ಒಕ್ಕಾಮ್ ರೇಜರ್
Blog post description.
4/16/20251 min read


ಜಗತ್ತು ಬಹಳಾನೆ ಸಂಕೀರ್ಣವಾಗುತ್ತಿದೆ. ಸತ್ಯವೆಂಬುದು ಒಂದು ಅಭಿಪ್ರಾಯ ಮಾತ್ರವಾಗುತ್ತಿದೆ. ಜನ ಏನನ್ನು ನಂಬಬೇಕು ಏನನ್ನು ಬಿಡಬೇಕು ಎಂದು ಗೊಂದಲಕ್ಕೀಡಾಗುತ್ತಿದ್ದಾರೆ. ಹೀಗಾದಾಗ ಮನುಷ್ಯ ವರದಿಗಳಲ್ಲೇ ವಿಶ್ವಾಸ ಕಳೆದುಕೊಳ್ಳುತ್ತಾನೆ. ತೋಳ ಬಂತು ತೋಳ ಕತೆಯಾಗುತ್ತದೆ. ನೈಜ ಅಪಾಯ ಎದುರಾದಾಗಲೂ ‘ಇದರಲ್ಲಿಯೂ ಯಾರದೋ ಮಸಲತ್ತು, ಕೈವಾಡ ಇದ್ದಿರಬಹುದು’ ಎಂದು ಶಂಕಿಸಿ ನಿಷ್ಕ್ರಿಯನಾಗುತ್ತಾನೆ. ಇದು ಜನಸಾಮಾನ್ಯ ನಿತ್ಯ ಎದುರಿಸುವ ದ್ವಂದ್ವ. ವಿಜ್ಞಾನಿಗಳು ತಂತ್ರಜ್ಞಾನಿಗಳೂ ಇಂತಹ ದ್ವಂದ್ವಕ್ಕೆ ಬಿದ್ದರೆ ಏನಾಗುತ್ತದೆ? ದಿನನಿತ್ಯ ಕೆಲಸಗಳಲ್ಲಿ, ಸಮಸ್ಯೆಗಳಲ್ಲಿ, ಸಂಶೋಧನೆಗಳಲ್ಲಿ ಸಂದಿಗ್ಧತೆಗಳು, ವಿರುದ್ಧ ದಿಕ್ಕಿನ ‘ಸತ್ಯಗಳು’ ಎದುರಾದಾಗ ಅವರು ಏನು ಮಾಡುತ್ತಾರೆ? ‘ತಲೆಕಟ್ಟು’ ಲ್ಯಾಪ್ಟಾಪ್ ಮುಚ್ಚಿಟ್ಟು ಮನೆಗೆ ಹೋಗಿ ಬೆಚ್ಚಗೆ ಹೊದ್ದು ಮಲಗುತ್ತಾರೆಯೇ?
