ಆಕಾಶದಾಗೆ ಇನ್ನೊಂದು ಭೂಮಿ ಐತಾ?
Madhu Y N
12/3/20241 min read


೧೯೫೦ನೇ ಇಸವಿಯ ಒಂದು ಮದ್ಯಾನ ಎನ್ರಿಕೊ ಫರ್ಮಿ, ನಮ್ಮ ಇಂದಿನ ನ್ಯೂಕ್ಲಿಯರ್ ರಿಯಾಕ್ಟರುಗಳ ಅಣುಬಾಂಬುಗಳ ಪಿತಾಮಹ ತನ್ನ ಸಹೋದ್ಯೋಗಿಗಳೊಂದಿಗೆ ಊಟ ಮಾಡ್ತಾ ಬಾಯಲ್ಲಿ ಸ್ಪೂನ್ ಇಟ್ಕೊಳ್ತಾ ಇದ್ಕಿದಂಗೆ ಏನೋ ಹೊಳೆದು ಒಂದು ಪ್ರಶ್ನೆ ಕೇಳಿದ. ‘Where is everybody?’.
ಅಂದ್ರೆ ನಮ್ಮ ಹೊರತು ಉಳಿದೋರೆಲ್ಲ ಎಲ್ಲಿದಾರೆ? ನಮ್ಮ ಅಂದ್ರೆ ಭೂಮಿ ಮೇಲಿನ ಮನುಷ್ಯರು. ಇದೊಂದು ಗಾಢವಾದ ವೈಜ್ಞಾನಿಕ ಮತ್ತು ತಾತ್ವಿಕ ಪ್ರಶ್ನೆ. ಆತ ಊಟ ಮಾಡ್ತಾ ಎತ್ತಿದ ಪ್ರಶ್ನೆ ಮುಂದೆ ಅನೇಕ ಚಿಂತನೆಗಳಿಗೆ ಕಾರಣವಾಗಿ ಅದೇ ಫರ್ಮಿ ಪ್ಯಾರಡಾಕ್ಸ್ ಎಂದು ಪ್ರಸಿದ್ಧಿಯಾಯಿತು.
ಇವತ್ರು ರಾತ್ರಿ ಮಾಳಿಗೆ ಹತ್ತಿ ಆಕಾಶ ನೋಡಿ. ಬಹುಶಃ ಚಂದ್ರ ಕಾಣಿಸಬಹುದು. ಅದರ ಹಿಂದಿನದು ನೋಡಿ. ಮಿಣಿಮಿಣಿ ಹೊಳೆಯುವ ನಕ್ಷತ್ರಗಳು ಕಾಣಬಹುದು. ಇನ್ನು ಸ್ವಲ್ಪ ದೂರ ನೋಡಿ. ತೆಳುವಾಗಿ ಮಿನುಗುವ ನಕ್ಷತ್ರಗಳು ಕಾಣಬಹುದು. ನೋಡ್ತಾ ಹೋಗಿ. ಎಷ್ಟು ಆಳ ನೋಡಬಲ್ಲಿರಿ? ಎಷ್ಟು ದೂರ ನೋಡಬಲ್ಲಿರಿ? ಈ ಆಳಕ್ಕೆ ಅಂತ್ಯ ಇದೆಯೇ? ಪುಟ್ಟ ಗೋಲಿ ಗಾತ್ರದ ಭೂಮಿ ಮೇಲೆ ನಿಂತ ನೀವು; ನಿಮ್ಮೆದುರು ಅನಂತ ಅಖಂಡ ಅಂತರಿಕ್ಷ; ಆ ಅಗಾಧತೆಯನ್ನು ಒಳಗಿಳಿಸಿಕೊಳ್ಳಿ. ನಿಮ್ಮ ಆತ್ಮ ಕುಗ್ಗುತ್ತದೆ. ಮೌನಕ್ಕೆ ಜಾರುತ್ತದೆ. ಏನು ಸೃಷ್ಟಿಯಪ್ಪ ಇದು ಅರ್ಥವೇ ಆಗಲ್ಲವಲ್ಲ ಅನ್ಸುತ್ತೆ. ಇದಕ್ಕೆ ಕೊನೆಯೆಂಬುದೇ ಇಲ್ಲವೇ ಎಂಬ ಪ್ರಶ್ನೆ ಏಳುತ್ತೆ.
ನೀವು ನೋಡುವ ನೋಡಲಾಗದ ಆ ಪ್ರತಿಯೊಂದು ನಕ್ಷತ್ರವೂ ಇನ್ನೊಂದು ಸೂರ್ಯ ಎಂದಾದರೆ... ಕೋಟಿ ನಕ್ಷತ್ರಗಳ ನಡುವೆ ಅಲ್ಲೆಲ್ಲೊ ಕನಿಷ್ಟ ಒಂದು ಭೂಮಿಯಾದರೂ ಇರಬೇಕಲ್ಲವೇ? ಇದೆಯೆಂದರೆ ಅಲ್ಲಿ ನಮ್ಮಂಥದೇ ಜನರು ಇದ್ದಿರಬಹುದಲ್ಲವೇ? ಖಂಡಿತ ಇದ್ದೇ ಇರುತ್ತಾರೆ ಎನ್ನುತ್ತೇವೆ.
ಹಾಗಿದ್ದ ಮೇಲೆ, ಎಲ್ಲಿದಾರೆ ಇವರೆಲ್ಲ? ಯಾಕೆ ಈ ದಿವ್ಯ ಮೌನ? ಯಾಕೆ ಇಷ್ಟೂ ವರುಷಗಳಲ್ಲಿ ಇಷ್ಟೂ ಹುಡುಕಾಟದಲ್ಲಿ ಎಲ್ಲಿಂದಲೂ ಒಂದು ಸಣ್ಣ ಸಿಗ್ನಲ್ ಸಹ ಬಂದಿಲ್ಲವಲ್ಲ? ಯಾಕೆ ಈ ಖಾಲಿತನ, ಒಂಟಿತನ? ನಮಗೇ ಯಾಕೆ ಇಂತಹ ಶಿಕ್ಷೆ? ಒಂದು ವೇಳೆ ಇಲ್ಲಿ ನಾವಷ್ಟೇ ಎಂಬುದು ನಿಜವಾದರೆ… ಅಯ್ಯೋ ಅದೆಂಥ ದುರ್ವಿಧಿ? ಮರುಭೂಮಿಯ ನಟ್ಟನಡುವಲ್ಲಿ ಒಬ್ಬನೇ ನಡೆದಂತೆ. ಮಹಾಸಾಗರದ ನಡುಮಧ್ಯೆ ಹಲಗೆಯೊಂದರ ಮೇಲೆ ಒಬ್ಬನೇ ತೇಲುತ್ತಿರುವಂತೆ?
ಇದ್ದೇ ಇರ್ತಾರೆ ಅನ್ನೊಷ್ಟು ಬೃಹತ್ತಾದ ವಿಶ್ವ; ಇದಾರೆ ಅಂತ ನಂಬಲು ಒಂದು ಸಣ್ಣ ಕುರುಹೂ ಇಲ್ಲದ ವಾಸ್ತವ- ಇದನ್ನೇ ಫರ್ಮಿ ಪ್ಯಾರಡಾಕ್ಸ್ ಎಂದು ಕರೆಯುತ್ತಾರೆ. ಮನುಷ್ಯ ಯಾವುದೇ ವಿಷಯದಲ್ಲಿ ನಿಜಾಂಶ ಕಂಡುಹಿಡಿಯಲು ಕೈಲಾಗದೇ ಹೋದಾಗ ಹೀಗಿದ್ದರಬಹುದು ಎಂದು ಸಿದ್ಧಾಂತಗಳನ್ನು ಕಲ್ಪಿಸಿಕೊಳ್ಳುತ್ತಾನೆ.
The great filter ಅಂತ ಒಂದು ಸಿದ್ಧಾಂತ. ಏನು ಹೇಳುತ್ತೆ ಅಂದ್ರೆ ನಮ್ಮನ್ನೂ ಇತರರನ್ನೂ ಸೇರಿಸಿ ವಿಶ್ವದಲ್ಲಿ ಇದ್ದಿರಬಹುದಾದ ಎಲ್ಲಾ ಅತ್ಯಂತ ಬುದ್ಧಿವಂತ ಜೀವಿಗಳಿಗೂ ಒಂದು ದಾಟಲಾರದ ಮಿತಿಯಿದ್ದಿರಬಹುದು. ಉದಾಹರಣೆಗೆ ಒಬ್ಬ ವ್ಯಕ್ತಿ ಎಷ್ಟು ಎತ್ತರದ ಗೋಡೆ ಜಿಗಿಯಬಲ್ಲ? ಒಂದು ಹಂತದ ನಂತರ ಆಗಲ್ಲ ಅಲ್ವ. ಹಾಗೆ ತಾನು ಎಷ್ಟೇ ಬುದ್ಧಿಶಕ್ತಿ ಗಳಿಸಿದರೂ ಸಹ ಅದೊಂದು ಅದೃಶ್ಯ ಹಾರಲಾಗದ ಗೋಡೆ ಅವನ ಮತ್ತು ಅನ್ಯಗ್ರಹಗಳ ಮಿತಿಯಾಗಿರಬಹುದು. ಆದ್ದರಿಂದ ಇವರು ಪರಸ್ಪರ ಎಂದಿಗೂ ಭೇಟಿಯಾಗದೇ ಉಳಿದುಬಿಡಬಹುದು. ಆಸೆ ಭರವಸೆಯನ್ನೂ ಇಟ್ಕೊಳ್ಳಬೇಡಿ ಎನ್ನುವ ಡಿಸ್ಟೋಪಿಯನ್ ಥಿಯರಿ ಇದು.
