ಠ ಮೂರು ದಿನಗಳ ಅಂದರೆ ಸುಮಾರು ನೂರ ಇಪ್ಪತ್ತು ಕೋಟಿ ಜನರ (man days) ಉತ್ಪಾದಕಾ ಸಾಮರ್ಥ್ಯಕ್ಕೆ ಕೊಕ್ಕೆ ಬೀಳುತ್ತದೆ.

೩. ಹಣದ ಕೈಬದಲಿ ಅಂದರೆ ಉಳಿದೆಲ್ಲಾ ರಾಜ್ಯಗಳ ಒಂದಷ್ಟು ಹಣ ಉತ್ತರಪ್ರದೇಶದ ಖಜಾನೆಗೆ ಸೇರುತ್ತದೆ. ದೇಶದ ಬೊಕ್ಕಸಕ್ಕೆ ಹೆಚ್ಚು ವ್ಯತ್ಯಾಸ ಉಂಟು ಮಾಡಲ್ಲ.

೪. ಉತ್ತರಪ್ರದೇಶಕ್ಕೆ ಬರುವ ಹಣವೂ ಅದು ತೆರಬೇಕಾದ ಖರ್ಚಿಗೆ ಸಮನಾಗಿರಲ್ಲ ಅನಿಸುತ್ತದೆ. ಒಂದು ರಾಜ್ಯ ತನ್ನ ಬಹುತೇಕ ಸಾರ್ವಜನಿಕ ಸೇವಾ ಸಾಮರ್ಥ್ಯವನ್ನು ಇದಕ್ಕಾಗಿ ಉಚಿತವಾಗಿ ವ್ಯಯ ಮಾಡಬೇಕಿರುತ್ತದೆ.

೫. ಅರ್ಧಕ್ಕರ್ಧ ಜನ ಹೊಟೆಲು, ಟೆಂಟು, ಬಸ್ಸು, ರೈಲು, ಪ್ಲೇನುಗಳಿಗೆ ಕಾಂಟ್ರಿಬ್ಯೂಟ್ ಮಾಡಲ್ಲ. pilgrimage ಲೆಕ್ಕದಲ್ಲಿ ಅಲ್ಲಿ ಇಲ್ಲಿ ವ್ಯವಸ್ಥೆ ಮಾಡಿಕೊಂಡು ಹೋಗಿ ಬರುತ್ತಾರೆ.

೬. ಆಹಾರ ಮತ್ತು ಯಾವುದೆಲ್ಲಾ ಜನ ಮನೆಯಲ್ಲಿದ್ದರೂ ಅದೇ ಮಾಡುತ್ತಿದ್ದರೋ ಅಂತಹ ಆದಾಯ-ವ್ಯಯ ಲೆಕ್ಕಕ್ಕೆ ಬರಲ್ಲ. ಉದಾಹರಣೆಗೆ ಅಷ್ಟೂ ಜನ ಮನೆಯಲ್ಲಿದ್ದರೂ ಅಷ್ಟೂ ದಿವಸ ಊಟ ಮಾಡಿರುತ್ತಿದ್ದರು. ಮಿಡಿಯಾದವರು ಅದಲ್ಲದಿದ್ದರೆ ಇನ್ನೇನೊ ತೋರಿಸುತ್ತಿದ್ದರು, ಜನ ಇದಕ್ಕಿಂತ ಕಡಿಮೆ ಸಮಯವನ್ನು ಟಿವಿ ಎದುರು ವ್ಯಯ ಮಾಡುತ್ತಿದ್ದರು.

ಒಟ್ಟು ಮೊತ್ತ ನೋಡಿದರೆ ಇದರಲ್ಲಿ ದೈವಭಕ್ತರಿಗೆ ಒಂದಷ್ಟು ನೆಮ್ಮದಿ ಬಿಟ್ಟರೆ ಇಡೀ ದೇಶಕ್ಕೆ ಆರ್ಥಿಕವಾಗಿ ಲಾಭವೇನಿಲ್ಲ. man days ಲೆಕ್ಕ ಹಾಕಿದಾಗ ತುಸು ನಷ್ಟವೆಂದರೂ ಸರಿಯೇ.