ವೈಜ್ಞಾನಿಕ ಲೋಕ ಇಂತಹ ಸಮಸ್ಯೆಗಳು ಎದುರಾಗುತ್ತವೆಂದೇ ಹಲವು ಶಿಸ್ತುಗಳನ್ನು ಪಾಲಿಸುತ್ತದೆ. ಅವುಗಳಲ್ಲಿ ಒಕ್ಕಾಮ್ ರೇಜರ್ ಎಂಬುದೂ ಒಂದು. ಕತೆಯಿಂದ ವಾಸ್ತವವನ್ನು, ಭ್ರಮೆಯಿಂದ ಸತ್ಯವನ್ನು, ಸಂಕೀರ್ಣತೆಯಿಂದ ಸರಳತೆಯನ್ನು ಬೇರ್ಪಡಿಸಲು ಈ ಆಲೋಚನಾ ಮಾರ್ಗವನ್ನು ಬಳಸಲಾಗುತ್ತದೆ. ಇದು ಹೇಳುವುದು ಇಷ್ಟೇ- ಯಾವುದೇ ವಿಷಯದ ಸಲುವಾಗಿ ಹುಟ್ಟಿಕೊಳ್ಳುವ ಹಲವಾರು ಅಂತೆಕಂತೆಗಳಲ್ಲಿ/ಸಿದ್ಧಾಂತಗಳಲ್ಲಿ(Hypotheses) ಯಾವುದರಲ್ಲಿ ಅತ್ಯಂತ ಕಡಿಮೆ ಎಣಿಕೆಗಳಿರುತ್ತವೋ(assumptions) ಅದನ್ನು ಆಯ್ದುಕೊಳ್ಳುವುದು ಸೂಕ್ತ. ಇತಿಹಾಸದುದ್ದಕ್ಕೂ ಈ ಕ್ರಮ ತತ್ವಜ್ಞಾನಿಗಳಿಗೆ, ವಿಜ್ಞಾನಿಗಳಿಗೆ ಎರಡರಲ್ಲಿ ಒಂದು ಆಯ್ಕೆ ಮಾಡುವಲ್ಲಿ ಬಹಳಾನೆ ಸಹಾಯ ಮಾಡಿದೆ.
ಇಂಗ್ಲೀಷ್ ತತ್ವಜ್ಞಾನಿ ವಿಲಿಯಮ್ ಓಕ್ಹಾಮ್ ಎಂಬುವವನಿಂದ ಇದಕ್ಕೆ ಈ ಹೆಸರು ಬಂದಿದೆ. ಅವನೇ ಕಂಡುಹಿಡಿದ ವಿಧಾನವೆಂದಲ್ಲ. ತಾತ್ವಿಕ ಜಿಜ್ಞಾಸೆಗಳಲ್ಲಿ ಸಂಕೀರ್ಣ ವಾದಗಳನ್ನು ತಿರಸ್ಕರಿಸಲು ಅವನು ಬಳಸಿದ ಮಾರ್ಗ ಇದು. ಹಿಂದೆ ಹಿಂದೆ ಹೋದರೆ ‘ಸರಳತೆಯೇ ಸತ್ಯ’ವೆಂದು ಬೋಧಿಸಿದ ಅರಿಸ್ಟಾಟಲ್ ನೆನಪಾಗುತ್ತದೆ. ನ್ಯೂಟನ್ ಸಹ ‘ಸರಳವಾಗಿದ್ದೆಲ್ಲವೂ ಉಪಯುಕ್ತ; ಸಂಕೀರ್ಣವೆಲ್ಲವೂ ಬಹುತೇಕ ವ್ಯರ್ಥ’ ಎಂಬಂತಹ ಮಾತು ಹೇಳಿದ್ದಾನೆ.
ವಿಜ್ಞಾನ ಮೂರು ಮುಖ್ಯ ತತ್ವಗಳನ್ನು ಪಾಲಿಸುತ್ತದೆ.
Falsifiability- ಈ ವಾದವನ್ನು ಪರೀಕ್ಷಿಸಿ ಸುಳ್ಳು ಎಂದು ಸಾಬೀತುಪಡಿಸಬಹುದೇ? ಇಲ್ಲವಾದಲ್ಲಿ ಅದು ವೈಜ್ಞಾನಿಕ ವಾದವಲ್ಲ. ಉದಾಹರಣೆಗೆ ನಮ್ಮನ್ನೆಲ್ಲ ದೇವರು ಸೃಷ್ಟಿಸಿದ ಎಂಬುದನ್ನು ಸುಳ್ಳು ಎಂದು ಪ್ರಯೋಗಾತ್ಮವಾಗಿ ಸಾಬೀತು ಪಡಿಸಲು ಸಾಧ್ಯವಿಲ್ಲ. ಆದರೆ ಬಿಗ್‌ಬ್ಯಾಂಗ್ ಸಧ್ಯಕ್ಕಿನ್ನೂ ಥಿಯರಿಯಾದರೂ ಮುಂದೊಂದಿನ ಅದು ಹೊಸ ಪ್ರಯೋಗಗಳ ಫಲಿತಾಂಶದಿಂದ ಸತ್ಯವೂ ಆಗಬಹುದು ಸುಳ್ಳೂ ಆಗಬಹುದು.
