ಎಐ- ಮುಂದಿನ ಹಂತ

Blog post description.

Madhu Y N

7/22/20251 min read

ಒಂದು ತಂಪಿನ ಸಂಜೆ ಮಗು ಊಟ ಮಾಡಲು ರಂಪಾಟ ಮಾಡುವ ಹೊತ್ತು. ಅಮ್ಮ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ಅಂಗಳಕ್ಕೆ ಬರುತ್ತಾರೆ. ಆಗಸದಲ್ಲಿನ ಬೆಣ್ಣೆಯ ಉಂಡೆಯನ್ನು ತೋರಿಸುತ್ತಾ ‘ಬಾ ಬಾ ಚಂದ್ರಮ್ಮಾ’ ಎನ್ನುತ್ತ ಉಪ್ಪು, ತುಪ್ಪ ಮಿದ್ದಿದ ಅನ್ನ ಅಥವಾ ಮುದ್ದೆಯ ಪಿಡಿಸೆಯನ್ನು ಮೂತಿಗೆ ಹಿಡಿಯುತ್ತಾರೆ. ಮಗು ಬಾಯಿ ತೆರೆಯುತ್ತದೆ.

ಇಂದು ಅಂತರಾಷ್ಟ್ರೀಯ ಚಂದಿರನ ದಿನ.

ಸೂರ್ಯ ಸಿಕ್ಕಾಪಟ್ಟೆ ಶಕ್ತಿವಂತ. ಅವನಿಂದಲೇ ಜೀವಸೃಷ್ಟಿಯಾಗಿರುವುದು. ಅವನಿಂದಲೇ ಫೊಟೋಸಿಂಥೆಸಿಸ್ಸಾಗುವುದು. ಅವನಿಲ್ಲದಿದ್ದರೆ ನಾವಿಲ್ಲ. ಯಾರನ್ನೂ ಸಮೀಪ ಬಿಟ್ಟುಕೊಳ್ಳದಷ್ಟು ಪ್ರಖರನಾತ. ಸದಾ ಉರ ಉರ ಅನ್ನುವ ಮನೆಯ ಹಿರಿಯ. ಕಠೋರಿ, ಏಕಾಂಗಿ.

ಆದ್ದರಿಂದ ನಾವು ಅವನಿಗೆ ದೇವರ ಸ್ಥಾನ ಕೊಟ್ಟು ದೂರದಿಂದಲೇ ಒಂದು ನಮಸ್ಕಾರ ಎಸೆದುಬಿಡುತ್ತೇವೆ. ನಾವೇ ಅವನ ಸುತ್ತ ಪ್ರದಕ್ಷಿಣೆ ಹಾಕಿಬಿಡುತ್ತೇವೆ.

ಚಂದ್ರ ಸಂಪೂರ್ಣ ತಧ್ವಿರುದ್ಧ. ಒಂಥರಾ ಭೂಮಿಯ ಲವರ್. ಹುಡುಗ ಹುಡುಗಿಯ ಹಿಂದೆ ಬಿದ್ದಂಗೆ ಚಂದಿರ ಭೂಮಿಯ ಹಿಂದೆ ಬಿದ್ದಿದ್ದಾನೆ. ಆಕೆ ಸುತ್ತ ಸುತ್ತುತ್ತಿರುತ್ತಾನೆ. ಅವಳ ಉಬ್ಬರ ಏರಿಳಿತಕ್ಕೆ ಕಾರಣನಾಗುತ್ತಾನೆ. ಹ್ಞಾ.. ಚಂದ್ರನಿದ್ದ ಕಡೆ ಸಮುದ್ರ ಹಿಗ್ಗುತ್ತದೆ. ಚಂದ್ರನ ಗುರುತ್ವ ಬಲದಿಂದ. ಭೂಮಿ ಚಂದ್ರನ್ನ ನೋಡ್ದಾಗೆಲ್ಲಾ ಕೊಡ ತುಳುಕಿದ ಹಾಗೆ ತುಳುಕ್ತಾಳೆ.

