ವ್ಯಕ್ತಿಪೂಜೆ ಹಿಂದೆ ಹೋಗುತ್ತಿದೆ..

Blog post description.

6/26/20251 min read

ಇದೆಲ್ಲದರ ನಡುವೆ ಒಂದು ಮುಖ್ಯವಾದ ಅಬ್ಸರ್ವೇಶನ್ ಹಂಚಿಕೊಳ್ಳಬೇಕಿತ್ತು. ಇದು ಕ್ರೀಡೆ, ಸಿನಿಮಾ, ಸಾಹಿತ್ಯ, ರಾಜಕೀಯ- ಎಲ್ಲಕ್ಕೂ ಅನ್ವಯಿಸುತ್ತದೆ ಅನ್ನುವುದು ಇದರ ವಿಶೇಷ.

ಏನಂದರೆ- ಜಗತ್ತು ವ್ಯಕ್ತಿಪೂಜೆಯಿಂದ ತಂಡದ ಪೂಜೆಯತ್ತ ಹೊರಳುತ್ತಿದೆ.

ತೊಂಭತ್ತರ ದಶಕದಲ್ಲಿ ಕ್ರಿಕೆಟನ್ನು ಮನೆಮನೆಗೆ ತಲುಪಿಸಲು ಬಿಸಿಸಿಐಗೆ ಒಬ್ಬ ಸ್ಟಾರನ್ನು ಸೃಷ್ಟಿಸುವ ಅಗತ್ಯವಿತ್ತು. ಆಗ ಹುಟ್ಟಿದ್ದೇ ಸಚಿನ್ ತೆಂಡೂಲ್ಕರ್. ಸಚಿನ್ ಆಟಗಾರನಿಂದ ಆಟದ ರಾಯಭಾರಿಯಾಗಿ ಭಡ್ತಿ ಪಡೆದದ್ದು ಹೀಗೆ. ಈ ಬೆಳವಣಿಗೆ ಬೆನ್ನಲ್ಲೇ ಗಂಗೂಲಿ ದ್ರಾವಿಡ್ ಕುಂಬ್ಳೆ ಮುಂತದವರು ಸ್ಟಾರುಗಳಾಗಿದ್ದು. ಬಿಸಿಸಿಐಗೆ ಸಚಿನ್ ನಂತರ ಯಾರು ಎಂಬ ಪ್ರಶ್ನೆ ಹುಟ್ಟಿಕೊಂಡು ಕೆಲಕಾಲ ಸೆಹ್ವಾಗ್, ಯುವರಾಜ್ ಮುಂತಾದವರನ್ನು ಮುನ್ನಲೆಗೆ ತಂದಿತಾದರೂ ಅವರು ಯಾರೂ ಅಷ್ಟಾಗಿ 'ಕಚ್ಚಿಕೊಳ್ಳಲಿಲ್ಲ'. 2007ರಷ್ಟತ್ತಿಗೆ ಯುವಕರನ್ನು ಆಕರ್ಷಿಸಬಲ್ಲ 20-20 ಮಾದರಿ ಹುಟ್ಟಿಕೊಂಡು ಅ ಮೂಲಕ ಬಿಸಿಸಿಐಗೆ ಸಿಕ್ಕಿದ್ದೇ ಧೋನಿ. ಧೋನಿ ನಿಜಕ್ಕೂ ಕೆಲವು ವರ್ಷಗಳ ಕಾಲ ಆಟದ ರಾಯಭಾರಿಯಾಗಿದ್ದರು. ಆದರೆ ಧೋನಿಯ 'ತಾಂತ್ರಿಕ' ಆಟ ನಡುವಯಸ್ಕರನ್ನು ಆಕರ್ಷಿಸುತ್ತಿತ್ತೇ ಹೊರತು ಯುವಕರನ್ನಲ್ಲ. ಅವರ ಹೇರ್ ಸ್ಟೈಲು, ಸ್ಫೋಟಕ ಬ್ಯಾಟಿಂಗ್ ಹೆಚ್ಚು ಕಾಲ ಉಳಿಯಲಿಲ್ಲ. ಆಟದ ಹೊರಗೆ ಅವರು ಅಷ್ಟಾಗಿ ' Aura' ಬೆಳೆಸಿಕೊಳ್ಳಲಿಲ್ಲ. ಅವರ ಬೈಕಿನ ಕ್ರೇಜು ಜನರ ಕ್ರೇಜಾಗಲಿಲ್ಲ. ಮಡದಿಯಾಗಿ ಸಿನಿಮಾ ನಟಿ ಬದಲು ಸಾಕ್ಷಿಯನ್ನು ವರಿಸಿದರು.

