ಬದುಕಿಗೆ ಅರ್ಥವೇನು?

Madhu Y N

11/29/20241 min read

ಜಯನಗರದಲ್ಲಿ ಭಿಕ್ಷೆ ಬೇಡುತ್ತಿದ್ದ ಈ ವ್ಯಕ್ತಿ ಎರಡು ವಾರಗಳ ಹಿಂದೆ ಇನ್ಸಟಾಗ್ರಾಮಿನ ಒಬ್ಬ ಕನ್ನಡಿಗರ ಮೂಲಕ ರೀಲ್ ಆಗಿ ಈಗ ಭಾರತದಾದ್ಯಂತ ಸುದ್ದಿಯಾಗಿದ್ದಾನೆ. ಕಾರಣ ಈತ ಒಂದಾನೊಂದು ಕಾಲದಲ್ಲಿ ಮೈಂಡ್ ಟ್ರೀ ಕಂಪನಿಯಲ್ಲಿ ಐಟಿ ಉದ್ಯೋಗಿಯಾಗಿದ್ದು ಜರ್ಮನಿಯ ಫ್ರಾಂಕ್ಫ್ರಟ್ ನಲ್ಲಿ ದುಡಿದಿದ್ದನಂತೆ. ಕೆಟ್ಟ ಗಳಿಗೆಯಲ್ಲಿ ಅಪ್ಪ ಅಮ್ಮನ್ನ ಕಳೆದುಕೊಂಡು ಆನಂತರ ಸಂಗಾತಿಯೂ ಬಿಟ್ಟುಹೋಗಿ ಕುಡಿತಕ್ಕೆ ಸಿಲುಕಿ ಹೀಗಾಗಿದ್ದಾನೆ.

ನಾನು ಚಿಕ್ಕವನಿದ್ದಾಗ ಒಬ್ಬಾತ ನಮ್ಮಲ್ಲಿ ಊಟಕ್ಕೆ ಬರುತ್ತಿದ್ದ. ಜೇಬಿನಲ್ಲಿ ಹತ್ತು ಪೈಸೆ ಇಪ್ಪತ್ತು ಪೈಸೆಗಳ ನಾಣ್ಯಗಳನ್ನು ತುಂಬಿಕೊಂಡು ನಮ್ಮೆದುರು ಜೇಬನ್ನು ಕುಲುಕುತ್ತ ಝಣಝಣ ಅನ್ನಿಸೋನು. ಅಂದ್ರೆ ನನ್ನತ್ರ ದುಡ್ಡಿದೆ ಊಟ ಕೊಡಿ ಎಂದು ಅವನ ವರಸೆ. ಒಂದು ಅನ್ನ ಸಾರಿಗೆ ತೃಪ್ತನಾಗುತ್ತಿದ್ದ. ಗಡ್ಡ ಬಿಟ್ಟಿದ್ದ. ಸಿಕ್ಕಾಪಟ್ಟೆ ಇಂಗ್ಲೀಷ್ ಹೊಡೆಯುತ್ತಿದ್ದ. ಯಾವುದೋ ಸ್ಥಿತಿವಂತ ಕುಟುಂಬದವನು. ಮಾನಸಿಕ ಸ್ಥಿಮಿತ ಕಳೆದುಕೊಂಡು ಮನೆ ತೊರೆದು ಹೀಗಾಗಿದ್ದಾನೆ ಎಂದು ಯಾರಾದರೂ ಊಹಿಸಬಹುದಾಗಿತ್ತು. ಅವನೂ ಇವನಂತೆಯೇ ದೊಡ್ಡ ದೊಡ್ಡ ಓದನ್ನು ನಿರರ್ಗಳವಾಗಿ ಹರಿಯಬಿಡುತ್ತಿದ್ದ.

