ಮುಂದಿನ ಜಮಾನಾದ ಫೋನುಗಳು
Blog post description.
4/16/20251 min read


ಸುಮಾರು ಇಪ್ಪತ್ತು ವರುಷಗಳ ಹಿಂದೆ ಇದ್ದ ನೋಕಿಯಾ ಫೋನುಗಳನ್ನು 2g ಫೋನು ಅನ್ನುತ್ತಿದ್ದೆವು. ಈಗ ನಮ್ಮ ಕೈಲಿರುವ ಫೋನುಗಳನ್ನು 5g ಫೋನು ಅನ್ನುತ್ತೇವೆ. ಇದೀಗ ಮಾರುಕಟ್ಟೆಯಲ್ಲಿ ಹೊಸತು ಬಂದಿದೆ- ಎಐ ಫೋನುಗಳು ಎಂದು. ಇವು ಎಷ್ಟು ಮಾತ್ರ ಎಐ ಫೋನುಗಳು? ಸ್ವಲ್ಪ ತಿಳಿಯೋಣ.
ನಮ್ಮ ಫೋನುಗಳಲ್ಲಿರುವ ಚಾಟ್‌ಜಿಪಿಟಿ, ಮೆಟಾ ಆಪ್‌ಗಳು ಕೇವಲ ಪ್ರಶ್ನೆ ಸ್ವೀಕರಿಸಲು ಮತ್ತು ಉತ್ತರ ತೋರಿಸಲು ಇರುವ ಆಪ್‌ಗಳು. ಪ್ರಶ್ನೆಗೆ ಉತ್ತರ ಹುಡುಕುವ ಪ್ರಕ್ರಿಯೆ ಕ್ಲೌಡ್‌ನಲ್ಲಿ ಜರುಗುತ್ತದೆ.ಅಂದರೆ ಇಂಟರ್ನೆಟ್ ಇಲ್ಲದಿದ್ದರೆ ಇವು ನಿರರ್ಥಕ.
ನಮ್ಮ ಫೋನುಗಳಲ್ಲಿ ಎಐ ಕ್ಯಾಮೆರಾಗಳು ಇರುವವು. ಈ ಕ್ಯಾಮೆರಾಗಳಲ್ಲಿನ ಕೆಲವು ಎಐ ಗುಣಗಳು ಸ್ಥಳೀಯವಾಗಿ ಜರುಗುತ್ತವೆ. ಎದುರಿನ ದೃಶ್ಯವನ್ನು ಗುರುತು ಹಿಡಿಯವುದು, ದೃಶ್ಯದಲ್ಲಿನ ಹಿನ್ನೆಲೆಯ ಗದ್ದಲ ತೆಗೆಯುವುದು ಮುಂತಾಗಿ. ಕೆಲವು ವಿಶೇಷಣಗಳು ಕ್ಲೌಡಿನಲ್ಲಿ ಜರುಗುತ್ತವೆ. ಕಟ್ಟಡಕ್ಕೆ ಕ್ಯಾಮೆರಾ ಹಿಡಿದಾಗ ಇದು ದೇವಸ್ಥಾನವೋ ಚರ್ಚೋ ಎಂದು ತಿಳಿಸಲು, ಧ್ವನಿ ಕೇಳಿಸಿಕೊಂಡು ಭಾಷಾಂತರಿಸಲು ಮುಂತಾಗಿ. ಒಟ್ಟಾರೆ ಇವೆಲ್ಲವೂ ಇನ್ನೂ ಸಾಫ್ಟವೇರ್ ಮಟ್ಟದ ಎಐ ಫೋನುಗಳು.