ಈ ಹೊತ್ತಲ್ಲಿ ಬಿಸಿಸಿಐಗೆ ಇದೆಲ್ಲ ಚೆಕ್ ಬಾಕ್ಸುಗಳನ್ನು ಟಿಕ್ ಮಾಡುವಂಥವನಾಗಿ ಸಿಕ್ಕಿದ್ದು ಕೋಹ್ಲಿ. ಕೋಹ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಅಸ್ಟ್ರೇಲಿಯಾ ಆಟಗಾರರನ್ನೇ ಸ್ಲೆಡ್ಜ್ ಮಾಡುತ್ತಿದ್ದ. ಅಮ್ಮನ್ ಅಕ್ಕನ್ ಎಂದು ಸರಾಗಿವಾಗಿ ಸ್ಟ್ರೀಟ್ ಬಾಯ್ಸಿನ ಭಾಷೆ ಆಡುತ್ತಿದ್ದ. ಅನುಷ್ಕಾಳನ್ನು ಮದುವೆಯಾದ. ಸಣ್ಣದಾಗಿ ಡ್ಯಾನ್ಸ್ ಮಾಡಿದ. ಫಿಟ್ ಇದ್ದ, ದಿನವೂ ಜಿಮ್ ಗೆ ಹೋಗುತ್ತಿದ್ದ. (ಹಾಗೆ ನೋಡಿದರೆ ಆಕಾರದಲ್ಲಿ ಸ್ವಲ್ಪ ಚಿಕ್ಕದಾಗಿದಾನೆ). ಭಾರತದ ಎಲ್ಲಾ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಯುವಕರ Aspirational destination. ಅಂಥ ನಗರದ ತಂಡಕ್ಕೆ ಸೇರಿಕೊಂಡ. ಇವರಿಗೂ ಅವನು ಬೇಕಿತ್ತು. ಅವನಿಗೂ ಇವರು ಬೇಕಿತ್ತು. ಐತಿಹಾಸಿಕವಾಗಿ ಈ ಸಂಗಮ ಒಂದು ಮ್ಯಾಜಿಕ್ ಮೊಮೆಂಟು. ಕೋಹ್ಲಿ ಹೋಗ್ತಾ ಹೋಗ್ತಾ ಜೆನ್-ಜಿ ಜೆನರೇಶನ್ನಿಗೆ ತನ್ನ ವೈವಾಹಿಕ ಜೀವನವನ್ನೂ ಆಕರ್ಷಕವಾಗಿಸಿದ, ಮಾದರಿಯನ್ನಾಗಿಸಿದ. ದಂಪತಿಗಳು ಯುವಕರ Couples Goal, romantics bucket ಲಿಸ್ಟಿನಲ್ಲಿ ಆಗ್ರಸ್ಥಾನ ಪಡೆದರು. ಜವಾಬ್ದಾರಿಯುತವಾಗಿ ನಿಭಾಯಿಸಿದರು. ಅತ್ಯಂತ ಯಶಸ್ವಿಯಾಗಿ ಹುಡುಗಿ ಅಭಿಮಾನಿಗಳನ್ನು ಗಳಿಸಿದ ನಿಭಾಯಿಸಿದ ಕ್ರಿಕೆಟಿಗ ಕೋಹ್ಲಿ. ಯುವರಾಜ್ ಗೆ ಅವಕಾಶ ಇತ್ತು, ನಿಭಾಯಿಸಲಿಲ್ಲ, ಧೋನಿಗೆ ಇರಲೇ ಇಲ್ಲ!

