ಮುತ್ತಜ್ಜ ತಂತ್ರಜ್ಞಾನಗಳು

Blog post description.

6/26/20251 min read

ಕೈ ತೊಳೆದುಕೊಳ್ಳಲು ಹೊಟೆಲಿನ ರೆಸ್ಟ್‌ರೂಮಿಗೆ ಹೋಗಿರುತ್ತೀರಿ. ಸುಂದರವಾದ ನಲ್ಲಿ. ಎಲ್ಲಿ ಆನ್‌ ಮಾಡ್ಬೇಕು ಅಂತ ಗೊತ್ತಾಗ್ತಿಲ್ಲ. ಸೆನ್ಸರ್‌ ಇರಬಹುದು ಎಂದು ನಲ್ಲಿ ಕೆಳಗೆ ಕೈ ಇಡ್ತೀರಿ, ಕಾಯ್ತೀರಿ, ನೀರು ಬರಲ್ಲ. ಸೆನ್ಸರ್‌ ಬೇರೆಡೆ ಇರಬಹುದೆಂದು ಎಲ್ಲೆಲ್ಲೋ ಕೈಯಾಡಿಸುತ್ತೀರಿ. ಊಹ್ಞೂ. ಕೆಟ್ಟಮಾತು ಬರುವಷ್ಟು ಕೋಪ ಬರುತ್ತದೆ. ಈ ನಲ್ಲಿಯಲ್ಲಿ ನೀರು ಬರುತ್ತಿಲ್ಲವೋ, ನಿಮಗೆ ಸರಿಯಾಗಿ ಸೆನ್ಸರ್‌ ಗುರುತಿಸಲು ಆಗುತ್ತಿಲ್ಲವೋ ಅಥವಾ ಸೆನ್ಸರೇ ಕೆಟ್ಟೋಗಿದೆಯೋ ಯಾವನಿಗೊತ್ತು? ಕೆಲಸಗಾರ ಬಂದು ಹೇಳ್ತಾನೆ ʼಸರ್‌ ಆ ನಲ್ಲಿಯನ್ನು ಇನ್ನೂ ಸೆಟ್‌ ಮಾಡಿಲ್ಲ, ಪಕ್ಕದ ನಲ್ಲಿ ಬಳಸಿʼ…

ಒಂದು ಸರಳವಾದ ತಿರುವಿ ಆನ್-ಆಫ್ ಮಾಡುವ ನಲ್ಲಿಯಿದ್ದಿದ್ದರೆ ಜೀವನ ಎಷ್ಟು ಸುಗಮವಾಗಿರುತ್ತಿತ್ತು ಅಲ್ಲವೇ?

ಹಾಗೆ ಬಲಕ್ಕೆ ತಿರುಗ್ತೀರಿ, ಕೈ ಒರೆಸಿಕೊಳ್ಳಬೇಕು. ಒಂದಲ್ಲ ಅಂತ ಎರಡು ಮಶೀನು ಇಟ್ಟಿದಾರೆ. ಒಂದರ ಅಡಿ ಕೈ ಇಟ್ಟರೆ ಟಿಶ್ಯೂ ಪೇಪರ್‌ ಬರಬೇಕು. ಇನ್ನೊಂದರ ಅಡಿ ಇಟ್ಟರೆ ಗಾಳಿ ಬರಬೇಕು. ಟಿಶ್ಯೂ ಪೇಪರ್‌ ಬರಲ್ಲ, ಗಾಳಿ ಸಾಕಾಗಲ್ಲ. ಕೊನೆಗೆ ಕುಂಡಿಗೆ ಕೈ ಒರೆಸಿಕೊಂಡು ಹೊರಗೆ ಬರ್ತೀರಿ.

ಈ ʼಸ್ಮಾರ್ಟ್‌ʼ ಅನ್ನುವುದು ನಮ್ಮನ್ನು ಎಷ್ಟು ಹೈರಾಣಾಗಿಸಿದೆಯಲ್ವ?

