ಸಿಡಿಲು ಹೇಗೆ ಉಂಟಾಗುತ್ತದೆ?
Blog post description.
6/26/20251 min read


ಕಳೆದ ವಾರ ನಾನು ಉತ್ತರಕರ್ನಾಟಕದ ಹಳ್ಳಿಗಾಡನ್ನು ಸುತ್ತಾಡುತ್ತಿದ್ದೆ. ಇದು ಇದ್ದಿಲೇನೋ ಅನಿಸುವಷ್ಟು ಕಪ್ಪು ನೆಲ, ತೀಡುವ ಗಾಳಿ, ಉಣ್ಣುವ ಗಂಗಾಳಕ್ಕಿಂತಲೂ ಸಮತಟ್ಟಾದ ವಿಶಾಲವಾದ ಬಯಲು, ಅಲ್ಲೊಂದು ಇಲ್ಲೊಂದು ಏಕಾಂಗಿ ಮರ, ದೂರದಲ್ಲಿ ಧಿಗ್ಗನೆ ಎದ್ದಿರುವ ಬೆಟ್ಟ, ಬೆಟ್ಟದ ಮೇಲೊಂದು ಕೋಟೆ, ವಿದ್ಯುತ್ ಉತ್ಪಾದಿಸುವ ಸಾಲು ಸಾಲು ಫ್ಯಾನುಗಳು, ಅಲ್ಲಲ್ಲಿ ಜಾಲಿ ಗಿಡಗಳು; ಮತ್ತು ಅಲ್ಲಿನ ಜನ- ಅವರ ಮುಗ್ಧತೆ, ಅವರ ಊಟ, ಬಟ್ಟೆ, ಮನೆ; ಧಾರವಾಡ-ಹುಬ್ಬಳ್ಳಿಗಳ ಸುತ್ತಮುತ್ತ ನಗರದ ಪ್ರಭಾವದಿಂದ ತಪ್ಪಿಸಿಕೊಂಡ ಸಮೃದ್ಧವಾದ ಕೃಷಿ ಚಟುವಟಿಕೆ ನಡೆಯುತ್ತದೆ. ಎಲ್ಲೆಲ್ಲೂ ಕಬ್ಬು, ಹೂಕೋಸು, ಮೆಣಸಿನಕಾಯಿ, ಟಮೋಟೋ… ಬೆಳೆಯಿಲ್ಲದ ಖಾಲಿ ಜಮೀನು ಸಹ ಶಾಲೆಗೆ ಹೊರಟ ಸ್ಕೂಲ್ ಮಗುವಿನಂತೆ ಒಂದು ಕಳೆ ಒಂದು ಮುಳ್ಳು ಇಲ್ಲದೆ ರೆಡಿಯಾಗಿ ನಿಂತಿರುತ್ತದೆ.
ಬಿಡುವಾದ ರಸ್ತೆಯಲ್ಲಿ ಇದನ್ನೆಲ್ಲ ಆನಂದಿಸುತ್ತಾ ಒಬ್ಬನೇ ಬೈಕಿನಲ್ಲಿ ಉಲ್ಲಸಿತನಾಗಿ ಸಾಗುತ್ತಿದ್ದಾಗ ಮನದಲ್ಲಿ ಇನ್ನೊಂದು ಸಂಗತಿಯೂ ಕಾಡುತ್ತಿತ್ತು. ಹಿಂದಿನ ವಾರ ಒಂದು ಸುದ್ದಿ ಬಂದಿತ್ತು- ‘ಸಿಡಿಲಿಗೆ ಏಳು ಬಲಿ’. ಈ ಸುದ್ದಿ ವರ್ಷ ವರ್ಷ ಬರುತ್ತಿರುತ್ತದೆ. ಪ್ರತಿ ಸಲವೂ ಬಲಿಗಳು ಉತ್ತರಕರ್ನಾಟಕದ ಯಾವುದೋ ಊರಿನ ಕೃಷಿಕನದ್ದೇ ಆಗಿರುತ್ತದೆ.
ನಾವು ಅಂತರಿಕ್ಷಕ್ಕೆ ಮನುಷ್ಯನನ್ನು ಕಳಿಸುವ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ. ಮರದ ಕೆಳಗೆ ನಿಲ್ಲುವ ಈ ಕೃಷಿಕನನ್ನು ಉಳಿಸಿಕೊಳ್ಳಲಾಗುತ್ತಿಲ್ಲವ ಎಂದು ಕಳವಳವಾಗುತ್ತದೆ.
