ನಿಗೂಢ ರಾ ಏಜೆಂಟ್
Blog post description.
Madhu Y N
8/3/20251 min read


ಬೆಳ್ ಬೆಳಿಗ್ಗೆ ಈ ಸುದ್ದಿ ಕಣ್ಣಿಗೆ ಬಿತ್ತು. ಬಹಳ ಆಸಕ್ತಿರ ಅನ್ನಿಸ್ತು.
ರವೀಂದರ್ ಕೌಶಿಕ್ ಅನ್ನುವ ಒಬ್ಬ ಥಿಯೇಟರ್ ಆರ್ಟಿಸ್ಟು ಹುಡುಗ ರಾ ಏಜೆಂಟಾಗಿ(ಗೂಡಾಚಾರಿ) ಪಾಕಿಸ್ತಾನದ ಸೈನ್ಯ ಸೇರಿ ಅಲ್ಲಿನ ಮೇಜರ್ ಹುದ್ದೆ ತನಕ ಹೋಗಿದ್ದರಂತೆ.
ರಾ ಸಂಸ್ಥೆ ಈತನ ಟ್ಯಾಲೆಂಟ್ ನೋಡಿ 23 ವರ್ಷದ ಹುಡುಗನನ್ನ ಸಂಸ್ಥೆಗೆ ಸೇರಿಸಿಕೊಂಡಿದೆ. ಎರಡು ವರ್ಷ ನಿರಂತರವಾಗಿ ತರಬೇತಿ ಕೊಟ್ಟಿದೆ. ಉರ್ದು ಭಾಷೆ, ಇಸ್ಲಾಂ ಧರ್ಮ, ಪಾಕಿಸ್ತಾನದ ಸಂಸ್ಕೃತಿ, ಸಾಮಾಜಿಕ ನೀತಿ ನಡತೆಗಳನ್ನೆಲ್ಲಾ.
ಆಮೇಲೆ ರಾ ಅವನಿಗೆ ಸುನ್ನತಿ ಮಾಡಿಸಿ ಇಸ್ಲಾಮಿಗೆ ಮತಾಂತರನೂ ಮಾಡಿದೆ. ನಬಿ ಅಹ್ಮದ್ ಶಕಿರ್ ಅಂತ ಹೆಸರು ಬದಲಾಯಿಸಿದೆ. ಪಾಕಿಸ್ತಾನಕ್ಕೆ ಕಳಿಸಿದೆ.
ಯಾಕೆ ಅಷ್ಟು ಚಿಕ್ಕವನನ್ನು ಆಯ್ಕೆ ಮಾಡಿಕೊಂಡರು ಅಂತ ನನಗೆ ಈ ಹಂತದಲ್ಲಿ ಅರ್ಥವಾಯಿತು. ಇವರು ಅಲ್ಲಿ ಹೋಗಿ ಅಲ್ಲೇ ಡಿಗ್ರಿ ಪಡೆದು ಅಲ್ಲೇ ಉದ್ಯೋಗಕ್ಕೆ ಸೇರಿಕೊಂಡಿದ್ದಾರೆ. ಎಲ್ಲಿ? ಅಲ್ಲಿನ ಸೈನ್ಯದ ಅಕೌಂಟೆಂಟ್ ಡಿಪಾರ್ಟ್‌ಮೆಂಟಿನಲ್ಲಿ. ಹಂತಹಂತವಾಗಿ ಮೇಜರ್ ಹುದ್ದೆ ತನಕ ಏರಿದ್ದಾರೆ.
ಇವರು ಭಾರತದೊಂದಿಗೆ ಹಂಚಿಕೊಂಡಿರುವ ಗುಪ್ತಮಾಹಿತಿಯ ಒಟ್ಟು ಮೌಲ್ಯ ಇಲ್ಲಿನ ಸುಮಾರು ಇಪ್ಪತ್ತು ಸಾವಿರ ಅಮಾಯಕ ಜೀವಗಳನ್ನು ಉಳಿಸಿರೋದು! ಇಂದಿರಾ ಗಾಂಧಿ ಇವರಿಗೆ ʼಬ್ಲಾಕ್ ಟೈಗರ್ʼ ಅಂತ ಬಿರುದನ್ನೂ ಕೊಟ್ಟಿದಾರೆ.