Repeatability-ಯಾವುದೇ ಒಂದು ವಾದವನ್ನು ಮತ್ತೆ ಮತ್ತೆ ಪ್ರಯೋಗಕ್ಕೆ ಒಳಪಡಿಸಿದಾಗ ನಮಗೆ ಅದೇ ಫಲಿತಾಂಶ ಬರುವಂತಿರಬೇಕು. ಉದಾಹರಣೆಗೆ ಇಪ್ಪತ್ನಾಲ್ಕು ಗಂಟೆಗೊಮ್ಮೆ ಹಗಲು ರಾತ್ರಿಗಳ ಚಕ್ರ ಉರುಳುತ್ತದೆ. ಎಷ್ಟು ಸಲ ಪರೀಕ್ಷಿಸಿದರೂ ಅದು ಆಚೀಚೆ ಆಗುವುದಿಲ್ಲ. ಅದೇ ಒಂದು ಗಿಳಿಗೆ ನಮ್ಮ ಭವಿಷ್ಯ ಹೇಳು ಎಂದಾಗ ಅದು ಪ್ರತಿ ಸಲ ಅದೇ ಕಾರ್ಡು ತೆಗೆಯುತ್ತದೆ ಎಂಬ ಗ್ಯಾರಂಟಿ ಇರುವುದಿಲ್ಲ. ಅದು ತೆಗೆಯುವ ಕಾರ್ಡಿನ ಮೇಲೆ ಅಜ್ಜ ನಮ್ಮ ಭವಿಷ್ಯವನ್ನು ಹೊಂದಿಸಿ ಹೇಳುತ್ತಾನೆ.
Parsimony-ಯಾವುದೇ ಸಂಗತಿ ಅನವಶ್ಯಕ, ವಿಪರೀತ ವಿವರಣಾ ಸಂಕೀರ್ಣತೆಯನ್ನು ಹೊಂದಿದೆಯೇ? ಇಲ್ಲೇ ಒಕ್ಕಾಮ್ ರೇಜರ್ ಮಾರ್ಗ ಅನ್ವಯಿಸುವುದು. ಉದಾಹರಣೆಗೆ ಅಮೆರಿಕಾ ಚಂದ್ರನ ಮೇಲೆ ಹೋಗಿತ್ತು ಎಂದು ನಂಬಲು ಸಾವಿರಾರು ವಿಜ್ಞಾನಿಗಳು ತಂತ್ರಜ್ಞಾನಿಗಳು ಹಲವಾರು ವರುಷಗಳು ಒಂದು ಸುಳ್ಳನ್ನು ಮುಚ್ಚಿಡಲಾರರು ಎಂಬ ಸರಳ ಸಂಗತಿಯನ್ನು ಒಪ್ಪಿದರಾಯಿತು. ಅದೇ ಹೋಗಿಲ್ಲ ಎಂದು ವಾದಿಸಲು ಹತ್ತಾರು ಪ್ರಶ್ನೆಗಳನ್ನೇ ಹಾಕಿಕೊಳ್ಳಬೇಕಾಗುತ್ತದೆ. ಬಾವುಟ ಯಾಕೆ ಹಾರುತ್ತಿತ್ತು? ಚಂದ್ರನಿಂದ ವಾಪಸ್ ಹೇಗೆ ಹಾರಿತು? ಚುಕ್ಕಿಗಳಿಲ್ಲ ಯಾಕೆ? ನೆರಳು ಬಿದ್ದಿತ್ತಲ್ಲ ಯಾಕೆ? ಎಂದೆಲ್ಲಾ.