ಭೂಮಿ ಸೂರ್ಯನಿಂದ ಮುನಿಸಿಕೊಂಡ ಹಾಗೆ ಒಂದು ಆಂಗಲ್ ನಲ್ಲಿ ಹೊರಮುಖವಾಗಿ ಬಾಗಿದ್ದಾಳೆ. ಆದ್ದರಿಂದಲೇ ಅವಳೊಳಗೆ ಬೇಸಿಗೆ, ಮಳೆ, ಛಳಿಗಳೆಂಬ ಋತುಮಾನಗಳು ಹುಟ್ಟುವುದು. ಭಾರೀ ಎಮೋಶನ್ ಇದಾಳೆ ಆಕೆ. ಒಂದೊಮ್ಮೆ ಚಂದ್ರ ಇಲ್ಲಾ ಅಂದರೆ ಈ ಬಾಗುವಿಕೆಯಲ್ಲೇ ಏರುಪೇರಾಗಿ ಅವಳಲ್ಲಿನ ಈ ಋತುಮಾನಗಳಲ್ಲಿ ಏರುಪೇರಾಗಬಹುದು. ಆದ್ದರಿಂದಾ.. ಅವಳನ್ನು ಮಾನಸಿಕವಾಗಿ ಸಮತೋಲನದಲ್ಲಿಡಲು ಚಂದಿರ ಬಹಳ ಮುಖ್ಯ.

ಭೂಮಿ ಚಂಚಲೆಯೂ ಹೌದು. ಆಕೆ ಹುಟ್ಟಿದಾಗ ಪ್ರತಿ ಐದು ಗಂಟೆಗೊಮ್ಮೆ ತಿರುಗ್ತಿದ್ದಳಂತೆ. ಈಗ ಇಪ್ಪನಾಲ್ಕು ಗಂಟೆ ತಗೊಳ್ತಾಳೆ. ಥ್ಯಾಂಕ್ಸ್ ಟು ಚಂದಿರ. ಭೂಮಿ ದೊಡ್ಡವಳಾದ ಹಾಗೆ ಚಂದಿರನ ಸಂಗದಿಂದ ಪ್ರಬುದ್ಧಳಾಗಿದ್ದಾಳೆ. ನಿಧಾನ ಆಗಿದಾಳೆ.

ಚಂದ್ರನಿಗೆ ತನ್ನದೇ ಆದ ಬೆಳಕು ಸೂಸುವ ಶಕ್ತಿಯಿಲ್ಲ. ಹಾಗಂತ ಈತ ಸುಮ್ಮನೆ ಕೂರಲ್ಲ. ನೆಕ್ಕೊಂಡ್ ನೆಕ್ಕೊಂಡ್ ಹೋಗಿ ಭೂಮಿಯ ಸುತ್ತ ಪ್ರದಕ್ಷಿಣೆ ಹಾಕ್ತಾ ಆಕೆ ಸೂರ್ಯನಿಗೆ ವಿಮುಖವಾಗಿರುವ ಕಡೆ ಬರುತ್ತಾನೆ. ಅಲ್ಲಿ ಆಗ ರಾತ್ರಿ. ಭೂಮಿ ತಾನಿರುವಲ್ಲೇ ಇಪ್ಪನಾಲ್ಕು ಗಂಟೆಗೊಮ್ಮೆ ತಿರುಗುವುದರಿಂದ ಸೂರ್ಯನ ಕಡೆಗಿನ ಭಾಗದಲ್ಲಿ ಹಗಲು, ವಿರುದ್ಧ ಭಾಗದಲ್ಲಿ ರಾತ್ರಿಯಾಗಿರುತ್ತದೆ. ಇಂತಹ ರಾತ್ರಿಯ ಭಾಗದೆಡೆ ಚಂದಿರ ಬಂದಾಗ.. ಸೂರ್ಯನ ಬೆಳಕು ಚಂದಿರನ ಮೇಲೆ ಬಿದ್ದು ಚಂದಿರ ಹೊಳೆಯುತ್ತಾನೆ. ಪ್ರತಿಫಲಿಸುತ್ತಾನೆ. ಇರುಳನ್ನು ಬೆಳಗುತ್ತಾನೆ.