ಇಂಥ ಹೊತ್ತಲ್ಲಿ ಮನುಷ್ಯ ಕಂಡುಹಿಡಿದಿರುವ ಕೆಲವು ತಂತ್ರಜ್ಞಾನಗಳನ್ನು ನೆನೆಸಿಕೊಳ್ಳಬೇಕು, ಅವುಗಳ ಪಾದಕ್ಕೆರಗಬೇಕು. ಪಿನ್ನ ತಗೊಳ್ಳಿ. ಕೂದಲು ಕಟ್ಟಲು, ಹೂ ಮುಡಿಯಲು, ಚಡ್ಡಿಯ ಗುಂಡಿ ಕಿತ್ತೋದಾಗ ಮಾನ ಉಳಿಸಲು; ಅಂಗಾಲಿಗೆ ಮುಳ್ಳು ಏರಿದಾಗ ಸರ್ಜರಿ ಸಾಧನವಾಗಿಯೂ ಸಹಾಯ ಮಾಡಿದೆ. ಇಂತಹ ಪಿನ್ನ ಇವತ್ತಿನ ಆಕಾರದಲ್ಲಿದ್ದಂತೆಯೇ ಈಜಿಪ್ತಿನ ಪಿರಮಿಡ್ಡುಗಳಲ್ಲಿ ಸಿಕ್ಕಿವೆ. ಅಂದರೆ 5000 ವರ್ಷಗಳಿಗೂ ಮೊದಲು. ಅಷ್ಟೊತ್ತಿಗೆ ನುಡಿಭಾಷೆ ಬರಹ ಭಾಷೆಯೊಂದಿಗೆ ವೈಜ್ಞಾನಿಕ ಭಾಷೆಯನ್ನೂ ಕಟ್ಟಿಕೊಂಡಿದ್ದರು ಎಂಬ ಕುರುಹು ಇಲ್ಲಿದೆ. ಹಗಲು ರಾತ್ರಿ ನಮ್ದೇ ದೊಡ್ಡದು ನಮ್ದೇ ಹಳೇದು ಎಂದು ಕನವರಿಸುವವರು ಇದನ್ನು ಗಮನಿಸಬೇಕು.

ಬೀಗ-ಬೀಗದ ಕೈ ತಗೊಳ್ಳಿ. ಕೋಡು ಪಾಸ್ವರ್ಡುಗಳ ಸ್ಮಾರ್ಟ್‌-ಲಾಕಿಂಗ್‌ ಸಿಸ್ಟಂಗಳ ನಡುವೆ ಮನೆಯಿಂದ ಹೊರಡುವಾಗ ಚಿಲಕ ಹಾಕಿ ಬೀಗ ಜಡಿದು ಬಿದ್ದಿದೆಯೋ ಇಲ್ಲವೋ ಎಂದು ಜಗ್ಗಿ ಎಳೆದು ಖಾತ್ರಿ ಪಡಿಸಿಕೊಂಡರೇನೇ ನೆಮ್ಮದಿ. ಬ್ಯಾಂಕುಗಳು ಹೊರಗೆ ಎಷ್ಟೇ ಕಂಪ್ಯೂಟರ್‌ ಬಳಸಿದರೂ ಒಳಗೆ ಅವಲಂಬಿಸಿರುವುದು ಇದೇ ಬೀಗಗಳನ್ನು.

ಪೆನ್ನಿಗೆ ಬರೋಣ. ರಾಜರ ಕಾಲದಲ್ಲಿ ನವಿಲುಗರಿಯ ತುದಿಯನ್ನು ಇಂಕಿನಲ್ಲಿ ಅದ್ದಿ ಬರೆಯುತ್ತಿದ್ದರು. ನಂತರ ಬ್ರಿಟೀಷರು ನಮ್ಮನ್ನಾಳ್ತಿದ್ದ ಕಾಲದಲ್ಲಿಯೇ ತುದಿಯಲ್ಲಿ ಗುಂಡು ಉರುಳುವ ಪೆನ್ನು ಬಂತು. ಅದೇ ಇವತ್ತಿಗೂ ಓಡುತ್ತಿದೆ.

ಸ್ವಿಚ್‌ಗಳನ್ನು ತಗೊಳ್ಳಿ. ಟಿಕ್-ಟಾಕ್..‌ ಅನ್‌-ಆಫ್.‌ 1800ರಲ್ಲಿಯೇ ಬಂದಿತ್ತು. ಇವತ್ತಿಗೂ ಹಾಗೇ ಇದೆ. ಇನ್‌ಫ್ಯಾಕ್ಟ್‌ ಪ್ಲೇನಿನೊಳಗೆ ನೋಡಿರ್ತೀರಿ, ಪೈಲಟ್ಟುಗಳ ಗರ್ಭಗುಡಿಯಲ್ಲಿ ಇಂತಹ ನೂರಾರು ಸ್ವಿಚ್ಚುಗಳಿರುತ್ತವೆ. ಸೆನ್ಸರ್ ಬಟನ್ನುಗಳು ಇರಲ್ಲ! ಯಾಕಂದ್ರೆ ಪೈಲಟ್ಟಿಗೂ ಆನಾಯ್ತಾ ಆಫಾಯ್ತಾ ಅಂತ ಥಟ್ಟನೆ ಗೊತ್ತಾಗಬೇಕಿರುತ್ತದೆ! ಬಟನ್‌ ಒತ್ತಿ ಹೈ ಹಲೋ ಆನ್‌ ಆದ್ಯಾ ಅಂತ ಕೈಬೀಸಿ ಕೇಳುವಷ್ಟು ಸಮಯವಿರಲ್ಲ.