ಆಯ್ತು, ಸರಳವೇ ಶ್ರೇಷ್ಠವೆನ್ನುತ್ತಾ ಅದನ್ನೇ ಸಂಕೀರ್ಣವಾಗಿ ಹೇಳಬಾರದಲ್ಲವೇ? ದೈನಂದಿನ ಅನುಭವದ ಮೂಲಕ ಅರ್ಥಮಾಡಿಕೊಳ್ಳೋಣ. ನಿಮ್ಮ ಸ್ನೇಹಿತ ಹೊಸತಾಗಿ ಹೋಟೆಲ್ ತೆಗೆದಿರುತ್ತಾನೆ. ನೀವು ಹೋಗಿ ರುಚಿರುಚಿಯಾದ ಪಾನಿಪೂರಿ ತಿಂದು ಬೋಣಿ ಮಾಡಿ ಬಂದಿರುತ್ತೀರಿ. ಮಲಗುವಾಗ ಇದ್ದಕ್ಕಿದ್ದಂತೆ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ನೀವು ಹೋಟೆಲ್ ತೆರೆಯಲು ಸ್ನೇಹಿತನಿಗೆ ಇಪ್ಪತ್ತು ಲಕ್ಷ ಸಾಲ ಕೊಟ್ಟಿರುತ್ತೀರಿ. ಅವನು ಬೇರೆಲ್ಲ ಗಿರಾಕಿಗಳಿಗೆ ಕೊಡುವ ಪಾನಿಪೂರಿ ಕೊಡದೆ ನಿಮಗೆಂದೇ ಒಳಗಿಂದ ಬೇರೊಂದು ತಟ್ಟೆಯಲ್ಲಿ ತಂದುಕೊಟ್ಟಿರುತ್ತಾನೆ. ಅವನು ಹಿಂದೊಮ್ಮೆ ಶಾಲಾ ದಿನಗಳಲ್ಲಿ ನಿಮಗೆ ಬದ್ಧವೈರಿಯಾಗಿದ್ದು ಮೋಸ ಮಾಡಿದ್ದೂ ಮನಸಿಗೆ ಬರುತ್ತದೆ. ದೊಡ್ಡವರಾದ ನಂತರ ಮನ್ನಿಸಿ ಸ್ನೇಹಿರಾಗಿರುತ್ತೀರಿ. ಸ್ನೇಹಿತ ಪಾನಿಪೂರಿಯಲ್ಲಿ ವಿಷ ಹಾಕಿರಬಹುದು ಎಂದು ಸಂಶಯ ಬರುತ್ತದೆ. ಹಾಕಿದ್ದಾನೆ ಎಂದರೆ ಸುಮ್ಮನೆ ಹೊಟ್ಟೆನೋವು ಬಂದು ಹೋಗುವಂತಹ ವಿಷ ಹಾಕಿರಲ್ಲ. ರಾತ್ರಿ ಮಲಗಿದ್ದಲ್ಲೇ ಗೊಟಕ್ ಎನ್ನುವಂಥದ್ದೇ ಬೆರೆಸಿರುತ್ತಾನೆ. ರಾತ್ರಿಯಿಡೀ ನಿದ್ದೆಯಿರದೆ ಹೊರಳಾಡುತ್ತೀರಿ. ಎಂಥ ತಪ್ಪು ಮಾಡಿದೆ ಎಂದು ನರಳುತ್ತೀರಿ. ಇದು ಅವೈಜ್ಞಾನಿಕ ಯೋಚನಾ ಮಾರ್ಗ. ಓಕ್ಕಾಮ್ ರೇಜರ್ ಪ್ರಕಾರ ಯೋಚಿಸಿದರೆ ಸ್ನೇಹಿತನ ಪಾನಿಪೂರಿ ಮತ್ತು ನಿಮ್ಮ ಹೊಟ್ಟೆ ಸಧ್ಯಕ್ಕಿನ್ನೂ ಆಗಂತುಕರಾಗಿದ್ದು ಹೀಗಾಗಿದೆ, ಬರುಬರುತ್ತಾ ಸ್ನೇಹಿತರಾಗುತ್ತಾ ಸರಿಹೋಗುತ್ತದೆ, ಅಷ್ಟೇ.