ಸರಳವಾಗಿ- ಮನೆಯಲ್ಲಿ ಹಬ್ಬ ಮಾಡಿದಾಗ ಅಪ್ಪಾಮ್ಮರ ಪರ್ಸಿಗೆ ಕೊಕ್ಕೆ ಬೀಳುತ್ತೆ. ಮಕ್ಕಳಿಗೆ ತುಸು ರಜೆ ಮತ್ತು ಅದರಿಂದಾಗಿ ಸೊಲ್ಪ ಸಂಭ್ರಮ ಇಷ್ಟು ಮಾತ್ರ.

ಈ 4 ಲಕ್ಷ ಕೋಟಿ ರೆವೆನ್ಯೂ, 25 ಸಾವಿರ ಕೋಟಿ ಟ್ಯಾಕ್ಸು ಮುಂತಾದ ಸಂಖ್ಯೆಗಳು ಹರಿದಾಡುತ್ತಿರುವುದರ ಮೂಲ ಉತ್ತರಪ್ರದೇಶದ ಮುಖ್ಯಮಂತ್ರಿಯವರು. 2019ರ ಜನವರಿ-ಫ್ರೆಬ್ರವರಿಯಲ್ಲಿ ನಡೆದ ಕುಂಭಮೇಳಕ್ಕೆ 24ಕೋಟಿ ಜನರು ಬಂದಿದ್ದರಂತೆ. ಅದು 1.2 ಲಕ್ಷ ಕೋಟಿಯನ್ನು ರಾಜ್ಯದ ಇಕಾನಮಿಗೆ ಕೊಡುಗೆ ನೀಡಿತಂತೆ. ಆದ್ದರಿಂದ ಈ ಸಲ 45 ಕೋಟಿ ಜನ ಬಂದರೆ ಅದು 4 ಲಕ್ಷ ಕೋಟಿ ಆಗುತ್ತೆ ಎಂಬ ಅಂದಾಜಿನ ಲೆಕ್ಕ ಕೊಡಲಾಗಿದೆ.

ಇದು ನಿಜವಾ ಎಂದು ಒಂದಷ್ಟು ಹುಡುಕಾಡಿದಾಗ 2018-2022ರವರೆಗಿನ ಆ ರಾಜ್ಯದ ಜಿಎಸ್ಟಿ ಕಲೆಕ್ಷನ್ ಮಾಹಿತಿ ಸಿಕ್ಕಿತು. ಅದು ಹೀಗಿದೆ:

2017 22,803.33

2018 59,231.96

2019 64,658.12

2020 58,342.06

2021 71,888.38

2022 56,018.02

ಇದಕ್ಕೆ ವಿವರಣೆ-

2017ರಲ್ಲಿ ಉತ್ತರಪ್ರದೇಶದಲ್ಲಿ ಜಿಎಸ್ಟಿ ಕಾಯ್ದೆ ಜಾರಿಗೆ ತಂದಿದ್ದರಿಂದ ಸುಮಾರು 16ಲಕ್ಷ ಜನ ಜಿಎಸ್ಟಿಗೆ ನೋಂದಾಯಿಸಿಕೊಂಡಿದ್ದರಿಂದ 2018ಕ್ಕೆ ಜಿಎಸ್ಟಿ ಮೊತ್ತ ಸುಮಾರು 40ಸಾವಿರ ಕೋಟಿ ವೃದ್ಧಿಸಿದೆ.

2018ರಿಂದ 2019ಕ್ಕೆ ಕೇವಲ 4 ಸಾವಿರ ಕೋಟಿ ಜಿಎಸ್ಟಿ ವೃದ್ಧಿಸಿದೆ. ಇದು ಕುಂಭಮೇಳ ನಡೆದ ಕಾಲಮಾನ.