ಎರಡನೆಯದು rare earth hypothesis. ಬೇರೆ ಭೂಮಿ ಇರಬಹುದು. ಅಲ್ಲಿ ಮೈಕ್ರೋಬು, ಬ್ಯಾಕ್ಟೀರಿಯಗಳು, ಪ್ರಾಣಿಗಳೂ ಸಹ ಇದ್ದಿರಬಹುದು. ಆದರೆ ಮನುಷ್ಯನಷ್ಟು ವಿಕಾಸಗೊಳ್ಳುವ ಪೂರಕ ವಾತಾವರಣ ಎಲ್ಲಿಯೂ ಇರದಿರಬಹುದು. ನಮ್ಮ ವಾಯುಮಂಡಲ, ನಮಗೊಂದು ಚಂದ್ರ, ನಮ್ಮನ್ನು ಪೊರೆಯುವ ವಾತಾವರಣ ಇನ್ನೂ ಅನೇಕ ಅಂಶಗಳು ಸೇರಿ ನಮ್ಮ ಭೂಮಿಯೊಂದೇ ನಾವು ಜನ್ಮಿಸಿಲು ಅತ್ಯಂತ ವಿಶಿಷ್ಟ ಗ್ರಹವಾಗಿದ್ದಿರಬಹುದು.
ಮೂರನೆಯದು ತಂತ್ರಜ್ಞಾನದ ಮಿತಿಗಳು. ಇದು ಚಂದ. ಏನು ಹೇಳುತ್ತೆ ಅಂದ್ರೆ ಅನ್ಯಗ್ರಹ ಜೀವಿಗಳು ನಮ್ಮೊಂದಿಗೆ ಸಂವಹನ ಮಾಡಲು ಸಾಕಷ್ಟು ಪ್ರಯತ್ನ ಮಾಡ್ತಿರಬಹುದು. ಆದರೆ ಅವರು ಕೂಗಿದ್ದನ್ನು ಕೇಳಿಸಿಕೊಳ್ಳುವ ತಂತ್ರಜ್ಞಾನವೇ ನಮ್ಮಲ್ಲಿ ಇಲ್ಲದಿರಬಹುದು! ನಮ್ಮ ʼಕಿವಿಗಳುʼ ರೇಡಿಯೋ ಸಿಗ್ನಲ್ಲುಗಳಿಗೆ ಸೀಮಿತ. ಅವರು ಬೇರೇನೋ ಬಗೆಯ ಸಿಗ್ನಲ್ಲು ಬಳಸ್ತಿರಬಹುದು!
ನಾಲ್ಕನೆಯದು self imposed isolation. ಅಂಡಮಾನ್ ನಿಕೋಬಾರಿನ ಒಂದು ದ್ವೀಪದಲ್ಲಿ ಒಂದು ಬುಡಕಟ್ಟು ಜನಾಂಗ ಇದೆ. ನಾಗರೀಕತೆಯ ಸ್ಪರ್ಷವೇ ಇಲ್ಲದ ಬುಡಕಟ್ಟು. ಅವರ ಬಳಿ ನಾವು ಹೋಗಲ್ಲ. ಹೋದರೆ ಬಿಲ್ಲು ಭರ್ಜಿಗಳಿಂದ ನಮ್ಮನ್ನು ಕೊಲ್ಲುತ್ತಾರೆ. ಒಬ್ಬ ಮಿಶನರಿ ಹೋಗಿ ಕೊಲೆಯಾದದ್ದನ್ನು ಸ್ಮರಿಸಬಹುದು. ನಾವು ಅವರಿಂದ ದೂರ ಉಳಿದಂತೆ ಮುಂದುವರೆದ ನಾಗರೀಕತೆಯ ಅನ್ಯಗ್ರಹ ಜೀವಿಗಳು ನಮ್ಮನ್ನು ಬುಡಕಟ್ಟು ಜನರಂತೆ ನೋಡುತ್ತಾ ನಮ್ಮಿಂದ ದೂರವೇ ಉಳಿದಿರಬಹುದು!