ಅದೇ ಹುಣ್ಣಿಮೆ.
ಆದ್ದರಿಂದಲೇ ಹುಣ್ಣಿಮೆಯೆಂದರೆ ಎಲ್ಲರಿಗೂ ಖುಷಿ.

ಅಲ್ಲೇ ಇರ್ತಾನಾ.. ಇಲ್ಲಾ. ಭೂಮಿಗೆ ಒಂದೊಂದ್ಸಲ ಸೂರ್ಯನ ಮೇಲೆ ಆಕರ್ಷಣೆ ಆಗುತ್ತೆ. ಚಂದ್ರನಿಗೆ ಸಿಟ್ಟು ಬರುತ್ತೆ. ಇಬ್ಬರ ನಡುವೆ ಅಡ್ಡ ಬರ್ತಾನೆ. ‘ಹೇ ಇವಳು ನನ್ನವಳು. ನೀನು ಅವಳನ್ನ ನೋಡಂಗಿಲ್ಲಪ್ಪ’ ಅಂತ ಕೈ ಅಗಲಿಸಿ ಮರೆ ಮಾಡಿ ನಿಂತ್ಕೊಳ್ತಾನೆ. ಆಗ ಸೂರ್ಯನ ಕಡೆ ಮುಖ ಮಾಡಿದ್ದ ಭೂಮಿಯ ಭಾಗದಲ್ಲಿ ಹಗಲು. ಸೂರ್ಯನಿಗೆ ಹೋಲಿಸಿದರೆ ಚಂದ್ರ ಇರುವುದು ಗೋಲಿ ಗಾತ್ರ. ಆದ್ದರಿಂದ ಭೂಮಿಯ ಹಗಲಿಗೇನು ಧಕ್ಕೆಯಾಗಲ್ಲ. ಅಂದರೆ ಆ ಹಗಲುಗಳು ಚಿಂದಿರ ನಮ್ಮೆದುರೇ ಆಕಾಶದಲ್ಲಿರ್ತಾನೆ. ಆದರೆ ಕಾಣ್ಸಲ್ಲ. ಸೂರ್ಯನ ಪ್ರಖರತೆ ಎದುರು ಸೋತಿರ್ತಾನೆ. ಹೊಟ್ಟೆಕಿಚ್ಚಿನಿಂದ ಮಂಕಾಗಿರುತ್ತಾನೆ.
ಆ ದಿನಗಳಲ್ಲಿ ಸೂರ್ಯನಿಗೆ ವಿರುದ್ಧವಿರುವ ಭೂಭಾಗದಲ್ಲಿ ಇರುಳಾಗಿರುತ್ತಲ್ಲ… ಚಂದ್ರ ಅಲ್ಲೆಲ್ಲೋ ಸೂರ್ಯಂಗೆ ಹೋಗಿ ಅಡ್ಡ ನಿಂತಿರೋದ್ರಿಂದ ಈ ಭಾಗದ ಆಕಾಶದಲ್ಲಿ ಚಂದ್ರನೇ ಇರಲ್ಲ.

ಅದೇ ಅಮವಾಸ್ಯೆ.
ಆದ್ದರಿಂದಲೇ ಅಮವಾಸ್ಯೆಯೆಂದರೆ ಎಲ್ಲರಿಗೂ ಬೇಸರ.

ಹುಣ್ಣಿಮೆ ಸರಸದ ದಿನವಾದರೆ ಅಮವಾಸ್ಯೆ ವಿರಸದ ದಿನ.