ಕೋಹ್ಲಿ ನಂತರ ಯಾರು? ಇದು ನಮಗಿಂತ ಹೆಚ್ಚಾಗಿ ಬಿಸಿಸಿಐಗೂ ಆರ್ ಸಿ ಬಿಗೂ ಪ್ರತಿದಿನ ಕೊರೆಯುತ್ತಿರುತ್ತದೆ. ನಂಗಂನ್ಸುತ್ತೆ ಯಾರೂ ಇರಲ್ಲ! ಸಚಿನ್ ಮಗಳೊಂದಿಗೆ ಗುರುತಿಸಿಕೊಳ್ಳುವ, ಮುಂದಿನ ಕಪ್ತಾನನೂ ಆಗಿರುವ ಗಿಲ್ ಆ ಸೂಚನೆ ಕೊಡುತ್ತಾನೆ ಅನಿಸಿದರೂ ನನ್ನ ಪ್ರಕಾರ ಅದು ಬಹಳ ಕಾಲ ನಿಲ್ಲಲ್ಲ. ಬಹುಶಃ ಕೋಹ್ಲಿಯೇ ಕ್ರಿಕೆಟಿನ ಕೊನೆಯ ಇಂಡಿವಿಡ್ಯುವಲ್ ಐಕಾನ್. ವ್ಯಕ್ತಿಪೂಜೆಯ ಕಾಲ ನಿಲ್ಲುತ್ತಿದೆ.

ಹಾಗಾದರೆ ಬದಲಿ ವ್ಯವಸ್ಥೆ ಏನು? ವೆಲ್ಕಂ ಟು ಫ್ರಾಂಚೈಸಿ. ತಂಡ. ಜನ ಇನ್ನು ಮುಂದೆ ಆಟಗಾರರಿಗಿಂತ ಹೆಚ್ಚಾಗಿ ತಂಡಗಳೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಇಂಡಿಯನ್ ಟೀಮು ಅನ್ನೋದೂ ಗೌಣವಾಗಲಿದೆ. ಒಲಂಪಿಕ್ಕಿಗೆ ಕ್ರಿಕೆಟು ಹೇಗೋ ಹಾಗೆ ಭಾರತೀಯರಿಗೆ ನ್ಯಾಶನಲ್ ಟೀಮು ಆಗಲಿದೆ. ಅಂದ್ರೆ ವರ್ಲ್ಡ್ ಕಪ್ಪಿಗಷ್ಟೇ ಸೀಮಿತವಾಗುವ ಔಪಚಾರಿಕ ತಂಡವಾಗಲಿದೆ.

ಇನ್ಮುಂದೆ ಫ್ರಾಂಚೈಸಿಗಳೇ ಜನರ ಟೀಮುಗಳು.