ಐದನೆಯದು dark forest theory. ಈ ವಿಶ್ವ ದಟ್ಟ ಅರಣ್ಯವಿದ್ದಂತೆ. ಇಲ್ಲಿರುವ ಎಲ್ಲರೂ ಒಂದೊಂದು ಬಗೆಯ ಬುಡಕಟ್ಟು ಜನರು. ಕಗ್ಗತ್ತಲೆಯಲ್ಲಿ ವಾಸಿಸುತ್ತಿರುವವರು. ಎಲ್ಲರಿಗೂ ಕತ್ತಲೆಯ ಬಗ್ಗೆ, ಕಾಡಿನ ಸದ್ದುಗಳ ಬಗ್ಗೆ ಭಯವಿದೆ. ಸಣ್ಣದಾಗಿ ಸರಸರ ಎಂದರೂ ನಡುಗುತ್ತೇವೆ. ಏನೊ ಎತ್ಲೊ ಎಂದು. ಹಾಗಾಗಿ ನಾವೆಲ್ಲರೂ ನಮ್ಮ ಆಯ್ಕೆಯಿಂದಲೇ ಸೈಲೆಂಟಾಗಿದ್ದಿರಬಹುದು.
ಆರನೆಯದು ಇನ್ನೂ ಚಂದ. ನಮ್ಮ ಉಪಕರಣಗಳೇ ತಗಡು ಇದ್ದಿರಬಹುದು. ಅನ್ಯಗ್ರಹಜೀವಿಗಳು ಕಾರ್ಬನ್ ಹೈಡ್ರೋಜನ್ ಹೊಂದಿರುವ ಕಾರ್ಬೋಹೈಡ್ರೇಟ್ ಪ್ರಾಡಕ್ಟುಗಳೇ ಅಲ್ಲದಿರಬಹುದು! ಅವರದ್ದು ಬೇರೇನೊ ಕೆಮಿಕಲ್ ಕಂಪೋಜಿಶನ್ನು ಇದ್ದು ಇಲ್ಲೇ ನಮ್ಮ ಸುತ್ತಮುತ್ತಲೇ ಪಿಶಾಚಿಗಳಂತೆ ಹಾರಾಡುತ್ತಿರಬಹುದು ಯಾರಿಗ್ಗೊತ್ತು?
ಫರ್ಮಿಯ ಪ್ರಶ್ನೆಗಿರುವ ತಾತ್ವಿಕ ಮಗ್ಗುಲು ಏನಂದರೆ-
ಒಂದು ವೇಳೆ ವಿಶ್ವದಲ್ಲಿ ನಾವಷ್ಟೇ ಇರುವುದು ನಿಜವಾದರೆ… ನಾವು ನಮ್ಮನ್ನು ವಿಶೇಷ, ಬ್ರಹ್ಮನಿಂದ selected, chosen ಅಂದುಕೊಳ್ಳಬೇಕಾ? ಅಥವಾ ಅಯ್ಯೋ ನಾವಷ್ಟೇ ಇದೀವಲ್ಲ ಇಲ್ಲಿ ಎಂದು ದುಃಖಿಸಬೇಕಾ?
ಅಕಸ್ಮಾತ್ ಒಂದು ಕ್ಷುಧ್ರಗ್ರಹ ಬಡಿದು ಡೈನೋಸರುಗಳಂತೆ ನಾವೂ ನಿರ್ನಾಮವಾದರೆ, ಅಥವಾ ನಾವೇ ನಮ್ಮ ಭೂಮಿಯನ್ನು ಹಾಳುಗೆಡವಿದರೆ ಬಾಂಬುಗಳಿಂದಲೋ ವೈರಸ್ಸುಗಳಿಂದಲೋ ನಮ್ಮನ್ನೇ ಕೈಯಾರೆ ಕೊಂದುಕೊಂಡರೆ- ಈ ವಿಶ್ವಕ್ಕೇನಾಗುತ್ತದೆ? ಜೀವಿಗಳೇ ಇಲ್ಲದ, ಬೌದ್ಧಿಕತೆಯೇ ಇಲ್ಲದ, ಕೇವಲ ಕಲ್ಲು ಮಣ್ಣುಗಳು ತೇಲುವ ಅಂತರಿಕ್ಷವೊಂದಷ್ಟೇ ಉಳಿಯತ್ತದೆಯೇ? ಆಗಲೂ ದೇವರು ಇರುತ್ತಾನೆಯೇ?
ನಿಮ್ಮ ಮಕ್ಕಳಿಗೆ ಇವತ್ತು ರಾತ್ರಿ ಈ ಫರ್ಮಿ ಪ್ಯಾರಡಾಕ್ಸಿನ ಬಗ್ಗೆ ಹೇಳಿ. ಬಹುಶಃ ಅವರ ಜೀವಿತಾಕಾಲದಲ್ಲಿ ಉತ್ತರ ಕಂಡುಹಿಡಿಯುತ್ತಾರಾ ನೋಡುವ.