ನಮ್ಮ ಪೂರ್ವಿಕರೂ ಬಹಳ ಭಿನ್ನ ಇದ್ದರಲ್ವಾ. ಕೆಲವರು ಸೂರ್ಯನ್ನ ನೋಡಿಕೊಂಡು ಕ್ಯಾಲೆಂಡರ್ ಸೆಟ್ ಮಾಡಿಕೊಂಡರು. ಭೂಮಿ ಒಂದು ಸುತ್ತು ಸೂರ್ಯನ್ನ ಪ್ರದಕ್ಷಿಣೆ ಹಾಕಿದರೆ ಅದೇ ಒಂದು ವರ್ಷ ಅಂದರು. ಈ ವರ್ಷವನ್ನ ಕಲ್ಲಂಗಡಿ ಹಣ್ಣಿನಂತೆ ಹನ್ನೆರಡು ಸೀಳುಗಳನ್ನಾಗಿಸಿ ಜನವರಿಯಿಂದ ಡಿಸೆಂಬರಿನ ತನಕ ಹೆಸರು ಕೊಟ್ಟರು. ಇದನ್ನೇ ಗ್ರೆಗೋರಿಯನ್ ಕ್ಯಾಲೆಂಡರ್ ಅಂತಾರೆ. ಹೀಗೆ ಮಾಡಿದ್ದು ಪಶ್ಚಿಮದ ಹಿರಿಯರು.

ಇನ್ನು ಕೆಲವರು ಚಂದ್ರನ್ನ ನೋಡಿಕೊಂಡು ತಿಂಗಳುಗಳನ್ನು ಸೆಟ್ ಮಾಡಿಕೊಂಡರು. ಅದರ ಮೇಲೆ ಒಂದು ವರ್ಷ ಅಂದರೆ ಇಷ್ಟು ಅಂತ ಲೆಕ್ಕ ಹಾಕಿದರು. ಆದ್ದರಿಂದ ಇವರ ಕ್ಯಾಲೆಂಡರಿನಲ್ಲಿ ತಿಂಗಳು ಪಕ್ಕಾ ಇದಾವೆ. ಹುಣ್ಣಿಮೆ ಅಮವಾಸ್ಯೆ ಪಕ್ಕಾ ಅವತ್ತೇ ಬರ್ತಾವೆ. ಇವರ ಲೆಕ್ಕದಲ್ಲಿ ಒಂದು ವರ್ಷ ಅಂತಂದರೆ 354 ದಿನ. ಇದನ್ನು ಅನುಸರಿಸಿದ್ದು ಪೂರ್ವದ ಹಿರಿಯರು.

ಹಿಂಗಾಗಿ ಸನ್ ಮತ್ತು ಮೂನ್ ಕ್ಯಾಲೆಂಡರ್ ಎಂಬ ಎರಡು ಪದ್ಧತಿ ಹುಟ್ಟಿಕೊಂಡವು.

ಬಹಳ ಆಶ್ಚರ್ಯವೆಂಬಂತೆ ಭಾರತೀಯರು ಇಬ್ಬರಿಗೂ ಭಿನ್ನರಾಗಿ ನಿಂತರು. ಎರಡನ್ನೂ ಮಿಶ್ರಣ ಮಾಡಿದರು. ಚಂದ್ರನ ಆಧಾರಿತ ಕ್ಯಾಲೆಂಡರ್ ಬಳಸ್ತಾ ಮೂರು ವರ್ಷಕ್ಕೊಮ್ಮೆ ಒಂದು ತಿಂಗಳು ಎಕ್ಷ್ಟ್ರಾ ಸೇರಿಸಿದರು. ಅದನ್ನೇ ಅಧಿಕ ಮಾಸ ಎಂದು ಕರೆದರು. ಆದ್ದರಿಂದಲೇ ನಮ್ಮಲ್ಲಿ ಚೈತ್ರ ವೈಶಾಖಗಳೆಂಬ ಜನವರಿ ಫೆಬ್ರವರಿಗಿಂತ ತುಸು ಭಿನ್ನವಾಗಿ ನಿಲ್ಲುವ ತಿಂಗಳುಗಳು ಇರುವುದು.