ಹಾಗಾದರೆ ಇಂತಹ ತಂಡಗಳಿಗೆ ಇರಬೇಕಾದ ಗುಣಗಳು ಯಾವುವು? ಬಹುಮುಖ್ಯವಾಗಿ Aspirational destination. ನಿಮಗೆ ಆ ಊರಿಗೆ ಹೋಗಿ ಸೆಟಲ್ ಆಗಬೇಕು ಅನಿಸಬೇಕು. ಹುಟ್ಟೂರಿನ ಆಸ್ಮಿತೆ ತೊರೆದು ಆ ಊರಿನೊಂದಿಗೆ ಗುರುತಿಸಿಕೊಳ್ಳಲು ಹೆಮ್ಮೆಯೆನಿಸಬೇಕು. ಎರಡನೆಯದು ಆ ಊರಲ್ಲಿ ಯಂಗ್ ಜನರೇಶನ್ನು ವಾಸಿಸುತ್ತಿರಬೇಕು. ಅವರ ಅನುಕೂಲ ಆಸಕ್ತಿಗಳಾದ ಸಿನಿಮಾ, ಪಬ್, ಫ್ಯಾಶನ್, ಶಾಪಿಂಗ್, ನೈಟ್ ಲೈಫ್ ಇರಬೇಕು. ಸಿಟಿ 'ಸೆಕ್ಸಿ'ಯೆನಿಸಬೇಕು. ಇದೆಲ್ಲವೂ ಬೆಂಗಳೂರಿಗಿದೆ. ನಂತರದ ಸ್ಥಾನದಲ್ಲಿ ಅಫ್ ಕೋರ್ಸ್ ಮುಂಬೈಗಿದೆ. ಯಾರಿಗೂ ಕೋಲ್ಕತ್ತಾಗೆ ಚೆನ್ನೈಗೆ ಲಕ್ನೋಗೆ ಹೋಗಿ ಸೆಟಲ್ ಆಗಬೇಕು ಅನಿಸಲ್ಲ. ಗುಜರಾತ್ ಸೆಕ್ಸಿ ಅನಿಸಲ್ಲ. ಒಂದು ವೇಳೆ ಬೆಂಗಳೂರಿನ ಬ್ರಾಂಡಿಗೆ ಯಾವುದೇ ಕಾರಣದಿಂದಾಗಿ ಪೆಟ್ಟು ಬಿದ್ದಲ್ಲಿ ಅರ್ ಸಿ ಬಿ ಟಾಪಿಂದ ಕೆಳಗೆ ಸರಿಯಬೇಕಾಗುತ್ತದೆ. ಈ ಎಚ್ಚರ ನಮ್ಮೆಲ್ಲರಿಗೂ ಇರಬೇಕು. ಆತುರಗೇಡಿಗಳಾಗದೇ ಟ್ಯಾಕ್ಟಿಕಲ್ಲಾಗಿ ನಿಭಾಯಿಸಬೇಕು. ಸಣ್ಣ ಸಣ್ಣ ಸಂಗತಿಗಳು ನಮ್ಮೂರಿನ ಹೆಸರು ಕೆಡಿಸದಂತೆ ನೋಡಿಕೊಳ್ಳಬೇಕು. ಈ ಇಮೇಜಿಗೆ ಡ್ಯಾಮೇಜಾದಷ್ಟೂ ಇತರೆ ನಗರಗಳಿಗೆ ಇತರೆ ಫ್ರಾಂಚೈಸಿಗಳಿಗೆ ಲಾಭ. ಕೇವಲ ಕ್ರಿಕೆಟ್ಟಿನಿಂದಲ್ಲ. ಆರ್ಥಿಕ ಔದ್ಯೋಗಿಕ ದೃಷ್ಟಿಗಳಿಂದಲೂ.

ಸಿನಿಮಾಕ್ಕೆ ಹೊರಳೋಣ. ಸ್ಯಾಂಡಲ್ ವುಡ್ಡಿಗೆ ರಾಜ್ಕುಮಾರೇ ಕಟ್ಟಕಡೆಯ ಐಕಾನಿಕಲ್ ಐಕಾನ್ ಅನ್ಸುತ್ತೆ. ಆ ಸ್ಥಾನ ತುಂಬಲು ಶಂಕರ್ ನಾಗಿಗೆ ಅವಕಾಶ ಇತ್ತು; ಬೇಗನೇ ಹೋಗಿಬಿಟ್ಟರು. ಅಂಬರೀಶ್ ಗೆ ಇತ್ತು, ಪೂರ್ಣಪ್ರಮಾಣದಲ್ಲಿ ನಿಭಾಯಿಸಲಿಲ್ಲ. ಪುನೀತ್ ಗೆ ಇತ್ತು, ಆದರೆ ಅವರು ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡಬೇಕಿತ್ತು. ಪುನೀತ್ ಸಿನಿಮಾಗಿಂತ ಹೆಚ್ಚಾಗಿ ಒಳ್ಳೆಯ ವ್ಯಕ್ತಿತ್ವದಿಂದ ಲೆಗಸಿಯ ಕಾರಣದಿಂದ ಒಂಥರಾ ದಿವಂಗತ ಐಕಾನಾಗಿ ಉಳಿದಿದ್ದಾರೆ. ಸುದೀಪ್ ಗೆ ಆಸಕ್ತಿಯಿದ್ದಂತಿಲ್ಲ. ಸ್ವಲ್ಪ ಮಟ್ಟಿಗೆ ಯಶ್-ರಾಧಿಕಾ ಅದನ್ನು ನಿಭಾಯಿಸುತ್ತಿದ್ದಾರೆ. ಆದರೆ ಸಮಾಜ ಈಗಾಗಲೇ ವ್ಯಕ್ತಿಪೂಜೆಯಿಂದ ಸಿನಿಮಾ ಪೂಜೆಯತ್ತ ಹೊರಳಿರುವುದರಿಂದ ಇನ್ನುಮುಂದೆ ಜನ ಒಳ್ಳೆಯ ಕಂಟೆಂಟಿನ ಅಥವಾ ಮಾಸ್ ಕಂಟೆಂಟಿನ, ನಿರ್ದಿಷ್ಟ ಜಾನರುಗಳ ಸಿನಿಮಾಗಳೊಂದಿಗೆ ಒಟಿಟಿ ಮಲ್ಟಿಪ್ಕೆಕ್ಸುಗಳೊಂದಿಗೆ ಗುರುತಿಸಿಕೊಳ್ಳಲು ಇಷ್ಟಡುತ್ತಾರೇ ಹೊರಟು ನಟರೊಂದಿಗಲ್ಲ. I am a netflix guy ಅನ್ನುವುದರಲ್ಲಿ ಇರುವ ಆಸ್ಮಿತೆ ನಾನು ಯಶ್/ಸುದೀಪ್/ಡಿಬಾಸ್ ಅಭಿಮಾನಿ ಅನ್ನುವುದರಲ್ಲಿ ಇಲ್ಲ.