ಇದರ ಪದಪ್ರಯೋಗದಲ್ಲಿಯೇ ವೈಚಿತ್ರ್ಯ ಇದೆ. ಇಂಗ್ಲೀಷಿನಲ್ಲಿ ಲೈಟ್ನಿಂಗಿಗೆ ಬಲಿ ಅನ್ನುತ್ತಾರೆ. ಕನ್ನಡದಲ್ಲಿ ಮಿಂಚಿಗೆ ಬಲಿ ಅನ್ನಲ್ಲ. ಸಿಡಿಲು ಅಂತಾರೆ. ಯಾಕಂದರೆ ಮಿಂಚು ಪದಕ್ಕೆ ಮಧುರ ಧ್ವನಿಯಿದೆ. ಸಿಡಿಲಿಗೆ ಘಾತುಕ ಧ್ವನಿಯಿದೆ.
ಹತ್ತಿಯಂತಹ ಬಿಳಿ ಮೋಡಗಳಿಗೆ ಹೋಲಿಸಿದರೆ ಮಳೆ ಹೊತ್ತ ಕಾರ್ಮೋಡಗಳು ಗರ್ಭ ತುಂಬಿದ ಬಾಣಂತಿಯರ ಹಾಗೆ. ಭಾರದ ಹೆಜ್ಜೆ ಇಡುತ್ತ ಆನೆಗಳ ಹಿಂಡಿನಂತೆ ಆಕಾಶದಲ್ಲಿ ಸಾಗುತ್ತಿರುತ್ತವೆ. ಈ ಮೋಡಗಳಲ್ಲಿ ನೀರಿನ ಹನಿಗಳಿರುತ್ತವೆ. ಕೆಲವು ಹನಿಗಳು ಮಂಜಿನ ಹರಳುಗಳಾಗಿರುತ್ತವೆ. ಈ ಹರಳುಗಳು ಪರಸ್ಪರ ಉಜ್ಜಿಕೊಂಡಾಗ ಎಲೆಕ್ಟ್ರಿಕಲಿ ಛಾರ್ಜ್ ಆಗುತ್ತವೆ. ಅಂದರೆ ಕೆಲವು ಹರಳುಗಳಲ್ಲಿ (-) ಶಕ್ತಿಯಿರುವ ಎಲೆಕ್ಟ್ರಾನುಗಳು ಶೇಖರಣೆಯಾಗಿ ಎಲೆಕ್ಟ್ರಾನುಗಳು ಇಲ್ಲದ ಹರಳುಗಳಲ್ಲಿ (+) ಶಕ್ತಿ ಕ್ರೋಢೀಕರಣಗೊಳ್ಳುತ್ತದೆ. ಯಾವುದೇ ಎರಡು ವಸ್ತುಗಳ ನಡುವಿನ ಎಲೆಕ್ಟ್ರಾನುಗಳ ಸಂಖ್ಯೆಯಲ್ಲಿ ವ್ಯತ್ಯಾಸ ಉಂಟಾದಾಗ ಅಲ್ಲಿ ‘ಟೆನ್ಷನ್’ ಉತ್ಪತ್ತಿಯಾಗುತ್ತದೆ. ಇದನ್ನೇ ವೋಲ್ಟೇಜ್ ಅನ್ನುತ್ತೇವೆ. ಪ್ರಕೃತಿಗೆ ಇಂತಹ ‘ಟೆನ್ಷನ್’ ಇಷ್ಟವಾಗಲ್ಲ. ಅದು ಸದಾ ವ್ಯವಸ್ಥೆಯನ್ನು ಸಮತೋಲನದಲ್ಲಿಡಲು ಪ್ರಯತ್ನಿಸುತ್ತಿರುತ್ತದೆ. ಒಂದು ವೇಳೆ ಈ (+) ಮತ್ತು (-) ತುದಿಗಳು ಮತ್ತೆ ಸಂಪರ್ಕಕ್ಕೆ ಬಂದರೆ ಒಮ್ಮೆಲೆ ಎಲೆಕ್ಟ್ರಾನುಗಳು ಅಧಿಕ ದಿಕ್ಕಿನಿಂದ ಕಡಿಮೆ ದಿಕ್ಕಿನತ್ತ ಹರಿದುಬಿಡುತ್ತವೆ. ಈ ಹರಿಯುವ ಪ್ರಕ್ರಿಯೆಯನ್ನೇ ನಾವು ‘ಕರೆಂಟು’ ಅನ್ನುತ್ತೇವೆ. ಬಲ್ಪನ್ನು ಪ್ಲಗ್ಗಿಗೆ ಸಿಗಿಸಿದಾಗ ಎಲೆಕ್ಟ್ರಾನುಗಳು ಒಂದು ತುದಿಯಿಂದ ಹರಿದು ಬಲ್ಬಿನ ಮೂಲಕ ಹಾಯ್ದು ಇನ್ನೊಂದು ತುದಿ ತಲುಪುತ್ತವೆ. ಎಷ್ಟು ಕರೆಂಟು ಹರಿಯಿತೋ ಅಷ್ಟು ‘ಟೆನ್ಷನ್’ ಕಡಿಮೆಯದ ಹಾಗೆ. ಬೆಸ್ಕಾಮಿನವರು ನಮಗೆ ಅಷ್ಟು ಪ್ರಮಾಣಕ್ಕೆ ಬಿಲ್ ಬಡಿಯುತ್ತಾರೆ. ಗಡಿಯಾರದ ಸೆಲ್ಲುಗಳಲ್ಲಿಯೂ ಹೀಗೆ. ಒಂದು ತುದಿಯಲ್ಲಿ (+) ಎಂದೂ ಇನ್ನೊಂದು ತುದಿಯಲ್ಲಿ (-) ಎಂದೂ ಬರೆದಿರುತ್ತಲ್ಲ ಅದರ ಅರ್ಥ (-) ತುದಿಯಲ್ಲಿ ಎಲೆಕ್ಟ್ರಾನುಗಳನ್ನು ಶೇಖರಿಸಲಾಗಿದೆ ಎಂದು. ಸೆಲ್ಲಿನ ಮಧ್ಯದಲ್ಲಿ (-) ತುದಿಯ ಎಲೆಕ್ಟ್ರಾನುಗಳು (+) ತುದಿಗೆ ಹರಿಯದ ಹಾಗೆ ರಾಸಾಯನಿಕ ಗೋಡೆ ಕಟ್ಟಿರುತ್ತಾರೆ. ಸೆಲ್ಲನ್ನು ಗಡಿಯಾರಕ್ಕೆ ಹಾಕಿದಾಗ ಖೈದಿಯಂತೆ ಬಂದಿಯಾಗಿರುವ ಎಲೆಕ್ಟ್ರಾನುಗಳಿಗೆ ಬಿಡುಗಡೆ ಸಿಕ್ಕಂತಾಗಿ ಗಡಿಯಾರದ ಮೂಲಕ ಹರಿದು ವಿರುದ್ಧ ತುದಿ ತಲುಪುತ್ತವೆ. ಸೆಲ್ಲನ್ನು ರೀಛಾರ್ಜ್ ಮಾಡುವುದೆಂದರೆ ಹೀಗೆ ಬಿಡುಗಡೆಯಾದ ಎಲೆಕ್ಟ್ರಾನುಗಳನ್ನು ಬಲವಂತದಿಂದ ಅವುಗಳ ಸ್ವಸ್ಥಾನಕ್ಕೆ ದಬ್ಬುವುದು ಅಷ್ಟೇ. ಇರಲಿ-
ಮೋಡಗಳ ವಿಷಯದಲ್ಲಿ ಎಲೆಕ್ಟ್ರಾನು ತುಂಬಿರುವ (-) ಮೋಡಗಳು ಭೂಮಿಯ ಕಡೆಗೆ ನೇತಾಡುತ್ತಿರುತ್ತವೆ. (+) ಮೋಡಗಳು ಮೇಲೆ ಮೇಲೆ ಹೋಗಿಬಿಟ್ಟಿರುತ್ತವೆ. ಭೂಮಿಯ ಮೇಲಿರುವ ನಾವುಗಳು, ನಮ್ಮ ಕರೆಂಟಿನ ಕಂಬಗಳು, ಬಿಲ್ಡಿಂಗುಗಳು, ಮರಗಳು ನೇತಾಡುವ ಮೋಡಗಳಿಗಿಂತ ಕಡಿಮೆ ಎಲೆಕ್ಟ್ರಾನು ಹೊತ್ತು ತಿರುಗುವುದರಿಂದ ನಮ್ಮ ಮತ್ತು ಮೋಡದ ನಡುವೆ ‘ಟೆನ್ಷನ್’ ಉತ್ಪತ್ತಿಯಾಗುತ್ತದೆ. ಈ ಟೆನ್ಷನ್ ತಡೆಯಲಾಗದ ಹಂತಕ್ಕೆ ಹೋದಾಗ ಪ್ರಕೃತಿ ತನ್ನ ಸಮತೋಲನದ ಕಾರ್ಯಕ್ಕೆ ಇಳಿಯುತ್ತದೆ. ಹತ್ತಿರದ (+) ಮೋಡಕ್ಕೆ(Cloud-to-Cloud) ಇಲ್ಲಾ ತನ್ನೊಳಗೇ(intra-cloud) ಎಲೆಕ್ಟ್ರಾನುಗಳನ್ನು ಹರಿಸುತ್ತದೆ. ಆಕಾಶದಲ್ಲೇ ಮಿಂಚು ಹೊಳೆಯುವುದು ಹೀಗೆ.
ಒಂದು ವೇಳೆ ಮೇಲಿನ (+) ಮೋಡಗಳಿಗಿಂತ ಕೆಳಗಿನ ಭೂಮಿಯೇ ಹತ್ತಿರವಾಗಿದ್ದಲ್ಲಿ ಮರ, ಮನುಷ್ಯ, ಬಿಲ್ಡಿಂಗು.. ಯಾವುದು ಎತ್ತರದಲ್ಲಿರುತ್ತೋ ಯಾವುದು ತಂತಿ ತರಹ ಸುಲಭವಾಗಿ ಕರೆಂಟು ಹರಿಸುತ್ತೋ ಅದರ ಮೂಲಕ ತನ್ನ ಟೆನ್ಷನ್ ಬಿಡುಗಡೆಗೊಳಿಸುತ್ತದೆ(cloud-to-ground). ಹಾಗೆ ನೋಡಿದರೆ ಈ ಸಮತೋಲನ ಪ್ರಕ್ರಿಯೆ ನಿತ್ಯ ಜರುಗುತ್ತಿರುತ್ತದೆ. ನಮಗೆ ಗೊತ್ತೇ ಆಗಿರಲ್ಲ. ಎಲೆಕ್ಟ್ರಾನುಗಳು ಮೋಡಗಳಿಂದ ಭೂಮಿ ತಲುಪುವುದು ಅತ್ಯಂತ ಸಾಮಾನ್ಯ ಪ್ರಕ್ರಿಯೆ. ಆದರೆ ಜೋರು ಮಳೆ, ಗುಡುಗು ಸಿಡಿಲಿನ ದಿವಸ ಮಾತ್ರ ಕೆಲವು ಮೋಡಗಳು ದೊಡ್ಡ ಮೊಟ್ಟದಲ್ಲಿ ಛಾರ್ಜ್ ಆಗಿರುತ್ತವೆ. ಆ ಟೆನ್ಷನ್ ಸ್ಫೋಟಗೊಂಡಾಗ ಸಿಡಿಲು ಅನ್ನುತ್ತೇವೆ. ಇದು ತುಂಬಾ ಶಕ್ತಿಯುತವಾಗಿರುತ್ತದೆ. ಈ ಶಕ್ತಿ ಕಟ್ಟಡಗಳನ್ನು ಬೀಳಿಸಬಲ್ಲದು, ಮರಗಳನ್ನು ಸೀಳಬಲ್ಲದು, ತೋಟಗಳನ್ನು ಸುಡಬಲ್ಲದು. ಒಂದು ಬಲ್ಪ್ ಉರಿಸಲು ೧ ಆಂಪ್ ಗಿಂತ ಕಡಿಮೆ ಕರೆಂಟು ಸಾಕು. ಅದೇ ಒಂದು ಸಿಡಿಲಿನ ಮೂಲಕ ಧುಮ್ಕಿಕ್ಕುವ ಕರೆಂಟು ~ಮೂವತ್ತು ಸಾವಿರ ಆಂಪ್! ಒಂದು ಕಣ್ಣೀರಿನ ಹನಿಗೂ ಪ್ರವಾಹದಿಂದ ಉಕ್ಕಿ ಹರಿಯುವ ನದಿಗೂ ಹೋಲಿಸಿ ನೋಡಿ.