ವಿಜ್ಞಾನಕ್ಕೆ ಮರಳೋಣ. ಬಹಳ ಹಿಂದೆ ವಿಶ‌್ವದ ಕೇಂದ್ರಬಿಂದು ಭೂಮಿ, ಭೂಮಿಯ ಸುತ್ತಲೂ ಸಕಲ ಬಾಹ್ಯಾಕಾಶಕಾಯಗಳು ಸುತ್ತುತ್ತವೆ ಎಂದು ವೈಜ್ಞಾನಿಕವಾಗಿ ನಂಬಲಾಗಿತ್ತು. ಇದು ಸತ್ಯ ಎಂದು ಪ್ರೂವ್ ಮಾಡಲು ಹಲವು ಎಣಿಕೆ(ಅಸಂಪ್ಷನ್)ಗಳನ್ನು ಇಟ್ಟುಕೊಂಡು ಸಂಕೀರ್ಣ ಪಥಗಳನ್ನು ಕಲ್ಪಿಸಿಕೊಂಡು ಗಣಿತದೊಳಗೆ ಕೂರಿಸಲು ಪ್ರಯತ್ನಿಸಲಾಗಿತ್ತು. ಕೋಪರ್ನಿಕಸ್ ಬಂದು ಹೀಲಿಯೋಸೆಂಟ್ರಿಕ್ ಮಾಡೆಲ್ ಮುಂದಿಟ್ಟಾಗ ಈ ಯಾವುದೇ ಎಣಿಕೆಗಳು ಸಂಕೀರ್ಣ ಪಥಗಳ ಅಗತ್ಯವಿಲ್ಲದ ಸೌರಮಂಡಲವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು.
ಹಾಗಂತ ಸರಳತೆಯೇ ಪರಮ ಸತ್ಯವೇ? ಇಲ್ಲಾ. ನ್ಯೂಟನ್ ಗುರುತ್ವ, ಗ್ರಹಗಳ ಪಥ, ಬಾಹ್ಯಾಕಾಶ ಮುಂತಾಗಿ ಎಲ್ಲವನ್ನೂ ಬಹಳ ಸರಳವಾಗಿ ಸೇಬು ತಲೆ ಮೇಲೆ ಬಿದ್ದಷ್ಟೇ ಉತ್ಸಾಹದಿಂದ ‘ನ್ಯೂಟನ್ನಿನ ಮೂರು ನಿಯಮ’ಗಳ ಪ್ರಕಾರ ವಿವರಿಸಿಬಿಟ್ಟಿದ್ದ. ಐನ್ಸ್ಟೈನ್ ಬರುವವರೆಗೆ ಅದೇ ವೈಜ್ಞಾನಿಕ ಸತ್ಯವಾಗಿತ್ತು. ಐನ್ಸ್ಟೈನ್ ಬಂದು ಗುರುತ್ವವನ್ನು ಬಹಳ ಸಂಕೀರ್ಣ ಗಣಿತ ಸೂತ್ರಗಳ ಮೂಲಕ ವಿವರಿಸಿದ. ಗುರುತ್ವಕ್ಕಿರುವ ಅಲೆಗಳ ರೂಪ, ಕಾಲದೇಶಗಳೊಂದಿಗಿನ ಸಂಬಂಧ ಮುಂತಾದ್ದು ಬೆಳಕಿಗೆ ಬಂತು. ನ್ಯೂಟನ್ನಿನ ಹಲವು ‘ಸತ್ಯ’ಗಳನ್ನು ಒಡೆದು ಹಾಕಿತು. ಕಪ್ಪುರಂಧ್ರಗಳ ಥಿಯರಿಗೆ ದಾರಿಮಾಡಿಕೊಟ್ಟಿತು. ಹಾಗಂತ ನ್ಯೂಟನ್ನಿನ ಗುರುತ್ವ ಸುಳ್ಳೇ? ಇಲ್ಲ. ಆತನ ಸರಳ ಸೂತ್ರಗಳು ಜಗತ್ತಿನ ಸಂಕೀರ್ಣ ಸಂಗತಿಗಳನ್ನು ವಿವರಿಸಲು ಸೋಲುತ್ತವೆ ಎಂದಷ್ಟೇ. ಆದ್ದರಿಂದ ಸರಳ ವಿವರಣೆ ಸುಳ್ಳೆಂದು ಸಾಬೀತು ಪಡಿಸುವ ಪುರಾವೆಗಳಿದ್ದಾಗ ಮಾತ್ರ ನಾವು ಸಂಕೀರ್ಣತೆಯನ್ನು ಪರಿಗಣಿಸಬೇಕು. ಜ್ವರ ಬಂದ ತಕ್ಷಣ ಹತ್ತಾರು ವರ್ಷಗಳಿಂದ ಎಸಗಿದ ಪಾಪಗಳೆಲ್ಲ ಈಗ ಸುತ್ತಿಕೊಳ್ಳುತ್ತಿವೆ, ಸತ್ತೇ ಹೋಗಿಬಡ್ತೀವಿ ಎಂದೆಲ್ಲ ಅನಿಸುತ್ತಿರುತ್ತದೆ. ವೈದ್ಯರು ಗುಣಲಕ್ಷಣಗಳನ್ನು ಪರೀಕ್ಷಿಸಿ ಸಧ್ಯದ ಹವಾಮಾನವನ್ನು ಅವಲೋಕಿಸಿ ‘ಇದು ಸೀಜನಲ್ ಫಿವರ್, ಹೋಗ್ರಿ’ ಎಂದು ಮಾತ್ರೆ ಬರೆದುಕೊಡುತ್ತಾರೆ. ಒಂದೆರಡು ದಿನ ಬಿಟ್ಟು ಬನ್ನಿ ಅಂತಾರೆ. ಆಗಲೂ ಕಡಿಮೆಯಾಗಿರದಿದ್ದರೆ ಮುಂದಿನ ಹಂತದ ತಪಾಸಣೆ ಮಾಡುತ್ತಾರೆ.
ತಂತ್ರಜ್ಞರೂ ಇದನ್ನೇ ಮಾಡುತ್ತಾರೆ. ನಮ್ಮಲ್ಲಿ KISS(Keep it Simple, Stupid) ಎಂಬ ನಿಯಮ ಇದೆ. ಹೊಸಬರು ಸಣ್ಣ ಸಣ್ಣ ಸಮಸ್ಯೆಗಳಿಗೆ ಸಿಕ್ಕಾಪಟ್ಟೆ ತಲೆಯೋಡಿಸಿ ಎಂಜಿನೀರಿಂಗಲ್ಲಿ ಓದಿದ್ದನ್ನೆಲ್ಲಾ ಅಳವಡಿಸಿ ಕೋಡ್ ಮಾಡಿರುತ್ತಾರೆ. ಎಷ್ಟೋ ಕಡೆ ಅಂತಹ ಕೋಡಿಂಗ್ ಬೇಕೇ ಇರಲ್ಲ. ಸುಮ್ಮನೆ ‘ಇದು ಮಾಡಬೇಡಿ’ ಎಂದು ಬಳಕೆದಾರರ ಕೈಪಿಡಿ(user guide)ಯಲ್ಲಿ ಬರೆದರೆ ಸಾಕಾಗಿರುತ್ತಿದೆ.