ನಿಜನಿಜವಾದ ಎಐ ಫೋನುಗಳು ಬರಲು ಇನ್ನು ಕೆಲವು ವರ್ಷಗಳು ಹಿಡಿಯುತ್ತವೆ. ಅವುಗಳಲ್ಲಿ ನೂರಕ್ಕೆ ತೊಂಭತ್ತು ಭಾಗ ಕೆಲಸಗಳು ಸ್ಥಳೀಯವಾಗಿ ಜರುಗಲಿವೆ. ಅದಕ್ಕಾಗಿ ವಿಶೇಷ ಪ್ರೊಸೆಸರ್‌ಗಳ ಅವಶ್ಯಕತೆ ಇದೆ. ಅದನ್ನು ಸಿಪಿಯು ಬದಲಾಗಿ ಎನ್‌ಪಿಯು(ನ್ಯೂರಲ್ ಪ್ರೊಸೆಸಿಂಗ್ ಯುನಿಟ್) ಎಂದು ಕರೆಯುತ್ತಾರೆ. ಎನ್‌ಪಿಯುಗಳು ಮನುಷ್ಯನ ಮೆದುಳನ್ನು ಅನುಕರಿಸುವ, ಕಡಿಮೆ ವಿದ್ಯುತ್ ಬಳಸುವ, ಅತ್ಯಂತ ದಕ್ಷವಾಗಿ, ಪ್ಯಾರಲಲ್ಲಾಗಿ ಕಾರ್ಯನಿರ್ವಹಿಸುವ, ಎಐಗೆಂದೇ ತಯಾರಾದ ಸಿಪಿಯುಗಳು. ಇವು ಮುಂದೆ ಬರಲಿರುವ ಎಲ್ಲಾ ಫೋನುಗಳಲ್ಲಿ ಲ್ಯಾಪ್‌ಟಾಪ್‌ಗಳಲ್ಲಿ ರಾರಾಜಿಸಲಿವೆ. ಅಂತೆಯೇ ಈಗಿನ ಎಐ ಮಾಡೆಲ್ಗಳಿಗೆ LLMs(large language models) ಬೃಹತ್ ಕ್ಷಮತೆಯ ಸರ್ವರ್ಗಳು ಬೇಕು. ಮುಂದೆ ಇವುಗಳ ಪುಟ್ಟ ರೂಪದ SLM(small language models) ಗಳು ಬರಲಿದ್ದು ಆರಾಮಾಗಿ ಒಂದು ಪೋನಿನ ಮೇಲೆ ಕೂತು ನಿರ್ದಿಷ್ಟ ಕೆಲಸಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಲಿವೆ.
ಸರಿ, ಇವು ತರಲಿರುವ ಕ್ರಾಂತಿ ಏನು ಗೊತ್ತಾ?
ನಮ್ಮ ಫೋನುಗಳು 2gಯಿದ್ದಾಗ ಬೇಸಿಕ್ ಎಂದೆವು, 3gಗೆ ಬಂದಾಗ ಸ್ಮಾರ್ಟ್ ಎಂದೆವು. ಬೇಸಿಕ್‌ನಲ್ಲಿ ಕಾಲ್, ಎಸೆಮೆಸ್ ಹೆಚ್ಚೆಂದರೆ ಸ್ನೇಕ್ ಗೇಮ್. ಅದೇ ಸ್ಮಾರ್ಟ್‌ಫೋನಿಗೆ ಬಂದಾಗ ನೂರೆಂಟು ಬಗೆಯ ಆಪ್‌ಗಳು ಹುಟ್ಟಿಕೊಂಡವು. ಈಗ ನಮ್ಮ ಬದುಕಿನ ಪ್ರತಿಯೊಂದು ಅಗತ್ಯಕ್ಕೂ ಒಂದು ಆಪ್ ಇದೆ. ಸಿಲ್ಲಿ ಆಪ್‌ಗಳಿವೆ. ಕ್ಯಾಮೆರಾ ಮೂಲಕ ದೆವ್ವಗಳನ್ನು ಹುಡುಕುವ ಆಪ್ ಇದೆ. ಪ್ರಪಂಚದ ಎಲ್ಲೆಲ್ಲಿ ಗೊಬ್ಬರ ಉದುರಿಸಿ ಬಂದಿದ್ದೇನೆ ಎಂದು ಗುರುತು ಮಾಡಿ ಕೊಚ್ಚಿಕೊಳ್ಳುವ ಆಪ್ ಇದೆ. ಎದ್ದು ಕಿಟಕಿ ತೆರೆದು ನೋಡಲು ಸೋಂಬೇರಿಯಾಗಿದ್ದಲ್ಲಿ ಕುಂತಲ್ಲೇ ಕತ್ತಲೆಯಾಗಿದೆಯಾ ಎಂದು ಚೆಕ್ ಮಾಡುವ ಆಪ್ ಇದೆ. ಏನೂ ಮಾಡದೇ ಇರುವ ಆಪ್‌ಗಳು ಇದಾವೆ.