ಹಾಗಾದರೆ ಉತ್ತರಕರ್ನಾಟಕದಲ್ಲಿಯೇ ಯಾಕೆ ಹೆಚ್ಚು ಬಲಿಯಾಗುತ್ತಾರೆ? ಭೂಗೋಳ, ಹವಾಮಾನ, ಸಾಮಾಜಿಕ- ಮೂರೂ ಅಂಶಗಳು ಪಾತ್ರ ವಹಿಸುತ್ತವೆ. ಭೌಗೋಳಿಕ ಕಾರಣ ಬಹಳ ಸರಳವಾದ್ದು ಎದ್ದು ಕಾಣುವಂಥದ್ದು. ಉತ್ತರ ಕರ್ನಾಟಕ ಡೆಕ್ಕನ್ ಪ್ಲಾಟ್ಯೂನಲ್ಲೇ ಅತ್ಯಂತ ಸಮತಟ್ಟಾದ ವಿಶಾಲವಾದ ಭೂಮಿಯನ್ನು ಹೊಂದಿದೆ. ಕಾಡುಗಳಿದ್ದರೂ ಕೃಷಿ ಭೂಮಿಯಿದ್ದೆಡೆ ಮರಗಳು ತುಂಬಾ ವಿರಳ. ಬೆಟ್ಟ ಗುಡ್ಡಗಳೂ ವಿರಳ. ನಿಂತಲ್ಲೇ ಸುತ್ತಲೂ ಒಂದು ಐವತ್ತು ಕಿಲೋಮೀಟರ್ ದೂರ ಕಣ್ಣು ಹಾಯಿಸಬಹುದು. ಹಾಗಾಗಿ ಅಲ್ಲಿ ಸಿಡಿಲಿಗೆ ಹರಿದು ತಣ್ಣಗಾಗಲು ಸೂಕ್ತ ಚಾನೆಲ್ಲುಗಲೇ ಇಲ್ಲ. ಅದಕ್ಕೆ ಸರಿಯಾಗಿ ಮಂದಿ ಅಲ್ಲೊಂದು ಇಲ್ಲೊಂದು ಇರುವ ಮರಗಳ ಕೆಳಗೆ ನಿಲ್ಲುತ್ತಾರೆ. ಸಿಡಿಲಿಗೆ ವಿರಳ ಮರಗಳೇ ವಿದ್ಯುತ್ ಚಾನೆಲ್ ಆಗಿರುತ್ತವೆ.
ಹವಾಮಾನ ಕಾರಣವೇನಂದರೆ ಕರಾವಳಿ ಮತ್ತು ದಕ್ಷಿಣ ಜಿಲ್ಲೆಗಳು ಬಹಳ ಸ್ಮೂತಾಗಿ ಮುಂಗಾರಿಗೆ ಹೆಜ್ಜೆಯಿಡುತ್ತವೆ. ಬೆಳಗಾವಿ, ವಿಜಯಪುರ ರಾಯಚೂರು ಮುಂತಾದ ಜಿಲ್ಲೆಗಳು ಈ ಪ್ರಕ್ರಿಯೆಯಲ್ಲಿ ವಿಪರೀತ ಏರುಪೇರುಗಳಿಗೆ ಒಳಗಾಗುತ್ತವೆ. ಕಾರಣ ಅಲ್ಲಿನ ನೆಲಕ್ಕೆ ಹಗಲಿನಲ್ಲಿ ಸಿಕ್ಕಾಪಟ್ಟೆ ಕಾವು ಹತ್ತಿಕೊಳ್ಳುತ್ತದೆ. ಇದರಿಂದಾಗಿ ನೆಲದ ಮೇಲಿನ ಗಾಳಿ ಆಕಾಶದ ಗಾಳಿಗಿಂತ ಬಿಸಿಯಾಗುತ್ತದೆ. ಬಿಸಿಯಾದ ಗಾಳಿ ತಣ್ಣನೆ ಗಾಳಿಗಿಂತ ಹಗುರವಾಗಿರುತ್ತದೆ. ಹಗುರವಾಗಿದ್ದು ಮೇಲೇರುವುದು ಸಹಜ. ಇದನ್ನು updraft ಎನ್ನುತ್ತಾರೆ. ಮೇಲೇರುವ ಗಾಳಿ ತನ್ನೊಂದಿಗೆ ನೀರು, ಮಂಜು, ಆಲಿಕಲ್ಲುಗಳನ್ನು ಎತ್ತಿಕೊಂಡು ಗರ್ಭಕಟ್ಟಿಕೊಳ್ಳುತ್ತದೆ. ಮುಂದೆ ಇದು ಪರಸ್ಪರ ಘರ್ಷಣೆಗೆ ಗುಡುಗು ಸಿಡಿಲಿಗೆ ಕಾರಣವಾಗುತ್ತದೆ. ಆದ್ದರಿಂದ ಆ ಭಾಗದಲ್ಲಿ ಸಿಡಿಲಿನ ಅಬ್ಬರ ಜಾಸ್ತಿಯೇ ಇದೆ.