ಈತನೂ ಹಾಗೆ. ಮಾತಿನ ನಡುವೆ ಸ್ಕಾಟ್ಲಂಡಿನ ಫಿಲಾಸಫರ್ ಡೇವಿಡ್ ಹ್ಯೂಮ್, ಜರ್ಮನಿಯ ಇಮ್ಯಾನುವಲ್ ಕಾಂಟ್, ವಿಜ್ಞಾನಿ ಐನ್ ಸ್ಟೈನ್, ಆರ್ಕಿಮಿಡಿಸ್ ಮುಂತಾದವರನ್ನು ಕೋಟ್ ಮಾಡುತ್ತಾನೆ. ಆಧ್ಯಾತ್ಮ ಅನ್ನುತ್ತಾನೆ. ಈ ಜ್ಞಾನ, ವಿವೇಕ ಪ್ರತಿಭೆ ಅನ್ನೋದೆಲ್ಲ ಸುಳ್ಳು. ನಮ್ಮ ಮೆದುಳಲ್ಲಿ ಎರಡು ಅಂಗ ಇದಾವೆ. ಒಂದು ಹಿಪ್ಪೋಕಾಂಪಸ್ ಇನ್ನೊಂದು ಅಮೇಗ್ಡಾಲ. ಮೊದಲನೇದರಲ್ಲಿ ಮಾಹಿತಿ ಶೇಖರಣೆಯಾಗುತ್ತೆ. ಎರಡನೇಯದರಲ್ಲಿ ಭಾವನೆ ಉತ್ಪತ್ತಿಯಾಗುತ್ತೆ. ಮತ್ತು ಈ ಎರಡರಲ್ಲಿ ಪ್ಯಾರಲಲ್ ಜಗತ್ತು ಓಡ್ತಿರುತ್ತೆ ಅಂತಾನೆ! ಕೊನೆಗೆ 'ನೋಡಿ ಈ ಜಾತಿ ಈ ಧರ್ಮ ಇದೆಲ್ಲ ಎಷ್ಟು ನಿರರ್ಥಕ. ನಾನು ಇನ್ನೂ ಜಾಸ್ತಿ ಜಾಸ್ತಿ ಓದ್ಬೇಕು' ಅಂತಾನೆ.

ಈತ ಯಾಕೆ ಹೀಗಾದ ಎನ್ನುವುದಕ್ಕೆ ಸರಳ ಉತ್ತರ ಸಿಕ್ಕಿದೆ. ಹೆತ್ತವರ ಸಾವು ಮತ್ತು ಪ್ರಿಯತಮೆ ತೊರೆದದ್ದು. ಆದರೆ ಈತ ಏನು ಮಾಡಬಹುದಿತ್ತು? ಸಮಾಜ(ನೆಂಟರು, ಸ್ನೇಹಿತರು, ಸಹೋದ್ಯೋಗಿಗಳು) ಈತನಿಗೆ ಏನು ಮಾಡಬಹುದಿತ್ತು ಎಂಬುದನ್ನು ಯೋಚಿಸಬೇಕಾಗಿದೆ. ಅಥವಾ ಇದು ಅನಿವಾರ್ಯವಾಗಿತ್ತೇ ಎಂದೂ ಸಹ.

ಮನುಷ್ಯನಿಗೆ ಬದುಕಲ್ಲಿ ಆಪ್ತರ ನಷ್ಟ, ಸಂಬಂಧಗಳ ನಷ್ಟ ಅತ್ಯಂತ ಸಹಜವಾದ ಬಳುವಳಿ. ಆತ ಇಲ್ಲಿ ಬದುಕಬೇಕೆಂದರೆ ಮೊದಲು ಇದನ್ನು ಸ್ವೀಕರಿಸುವುದು ಕಲಿಯಬೇಕು. ನಮ್ಮ ತಂದೆತಾಯಿ, ಒಡಹುಟ್ಟಿದವರು, ಪತಿ/ಪತ್ನಿ, ಅಷ್ಟೇ ಯಾಕೆ ನಮ್ಮ ಮಕ್ಕಳನ್ನೇ- ನಮ್ಮಿಂದ ಯಾವ ಕ್ಷಣದಲ್ಲಾದರೂ ಸಾವು ಕಸಿದುಬಿಡಬಹುದು. ರೋಗ, ಅಪಘಾತ, ಮುಪ್ಪು ಯಾವುದೋ ಒಂದು ನೆಪ. ಮೊನ್ನೆ ಮೂರು ಹುಡುಗಿಯರು ಹೊಟೆಲಿನ ಐದಡಿ ಸ್ವಿಮಿಂಗ್ ಪೂಲಿನಲ್ಲಿ ಮಡಿದಿದ್ದಾರೆ.