ಹೀಗಿದ್ದಾಗ ನಮ್ಮ ಫೋನುಗಳು ಸಿಪಿಯುಗಳಿಂದ ಎನ್‌ಪಿಯುಗಳಿಗೆ ತೇರ್ಗಡೆಯಾದರೆ ಎಷ್ಟೆಲ್ಲಾ ಕ್ರಾಂತಿ ಉಂಟಾಗಬಹುದು ಯೋಚಿಸಿ. ಈಗಿನ ಕ್ಯಾಲ್ಕುಲೇಟರ್, ವೆದರ್ ಆಪ್‌ಗಳಿಂದ ಹಿಡಿದು ಇಡೀ ಅಪರೇಟಿಂಗ್ ಸಿಸ್ಟಂ ತನಕ, ಪ್ರತಿಯೊಂದು ಆಪ್‌ಅನ್ನು ಮರುಬರೆಯಲಾಗುತ್ತದೆ. ಇದಕ್ಕೆ ಇನ್ನೂ ಲಕ್ಷ ಬಗೆಯ ಆಪ್‌ಗಳು ಸೇರಿಕೊಳ್ಳಲಿವೆ. ಈಗಿನ ಆಪ್‌ಗಳು ನಮ್ಮ ಅಗತ್ಯಗಳನ್ನು ಕೇವಲ ಆಟೋಮೇಟ್ ಮಾಡುತ್ತವೆ. ಅವಕ್ಕೆ ಅವುಗಳದೇ ಬುದ್ಧಿ ಅಂತಿಲ್ಲ. ಬರಲಿರುವ ಎಐ ಆಪ್‌ಗಳು ಸ್ವತಂತ್ರವಾಗಿ ಯೋಚಿಸಲಿವೆ. ನಿಮ್ಮನ್ನು ಗೈಡ್ ಮಾಡಲಿವೆ.
ಹೇಗೆ ಹಳೆಯ ನೋಕಿಯಾ ಸೆಟ್‌ಗಳನ್ನು ಬೇಸಿಕ್ ಅನ್ನುತ್ತೀವೋ ಹಾಗೆ ಮುಂದೆ ಇವತ್ತು ನಮ್ಮ ಕೈಲಿರುವ ಫೋನುಗಳನ್ನು ಬೇಸಿಕ್ ಅನ್ನಲಿದ್ದೇವೆ. ನಿಜವಾದ ಎಐ ಫೋನುಗಳ ಉಗ್ರಾವತಾರಕ್ಕೆ ಸಾಕ್ಷಿಯಾಗಿ ಹಿಂದಿದ್ದ ಸ್ಮಾರ್ಟ್‌ಫೋನುಗಳೇ ಪರವಾಗಿರಲಿಲ್ಲ ಎಂದೂ ಅನಿಸಬಹುದು. ಇದೆಲ್ಲವನ್ನು ಲ್ಯಾಪ್‌ಟಾಪ್‌ಗಳಿಗೂ ಅನ್ವಯಿಸಿಕೊಳ್ಳಿ. ಏನಾಗುತ್ತೆ ಅಂದರೆ ನಿಧನಿಧಾನವಾಗಿ ನೀವು ಹೊಸ ಫೋನುಗಳಿಗೆ ಒಗ್ಗಿಕೊಳ್ತೀರ. ಕ್ರಮೇಣ ಅದು ನಿಮ್ಮ ವೈಯುಕ್ತಿಕ ಪರ್ಸನಲ್ ಅಸಿಸ್ಟಂಟ್ ಆಗಿ ಬದಲಾಗುತ್ತದೆ. ನಮ್ಮ ಇಂದಿನ ಫೋನು ಈಗಲೂ ಒಂದು ಉಪಕರಣವಷ್ಟೇ. ನಾವೇ ಎತ್ತಿಕೊಂಡು ನಾವೇ ನಂಬರ್ ಒತ್ತಿ ಕಾಲ್ ಮಾಡಬೇಕು, ಮೆಸೇಜು ಟೈಪಿಸಬೇಕು. ಪರ್ಸನಲ್ ಅಸಿಸ್ಟೆಂಟುಗಳು ಪರ್ಮಿಶನ್ ಕೊಟ್ಟರೆ ಅವೇ ನಮ್ಮ ಹಲವು ಕೆಲಸಗಳನ್ನು ನಿರ್ವಹಿಸಲಿವೆ. ಸಣ್ಣ ಸರಳ ಉದಾಹರಣೆ: ದಿನಾ ಏಳು ಗಂಟೆಗೆ ಎಬ್ಬಿಸುವ ಅಲಾರಂ ಒಂದಿನ ನೀವು ತಡವಾಗಿ ಮಲಗಿದರೆ ಅವತ್ತು ʼಪಾಪ ಮಲ್ಕೊಳ್ಳಲಿʼ ಎಂದು ತಾನಾಗೆ ಸುಮ್ಮನಾಗಬಹುದು.
ಇದನ್ನು ಎಡ್ಜ್ ಕಂಪ್ಯೂಟಿಂಗ್ ಅನ್ನುತ್ತಾರೆ. ಈ ವಿಷಯದಲ್ಲಿಯೂ ಒಂದು ಕಾಲಚಕ್ರ ಉರುಳಿದ ಹಾಗಾಯಿತು. 2g ಕಾಲದಲ್ಲಿ ಫೋನಲ್ಲಿ ಏನೆಲ್ಲ ಸಾಧ್ಯವಿತ್ತೊ ಅದೆಲ್ಲವೂ ಸ್ಥಳೀಯವಾಗಿ ಜರುಗುತ್ತಿತ್ತು. 3g ಬಂದಾಗ ಕ್ಲೌಡ್ ಶುರುವಾಯಿತು. 5gಯಷ್ಟೊತ್ತಿಗೆ ಅದು ಉತ್ತುಂಗಕ್ಕೆ ಹೋಯಿತು. ಎಲ್ಲವೂ ಕ್ಲೌಡ್‌ನಲ್ಲಿಯೇ ಸಾಧ್ಯವಾಗತೊಡಗಿತು. ಸ್ಥಳೀಯ ಆಪ್‌ಗಳ ಅವಶ್ಯಕತೆಯೇ ಇರಲಿಲ್ಲ. ಬ್ರೌಸರಿನ ಮೂಲಕವೇ ನೆಟ್‌ಫ್ಲಿಕ್ಸ್, ವರ್ಡ್ ಸಾಧ್ಯವಾಯಿತು. ಈಗ ಮತ್ತೆ ಲೋಕಲ್ ಕಂಪ್ಯೂಟಿಂಗ್‌ನತ್ತ ತಿರುಗಿದ್ದೇವೆ. ನಮ್ಮ ಅನೇಕ ತ್ವರಿತ ಪ್ರತಿಕ್ರಿಯೆ ಬೇಕಿರುವಂತಹ ಕೆಲಸಗಳನ್ನು ಕ್ಲೌಡ್‌ಗೆ ವರ್ಗಾಯಿಸಿದಾಗ ಅದು ಒಂದಷ್ಟು ಇಂಟರ್ನೆಟ್ ಬೇಡುತ್ತದೆ. ನಮ್ಮ ಮನವಿ ಅಲ್ಲಿ ಹೋಗಿ ಪ್ರೊಸೆಸ್ ಆಗಿ ಮತ್ತೆ ಮರಳಲು ಒಂದಷ್ಟು ಸಮಯ ಬೇಡುತ್ತದೆ. ಎನ್‌ಪಿಯು ನಿಮ್ಮ ಫೋನಲ್ಲೇ ಬಂದು ಕೂರುವುದರಿಂದ ಈ ಕೊರತೆಗಳು ನೀಗಿ ನಿಜನಿಜವಾದ ಸೂಪರ್ ಇಂಟಲಿಜೆಂಟ್ ಪರ್ಸನಲ್ ಫೋನುಗಳು ಸಾಧ್ಯವಾಗಲಿದೆ. ಆಗ ನೀವು ಚಾಟ್‌ಜಿಪಿಟಿಯನ್ನು ಏನೇ ಕೇಳಿ, ಇಲ್ಲೇ ಯೋಚಿಸಿ ಇಲ್ಲೇ ಉತ್ತರಿಸುತ್ತದೆ.