ಇದು ಸಾಹಿತ್ಯಕ್ಕೂ ಅನ್ವಯಿಸುತ್ತದೆ. ಕುವೆಂಪು, ಬೇಂದ್ರೆ, ಲಂಕೇಶ್- ಎಲ್ಲರೂ ಆಯಾ ಕಾಲಕ್ಕೆ ಸ್ಟಾರುಗಳಾಗಿದ್ದರು. ನನಗನ್ನಿಸಿದಂತೆ ತೇಜಸ್ವಿಯೇ ಕಟ್ಟ ಕಡೆಯ ಇಂಡಿವಿಡ್ಯುವಲ್ ಸ್ಟಾರ್. ಮಾಸ್ ಅಪೀಲ್ ಇದ್ದ ಬೆಳಗೆರೆ ಗಳಿಸಿದ್ದನ್ನು ಕಳೆದುಕೊಂಡರು. ಅವರ ಪತನಕ್ಕೆ ಟೆಕ್ನಾಲಜಿಯೂ ಕಾರಣ ಅನ್ನಬಹುದು. ಸಮಾಜದ ದೃಷ್ಟಿಯಿಂದ ಕಣ್ಮರೆಯಾಗಿ ತೆರೆಮರೆಗೆ ಸರಿಯುವಷ್ಟರಲ್ಲಿ ಟೆಕ್ನಾಲಜಿ(ಕ್ಯಾಮೆರಾ, ವಿಡಿಯೋ, ಫೋನು) ಬಂದುಬಿಟ್ಟಿತ್ತು. ಟೆಕ್ನಾಲಜಿ ಬಹುಬೇಗ ನಮ್ಮ ಖಾಸಗಿ ವ್ಯಕ್ತಿತ್ವವನ್ನು ಬಹಿರಂಗೊಳಿಸುತ್ತದೆ. ನಮ್ಮ ಖಾಸಗಿ ಅಂಗಳ ಸುಂದರವಾಗಿದ್ದರೆ ದೊಡ್ಡ ಲಾಭ, ಕೋಹ್ಲಿ ಅನುಷ್ಕಾ ತರಹ; ಇಲ್ಲವಾದರೆ ಸರಿಪಡಿಸಲಾಗದಷ್ಟು ನಷ್ಟ.

ಈಗಿನ ಅನೇಕ ಹಿರಿಯ ಲೇಖಕರಿಗೆ ಸ್ಟಾರ್ ಆಗುವ ಘನತೆ ಇದ್ದಿರಬಹುದಾದರೂ ಸಮಾಜವೇ ಮುಂದೆ ಹೋಗಿಬಿಟ್ಟಿದೆ. ಬಹಳ ಲೇಟಾಗಿದೆ. ಇದೀಗ ಜನ ಪುಸ್ತಕಗಳೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಒಳ್ಳೆಯ/ಪ್ರಶಸ್ತಿ ಗಳಿಸಿದ/ ಮಾಸ್/ಜನಪ್ರಿಯ ಏನೋ ಒಂದು- ಪುಸ್ತಕವೇ ಇಂದಿನ ಸ್ಟಾರ್. ಯುವ ಲೇಖಕರು ಅನಗತ್ಯವಾಗಿ ಸ್ಟಾರಾಗುವ ವ್ಯರ್ಥ ಪ್ರಯತ್ನಗಳನ್ನು ಕೈಬಿಡಬೇಕು ಅನಿಸುತ್ತದೆ.