ಹಾಗೆ ಸಂಬಂಧಗಳೂ ಸಹ. ನಮ್ಮನ್ನು ನಮ್ಮ ಹೆತ್ತವರೇ ಬಿಟ್ಟುಹೋಗಿಬಿಡಬಹುದು. ಅಥವಾ ನಮ್ಮ ಮಕ್ಕಳೇ ನಮ್ಮನ್ನು ತ್ಯಜಿಸಬಹುದು. ಇನ್ನು ನಡುವಲ್ಲಿ ಬಂದುಹೋಗುವ ಪತಿ/ಪತ್ನಿ ಯಾವ ಲೆಕ್ಕ. ಹೊಂದಾವಣಿಕೆ ಆಗ್ತಿಲ್ಲಾಂದರೆ ಬಿಡಲೇಬೇಕಾಗುತ್ತದೆ.

ಕ್ಲೀಷೆಯಾದರೂ ಸರಿ ಮನುಷ್ಯ ಎಂದಿಗೂ ಏಕಾಂಗಿ. ಮತ್ತು ಇಲ್ಲಿನ ಯಾವುದೂ ತನ್ನದಲ್ಲ. ನನ್ನ ಮನೆ, ನನ್ನ ಸೈಟು, ನನ್ನ ಜನ, ಸುತ್ತಲಿನ ಜನರ ಈ ಪ್ರೀತಿ, ಸ್ನೇಹ, ವಿಶ್ವಾಸ- ಯಾವುದೂ ಸಹ. ಮೂಲದಲ್ಲಿ ನಾವಷ್ಟೇ. ಜಗತ್ತಿನಲ್ಲಿ ಸುಮಾರು ಧರ್ಮಗಳು ಬಂದಾಗಿದೆ. ಅಸಂಖ್ಯಾತ ಪಂಡಿತರು ಬರೆದಾಗಿದೆ. ದಾರ್ಶನಿಕರು ಹುಟ್ಟಿ ಸತ್ತಿದ್ದಾರೆ. ಈ ಒಗಟಿಗೆ ಯಾರಲ್ಲಿಯೂ ಸಾರ್ವಕಾಲಿಕ ಉತ್ತರವಿಲ್ಲ. ನಾವು ಯಾರು? ನಾವು ಯಾಕೆ ಇಲ್ಲಿದ್ದೇವೆ? ನಮ್ಮ ಅಸ್ತಿತ್ವದ ಉದ್ದೇಶವೇನು?

ಅನೇಕ ಸಮಾಧಾನಗಳಿದ್ದಾವೆ. ಅವುಗಳಲ್ಲಿಯೇ ಯಾವುದೋ ಒಂದನ್ನು ನೀವು ಆಯ್ಕೆ ಮಾಡಿಕೊಂಡು ಬದುಕಬೇಕು. ಆಸ್ತಿಕನೋ, ನಾಸ್ತಿಕನೋ, ಹಿಂದೂನೋ, ಕ್ರಿಶ್ಚಿಯನ್ನೋ ಏನೋ ಒಂದು ಆಗಿ. ಇವು ನಿಮಗೆ ಕೇವಲ ಸಮಾಧಾನ ಎಂದು ಗೊತ್ತಿರುತ್ತದೆ. ಗೊತ್ತಿರಬೇಕು. ಸಾಕುನಾಯಿಗೆ ಮಾತು ಬರಲ್ಲ ಅಂತ ಗೊತ್ತಿದ್ದರೂ ಅವುಗಳೊಂದಿಗೆ ಮಾತಾಡೋಲ್ಲವೇ? ಇದೂ ಹಾಗೆ.