2019 ರಿಂದ 2020ಕ್ಕೆ ಅದು 6 ಸಾವಿರ ಕೋಟಿ ಕಡಿಮೆಯಾಗಿದೆ. ಇದು ಕೋವಿಡ್ ಕಾಲ.

2020 ರಿಂದ 2021 ಕ್ಕೆ ಮತ್ತೆ 13 ಸಾವಿರ ಕೋಟಿ ವೃದ್ಧಿಸಿದೆ. ಇದು ಕೋವಿಡ್ ನಂತರದ ಪ್ರಗತಿಯ ಕಾಲ.

ಮುಖ್ಯಮಂತ್ರಿಗಳ ಪ್ರಕಾರ 2019ರಲ್ಲಿ 1.2ಲಕ್ಷ ಕೋಟಿ ಹೆಚ್ಚುವರಿ ಹಣ ಒಳಬಂದಿದ್ದರೆ ಅದರಲ್ಲಿ ಅರ್ಧ ಮಟ್ಟಿಗೆ ಅನ್ ಆರ್ಗನೈಸಡ್ ಸೆಕ್ಟರ್ ಗೆ ತೆಗೆದಿಟ್ಟರೂ ಇನ್ನರ್ಧದಲ್ಲಿ 18% ಬೇಡ, 12% ಅಂತಿಟ್ಟುಕೊಂಡರೂ ಆರು ಸಾವಿರ ಕೋಟಿ ಜಿಎಸ್ಟಿ ಕಲೆಕ್ಷನ್ ಆಗಬೇಕು. ಯಾವುದೇ ಮೇಳವಿಲ್ಲದ 2020-21ರ ನಡುವೆ 13 ಸಾವಿರ ಕೋಟಿ ವೃದ್ಧಿಸಿದೆ ಎಂದಾದರೆ 2019ರ 4 ಸಾವಿರ ಕೋಟಿ ಅದು ವೃದ್ಧಿಯಲ್ಲ ಇಳಿಕೆ ಎಂದಾಯ್ತು. 2019ರಲ್ಲಿ ಸಹಜವಾಗಿ ಆಗಬೇಕಿತ್ತ ವರ್ಷದಿಂದ ವರ್ಷದ ಪ್ರಗತಿಯ ವ್ಯತ್ಯಾಸವೇ ಕಂಡಿಲ್ಲ ಇನ್ನು ಮೇಳದ ಒಳಹರಿವು ಎಲ್ಲಿ?

ಜಗತ್ತಿನಾದ್ಯಂದ ಇರುವ ಒಟ್ಟು ಹಿಂದೂಗಳ ಸಂಖ್ಯೆ 120 ಕೋಟಿ. ಇದರಲ್ಲಿ 45 ಕೋಟಿ ಜನ ಮೇಳದಲ್ಲಿ ಭಾಗಿಯಾಗಬೇಕಂದರೆ ನಮ್ಮ ನಿಮ್ಮ ಸುತ್ತಮುತ್ತಲ ಪ್ರತಿ ಮೂವರಲ್ಲಿ ಒಬ್ಬರು ಹೋಗಿಬಂದಿರಬೇಕು. ನೀವೇ ಸುತ್ತ ತಿರುಗಿ ನೋಡಿ. ಇದು ನಿಜವಿದ್ದಬಹುದಾ?

ಉತ್ತರಪ್ರದೇಶದ ಕಳೆದ ವರ್ಷದ ಜಿಎಸ್ಟಿ ಎಷ್ಟಿತ್ತು ಈ ವರ್ಷ ಎಷ್ಟು ದಾಖಲಾಗುತ್ತದೆ ಎಂಬುದನ್ನು ಯಾರಾದರೂ ನೆನಪಿಟ್ಟುಕೊಂಡು ಮುಂದಿನ ವರ್ಷ ತಾಳೆಹಾಕಿ ನನಗೂ ತಿಳಿಸಿ.