ಕಡೆಯದಾಗಿ- ಇದು ರಾಜಕೀಯಕ್ಕೂ ಅನ್ವಯಿಸುತ್ತದೆ. ನೆಹರೂ, ಇಂದಿರಾಗಾಂಧಿ, ಲೋಹಿಯಾ, ಜೆಪಿ, ರಾಜೀವ್ ಗಾಂಧಿ, ವಾಜಪೇಯಿ, ಮನಮೋಹನ್ ಸಿಂಗ್; ನರೇಂದ್ರ ಮೋದಿಯೇ ಕಟ್ಟಕಡೆಯ ವ್ಯಕ್ತಿಪೂಜೆಯ ನಾಯಕರಾಗುವ ಸಂಭವವಿದೆ. ಕೇಜ್ರಿವಾಲ್ ಅಂಥ ಪ್ರಯತ್ನಕ್ಕೆ ಕೈಹಾಕಿ ಪೂರ್ತಿಯಾಗಿ ಯಶಸ್ವಿಯಾಗಲಿಲ್ಲ. ಅಂಥಾ ಆಕರ್ಷಣೆ ಇರಲಿಲ್ಲ ಹಾಗಾಗಿ ಅಂಥ ತಂಡವೂ ಇರಲಿಲ್ಲ. ಮುಂದಿನ ದಿನಗಳಲ್ಲಿ ಜನರು ಸಂಪೂರ್ಣವಾಗಿ ಬಿಜೆಪಿ ಅಥವಾ ಕಾಂಗ್ರೆಸ್ ಎಂಬ ಎರಡು ಐಡಿಯಾಗಳಿಗೆ ಮಾತ್ರ ಓಟ್ ಹಾಕುವಷ್ಟು ಮಟ್ಟಿಗೆ ಬದಲಾಗಿರುತ್ತಾರೆ. ಬಿಜೆಪಿ ಯೋಗಿಯನ್ನೂ ಕಾಂಗ್ರೆಸ್ ರಾಹುಲರನ್ನೂ ಬಲವಂತವಾಗಿ ಸ್ಟಾರ್ ಮಾಡುವ ಪ್ರಯತ್ನ ಕೈಬಿಡಬೇಕು. (ರಾಜ್ಯದಲ್ಲಿ ಸಿದ್ಧರಾಮಯ್ಯ, ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಕಟ್ಟೆಕಡೆಯ ಸ್ಟಾರ್ ನಾಯಕರು).

ಸಮಾಜದಲ್ಲಿ ಉಂಟಾಗುತ್ತಿರುವ ಈ ಮಹತ್ವದ ಬೆಳವಣಿಗೆಗೆ 'ಸ್ಟಾರ್' ಆಗುವ ವ್ಯಕ್ತಿತ್ವವೇ ಇಲ್ಲದ್ದು ಒಂದು ಕಾರಣವಾದರೆ ಜನ ಯಾರನ್ನೋ ಸ್ಟಾರುಗಳನ್ನಾಗಿ ಮಾಡುವ/ನೆಚ್ಚಿಕೊಳ್ಳುವ ಮನೋಭಾವದಿಂದ ದೂರ ಸರಿಯುತ್ತಿದ್ದಾರೆ ಎಂಬುದೂ ಮುಖ್ಯಕಾರಣ. ಜನ ಈಗ ವ್ಯಕ್ತಿಗಳಿಗಿಂತ 'ಐಡಿಯಾಸ್'ಗಳೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಇದು ನಾಗರೀಕತೆ ಫ್ರಂಟ್ ಗೇರಿನಲ್ಲಿ ಸಾಗುತ್ತಿರುವ ಲಕ್ಷಣ.