ಈ ತರಹ ಬದುಕನ್ನು ಬಿಡಿಸಿಕೊಂಡಾಗ- ಬದುಕುವುದು ಸಹ್ಯವಾಗುತ್ತದೆ. ನೀವೇ ನಿಮಗಿಷ್ಟವಾದ ಒಂದು ಅರ್ಥ ಕಲ್ಪಿಸಿಕೊಂಡು ಜೀವಿಸುತ್ತೀರಿ. ಅದರಲ್ಲಿ ಯಶಸ್ವಿಯಾದರೂ ಆಗದಿದ್ದರೂ, ಯಾರು ಸತ್ತರೂ ಉಳಿದರೂ, ಯಾರು ಬಿಟ್ಟು ಹೋದರೂ ಇಲ್ಲದಿದ್ದರೂ- ನಿಮ್ಮ ಮೂಲ ಮನಸ್ಥಿತಿಯಲ್ಲಿ ವ್ಯತ್ಯಾಸವಾಗುವುದಿಲ್ಲ. ಅದನ್ನೇ ನಿರ್ಲಿಪ್ತ, ಸ್ಥಿತಪ್ರಜ್ಞತೆ ಅನ್ನುವುದು. ಒಂದು ರೀತಿ ಭಕ್ಷ್ಯ ಭೋಜನ ಸಿಕ್ಕಾದ ಅದನ್ನೇ ಸವಿಯುತ್ತೀರಿ. ಅನ್ನ ಸಾರು ಸಿಕ್ಕಾದ ಅದಕ್ಕೂ ತೃಪ್ತರಾಗುತ್ತೀರಿ. ಏನೂ ಸಿಗದಿದ್ದಾಗ ಒಂದು ಲೋಟ ನೀರು ಕುಡಿದು ಮಲಗುತ್ತೀರಿ.

ಈ ಐಟಿ ಉದ್ಯೋಗಿ ಎಷ್ಟೊಂದು ಓದಿದ್ದಾನೆ. ಅದರ ಬಗ್ಗೆಯೂ ಒಂದು ಎಚ್ಚರಿಕೆಯ ಮಾತು. ಓದು ಜ್ಞಾನದ ಸುಳಿಯಿದ್ದಂಗೆ. ಹೆಚ್ಚೆಚ್ಚು ತಿಳಕೊಳ್ತಾ ಹೋದಂಗೆ ಸುಳಿಯಲ್ಲಿ ಸಿಗಾಕ್ಕೊಂಡು ಬಿಡ್ತೀರ. ಆದ್ದರಿಂದ ಒಂದು ಹಂತದ ನಂತರ ಜ್ಞಾನದ ಹಾದಿಯಲ್ಲಿ ನೀವೇ ಕಮ್ಯಾಂಡರ್ ಆಗಬೇಕು. ಬರೆದವರು ಎಳಕೊಂಡು ಹೋದ ದಿಕ್ಕಿಗೆಲ್ಲಾ ಹೋಗಬಾರದು. ಆಗಷ್ಟೇ ಓದು ಸಾರ್ಥಕ ಅನಿಸುವುದು.

ಇನ್ನು ಈತನಿಗೆ ಯಾರಾದರೂ ಮಾನಸಿಕವಾಗಿ ಸಪೋರ್ಟ್ ಮಾಡಬಹುದಿತ್ತು ಅದು ಇದು ಅಂತೆಲ್ಲಾ ನೂರಾರು ಸಲಹೆಗಳು ಬರುತ್ತಿವೆ. ಇರಬಹುದು. ಆದರೆ ಎಲ್ಲರ ಬದುಕಲ್ಲಿಯೂ ಈ ಲಕ್ಷುರಿ ಇರಲಾರದು. ಅಥವಾ ಯಾರ ಸಹಾಯವನ್ನೂ ಸ್ವೀಕರಿಸಲಾಗದ ದುರ್ಬಲ ಸ್ಥಿತಿ ಅವನದಾಗಿರಬಹುದು. ಜಗತ್ತು ಹೆಚ್ಚೆಚ್ಚು ವ್ಯಕ್ತಿ ಕೇಂದ್ರಿತವಾಗುತ್ತಿದೆ. ಸಮುದಾಯಿಕ ಜೀವನ ನಶಿಸುತ್ತಿದೆ. ಮತ್ತು ಜಗತ್ತು ಯಾವತ್ತೂ ಹಿಂದೆ ಚಲಿಸಿದ್ದೇ ಇಲ್ಲ. ನಾವು ಹೆಚ್ಚೆಚ್ಚು ಒಳ್ಳೆ ಮಾತುಗಳನ್ನು ಆಡುತ್ತಿದ್ದೀವೇ ಹೊರತು ಒಳ್ಳೆಯವರಾಗಲು ಆಗ್ತಿಲ್ಲ. ಇನ್ನೊಬ್ಬರಿಗೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ನಮಗೆ ನಾವೇ ಹಣೆ ಚಚ್ಚಿಕೊಂಡು ದಂಡಿಸಿಕೊಳ್ಳುವುದೂ ವ್ಯರ್ಥವೇ.