ಧರ್ಮ ಆಧ್ಯಾತ್ಮ ಭಕ್ತಿ- ಇವೆಲ್ಲವೂ ಮನುಷ್ಯ ಸಬಲನಾಗಿದ್ದಾಗ ಸಂಭ್ರಮ ದುರ್ಬಲನಾಗಿದ್ದಾಗ ಸಾಂತ್ವನ ನೀಡುತ್ತವೆ. ನಾಗರೀಕ ಸಮಾಜದಲ್ಲಿ ಅದೇ ಅವುಗಳ ಪಾತ್ರ.

ಹಣ ಕೈಬದಲಾಗುವುದು ಒಂದು ಸಣ್ಣ ಪ್ರಮಾಣದ ಸೋನೆ ಮಳೆ. ಅದು ಅಷ್ಟೇ ಇರಬೇಕು. ಧರ್ಮದ ಆಚರಣೆಯಲ್ಲಿ ಲಕ್ಷಾಂತರ ಕೋಟಿ ಹಣ ನೋಡಲು ಹೋದಾಗ ಅದು ನಿಸ್ಸಂಶಯವಾಗಿ ಧರ್ಮಕ್ಕೆ ಕಳಂಕ ತರುತ್ತದೆ. ಧಾರ್ಮಿಕ ಭಾವನೆ ಎದೆಯಲ್ಲಿ ನೆಮ್ಮದಿ, ಶಾಂತಿ, ಭಕ್ತಿ, ಪ್ರೇಮರಸಗಳನ್ನು ಸ್ಫುರಿಸಬೇಕು. ಅದು ನಿಮ್ಮಲ್ಲಿ ಎದೆಯೊತ್ತಡ, ಅಶಾಂತಿ, ಉದ್ವೇಗ, ಕ್ಷೋಭೆ, ಸಿಟ್ಟು, ದ್ವೇಷ, ಹಿಸ್ಟೀರಿಯಾ, ಮೌಢ್ಯ ಇವೇ ಮೊದಲಾದವನ್ನು ಉಂಟು ಮಾಡಿದರೆ ನೀವು ಧರ್ಮ ಬಿಟ್ಟು ಅಧರ್ಮಕ್ಕೆ ಇಳಿದ್ದೀರ ಎಂದು ಅರ್ಥ. ಮೇಲ್ಕಂಡ ನನ್ನ ಆರ್ಥಿಕತೆಯ ಗ್ರಹಿಕೆಯಲ್ಲಿ ತಪ್ಪಿರಬಹುದು. ಯಾರಾದರೂ ಅದು ಹೀಗಲ್ಲ ಹೀಗೆ ಎಂದು ಸದುದ್ದೇಶದಿಂದ ಅರ್ಥಮಾಡಿಸಿದರೆ ಒಪ್ಪಿಕೊಳ್ಳುವ ಗುಣ ನನ್ನಲ್ಲಿದೆ.

ಹಿಂದೂ, ಬೌದ್ಧ, ಜೈನ, ಭಕ್ತಿ, ಶರಣ ಇಂಥಾ ಅನೇಕಾನೇಕ ತತ್ವ ವಿಚಾರಗಳನ್ನು ಕೊಡುಗೆಯಾಗಿ ನೀಡಿದ ಭವ್ಯ ಭಾರತದಲ್ಲಿ ಇಂದು ಅಮಾಯಕ ಜನರು ಅಜ್ಞಾನವನ್ನೇ ಅಮೃತದಂತೆ ಸೇವಿಸುವುದು ನೋವು ತರಿಸುತ್ತದೆ. ಆದ್ದರಿಂದ ಕೆಲವೊಮ್ಮೆ ಗಟ್ಟಿಯಾಗಿ ಇದು ಹಾಗಲ್ಲ ಹೀಗೆ ಎಂದು ಹೇಳಬೇಕು ಅನಿಸುತ್ತದೆ. ಧನ್ಯವಾದಗಳು.