ಕವಿ ಕುವೆಂಪು ಬಾ ಚಕೋರಿ ಚಂದ್ರಮಂಚಕೆ ಎಂದು ಕರೆದರು. ಬಾಗು ಚಂದ್ರನ ತೂಗು ಮಂಚಕೆ ಎಂದರು. ಅರ್ಥಾತ್ ನಮಗೆ ಪೂರ್ಣ ಚಂದಿರ ಪೂರ್ಣತ್ವದ ಪ್ರಸನ್ನತೆಯನ್ನು ತುಂಬಿದರೆ ಅರ್ಧ ಚಂದ್ರ ಚೂರು ಚಂದ್ರನೂ ಸಹ ಬಗೆಬಗೆಯ ಭಾವಾವೇಶ ಹುಟ್ಟಿಸುತ್ತಾನೆ. ತುಂಡು ಚಂದಿರ ಅಪೂರ್ಣತೆಯ ಪ್ರತಿಬಿಂಬವಾಗಿದ್ದಾನೆ. ಆದ್ದರಿಂದಲೇ ನಮ್ಮಲ್ಲಿ ಅಗಲಿಕೆಯನ್ನು ‘ಅರ್ಧ ಚಂದಿರ’ ಎಂದು ಕರೆಯುತ್ತಾರೆ. ಚಡಪಡಿಕೆಯ ತೊಳಲಾಟದ ಸ್ಥಿತಿ ಅದು.

ಆದರೆ ದಿನಕರ ದೇಸಾಯಿಯವರು ವಾಸ್ತವಕ್ಕೆ ಇಳಿಯುತ್ತಾರೆ. ‘ಚಿಕ್ಕಮಕ್ಕಳಿಗೆ ಶಶಿ ಬಾಂದಳದ ಚಂಡು, ವಿಜ್ಞಾನಿಗಳಿಗೆ ಬರೀ ಕಲ್ಲುಗುಂಡು’ ಎಂದು ನಿರ್ಲಿಪ್ತವಾದ ಸತ್ಯವನ್ನು ಹೇಳ್ತಾರೆ. ಅದು ಹೌದು.

ನೀವು ನಿಜ ನಿಜ ಚಂದಿರ ಮೇಲೆ ಹೋದರೆ ಅಲ್ಲಿ ಸಿಗುವುದು ಬರೀ ಒಣ ಕಲ್ಲು, ಧೂಳು, ಗುಂಡಿ ಗುದ್ದರ. ಒಂದು ತೊಟ್ಟು ನೀರು ಸಹ ಇಲ್ಲ. ಅಲ್ಲೆಲ್ಲೋ ಅದರ ದಕ್ಷಿಣ ಧೃವದಲ್ಲಿ ನೆಲ ಸ್ವಲ್ಪ ತೇವ ಇದೆ ಎಂಬುದಕ್ಕೇ ವಿಜ್ಞಾನಿಗಳು ಎಗ್ಸೈಟ್ ಆಗ್ತಾರೆ. ಬೇರೇನಿಲ್ಲ. ಅಲ್ಲಿ ಹಸಿರು ಇಲ್ಲ, ಗಾಳಿ ಇಲ್ಲ. ಚಿನ್ನ ಬೆಳ್ಳಿ ಇಲ್ಲ. ಹುಟ್ಟು ಗರೀಬ ಇದಾನೆ ಚಂದಿರ.

ಆದರೆ ತನ್ನ ಈ ಗರೀಬತನದಲ್ಲಿಯೇ ಭೂಮಿಯನ್ನು ಭೂಮಿ ಮೇಲಿನ ಸಕಲ ಜೀವವನ್ನು ಸಲಹುತ್ತಾನೆ. ಇಲ್ಲಿನ ಅನೇಕ ಜೀವಜಂತುಗಳು ಸೃಷ್ಟಿಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಚಂದಿರನನ್ನು ನೋಡಿಕೊಂಡೇ. ಮಾನವನ ಮಾನಸಿಕ ಆರೋಗ್ಯವೂ ಚಂದಿರನನ್ನೇ ಅವಲಂಬಿಸಿದೆ. ಚಂದಿರ ಇಲ್ಲದೇ ಹೋದರೆ.. ಭೂಮಿ ಅಲ್ಲೋಲಕಲ್ಲೋಲವಾಗುತ್ತದೆ. ಇಲ್ಲಿನ ಜೀವಸಂಕುಲ ಒಮ್ಮೆಲೇ ಧ್ವಂಸಗೊಳ್ಳದಿರಬಹುದು, ಆದರೆ ಕ್ರಮೇಣ ನಾಶಗೊಳ್ಳುತ್ತದೆ.