ಎಲ್ಲಾ ಕತೆಗಳಲ್ಲೂ ದುರಂತ ಆದಂಗೆ ಇವರಿಗೂ ಆಗಿದೆ. ಪಾಕಿಸ್ತಾನದಲ್ಲೇ ಇದ್ದ ಇನ್ನೊಬ್ಬ ರಾ ಏಜೆಂಟ್ ಇನ್ಯಾತ್ ಮಸಿಯಾ ಸಿಗಾಕ್ಕೊಂಡಿದಾರೆ. ಅವರು ಇವರ ಹೆಸರು ಬಾಯಿಬಿಟ್ಟಿದಾರೆ. ಆದರೆ ಪರಸ್ಪರ ಯಾರು ಅಂತ ಗೊತ್ತಿರಲ್ಲವಲ್ಲ? ಇಬ್ಬರ ನಡುವೆ ಒಂದು ಮೀಟಿಂಗ್ ಸೆಟ್ ಮಾಡಿಸಿ ಕೌಶಿಕ್‌ರನ್ನು ಗುರುತು ಹಿಡಿದಿದ್ದಾರೆ. ಅರೆಸ್ಟ್ ಮಾಡಿದ್ದಾರೆ.
ಪಾಕಿಸ್ತಾನದ ಸುಪ್ರೀಂ ಕೋರ್ಟ್ ಇವರಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಆಮೇಲೆ ಜೀವಾವಧಿಗೆ ಇಳಿಸಿದೆ. ಹದಿನಾರು ವರ್ಷ ಜೈಲಲ್ಲಿ ಕೊಳೆತಿದ್ದಾರೆ. ಇದು ಸ್ವಲ್ಪ ದುರದೃಷ್ಟಕರ. ಪಾಕಿಸ್ತಾನ ನಿಮ್ಮವನು ನಮ್ಮತ್ರ ಇದಾನೆ ಅಂತ ಹೇಳಿದೆ. ಭಾರತ ಒಪ್ಪಿಕೊಂಡಿಲ್ಲ. ಅಂತರಾಷ್ಟ್ರೀಯ ವೇದಿಕೆಯಲ್ಲಿ ಮುಜುಗರ ಆಗುತ್ತೆ ಅಂತ. ಕೌಶಿಕ್ ಜೈಲಲ್ಲಿದ್ದಾಗ ಬರೆದ ಪತ್ರಗಳಲ್ಲಿ ಹೀಗಿತ್ತಂತೆ- ದೇಶಕ್ಕಾಗಿ ನಾ ಇಷ್ಟೆಲ್ಲಾ ಮಾಡಿದರೂ ದೇಶದಿಂದ ನನಗೆ ಸಿಕ್ಕಿದ್ದು ಇಷ್ಟೇನಾ ಅಂತ. ಅಮೆರಿಕಾದವರಾಗಿದ್ದರೆ ಮೂರು ದಿನಗಳಲ್ಲಿ ಬಿಡಿಸಕೊಂಡು ಬರ್ತಿದ್ದರು ಅಂತ.
ಕೊನಗೆ ಕೌಶಿಕ್ ಪಾಕಿಸ್ತಾನದ ಜೈಲಿನಲ್ಲೇ ಮರಣ ಹೊಂದುತ್ತಾರೆ.
ಇನ್ನೂ ದುರಂತ ಏನಂದರೆ ಹೀಗೊಬ್ಬ ಹೀರೋ ಇದ್ದು ಈತನ ಕತೆ ಜಗತ್ತಿನಿಂದ ಬಹಳ ವರ್ಷಗಳ ಕಾಲ ಮುಚ್ಚಿಟ್ಟಿದ್ದು.
ವಿಶೇಷ ಏನಂದರೆ ಹಿಂದಿ ಸಿನಿಮಾ ʼಏಕ್ ಥಾ ಟೈಗರ್ʼ ಇವರ ಜೀವನಾಧಾರಿತ ಕತೆಯೇ ಆಗಿರುವುದು. ಅದರಲ್ಲಿಯೂ ನೋವಿನ ಸಂಗತಿ ಏನಂದರೆ ಕೌಶಿಕ್ ಕುಟುಂಬದವರು ಸಿನಿಮಾ ನಿರ್ದೇಶಕ ಕಬೀರ್ ಖಾನಿಗೆ ಕೇಳಿದ್ದರಂತೆ. ಕೃತಜ್ಞತೆಗಳಲ್ಲಿ ಕೌಶಿಕ್ ಹೆಸರಿಸಿ ಅಂತ. ನಿರ್ದೇಶಕ ಒಪ್ಪಲಿಲ್ಲವಂತೆ.
ಒಂದೇ ವರದಿ ಹೆಮ್ಮೆ ಮತ್ತು ಸಂಕಟ ಸೃಜಿಸಿದ ಕತೆ ಇದು.
ಪ್ರತಿಯೊಬ್ಬ ಭಾರತೀಯನಿಗೂ ಗೊತ್ತಿರಬೇಕಾದ ಹೀರೋ ಕೌಶಿಕ್.