ಇದಕ್ಕೆ ಇನ್ನೊಂದು ನಿರುಪದ್ರವಿ ಪರಿಹಾರವಿದೆ. ಎಲ್ಲವನ್ನೂ ಹಗುರವಾಗಿ ತಗೊಳ್ಳುವುದು. ಉಡಾಫೆಯಿಂದ ನೋಡುವುದು. ಯಾರಿಗೂ ಉಪದ್ರವ ಕೊಡದೇ ಅವತ್ತಿಂದವತ್ತು ನೋಡ್ಕೊಂಡು ಹೋಗುವುದು.

ಈತ ಎಲ್ಲವನ್ನೂ ಕಳ್ಕೊಂಡಾಗ ಇದ್ದಲ್ಲೇ ಕೊರಗುತ್ತ ಕುಡಿಯುತ್ತ ಸ್ವ ನಾಶ ಮಾಡಿಕೊಳ್ಳುವ ಬದಲು ಜಗತ್ತನ್ನು ಹೊಸ ಕಣ್ಣಿನಿಂದ ಬೆರಗಿನಿಂದ ನೋಡುತ್ತ ಹಿಪ್ಪಿಯಾಗಿ(ಜಂಗಮ) ಹೊರಟಿದ್ದರೆ ಎಷ್ಟು ಚನ್ನಾಗಿರ್ತಿತ್ತು? ಇದೇ ಅಜ್ಞಾತತೆ ಸಿಗುತ್ತಿತ್ತು. ಹೀಗೇ ಮನೆಯಿಂದ ಮನೆಗೆ ಊಟ ಕೇಳಿಕೊಂಡು ಬಸ್ಸಿಂದ ಬಸ್ಸಿಗೆ ಡ್ರಾಪ್ ತಗೊಂಡು ರಾಜ್ಯ ದೇಶ ಖಂಡಾಂತರ ಸುತ್ತಬಹುದಿತ್ತು. ದಾರಿಯಲ್ಲಿ ಸಿಕ್ಕವರ ಕತೆ ಕೇಳುತ್ತ ತಾನು ಕಂಡ ಕತೆಯನ್ನು ಎಲ್ಲರಿಗೂ ಹೇಳುತ್ತಾ.. ಇರುವಷ್ಟು ದಿವಸ ಅರ್ಥವಿಲ್ಲದ ಬದುಕನ್ನು ಅರ್ಥಪೂರ್ಣವಾಗಿ ದೂಡಬಹುದಿತ್ತು.

ತಾನು ಆ ಟೈಪ್ ಅಲ್ಲ ಅದೆಲ್ಲಾ ನಂಗೆ ಒಗ್ಗಲ್ಲ ಎಂದಿದ್ದಲ್ಲಿ ಹೊಸ ಹುಡುಗಿ ಹೊಸ ಪ್ರೇಮ, ಮದುವೆ, ಮಕ್ಕಳು, ಅವರ ಶಿಕ್ಷಣ.. ಬದುಕು ತಾನಾಗೇ ಬಗ್ಗಿಸುತ್ತಿತ್ತು.