ನಾವೇನು ಇಂದು ಕೆಲವನ್ನು ಬಹಳ ಕೌಶಲ್ಯಯುತ, ಬುದ್ಧಿವಂತರ ಕೆಲಸಗಳು ಅಂದುಕೊಳ್ಳುತ್ತಿದ್ದೀವೋ ಅದೆಲ್ಲವೂ ಕೇವಲ ಕಾಲೇಜಲ್ಲಿ ಪುಸ್ತಕ ಓದಿ ತರಬೇತಿ ಪಡೆದು ಕಂಪನಿಯಲ್ಲಿ ಮಾಡುವ ಕೂಲಿ ಕೆಲಸಗಳೇ ಆಗಿವೆ. ಸಾಫ್ಟವೇರ್ ಎಂಜಿನೀರು, ಲಾಯರು, ವೈದ್ಯ, ಟೀಚರು- ಎಲ್ಲರೂ ಮಾಡುತ್ತಿರುವುದು ಅದೇ. ಈ ಕೂಲಿ ಕೆಲಸಕ್ಕಾಗಿ ಸಂಬಳ ಪಡೆಯುತ್ತೇವೆ. ಒಂದು ಕಂಪ್ಯೂಟರು ಸಾವಿರ ಪಟ್ಟು ಜ್ಞಾನ ಪಡೆದು ಸಾವಿರ ಪಟ್ಟು ಕ್ಷಮತೆಯಿಂದ ಇದೇ ಕೂಲಿ ಕೆಲಸ ಮಾಡತೊಡಗಿದಾಗ- ನಮ್ಮ ಇವತ್ತಿನ ತರಬೇತಿ ಪ್ರೇರಿತ ಜ್ಞಾನದ ಮೌಲ್ಯ ಸೊನ್ನೆಯಾಗುತ್ತದೆ. ಇವತ್ತು ಪ್ಲಾಸ್ಟಿಕ್ ಬಿಂದಿಗೆ ತಯಾರಿಸುವ ಮಶೀನುಗಳು ಇರುವುದರಿಂದ ಕುಂಬಾರನ ಕೌಶಲ್ಯದ ಮೌಲ್ಯ ಸೊನ್ನೆ. ಹಾಗೆ ಮುಂದೆ ಎಐನಿಂದ ಸಾಫ್ಟವೇರ್ ಎಂಜಿನೀರಿನ ಕೌಶಲ್ಯದ ಮೌಲ್ಯ ಸೊನ್ನೆ.
ಹಾಗಂತ ಮನುಷ್ಯ ದಡ್ಡನಾಗುತ್ತಾನೆ ಸೋಂಬೇರಿಯಾಗುತ್ತಾನೆ ಅನ್ನುವುದು ಸುಳ್ಳು. ಮನುಷ್ಯದ್ದು ಸುಮ್ಮನೆ ಕೂರುವ ಜಾಯಮಾನವೇ ಅಲ್ಲವೇ ಅಲ್ಲ. ಎಲ್ಲಾದರೂ ಕೆರೆದು ಗಾಯ ಮಾಡಿಕೊಳ್ಳುವ ಗುಣ ಅವನ ರಕ್ತದಲ್ಲಿದೆ. ಅದು ಮುಂದುವರೆಯಲಿದೆ.