ಸಾಮಾಜಿಕ ಕಾರಣವೇನಂದರೆ ಅಲ್ಲಿನ ಬಹುಸಂಖ್ಯೆಯ ಜನ ಕೃಷಿಕರು. ಹೊಲದಲ್ಲಿ ದುಡಿಯುತ್ತಾರೆ. ಕುರಿ ಮೇಕೆಗಳನ್ನು ಮೇಯಿಸುತ್ತಾರೆ. ಹಗಲುಗಳನ್ನು ತೆರೆದ ಬಯಲುಗಳಲ್ಲಿ ಕಳೆಯುತ್ತಾರೆ. ಸಮೃದ್ಧವಾದ ಕೃಷಿ ಚಟುವಟಿಕೆಗಳೇ ಅವರಿಗೆ ಮಾರಕವಾಗಿದೆ.
ಹಾಗಾದರೆ ಇದಕ್ಕೆ ಪರಿಹಾರವೇನು?
ಸರಕಾರ ಈ ಭಾಗದ ಜನರಿಗೆ ಚಂಡಮಾರುತಗಳ ಮುನ್ಸೂಚನೆಯನ್ನು ತುಸು ಹೆಚ್ಚು ಮುತುವರ್ಜಿಯಿಂದ ತಲುಪಿಸಬೇಕು. ವಿಶೇಷ ಆಪ್, ಕಡ್ಡಾಯ ತರಬೇತಿ ಕೊಡಬೇಕು. ಜನರನ್ನು ಜಾಗೃತಗೊಳಿಸಬೇಕು. ಹಾಗೆ ಅಲ್ಲಲ್ಲಿ ಸಿಡಿಲಿನಿಂದ-ಸುರಕ್ಷಿತ ಎಂಬಂತಹ ಗೂಡುಗಳನ್ನು ನಿರ್ಮಿಸಬೇಕು(farady cages). ಜನರು ಓಡಿ ಹೋಗಿ ರಕ್ಷಣೆ ಪಡೆಯುವಂತಿರಬೇಕು. ಅದಕ್ಕಿಂತ ಸುಲಭವಾದುದು ಸಿಡಿಲನ್ನು ಸ್ಮೂತಾಗಿ ರವಾನಿಸುವಂತಹ ಎತ್ತರದ ಟವರುಗಳನ್ನು ನಿಲ್ಲಿಸಬೇಕು. ಇದರಿಂದ ಅರ್ಧದಷ್ಟಾದರೂ ಸಾವುನೋವು ಕಡಿಮೆ ಮಾಡುವ ಅವಕಾಶವಿದೆ. ನಾವು ಭೂಗೋಳವನ್ನು, ಹವಾಮಾನವನ್ನು ತಿದ್ದಲಾಗಲ್ಲ, ಪ್ರಕೃತಿಯನ್ನು ತಡೆಯಲಾಗಲ್ಲ. ನಮ್ಮ ರಕ್ಷಣೆಯನ್ನು ನಾವು ಮಾಡಿಕೊಳ್ಳಬಹುದಲ್ಲವೇ?