ಸೈಕಲ್‌ ತಗೊಳ್ಳಿ ಮಾರಾಯ್ರೇ. 1890ರಲ್ಲಿ ಓಡುತ್ತಿದ್ದ ಸೈಕಲ್‌ ಈಗಲೂ ಅದೇ ರೂಪದಲ್ಲಿದೆ. ಪೆಟ್ರೋಲ್‌ ಡೀಜೆಲ್ಲು ಚಾರ್ಜಿಂಗು ಏನೂ ಬೇಕಿಲ್ಲ. ಪೇಪರ್‌ ಕ್ಲಿಪ್‌ ತಗೊಳ್ಳಿ. 1899ರಲ್ಲಿ ಪೇಟೆಂಟಾಗಿದ್ದು. ನಿಮ್ಮ ಪ್ಯಾಂಟಿನ ಜಿಪ್‌ ನೋಡಿಕೊಳ್ಳಿ. 1917ರಲ್ಲಿದ್ದ ಅದೇ ಜಿಪ್ಪು. ಸ್ಟೇಪ್ಲರು ನೋಡಿ 1800ರ ಕಾಲದ್ದು.

ಈ ಎಲ್ಲ ಮುತ್ತಜ್ಜರ ವಿಶೇಷತೆಗಳೇನು ಗೊತ್ತೇ? ಯಾಕೆ ಇವು ಇವತ್ತಿಗೂ ಅದೇ ರೂಪದಲ್ಲಿ ಜನೋಪಯೋಗಿಯಾಗಿವೆ? ಯಾಕೆ ಇವುಗಳಲ್ಲಿ ಬದಲಾವಣೆ(ಅಪ್‌ಗ್ರೇಡ್‌) ಎಂಬುದೇ ಬೇಕಾಗಿಲ್ಲ? ಯಾಕಂದರೆ ಇವು ತುಂಬ ತುಂಬ ಸರಳ ಇದಾವೆ. ಅವು ಇರುವ ಉದ್ದೇಶವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತವೆ. ನಮಗೆ ಅರಿವೇ ಆಗದಂತೆ ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಇವನ್ನು ಬಳಸಲು ಬೇಕಾದ ಕಲಿಕೆಯ ಶ್ರಮ-ಸಮಯ ತೀರಾ ಕಡಿಮೆ. ಸ್ವಿಚ್ಚಿನ ಆನ್‌-ಆಫ್‌ ಬೆಕ್ಕಿಗೂ ಗೊತ್ತಾಗುತ್ತದೆ. ಇಲ್ಲಿ ಯಾವುದೇ ಸಾಫ್ಟ್‌ವೇರ್‌ ಇಲ್ಲ. ಹಾಗಾಗಿ ಸಾಫ್ಟ್‌ವೆರ್‌ ಅಪ್‌ಡೇಟೂ ಬೇಕಿಲ್ಲ. ಅಗಗಲ ಕ್ರಾಶ್‌ ಆಗಲ್ಲ. ಯಾರೋ ಹ್ಯಾಕ್‌ ಮಾಡಿಬಿಡುತ್ತಾರೆ ಎಂಬ ಭಯವಿಲ್ಲ. ಪಾಸ್ವರ್ಡ್‌ ಮರೆತೋಗಬಹುದೆಂಬ ಉದ್ವೇಗವಿಲ್ಲ. ಇಲ್ಲಿ ಸೆನ್ಸರುಗಳಿಲ್ಲ. ಹಾಗಾಗಿ ಕರೆಂಟು ಬೇಕಿಲ್ಲ. ಅಗಗಲ ಚಾರ್ಜ್‌ ಮಾಡುವ ಒತ್ತಡವಿಲ್ಲ. ರಿಮೋಟ್‌ ಕಂಟ್ರೋಲೆಂಬ ಇನ್ನೊಂದು ಉಪ-ಸಾಧನವಿಲ್ಲ. ನಲ್ಲಿಯಾಗಲಿ ಸ್ವಿಚ್ಚಾಗಲಿ ಪಿನ್ನವಾಗಲಿ.. ಸೈಕಲ್‌ ಕೂಡ.. ಪೂರ್ತಿ ನಿಯಂತ್ರಣ ನಮ್ಮ ಕೈಲಿರುತ್ತದೆ. ಅಲ್ಗೋರಿತಮುಗಳ ಆಟಾಟೋಪ ಇಲ್ಲಿಲ್ಲ. ಇವುಗಳಿಗೆ ರಿಂಗ್‌ಟೋನಿಲ್ಲ, ಗುರ‍್ರ್‌ ಅನ್ನಲ್ಲ- ಬಹಳ ಸೈಲೆಂಟಾಗಿ ತಮ್ಮ ಕಾರ್ಯ ನಿರ್ವಹಿಸುತ್ತವೆ. ಇವು ಪಾಪ ನಮ್ಮ ನಡೆ-ನುಡಿ-ಜಾಗಗಳನ್ನು ಟ್ರಾಕ್‌ ಕೂಡ ಮಾಡಲ್ಲ. ಒಮ್ಮೆ ಸಂತೆಯಲ್ಲಿ ಖರೀದಿಸಿದರೆ ಸಾಕು, ನನ್ನನ್ನು ಬಳಸಲು ತಿಂಗಳಿಗೊಂದು ಸಲ ರೀಚಾರ್ಜ್‌ ಮಾಡಿಸಿ ಅಂತ ಬೆನ್ನು ಬೀಳಲ್ಲ. ಪೆನ್ನಿನಲ್ಲಿ ಬ್ಯಾಕ್‌ಸ್ಪೇಸ್‌ ಬಟನ್‌ ಇಲ್ಲ. ಅಂದರೆ ಭಾವನೆಗಳಲ್ಲಿ ಬುದ್ಧಿ ಬೆರೆಕೆಯಾಗುವ ಸಂಭವವಿಲ್ಲ. ತಿದ್ದಿದರೂ ಏನೋ ತಿದ್ದಿದಾನೆ ಎಂಬ ಭಾವನೆ ಗೊತ್ತಾಗುತ್ತದೆ. ಪ್ರತಿಯೊಂದರಲ್ಲೂ instant feedback ಇದೆ. ಕತ್ಲಲ್ಲಿಯೂ ತಡಕಿ ಹುಡುಕಿ ಬಳಸಬಹುದು. ಪೈಲಟ್‌ ಮುನ್ನೋಡಿಕೊಂಡೇ ತಲೆ ಮೇಲಿನ ಬಟನ್‌ ಆನ್‌ ಆಫ್‌ ಮಾಡಬಹುದು.

ಆಧುನಿಕ ತಂತ್ರಜ್ಞಾನದಲ್ಲಿಯೂ ಈ ಲಕ್ಷಣಗಳುಳ್ಳ ಉದಾಹರಣೆಗಳು ಸಿಗುತ್ತವೆ.

ಇತ್ತೀಚೆಗಿನ ಈಮೇಲಿಗೆ ಬರೋಣ. 1970sನಲ್ಲಿ ಶುರುವಾಗಿದ್ದು. ಆಮೇಲೆ ಒರ್ಕುಟ್ಟು, ಫೇಸ್ಬುಕ್ಕು, ಇನ್‌ಸ್ಟಾ, ಟ್ವಿಟರು, ವಾಟ್ಸೊಪ್ಪು, ಮೆಸೆಂಜರು, ಟೆಲಿಗ್ರಾಮು, ಸ್ಲಾಕ್‌-ಏನೆಲ್ಲಾ ಬಂದವು.. ಪತ್ರಿಕೆಗಳು ನೂರಾ ಒಂದು ಸಲ ಈಮೇಲಿನ ಮರಣದ ನುಡಿ ನಮನ ಬರೆದವು. ಆದರೆ ಈಮೇಲ್‌ ಸಾಯಲೇ ಇಲ್ಲ. ಯಾಕಂದರೆ ಇದಕ್ಕೆ ಒಂದು ಅಧಿಕೃತತೆ ಇದೆ. ಆಡಿಟ್‌ ಪೂರಕವಾಗಿದೆ. ತಾಳ್ಮೆಯಿದೆ. Asynchronous ಇದೆ. ಥಟ್ಟನೆ ಓದಿ ಥಟ್ಟನೆ ರಿಪ್ಲೈ ಮಾಡುವ ಒತ್ತಡವಿಲ್ಲ. ಯಾವತ್ತು ಇದರಲ್ಲಿ ಡಬಲ್‌ ಬ್ಲೂಟಿಕ್‌ ಬೆರೆಸುತ್ತಾರೋ ಅವತ್ತು ಈಮೇಲ್‌ ಸತ್ತಂತೆ. ಹೆಚ್ಚೂಕಮ್ಮಿ ಎಂಎಸ್‌ ವರ್ಡ್‌ ಸಹ ಈ ಗೌರವಕ್ಕೆ ಅರ್ಹವಾಗಿದೆ. 1983ರಲ್ಲಿ ಬಂದದ್ದು. ಅದರ ನಂತರ ಸಾವಿರದ ಒಂದು ಎಡಿಟಿಂಗ್‌ ಟೂಲ್‌ಗಳು ಬಂದ್ವು ಹೋದ್ವು. ವರ್ಡು ಎಲ್ಲರ ಫೇವರಿಟ್ಟಾಗಿ ಉಳಿದುಕೊಂಡಿದೆ.